17.5 C
Karnataka
Sunday, November 24, 2024

    ಡೇ ಟ್ರೇಡಿಂಗ್‌ ಸುರಕ್ಷಿತವಾಗಿ ನಡೆಸುವುದು ಹೇಗೆ?

    Must read


    ಷೇರುಪೇಟೆಯ ಹೂಡಿಕೆಯ ಮೂಲ ಉದ್ದೇಶ ಹೂಡಿಕೆ ಮಾಡಿದ ಕಂಪನಿಗಳು ಲಾಭಗಳಿಸಿ ಹಂಚುವ ಕಾರ್ಪೊರೇಟ್‌ ಫಲಗಳನ್ನು ಪಡೆಯುವುದಾಗಿತ್ತು.  ಆದರೆ ಬದಲಾದ ವಿಶ್ಲೇಷಣೆಗಳ ವಿಧದ ಪ್ರಭಾವ, ಕಾಲಾನುಕಾಲಕ್ಕೆ ಹೊರಬರುವ ಕಂಪನಿಗಳ ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗಳ ಸುದ್ಧಿ ಸಮಾಚಾರಗಳ ಕಾರಣ ಕಾರ್ಪೊರೇಟ್‌ ಫಲಗಳಿಗಿಂತ ಷೇರಿನ ಬೆಲೆಗಳ ವೃದ್ಧಿಯತ್ತ ಗಮನಹರಿಸುವಂತಾಗಿದೆ.  ಈ ಬದಲಾವಣೆಯು ಕಂಪನಿಗಳ ಬಗ್ಗೆ ಇರಬಹುದಾದ  Loylty ಯನ್ನು ಹೊರಹಾಕಿ, ಅದರ ಬದಲು ದೊರೆಯಬಹುದಾದ  Royalty ಬಗ್ಗೆ ಚಿಂತಿಸುವಂತೆ ಮಾಡಿದೆ.

    ಷೇರುಪೇಟೆ  ವಿವಿಧ ಸೂಚ್ಯಂಕಗಳು ಪ್ರದರ್ಶಿಸುತ್ತಿರುವ  ಏರಿಕೆಗಳ ಆಧಾರದ ಮೇಲೆ   ಷೇರುಪೇಟೆಗಳು ಮೇಲ್ನೋಟಕ್ಕೆ ಭಾರಿ ಹಣ ಗಳಿಸಲು ಸಾಧ್ಯವಿರುವ ತಾಣ ಎಂಬ ಕಲ್ಪನೆ ಹಲವರಲ್ಲಿ ಮೂಡಿರಲು ಸಾಧ್ಯ.  ಆದರೆ ವಾಸ್ತವ ಸಂಗತಿಯೇ ಬೇರೆ.  ಇಲ್ಲಿ ಹಣ ಸಂಪಾದನೆ ಅತಿ ಸುಲಭ ಎನಿಸಿಕೊಳ್ಳಬೇಕಾದರೆ ಅದಕ್ಕೆ ತಕ್ಕ ಸಿದ್ಧತೆಗಳ ಅಗತ್ಯ. ಡೇ ಟ್ರೇಡಿಂಗ್‌ ನಲ್ಲಿ ವ್ಯವಹರಿಸಲು ಬಹು ಜನರಿಗೆ ಹೆಚ್ಚಿನ ಆಸಕ್ತಿ. ಅದರಂತೆ ಹೆಚ್ಚಿನವರು ಹಣ ಕಳೆದುಕೊಂಡಿರುವುದೂ ಇದೇ ಕಾರಣ.

    ಹೂಡಿಕೆಯ ಹಣ ಸುರಕ್ಷಿತವಾಗಿರಸಬೇಕಾದಲ್ಲಿ ಡೇ ಟ್ರೇಡಿಂಗ್‌ ನಲ್ಲಿ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
    ಡೇ ಟ್ರೇಡಿಂಗ್‌ ನಲ್ಲಿ ಈಗ ಹೆಚ್ಚಿನವರು ತಮ್ಮ ಮಿತಿ ಮೀರಿದ ಸಂಖ್ಯಾ ಗಾತ್ರದ ಷೇರುಗಳನ್ನು ಕೊಳ್ಳುವುದು ಮಾರಾಟಮಾಡುವುದು ಸಾಮಾನ್ಯ. ಹೇಗಿದ್ದರೂ ದಿನದ ಅಂತ್ಯದಲ್ಲಿ ವಹಿವಾಟು ಚುಕ್ತಾ ಆಗುವುದರಿಂದ ಎಷ್ಟು ಲಾಭ ಬಂದರೂ ಸರಿ ಎಂದುಕೊಳ್ಳುವರು.  ಅದರ ಹಿಂದೆ ಅಡಗಿರುವ ಹಾನಿಯಾಗಬಹುದಾದ ಅಂಶವನ್ನು ಗಮನಿಸದೆ ವಹಿವಾಟಿಗೆ ಮುಂದಾಗುವರು,  ಈ ಪ್ರಕ್ರಿಯೆಯಲ್ಲಿ ದಿನದ ಮಧ್ಯೆ ಲಭಿಸುವ ಅವಕಾಶಗಳನ್ನುಉಪಯೋಗಿಸಿಕೊಳ್ಳದೆ,  ವಹಿವಾಟು ಚುಕ್ತಾಮಾಡಲು ಕೊನೆಗಳಿಗೆಯವರೆಗೂ ಕಾಯುವರು, ಕಳೆದುಕೊಳ್ಳುವರು.  

    ಸುರಕ್ಷತೆಗೆ ಯಾವ ಕ್ರಮ ಸರಿ

    ಡೇ ಟ್ರೇಡಿಂಗ್‌ ನಲ್ಲಿ ಸ್ವಲ್ಪಮಟ್ಟಿನ ಬದಲಾವಣೆಗಳಲ್ಲಿ ಅಳವಡಿಸಿಕೊಂಡಲ್ಲಿ ಸುರಕ್ಷತೆಯ ಜಾಲ ನಿರ್ಮಿಸಿಕೊಳ್ಳಬಹುದಾಗಿದೆ.  ಡೇ ಟ್ರೇಡಿಂಗ್‌ ನ ಉದ್ದೇಶದಿಂದ ಖರೀದಿಸುವಾಗ,  ಖರೀದಿಸಿದ ಬೆಲೆಗಿಂತ ಷೇರಿನ ಬೆಲೆ ಇಳಿಕೆ ಕಂಡಲ್ಲಿ ಖರೀದಿಸಿದ ಷೇರುಗಳನ್ನು ಹಣ ಪಾವತಿಸುವುದರೊಂದಿಗೆ ಡೆಲಿವರಿ ತೆಗೆದುಕೊಳ್ಳುವ ಮಟ್ಟಕ್ಕೆ ಸೀಮಿತಗೊಳಿಸಿದಲ್ಲಿ ಬಂಡವಾಳ ಕರಗಿಸುವ ಸಾಧ್ಯತೆ ಮೊಟಕುಗೊಳಿಸಿದಂತಾಗುತ್ತದೆ.   ಹೀಗೆ ಡೆಲಿವರಿ ತೆಗೆದುಕೊಂಡ ಷೇರುಗಳು ಉತ್ತಮ ಗುಣಮಟ್ಟದ್ದಾಗಿರಬೇಕು.  ಈ ಷೇರುಗಳ ಬೆಲೆ ಏರಿಕೆ ಕಂಡಾಗ ಮಾರಾಟ ಮಾಡಿ ಬಂಡವಾಳ ಉಳಿಸಿಕೊಂಡು ಲಾಭಗಳಿಸುವುದು ಸಾಧ್ಯ.ಅಂದರೆ ಗಜಗಾತ್ರದ  ಸಂಖ್ಯೆಯ ಷೇರುಗಳಲ್ಲಿ ವಹಿವಾಟು ನಿರ್ವಹಿಸುವ ಬದಲು, ತಮ್ಮ ಬಂಡವಾಳದ ಸಾಮರ್ಥ್ಯಕ್ಕನುಗಣವಾಗಿ,  ಷೇರುಗಳನ್ನು ಖರೀದಿಸುವುದು ಸೂಕ್ತ,  ಕೇವಲ ಬ್ರೋಕರೇಜ್‌ ಉಳಿಸುವ ಉದ್ದೇಶದಿಂದ ಬಂಡವಾಳ ಕರಗಿಸುವ ಕೃತ್ಯಕ್ಕೆ ಕೈ ಹಾಕುವುದು ಸರಿಯೆನಿಸಲಾರದು.
    ಉದಾಹರಣೆಗೆಈ ಕೆಳಗಿನ ಕಂಪನಿಗಳನ್ನು ಗಮನಿಸಿರಿ:

    ಲುಪಿನ್‌ ಲಿಮಿಟೆಡ್:
    ಶುಕ್ರವಾರದಂದು ಲುಪಿನ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ದಿನದ ಆರಂಭದಲ್ಲಿ ರೂ.932 ರ ಸಮೀಪದಲ್ಲಿದ್ದು  ನಂತರ ಏಕಮುಖವಾಗಿ ಏರಿಕೆ ಕಂಡು ರೂ.1,020 ರವರೆಗೂ ಜಿಗಿಯಿತು.  ನಂತರ ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್‌ ಕುಸಿತದೊಂದಿಗೆ ಈ ಕಂಪನಿಯ ಷೇರಿನ ಬೆಲೆಯು ಗರಿಷ್ಠದಿಂದ ಕುಸಿದು ರೂ.985 ರವರೆಗೂ ಕುಸಿದು ಮತ್ತೆ ಕ್ಷಿಪ್ರಗತಿಯಲ್ಲಿ ಏರಿಕೆಯಿಂದ ರೂ.1,023 ಕ್ಕೆ ಏರಿಕೆ ಕಂಡಿತು.  ಈ ಏರಿಳಿತಗಳ ಜೋಕಾಲಿಯಲ್ಲಿ ಜೀಕುತ್ತಿದ್ದ ಈ ಷೇರಿನ ಬೆಲೆ ಡೇ ಟ್ರೇಡಿಂಗ್‌ ಗೂ ಉತ್ತಮ ಅವಕಾಶ ಒದಗಿಸಿತು.

    ಟಾಟಾ ಸ್ಟೀಲ್‌ ಲಿಮಿಟೆಡ್:

    ಶುಕ್ರವಾರ, 14 ರಂದು ಈ ಕಂಪನಿಯ ಷೇರಿನ ಬೆಲೆ ದಿನದ ಆರಂಭದಲ್ಲಿ ರೂ.409 ರ ಸಮೀಪದಿಂದ ಪುಟಿದೆದ್ದು ರೂ.430 ರವರೆಗೂ ಜಿಗಿತ ಕಂಡಿತು.   ನಂತರ ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್‌ ನ ಇಳಿಕೆಯೊಂದಿಗೆ  ಷೇರಿನ ಬೆಲೆ ರೂ.412 ರ ವರೆಗೂ ಜಾರಿ ರೂ.418 ರ ಸಮೀಪ ಕೊನೆಗೊಂಡಿತು.   ಖರೀದಿಸಿದ ಷೇರಿನ ಬೆಲೆ ದಿನದ  ಮಧ್ಯೆಯೇ ಏರಿಕೆ ಕಂಡಲ್ಲಿ ಲಾಭ ನಗದೀಕರಿಸಿಕೊಳ್ಳಬೇಕು, ಇಲ್ಲವಾದಲ್ಲಿ ಅವಕಾಶ ವಂಚಿತರಾಗಬಹುದು ಎಂಬುದನ್ನು ಈ ಉದಾಹರಣೆಯುಎತ್ತಿಹಿಡಿದಿದೆ.

    ಲಾರ್ಸನ್ ಅಂಡ್‌ ಟೋಬ್ರೊ ಲಿಮಿಟೆಡ್:
    14 ರಂದು  ಈ ಕಂಪನಿ ಷೇರಿನ ಬೆಲೆಯು ರೂ.998 ರ ಸಮೀಪದಿಂದ ರೂ.1,017ರವರೆಗೂ ಏರಿಕೆ ಕಂಡು ರೂ.994 ಕ್ಕೆ ಇಳಿದು, ನಂತರ ರೂ.1,014 ಕ್ಕೆ ಜಿಗಿದು,  ದಿನದ  ಅಂತಿಮ ಗಂಟೆಯಲ್ಲಿ ರೂ.977 ಕ್ಕೆ ಜಾರಿ ರೂ.982 ರ ಸಮೀಪ ಕೊನೆಗೊಂಡಿದೆ. 

     ಒಂದೇ ದಿನ ಈ ರೀತಿಯ ಭರ್ಜರಿ ಏರಿಳಿತ ಪ್ರದರ್ಶಿಸುವ ಈಗಿನ ಪೇಟೆಯಲ್ಲಿ ಕಡಿಮೆ ಸಂಖ್ಯೆಯ ಷೇರುಗಳಲ್ಲಿ, ಅಪಾಯದ ಅರಿವಿನಿಂದ, ಡೇ ಟ್ರೇಡಿಂಗ್‌ ನಡಸಬಹುದು.  ದಿನದ ಮಧ್ಯೆಯೇ ಲಾಭಗಳಿಕೆಯ ಅವಕಾಶವಿದ್ದಲ್ಲಿ ನಗದೀಕರಿಸಿಕೊಂಡು ಸುರಕ್ಷಿತವಾಗಿರಬಹುದು.  ಇಲ್ಲದಿದ್ದಲ್ಲಿ ಡೆಲಿವರಿ ತೆಗೆದುಕೊಳ್ಳುವ ಹವ್ಯಾಸದಲ್ಲಿದ್ದರೆ ಉತ್ತಮ.  ಕಾರಣ ಅಗ್ರಮಾನ್ಯ ಕಂಪನಿಗಳೂ ಸಹ ಹೆಚ್ಚಿನ ಏರಿಳಿತಗಳಿಂದ ಲಾಭಗಳಿಕೆಯ ಅವಕಾಶಗಳನ್ನು ಸೃಷ್ಠಿಸಿಕೊಡುತ್ತವೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!