‘ ಚಂದ್ರ ‘…… ಹುಣ್ಣಿಮೆಯಲ್ಲಿ ಆಗ ತಾನೇ ತುಪ್ಪದ ಕೈಯಿಂದ ಕಟ್ಟಿದ ರವೆ ಉಂಡೆಯಂತೆ. ಒಮ್ಮೆ ನಿಸರ್ಗವೇ ಅರ್ಧ ತಿಂದುಳಿಸಿದ ರಸಗುಲ್ಲದಂತೆ . ಮತ್ತೊಮ್ಮೆ ನೈಲ್ ಕಟ್ಟರಿನಿಂದ ಕತ್ತರಿಸಿದ ಉಗುರಿನ ಚೂರಿನ ಹಾಗೆ ಬಾನಿನಲ್ಲಿ ಕಾಣಸಿಗುತ್ತದೆ.
ಅಮ್ಮನ ತೋಳಿನಲ್ಲಿ ಇರುವ ಮುಗ್ಧ ಮಗುವಿಗೆ ಚೆಂದದ ಮಾಮನಾಗಿ ,ಪ್ರೇಮಿಗಳಿಗೆ ಸಾಕ್ಷಿಯಾಗಿ ,ಒಮ್ಮೊಮ್ಮೆ ಕತೆಯಾಗಿ ಕವನವಾಗಿ,ಗ್ರಹವಾಗಿ ಗ್ರಹಣವಾಗಿ , ಬೆಳದಿಂಗಳ ಆಸೆಯಾಗಿ ಅಮಾವಾಸ್ಯೆಯ ನಿರಾಸೆಯಾಗಿ,ಹಸೀ ಸುಳ್ಳಾಗಿ ನೈಜ ನಿಜವಾಗಿ , ಭಕ್ತಿಯಾಗಿ ಶಕ್ತಿಯಾಗಿ ,ನಂಬಿಕೆಯಾಗಿ ಮೂಢನಂಬಿಕೆಯಾಗಿ , ಹಬ್ಬವಾಗಿ ಹರಿದಿನವಾಗಿ, ಭಾಗಶಃ ಬದುಕಿನ ಭಾಗವಾಗಿ ಸದಾ ನಮ್ಮ ಜೊತೆಗಿರುತ್ತದೆ .
ಆಕಾಶದ ಇರುಳಿನ ತಂಪುಗ್ರಹ ಈ ಚಂದಮಾಮ . ಗ್ರಹಣಕ್ಕೊಳಗಾಗುವ ಕೆಲವೇ ಗ್ರಹಗಳಲ್ಲಿ ಚಂದ್ರ ಗ್ರಹವೂ ಒಂದು.ಅಮ್ಮನ ಬಾಯಿಂದ ಕಂದ ಕೇಳಿಸಿಕೊಳ್ಳುವ ಮೊದಲ ಸುಳ್ಳು…. ಇದನ್ನ ತಿಂದುಬಿಡು ನಿನಗೆ ಚಂದಮಾಮನ ಹತ್ರ ಕರ್ಕೊಂಡ್ ಹೊಗ್ತೀನಿ ಅಂತ . ಆಗಿನ ಪ್ರಿಯತಮ ತನ್ನ ಪ್ರೇಯಸಿಗೆ ಕೊಡುತ್ತಿದ್ದ ಹುಸಿ ಭರವಸೆ ನಿನಗೋಸ್ಕರ ಚಂದ್ರನ್ನ ಬೇಕಾದ್ರೂ ತಂದುಕೊಡ್ತೀನಿ ಅಂತ.
ಹಳೆಯ ಸಿನಿಮಾಗಳಲ್ಲಿ ನಾಯಕ ನಾಯಕಿ ಇಬ್ಬರೂ ತಮ್ಮ ಅದರಗಳನ್ನು ಹತ್ತಿರ ತರುತ್ತಿದ್ದಂತೆ ನಿರ್ದೇಶಕರು ಚಂದಿರನ ಷಾಟ್ ತೋರಿಸುತ್ತಿದ್ದರು……ಅದೊಂಥರ ಮೂನಿಂಗ್ ಫುಲ್ ಷಾಟ್ .ಮದುವೆಯಾದ ನೂತನ ಜೋಡಿಯ ಮೊದಲ ರಾತ್ರಿಯ ಹೆಸರೇ ಮಧುಚಂದ್ರ . ಬೆಲೆ ಕಟ್ಟಲಾಗದ ಬೆಳದಿಂಗಳ ಒಡೆಯ ಈ ಚಂದ್ರ . ಬಾಲಕನೊಬ್ಬ ಮೊದಲು ಬಿಡಿಸಿದ ಚಿತ್ರದಲ್ಲಿ ಕಾಣುವ ಕಲಾಕೃತಿ ಈ ಚಂದ್ರ . ಈಶ್ವರನ ಮುಡಿಯಲ್ಲಿ ಮುಡಿದಿರುವ ಸೌಂದರ್ಯ ಪರಿಕರ . ಸಾಹಿತಿಗಳ ಸ್ಪೂರ್ತಿ, ಲೇಖಕರ ಮೂರ್ತಿ ಇದು .
ಇಂತಹ ಚಂದ್ರನ ಮೇಲೂ ಗಣೇಶನನ್ನು ನೋಡಿ ನಕ್ಕಿದ ಅಪವಾದವಿದೆ . ಬಾಲ್ಯದಲ್ಲಿ ಊರಿಗೆ ಹೋದಾಗೋ ಇಲ್ಲ ಊರಿನವರು ನಮ್ಮ ಮನೆಗೆ ಬಂದಾಗ್ಲೋ ಅವರುಗಳ ಜೊತೆ ಕೂತ ನಮಗೆ ಅಮ್ಮ ಬೆಳದಿಂಗಳ ಬೆಳಕಿನಲ್ಲಿ ಅನ್ನ ಸಾರನ್ನು ಕಲಿಸಿ ಕೈತುತ್ತು ಹಾಕುತ್ತಿದ್ದಾಗ ನಾವು ಸವಿಯುತ್ತಿದ್ದರೆ ಚಂದ್ರನ ಅಂಗಳದಲ್ಲೇ ಕೂತು ತಿನ್ನುತ್ತಿದ್ದೇವೇನೋ ಎನ್ನುವ ಸ್ವರ್ಗಾನುಭವವಾಗುತ್ತಿತ್ತು .
ಹೀಗೆ ನಿಬ್ಬೆರಗಾಗಿ ಚಂದ್ರನನ್ನು ನೋಡುತ್ತಾ ಅಮ್ಮನ ತೋಳಿನಿಂದ….. ಬೇಬಿ ವಾಕರಿನಿಂದ ಇಳಿದ ಮಗು ತನ್ನೊಂದಿಗೇ ಬೆಳೆದ ಜಗತ್ತು ಮತ್ತು ವಿಜ್ಞಾನದ ಸಹಕಾರದಿಂದ ಸೀದಾ ಹೋಗಿ ಲಕ್ಷಾಂತರ ಕಿಲೋಮೀಟರ್ ದೂರದ ಚಂದ್ರನ ಮೇಲೆಯೇ ಕಾಲಿಟ್ಟು ಇತಿಹಾಸ ನಿರ್ಮಿಸಿದ. ಚಂದ್ರನಲ್ಲಿ ಏನಿದೆ ಏನಿಲ್ಲ ಎಂಬುದನ್ನು ಕಣ್ಣಾರೆ ಕಂಡು ಸಾಕ್ಷಿ ಸಮೇತ ಹಿಂದಿರುಗಿದ.
ಇವತ್ತಿಗೂ ವಿಜ್ಞಾನಿಗಳು ಸಂಶೋಧನೆಗಳನ್ನು ನಿತ್ಯ ಪೂಜೆಗಳಂತೆ , ಜ್ವಾಲೆ ಆರದ ಯಾಗದಂತೆ ಮಾಡುತ್ತಿದ್ದಾರೆ . ಅಲ್ಲಿಯೂ ಗಾಳಿ ನೀರು ಇದೆ ಎಂದು ಖಾತ್ರಿಯಾದರೆ ಸಾಕು ಮನುಷ್ಯ ಚಂದ್ರಮಂಡಲದಲ್ಲಿ ರಿಯಲ್ ಎಸ್ಟೇಟ್ ಆಫೀಸು ತೆರೆಯುವುದು ಗ್ಯಾರಂಟಿ .
ಅಮೇರಿಕ, ರಷ್ಯ, ಜರ್ಮನಿ, ಇಟಲಿ, ಚೀನಾ, ,ಜಪಾನ್ ನಂತಹ ದೈತ್ಯ ರಾಷ್ಟ್ರಗಳು ಸಹಸ್ರಾರು ಕೋಟಿಗಳನ್ನು ವ್ಯಯಿಸಿ ದೊಡ್ಡ ದೊಡ್ಡ ವಿಜ್ಞಾನಿಗಳನ್ನು ನೇಮಿಸಿ ಗ್ರಹವನ್ನೇ ಗೃಹವನ್ನಾಗಿಸಲು ಪಣ ತೊಟ್ಟಿದ್ದಾರೆ . ಅದರ ಮೇಲೆ ಉಪಗ್ರಹಗಳನ್ನು ಇಳಿಬಿಟ್ಟಿದ್ದಾರೆ , ಪ್ರಯೋಗಾಲಯಗಳಲ್ಲಿ ತಂತ್ರಜ್ಞಾನ ಮತ್ತು ತಂತ್ರಗಾರಿಕೆಯನ್ನು ಎತ್ತುಗಳಂತೆ ದುಡಿಸುತ್ತಿದ್ದಾರೆ.
ಇವರ ಅನ್ವೇಷಣೆ ಫಲಿಸಿ ಪ್ರಯತ್ನ ಯಶಸ್ವಿಯಾಗಿ ಜನ ಜೀವನ ನಡೆಸಲು ಶುರು ಮಾಡಿದರೆ …..ಚಂದ್ರನ ಮೇಲೆ ಅಮ್ಮ ಮಗೂನ ಎತ್ಕೊಂಡು ಬಟ್ಲಲ್ಲಿ ಅನ್ನ ಕಲ್ಸ್ಕೊಂಡು ಮಗುವಿಗೆ ತಿನ್ನಿಸುತ್ತ ದೂರದ ಭೂಮಿಯನ್ನು ತೋರಿಸಿಕೊಂಡು ಅದರ ಬಗ್ಗೆ ಕತೆಗಳನ್ನು ಹೇಳುತ್ತಾಳೇನೋ ಅನ್ಸುತ್ತೆ .
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಲೇಖನ ತುಂಬಾ ಚೆನ್ನಾಗಿದೆ. . ಓದುತ್ತಿದ್ದರೆ ಮೂನ್ ಇಸ್ ಸೂನ್ ಅನ್ನೋ ಭಾವನೆ ಬರುತ್ತೆ.
Imagination of Mr.Masti undoubtedly good which matches the art work of Ms.Kirana . The last punch in the article where in generation to come mother while feeding child will show earth from moon!. Good article.
Good Articl sir