ಚಿಕ್ಕವರಾಗಿದ್ದಾಗ ಸ್ವಾತಂತ್ರ್ಯ ದಿನಾಚರಣೆ ಎಂದರೆ ಅದೇನೋ ಸಂಭ್ರಮ. ರಜಾದಿನ ಮಜಾ ರಮಾಡಬೇಕು ಎಂದಿನಿಸುತ್ತಲೇ ಇರಲಿಲ್ಲ. ನಮ್ಮ ಊರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಶಾಲೆಯಲ್ಲಿ ತಳಿರು, ತೋರಣ ಕಟ್ಟಿ, ಎನ್ ಸಿ ಸಿ, ಸ್ಕೌಟ್ಸ್ ವಿದ್ಯಾರ್ಥಿಗಳು ಧ್ವಜ ವಂದನೆಗೆ ಬೇಕಾದ ತಾಲೀಮಿನಲ್ಲಿ ನಿರತರಾಗಿದ್ದಾರೆ, ನಾನು ನನ್ನ ತಾಯಿಯ ಹತ್ತಿರ ಭಾಷಣ ಸ್ಪರ್ಧೆಗೆ ಬೇಕಾದ ವಿಷಯಗಳನ್ನು ಸಂಗ್ರಹಿಸಿ ಬರೆಸಿಕೊಂಡು ಬಾಯಿಪಾಠ ಮಾಡಿ ತಯಾರಾಗುತ್ತಿದ್ದೆ.
ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಮುಂಜಾನೆ ಇಸ್ತ್ರಿ ಮಾಡಿದ ಶಾಲಾ ಸಮವಸ್ತ್ರ ಧರಿಸಿ, ನಮ್ಮ ನಮ್ಮ ಶಾಲೆಗಳಲ್ಲಿ ಧ್ವಜ ಹಾರಿಸಿ, ನಂತರ ಡ್ರಮ್ಸ್, ತುತ್ತೂರಿ, ಲೇಜಿಮ್ಸ್ ಹಿಡಿದು, ಊರಿನಲ್ಲೆಲ್ಲಾ ಹಲವಾರು ಟ್ರ್ಯಾಕ್ಟರ್ ಗಳಲ್ಲಿ ವಿವಿಧ ಸ್ವತಂತ್ರ ಸೇನಾನಿಗಳ ವಿವಿಧ ವೇಷಭೂಷಣಗಳನ್ನು ಹಾಕಿಕೊಂಡ ಗೆಳೆಯರೊಡನೆ ಮೆರವಣಿಗೆ ಮುಖಾಂತರ ಸಾಗುತ್ತಿದ್ದೆವು. ಅನಂತರ ಕಾಲೇಜಿನ ದೊಡ್ಡ ಪ್ರಾಂಗಣದಲ್ಲಿ ಸೇರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಸಂಗಿತ ಮೇಸ್ಟ್ರು ಹೇಳಿ ಕೊಟ್ಟ ಪ್ರಾರ್ಥನಾ ಗೀತೆಯನ್ನು ಹಾಡುತ್ತಿದ್ದೆವು. ಬಂದ ಅತಿಥಿ ಗಳ ಭಾಷಣ ಕೇಳುವುದಕ್ಕಿಂತ ನನ್ನ ಹಾಗು ಸಹಪಾಠಿಗಳಲ್ಲಿ ಯಾರು ಚನ್ನಾಗಿ ವಿಷಯ ಪ್ರಸ್ತಾವನೆ ಮಾಡುತ್ತಾರೆ ಯಾರು ಸ್ಪರ್ಧೆಯಲ್ಲಿ ಗೆದ್ದು ಪದಕ ಪಡಿಯುತ್ತಾರೆ ಎನ್ನುವ ಕಾತುರದಲ್ಲಿ ಇರುತ್ತಿದ್ದೆವು. ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚುವುದು ನಂತರ ವಿವಿಧ ಶಾಲೆಯಲ್ಲಿ ಓದುವ ಗೆಳೆಯರೆಲ್ಲ ಒಂದೆಡೆ ಸೇರಿ ಗುಂಪು ಗುಂಪಾಗಿ ಆಟವಾಡುತ್ತಾ ಸಂಭ್ರಮದಿಂದ ಮನೆ ಸೇರುವ ಹೊತ್ತಿಗೆ ಮಧ್ಯಾಹ್ನ ಮೀರಿರುತ್ತಿತು. ಹೌದು, ಆ ದಿನಗಳೇ ಮೆಲಕು ಹಾಕುವುದೇ ವಿಶೇಷ.
ಕಾಲೇಜು ಓದಲು ಊರಿನಿಂದ ಬೆಂಗಳೂರು ಸೇರಿ, ಪದವಿ, ಸ್ನಾತಕೋತ್ತರ ಮುಗಿಸಿ ಐಟಿ ಕೆಲಸ ದಲ್ಲಿ ನಿರತರಾದಮೇಲೆ ಸ್ವಾತಂತ್ರ್ಯೋತ್ಸವದ ಅಭಿಮಾನಕ್ಕೆ ಕೊರತೆ ಇಲ್ಲದಿದ್ದರೂ, ಸಂಭ್ರಮ ಕಡಿಮೆಯಾಗಿದೆ ಎಂದೇ ಹೇಳಬಹುದು.
ಈಗೀಗ ಅನ್ನಿಸುವುದು, ದೇಶ ಸುರಕ್ಷಿತವಾಗಿ ಮುನ್ನೆಡೆಯುತ್ತಿದ್ದರೂ ನಮಗೆ ಹಲವಾರು ವಿಷಯಗಳಲ್ಲಿ ಇನ್ನು ಸ್ವತಂತ್ರ ಬೇಕು ಎಂದೆನಿಸುತ್ತಿದೆ. ಇತ್ತೀಚಿಗೆ ಐಟಿ ಕಂಪೆನಿಗಳಲ್ಲಿ ಸ್ವಾತಂತ್ರ್ಯೋತ್ಸವದ ಹಿಂದಿನ ದಿನ ಸಾಂಕೇತಿಕವಾಗಿ ನಮ್ಮ ಡೆಸ್ಕ್ ಗಳಲ್ಲಿ ಧ್ವಜ ತ್ರಿವರ್ಣ ರಂಗುಗಳಿಂದ ಅಲಂಕರಿಸಿ happy independence day ಎಂದು ವಾಟ್ಸ್ ಪ್ ಸ್ಟೇಟಸ್ ಹಾಕಿ, ಕೈಕುಲುಕಿದರೂ ಒಂದು ದಿನ ರಜಾ ಸಿಗುವುದರಿಂದ ದಿನಕ್ಕೆ ಹನ್ನೆರೆಡು ಗಂಟೆ ಮಾಡುವ ಕೆಲಸದಿಂದ ಒಂದು ದಿನ ಮಟ್ಟಿಗಾದರೂ ಯಾವುದೇ ಮೀಟಿಂಗ್ಸ್, ಕಾನ್ಫೆರನ್ಸೆ ಕಾಲ್ ಗಳು ಇಲ್ಲದೆ ಇರುವ ಸ್ವತಂತ್ರಸಿಗುತ್ತದೆ ಎಂದು ಕಾಯುವ ಪ್ರಸಂಗ ಬಂದಿದೆ.
ಅದರಂತೆ ದಿನ ಬೆಂಗಳೂರಿನ ಅದೇ ವಾಯು ಮಾಲಿನ್ಯದಿಂದ, ಟ್ರಾಫಿಕ್ ನಿಂದ ಬಿಡುಗಡೆ ಗೊಂಡು ಯಾವುದಾದರೂ ಹಸಿರು ತುಂಬಿದ ಬೆಟ್ಟ ಗುಡ್ಡ ಸುತ್ತುವ ಸ್ವತಂತ್ರ ಮನಸ್ಸಿಗೆ ಬೇಕನಿಸುತ್ತದೆ. ಬರುವ ಸಂಬಳದ ಅರ್ಧ ಭಾಗ ಇಎಂಐ ಕಟ್ಟುವುದರಿಂದ ಆದಷ್ಟು ಬೇಗ ಅದರಿಂದ ಸ್ವತಂತ್ರ ಬೇಕೆನಿಸುತ್ತದೆ.
ಅದರಂತೆ ಈ ಸಾರಿ ಸ್ವತಂತ್ರ ಇನ್ನು ವಿಚಿತ್ರ, ಕರೋನ ಹೊರಗೆ ಕುಣಿಯುತ್ತಿದೆ ಮನೆಯಲ್ಲಿಂದಲೇ ಕೆಲಸ ಮಾಡುತ್ತಾ ಮಾಡುತ್ತಾ ಹೊರ ಪ್ರಪಂಚದ ಬೆಳಕು ಸರಿಯಾಗಿ ನೋಡದಂತೆ ನಮಗೆ ಗೊತ್ತಿಲ್ಲದಂತೆ ನಾವು ಬಂಧಿಯಾಗಿದ್ದೇವೆ. ಇದರಿಂದ ಬಿಡುಗಡೆ ಹೊಂದಿ ಮುಂಚಿನಂತೆ ಆರಾಮಾಗಿ ಸುತ್ತಾಡುವ ಸ್ವತಂತ್ರ ಬೇಕಾಗಿದೆ. ಮಕ್ಕಳಿಗೆ ಮನೆಬಿಟ್ಟು ಪಾರ್ಕ್ ಗಳಲ್ಲಿ ಆಟವಾಡುವ ಸ್ವಾತಂತ್ರ್ಯ ಬೇಕಾಗಿದೆ. ಮನೆಯಲ್ಲಿ ಇರುವ ಹೆಂಗಸರಿಗೆ ಮಕ್ಕಳು ಯಾವಾಗ ಶಾಲೆಗೆ ಹೋಗುತ್ತಾರೆ, ಗಂಡಸರು ಯಾವಾಗಾದರೂ ಆಫೀಸ್ ಹೋಗುತ್ತಾರೋ ಕಾಫಿ ತಿಂಡಿ ಮಾಡುವದರಿಂದ ಯಾವಾಗ ಸ್ವತಂತ್ರ ಸಿಗುತ್ತದೆಯೋ ಎಂದು ಕಾಯುತ್ತಿದ್ದಾರೆ.
ಏನೆ ಆಗಲಿ ಈಬಾರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸೇನಾನಿಗಳನ್ನ ನೆನೆಯುತ್ತಾ ನಮ್ಮ ನಮ್ಮ ಮನೆಗಳ ಮಹಡಿ ಮೇಲೆ ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರ ಗೀತೆ ಹಾಡಿ, ಸಿಹಿ ತಿಂದು ಸ್ವಾತಂತ್ರ್ಯೋತ್ಸವದ ಆಚರಿಸೋಣ. ಮುಂದಿನ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಎಲ್ಲರೂ ಒಟ್ಟಿಗೆ ಕೂಡಿ ಆಚರಿಸುವಂತಾಗಲಿ ಒಟ್ಟಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನಲಿಯುವಂತಾಗಲಿ ಎಂದು ಆಶಿಸೋಣ.
ಪ್ರಭಂಜನ್ ಅವರು ಬರೆದಿರುವುದು ಅಕ್ಷರ ಸಹ ಸತ್ಯ. ನಾವು ಚಿಕ್ಕವರಿದ್ದಾಗ ಅದೇನು ಸಡಗರ, ಸಂಭ್ರಮ . ಲೇಖನದಲ್ಲಿ ಬರೆದಿರುವುದನ್ನೆಲ್ಲಾ ನಾವು ಆಚರಿಸಿದ್ದೇವೆ. ಈಗಿನ ಶಾಲೆಗಳಲ್ಲಿ, ಮಕ್ಕಳಲ್ಲಿ ಆ ಸಂಭ್ರಮವಿಲ್ಲ ಬಿಡಿ. ರಜೆ ಸಿಕ್ಕರೆ ಸಾಕು ಹೊದ್ದು ಮಲಗುವ ಯೋಚನೆ .ತುಂಬಾ ಬೇಸರದ ಸಂಗತಿ .ಬರುವ ವರುಷ ಒಳ್ಳೆಯ ಬದಲಾವಣೆ ಆಗಲಿ ಎಂದು ಆಶಿಸುತ್ತೇನೆ.