ಶ್ರೀ ರಾಮಜನ್ಮಭೂಮಿ ವಿವಾದ ತಾರ್ಕಿಕ ಅಂತ್ಯ ಕಂಡಿದೆ. ಮಂದಿರಕ್ಕೆ ಶಿಲಾನ್ಯಾಸ ಆಗಿ ಹೋಗಿದೆ. ಕಾಂಗ್ರೆಸ್ ಸೇರಿದಂತೆ ಯಾವುದೇ ಜಾತ್ಯತೀತ ಎಂದು ಕರೆಸಿಕೊಳ್ಳುತ್ತಿರುವ ಪಕ್ಷಗಳು ಕೂಡ ಶಿಲಾನ್ಯಾಸವನ್ನು ಸ್ವಾಗತಿಸಿವೆ. ಹೀಗಾಗಿ ಬಿಜೆಪಿಯ ಪಾಲಿಗೆ ಮುಂದೆ ಏನು ವಿಷಯ ?
ಭವಿಷ್ಯವನ್ನು ಬಗೆದು ನೋಡಲು ಯಾರಿಗೂ ಸಾಧ್ಯವಿಲ್ಲ. ಆದಾಗ್ಯೂ, ಒಂದಿಷ್ಟು ರೀತಿಯಲ್ಲಿ ಈಗಿನ ಪರಿಸ್ಥಿತಿಯೇ ಮುಂದುವರಿದರೆ ಏನಾಗಬಹುದು ಎಂದು ಯೋಚನೆ ಮಾಡಲು ಸಾಧ್ಯವಿದೆ.
ಬತ್ತಳಿಕೆ ಖಾಲಿ ?
ಲೋಕಸಭಾ ಚುನಾವಣೆಗೆ ಇನ್ನೂ ಬಹುತೇಕ ಮೂರು ವರ್ಷಗಳು ಬಾಕಿ ಇವೆ. ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸು, ಅಮಿತ್ ಶಾ ಅವರ ಕಾರ್ಯತಂತ್ರ ಇವೆರಡರಿಂದಲೇ ಪಕ್ಷ ಮತ್ತೊಮ್ಮೆ ಅಂದರೆ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲು ಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಆಡಳಿತ ವಿರೋಧಿ ಅಲೆ ಎಂಬುದು ಭಾರತದಲ್ಲಿ ಸಾಮಾನ್ಯ. ಆದರೆ, ಸಧ್ಯದ ಸ್ಥಿತಿಯಲ್ಲಿ ಪರ್ಯಾಯ ಸಮೂಹ ನಾಯಕ ಇಲ್ಲದಿರುವುದೇ ಬಿಜೆಪಿಯ ಪಾಲಿಗೆ ಬಹುದೊಡ್ಡ ಲಾಭ.
ಹಾಗೆಂದು ಅದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಈಗಾಗಲೇ ಜಮ್ಮು-ಕಾಶ್ಮೀರದ ಕುರಿತಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದೆ. ದೊಡ್ಡ ಮುಖಬೆಲೆಯ ನೋಟು ಅಮಾನ್ಯದ ಮೂಲಕ ಸುದ್ದಿ ಮಾಡಿದೆ. ತ್ರಿವಳಿ ತಲ್ಲಾಕ್ ಅದರ ಮತ್ತೊಂದು ಅಸ್ತ್ರ. ಆದರೆ ಮುಂದೇನು ?
ಇನ್ನೂ ಇದೆ
ಹಾಗೆಂದು ಬಿಜೆಪಿಯ ಬತ್ತಳಿಕೆ ಖಾಲಿಯಾಗಿದೆ ಎಂದು ಹೇಳುವ ಹಾಗಿಲ್ಲ. ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲೇ ರಾಮ ಮಂದಿರದ ಉದ್ಘಾಟನೆಯನ್ನು ಹಮ್ಮಿಕೊಳ್ಳುವ ಎಲ್ಲಾ ಸಾಧ್ಯತೆಯಿದೆ. ಈ ಮೂಲಕ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಯುಗ ಪುರುಷ ಎಂದು ಬಿಂಬಿಸಿ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇದರ ಜತೆಗೆ ಏಕರೂಪ ನಾಗರಿಕ ಸಂಹಿತೆ (ಕಾಮನ್ ಸಿವಿಲ್ ಕೋಡ್)ಯ ವಿಷಯ ಮುನ್ನಲೆಗೆ ತರುವ ಸಾಧ್ಯತೆಗಳಿವೆ.
ಈಗಂತೂ ಇಂಟರ್ ನೆಟ್ ಯುಗ. ಬಿಜೆಪಿಯಲ್ಲಿ ಅದರಲ್ಲಿ ಪರಿಣತರಾದ ಬಹುದೊಡ್ಡ ತಂಡವೇ ಇದೆ. ತಮ್ಮ ಭಾವನೆಗಳನ್ನು ಜನರ ಮನಸ್ಸಿಗೆ ತಾಕುವ ಹಾಗೆ ಹೇಳುವ ಪೋಸ್ಟ್ ಗಳನ್ನು ಅವರು ಹಾಕಿಯೇ ಹಾಕುತ್ತಾರೆ. ಆದರೆ ಕಾಂಗ್ರೆಸ್ ನಲ್ಲಿ ಅಂತಹ ಒಂದು ತಂಡ ಸದ್ಯದ ಮಟ್ಟಿಗೆ ಇಲ್ಲ. ಸೋನಿಯಾ ಗಾಂಧಿಯವರು ಕಾಂಗ್ರೆಸ್ ಪಕ್ಷಾಧ್ಯರಾಗಿ ಪಕ್ಷವನ್ನು ಮುನ್ನಡೆಸಿದ್ದಾರೆಯೇ ಹೊರತು ಸ್ವಯಂ ಆಗಿ ಅಲ್ಲ ಎಂದು ಹೇಳಿದರೆ ತಪ್ಪಿಲ್ಲ. ಜತೆಗೆ ಶತಮಾನದ ಹಳೆಯ ಪಕ್ಷದಲ್ಲಿ ಹೊಸ ಚಿಂತನೆಗಳೂ ಹುಟ್ಟುತ್ತಿಲ್ಲ. ಹಳೆಬರ ಆಡಂಬೋಲವಾಗಿರುವ ಕಾಂಗ್ರೆಸ್, ಚೇತನವಿಲ್ಲದೆ ಬಳಲುತ್ತಿದೆ. ಹೀಗಾಗಿ ಬಿಜೆಪಿಗೆ ಮತ್ತೊಂದು ಅವಕಾಶ ಬಂದರೂ ಬಂದಿತು ಎಂದೇ ಹೇಳಬೇಕಾಗುತ್ತದೆ. ಆದರೆ, ಮೂರು ವರ್ಷಗಳು ಅಂದರೆ ದೀರ್ಘಕಾಲ. ಆಗ ಏನು ಬೇಕಾದರೂ ಬದಲಾವಣೆಯಾಗಬಹುದು ಅಲ್ಲವೇ ?