21.4 C
Karnataka
Thursday, November 21, 2024

    ನಿವೃತ್ತಿ ಜೀವನಕ್ಕೆ ಹೂಡಿಕೆ : ಯಾವುದಕ್ಕೂ ಇರಲಿ ಮತ್ತೊಂದು ಪ್ಲಾನ್

    Must read

    ಕಥೆ ಹೇಳುವುದು , ಕೇಳುವುದು ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಕಥೆಗಳನ್ನು ಜಗತ್ತಿಗೆ ಹೇಳುವುದೆಂದರೆ ಇನ್ನೂ ಖುಷಿ. ಈ ಕಥೆಗಳಲ್ಲಿ ನಮ್ಮ ಸಾಧನೆ   ಅಡಗಿದೆ ಅಂದರಂತೂ ಅದನ್ನು ವರ್ಣಿಸಿದ್ದೇ ವರ್ಣಿಸಿದ್ದು. ಕೇಳುವವರಿದ್ದರೆ ಹೇಳುವವರಿಗೇನು ಅಲ್ಲವೆ? ಅದೇ ರೀತಿ  ಹಣಕಾಸು ವಿಷಯಕ್ಕೆ ಬಂದರೆ ಹೇಳುವವರ ಉತ್ಸಾಹ ಇನ್ನಷ್ಚು ಹೆಚ್ಚುತ್ತದೆ.  ತಮ್ಮ ಬೆನ್ನನ್ನು ತಾವೇ ತಟ್ಟಿ ಕೊಳ್ಳುತ್ತ ತಮ್ಮ ಹೂಡಿಕೆಯ ಕಥೆಗಳನ್ನು ಹೇಳಿದ್ದೇ ಹೇಳಿದ್ದು. ಕೇಳಿದವರು ಅಬ್ಬಾ ಇವರೆಷ್ಟು ಬುದ್ಧಿವಂತರು ಅಂತ ಅಂದು ಕೊಂಡಿದ್ದೇ ಅಂದು ಕೊಂಡಿದ್ದು.

    ನಿಮಗೂ ಇಂಥದ್ದು  ಅನುಭವಕ್ಕೆ ಬಂದೇ ಇರುತ್ತದೆ. ಅವತ್ತು  ಜೆಪಿ ನಗರ ಏನೂ ಇರಲಿಲ್ಲ ಕಂಣ್ರೀ… ನಾನು ಅಲ್ಲಿ ಸೈಟ್ ತಗೊಂಡಾಗ ನನ್ನ ಕಲೀಗ್ಸ್ ಎಲ್ಲಾ ಆ ಕಾಡಲ್ಲಿ ಯಾಕಪ್ಪ ಸೈಟು ತಗೊತೀಯ  ಅಂದ್ರು. ಅದೇನೋ ಗೊತ್ತಿಲ್ಲ ಅವತ್ತು ಬರೇ ನಲವತ್ತು ಸಾವಿರ . 60 × 40 ತಗೊಂಡು ಬಿಟ್ಟೆ . ಬಿಡಿಎ ನೂ ಅಲ್ಲ. ಇವತ್ತು ನೋಡಿ.. ಕೋಟಿ.. ಕೋಟಿ ರೀ ಅಂತ ಈಗಷ್ಟೆ ರಿಟೈರ್ ಆಗಿರುವ ದಿವಾಕರ ಹೇಳುತ್ತಿದ್ದರೆ ಪಕ್ಕದಲ್ಲಿದ್ದ ನಾಗೇಶ, ಮಂಜುನಾಥ, ಸುರೇಶ ಅವರುಗಳು ದಿವಾಕರನ  ದೂರದೃಷ್ಟಿಯನ್ನು ಹೊಗಳಿದ್ದೆ ಹೊಗಳಿದ್ದು.

    ಅದೇ ರೀತಿ ಪಕ್ಕದ್ಮನೆ ಕಮಲಮ್ಮ ತಮ್ಮ ಮದುವೆ ಆದ    ಕೂಡಲೆ ಮಲ್ಲೇಶ್ವರಂ ನ ಎಂಟನೇ ಕ್ರಾಸ್ ನ ಚಿನ್ನದ ಅಂಗಡಿಯಲ್ಲಿ  ಚೀಟಿ  ಹಾಕಿದ್ದು ಅದರಿಂದ ವರ್ಷಕ್ಕೊಂದರಂತೆ ಬಂಗಾರ ಕೊಂಡದ್ದನ್ನು ಹೇಳುತ್ತಿದ್ದರೆ… ಕಮಲಮ್ಮನ ಬುದ್ಧಿ ನಮಗೆ ಯಾಕೆ ಬರಲಿಲ್ಲ ಅಂತ ನೆರೆದ ಮಹಿಳೆಯರು ಮರುಗಿದ್ದೇ ಮರುಗಿದ್ದು. ಅವತ್ತು ಚಿನ್ನ ತೊಗೊಂಡಿದ್ದಕ್ಕೆ ಆಯಿತು. ಈಗಿನ ಬೆಲೆಯಲ್ಲಿ ಬಂಗಾರ ಕೊಳ್ಳೋಕೆ ಆಗುತ್ತಾ ಅಂತ ಕಮಲಮ್ಮ ತಮ್ಮ ಬುದ್ಧಿವಂತಿಕೆಗೆ ತಾವೇ ಬೀಗಿದ್ದೇ ಬೀಗಿದ್ದು.

    ಅದೇ ರೀತಿ ಸ್ಟಾಕ್ ಗಳು. ಅವತ್ತು ಇನ್ಫೋಸಿಸ್ ಶೇರು ಕೇಳೋರೇ ಇರಲಿಲ್ಲ. ನನಗೆ ಗೊತ್ತಿತ್ತು ಲಾಂಗ್ ಟೈಮ್ ಗೆ ಇರಲಿ ಅಂತ ಐವತ್ತು ಷೇರು ಹಾಕಿದೆ. ಇವತ್ತು ನೋಡಿ ಆ ಐವತ್ತು ಷೇರು ಎಷ್ಟಾಗಿದೆ ಅಂತ ಶಂಕರಪ್ಪ ಹೇಳುತ್ತಿದ್ದರೆ ಉಳಿದವರು ನಮಗೆ ‌ಅದು ಹೊಳೀಲಿಲ್ಲವಲ್ಲ ಅಂತ ಮರುಗುವವರೆ. ಮಗು ಹುಟ್ಟಿದ ಕೂಡಲೇ ಆರ್ ಡಿ ತೆಗೆದು ಆಕೆಯ ವಿದ್ಯಾಭ್ಯಾಸಕ್ಕೆ ಕೂಡಿಡಲು ಶುರುಮಾಡಿದ ಆನಂದ, ಮನಿ ಬ್ಯಾಕ್ ಪಾಲಿಸಿ ಕೊಂಡ ಅರುಣ್ ಇವರೆಲ್ಲ ಇಂಥದ್ದೇನೂ ಮಾಡದವರ ಕಣ್ಣಲ್ಲಿ ಹೀರೋಗಳು.

    ಹೂಡಿಕೆ ವಿಚಾರಕ್ಕೆ ಬಂದಾಗ ಸಕ್ಸೆಸ್ ಸ್ಟೋರಿಗಳನ್ನು ಹೇಳಿಕೊಳ್ಳುವಾಗಿನ ಆನಂದ ಫೇಲ್ಯೂರ್ ಗಳನ್ನು ಹೇಳಿಕೊಳ್ಳುವಾಗ ಇರುವುದಿಲ್ಲ.  ದಶಕಗಳ ಹಿಂದೆ ನಾವು ಹೆಮ್ಮೆಯಿಂದ ಪ್ರೀಮಿಯಮ್ ಕೊಟ್ಟು ಖರೀದಿಸಿದ ಟೆಲಿಕಾಮ್ ಸ್ಟಾಕ್ ಗಳು ಇವತ್ತು ಅಸಲಿಗೂ ಸಂಚಕಾರ ತಂದಿರುವ ಸಂಗತಿಯನ್ನು ನಾವು ಬಹಿರಂಗ ಪಡಿಸುವುದೇ ಇಲ್ಲ.  ಬಹು ಬೇಡಿಕೆಯ ಐಪಿಒ ಸಿಕ್ಕ ಅದೃಷ್ಟಶಾಲಿ ನಾವೆಂದು ಊರೆಲ್ಲಾ ಹೇಳಿಕೊಂಡು ಬಂದವರು ಆ ಷೇರು ಇವತ್ತು ಮಾರಿದರೆ ಸ್ಟಾಕ್ ಬ್ರೋಕರ್ ಕಮಿಷನ್ ಕೂಡ ಹುಟ್ಟುವುದಿಲ್ಲ ಎನ್ನುವುದನ್ನು ಅಪ್ಪಿ ತಪ್ಪಿಯೂ ಬಾಯಿ ಬಿಡುವುದಿಲ್ಲ. ಯಾರದರೂ ಆ ಬಗ್ಗೆ ಏನಾದರು ಕೇಳಿದರೆ ಓ ಅದಾ ಅಂತ ಏನೋ ವಿವರ ಕೊಟ್ಟು ತಮ್ಮ ತಪ್ಪೇನು ಅದರಲ್ಲಿ ಆಗಿಲ್ಲ ಎನ್ನುವಂತೆ ಇರುತ್ತೇವೆ.

    ಹತ್ತು ವರುಷಗಳ ಹಿಂದೆ ಯಲಹಂಕದ ಹತ್ತಿರ  ಕೊಂಡ ಎರಡು ರೂಮಿನ ಪುಟ್ಟ ಫ್ಲಾಟಿಗೆ ಹೋಗಲು ಆಗದೆ ಇತ್ತ  ಬಾಡಿಗೆಗೆ ಬಿಡೋಣ ಅಂದರೆ ಜನರು ಬರದೆ ಇರುವ ಸಂಗತಿಯನ್ನು ಬಾಯಿ ಬಿಡುವುದಿಲ್ಲ.  ಈಗ ಮಾರಿದರೂ ಅಸಲು ಬಂದೇ ಬರುತ್ತದೆ ಎಂದು ಜಂಭ ಕೊಚ್ಚಿ ಕೊಳ್ಳುತ್ತೇವೆಯೇ ವಿನ: ವಾಸ್ತವ ಸ್ಥಿತಿಯನ್ನು ಮನಸ್ಸು ಒಪ್ಪಿಕೊಳ್ಳುವುದಿಲ್ಲ.

    ಕೆಲವೊಮ್ಮೆ ಕೆಲವರು ಹೂಡಿಕೆ ವಿಚಾರಗಳಿಗೆ ಸಂಬಂಧಿಸಿದಂತೆ ಟೀವಿ  ಶೋಗಳಿಂದ, ವಾಟ್ಸಪ್ ಫಾರ್ವರ್ಡ್ ಗಳಿಂದ ಪ್ರೇರಿತರಾಗಿ ತಮ್ಮದೆ  ಆದ ಥಿಯರಿ ಹೇಳುವುದನ್ನು ಕೇಳಿದಾಗ ನನಗೆ ಅಚ್ಚರಿಯಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಆ ಕ್ಷಣವಷ್ಟೆ ಮುಖ್ಯ ಅನ್ನುವುದನ್ನು ಹಲವರು ಮರತೇ ಬಿಡುತ್ತಾರೆ. ಷೇರು ಒಂದರ ಬೆಲೆ ಕಳೆದ 52 ವಾರಗಳಲ್ಲಿ ಶೇಕಡ 70ರಷ್ಟು ಕುಸಿತ ಆದ  ಬಗ್ಗೆ ತಮ್ಮದೆ ವ್ಯಾಖ್ಯಾನ ನೀಡುವ ಕೆಲವರು ಅದು ಮತ್ತೆ ಏರಲು ಕಾರಣವೇ ಉಳಿದಿಲ್ಲ ಎಂಬುದನ್ನು ಮರೆತು ತಮ್ಮದೇ ವಾದಕ್ಕೆ ಕಟ್ಟು ಬೀಳುತ್ತಾರೆ.

    ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ  ಪ್ರತಿಫಲ ಪಡೆಯುವಲ್ಲಿ ಹೂಡಿಕೆ ದಾರರ ಪಾತ್ರ ಗೌಣ. ತಮ್ಮದಲ್ಲದ ತಪ್ಪಿಗೆ ಬೆಲೆಗಳು ಇಳಿದರೂ ಅವರೇನೂ ಮಾಡುವ ಹಾಗಿಲ್ಲ. ಅಂದರೆ ತಮ್ಮ ಹಣವನ್ನು ನಮ್ಮದು ಎಂದು ಕೊಳ್ಳುತ್ತಲೆ ಇನ್ನೊಬ್ಬರ ಕೈಗೆ ನೀಡುವುದು. ವಾಸ್ತವವಾಗಿ ಇವುಗಳ ಬೆಲೆಯನ್ನು ನಿರ್ಧರಿಸಿರುವವರು ನೀವು ಆಗಿರುವುದೇ ಇಲ್ಲ.  ಹೀಗಾಗಿ ಸಕ್ಸೆಸ್ ಸ್ಟೋರಿಗಳನ್ನು ಕೇಳುವಾಗ ಇದರಲ್ಲಿ ಇವರ ಪಾತ್ರವೇನು ಎಂದು ನನಗೆ ಅನುಮಾನ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಮಾಡಿದ ತ್ಯಾಗ ಪ್ರಮುಖ ಕಾರಣವಾಗಿರುತ್ತದೆಯೇ ಹೊರತು ಅವರು ಯಾವುದೋ ಪಾಲಿಸಿಯಲ್ಲಿ ಹೂಡಿದ್ದಲ್ಲ. ಅದೇ ರೀತಿ ಯಾವದೋ ಸಿಸ್ಟಮ್ಯಾಟಿಕ್ ಹೂಡಿಕೆಯೂ ಅಲ್ಲ.

    ಆದ್ದರಿಂದ ಸಕ್ಸೆಸ್ ಸ್ಟೋರಿಗಳನ್ನಷ್ಟೇ ಕೇಳಿ  ಅದೇ ಹಾದಿಯಲ್ಲಿ ಮುನ್ನುಗ್ಗಬಾರದು. ಯಾವುದೇ ಹೂಡಿಕೆ ಎಲ್ಲಾ ಸಮಯದಲ್ಲೂ ಕೈ ಹಿಡಿಯುವುದಿಲ್ಲ ಎಂಬುದು ಗೊತ್ತಿರಬೇಕು. ಉದಾಹರಣೆಗೆ ಬ್ಯಾಂಕ್ ಬಡ್ಡಿ ದರ ಈ ಪಾಟಿ ಇಳಿಯಬಹದು ಎಂದು ಯಾರು ಊಹಿಸಿದ್ದರು? ನಂಬಿದ ಬ್ಯಾಂಕುಗಳೇ ಕೈ ಕೊಟ್ಟ ಉದಾಹರಣೆಗಳು ಇವೆ.  ಆದ್ದರಿಂದ  ಹೂಡಿಕೆ ಮಾಡಿ, ಆದರೆ ಅದು  ಕೈ ಕೊಟ್ಟಾಗ ಹೆದರದೆ ಪ್ಲಾನ್ ಬಿ ಯತ್ತ ಯೋಚಿಸಿ.

    Photo by Markus Spiske on Unsplash

    ಆರ್. ಶ್ರೀನಿವಾಸ್
    ಆರ್. ಶ್ರೀನಿವಾಸ್
    ನಿವೃತ್ತ ಬ್ಯಾಂಕರ್. ಬೆಂಗಳೂರು ನಿವಾಸಿ. ಬರವಣಿಗೆಯಲ್ಲಿ ಆಸಕ್ತಿ
    spot_img

    More articles

    14 COMMENTS

    1. Nice article but it can be extended with content of plan B for retired persons as one more article.

    2. ಚೆನ್ನಾಗಿದೆ…ಪ್ಲಾನ್ B ಹೂಡಿಕೆಗಳ ಬಗ್ಗೆ ತಿಳಿಸಿ

    3. Plan B ಲೇಖನ ಬೇಗ ಬರಲಿ ಎಂದು ಆಶಿಸುವೆ. ಬರವಣಿಗೆ ರೂಢಿಸಿಕೊಂಡಲ್ಲಿ ಒಳ್ಳೆಯ ಲೇಖಕರಾಗಬಹುದು.

    4. As the saying goes success has too many fathers and failure is a orphan. There is no sure mantra for investment – every investment is bound to be a mixed bag – smartness lies probably in timely switching over / alternate plans.
      Appreciate the writer Sri. R. Srinivas for pragmatic advice.

    5. ಹೂಡಿಕೆ ಬಗ್ಗೆ ಮಾರ್ಮಿಕವಾಗಿ ತಿಳಿಸಿಕೊಟ್ಟ ಆರ್. ಶ್ರೀನಿವಾಸ್
      ಅವರಿಗೆ ಕೃತಜ್ಞತೆಗಳು

    6. ಚೆನ್ನಾಗಿ ಬರೆದಿದ್ದೀರಾ.. ಕ್ಲಿಷ್ಟಪದಗಳ ಭಾರವಿಲ್ಲದೆ, ಸರಳವಾದ ಬರಹ.. ಇನ್ನೂ ಏನೋ ಇದೆ ಎನ್ನುವಷ್ಟರಲ್ಲಿ ಮುಗಿದು ಹೋಯ್ತು.. ಒಳ್ಳೆಯ ಬರಹಕ್ಕೆ ಧನ್ಯವಾದಗಳು.. ಹೂಡಿಕೆ ಮಾಡುವವರಿಗೆ ಮಾರ್ಗದರ್ಶನ ನೀಡುವ ಹಲವು ಬರಹದ ನಡುವೆ ಇದು ಭಿನ್ನವಾಗಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!