ಕೊರೋನಾ ನಡುವೆಯೇ 74ನೇ ಸ್ವಾತಂತ್ರ್ಯ ದಿನದ ಸಂಭ್ರಮದ ಆಚರಣೆ ನಡೆದಿದೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಯಾವುದರಿಂದ ಸ್ವಾತಂತ್ರ್ಯಇನ್ನೂ ಸಿಕ್ಕಿಲ್ಲ ಎಂದು ನೀವು ಭಾವಿಸಿದ್ದೀರಿ ಎಂಬ ಪ್ರಶ್ನೆಯನ್ನು ನಾಡಿನ ಪ್ರಜ್ಞಾವಂತರ ಮುಂದೆ ಕನ್ನಡ ಪ್ರೆಸ್.ಕಾಮ್ ಇಟ್ಟಿತು. ನಮಗೆ ಸಿಕ್ಕ ಸ್ವಾರಸ್ಯಕರ ಉತ್ತರವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ.
ನಾಳೆ ಎನ್ನುವ ಯೋಜನೆಗಳಿಂದ ಮುಕ್ತಿಬೇಕಿದೆ
ನಂದಿನಿ ಹೆದ್ದುರ್ಗ,ಕವಯಿತ್ರಿ, ಲೇಖಕಿ ಮತ್ತು ಕೃಷಿ ಮಹಿಳೆ
ದೇಶ ಎಪ್ಪತ್ನಾಲ್ಕನೇ ಸ್ವತಂತ್ರ ದಿವಸ ವನ್ನು ಅತ್ಯಂತ ಸಂಭ್ರಮದಿಂದ ಆಚರಿಸ್ತಿದೆ.
ಕೆಂಪುಕೋಟೆಯ ಧ್ಜಜಾರೋಹಣವನ್ನು ಮನೆಮನೆಯಲ್ಲೂ ಕಣ್ಣು ತುಂಬಿಕೊಂಡು ಮಾನನೀಯ ಪ್ರಧಾನಮಂತ್ರಿಗಳು ದೇಶವನ್ನು ಉದ್ದೇಶಿಸಿ ಆಡಿದ ಮಾತು ನಮ್ಮೆಲ್ಲರಲ್ಲೂ ದೇಶಭಕ್ತಿಯ ಭಾವವನ್ನು ಇನ್ನಷ್ಟು ಮತ್ತಷ್ಟು ಉದ್ದೀಪಿಸಿದೆ.
ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಅದರದ್ದೇ ಆದ ಇತಿಮಿತಿಗಳಿರುತ್ತವೆ.ಅದೆಲ್ಲವನ್ನೂ ಮೀರುವತ್ತ ದೇಶ ದೃಢವಾದ ಹೆಜ್ಜೆ ಇಡುತ್ತಿರುವುದು “ಭಾರತ ಬೆಳಗುತ್ತಿದೆ” ಎನ್ನುವ ಮಾತನ್ನು ಮತ್ತೊಮ್ಮೆ ಮೊಳಗುವಂತೆ ಮಾಡುತ್ತಿದೆ.
ಇದೆಲ್ಲದರ ಜೊತೆಗೆ ಭ್ರಷ್ಟಾಚಾರ, ನಿರುದ್ಯೋಗ, ಧರ್ಮ ವರ್ಗಗಳ ನಡುವಿನ ಭಿನ್ನಮತ ,ಗಡಿ ವಿವಾದಗಳು, ಪ್ರಾಕೃತಿಕ ವಿಕೋಪ, ರಾಜಕೀಯ ಕುಟಿಲತೆಯಿಂದ ಪ್ರಾಣ_ ಆಸ್ತಿಪಾಸ್ತಿ ನಷ್ಟ ಇವೇ ಮುಂತಾದವುಗಳು ಕೈಮೀರಿ ಸಂಭವಿಸುತ್ತಲೆ ದೇಶದ ಬೆಳವಣಿಗೆಯನ್ನು ಹಿಂಜರಿಸುತ್ತದೆ.
ಇವುಗಳಲ್ಲಿ ಕೆಲವನ್ನಾದರೂ ಇಚ್ಚಾಶಕ್ತಿಯಿಂದ ಮೀರುವ ಎಲ್ಲ ಸಾಧ್ಯತೆಗಳೂ ಇದೆ. ಮುಖ್ಯ ಬೇಕಿರುವುದು ರಾಷ್ಟ್ರಭಕ್ತಿ. “ತಾಯ್ನಾಡಿನ ರಕ್ಷಣೆ ನಮ್ಮೆಲ್ಲರ ಹೊಣೆ “ಎನ್ನುವ ಮನಸ್ಥಿತಿ.ರಕ್ಷಣೆ ಎನ್ನುವುದಕ್ಕೆ ಯಾವುದೇ ವಿಶೇಷ ಅರ್ಥ ಬೇಕಿಲ್ಲ.
ದೇಶದ ಪ್ರತಿ ನಾಗರಿಕ ತನ್ನ ಕರ್ತವ್ಯವನ್ನು ಮನಃಪೂರ್ವಕವಾಗಿ ಮಾಡಿದರೆ ಒಳಗಿಂದ ದೇಶ ಬಲಿಷ್ಠವಾಗುತ್ತದೆ.ಆಗ ಮಾತ್ರ ಹೊರಗಿನ ಆಘಾತಗಳನ್ನು ಎದುರಿಸಲು ದೇಶ ಸಮರ್ಥವಾಗುತ್ತದೆ.ಸಶಕ್ತವಾಗುತ್ತದೆ.
ಬಹುತೇಕ ನಮ್ಮೆಲ್ಲರಿಗೂ ಈ ವಿಚಾರದಲ್ಲಿ ಪ್ರಜ್ಞೆ ಜಾಗ್ರತವಾಗಿದೆ ಎನ್ನುವ ಆಶಯ ನನ್ನದು. ಆದರೂ ಈ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ನಮ್ಮದೇ ವ್ಯಕ್ತಿತ್ವ ಕೆಲವೊಮ್ಮೆ ಅಡೆತಡೆಗಳನ್ನು ಒಡುತ್ತದೆ.
ನಾನೊಬ್ಬ ಗೃಹಿಣಿ.ತಾಯಿ.ಕೃಷಿ ಮಹಿಳೆ,ಒಂದಷ್ಟು ಸಂಘಸಂಸ್ಥೆಗಳಲ್ಲಿ ಸಕ್ರಿಯಳಾಗಿರುವವಳು.ಅದೆಲ್ಲಕ್ಕೂ ಮಿಗಿಲಾಗಿ ನಾನು ಕವಯಿತ್ರಿ, ಲೇಖಕಿ.ಹೀಗಿದ್ದಾಗ ನನ್ನೊಳಗೆ ಸದಾ ಒಂದು ಎಚ್ಚರದ ನಡೆ ಇರಲೇ ಬೇಕಾಗುತ್ತದೆ.
ಅದರಲ್ಲೂ ಅಕ್ಷರದ ಸಖ್ಯ ಬೆಳೆಸಿಕೊಂಡವರಿಗೆ ಘಟನೆಗಳನ್ನು ಹೊರಗಿನಿಂದ ಗಮನಿಸಬೇಕಾದ ಅನಿವಾರ್ಯತೆ ಅವಶ್ಯಕತೆ ಎರಡೂ ಅಗತ್ಯವಿದೆ.
ನನ್ನ ಮಟ್ಟಿಗೆ ನನ್ನ ಮೊದಲ ಬಲಹೀನತೆ ಭಾವನೆಗಳನ್ನು ಅತಿಯಾಗಿ ಬದುಕುವದು.
ಈ ನನ್ನ ಬಗೆಯಿಂದ ಮುಕ್ತಿ ಬೇಕು ಎನಿಸುತ್ತದೆ. ಯಾವುದೇ ಸಮಯ ಸಂದರ್ಭ,ಘಟನೆ ,ವ್ಯಕ್ತಿ,ವಸ್ತು, ನೆನಪುಗಳೊಂದಿಗೆ ವಿಪರೀತ ಭಾವನಾತ್ಮಕವಾಗಿ ವರ್ತಿಸುವುದು ನನ್ನ ವ್ಯಕ್ತಿತ್ವ.
ಈ ಬಗೆಯಿಂದಾಗಿ ಬಹಳಷ್ಟು ಬಾರಿ ಮುಕ್ತ ನಿರ್ಧಾರ ತೆಗೆದು ಕೊಳ್ಳಲು,ಧೃಡ ಮನಸ್ಸಿನಿಂದ ಮುಂದಡಿ ಇಡಲು ತಡೆಯಾಗುತ್ತದೆ.
ಅಪನಂಬಿಕೆ ನನ್ನ ಆತ್ಮವಿಶ್ವಾಸದ ಎದಿರು ಮೇಲುಗೈ ಸಾಧಿಸದಂತೆ ನನ್ನನ್ನು ನಾನು ಮರುರೂಪಿಸಿಕೊಳ್ಳುತ್ತಲೇ ಇರಬೇಕಾಗಿದೆ.
ಜೊತೆಗೆ ನನ್ನ “ನಾಳೆ ಮಾಡುವ” ಯೋಜನೆಗಳಿಂದ ಮುಕ್ತಿಬೇಕಿದೆ.
ಅಲಸಿತನ ಮೈಯನ್ನೂ ಮನಸ್ಸನ್ನೂ ಹೊಕ್ಕು ಅಧಿಪತ್ಯ ಸಾಧಿಸುವುದನ್ನು ಮೀರಬೇಕಿದೆ.
ಮೂಲದಿಂದ ಸದಾ ಚಟುವಟಿಕೆಯಿಂದಿರುವ ನನ್ನ ಮನಸ್ಸು ಕೆಲವೊಮ್ಮೆ ಈ ಯಾವುದೋ ಮೋಹದೊಳಗೆ ಬಂಧಿಯಾಗಿ ದಿನಗಟ್ಟಲೇ ಸಮಯ ಕೊಲ್ಲುತ್ತದೆ. ಮುಖ್ಯ ಈ ಅಲಸಿತನದಿಂದ ನನಗೆ ಮುಕ್ತಿ ಬೇಕಿದೆ.
ಪಿತೃ ಸಂಸ್ಕ್ರತಿ ಹೇರಿರುವ ಬಹಳಷ್ಟು ಅನಗತ್ಯ ವಿಷಯಗಳನ್ನು ಇನ್ನಿಲ್ಲದಂತೆ ಆವಾಹಿಸಿಕೊಂಡಿರುವ ನಮ್ಮ ಹೆಣ್ಣುಮಕ್ಕಳು ತಮ್ಮೊಳಗಿನ ಶಕ್ತಿಯನ್ನು ಸ್ವಯಂ ಅರಿಯುವ ಅವಶ್ಯಕತೆ ಇದೆ.
ಅರಿಯುವ ಯತ್ನದಲ್ಲೂ ಅದದೇ ಹಳೆಯ ವಿಚಾರಗಳನ್ನು ಪೊರೆಯುವ ಬಗೆಯಿಂದ ನಮಗೆ ಮುಕ್ತಿಬೇಕಿದೆ.
ಸ್ವತಂತ್ರ ದಿನದ ಈ ಶುಭ ಸಂದರ್ಭ ನಿಜ ಅರ್ಥದಲ್ಲಿ ಸಂಪನ್ನ ಗೊಳ್ಳಬೇಕೆಂದರೆ ನನ್ನ ಮಟ್ಟಿಗೆ ಈ ಮೂರು ವಿಚಾರಗಳಿಂದ ಮುಕ್ತಿ ಬೇಕಿದೆ.ಸ್ವತಂತ್ರ ಬೇಕಿದೆ.
ಮತ್ತು ಅದೆಲ್ಲವನ್ನೂ ಕೇವಲ ನಾನೇ ನನ್ನ ಆತ್ಮವಿಶ್ವಾಸದಿಂದ ರೂಢಿಸಿಕೊಳ್ಳಬೇಕಿದೆ.
ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
“ಭಾರತ ಮಾತೆ” ಎನ್ನುವಾಗ ಮೈಮನ ಸದಾ ಪುಳಕಗೊಳ್ಳಲಿ.
ಮಾತೃಪ್ರೇಮ ಸದಾ ಜಾಗೃತವಾಗಿರಲಿ.
ನಿಜವಾಗಿಯೂ ಬೇಕಿರೋದು ಮಾನಸಿಕ ಸ್ವಾತಂತ್ರ್ಯ
ಮಂಜುನಾಥ ಬೊಮ್ಮಘಟ್ಟ, ಎಂಜಿನಿಯರ್ ಮತ್ತು ಬರಹಗಾರ
ಇಂದು ಯಾರಿಗೂ ದೈಹಿಕ ಸ್ವಾತಂತ್ರದ ಕೊರತೆ ಇಲ್ಲ. ಒಂದು ಕಾಲದಲ್ಲಿ ನಮಗೆ ಅದು ತುಂಬಾ ಅವಶ್ಯವಾಗಿತ್ತು. ಈಗ ಯಾರನ್ನು ಯಾರೂ ದೈಹಿಕವಾಗಿ ಹಿಡಿದಿಡಲ್ಲ, ಅದು ಸಾಧ್ಯವೂ ಅಲ್ಲ,ಸಿಂಧುವೂ ಅಲ್ಲ ಬಿಡಿ.
ಇನ್ನು ಮುಂದುವರೆದ ನಾಗರಿಕತೆಯ ಅಂಗವಾಗಿರುವ ನಮಗೆಲ್ಲರಿಗೂ ನಿಜವಾಗಿಯೂ ಬೇಕಿರೋದು ಮಾನಸಿಕ ಸ್ವಾತಂತ್ರ್ಯ. ಅದೇ ನಿಜವಾದ ಆನಂದ ಕೂಡಾ. ಟ್ಯಾಗೋರರ where mind is free without worries? ಎನ್ನುವ ಕವನದ ಸಾಲುಗಳು ಮಾನಸಿಕ ಸ್ವಾತಂತ್ಯದ ಅನಂದವನ್ನ,ಆವಶ್ಯಕತೆಯನ್ನ ಹೇಳುತ್ತವೆ. ಭೌತಿಕ ಸ್ತರದ ಎಲ್ಲ ಅನಂದಗಳನ್ನು ಇಂದು ಮಾನವ,ಹಿಂದೆಂದಿಗಿಂತಲೂ ಹೆಚ್ಚು ಮತ್ತು ಅನಾಯಾಸವಾಗಿ ಅನುಭವಿಸುತ್ತಿದ್ದಾನೆ. ಇಂದಿನ ಸಾಮಾನ್ಯ ಮನುಷ್ಯ,ಹಿಂದಿನ ರಾಜರುಗಳು ಅನುಭವಿಸಿರಬಹುದಾದಂತಹ ಸುಖ ಅನುಭವಿಸುತ್ತಿದ್ದಾನೆ. ರಾಜನಾದರೊ ಕುದುರೆ ಮೇಲೆ,ರಥದ ಮೇಲೆ ಮೈಯೆಲ್ಲ ನೋವು ಮಾಡಿಕೊಂಡು ಹೋದದ್ದನ್ನೇ ಸುಖ ಎನ್ನುವುದಾದರೆ,ಇಂದು ರಾಜಹಂಸ ಬಸ್ಸುಗಳಲ್ಲಿ ಓಡಾಡುವವರನ್ನು ಏನನ್ನುತ್ತೀರಿ? ಆದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದರೆ ,ಇದು ಪರಮಾನಂದ ಅಲ್ಲ ಅನ್ನುವುದನ್ನು ಸಿದ್ಧಮಾಡುತ್ತದೆ. ಹಾಗಾಗಿ ನಿಜವಾದ ಆನಂದ ಇರುವುದು ಮನಸ್ಸಲ್ಲಿ. ಅದು ಯಾವಾಗಲೂ ನಮ್ಮಲ್ಲಿ ಹುಟ್ಟಿದಾಗಿನಿಂದ ಇರುವ default setting ಎಲ್ಲರಿಗೂ. ನಾವು ಅದನ್ನು ಉಪಯೋಗಿಸಿಕೊಳ್ಳಲು ಕಲಿತಿಲ್ಲ. ಇದಲ್ಲದೆ,ನಾನಾ ಮಾರ್ಗಗಳಲ್ಲಿ ಮನಸ್ಸಿನ ಆನಂದ ಹೊಂದಬಹುದು. ಅದರಲ್ಲಿ ಪ್ರಾಮಾಣಿಕತೆಯ ಜೀವನ ಮಾರ್ಗ ಒಂದು. ಇನ್ನು ವಿಧ,ವಿಧ ಸಾಧನೆಗಳಿಂದ ಈ ಮನಶ್ಯಾoತಿಯ ಉತ್ತುಂಗ ತಲುಪಬಹುದು,ಅದನ್ನು ಬ್ರಹ್ಮಾನಂದ ಅನ್ನುತ್ತಾರೆ ಅಂತ ನಮ್ಮ ಪೂರ್ವಜರು,ಮಾರ್ಗದರ್ಶಕರು ಸಾಧಿಸಿಕೊಂಡು ಹೇಳಿಹೋಗಿದ್ದಾರೆ.
ಜಾತಿ ಸಂಕೋಲೆಯಿಂದ ಮುಕ್ತಿ
ವಿ.ಜಯರಾಮ್, ಬಿಜೆಪಿ ಯುವ ನಾಯಕ
ನಾವು ಎಷ್ಟೇ ಪ್ರಗತಿ ಪರ, ಜಾತ್ಯತೀತ ಮನೋಧರ್ಮದ ಮಾತಾಡಿದರೂ ನಮ್ಮ ನಡತೆ ಮತ್ತು ನೆನಪುಗಳು ಪರಂಪರೆಯ ಜಡ ಧೋರಣೆಗಳಿಂದ ಪ್ರೇರಿತವಾಗಿವೆ. ಇದರಿಂದಲೇ ಜಾತಿ ಮತ್ತು ಬಣ್ಣ ಇವತ್ತಿಗೂ ನಮ್ಮ ಸಾಮಾಜಿಕ ಸ್ಥಾನಮಾನ ಅಳೆಯುವ ಬಹುಮುಖ್ಯ ಮಾನದಂಡವಾಗಿ ಬಳಕೆಯಾಗುತ್ತಿವೆ. ಅಂಬೇಡ್ಕರ್ ಅವರಂಥ ಮಹಾನೀಯರು ತಮ್ಮ ಜೀವನ ಪೂರ್ತಿ ಈ ತಾರತಮ್ಯಗಳನ್ನು ತೊಲಗಿಸಲು ಹೋರಾಡಿದರು. ಆದರೂ ಜಾತಿ ಅನಿಷ್ಠ ತೊಲಗಲಿಲ್ಲ. ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅದು ಇನ್ನಷ್ಟು ಕ್ಲಿಷ್ಟ ಸಂಕೋಲೆಯಾಗಿ ಮಾರ್ಪಡುತ್ತಲೇ ಸಾಗಿರುವುದು ವಿಪರ್ಯಾಸ. ಈ ದುಸ್ಥಿತಿಯ ಬಗ್ಗೆ ನನ್ನಲ್ಲಿ ಕಳವಳದ ಜತೆಗೆ ಕನಿಕರವೂ ಇದೆ.
ಜಾತಿಯ ಈ ಸಂಕೋಲೆ ಕೊನೆಗೊಳ್ಳದ ಹೊರತು ಸ್ವಾತಂತ್ರ್ಯದ ಪರಿಕಲ್ಪನೆಗೆ ಅರ್ಥ ಇಲ್ಲ. ಹಿಂದುತ್ವದ ಮಾತಿಗೂ ಬೆಲೆ ಇಲ್ಲ. ಹಾಗೆಂದ ಮಾತ್ರಕ್ಕೆ ನಾನು ನಿರಾಶಾವಾದಿಯಲ್ಲ. ಇಂದಲ್ಲ ನಾಳೆ ಅಂಬೇಡ್ಕರ್ ಕನಸಿನ ಮಾನವೀಯವಾದ ಸಮತಾ ಸಮಾಜ ನಿರ್ಮಾಣಗೊಳ್ಳುತ್ತದೆ ಎಂಬ ಆಶಾ ಭಾವನೆ ನನ್ನದು. ಈ ಹಿನ್ನೆಲೆಯಲ್ಲಿ ಜಾತಿ ಸಂಕೋಲೆಯಿಂದ ಮುಕ್ತಿ ದೊರಕುವುದು ಅಥವಾ ಮುಕ್ತಿ ಹೊಂದುವುದು ನನ್ನ ಪಾಲಿಗೆ ನಿಜವಾದ ಸ್ವಾತಂತ್ರ್ಯ.
ದಮನಗಳಿಂದ ಸ್ವಾತಂತ್ರ್ಯ ಬೇಕು
ಎಂ.ಪಿ.ಗುರುರಾಜ್. ಹಿರಿಯ ಸಾಹಿತಿ ಹಾಗೂ ರಂಗಕರ್ಮಿ
ಸ್ವಾತಂತ್ರ್ಯ ಬಂದ ನಂತರ ಸಂವಿಧಾನದಲ್ಲಿ ಭಾರತೀಯ ನಾಗರಿಕರಿಗೆ ಮೂಲಭೂತ ಹಕ್ಕು, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ನೀಡುವ ಮೂಲಕ ರಾಮರಾಜ್ಯದ ಕನಸು ಕಾಣಲಾಗಿದೆ. ಇಂದು ಅದರ ನೆರಳಲ್ಲಿಯೇ ಕಾಣದ ಕೈಗಳ ಕಪಿಮುಷ್ಟಿಯ ಬಿಗಿಹಿಡಿತದಿಂದ ಉಸಿರುಗಟ್ಟಿದ ವಾತಾವರಣ ಇದೆ. ಇವುಗಳಿಂದ ಸ್ವಾತಂತ್ರ್ಯ ಪಡೆಯಲು ಮುಕ್ತ ರಹದಾರಿ ಕಾಣದೆ ಗೊಂದಲದಲ್ಲಿದ್ದೇವೆ.
ಸರ್ವ ಧರ್ಮಿಯರು ತಮ್ಮ ಹಕ್ಕುಗಳನ್ನು ಪಡೆಯಲು ಸುಲಭ ಮಾರ್ಗಗಳಿರಬೇಕು. ಸಾಮಾನ್ಯರಿಗೆ ಹಕ್ಕುಗಳ ಬಗ್ಗೆ ಮಾತಾಡಲು ಭಯದ ವಾತಾವರಣ ಸೃಷ್ಟಿಸಿಲಾಗಿದೆ. ಪಟ್ಟ ಭದ್ರರ ಕರಿನೆರಳು ಸಮಾಜವನ್ನು ಆವರಿಸುತ್ತಿದೆ. ಅನ್ಯಾಯ, ಭ್ರಷ್ಟಚಾರ, ಅಕ್ರಮಗಳ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತದಂತೆ ವ್ಯವಸ್ಥೆ ಸೃಷ್ಟಯಾಗಿದೆ. ಸಮಾಜ ಘಾತುಕರೇ ಆಯಕಟ್ಟಿನ ಸ್ಥಾನಗಳಲ್ಲಿದ್ದು ದೇಶ ಲೂಟಿ ಮಾಡಿದರೂ ಸುಮ್ಮನಿರುವ ಸ್ಥಿತಿಯಲ್ಲಿದ್ದೇವೆ. ದಟ್ಟ, ನೇರ ಮಾತನಾಡುವು ಸ್ವಾತಂತ್ರ್ಯಬೇಕು. ಮಾತನಾಡುವವರಿಗೆ ಸೂಕ್ತ ರಕ್ಷಣೆ ಬೇಕು. ರಕ್ಷಣೆ ಕೊರತೆಯಿಂದ ಜೀವ ಕೈಯಲ್ಲಿಟ್ಟುಕೊಂಡು ಮಾತನಾಡಬೇಕಾಗಿದೆ.ಪತ್ರಿಕಾ ಸ್ವಾತಂತ್ರ್ಯವೂ ಈಗೀಗ ಕಡಿವಾಣಗೊಳ್ಳುವಂತೆ ತೋಚುತ್ತಿದೆ. ಸಾಕ್ಷ್ಯಧಾರಗಳ ಕೊರತೆಯಿಂದ ಸಮಾಜ ಘಾತಕರ ವಿರುದ್ಧ ಸೆಣಸಾಡುವ ಆತ್ಮವಿಶ್ವಾಸ ಹುಡುಗಿದೆ. ನಿರ್ಭೀಡೆಯಿಂದ ಹೋರಾಟ ನಡೆಸಿ ಸಮಾಜ ತಿದ್ದುವ ಸ್ವಾತಂತ್ರ್ಯ ಬೇಕಾಗಿದೆ. ಕಣ್ಣು ಮುಚ್ಚಿ ಬೆಕ್ಕು ಹಾಲು ಕುಡಿದರೂ ಯಾರು ನೋಡುವುದಿಲ್ಲ ಎನ್ನವಂತೆ ಪಟ್ಟಭದ್ರರು ಸಮಾಜಕ್ಕೆ ತಿಳಿದೇ ಭ್ರಷ್ಟಾಚಾರ ಮಾಡುತ್ತ ಸಾತ್ವಿಕ ಮಾತನಾಡುತ್ತಿದ್ದಾರೆ. ಇಂತಹ ಸೋಗಲಾಡಿತನ ತೊಲಗಬೇಕು ಶ್ರೀ ಸಾಮಾನ್ಯ ಸತ್ಯ ದರ್ಶನ ಮಾಡುವ ಸ್ವಾತಂತ್ರ್ಯ ಬೇಕು.
ಮೂಲಭೂತ ವಾದದಿಂದ ಸ್ವಾತಂತ್ರ್ಯ
ಪ್ರಕಾಶ್ ರಾವಂದೂರು, ಉದ್ಯಮಿ
ಯಾವುದೇ ಮೂಲಭೂತ ವಾದದಿಂದ ನಮಗೆ ಮುಕ್ತಿ ಸಿಗಬೇಕು. ಮೂಲಭೂತವಾದ ಹೆಚ್ಚಾದಾಗ ಮಾನವ ಹಕ್ಕುಗಳು ಕಡಿಮೆಯಾಗುತ್ತದೆ. ಇದು ಒಂದು ರೀತಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ. ಹೀಗಾಗಿ, ಯಾವುದೇ ಮೂಲಭೂತವಾಗಿರಲಿ ಅದರಿಂದ ಮುಕ್ತಿ ಸಿಗಬೇಕು. ಭ್ರಷ್ಟಾಚಾರ ಹೆಚ್ಚಾಗಿದೆ. ಈ ಭ್ರಷ್ಟತೆಯಿಂದ ಸ್ವಾತಂತ್ರ್ಯ ಸಿಗಬೇಕು.
ಭ್ರಷ್ಟತೆಯಿಂದ ಸ್ವಾತಂತ್ರ್ಯ ಸಿಗಬೇಕು
ಭಾರ್ಗವ್ ಎ.ವಿ., ಐಟಿ ಉದ್ಯೋಗಿ
ಜಾತ್ಯತೀತತೆ ಹೆಸರಿನಲ್ಲಿಜಾತಿ ಮಾಡುವುದು ಹೋಗಬೇಕು. ಜಾತಿ ಬಿಟ್ಟು ಪ್ರತಿಭೆಗೆ ಎಲ್ಲೆಡೆ ಅವಕಾಶ ಇರಬೇಕು. ಜಾತಿ ವ್ಯವಸ್ಥೆಯಿಂದ ನಮಗೆ ಸ್ವತಂತ್ರ ಸಿಗಬೇಕು.
ಸ್ವಾತಂತ್ರ್ರ್ಯ ಎಂಬ ಆಲೋಚನೆಯಿಂದಲೆ ಸ್ವಾತಂತ್ರ್ಯ
ಕಿರಣ್ ಮಾಡಾಳು, ಕಲಾವಿದ
ತಮ್ಮ ಭಾವನೆಯನ್ನು ಈ ಕೆಳಗಿನ ಚಿತ್ರದಿಂದ ಅಭಿವ್ಯಕ್ತಿಸಿರುವ ಕಲಾವಿದ ಕಿರಣ್ ಮಾಡಾಳು ಸ್ವಾತಂತ್ರ್ಯ ಎಂಬ ಆಲೋಚನೆಯಿಂದಲೇ ಮನಸ್ಸಿಗೆ ಸ್ವಾತಂತ್ರ್ಯ ಬೇಕು ಎನ್ನುತ್ತಾರೆ.
ಸ್ವತಂತ್ರ ಎನ್ನುವ ಕಲ್ಪನೆಯಿಂದಲೇ ಸ್ವತಂತ್ರ ಬೇಕು….
…
ಮತ್ತೊಮ್ಮೆ ಯೋಚಿಸುವಂತೆ ಮಾಡಿತು.
ನನ್ನ ಬರಹವನ್ನೂ ಈ ದೃಷಿಯಿಂದ ಮತ್ತೊಮ್ಮೆ ಓದಬೇಕಂತಲೂ…
ಕನ್ನಡಪ್ರೆಸ್.ಕಾಮ್ ಅವರ ಒಂದು ಸೃಜನಶೀಲ ಪ್ರಯತ್ನ. ಅವರವರ ಭಾವಕ್ಕೆ ತಕ್ಕಂತೆ ಸ್ವಾತಂತ್ರ್ಯ ಹೇಗಿರಬೇಕು ಎಂಬುದನ್ನು ಓದಲು ಸ್ವಾರಸ್ಯಕರವಾಗಿದೆ.
ನಿಜವಾಗಿ ಸ್ವತಂತ್ರ ಅಂದ್ರೆ ಏನು ಎನ್ನುವುದನ್ನು ತಿಳಿಸಿ ಹೇಳಿದಿರ. ಮಾನಸಿಕ ಸ್ವಾತಂತ್ರ ಬೇಕೇ ಬೇಕು. ಕೇವಲ ದೇಶಕ್ಕೆ ಸ್ವಾತಂತ್ರ ಬಂದ ಕೂಡಲೇ ಎಲ್ಲ ಸರಿಯಾಗಿ ದೇ ಎನ್ನುವುದು ಸರಿ ಅಲ್ಲ. ವಕ್ತಿ ಗತ ಸ್ವಾತಂತ್ರ ಎಲ್ಲದಕ್ಕೂ ಮುಖ್ಯ. ಅಭಿನಂದನೆಗಳು. Bm.
ನಾನೇ , ನನ್ನದೇ ,ನನ್ನ ವಿಚರಾಶಕ್ತಿಯೇ ಮೇಲು , ಎನ್ನುವ ಭಿಗುಮಾನ/ ಸ್ವಾಭಿಮಾನ” ದಿಂದ ಮುಕ್ತಿ ಬೇಕು ಎಂದರೆ ಚೆನ್ನಾಗಿರುತ್ತೆ. ಈ ಬರಹಗಾರರ ಅನಿಸಿಕೆಗಳಲ್ಲಿ ಅವರವರ ಮಾನಸಿಕ ಭಾವನೆಗಳು ಮತ್ತು ಕಹಿ ಅನುಭವಗಳೇ ವ್ಯಕ್ತವಾಗಿವೆ .ಒಬ್ಬ ನಿಜವಾದ ಬರಹಗಾರ ಪೆನ್ನಿನನಲ್ಲಿ ಇಂತಹ ಮಾನಸಿಕ ಸ್ವ ಅನಿಸಿಕೆಗಳು ಇರಬಾರದು ಎಂಬುದು ನನ್ನ ಅಭಿಪ್ರಾಯ.
ಕಿರಣ್ ಅವರ ಆ್ಯನಿಮೇಟಡ್ ಅಭಿವ್ಯಕ್ತಿ ಇಷ್ಟವಾಯಿತು.
ವಿಷಯ ಚೆನ್ನಾಗಿ ಬಂದಿದೆ.
ಹೌದು, ಎಲ್ಲಾ ಸ್ವಾತಂತ್ರ್ಯ ವಿದ್ದರೂ ಅದನ್ನು ವಿಮರ್ಶಿಸಿ, ಅರ್ಥೈಸಿ ಕೊಳ್ಳ ಲು ಹಾಗೂ ಆನಂದಿಸಲು ಮಾನಸಿಕ ಸ್ವಾತಂತ್ರ್ಯ ಬಹು ಮುಖ್ಯ, ಅದು ದೈವದತ್ತ /ಸ್ವಾಭಾವಿಕವಾಗಿ ಎಲ್ಲರಿಗೂ ಇರುವಂತಹದು, ಬಹಳ ಚೆನ್ನಾಗಿ ಅರ್ಥೈಸಿದ್ದೀರ.
ಧನ್ಯವಾದಗಳು.
ಧನಂಜಯ್ ಶ್ಯಾನಭೋಗ್, ಬೊಮ್ಮಘಟ್ಟ.