ಅಡುಗೆ ಮನೆ ಗಂಡಸರದ್ದಾ ಇಲ್ಲ ಹೆಂಗಸರದ್ದ? ಹೀಗಂತ ಯಾರನ್ನೇ ಕೇಳಿದ್ರು ಇವನೆಂತ ಅಸಂಬದ್ಧ ಪ್ರಶ್ನೆ ಕೇಳ್ತಾನೆ ಅಂತ ನಕ್ಕುಬಿಡ್ತಾರೆನೋ ಆದ್ರೆ ಉತ್ತರ ಗಂಡಸರದ್ದು ಅಂದು ಬಿಟ್ಟರಂತೂ ಇವನಿಗೆ ತಲೆ ಕೆಟ್ಟಿದೆ ಅಂತ ತೀರ್ಮಾನಿಸಿಬಿಡ್ತಾರೆ. ಅಷ್ಟೊಂದು ನಮ್ಮ ಅಡುಗೆಮನೆಗಳು ಹೆಣ್ಮಕ್ಕಳ ಅಸ್ತಿತ್ವದ, ಹಕ್ಕುಗಳ ಆಸ್ತಿಗಳಾಗಿ ಬಿಟ್ಟಿವೆ. ಹಬ್ಬ, ಹರಿದಿನಗಳಲ್ಲಂತೂ ಕೇಳಲೇ ಬೇಡಿ. ಹೆಣ್ಮಕ್ಕಳು ಎಲ್ಲರಿಗಿಂತ ಮುಂಚೆ ಎದ್ದು,ಸ್ನಾನ ಮಾಡಿ, ಹಸಿ ಹೆರಳನ್ನು ಬಟ್ಟೆಯಲ್ಲಿ ಕೂದಲಿನ ಆಕಾರದಲ್ಲಿ ಕಟ್ಟಿ, ಸಡಗರದಿಂದ ಕೈಬಳೆ ಸದ್ದು ಮಾಡುತ್ತಾ ವಿಧ,ವಿಧ ಅಡುಗೆಗಳ ಪರಿಮಳಗಳೊಂದಿಗೆ ಅಡುಗೆಮನೆಯಲ್ಲಿ ಸ್ಥಾಪಿತರಾದರು ಅಂದ್ರೆ ಹಬ್ಬದ ಸಂಭ್ರಮ ಮುಗಿಲು ಮುಟ್ಟುವುದೇ ಆಗ. ಸಾಧಾರಣ ದಿನಗಳಲ್ಲೂ ಹೆಣ್ಮಕ್ಕಳು ಇಲ್ಲದ ಅಡುಗೆ ಮನೆಗಳು ಭಣ, ಭಣ. ಅಷ್ಟೊಂದು ನಮ್ಮ ಅಡುಗೆಮನೆಗಳು ಹೆಣ್ಮಕ್ಕಳ ಕಾರ್ಯ ಸ್ಥಾನಗಳಾಗಿ,ಇಡೀ ಮನೆಯನ್ನು, ಕುಟುಂಬವನ್ನು ಹಿಡಿದಿಟ್ಟಿವೆ.
ಇಂಥ ಅಡುಗೆ ಅಥವಾ ಅಡುಗೆ ಮನೆಗಳು ಮೊದಲಿಗೆ ಗಂಡಸರದ್ದಾಗಿತ್ತು ಅಂತ ಅನ್ನಿಸೋದೇ ನಳ ಪಾಕ, ಭೀಮಪಾಕ ಎನ್ನುವಂತಹ ಶಬ್ದಗಳನ್ನು ಕೇಳುವಾಗ. ಎಲ್ಲೂ ಸೀತೆ ಪಾಕ, ದ್ರೌಪದಿ ಪಾಕ,ದಮಯಂತಿ ಪಾಕ ಅಂತ ಕೇಳುವುದೇ ಇಲ್ಲ! ಅಲ್ಲದೆ ಬಾಣಸಿಗ ಎನ್ನುವ ಶಬ್ದ ಕೇಳ್ತೇವೆ ಬಿಟ್ಟರೆ ಬಾಣಸಿಗಿತ್ತಿ ಅಂತ ಕೇಳಿಲ್ಲ ಅನ್ಸುತ್ತೆ. ಇವತ್ತಿಗೂ ಸಾಮೂಹಿಕ ಅಡುಗೆಗಳಲ್ಲಿ ಬಾಣಸಿಗರೇ ಕಾಣುತ್ತಾರೆ,ಬಿಟ್ಟರೆ ಬಾಣಸಿಗಿತ್ತಿಯರು ಕಾಣಲ್ಲ. ಇದನ್ನೆಲ್ಲ ನೋಡಿದಾಗ, ಅಡುಗೆ ಮನೇನೂ ಒಂದೊಮ್ಮೆ ಪುರುಷ ಪ್ರಧಾನ ಕೇಂದ್ರ ಆಗಿದ್ದಿರಬಹುದು ಅನ್ನುವ ಅನ್ನಿಸಿಕೆಯನ್ನ ಮಾತ್ರ ಹೊರಹಾಕಿ,ಮುಂದಿನ ಅದರ ವಿಶ್ಲೇಷಣೆಗೆ ಕೈ ಹಾಕಲ್ಲ. ಹಾಗೇನಾದ್ರು ಕೈ ಹಾಕಿ ಮಾತಾಡಿದೆ ಅಂದ್ರೆ, ನನಗೂ ಸೇರಿ ಬಹುತೇಕ ಗಂಡಸರು ಅಡುಗೆ ಮನೆಯಲ್ಲಿ ನಾಳೆಯಿಂದ ಸ್ಥಾಪಿತರಾಗಬೇಕಾಗುತ್ತೆ.
ನಮ್ಮ ಸಂಸ್ಕೃತಿಯಲ್ಲಿ ಅಡುಗೆ ಮನೆಗೆ ತುಂಬಾ ಪವಿತ್ರ ಸ್ಥಾನ ಕೊಟ್ಟಿದ್ದೇವೆ. ದೇವರ ಮನೆ ಆದ ನಂತರ, ಅಡುಗೆ ಮನೆಗೇ ಪ್ರಾಶಸ್ತ್ಯ. ಯಾಕೆಂದರೆ, ಅಡುಗೆ ಮನೆ ನಮ್ಮ ಆರೋಗ್ಯ ಕಾಪಾಡುವ ಔಷಧಾಲಯವೂ ಹೌದು. ನಮ್ಮ ಅಡುಗೆಯೇ ಔಷಧ! ಅಡುಗೆ ಮನೆಯಲ್ಲಿನ ಸಣ್ಣ ಸಣ್ಣ ಬಾಟಲು ಗಳಲ್ಲಿ ತುಂಬಿಟ್ಟಿರುವ ಅಡುಗೆಗೆ ಅಂತ ಉಪಯೋಗಿಸುವ ಸಾಮಾನು ನೋಡಿದ್ರೆ, ನನಗಂತೂ ಹಾಗೇ ಅನ್ಸುತ್ತೆ. ಅದು ನಿಜವೂ ಹೌದು. ನಮ್ಮ ವೈದ್ಯಕೀಯ ಶಾಸ್ತ್ರವಾದ ಆಯುರ್ವೇದದ ಹಲವಾರು ಸಾಮಾನುಗಳು ನಮಗೆ ಅಡುಗೆ ಮನೆಯಲ್ಲಿ ದೊರೆಯುತ್ತವೆ,ಅವುಗಳನ್ನು ದಿನ ನಿತ್ಯ ಉಪಯೋಗಿಸಲು ನಮ್ಮ ಆಹಾರ ಪದ್ಧತಿಗಳಲ್ಲಿ ಅಳವಡಿಸಿ ಕೊಂಡಿದ್ದೇವೆ ಕೂಡಾ. ಹಾಗೆಯೇ ನಾವು ಪಾಲಿಸುವ ಋತುಮಾನಗಳಿಗೆ ತಕ್ಕಂತೆ ಬರುವ ಹಬ್ಬ,ಹರಿದಿನಗಳ ನಿರ್ದಿಷ್ಟ ಆಹಾರ ಪದ್ಧತಿ ಇದಕ್ಕೆ ಬೆಂಬಲವಾಗಿ ನಿಲ್ಲುತ್ತೆ. ಋತುಮಾನ, ಆಹಾರ ಧರ್ಮಾತೀತವಾದ್ದರಿಂದ ಇದು ಎಲ್ಲರಿಗೂ ಅನ್ವಯಿಸುವ ವಿಷಯವೇ. ಆದರೆ, ಈಗಿನ ಕೆಲವು ಬೆಳವಣಿಗೆಗಳು ಇವುಗಳನ್ನೂ ಧರ್ಮದ ಪರಿಧಿಗೆ ತಂದು ಇವುಗಳಿಗೂ ಧರ್ಮದ ಸೋಂಕನ್ನು ಹಚ್ಚಿಬಿಟ್ಟಿವೆ.
ನಮ್ಮಲ್ಲಿಯ ಔಷಧಿ ಗುಣಗಳನ್ನು ಒಳಗೊಂಡಿರುವ ಸಾಂಬಾರು ಪದಾರ್ಥಗಳು ಪ್ರಪಂಚದ ಬೇರೆ ಎಲ್ಲೂ ಸಿಕ್ಕಲ್ಲ, ಅಷ್ಟೇ ಅಲ್ಲ ಇವುಗಳಿಗಾಗಿಯೇ ಡಚ್ಚರು, ಪೋರ್ಚ್ಗೀಸರು, ಅರಬ್ಬಿಗಳೂ ಭಾರತದ ವಾಯುವ್ಯ ಮೂಲೆಯಿಂದ ದಾಳಿ ಮಾಡುವ ಎಷ್ಟೋ ಶತಮಾನಗಳ ಮುಂಚೆಯೇ ದಕ್ಷಿಣ ರಾಜ್ಯಗಳ ರಾಜರೊಂದಿಗೆ ವ್ಯಾಪಾರ ಮಾಡಿರುವುದು ಇತಿಹಾಸ ಆಗಿದೆ.
ಪ್ರತಿ ನೂರು ಚದರ ಮೈಲಿಗೆ ನಮ್ಮ ದೇಶದ ಹವಾಗುಣ ಬದಲಾಗುವ ಲಕ್ಷಣ ಇದೆಯಲ್ಲ, ಇದು ನಮ್ಮ ಸಂಸ್ಕೃತಿ, ಭಾಷೆ, ಆಚಾರ ವಿಚಾರದ ಮೇಲೆ ಬೀರಿರುವ ಪ್ರಭಾವ ನಮ್ಮ ಆಹಾರ ಪದ್ಧತಿಗಳ ಮೇಲೂ ಬೀರಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಅಂಶವೂ ನಮ್ಮ ಆಹಾರ ಪದ್ಧತಿ,ಔಷಧ ಅನ್ನುವುದನ್ನು ಹೆಚ್ಚು ಸ್ಪಷ್ಟಪಡಿಸುತ್ತದೆ. ಈ ಕಾರಣದಿಂದ ನಮ್ಮ ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಆಹಾರ,ದಕ್ಷಿಣ ಕರ್ನಾಟಕ ಆಹಾರ ಪದ್ಧತಿಗಳನ್ನೂ ಕಾಣುತ್ತೇವೆ.
ಬಳ್ಳಾರಿಯವರಾದ ನಾವು ಮಧ್ಯೆ ಕರ್ನಾಟಕದವರು,ಆದರೂ ಉತ್ತರ ಕರ್ನಾಟಕಕ್ಕೆ ಸೇರಿಸಿಬಿಟ್ಟಿದ್ದಾರೆ. ನಮ್ಮಲ್ಲಿ ಎರಡೂ ಪದ್ಧತಿಗಳ ಜೊತೆ,ಆಂಧ್ರ ಆಹಾರ ಪದ್ಧತಿಯೂ ಸೇರಿಕೊಂಡಿದೆ. ದಕ್ಷಿಣ ಕರ್ನಾಟಕದ ಮುದ್ದೆ,ಸೊಪ್ಪು ಸಾರು, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ತರಕಾರಿ, ಕಾಳುಗಳು,ಆಂಧ್ರದ ಪಪ್ಪು,ಅನ್ನ ಎಲ್ಲವೂ ನಮ್ಮಲ್ಲಿ ಆಹಾರ ಪದ್ಧತಿಗಳಾಗಿವೆ. ಏಕದಳ ಧಾನ್ಯಗಳನ್ನು ದ್ವಿದಳ ಧಾನ್ಯಗಳ ಜೊತೆ ವರ್ಷ ಇಡೀ ಸಾಂಬಾರು ದಿನಿಸುಗಳ ಜೊತೆಯಾಗಿ ತಿನ್ನುವ ಆಹಾರ ಪದ್ಧತಿ ದಕ್ಷಿಣ ಭಾರತದಲ್ಲೇ ಸಾಮಾನ್ಯ.
ಬರುವ ಗೌರೀ ಹುಣ್ಣಿಮೆಯ ಕುಂತೀ ರೊಟ್ಟಿಎಂಬ ಸಾಯಂಕಾಲದ ಊಟದ ಕಾರ್ಯಕ್ರಮದಲ್ಲಿ ನಮ್ಮ ಜೋಳದ,ಸಜ್ಜೆಯ ರೊಟ್ಟಿ ಊಟ, ವಿಧ ವಿಧ ತರಕಾರಿ, ಸೊಪ್ಪು,ಕಾಳುಗಳ ಊಟ ಸವಿಯಬೇಕು ಕಣ್ರೀ, ಆಗಲೇ ನನಗೆ ಅನ್ನಿಸಿದ್ದು, ನಮ್ಮ ಪೂರ್ವಿಕರು ಎಷ್ಟೊಂದು ಸಂಶೋಧನೆ ಈ ವಿಷಯದಲ್ಲಿ ಮಾಡಿ ಇದಕ್ಕೆ ಪಾಕ ಶಾಸ್ತ್ರ ಅಂತ ಹೆಸರಿಟ್ಟಿದ್ದಾರಲ್ಲ ಅಂತ.
ಇನ್ನು ಹೋಳಿಗೆ ಊಟದ ಸಂಭ್ರಮವಂತೂ ಪ್ರತಿ ಹಬ್ಬಕ್ಕೂ ನಮಗೆ ಇರುತ್ತದೆ. ಪಂಚಮಿಯ ಉಂಡೆಗಳು, ಯುಗಾದಿಯ,ದಸರಾದ ಹೋಳಿಗೆ, ಸಂಕ್ರಮಣದ ರೊಟ್ಟಿ, ದೀಪಾವಳಿಯ ಸಿಹಿತಿನಿಸುಗಳು, ಶಿವರಾತ್ರಿ ಜಾಗರಣೆ ಮಂಡಕ್ಕಿ ಒಗ್ಗರಣೆ, ಮೆಣಸಿನಕಾಯಿ…. ವರ್ಷವಿಡೀ ಅಂತ್ಯವಿಲ್ಲದ ಹಬ್ಬಗಳು,ಆಹಾರ ಪದ್ಧತಿಗಳು…ವಾವ್…ಬಿಸಿಲಲ್ಲಿ,ಚಳಿಯಲ್ಲಿ,ಮಳೆಯಲ್ಲಿ ಯಾವಾಗಲೂ ಮೆಲ್ಲುವ ನಮ್ಮ ಇಷ್ಟವಾದ ಖಾದ್ಯವೆಂದರೆ ಅದು ಮಂಡಕ್ಕಿ,ಮೆಣಸಿನಕಾಯಿ. ಮೆಣಸಿನಕಾಯಿ ಹೊಟ್ಟೆ ಬಗೆದು, ಉಪ್ಪು ಜೀರಿಗೆ ತುಂಬಿದರಂತೂ ಹ ಹಾ ಅನ್ನುತ್ತಾ, ಬೆವರು ಬರುತ್ತಿದ್ದರೂ ಬಿಡುವುದಿಲ್ಲ ನಾವು ತಿನ್ನುವುದನ್ನು. ಗ್ರಾಮೀಣ ಭಾಗಗಳಲ್ಲಂತೂ ನೀವು,ನಾವು ಕಂಡು ಕೇಳರಿಯದ ಆಹಾರ ಪದ್ಧತಿ ನಮಗೆ ದೇಶದ ಎಲ್ಲ ಭಾಗಗಳಲ್ಲೂ ಸಿಗುತ್ತದೆ.
ಸಸ್ಯ ಆಹಾರದಲ್ಲಿ ಭಾರತದ ಆಹಾರ ಪದ್ಧತಿ,ಇಡೀ ವಿಶ್ವಕ್ಕೆ ಮೊದಲನೆಯದು ಮತ್ತು ತುಂಬಾ ಶಾಸ್ತ್ರೀಯವಾದುದು ಅಂತ ಹೇಳಬಹುದು.
ಇದನ್ನು ಇಷ್ಟೊಂದು ಆಳವಾಗಿ ನೈಸರ್ಗಿಕವಾಗಿ ಸಿಗುವ ಸೊಪ್ಪು,ಕಾಳುಗಳಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಗುರುತಿಸಿ, ಅವುಗಳನ್ನು ಉಪಯೋಗಿಸುವ ಕ್ರಮ ಹೇಳಿಕೊಟ್ಟು, ಮನೆ ಮನೆಗಳಲ್ಲೂ ಆಯುರ್ವೇದದ ಸಾರವನ್ನು ಅಡುಗೆ ರೂಪದಲ್ಲಿ ಅಡುಗೆ ಮನೆಯಲ್ಲಿಟ್ಟಿರುವುದರಿಂದ ಏನೋ ನನ್ನ ಅಮ್ಮ ಬೆಳಿಗ್ಗೆ ಎದ್ದ ತಕ್ಷಣ ಒಲೆಯ ಬೂದಿ ತೆಗೆದು,ಸ್ವಚ್ಛಗೊಳಿಸಿ, ಒಲೆ ಪೂಜೆ ಮಾಡಿಯೇ, ಅಂಗಳ,ಹೊಸ್ತಿಲು ಪೂಜೆ ಮಾಡುತ್ತಿದ್ದದ್ದು. ಒಲೆಗಳೂ,ಬೂದಿಯೂ ಕಾಣದಿರುವ ಈ ದಿನಗಳಲ್ಲಿ, ಅಡುಗೆ ಮನೆ ತನ್ನ ಸಂಭ್ರಮವನ್ನಂತೂ ನಮ್ಮ ಹೆಣ್ಣುಮಕ್ಕಳ ಮುಖಾಂತರ ಉಳಿಸಿಕೊಂಡು ಬಂದಿರುವುದು ಸಂತೋಷವೇ.
ನಳ ಪಾಕ, ಬಾಣಸಿಗ, ಅಡುಗೆ ಭಟ್ಟ ಅಂತ ಪುರುಷ ಪ್ರಧಾನ ಶಬ್ದಗಳನ್ನು ಹೊಂದಿದ್ದರೂ ನಮ್ಮ ಅಡುಗೆ ಮನೆಗಳಿಗೆ ನಮ್ಮ ಅನ್ನಪೂರ್ಣೇಶ್ವರಿಯರೇ ಭೂಷಣ.ಕರೋನಾದಂತಹ ಮಹಾ ಮಾರಿಗೂ ನಮ್ಮ ಅಡುಗೆ ಮನೆ ಡಬ್ಬಗಳಲ್ಲಿ ರಾಮ ಬಾಣಗಳು ಅಡಗಿರುವ ಅಂಶ ,ಮತ್ತೊಮ್ಮೆ ನಮ್ಮ ಅಡುಗೆ ಮನೆಗಳು ಔಷಧ ಕೇಂದ್ರಗಳು ಅಂತ ಸಾಬೀತು ಮಾಡಿವೆ.
ಕಿರಣ್ ಮಾಡಾಳು
ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156
Yava sambar padartha yava rogakke maddu endu thilisiddare channagiruthithu lekana chennagidhe
I loved your previous article as well…you have an excellent hold on the language. It’s a pleasure to read
ಅಡುಗೆ ಮತ್ತು ಔಷಧ ಗುಣಗಳುಳ್ಳ ವಿಷಯ ಚೆನ್ನಾಗಿ ಬಂದಿದೆ.
ವರ್ತಮಾನ ಹಾಗೂ ಈಗಿನ ಕಾಲಮಾನದ ವಿಷಯ ಗಳ ನ್ನು ಒಳಗೊಂಡು, ಆಯಾ ಋತು ಕಾಲದ ಹಬ್ಬ ಹರಿದಿನಗಳ ಆಹಾರ ಮತ್ತು ನಮ್ಮ ಭೌಗೋಳಿಕ ಆಹಾರದ ಪದ್ದತಿ ಯನ್ನು ತಿಳಿಸಿದ್ದೀರ, ಚೆನ್ನಾಗಿ ಬಂದಿದೆ🙂
ವಾಸ್ತವಿಕ ಅಂಶಗಳಿಂದ ಉತ್ತಮ ಲೇಖನವಾಗಿದೆ. ಬಹತೇಕ ನಿಮ್ಮ ನಮ್ಮ ಆಹಾರ ಪದ್ಧತಿ ಒಂದೆ. ಅನೇಕ ಬಾರಿ ನೀನು ತಟ್ಟೆಯಲ್ಲಿನ ಊಟದ ಫೋಟೋ ಹಾಕಿದಾಗ ನನಗೆ ವ್ಯತ್ಯಾಸವಿಲ್ಲ ಎನಿಸುತ್ತದೆ. ಮುದ್ದೆ, ರೊಟ್ಟಿ, ಪಲ್ಯ ಸಾರು ಹಾಗೆ ಇರುತ್ತದೆ. ಸಾಂಬಾರು ಪದಾರ್ಥಗಳ ಬಗ್ಗೆ ಸರಿಯಾದ ವಿಚಾರ ದಾಖಲಿದ್ದೀಯ ಗೆಳೆಯ.
ಈ ಲೇಖನದ ಎರಡನೇ ಭಾಗವನ್ನು ಬರೆಯುತ್ತಿರುವಿರಾ ಹೇಗೆ? ಯಾಕೋ ಲೇಖನ ಅಪೂರ್ಣ ಅನ್ನಿಸಿತು ಕಾರಣ ,ಕರೋನಾದಂತಹ ಮಹಾ ಮಾರಿಗೂ ನಮ್ಮ ಅಡುಗೆ ಮನೆ ಡಬ್ಬಗಳಲ್ಲಿ ರಾಮ ಬಾಣಗಳು ಅಡಗಿರುವ ಅಂಶ ,ಮತ್ತೊಮ್ಮೆ ನಮ್ಮ ಅಡುಗೆ ಮನೆಗಳು ಔಷಧ ಕೇಂದ್ರಗಳು ಅಂತ ಸಾಬೀತು ಮಾಡಿವೆ ಎಂದು ಹೇಳಿದ ಮೇಲೆ, ಅಡುಗೆ ಮನೆ ಡಬ್ಬಗಳಲ್ಲಿರುವ ರಾಮಬಾಣಗಳು ಯಾವುವೂ ಎಂದೂ ತಿಳಿಸುತ್ತೀರ ಅಂದು ಕೊಂಡೆ.
ಲೇಖನ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ನೀವು ಹೇಳಿರುವ ಹಾಗೆ ಎಲ್ಲೂ ಸ್ತ್ರೀ ಪಾಕದ ಉದಾರಣೆ ಇಲ್ಲ. ಆದರೂ ಅಡುಗೆ ಮನೆಗೆ ಹೆಣ್ಣೇ ಮಹಾರಾಣಿ. ಮತ್ತೆ ಸಾಂಬಾರ್ ಪದಾರ್ಥ ಗಳಿಗೆ ರಾಜ ನಮ್ಮ ಭಾರತ . ಹಾಗೆ ನೀವು ಹೇಳಿರುವ ಆಹಾರ ಪದ್ಧತಿ ಬೇರೆ ಬೇರೆ ಆದರೂ ನಮ್ಮ ದೇಶ ನಮ್ಮ ಸಂಸ್ಕೃತಿ. ಎಲ್ಲರಿಗೂ ಆದರ್ಶ ವಾಗಿದೆ ಈ ಎಲ್ಲ ಅಂಶಗಳ ಬಗ್ಗೆ ಬೆಳಕು ಚಲ್ಲಿದೀರಾ. ಒಟ್ಟಿನಲ್ಲಿ ನಿಮ್ಮ ಎಲ್ಲ ಲೇಖನ ಗಳನ್ನ ನೋಡಿದಾಗ ನೀವು ಎಷ್ಟು ವಿಷಯ ಗಳ ಬಗ್ಗೆ ತಿಳಿದುಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತೆ. ಅಭಿನಂದನೆಗಳು.
ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಾರ್. ಬದಲಾದ ಚಿಂತನೆಗಳು ಹೆಣ್ಣು ಮಕ್ಕಳನ್ನು ಆರ್ಥಿಕ ನೊಗವನ್ನೂ ಅವರ ಮೇಲೆ ಹಾಕಿರುವುದರಿಂದ ಇಂದು ಅಡುಗೆ ಮನೆಗಳು ಮೂಲ ಸ್ವರೂಪದ ರುಚಿ ಉಣಿಸುವಲ್ಲಿ ಸೋತಿವೆ. ನೊಗ ಹೆಣ್ಣು ಗಂಡು ಒಳಹೊರ ಭಾರ ಸಮನಾಗಿ ತೆಗೆದುಕೊಂಡರೆ ಮತ್ತದೇ ಸವಿ ಆಸ್ವಾದಿಸಬಹುದಲ್ಲವೇ??
ಭಾರತಿ ಯವರ ಮಾತಿಗೆ ನನ್ನ ಸಹಮತವೂ ಇದೆ. ಯಾವ ಸಾಮಗ್ರಿ ಯಾವ ಖಾಹಿಲೆಗೆ ಮದ್ದೂ ಅಂತ ತಿಳಿಸಿದ್ದರೆ ಒಳ್ಳೆಯ ದಿತ್ತು ಅಂತಾ ನನ್ನಾ ಅನ್ನಿಸಿಕೆ…!!
Sir, u are expressing urself very nicely.
U are really writing very nicely….
There is lot of charm & pull in ur writings.
Nice flow is there…👌👌🙏
ನಮ್ಮ ಅಡುಗೆ ಮನೆಯ ಘಮ ಘಮ ಪರಿಮಳದೊಳಗೆ ಕೊರೋನಾಕ್ಕೂ ಮದ್ದು ಇದೆ ಎಂದು ಮಾರ್ಮಿಕವಾಗಿ ತಿಳಿಸಿಕೊಟ್ಟ ಲೇಖಕರಿಗೆ ಕೃತಜ್ಞತೆಗಳು.
ಕೆಲವೇ ಪುರುಷರು ಅಡುಗೆ ಮಾಡಿದ್ದರಿಂದ ..ನಳಪಾಕ …ಇತ್ಯಾದಿ ಉಪಮೆಗಳು ಬಂದಿವೆ.
ಲೇಖನ ಚೆನ್ನಾಗಿದೆ.
ಆದರಪೂರ್ವಕವಾಗಿ ತಮ್ಮ ಅನ್ನಿಸಿಕೆಗಳಿಗೆ ಸ್ಪಂದಿಸುತ್ತ, ನಾಲ್ಕು ನುಡಿಗಳು…..ಲವಂಗ,ಏಲಕ್ಕಿ,ಶುಂಠಿ, ಕಾಳು ಮೆಣಸು, ಬೆಳ್ಳುಳ್ಳಿ,ಅರಿಶಿನ ,ನಿಂಬೆರಸ ದ ಮಿಶ್ರಣ,ಜೇನುತುಪ್ಪದೊಂದಿಗೆ… ಕೊರೊನಾ ಲಕ್ಷಣಗಳಾದ ಗಂಟಲು ಕೆರೆತ, ನೆಗಡಿ,ಕೆಮ್ಮು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ನನ್ನ ಸ್ವಂತ ಅನುಭವದಿಂದ ಹೇಳಲು ಇಶ್ಚಿಸುತ್ತೇನೆ……ಎಲ್ಲರಿಗೂ ಗೊತ್ತಿರಬಹುದು ಅಂತ ಡಬ್ಬಿಗಳನ್ನು ಬಿಚ್ಚಿ ಬಾಣಗಳನ್ನು ತೋರಿಸಲಿಲ್ಲ…ಹೆಚ್ಚಿನ ಆಸಕ್ತರಿಗೆ,ಮಾಹಿತಿಗೆ ಮಲ್ಲಾಡಿಹಳ್ಳಿಯ ನಮ್ಮ ಸ್ವಾಮೀಜಿ ಬರೆದಿರುವ *ಸ್ವಯಂ ವೈದ್ಯ* ಪುಸ್ತಕವನ್ನು ಓದಬಹುದು…ಪ್ರತೀ ಮನೆಯಲ್ಲಿ ಸಂಗ್ರಹ ಯೋಗ್ಯ ಪುಸ್ತಕ.
ಮತ್ತೊಮ್ಮೆ ವಂದನೆಗಳು….