21.2 C
Karnataka
Sunday, September 22, 2024

    ಸೂಳೆಕೆರೆ ವಿದ್ಯುತ್ ಯೋಜನೆ ಪ್ರಸ್ತಾವಕ್ಕೆ ಪರಿಸರವಾದಿಗಳ ವಿರೋಧ

    Must read

    ಸೂಳೆಕೆರೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿನ ತಾಲ್ಲೂಕಿನ ಭೂಪಟದ ಕೇಂದ್ರ ಭಾಗದಲ್ಲಿರುವ ಜಲರಾಶಿಯ ಪ್ರಸಿದ್ಧ ತಾಣ. ಏಷ್ಯಾಖಂಡದಲ್ಲಿಯೇ ಎರಡನೇ ದೊಡ್ಡ ಕೆರೆಯ ಖ್ಯಾತಿ ಪಡೆದ ಸೂಳೆಕೆರೆ ವಿಶಿಷ್ಟ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗಿರಿ, ಶಿಖರಗಳಿಂದ ಆವೃತ ಸದಾ ಹಸಿರು ಹೊದ್ದ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಪಾಟ್. ಅಪರೂಪದ ವನರಾಶಿ, ಪ್ರಾಣಿ ಪಕ್ಷಿಗಳ ಮೌನ ಕಣಿವೆ. ಶಾಂತವ್ವೆ ಕಟ್ಟಿಸಿದಳೆಂದು ಹೇಳಲಾಗುವ ಸುಮಾರು 6 ಸಾವಿರ ವಿಸ್ತೀರ್ಣ ಹೊಂದಿದ ತಿಳಿನೀರಿನ ವಿಹಂಗಮ ದೃಶ್ಯ ಕಣ್ಣಿನ ದೃಷ್ಟಿ ಹಾಯುವವರೆಗೆ ಮುದನೀಡುತ್ತದೆ.

    ಎರಡು ಗುಡ್ಡಗಳ ನಡುವೆ ಏರಿ ನಿರ್ಮಿಸುವ ಮೂಲಕ ಸರಳ ತಂತ್ರಜ್ಞಾನದಿಂದ ನೀರು ನಿಲ್ಲಿಸುವ ಮೂಲಕ ಅಪಾರ ಪ್ರಮಾಣದ ನೀರು ಹಿಡಿದಡಲ್ಪಟ್ಟಿದೆ. ನೈಸರ್ಗಿಕ ಜಲಮೂಲ ಹರಿದ್ರಾವತಿ ಹಳ್ಳದೊಂದಿಗೆ ಇತರೆ ಹಳ್ಳಗಳು. ಭ್ರದ್ರಾ ನಾಲೆಯ ನೀರು ಕೆರೆಯಲ್ಲಿ ಸದಾ ನೀರು ತುಂಬಿರಲು ತನ್ನದೇ ಕೊಡುಗೆ ನೀಡುತ್ತಿದೆ. ನೀರಾವರಿ ಸೌಲಭ್ಯಕ್ಕಿಂತ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ನಗರ, ಪಟ್ಟಣ ಹಾಗೂ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆ.

    ನೈಸರ್ಗಿಕ ತಾಣಗಳು ಯಥಾಸ್ಥಿತಿ ಬಿಡದೇ ವಾಣಿಜ್ಯೋದ್ಯಮಕ್ಕೆ ಪರಿವರ್ತಿಸಿ ಲಾಭಗಳಿಸುವ ಕಾರ್ಪೋರೇಟ್ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಸಿಲುಕಿದ ಪರಿಣಾಮ ಮೂಲ ಸ್ವರೂಪ ಕಳೆದುಕೊಂಡಿವೆ. ಕಾಡುನಾಶ, ಗುಡ್ಡ ನೆಲಸಮ ಮಾಡಿ ಉದ್ಯಮಗಳತ್ತ ವಾಲುವಿಕೆ ದುರಂತಗಳಿಗೆ ದಾರಿ ಮಾಡಿದೆ. ಬೃಹತ್ ಯಂತ್ರಗಳ ಸದ್ದಿಗೆ ಪ್ರಾಣಿ ಪಕ್ಷಿಗಳು ಪಲಾಯನ. ನೈಸರ್ಗಿಕ ಬೀಜ ಪ್ರಸರಣವಿಲ್ಲದೇ ಕಾಡು ನಾಶ. ಅವೈಜ್ಞಾನಿಕ ಯಂತ್ರಾಧಾರಿತ ಉದ್ಯಮಗಳ ಆಕ್ರಮಣದಿಂದ ಪರಿಸರ ಸಮತೋಲನ ಕಳೆದುಕೊಂಡಿದೆ.

    ಇಂದು ಮಳೆಗಾಲ ಬಂತೆಂದರೆ ಆತಂಕ. ಪ್ರವಾಹ, ಗುಡ್ಡ ಕುಸಿತ. ಭೂ ಸವಕಳಿ, ನದಿಯಲ್ಲಿ ಹೂಳು. ಇವೆಲ್ಲಾ ಅಸಮತೋಲನದ ಪರಿಣಾಮವೇ. ತಕ್ಷಣದ ಲಾಭಕ್ಕಾಗಿ ಲಕ್ಷಾಂತರ ವರ್ಷದಿಂದ ನೆಲೆ ಕಂಡುಕೊಂಡಿದ್ದ ಮಳೆಕಾಡು ಕೆಲವೇ ಗಂಟೆಗಳಲ್ಲಿ ನೆಲಸಮ ಮಾಡುವ ಹುನ್ನಾರ ನಡೆದಿದೆ. ಹಿಂದೆಯೂ ಇದಕ್ಕಿಂತ ಭರ್ಜರಿ ಮಳೆ ಸುರಿಯುತ್ತಿತ್ತು. ಈಗಿನಂತಹ ಅನಾಹುತಗಳು ಇರಲಿಲ್ಲ. ಕಳೆದ ಬಾರಿ ಕೊಡಗಿನಲ್ಲಾದ ಕುಸಿತ, ಈ ಬಾರಿ ಭಾಗಮಂಡಲದಲ್ಲಿ ಅರ್ಚಕರ ಮನೆ ಗುಡ್ಡ ಕುಸಿತ ಇವುಗಳ ಪ್ರತಿಫಲಗಳೇ. ಕಾಡಿನಲ್ಲಿ ಹೆದ್ದಾರಿ ನಿರ್ಮಾಣ, ವಿದ್ಯುತ್ ಮಾರ್ಗಗಳಿಗೆ ಮರಗಳ ಮಾರಣ ಹೋಮ ನಡೆಯುತ್ತಿದೆ. ಕೊಳವೆ ಬಾವಿಗಳು, ಜೆಸಿಬಿ ಯಂತ್ರದಿಂದ ಗುಡ್ಡದ ಬುಡ ಸಮತಟ್ಟು ಮಾಡುವ ಪ್ರಕ್ರಿಯೆಗಳಿಂದ ಅವಘಡಗಳು ಸಂಭವಿಸುತ್ತಿವೆ. ನೂರಾರು ವರ್ಷ ಬದುಕು ಕಟ್ಟಿಕೊಂಡ ಪರಂಪರಾಗತ ಕುಟುಂಬಗಳ ಹೇಳ ಹೆಸರಿಲ್ಲದಂತೆ ಮಣ್ಣು ಪಾಲಾಗುತ್ತಿವೆ.

    ಜೋಗದಲ್ಲಿಯೂ ದಟ್ಟಡವಿಯಲ್ಲಿ ನೀರೆತ್ತುವ ಮೂಲಕ ವಿದ್ಯುತ್ ಉತ್ಪಾದನೆ ಯೋಜನೆಗೆ ಪರೀಕ್ಷೆ ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿತ್ತು. ತೀವ್ರ ವಿರೋಧದ ನಡುವೆಯೂ ಯಂತ್ರಗಳ ಸದ್ದು ನಡೆಯಿತು. ರಾಜಕಾರಣಿಗಳೂ ಕೂಡ ಕಾರ್ಪೋರೇಟ್ ವ್ಯವಸ್ಥೆಯ ಬಂಡವಾಳಶಾಹಿಗಳ ಹಿತಾಸಕ್ತಿಗೆ ಬೆನ್ನೆಲುಬಾಗಿ ನಿಲ್ಲುವುದು ದೇಶದ ಮಳೆಕಾಡು ಪ್ರದೇಶ ನಿತ್ಯ ಕರಗುತ್ತಿದೆ. ಪ್ರಪಂಚದಲ್ಲಿಯೇ ತೇವಾಂಶಭರಿತ ಭಾರತ ದೇಶದಲ್ಲಿ ಕಾಡಿನ ಪ್ರಮಾಣ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇಶದ ಪರಿಸರ ಸಮತೋಲನಕ್ಕೆ ಶೇ.33 ಮಳೆಕಾಡು ಇರುವುದು ಅಗತ್ಯ. ಕಾಡು ಕಡಿದು ಮರಬೆಳೆಸುವುದು ಕಣ್ಣೆರೊಸುವ ತಂತ್ರ. ವಾಸ್ತವ ನೈಸರ್ಗಿಕವಾಗಿ ಬೆಳೆಯುವ ವೈವಿಧ್ಯಮಯ ಜಾತಿಯ ಗಿಡಮರದ ದಟ್ಟಕಾಡು ಮಳೆ ತರಿಸುವುದು. ಈ ಎಲ್ಲಾ ಅಂಶಗಳನ್ನು ಒತ್ತಿ ಹೇಳುವ ಉದ್ದೇಶ ಸೂಳೆಕೆರೆಯೂ ಹಾಗಾಗದಿರಲಿ ಎಂಬ ಸದಾಶಯ.

    ಸೂಳೆಕೆರೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಕಂಪನಿಯೊಂದು ನೀಡಿದ ಪ್ರಸ್ತಾವವನನ್ನು ಪರಿಶೀಲಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಸರ ಕಾಳಜಿಯ ಸಾರ್ವಜನಿಕರಲ್ಲಿ ತಲ್ಲಣ ಉಂಟಾಗಿದೆ. ವಿದ್ಯುತ್ ಉತ್ಪಾದನೆ ಘಟಕ ಕಾರ್ಯಾರಂಭ ಮಾಡಿದಲ್ಲಿ ಸೈಲೆಂಟ್ ವ್ಯಾಲಿಯೆಂದೇ ಗುರುತಿಸಿಕೊಂಡ ಸೂಳೆಕೆರೆ ಗಿಜಿಗುಡುವ ವಾಣಿಜ್ಯ ಪ್ರದೇಶವಾಗಿ ಪರಿವರ್ತಿತಗೊಳ್ಳುವುದು. ಇದರಿಂದ ಇಲ್ಲಿನ ಪರಿಸರಕ್ಕೆ ಹಾನಿ ಖಂಡಿತ. ಈ ಹಿನ್ನೆಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಏನಿದು ವಿದ್ಯುತ್ ಉತ್ಪಾದನೆ:ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದು ಸೂಳೆಕೆರೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಪ್ರಸ್ತಾವ ಸಲ್ಲಿಸಿದೆ. ಪರ್ವ ಜನರೇಷನ್ ಪಂಪ್ ಸ್ಟೊರೇಜ್ ಪ್ರಾಜೆಕ್ಟ್ ಹೆಸರಿನಲ್ಲಿ ರೂ.1347 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ಪ್ರಸ್ತಾವನೆಯಲ್ಲಿದೆ. ಚನ್ನಗಿರಿ ತಾಲ್ಲೂಕಿನ ಸೋಮಶೆಟ್ಟಿ ಹಳ್ಳಿ ಹಾಗೂ ಅರಿಶಿನಘಟ್ಟ ಗ್ರಾಮಗಳಲ್ಲಿ ಯೋಜನೆ ಅನುಷ್ಟಾನಕ್ಕೆ ಆಯ್ಕೆಮಾಡಿಕೊಳ್ಳಲಾಗಿದೆ. ಸೂಳೆಕೆರೆಯಿಂದ 0.279 ಟಿಎಂಸಿ ನೀರನ್ನು ಎತ್ತರದ ಗುಡ್ಡಕ್ಕೆ ಪಂಪ್ ಮಾಡಲಾಗುವುದು. ಅಲ್ಲಿಂದ ನೀರನ್ನು ಲಿಂಗನಮಕ್ಕಿ ಮಾದರಿಯಲ್ಲಿ ದುಮ್ಮುಕ್ಕಿಸಿ ವಿದ್ಯುತ್ ತಯಾರು ಮಾಡಲು ಪ್ರಸ್ತಾವನೆಯಲ್ಲಿ ಮಂಡಿಸಲಾಗಿದೆ. ಗರಿಷ್ಟ 25 ಮೆಗಾವ್ಯಾಟ್ ವಿದ್ಯುತ್ ತಯಾರಿಕೆ ಗುರಿ ಸೂಚಿಸಲಾಗಿದೆ.

    ಈ ಯೋಜನೆಗೆ 201 ಎಕರೆ ಭೂಮಿ ಅಗತ್ಯವಿದೆ. ಅರಣ್ಯ ಇಲಾಖೆ 137 ಎಕರೆ, ಹಾಗೂ 67 ಎಕರೆ ಖಾಸಗಿ ಜಮೀನು ನೀಡುವಂತೆ ಕಂಪನಿ ಪ್ರಸ್ತಾವನೆಯಲ್ಲಿ ನಮೂದಿಸಿದೆ. ಈ ಪ್ರಸ್ತಾವಣೆ ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಲು ಅನುಮೋದನಾ ಸಮಿತಿ ತಿಳಿಸಿದೆ.

    ಯೋಜನೆಗೆ ವಿರೋಧ:ಚನ್ನಗಿರಿ ಕ್ಷೇತ್ರದ ಶಾಸಕ ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ನೀರಾವರಿ ಪ್ರದೇಶ, ಕುಡಿಯುವ ನೀರು ಹಾಗೂ ಮೀನುಗಾರರ ಜೀವನದ ಮೂಲ ಸೂಳೆಕೆರೆ. ಯೋಜನೆಗೆ ಅಸ್ತು ನೀಡಿದರೆ ದೊಡ್ಡಮಟ್ಟದಲ್ಲಿ ಪರಿಸರ ಹಾನಿಗೆ ದಾರಿ ಮಾಡಿಕೊಡಲಿದೆ. ಸೂಳೆಕೆರೆ ಗುಡ್ಡದಲ್ಲಿ ಪ್ಲಾಟಿನಂ ಹಾಗೂ ಯುರೇನಿಯಂ ನಿಕ್ಷೇಪ ಇರುವುದರಿಂದ ದುರುದ್ದೇಶದಿಂದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೈಗಾರಿಕಾ ಸಚಿವರಿಗೆ ಹಾಗೂ ಜಲ ಸಂಪನ್ಮೂಲ ಸಚಿವರಿಗೆ ಯೋಜನೆಗೆ ಅನುಮತಿ ನೀಡಬಾರದೆಂದು ಮನವಿ ಮಾಡಿದ್ದೇನೆ. ಅದನ್ನು ಮೀರಿ ಅನುಮತಿ ನೀಡಿದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಶಾಸಕ ಮಾಡಾಳು ವಿರೂಪಾಕ್ಷಪ್ಪ

    ಈ ಹಿನ್ನೆಲೆಯಲ್ಲಿ ಈಚೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅರಿಶಿನಘಟ್ಟದ ಬಳಿ ಸ್ಥಳ ಪರಿಶೀಲನೆ ನಡೆಸಿದರು. ಅವರ ಅಭಿಪ್ರಾಯದಲ್ಲಿ ದೇವರು ಕೊಟ್ಟ ಸುಂದ ಕೆರೆ ಸೂಳೆಕೆರೆ. ಇದನ್ನು ನಂಬಿ 4 ರಿಂದ 5 ಲಕ್ಷ ಜನರು ಜೀವನ ನಡೆಯುತ್ತಿದೆ. ಯೋಜನೆಗೆ ಅನುಮತಿ ನೀಡಿದರೆ ತೀವ್ರ ತೊಂದರೆ ಅನುಭವಿಸುವರು. ಪರಿಸರ ಹಾಗೂ ಅರಣ್ಯ ಇಲಾಖೆಗಳಿಂದ ಗುಡ್ಡಗಳ ಮಾಹಿತಿ ಪಡೆದು ನಾಲ್ಕೈದು ದಿನಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಇರುವವರೆಗೂ ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಇದರಿಂದ ಸುತ್ತಮುತ್ತಲಿನಗ ಗ್ರಾಮಸ್ಥರಲ್ಲಿ ಭರವಸೆ ಮೂಡಿತು.

    ಖಡ್ಗ ಸಂಘದ ಹೋರಾಟ: ಕಳೆದು ಮೂರ್ನಾಲ್ಕು ವರ್ಷದಿಂದ ಸೂಳೆಕೆರೆ ರಕ್ಷಣೆಗೆ ತನು,ಮನ ಧನದಿಂದ ಹೋರಾಟ ನಡೆಸುತ್ತಿರುವ ಖಡ್ಗ ಸಂಘ ಯೋಜನೆ ಪ್ರಸ್ತಾವನೆಗೆ ತೀವ್ರ ಹೋರಾಟ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಿದೆ.

    ಖಡ್ಗ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘು

    ಇದೊಂದು ಅವೈಜ್ಞಾನಿಕ ಯೋಜನೆ. ನೀರನ್ನು ಗುಡ್ಡದ ಮೇಲಕ್ಕೆ ಎತ್ತಲು ಎಷ್ಟು ವಿದ್ಯುತ್ ಬೇಕು. ಅಲ್ಲಿಂದ ನೀರು ದುಮ್ಮುಕ್ಕಿಸಿ ಎಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ. ಇದು ಲಾಭಕರ ಅಲ್ಲವೇ ಅಲ್ಲ. ಪರಿಸರಕ್ಕೆ ದೊಡ್ಡ ಹಾನಿ ಸಂಭವಿಸಲಿದೆ. ಇಲ್ಲಿನ ರೈತರ, ಜನರ ಹಾಗೂ ಮೀನುಗಾರರ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಯೋಜನೆ ಅನುಷ್ಟಾನಗೊಳ್ಳದಂತೆ ತಡೆಯಲು ಯಾವುದೇ ಹೋರಾಟಕ್ಕೆ ಸಿದ್ದ ಎಂದು ಖಡ್ಗ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    18 COMMENTS

    1. ಒಳ್ಳೆಯ ಲೇಖನ… ಅಧುನಿಕ ಸಮಾಜದ ಪ್ರಯೋಜನಕ್ಕೆ ಎನೇ ಮಾಡಿದರು, ಪರಿಸರ ಕಾಪಾಡುವುದು ಎಲ್ಲರ ಮುಖ್ಯ ಕರ್ತವ್ಯ

    2. ಇದೊಂದು ಅವೈಜ್ಞಾನಿಕ,ಅನಾಹುತ ಯೋಜನೆ. 25KW ಯೋಜನೆಗೆ ಅಷ್ಟೆಲ್ಲ ಬಲಿ ಕೊಡುವುದರಲ್ಲಿ ಅರ್ಥ ಇಲ್ಲ…ಏನೂ ಇಲ್ಲದೆ, ಸುತ್ತಲಿನ ಗುಡ್ಡಗಳ ಮೇಲೆ ಸುಮ್ಮನೆ ಸೋಲಾರ್ ತಟ್ಟೆಗಳನ್ನಿಟ್ಟು 25KW ಉತ್ಪಾದಿಸಬಹುದು. ಆಘಾತಕಾರಿ ಯೋಜನೆ…ತಕ್ಷಣ ಕೈಬಿಡುವಂತೆ ಕ್ತಮಕೈಗೊಳ್ಳಿ….

    3. ‘ KSV ‘ ನಿಮ್ಮ ಲೇಖನ ವಿಷಯ ಸಂಗ್ರಹಣೆ, ತಾತ್ವಿಕ ಮತ್ತು ತಾಕಿ೯ಕ ಅಂಶಗಳಿಂದ ಕೂಡಿದ್ದು, ಜನ ವಿರೋಧಿ ಯೋಜನೆಗಳ ವಿರುದ್ಧ ಸಕಾ೯ರಕ್ಕೆ ಚೆನ್ನಾಗಿ ಚಾಟಿ ಬೀಸಿದ್ದೀರಿ.
      ಒಂದು ಜನಪರ ಯೋಜನೆಗಳ ಜಾರಿಗೆ ಸ್ಥಳೀಯ ಶಾಸಕರುಗಳನ್ನೊಳಗೊಂಡಂತೆ , ಪರಿಸರವಾದಿಗಳು ಮತ್ತು ಸ್ಥಳೀಯ ಜನತೆಯ ವಿರೋಧ ಕಟ್ಟಿಕೊಂಡು ಇಂಥ
      ಎಡ-ಬಿಡಂಗಿ ಯೋಜನೆಗಳ ಅನುಷ್ಠಾನಕ್ಕೆ ಅದೇಕೆ ಮುತುವರ್ಜಿ ವಹಿಸುತ್ತಾರೋ ಅಥ೯ವಾಗದು. ಒಂದು ಮಹತ್ವದ , ಪ್ರಾಮುಖ್ಯತೆ , ಜನಹಿತ ಯೋಜನೆಗಳ ಅನುಷ್ಠಾನಕ್ಕೆ ರಕ್ತಪಾತವಾಗುವ ಹಂತಕ್ಕೆ ಹೋದಾಗಲೂ ಕಣ್ಣರಳಿಸಿ ನೋಡದ ಸಕಾ೯ರಗಳು,ಇಂತಹ ‘Hidden-Azenda’ ಹೊಂದಿ, ಬೆಟ್ಟ ಅಗೆದು ಇಲಿ ಹಿಡಿಯುವಂತಹ ಯೋಜನೆಗಳಿಗೆ ಅದೇಕೆ ಉತ್ಸುಕತೆ ತೋರಿಸುವರೋ ತಿಳಿಯದು.
      ಒಟ್ಟಿನಲ್ಲಿ ಯಾವುದೇ ಕಾರಣಕ್ಕೂ ಇಂತಹ ಅಸಂಬದ್ಧ ಯೋಜನೆಗಳ ಅನುಷ್ಠಾನಕ್ಕೆ ಬಿಡಲೇಬಾರದು. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಹಾಗೂ ಸ್ಥಳೀಯ ಸಂಘಟನೆಗಳ ಪ್ರವೇಶ ಶ್ಲಾಘನೀಯ. ಜೊತೆಗೆ ಯೋಜನೆಗೆ ಸ್ಥಳೀಯ ಶಾಸಕರ ವಿರೋಧದ ಜೊತೆಗೆ ಸಂಘಟನೆಗಳಿಗೆ ಬೆಂಬಲ ಪ್ಲಸ್ ಪಾಯಿಂಟ್.

    4. ಪರಿಸರ ಹಾಳು ಮಾಡಿ ಬರುವಂತಹ ಯೋಜನೆಗಳ ಬಗ್ಗೆ ಸಾರ್ವಜನಿಕರು ಯೋಚಿಸಬೇಕು. ಈ ನಿಟ್ಟಿನಲ್ಲಿ ನಿಮ್ಮ ಲೇಖನ ಸಹಾಯ ಕಾರಿಯಾಗಿದೆ. ಮನುಷ್ಯ ಪ್ರಕೃತಿ ವಿರುದ್ಧ ಹೋದಾಗ ಎಷ್ಟೇಲ್ಲಾ ಅನಾಹುತ ಸಂಭವಿಸಿದೆ. ಆದರೂ ಕೂಡಾ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿದ್ದೇವೆ. ನಿಮ್ಮ ಬರವಣಿಗೆ ಜನರಲ್ಲಿ ಜಾಗೃತಿ ಉಂಟು ಮಾಡಲಿ. Vp. ಧನ್ಯವಾದಗಳು

    5. ಪದೇಪದೇ ಜಲವಿದ್ಯುತ್ ಯೋಜನೆಗೇ ಮುಖ‌ಮಾಡುವ ವ್ಯವಸ್ಥೆ ಯಾಕಾಗಿ ಸೌರ ವಿದ್ಯುತ್ ಉತ್ಪಾದನೆ ಗೆ ಇಚ್ಛಾಶಕ್ತಿ ತೋರುತ್ತಿಲ್ಲ ಎನ್ನುವುದು ಸದ್ಯದ ಅಚ್ಚರಿ.

    6. ಸಮಾಜಕೆ ಒಳಿತು ಮಾಡುವ ಸಲುವಾಗೀ ಈ ರೀತಿಯ ಯೋಜನೆಗಳು ಬಂದರೆ. ನಮ್ಮ ಪರಿಸರ ನಾಶದ ಜೊತೆ ನಮ್ಮ ಜೀವನವೂ ನಾಶ. ಸರಿಯಾದ ಸಮಯದಲಿ ಜನ ಇದರ ಬಗೆ ತಿಳಿಯಲು ವಿ.ಪಿಯ ಲೇಖನ ತುಂಬಾ ಸಹಕಾರಿಯಾಗುವುದು. ನಮ್ಮ ಉತ್ತರ ಕನ್ನಡ ದಲೂ ಕಾಳಿ ಯೋಜನೆ ಜಾರಿಯಾಗಬೇಕೆಂಬ ಕೂಗು ಬಂದಾಗ ಅಲಿ ಸರಿಯಾದ ಸಮಯದಲಿ ವಿರೋಧ ಮಾಡಿ ತಡೆದರು. ಇಲಿ ಕೂಡ ಸೂಳೆಕೆರೆಯ ಅಭಿವೃದಿ ಸಲುವಾಗಿನ ನಿಮ್ಮ ಕೆಲಸ ಎಲ್ಲವೂ ಒಳೆಯದೇ. ವಿ.ಪಿ ಯ ಲೇಖನ ಎಲ್ಲವನೂ ತಿಳಿಸುತ್ತದೆ

    7. Your article is an eye opener for the authorities. It is a source of water for lakhs of people. Government should give up this project.

    8. Instead of hydro electric project, it is better the govt. considers developing Soolekere as a major tourist spot on the lines of KRS which will boost economic activity.There is not a single major tourist spot in Central Karnataka. I hope this suggestion will be welcomed by all.

    LEAVE A REPLY

    Please enter your comment!
    Please enter your name here

    Latest article

    error: Content is protected !!