19.5 C
Karnataka
Thursday, November 21, 2024

    ರಾಜಕೀಯ ಲಾಭಕ್ಕೆ ಜ್ಞಾನವನ್ನು ಒತ್ತೆ ಇಡುವುದು ಎಷ್ಟು ಸರಿ?

    Must read

    ಅದು 80ರ ದಶಕದ ಮಧ್ಯದ ಭಾರತ. ಇಂದಿರಾಗಾಂಧಿಯ ಹತ್ಯೆಯೊಂದಿಗೆ ಒಂದು ರಾಜಕೀಯ ಪರ್ವವೇ ಮುಗಿದಿದ್ದಂಥಕಾಲ.ಅಲ್ಲಿಗೆ ವಿದೇಶಗಳಲ್ಲಿ ಓದಿ ಬಂದವರಿಗೆ ಫಾರಿನ್ ರಿಟರ್ನ್ಡ್ಅನ್ನುವ ಗೌರವ ಕಡಿಮೆ ಆಗಿದ್ದಂತಹ ಕಾಲ. ಹೋದವರು ಬಾರದೇ ಅಲ್ಲೇ ನೆಲೆಸುತ್ತಿದ್ದುದರಿಂದ, Brain Drain ಎನ್ನುವ ವಿಷಯ ಮುಂದಲೆಗೆ ಬಂದು ಅನೇಕ ಆಯಾಮಗಳಲ್ಲಿ ಚರ್ಚೆ ಆಗುತ್ತಿದ್ದ ಕಾಲ ಘಟ್ಟ.

    ನಾನು ಓದಿದ್ದಂತಹ ತಾಂತ್ರಿಕ ಕಾಲೇಜುಗಳಲ್ಲಿ ಇಂತಹ ಚರ್ಚೆಗೆ ಆಯಾಮಗಳು ಏನೇ ಇದ್ದರೂ ಭಾರತದಲ್ಲಿ ತಾಂತ್ರಿಕ ವಿಷಯಗಳ ಅವಿಷ್ಕರಣೆಗೆ ಬೇಕಾದ ವಾತಾವರಣ,ಲಭ್ಯತೆ ಎರಡೂ ಇಲ್ಲ. ಹಾಗಾಗಿ ವಿದೇಶವೇ ನಮ್ಮ ಮೊದಲ ಆಯ್ಕೆ ಎಂಬಂಥ ಸ್ನೇಹಿತರ ಮಧ್ಯೆ ಇದ್ದ ನನಗೆ ಹಲವಾರು ಬಾರಿ ಆಶ್ಚರ್ಯ ಆಗುತ್ತಿತ್ತು. ಹಾಗೆ ನೋಡಿದರೆ ಅವರ ಅಭಿಪ್ರಾಯವೂ ಸರಿಯೇ,ಆದರೆ ಸರ್ಕಾರ ನಮ್ಮಂಥ ಆಯ್ದ ಮೆದುಳಿಗಳಿಗೆ ಉಚಿತವಾಗಿ ಅಂದಿನ ದಿನಗಳಲ್ಲಿ ಉತ್ಕೃಷ್ಟ ಎನ್ನಬಹುದಾದಂತಹ ಶಿಕ್ಷಣವನ್ನು ಉಚಿತವಾಗಿ, ಸಾರ್ವಜನಿಕರ ತೆರಿಗೆ ಹಣದಿಂದ ಕೊಡುತ್ತಿದ್ದು,ಅಂತಹ ಶಿಕ್ಷಣ ಪಡೆದ ನಾವು ಏನೋ ಕಾರಣ ಹೇಳಿ ಪುರ್ ಅಂತ ವಿದೇಶಕ್ಕೆ ಹಾರುವುದು ಯಾಕೋ ನನ್ನ ಮನಸ್ಸಿಗೆ ಒಗ್ಗದ ವಿಷಯವಾಗಿತ್ತು.

    ಹೀಗೆಯೇ ಸರ್ ಸಿ ವಿ ರಾಮನ್, ಜೇಮ್ಸಶೇಡ್ಜಿ ಟಾಟಾ, ವಿಶ್ವೇಶ್ವರಯ್ಯ,ಅಣು ವಿಜ್ಞಾನಿ ಬಾಬಾ ಮುಂತಾದವರು ಯೋಚಿಸಿ,ವಿದೇಶಕ್ಕೆ ಹೋಗಿದ್ದರೆ ಗತಿ ಏನಾಗ್ತಿತ್ತು ಎನ್ನುವುದು ನನ್ನ ಪ್ರಶ್ನೆಯಾಗಿರುತ್ತಿತ್ತು. ಬುದ್ಧಿವಂತರು ಅಂತ ಸಮಾಜದಲ್ಲಿ ಗುರುತಿಸಿಕೊಂಡವರು ಸ್ವಾರ್ಥಿಗಳಾದರೆ ಸಮಾಜಕ್ಕೆ ತೊಂದರೆ ಆಗುತ್ತೇನೋ ಎನ್ನುವಂತಹ ಸ್ಪಷ್ಟತೆ ಇಲ್ಲದ ಯೋಚನೆಗಳು ಆಗ ನನ್ನನ್ನು ಇಲ್ಲಿಯೇ ಇರಬೇಕಾದ್ದು ನಮ್ಮ ನೈತಿಕ ಕರ್ತವ್ಯದ ಜವಾಬ್ದಾರಿ ಅಂತ ಹೇಳುತ್ತಿದ್ದವು. ನಾವು ಅಲ್ಲಿ ಗಳಿಸುವ ಹಣ ಭಾರತಕ್ಕೆ ಯಾವುದೋ ರೂಪದಲ್ಲಿ ಬರುತ್ತದೆ,ಹಾಗಾಗಿ ಭಾರತದ ಅರ್ಥ ವ್ಯವಸ್ಥೆಗೆ ನಮ್ಮಿಂದ ಸಹಾಯ ಆಗುತ್ತೆ ಅಂತ ಹೇಳುವ ಒಂದು ವಾದ ನನಗೆ ಸಮಂಜಸ ಅನ್ನಿಸುತ್ತಿರಲಿಲ್ಲ. ಆರ್ಥಿಕತೆ ಯ ಸಮಜಾಯಿಷಿ ಎಲ್ಲ ವಿಷಯಗಳಲ್ಲಿ ಸಮರ್ಪಕವಾದ ಉತ್ತರ ಅಲ್ಲ ಅಂತ ಇಂದಿಗೂ ನನ್ನ ಅಭಿಪ್ರಾಯ, ಅದು ಮನೆಯಾಗಲೀ,ದೇಶವಾಗಲಿ.

    ಈ ಮಧ್ಯೆ ಕಂಪ್ಯೂಟರ್ ಪ್ರವೇಶ ಆಗುತ್ತದೆ. ಇಂದಿರಾ ನಂತರ ಬಂದ ರಾಜೀವರು ಈ ಎಲೆಕ್ಟ್ರಾನಿಕ್ ಭೂಮಿಕೆಗೆ ಹೆಚ್ಚು ಒತ್ತು ಕೊಟ್ಟು 21ನೇ  ಶತಮಾನದ ಭಾರತವನ್ನು ಬೇರೆಯದೇ ಆಯಾಮಕ್ಕೆ ಕೊಂಡೊಯ್ಯುತ್ತೇನೆ ಅಂತಿದ್ದರು. ಆಗಾಗ ಔಪಚಾರಿಕವಾಗಿ ಇದರ ವಿಷಯವನ್ನು ನಮ್ಮ ಪ್ರೊಫೆಸರ್ಗ ಗಳು ತರಗತಿಗಳಲ್ಲಿ ಹೇಳುತ್ತಿದ್ದರೂ,ಇದರ ಆಳ,ಅಗಲ ಪರಿಚಯ ಇರಲಿಲ್ಲ. ಆಗಲೇ ನಮ್ಮ ಕೈಗಳಲ್ಲಿ ಇದ್ದ ಎಂಜಿನಿಯರಿಂಗ್ ಕ್ಯಾಲುಕಲೇಟರ್ ಕಡೆ ನೋಡ್ತಾ, ಇದರ ಮುಂದುವರೆದ,ಇದಕ್ಕಿಂತಲೂ ಹೆಚ್ಚಿನ ಕೆಲಸ ಮಾಡುವ ಒಂದು ಸಾಧನ ಅಂತ ತಿಳಿಸಲಾಗುತ್ತಿತ್ತು. ಜೊತೆಗೆ ಅದರದ್ದೇ ಆದ ಭಾಷೆ ಕಲಿಯಬೇಕು,ಅದನ್ನು ಬಳಸಿಕೊಳ್ಳಲು ಅಂತ Basic, Fortron ಎನ್ನುವಂತಹ ಭಾಷೆಗಳನ್ನು ಕಲಿಸುತ್ತಿದ್ದರು.

    ಈ ಮಧ್ಯೆ ಎಡ ಪಂಥೀಯರ ಬ್ಯಾಂಕ್ ನೌಕರರ ಸಂಘಗಳು ನಮಗೆ ಕಂಪ್ಯೂಟರ್ ಬೇಡವೇ ಬೇಡ ಎನ್ನುವ ಬೇಡಿಕೆಯೊಂದಿಗೆ ಧರಣಿ ಮಾಡುತ್ತಿದ್ದರು! ಜಪಾನ್ ನಲ್ಲಿ ಜನಸಂಖ್ಯೆ ಕಡಿಮೆ,ಕೆಲಸ ಜಾಸ್ತಿ ಹಾಗಾಗಿ ಅಲ್ಲಿ ಅವುಗಳ ಆವಶ್ಯಕತೆ ಇದೆ. ಭಾರತದಲ್ಲಿ ಜನಸಂಖ್ಯೆ ತುಂಬಾ ಇದೆ,ಇಲ್ಲಿ ಉದ್ಯೋಗ ಸೃಷ್ಟಿ ಆಗಬೇಕೆ ಹೊರತು,ಕಸಿಯುವ ಕಂಪ್ಯೂಟರ್ ಬೇಡ ಅನ್ನುವುದು ಅವರ ವಾದ. ಯಾರೋ ಹೇಳಿದ್ದರಂತೆ ಒಂದು ಕಂಪ್ಯೂಟರ್ 100 ಉದ್ಯೋಗಿಗಳ ಕೆಲಸ ಮಾಡುತ್ತೆ ಬ್ಯಾಂಕ್ ನಲ್ಲಿ ಅಂತ.

    ನನ್ನ ಪ್ರೆಶ್ನೆ ಏನು ಅಂದ್ರೆ, ಅದರ ಆಳ,ಅಗಲಗಳು ಇನ್ನೂ ಸರಿಯಾಗಿ ತಿಳಿಯದೇ ಇದ್ದ ವೇಳೆಯಲ್ಲಿ ಇಂಥ ಜನರನ್ನು ತುಂಬಾ ವೇಗವಾಗಿ, ಸಮರ್ಥವಾಗಿ ತಲುಪಬಲ್ಲ ವಾದಗಳಿಗೆ ಯಾರು,ಏಕೆ ರೆಕ್ಕೆ ಪುಕ್ಕ ಕಟ್ಟಿ ಹಾರಿಬಿಡುತ್ತಾರೆ ಎಂಬುದು! ಇಂತಹ ಬದ್ಧತೆ ಇಲ್ಲದ ಬುದ್ಧಿಜೀವಿಗಳಿಗೆ ನಮ್ಮಲ್ಲಿ ಕಡಿಮೆ ಇಲ್ಲ. ಇವರ ಬಾಲಿಶ ವಾದಕ್ಕೆ ಬೆಲೆ ಇಲ್ಲ ಎನ್ನುವುದು ಗೊತ್ತಾಗಲು ಸಮಯಬೇಕು.ಅಷ್ಟರಲ್ಲಾಗಲೇ ಇವರು ಮತ್ತೊಂದಕ್ಕೆ ರೆಕ್ಕೆ,ಪುಕ್ಕ ಕಟ್ಟುವ ಕೆಲಸದಲ್ಲಿ ಭಾಗಿಯಾಗಿರುತ್ತಾರೆ. ಇವರಿಗೆ ಸಾಮಾಜಿಕ ಬದ್ಧತೆ ಇರುವುದೇ ಇಲ್ಲ.ನೀವು ಹೇಳಿದ್ದು ತಪ್ಪು ಅಂತ ಯಾರೂ ಛಿ ಮಾರಿ ಹಾಕಲ್ಲ,ಇವರು ಇದನ್ನೇ ವೃತ್ತಿ ಮಾಡಿಕೊಂಡು ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಾರೆ.

    ಇಂದು ಕಂಪ್ಯೂಟರ್ ಇಲ್ಲದ ಜೀವನವನ್ನು ಊಹಿಸಲು ಸಾಧ್ಯವೇ?! ತುಂಬಾ ಸಮಂಜಸ ಅಂತ ಆಗ ಕಾಣುತ್ತಿದ್ದ ಇವರ ವಾದಕ್ಕೆ ಮನ್ನಣೆ ನೀಡುವ ಸರ್ಕಾರಗಳು ಇದ್ದಿದ್ದರೆ,ಎಂತಹ ದುರಂತ ಆಗ್ತಿತ್ತು?!

    ಇದು ಉದಾಹರಣೆ ಅಷ್ಟೇ. ಆಗ ಇಂತಹುದೆ ಮತ್ತೊಂದು ರಾಷ್ಟವ್ಯಾಪ್ತಿ ಚರ್ಚೆ ಆಗ್ತಿದ್ದ ವಿಷಯ ಇಂದು ಸರ್ದಾರ್ ವಲ್ಲಭಬಾಯಿ ಆಣೆಕಟ್ಟು ಅಂತ ಅನ್ನಿಸಿಕೊಂಡಿರುವ ಗುಜರಾತಿನ ನರ್ಮದಾ ಕಣಿವೆಯ ಪ್ರಾಜೆಕ್ಟ್. ನೆನಪಿರಬಹುದು ಮೇಧಾ ಪಾಟ್ಕರ್ ಎನ್ನುವಂತಹ ಪರಿಸರ ತಜ್ಞೆಯ ನೇತೃತ್ವದಲ್ಲಿ ಮಾನವ ಹಕ್ಕುಗಳ ಹೋರಾಟದವರು ಅಲ್ಲಿನ ನಿವಾಸಿಗಳೊಂದಿಗೆ ಸೇರಿ ದಶಕಗಳ ಕಾಲ ಇನ್ನಿಲ್ಲದಂತೆ ವಿರೋಧಿಸುತ್ತಾರೆ. ಇಂದು ಈ ಅಣೆಕಟ್ಟು 4 ಕೋಟಿ ಜನರ ನೀರಿನ ಸಮಸ್ಯೆ ಮತ್ತು 20 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಒದಗಿಸುತ್ತಿದೆ ಅಲ್ಲದೆ ನರ್ಮದೆಯ ಪ್ರವಾಹವನ್ನು ನಿಯಂತ್ರಿಸಿದೆ.
    ನಿಮಗೆ ಭಾರತದ ಯಾವುದೇ ಜನೋಪಕಾರಿ ಯೋಜನೆ ತೆಗೆದುಕೊಂಡು ಅದರ ಇತಿಹಾಸ ತಿರುವಿ ನೋಡಿದರೆ ಇಂತಹ ಅವೈಜ್ಞಾನಿಕ,ಅರೆತಿಳಿವಳಿಕೆಯ ವಿರೋಧವನ್ನು ಒಂದು ಗುಂಪು ಬಹಳ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿರುವುದು ಸ್ಪಷ್ಟವಾಗಿ ಕಾಣುತ್ತದೆ.

    ಅದರ ರಾಜಕೀಯ ಕಾರಣ ಏನೇ ಇರಲಿ,ಇಲ್ಲಿ ತಂತ್ರಜ್ಞಾನ ಹೊಂದಿದ ಯಾವನೋ ಒಬ್ಬ ಬುದ್ಧಿಜೀವಿ ಇಂಥವರಿಗೆ ಗುರು ಆಗಿರಲೇ ಬೇಕಲ್ಲ,ಅಲ್ಲಿ ನನ್ನ ವಿಚಾರ ಲಹರಿ ನಿಲ್ಲುತ್ತದೆ. ಅದು ಪರಿಸರ ತಜ್ಞ, ಎಂಜಿನಿಯರ್, ಅರಣ್ಯ ತಜ್ಞ ಹೀಗೆ ಬೇರೆ ಬೇರೆ ತಜ್ಞರೂ ಒಳಗೊಂಡಿರಬಹುದು. ನಷ್ಟ ಇಲ್ಲದ ಯಾವ ವ್ಯವಹಾರವೂ ಇಲ್ಲ. ಹಾಗಂತ ಬರೀ ನಷ್ಟದ ಲೆಕ್ಕಾಚಾರ ಹಾಕುತ್ತಾ ,ಲಾಭವನ್ನು ಬೇಕಾಗಿ ಮುಚ್ಚಿಟ್ಟು,ಯಾವುದೋ ಸಂಸ್ಥೆಗಳಿಗೆ,ರಾಜಕೀಯ ಲಾಭಕ್ಕೆ ಇಂತಹ ತಜ್ಞರು ತಮ್ಮ ಜ್ಞಾನವನ್ನು ಒತ್ತೆ ಇಡುವುದು ಎಷ್ಟು ಸರಿ? ಇವರಿಗೆ ಎಲ್ಲರಿಗಿಂತಲೂ ಹೆಚ್ಚಿನ ನೈತಿಕತೆ ಇರಬೇಕಾದ್ದು ಅವಶ್ಯಕ ಹಾಗೂ ಅದನ್ನು ಸಮಾಜ ಬಯಸುವುದು,ಸಮಾಜದ ಹಕ್ಕಲ್ಲವೇ?

    ಅರ್ಧ ದಶಕದಿಂದ ಇಂತಹುದೇ ನರಳಿಕೆಯಲ್ಲಿರುವ  ಭಾರತದ ಒಂದು ಪ್ರಮುಖವಾದ ಯೋಜನೆ ಅಂದರೆ,ಅದು ನದಿ ಜೋಡಣೆ. ಇದರ ಮೂಲ ಉದ್ದೇಶ ಉತ್ತರದ ಬಿಹಾರದ ಕೋಸಿ,ಅಸ್ಸಾಮ್ ನ ಬ್ರಹ್ಮಪುತ್ರ ನದಿಗಳ ಪ್ರವಾಹದ ನೀರನ್ನು ದಕ್ಷಿಣದ ನದಿಗಳಿಗೆ ಹರಿಸಿ, ದಕ್ಷಿಣ ನದಿಗಳ ನೀರಿನ ಕೊರತೆಯನ್ನು ನೀಗಿಸಿ, ಉತ್ತರ ಭಾರತದ ನದಿಗಳ ಪ್ರವಾಹ ನೀರನ್ನು ನಿಯಂತ್ರಿಸುವುದಲ್ಲದೆ ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಭಾರತದ ನೀರಿನ ಕೊರತೆಯಿಂದ ಬಳಲುತ್ತಿರುವ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರುವುದು.

    ವರ್ಷ ಇಡೀ ಭಾರತದ ನದಿಗಳು ನೀರಿನಿಂದ ತುಂಬಿ,ಭಾರತದ ಬಂಜರು ಭೂಮಿ ಫಲವತ್ತತೆಯನ್ನು ಹೊಂದಿ,ಅರ್ಧ ಪ್ರಪಂಚಕ್ಕೆ ಅಡುಗೆ ಮನೆಯನ್ನಾಗಿ ಭಾರತವನ್ನು ಪರಿವರ್ತಿಸುವುದು. ಊಹಿಸಿಕೊಂಡರೇ ಪುಳಕವಾಗುತ್ತೆ ಅಲ್ವಾ?

    19ನೇ ಶತಮಾನದ ಅಂತ್ಯದಿಂದಲೇ ಬ್ರಿಟಿಷರಿಂದ ರೂಪಿತಗೊಂಡ ಈ ಯೋಜನೆ ನಮ್ಮಲ್ಲಿ ಇನ್ನೂ ಸಾಕಾರಗೊಂಡಿಲ್ಲ. ಇದಕ್ಕೆ ಆರ್ಥಿಕ ಸಮಸ್ಯೆ ಇಲ್ಲ. ಇರುವುದು ತಜ್ಞರ ತಲೆ,ಬುಡ ಗಳು ಇಲ್ಲದ ಅಭಿಪ್ರಾಯಗಳಲ್ಲಿ. ಈ ಯೋಜನೆ ಜಾರಿಯಾದರೆ,ಯಾವೊಬ್ಬ ಭಾರತೀಯ ಯಾವುದೇ ರಾಜಕಾರಣಿಯ ಹಿಂದೆ ಬಹುಪರಾಕ್ ಹಾಕ್ತಾ ಸುತ್ತಾಡಲ್ಲ,ಅಷ್ಟೊಂದು ಸ್ವಾವಲಂಬಿಯಾಗಿ ಅನ್ನ ದಾತನಾಗುತ್ತಾನೆ. ನಿರ್ಲಕ್ಷಿಸಿರುವ ವ್ಯವಸಾಯದತ್ತ ಯುವಕರು ಬನ್ನಿ ಅಂತ ಕರೆಯುವ ಅವಶ್ಯಕತೆಯೇ ಇಲ್ಲ. ಆತ್ಮ ನಿರ್ಭರ ಭಾರತ ಪ್ರತಿಪಾದನೆಯ ಅದ್ಭುತ ಯೋಜನೆ ಇದು.

    ಇದಕ್ಕಿರುವ ವಿಘ್ನಗಳ ಪಟ್ಟಿಯೇ ತಲೆ ಕೆಡಿಸುತ್ತದೆ. ಅದರಲ್ಲಿಯ ಕೆಲವು ಅಂಶಗಳು,ಸಾಮಾನ್ಯರಿಗೆ ಅರ್ಥ ಆಗುವುವುಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಉತ್ತರ ನದಿಗಳ ಹಿಮಾಲಯದ ಹಿಮದಿಂದ ಕೂಡಿದ ನೀರು,ದಕ್ಷಿಣದ ಮಳೆಯಾಧಾರಿತ  ನದಿಗಳ ಜೊತೆ ಬೆರೆತರೆ ಜಲಚರ ಪ್ರಾಣಿಗಳ ಮೇಲೆ ಭಯಂಕರ ಪರಿಣಾಮ ಉಂಟಾಗಿ ಜೈವಿಕ ಸರಪಣಿ ಮೇಲೆ ಪರಿಣಾಮ ಬಿರುತ್ತೆ ಅನ್ನುವ ಅಂಶ ನೋಡಿ. ಇದರಲ್ಲಿ ಯಾವ ತಜ್ಞತೆ ಇಲ್ಲದ ನನಗೆ ಇದು ಯಾಕೋ ಹೆಚ್ಚಿದ ತಜ್ಞತೆಯನ್ನು ಒಳಗೊಂಡಿದೆಯೇನೂ ಅಂತ ಅನುಮಾನ.

    ನಮ್ಮ ಪೂರ್ವಜರು ಉತ್ತರ,ದಕ್ಷಿಣದುದ್ದಕ್ಕೂ ಸಂಚರಿಸಿ ಕಂಡುಕೊಂಡ ಸತ್ಯವನ್ನು ಇಲ್ಲಿ ಹೇಳ್ತೇನೆ ಕೇಳಿ. ನಮ್ಮಲ್ಲಿ ಗಂಗೆ ಪೂಜೆ ಅಂತ ಒಂದು ಪದ್ದತಿ ಇದೆ. ಅದನ್ನು ಮಾಡುವಾಗ ಮಾಡಿಸುವವ ಉತ್ತರ ಭಾರತದ ನದಿಗಳಾದ ಗಂಗೇ ಯಮುನೆ, ದಕ್ಷಿಣ ನದಿಗಳಾದ ಕಾವೇರಿ,ಗೋದಾವರಿಯರ ಜೊತೆ ಸೇರಿಸಿ, ಎಲ್ಲವೂ ಈ ಬಿಂದಿಗೆಯಲ್ಲಿವೆ ಅಂತ ಹೇಳುವ ಮಂತ್ರ ಗಮನಿಸಿದರೆ,ನನಗೆ ಈ ತಜ್ಞರ ಅನಿಸಿಕೆಯಲ್ಲಿ ಹುಳಿ ಕಾಣುತ್ತದೆ. ಕಾಡಿನ ಬೇರು,ಸೊಪ್ಪು,ಕಟ್ಟಿಗೆ ಬಗ್ಗೆ ಸಾವಿರಾರು ಪುಟಗಳ ಜ್ಞಾನವನ್ನು ತಿಳಿಸಿರುವ ನಮ್ಮ ಗ್ರಂಥಗಳು,ಹಾಗೇನಾದ್ರು ಇವರು ಹೇಳಿದ ಹಾಗೆ ನದಿಗಳ ನೀರಿನ ವ್ಯತ್ಯಾಸ ಇದ್ದದ್ದೇ ಆಗಿದ್ದರೆ,ನಮೂದಿಸದೆ ಇರ್ತಿದ್ದರಾ? ಇವರನ್ನು ಓದಿಸಿ,ತಜ್ಞರನ್ನಾಗಿ ಮಾಡಿದ್ದೇ ತಪ್ಪಾಯ್ತೆನೋ ಅನ್ನುವಷ್ಟು ಭಯಂಕರವಾಗಿ ಹೇಳಿಬಿಡ್ತಾರೆ. ಈ ವರದಿ ತಯಾರಿಸುವ ತಜ್ಞರು ಇದ್ದಾರಲ್ಲ ನಮ್ಮ ದೇಶದಲ್ಲಿ ಇವರನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ! ನೀನು ಖಾಸಗಿಯವನು,ಸರ್ಕಾರದಿಂದ ವರದಿ ನೀಡುವ ಪ್ರಮಾಣಪತ್ರ ನಿನಗಿಲ್ಲ ಎನ್ನುವ ಬಾಲಿಶ ಕಾರಣಗಳು ಇನ್ನೂ ಇವೆ ಇಲ್ಲಿ.

    ಅದಕ್ಕೇ ಏನೋ ಇಂದು ಭಯಂಕರ ಮಳೆ ಬರುತ್ತೆ ಅಂತ ಅವರು ಹೇಳಿದ್ರೆ,ಒಂದು ಹನಿಯೂ ಮಳೆ ಬರಲ್ಲ!ಸ್ವತಂತ್ರ ಭಾರತದ ಮೊದಲ ಡ್ಯಾಮ್ ಆದ ಭಕ್ರಾನಂಗಲ್ ನಿಂದ ಹಿಡಿದು, ಮೊನ್ನೆಯ ಕೊಂಕಣ ರೈಲ್ವೇ ಯೋಜನೆಯ ತನಕ ಈ ಪರಿಸರ ತಜ್ಞರ ನಿರಾಕರಣೆಯೊಂದಿಗೇ ಜಾರಿ ಆಗಿರುವುದು. ಅವರ ಅಭಿಪ್ರಾಯ ಪೂರ್ತಿ ತಪ್ಪು ಅಂತ ಹೇಳಲು ಆಗಲ್ಲ,ಆದರೆ ಸಾಧಕ,ಬಾಧಕಗಳನ್ನು ತುಲನೆ ಮಾಡಿ ವರದಿ ತಯಾರಿಸಬೇಕು. 80 ರ ದಶಕದ ಒಡೆದ ಓಜೋನ್ ಪದರು ಈಗ ಸರಿಯಾಗಿದೆಯಂತೆ! ಅಂದ್ರೆ ಆಗಿಗಿಂತ ಈಗ ಪರಿಸರದ ಮೇಲೆ ಹಾನಿ ಕಡಿಮೆ ಆದ ಹಾಗೆ ಆಯ್ತಲ್ಲ? ಆಗಿದೆಯಾ?

    ರಾಜಕೀಯವಾಗಿ,ಅಥವಾ ಬೇರೆ ಕಾರಣಗಳಿಗೆ ತಜ್ಞರ ವರದಿಗಳು ಬಳಕೆ ಆಗುವತ್ತ ಗಮನ ಹರಿಸಿ, ವಿಷಯದ ಜ್ಞಾನಕ್ಕೆ ಅಗೌರವ ತರುವುದನ್ನು ನಿಲ್ಲಿಸಬೇಕು. ಇದರ ಮೊದಲ ಹೆಜ್ಜೆ ತಜ್ಞರಿಂದಲೇ ಆಗಬೇಕು. ಇಲ್ಲವಾದರೆ,ವಿದೇಶಕ್ಕೆ ಹೋದ ತಜ್ಞರೇ ನಮ್ಮ ದೇಶಕ್ಕೆ ಹೆಚ್ಚು ಉಪಕಾರ ಮಾಡಿದ್ದಾರೆ ಅಂತ ಮುಂದಿನ ಪೀಳಿಗೆ ನಮ್ಮನ್ನು ಹಾಸ್ಯ ಮಾಡಬಹುದು.

    ಮಾನ್ಯತೆ ಪಡೆದ ಕಾನೂನು ತಜ್ಞರ ಅಭಿಪ್ರಾಯಗಳೇ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಇವು ಬೇಗ ಸಮಾಜದ ಕಣ್ಣಿಗೆ ಕಾಣುತ್ತವೆ. ಆದರೆ ಕೆಲವು ತಜ್ಞರ ಅಭಿಪ್ರಾಯಗಳು ಯಾರ ಗಮನಕ್ಕೂ ಬಾರದೆ ಬೀರುವ ಪರಿಣಾಮ ತುಂಬಾ ಇರುತ್ತದೆ. ಅಂತಹವರು ಅವರ ಆತ್ಮಸಾಕ್ಷಿಯನ್ನು ಎದುರಿಗಿಟ್ಟುಕೊಂಡು ಕೆಲಸಮಾಡಿ, ತಮ್ಮ ಉನ್ನತಿಗೆ ಕಾರಣವಾದ ಈ ಅಮಾಯಕ ಸಮಾಜಕ್ಕೆ ಋಣ ತೀರಿಸುವ ಕೆಲಸ ಮಾಡಬೇಕು.

    Photo by Chinta Pavan Kumar on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    3 COMMENTS

    1. ನಮ್ಮಲ್ಲಿರವ ರಾಜಕೀಯ ಜ್ಞಾನ / ಗಂಧವೂ ಇಲ್ಲದ ಬುಡಬುಡಕಿ ರಾಜಕಾರಣಿಗಳಿಂದ ಇದೆಲ್ಲವೂ ಅಪೇಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ ಅಂತ ಯೋಚನೆ ಮಾಡಬೇಕು.
      ಅರ್ಧಂಬರ್ಧ ತಿಳಿದಿರುವ ಜ್ಞಾನಿ/
      ಚೇಲಾಗಳೆ ಇವರ ಜೀವಾಳ.ಪ್ರತಿಯೊಂದೂ ವೈಜ್ಞಾನಿಕವಾಗಿ ಯೋಚನೆ ಮಾಡಿದರೆ ಮಾತ್ರ ಈ ಭೂಮಂಡಲ ಸುಂದರ ಮತ್ತು ಆರೋಗ್ಯವಾಗಿರುತ್ತದೆ.ಅದು ಒಂದು ದೇಶದ ಶಾಸನಾಗಿರಲಿ ,ಧರ್ಮ ಆಗಿರಲಿ ,ರಾಜ್ಯಭಾರ ಇರಲಿ ಸೈಂಟಿಫಿಕ್ ಆಗಿರಬೇಕು. .

    2. ಅಭಿವೃದ್ಧಿ ಮತ್ತು ಸಂರಕ್ಷಣೆಯ ನಡುವಿನ ಸಂಘರ್ಷದ ದೃಷ್ಟಿಕೋನದಲ್ಲಿ ಒಂದು ಚಿಂತನ-ಪ್ರಚೋದಕ ಲೇಖನ.

    LEAVE A REPLY

    Please enter your comment!
    Please enter your name here

    Latest article

    error: Content is protected !!