ಇದೀಗ ಅಷ್ಟೇ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಉತ್ತೀರ್ಣರಾದ, ಅದರಲ್ಲೂ ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಸಂಭ್ರಮದಲ್ಲಿದ್ದರೆ, ಅನುತ್ತೀರ್ಣರಾದ ಮಕ್ಕಳು ಮನೆಯಲ್ಲಿ ತಮ್ಮ ಅಪ್ಪ ಅಮ್ಮನ ಹತ್ತಿರ ‘ಅವನನ್ನು ನೋಡು ಅಷ್ಟು ತೆಗೆದಿದ್ದಾನೆ, ಇವಳು ನೋಡು ಇಷ್ಟು ತೆಗೆದಿದ್ದಾಳೆ, ನೀನು ಇದ್ದೀಯಾ….” ಅಂತ ಬೈಗುಳ ಕೇಳುತ್ತಾ ಹ್ಯಾಪು ಮೊರೆ ಹಾಕಿಕೊಂಡು ಕುಳಿತಿರಬಹುದು. ‘ತಾನು ಫೇಲ್ ಆದೇ’ ಅಂತ ದುಖ:ದುಮ್ಮಾನದಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಹಾಗೂ ತಮ್ಮ ಮಗ / ಮಗಳು ಫೇಲ್ ಎಂದು ಬೇಜಾರು ಕೋಪದಲ್ಲಿ ಬುಸುಬುಸು ಅನ್ನುತ್ತಿರುವ ತಂದೆ ತಾಯಿಗಳು ಕೆಲವು ಮಹಾನ್ ಸಾಧಕರ ಬಗ್ಗೆ ತಿಳಿಯಲೇ ಬೇಕು.
ಇಲ್ಲಿ ನೀಡಿರುವ ಮೊದಲ ವ್ಯಕ್ತಿಯ ಛಾಯಚಿತ್ರವನ್ನು ನೋಡಿ. ಮಂದಹಾಸ ಬೀರುತ್ತಿರುವ ಈ ವ್ಯಕ್ತಿ ಬೇರೆ ಯಾರೂ ಅಲ್ಲ. ೨೦೧೨ ರಲ್ಲಿ ಜೀವ-ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪಾರಿತೋಷಕ ಪಡೆದ ವಿಜ್ಞಾನಿ ಸರ್ ಜಾನ್ ಬಿ. ಗುರ್ಡಾನ್. ಕಾಂಡಕೋಶ (ಸ್ಟೆಮ್ ಸೆಲ್) ಮತ್ತು ತದ್ರೂಪಿ ಸೃಷ್ಟಿ (ಕ್ಲೋನಿಂಗ್) ಮೇಲೆ ನಡೆಸಿದ ಉನ್ನತ (ಪ್ರಬುದ್ಧ ಕೋಶಗಳನ್ನು ಕಾಂಡಕೋಶಗಳಾಗಿ ಪರಿವರ್ತನೆ) ಸಂಶೋಧನೆಗಾಗಿ ಶಿನ್ಯಾ ಯಮನಕ ಎಂಬ ಇನ್ನೊಬ್ಬ ವಿಜ್ಞಾನಿಯೊಂದಿಗೆ ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಪಾರಿತೋಷಕವನ್ನು ಗಳಿಸಿರುವ ಒಬ್ಬ ಶ್ರೇಷ್ಠ ವಿಜ್ಞಾನಿ. ಅಷ್ಟು ಮಾತ್ರವಲ್ಲದೇ, ವಿಲಿಯಂ ಬೇಟ್ ಹಾರ್ಡಿ ಪ್ರಶಸ್ತಿ (1984), ರಾಯಲ್ ಮೆಡಲ್ (1985), ಜೀವಶಾಸ್ತ್ರಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ (1987) ಮೆಡಿಸಿನ್ ವುಲ್ಫ್ ಪ್ರಶಸ್ತಿ (1989) ಎಡ್ವಿನ್ ಗ್ರಾಂಟ್ ಕಾಂಕ್ಲಿನ್ ಪದಕ (2001), ಆಲ್ಬರ್ಟ್ ಲಾಸ್ಕರ್ ಮೂಲ ವೈದ್ಯಕೀಯ ಸಂಶೋಧನಾ ಪ್ರಶಸ್ತಿ (2009), ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ತನ್ನ ಮುಡಿಗೇರಿಸಿಕೊಂಡಿದ್ದರು. ಇಂತಹ ಶ್ರೇಷ್ಠ ಸಾಧನೆ ಮಾಡಿರುವ ಸರ್ ಜಾನ್ ಬಿ. ಗುರ್ಡಾನ್ ಅವರು ಕೂಡ ಅನುತ್ತೀರ್ಣರಾಗಿದ್ದರು.
ಎಡ್ಜ್ಬರೋದಲ್ಲಿರುವ ಎಟನ್ ಕಾಲೇಜಿನಲ್ಲಿ ಓದುತ್ತಿರುವಾಗ ಅಂಕ ಗಳಿಕೆಯಲ್ಲಿ ಇವರೇ ಕೊನೆಯವರಾಗಿದ್ದರು. ಅವರ ಅಧ್ಯಾಪಕರೊಬ್ಬರು “ಈತ ವಿಜ್ಞಾನಿ ಆಗಬೇಕೆಂಬ ಕನಸು ಕಾಣುತ್ತಿದ್ದಾನೆ, ಆದರೆ ಇವನು ತೆಗೆದಿರುವ ಅಂಕಗಳನ್ನು ನೋಡಿದರೆ ಹಾಸ್ಯಾಸ್ಪದವಾಗಿದೆ” ಎಂಬ ವರದಿಯನ್ನು ಬರೆದಿದ್ದರು. ಅಂಕ ಗಳಿಕೆಯಲ್ಲಿ ಕಟ್ಟಕಡೆಯ ವಿದ್ಯಾರ್ಥಿಯಾಗಿದ್ದು ಹಾಸ್ಯಾಸ್ಪದಕ್ಕೆ ಒಳಗಾಗಿದ್ದ ಹುಡುಗನೊಬ್ಬ ಭವಿಷ್ಯದಲ್ಲಿ ನೊಬೆಲ್ ಪಾರಿತೋಷಕ ಪಡೆಯುವಂತಹ ಸಾಧನೆ ಮಾಡುತ್ತಾನೆಂದು ಯಾರೂ ಊಹಿಸಿರಲಿಲ್ಲ.
ಶ್ರೀನಿವಾಸ ರಾಮಾನುಜನ್ ಹೆಸರು ಕೇಳದವರಿಲ್ಲ. ಗಣಿತದಲ್ಲಿ ಇವರು ಮಾಡಿದ ಸಾಧನೆ ಅಸಾಮಾನ್ಯ. ಆದರೆ, ಶಾಲೆಯಲ್ಲಿ ಗಣಿತ ವಿಷಯ ಬಿಟ್ಟು ಬೇರೆ ವಿಷಯಗಳಲ್ಲಿ ನಪಾಸಾಗಿದ್ದರು. ವಿದ್ಯಾರ್ಥಿವೇತನಕ್ಕಾಗಿ ಎರಡು ಸಲ ‘ಫೆಲೋ ಆಫ್ ಆರ್ಟ್ಸ್’ ಪರೀಕ್ಷೆಗೆ ಕುಳಿತುಕೊಂಡರೂ ಅನುತ್ತೀರ್ಣರಾಗಿದ್ದರು. ಆದರೆ, ಅದೇ ವ್ಯಕ್ತಿ ಮುಂದೆ ಜಗತ್ತನ್ನೇ ಬೆರಗುಗೊಳಿಸುವ ಒಬ್ಬ ಶ್ರೇಷ್ಠ ಗಣಿತಜ್ಞರಾದರು. ಅವರು ಅಂದು ಕಂಡುಹಿಡಿದ ಗಣಿತದ ಪ್ರಮೇಯ, ಸೂತ್ರಗಳು ಇಂದಿಗೂ ವಿಶ್ವದ ಎಲ್ಲಾ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲೂ ಅಧ್ಯಯನ ಮಾಡಲಾಗುತ್ತದೆ. ಬದುಕಿರುವ ಕೇವಲ ೩೩ ವರ್ಷಗಳಲ್ಲಿ ಗಣಿತ ಕ್ಷೇತ್ರದಲ್ಲಿ ಶ್ರೀನಿವಾಸ ರಾಮಾನುಜನ್ ನೀಡಿರುವ ಕೊಡುಗೆ ಜಗತ್ತಿನಲ್ಲಿ ಇಂದಿಗೂ ವಿಸ್ಮಯ.
ಮಾಲ್ಗುಡಿ ಡೇಸ್ ಹೆಸರು ಕೇಳಿದ ತಕ್ಷಣ ಇಬ್ಬರು ಮಹಾನ್ ವ್ಯಕ್ತಿಗಳ ಹೆಸರು ಮನದಲ್ಲಿ ಮೂಡುತ್ತದೆ. ನಟ, ನಿರ್ದೇಶಕ ಶಂಕರನಾಗ್ ಮತ್ತು ಮಾಲ್ಗುಡಿ ಎಂಬ ಕಾಲ್ಪನಿಕ ಪಟ್ಟಣದ ಸೃಷ್ಟಿಕರ್ತ ಆರ್. ಕೆ. ನಾರಾಯಣ್. ತಮ್ಮ ಅದ್ಭುತ ಸಾಹಿತ್ಯ ಕೃತಿಗಳ ಮೂಲಕ ಪದ್ಮವಿಭೂಷಣ, ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಬೆನ್ಸನ್ ಪದಕ, ಅತ್ಯುತ್ತಮ ಕಥೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ, ಲೀಡ್ಸ್ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಹೀಗೆ ಹತ್ತಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದ ಆರ್. ಕೆ. ನಾರಾಯಣ್ ಅವರು ಕೂಡ ವಿದ್ಯಾರ್ಥಿ ಜೀವನದಲ್ಲಿ ವೈಫಲ್ಯವನ್ನು ಅನುಭವಿಸಿ ಉತ್ತುಂಗಕ್ಕೆ ಏರಿದವರು. | |
ಪ್ರೌಢ ಶಾಲಾ ವ್ಯಾಸಂಗವನ್ನು ಮುಗಿಸಿದ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರಿಸಲು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಒಂದು ವರ್ಷ ಮನೆಯಲ್ಲೇ ಕುಳಿತು ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವ್ಯಾಸಂಗವನ್ನು ಮುಂದುವರಿಸಿದರು. ಮೂರು ವರ್ಷದ ಪದವಿ ವ್ಯಾಸಂಗವನ್ನು ಮುಗಿಸಲು ನಾಲ್ಕು ವರ್ಷ ತೆಗೆದುಕೊಂಡರು. ವಿದ್ಯಾರ್ಥಿ ಜೀವನದಲ್ಲಿ ಇಂಗ್ಲೀಷ್ ಭಾಷಾ ವಿಷಯದಲ್ಲಿ ಅನುತ್ತೀರ್ಣರಾಗಿ ಮುಂದೆ ಆದೇ ಭಾಷೆಯಲ್ಲಿ ಅಪೂರ್ವವಾದ ಸಾಹಿತ್ಯ ಕೃತಿಗಳನ್ನು ರಚಿಸಿ ಜಗದ್ವಿಖ್ಯಾತರಾದರು. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಗೂ ಸಹ ಹಲವು ಬಾರಿ ಅವರ ಹೆಸರು ನಾಮನಿರ್ದೇಶನಗೊಂಡಿತ್ತು. |
ಇವುಗಳು ಮಹಾಸಾಧಕರ ಕೆಲವು ಉದಾಹರಣೆಗಳಷ್ಟೇ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನುತ್ತೀರ್ಣರಾಗಿ ಭವಿಷ್ಯದಲ್ಲಿ ಅಪ್ರತಿಮ ಸಾಧನೆ ಮಾಡಿರುವ, ಮಾಡುತ್ತಿರುವ ಎಷ್ಟೋ ಸಾಧಕರು ಜಗತ್ತಿನಾದ್ಯಂತ ಇದ್ದಾರೆ; ವಿಶ್ವ ಪ್ರಸಿದ್ಧ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಮಹಾನ್ ಸಂಶೋಧಕ ಥಾಮಸ್ ಅಲ್ವಾ ಎಡಿಸನ್, ಹೈಸ್ಕೂಲ್ ಶಿಕ್ಷಣವನ್ನು ಪೂರೈಸದ ರೈಟ್ ಸಹೋದರರು, ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಆಪಲ್ ಇಂಕ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್, ಫೇಸ್ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್, ಡೆಲ್ ಟೆಕ್ನಾಲಜೀಸ್ ಸಂಸ್ಥಾಪಕ ಮೈಕೆಲ್ ಡೆಲ್, ವಿಶ್ವ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್, ಕ್ರಿಕೆಟ್ ತಂಡದ ನಾಯಕನಾಗಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್, ವಿಪ್ರೋ ಲಿಮಿಟೆಡ್ ಅಧ್ಯಕ್ಷ ಅಜೀಮ್ ಪ್ರೇಮ್ ಜಿ, ಇನ್ನೂ ಅನೇಕರು ತಮ್ಮ ವೈಫಲ್ಯವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತುಂಗಕ್ಕೇರಿದವರು. ತಮ್ಮ ಶಾಲಾ ಕಾಲೇಜು ವ್ಯಾಸಂಗದ ಸಮಯದಲ್ಲಿ ಅನುತ್ತೀರ್ಣರಾದರೂ ಮುಂದೆ ಐಎಎಸ್ ಅಧಿಕಾರಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು, ವೈದ್ಯರು, ಉದ್ಯಮಿಗಳು, ನ್ಯಾಯವಾದಿಗಳು, ಮಂತ್ರಿಗಳಾದ ಅನೇಕ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ.
ಆದ್ದರಿಂದ, ಯಾವ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ, ಅದನ್ನು ಹಿನ್ನಡೆ ಅಥವಾ ಅವಮಾನ ಎಂದು ಪರಿಗಣಿಸಬಾರದು. 1940 ರಿಂದ 1945 ರಲ್ಲಿ ಯುನೈಟೆಡ್ ಕಿಂಗ್ಡಮ್ ನ ಪ್ರಧಾನಿ ಆಗಿದ್ದ ಸರ್ ವಿನ್ಸ್ಟನ್ ಚರ್ಚಿಲ್ ಅವರು ಹೇಳಿರುವ “ಯಶಸ್ಸು ಅಂತಿಮವಲ್ಲ, ವೈಫಲ್ಯವು ಮಾರಕವಲ್ಲ: ಸಾಧನೆಯ ಮೆಟ್ಟಿಲನ್ನು ಏರಲು ಧೈರ್ಯ ಇದು” ಎಂಬ ಮಾತು ವಿದ್ಯಾರ್ಥಿಗಳಿಗೆ ಸ್ಥೈರ್ಯ ತುಂಬುವಂಥದ್ದು. “ವೈಫಲ್ಯಗಳು ಜೀವನದ ಒಂದು ಭಾಗ. ವಿಫಲರಾಗದಿದ್ದರೆ ನೀವು ಕಲಿಯುವುದಿಲ್ಲ. ನೀವು ಕಲಿಯದಿದ್ದರೆ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ” ಗೌತಮ ಬುದ್ಧ ಅಂದು ಹೇಳಿದ ಮಾತು ಇಂದಿಗೂ ಮಾರ್ಗದರ್ಶಿ.
ಸಹಜವಾಗಿ, ಫೇಲ್ ಪದವು ನಿರಾಶಾದಾಯಕವಾಗಿದೆ. ಆದರೆ ಯಾವುದೇ ವಿದ್ಯಾರ್ಥಿಯು ಅದರಿಂದ ಧೃತಿಗೆಡಬಾರದು. ಫಲಿತಾಂಶ ಪ್ರಕಟವಾದ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವ ಕಹಿ ಘಟನೆಗಳು ನಡೆಯುತ್ತಿವೆ. ಕಳೆದ ತಿಂಗಳು ಪಿ.ಯು.ಸಿ. ಫಲಿತಾಂಶ ಪ್ರಕಟವಾದಾಗ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಕೆಲವು ವಿದ್ಯಾರ್ಥಿಗಳ ಪ್ರಬುದ್ಧತೆಯ ಮಟ್ಟ ಕಡಿಮೆ ಇದ್ದು ಹೆಚ್ಚು ಭಾವನಾತ್ಮಕರಾಗಿರಬಹುದು. ಅಂತಹ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿಫಲರಾದಾಗ ದೊಡ್ಡ ಅವಮಾನವೆಂದು ಪರಿಗಣಿಸಿ ಅಥವಾ ಪೋಷಕರ ಭಯದಿಂದಾಗಿ ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆಗಳಿವೆ. ಫೇಲ್ ಅಥವಾ ಕಡಿಮೆ ಅಂಕ ಬಂದಿದೆ ಎಂದು ಧೈರ್ಯಗುಂದಿದ ವಿದ್ಯಾರ್ಥಿಗಳನ್ನು ಪೋಷಕರು, ಬಂಧುಮಿತ್ರರು ಹಾಗೂ ಶಿಕ್ಷಕರು ಸಾಂತ್ವನದ ಮಾತುಗಳನ್ನಾಡಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ನೈತಿಕ ಕರ್ತವ್ಯವಾಗಿದೆ. ಉತ್ತಮ ಅಂಕದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವುದರ ಜೊತೆಗೆ ಕಡಿಮೆ ಅಂಕ ಪಡೆದಿರುವ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂತೈಸುವುದು ಅಷ್ಟೇ ಮುಖ್ಯವಾದದ್ದು.
ಎಷ್ಟೋ ತಂದೆ ತಾಯಂದಿರು ತಮ್ಮ ಮಕ್ಕಳ ನ್ಯೂನತೆ, ಆಸಕ್ತಿ, ಪ್ರತಿಭೆಯನ್ನು ಗುರುತಿಸದೆ ತಮ್ಮ ಕನಸಿನ ಮತ್ತು ಪ್ರತಿಷ್ಠೆಯ ಗೋಪುರವನ್ನು ಮಕ್ಕಳ ತಲೆಯ ಮೇಲೆ ಕಟ್ಟುತ್ತಾರೆ. ಪರೀಕ್ಷೆ ಫಲಿತಾಂಶ ಹೊರಬಿದ್ದ ಸಂದರ್ಭದಲ್ಲಿ ಒಂದು ವೇಳೆ ಆ ಗೋಪುರವು ಒಡೆದು ಹೋದರೆ, ಇದರ ಅರಿವಿರುವ ಮಕ್ಕಳು ತಮ್ಮ ಪೋಷಕರನ್ನು ಎದುರಿಸುವ ಧೈರ್ಯ ಸಾಲದೇ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಹುದು.
ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಮಾತ್ರ ಬುದ್ಧಿವಂತರು, ಉಳಿದವರು ದಡ್ಡರು ಎಂದು ಎಲ್ಲಿಯೂ ಯಾವ ಪುರಾಣ, ಶಾಸನದಲ್ಲಿಯೂ ಬರೆದಿಲ್ಲ. ಅನುತ್ತೀರ್ಣರಾದಾಗ ವಿದ್ಯಾರ್ಥಿಗಳು ನಿರಾಶೆಗೊಳ್ಳುವ ಬದಲು ಅದನ್ನೇ ಒಂದು ಸವಾಲಾಗಿ ತೆಗೆದುಕೊಂಡು ಮುಂದಿನ ಅವಕಾಶಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧಿಸುವ ಸಂಕಲ್ಪ ಮಾಡಬೇಕು. ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಅವರನ್ನು ಹುರಿದುಂಬಿಸಬೇಕು. ಜಗತ್ತು ವಿಶಾಲವಾಗಿದೆ, ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆಯನ್ನು ಅನ್ವೇಷಿಸಲು ಮತ್ತು ಉತ್ಕೃಷ್ಟಗೊಳಿಸಲು ಅಪಾರ ಅವಕಾಶಗಳಿವೆ.
ಒಬ್ಬ ವ್ಯಕ್ತಿಯ ಬುದ್ಧಿಮತ್ತೆಯ ಪ್ರಮಾಣ (Intelligence Quotient; I.Q.) ಎಷ್ಟು ಮುಖ್ಯವೋ, ಅಷ್ಟೇ ಅಥವಾ ಅದಕ್ಕಿಂತಲೂ ಪ್ರಾಮುಖ್ಯವಾದದ್ದು ಭಾವನಾತ್ಮಕ ಅಂಶ (Emotional Quotient; E.Q). ಜೀವನದ ಏನೇ ಎಡರು ತೊಡರುಗಳನ್ನು ಸ್ಥೈರ್ಯದಿಂದ ನಿಭಾಯಿಸಲು ಮಕ್ಕಳ ಭಾವನಾತ್ಮಕ ಅಂಶವನ್ನು (E.Q.) ಹೆಚ್ಚಿಸುವುದು ಕೂಡ ಮುಖ್ಯ. ಈ ನಿಟ್ಟಿನಲ್ಲಿ, ಪೋಷಕರು, ಶಿಕ್ಷಕರು ಮತ್ತು ಸಮಾಜದ ಪಾತ್ರ ಬಹಳ ಮುಖ್ಯ.
ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಂಭ್ರಮದಲ್ಲಿರುವರು. ಅನುತ್ತೀರ್ಣರಾದವರೂ ಸಂಭ್ರಮಿಸಿ, ‘ತಾನು ಫೇಲ್ ಆದೆ’ ಅಂತ ಅಲ್ಲ; ‘ತನ್ನ ಪರಿಪೂರ್ಣತೆಯನ್ನು ಹೆಚ್ಚಿಸಲು, ಒಳ್ಳೆಯ ಅಂಕಗಳನ್ನು ಗಳಿಸಲು ಇನ್ನೂ ಒಂದು ಅವಕಾಶವಿದೆ’ ಎಂಬ ಆತ್ಮವಿಶ್ವಾಸದೊಂದಿಗೆ. ಯಾರಿಗೆ ಗೊತ್ತು..? ನಾಳೆ ನೀವು ಸಹ ಸರ್ ಜಾನ್ ಬಿ. ಗುರ್ಡಾನ್, ಶ್ರೀನಿವಾಸ ರಾಮಾನುಜನ್, ಆರ್. ಕೆ. ನಾರಾಯಣ್ ಮುಂತಾದ ಮಹಾನ್ ಸಾಧಕರಂತೆ ಜಗದ್ವಿಖ್ಯಾತರಾಗಬಹುದು. ಇದೇನಿದ್ದರೂ ಸಮಯದ ವಿಷಯ. ಕಾಲಚಕ್ರದಲ್ಲಿ ಕೆಟ್ಟ ಸಮಯ ಉರುಳಿದಂತೆ ಒಳ್ಳೆಯ ಸಮಯ ಬಂದೇ ಬರುತ್ತದೆ. ಆಲ್ ದಿ ಬೆಸ್ಟ್
ಅದ್ಭುತವಾಗಿದೆ ಸರ್… ಲೇಖನ… ಕೇವಲ ಪರೀಕ್ಷೆ ಯಲ್ಲಿ ಫೇಲ್ ಆದವರು ಬಿಟ್ಟು…. ಜೀವನದಲ್ಲಿ ಫೇಲ್ ಆದವರು ಕೂಡ ಒಮ್ಮೆ ಇದನ್ನು ಓದಬೇಕು…ಅವಾಗ ಯಾರು ಕೂಡ ಸೋಲನ್ನು ಸೋಲು ಎಂದು ಭಾವಿಸದೇ.. ಮುಂದಕ್ಕೆ ಪ್ರಯತ್ನ ಪಡುತ್ತಾರೆ.. ಅಲ್ವೇ… ಸೂಪರ್.. ಇದೆ ಸರ್…
ಎಲ್ಲರೂ ಓದಿ ಅನುಸರಿಸ ಬೇಕಾದ ಲೇಖನ. ತುಂಬಾ ಜನರಿಗೆ ಬೇರೆಯವರ ಮಕ್ಕಳಿಗೆ ಬಂದಿರುವ ಅಂಕ ತಿಳಿದು ಕೊಳುವ ಕೆಟ್ಟ ಕುತೂಹಲವಿರುತ್ತದೆ. ತಿಳಿದಾದ ಮೇಲೆ ಅದನು ಪ್ರಚಾರ ಮಾಡುವರು. ಅಂತಹವರು ಈ ಲೇಖನ ಓದಲೇ ಬೇಕು.
Thumba chennagide.
ಉತ್ತಮ ಲೇಖನ ಸರ್. ಇದೀಗ ಪಾಸಾದವರ ಬೆನ್ನುತಟ್ಟುವಷ್ಟೇ ಮುಖ್ಯವಾದದ್ದು ಫೇಲಾದವರಿಗೆ ‘ಸ್ಫೂರ್ತಿ ತುಂಬು’ವಂತದ್ದು. ಆ ನಿಟ್ಟಿನಲ್ಲಿ ಈ ಲೇಖನ ಯಶಸ್ವಿಯಾಗಿದೆ ಸರ್.
ನಿಜವಾಗ್ಲೂ ಹೊಸ ವಿಚಾರವನ್ನೇ ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದೀರೀ , ಅನುತ್ತೀರ್ಣರಾಗಿ ಹತಾಶೆ ಗೊಂಡಿರುವ ಎಳೆಯ ಮನಸ್ಸುಗಳಿಗೆ ನಿಮ್ಮ ಬರಹ ದಾರಿದೀಪವಾಗುವುದು ಖಂಡಿತಾ sr
ಡಾ. ಪ್ರಶಾಂತ್…. ಅತ್ಯಂತ ಸಕಾಲಿಕ ಲೇಖನ.
ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಕಣ್ಣು ತೆರೆಯಿಸುವಂಥಾ ವಿಚಾರವನ್ನು ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ.
ಈ ಲೇಖನ ಓದಿದಾಗ…ನನ್ನ ಆತ್ಮೀಯರೊಬ್ಬರ ವಿಚಾರ ನೆನಪಾಗುತ್ತದೆ. ತಮ್ಮ M.Sc ಪದವಿಯ ಯಲ್ಲಿ ನಿರೀಕ್ಷಿತ ಅಂಕ ಬಾರದೆ ಇದ್ದುದರಿಂದ, ಒಂದು ವರ್ಷ ಹಠ ಹಿಡಿದು ಓದಿ, ಅಭ್ಯಾಸ ಮಾಡಿ ಮುಂದಿನ ವರ್ಷ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, PhD ಪರಿಶ್ರಮದಿಂದ ಗಳಿಸಿ, UGC ಪರೀಕ್ಷೆ ತೇರ್ಗಡೆ ಹೊಂದಿ, ವಿಶ್ವ ವಿದ್ಯಾಲಯ ಒಂದರಲ್ಲಿ ಅಧ್ಯಾಪಕ, ಸಹ ಪ್ರಾಧ್ಯಾಪಕ, ಹಾಗೂ ಪ್ರಸ್ತುತ ಪ್ರಾಧ್ಯಾಪಕ ಹುದ್ದೆಗೆ ಉನ್ನತೀಕರಣಗೊಂಡಿದ್ದಾರೆ. ಜೊತೆಗೆ ತಮ್ಮ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಛಲ, ಧೈರ್ಯ, ನಿರಂತರತೆ ಇದ್ದರೆ ಯಾವುದೂ ಅಸಾಧ್ಯ ಅಲ್ಲ.
ಆಶಾದಾಯಕ ಲೇಖನ.. ಕುಗ್ಗಿದ ಮನಸ್ಸುಗಳಿಗೆ ಸಾಂತ್ವನ ನೀಡುವಂತದ್ದು…
ಪರೀಕ್ಷೆಯಲ್ಲಿ ಫೇಲ್ ಆದವರಿಗೆ ಹಾಗೂ ಅವರ ಹೆತ್ತವರಿಗೆ ಕಣ್ಣು ತೆರೆಸುವಂತಹ ಸಕಾಲಿಕ ಲೇಖನಕ್ಕಾಗಿ ಧನ್ಯವಾದಗಳು. ಪ್ರತಿಯೊಬ್ಬ ಮನುಷ್ಯನಲ್ಲೂ ಏನಾದರೂ ಒಂದು ವಿಶೇಷ ಸಾಮರ್ಥ್ಯವಿದ್ದೇ ಇರುತ್ತದೆ, ಎಲ್ಲರೂ ಒಬ್ಬರ ಹಾಗೆ ಇನ್ನೊಬ್ಬರು ಇರಬೇಕೆಂದಿಲ್ಲ. ಅವರವರ ಸಾಮರ್ಥ್ಯಕ್ಕೆ ಅನುಗುಣವಾದ ದಾರಿಯಲ್ಲಿ ಮುಂದೆ ಹೋಗಲು ವಿದ್ಯಾರ್ಥಿಗೆ ಅವರ ಹೆತ್ತವರು ಸಹಕಾರ ನೀಡಿದಲ್ಲಿ ವಿದ್ಯಾರ್ಥಿಗೆ ಮಾನಸಿಕ ನೆಮ್ಮದಿಯಿಂದ ತನ್ನ ಜೀವನವನ್ನು ರೂಪಿಸಲು ಸಹಾಯವಾಗ ಬಹುದೇನೋ ಎಂದು ಅನಿಸಿಕೆ.
Dr . prashant.an inspiring article and a strong message not only to students but to everybody those who have failed in life. Congratulations 👍
ಉತ್ತಮ ಲೇಖನ. ಇದಕ್ಕಾಗಿ ನಿಮಗೆ ಧನ್ಯವಾದಗಳು.
Beautifully written 👌 Sir🙏
ಲೇಖನ ಚೆನ್ನಾಗಿದೆ. ದೊಡ್ಡ ದೊಡ್ಡ ಸಾಧನೆ ಮಾಡಿದವರಲ್ಲಿ ಹೆಚ್ಚಿನವರು ಒಂದು ಕಾಲದಲ್ಲಿ ಯಾವುದೋ ಒಂದು ವಿಧದಲ್ಲಿ ಸೋತವರು. ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ತೆಗೆದುಕೊಂಡಿದ್ದಾರೆ. ಉತ್ತಮ ಲೇಖನ ನೀಡಿದ ಲೇಖಕರಿಗೆ ಅಭಿನಂದನೆಗಳು
ಸೂಕ್ಷ್ಮ ಸ್ವಭಾವವಿರುವ ಈಗಿನ ಪೀಳಿಗೆ ಮಕ್ಕಳಿಗೆ ಆತ್ಮಸ್ಥ್ಯರ್ಯ ತುಂಬುವಂಥ ಲೇಖನ. ತುಂಬಾ ಚೆನ್ನಾಗಿದೆ…
ಲೇಖಕರಿಗೆ ಅಭಿನಂದನೆಗಳು…
Useful, insightful, Natural remedy for those who failed in life. I believe this article will boost their confidence if they gone this article.
Natural Remedy for those who failed, I believe if they go through this article it will boost thier confidence once again. Title itself has a great meaning.
Natural Remedy for those who failed in their life. I believe if they go through this article it will boost thier confidence once again. Title itself has a great meaning.
ಪ್ರಸ್ತುತ ಸಂದರ್ಭದಲ್ಲಿ ಲೇಖನ ತುಂಬಾ ಅರ್ಥಗರ್ಬಿತ ಸಂದೇಶ ನೀಡುತ್ತದೆ. ಶ್ಯಾಮ್ ಪ್ರಸಾದ್ ಸರ್ ಹೇಳಿರುವಂತೆ, ದೊಡ್ಡ ಮನುಷ್ಯರಷ್ಟೆ ಅಲ್ಲ, ಸಾಮಾನ್ಯದವರೂ ಕೂಡ ಅಸಾಧರಣ ರೀತಿಯಲ್ಲಿ ಜೀವನ ದಲ್ಲಿ ಯಶಸ್ವಿ ಯಾಗಿದ್ದಾರೆ.
ಸಮಾಜಕ್ಕೆ ಹೆದರಿ ಮನೆಯವರೂ ಕೂಡ ಅನುತ್ತೀರ್ಣರಾದವರನ್ನು ಅವಮಾನಗೊಳಿಸಬಾರದು. ಶಿಕ್ಷಣ ಪದ್ದತಿಯು ಕೂಡ ಬದಲಾಗುತ್ತಿದೆ.
ಪ್ರತಿ ವಿದ್ಯಾರ್ಥಿಯೂ ಅಸಾಧಾರಣ ಪ್ರತಿಭೆಯಿರುವವರೇ ಆಗಿರುತ್ತಾರೆ.ಈ ವ್ಯವಸ್ಥೆ ಪ್ರತಿಯೊಬ್ಬರಿಗೂ ದ್ಯೆರ್ಯ ನೀಡಬೇಕು.
ಸರ್, ನಿಮ್ಮ ಲೇಖನ ಸಕಾಲಿಕ ಹಾಗೂ ಸರ್ವಕಾಲಿಕವಾಗಿದೆ.ಧನ್ಯವಾದಗಳು.
Very encouraging article,keep up the good work prasanth 🌺🌺🌺🌺🌺
Thank you Sir for sharing an inspiring article regarding self-confidence.
ಲೇಖನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತು ನೀಡುತ್ತಿರುವ ಎಲ್ಲಾ ಓದುಗ ಬಂಧುಮಿತ್ರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಈ ಸಂದರ್ಭದಲ್ಲಿ ಲೇಖನವನ್ನು ಸಮಯೋಚಿತವಾಗಿ ಪ್ರಕಟಿಸಿರುವ ಕನ್ನಡಪ್ರೆಸ್.ಕಾಮ್ ಸಂಪಾದಕರಿಗೆ ನನ್ನ ಮನದಾಳದ ಧನ್ಯವಾದಗಳು.
ದಯಮಾಡಿ, ಈ ಲೇಖನವನ್ನು ಹೆಚ್ಚು ಜನರಿಗೆ ಕಳುಹಿಸಬೇಕಾಗಿ ಓದುಗರಲ್ಲಿ ವಿನಂತಿ. ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದವರಿಗೆ ಅಭಿನಂದನೆಗಳನ್ನು ಸಲ್ಲಿಸಲು ನೂರಾರು ಜನರಿರುತ್ತಾರೆ. ಆದರೆ, ವಿಫಲರಾದ ಮಕ್ಕಳಿಗೆ ನಾಲ್ಕು ಸಾಂತ್ವನದ ಮಾತುಗಳು, ಪ್ರೋತ್ಸಾಹದ ನುಡಿಗಳು ಈ ಸಂದರ್ಭದಲ್ಲಿ ತುಂಬಾ ಅಮೂಲ್ಯವಾದದ್ದು.
Badalaaguttiruva ee shikshana vyavasthe yalli napaasaada SSLC vidyaatthi haagu poshakarige, uthsaaha thumbuva tonic nanthide nimma baraha sir. Lekhana uttamavaagi moodi bandide.. heege saaguttirali nimma barahagalu …
ಲೇಖನ ತುಂಬಾ ಚೆನ್ನಾಗಿದೆ ಮತ್ತು ಸರಿಯಾದ ಸಮಯಕ್ಕೆ ಪ್ರಕಟಣೆಯಾಗಿದೆ ವಿದ್ಯಾರ್ಥಿಗಳು ಓದಲೇಬೇಕು ಮತ್ತು ವಿಶೇಷವಾಗಿ ಶಿಕ್ಷಕರು ಈ ಲೇಖನವನ್ನು ಓದುವುದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಒಲವು ತೋರಬಹುದು
ನಾನು ಒಬ್ಬ SSLC ವಿದ್ಯಾರ್ಥಿ ನಾನು ಒಂದು subject ನಲ್ಲಿ 2 ಮಾರ್ಕ್‌ಗೆ ಹೋಗಿದ್ದೇನೆ ..ನನಗೆ ಅ ಏರಡು ಮಾರ್ಕ್ ಕೋಡಬಹುತಿತ್ತಲ್ಲ……357 ಮಾರ್ಕ್ ತೆಗೆದು ಪ್ರಯೋಜನ ವಿಲ್ಲ…😢
Very nice article Dr Prashanth, from the view of sslc results, it is really inspiring hopes in those who have not succeeded and not done well in the exam, it really means exams are not everything, there is still a lot more to do to get real success in life ,we have to wait with patience to get our turn to come up in the kalachakra, your timely response to any such current issues and spending valuable time to give hopes to younger generation is really great and inspiring, a big salute, keep going, good luck 🙏