ನಿನ್ನಿಂದ ಬೇಸಾಯ . ನಿನ್ನಿಂದ ಕೊಯ್ಲು .ನಿನ್ನಿಂದ ಸುಗ್ಗಿ .ನೀನೇ ಫಲ, ನೀನೇ ದವಸ , ನೀನೇ ಧಾನ್ಯ . ನೀನು ಬರ್ತೀಯ ಅಂದ್ರೇನೆ ಕಾರ್ಮೋಡಗಳು ಜೊತೆಯಾಗುತ್ತವೆ . ಭಾನು ಗುಡುಗುತ್ತಾ ಬಹುಪರಾಕನ್ನ ತಿಳಿಸುತ್ತೆ . ಮಿಂಚು ಸಂಚರಿಸಿ ಸಂಚಲವನ್ನೇ ಸೃಷ್ಟಿಸುತ್ತೆ . ಕೃಷಿಕರು ಕನಸಿನಲ್ಲಿ ನಿನ್ನ ಭ್ರಮಿಸುತ್ತಾರೆ , ಜೊತೆಗೆ ರಮಿಸುತ್ತಾರೆ , ಕೈಎತ್ತಿ ನಮಿಸುತ್ತಾರೆ .
ಕೆರೆಗಳು ಜಾಗ ಹುಡುಕಿದ್ರೇ ನದಿಗಳು ದಾರಿ ಹುಡುಕುತ್ತವೆ . ನಿನ್ನತ್ರ ಹೆಚ್ಚು ಕಡಿಮೆ ಎಂಬೆರಡು ಪದಕ್ಕೆ ತುಂಬಾನೇ ಒಳ ಅರ್ಥ ಇದೆ . ನೀನು ಅಳತೆ ಮೀರಿದರೂ ಅಪಾಯ , ಅಳತೆಗೆ ಬಾರದಿದ್ದರೂ ಅಪಾಯ. ನಿನದೊಂದು ಸ್ವಾದದ ಸುವಾಸನೆಯಿದೆ . ನಿನ್ನದೇ ಆದ ನಿರ್ಧಿಷ್ಟ ಕಾಲವಿದೆ . ನಿನ್ನನ್ನಳಿಯಲು ಹವಾಮಾನ ಇಲಾಖೆಯಿದೆ .
ಅನ್ನದಾತರಿಗೆ ನೀನು ಅನ್ನವೂ ಹೌದು ಕನ್ನವೂ ಹೌದು . ನಿನ್ನ ಮನಸ್ಥಿತಿ ಚೆನ್ನಾಗಿದ್ರೆ ಸೂರ್ಯನೊಂದಿಗೆ ಬೆರೆತು ಸೊಗಸಾದ ಕಾಮನಬಿಲ್ಲನ್ನು ಸೃಷ್ಟಿಸ್ತೀಯ. ಅದೇ ನಿನ್ನ ಮೂಡು ಸರಿ ಇಲ್ಲದಾಗ ಅದೇ ಸೂರ್ಯನ ಹುಟ್ಟಡಗಿಸ್ತೀಯ . ನಿನ್ನ ಗೈರುಹಾಜರಿಯಿಂದ ಪ್ರಕೃತಿ ಕೋಪಗೊಂಡ್ರೆ ನಿನ್ನ ಜೋರುಹಾಜರಿಯಿಂದ ಪ್ರಕೃತಿ ವಿಕೋಪಗೊಳ್ಳುತ್ತೆ.
ಕವಿಗಳು ನಿನ್ನನ್ನು ಜಲಧಾರೆ, ವರ್ಷಧಾರೆ, ವರುಣ, ತುಂತುರುಮಳೆ , ಸೋನೇಮಳೆ , ಜೋರುಮಳೆ , ಮುಂಗಾರುಮಳೆ , ಜಡಿಮಳೆ , ಆಲೀಕಲ್ಲು ಮಳೆ, ಧಾರಾಕಾರಮಳೆ ಎಂದು ವಿಧವಿಧವಾಗಿ ವರ್ಣಿಸುತ್ತಾರೆ.
ನಿನ್ನ ಹನಿಗಳದ್ದು ಒಮ್ಮೊಮ್ಮೆ ನರ್ತನವಾದರೆ ಒಮ್ಮೊಮ್ಮೆ ರುದ್ರನರ್ತನ . ನೀನು ಪ್ರೇಮಿಗಳಿಗೆ ಸಿಹಿ ಭಗ್ನಪ್ರೇಮಿಗಳಿಗೆ ಕಹಿ . ನಿನ್ನ ಆಗಮನಕ್ಕೆ ಕೃತಕ ಛತ್ರಿಗಳು ಅರಳಿದರೆ , ನಿರ್ಗಮನದ ನಂತರ ಜೀವಂತ ಅಣಬೆಗಳೇ ಅರಳುತ್ತವೆ .
ಕಾಲಕಾಲಕ್ಕೆ ನಿನ್ನಿಂದ ಗಿಡ ಮರ ಕಾಡು ನಿಸರ್ಗ ಬೆಳೆಯುತ್ತವೆ , ಅದೇ ನೀನು ಮುನಿಸಿಕೊಂಡರೆ ಬೃಹತ್ ಮರಗಳು ತಲೆಕೆಳಗಾಗಿ ಉರುಳುತ್ತವೆ , ಅಷ್ಟೇ ಯಾಕೇ ಸರ್ಕಾರಗಳೇ ಉರುಳಿದರೂ ಆಶ್ಚರ್ಯವಿಲ್ಲ . ಎಷ್ಟೇ ಆಗಲಿ ನೀನು “ವರುಣದೇವ” ನಲ್ಲವೇ.
ಹಳ್ಳಿಗಳಲ್ಲಿ ಮೊದಲೆಲ್ಲಾ ಪರ ಊರಿನವರು ಯಾರೇ ಕಂಡರೂ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ ನಿಮ್ ಕಡೆ ಮಳೆ ಆಯ್ತಾ ಅಂತ . ಅವರು ವಾತಾವರಣ ಮತ್ತು ವಾಸನೆ ಗ್ರಹಿಸಿಯೇ ಮಳೆ ಬರುತ್ತಾ ಬರಲ್ವಾ ಅಂತ ಊಹಿಸುತ್ತಿದ್ದರು . ಮಳೆಗೆ ಹಳ್ಳಿಗರ ಮುಖ ಮಾತ್ರ ಅರಳುತ್ತಿರಲಿಲ್ಲ , ಹೊಲ ಗದ್ದೆ ತೋಟ ಪ್ರತಿಯೊಂದೂ ಸಂಪೂರ್ಣವಾಗಿ ಹಸಿರಿನಿಂದ ನಳನಳಿಸುತ್ತಿತ್ತು .
ಮಳೆ ಅನ್ನುವುದು ಕಣ್ಣಿಗೆ ಹನಿಯಾಗಿ ಕಾಣಿಸಿದರೆ, ಕಿವಿಗೆ ಧ್ವನಿಯಾಗಿ ಕೇಳಿಸುತ್ತದೆ .
ಮಳೆಯೊಂದು ಬಾಲ್ಯದ ಆಶ್ಚರ್ಯ , ಯೌವನದ ಅನುಭವ , ಬದುಕಿನ ಸಂಭ್ರಮ ,ಜಲಚರಗಳ ಜೀವಜಲ .
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.