18 C
Karnataka
Sunday, November 24, 2024

    ಗಲ್ಫ್ ನಾಡಿನಲ್ಲಿ ಗಣೇಶ ಉತ್ಸವ

    Must read

    ಮಮತಾ ಕುಲಕರ್ಣಿ

    ಭಾರತ ದೇಶ ತನ್ನದೇ ಆದ ವೈವಿಧ್ಯತೆಗಳಿಂದ ದೊಡ್ಡ ರಾಷ್ಟ್ರವಾಗಿ ಮೆರೆಯುತ್ತಿದೆ. ಅದೇ ರೀತಿ ಅರಬ್ ಸಾಮ್ರಾಜ್ಯವೆಂದು ಪ್ರಸಿದ್ಧಿಯಾಗಿರುವ ಗಲ್ಫ್ ನಾಡು ತನ್ನದೇ ಆದ ವಿಶಿಷ್ಟತೆಗಳಿಂದ ಕೂಡಿದೆ.

    ವಿಧವಿಧದ ರೆಂಬೆ-ಕೊಂಬೆಗಳಂತೆ ದುಬೈ,ಕತಾರ್, ಅಬು ದಾಬಿ, ಬೆಹರಿನ್,ಹೀಗೆ ಅನಂತ ದೇಶಗಳಿಂದ ಕೂಡಿದ ಒಂದು ಹೆಮ್ಮರ ಗಲ್ಫ್ ನಾಡು. ಈ ನಾಡಲ್ಲಿ ಅನೇಕ ಭಾರತೀಯರು ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದ ವಾಸವಾಗಿ ಅನಿವಾಸಿ ಭಾರತೀಯರಾಗಿದ್ದಾರೆ. ಆದರೆ ಕುಟುಂಬ ಹಾಗೂ ತಮ್ಮ ದೇಶದಿಂದ ದೂರವಿದ್ದರೂ ತಮ್ಮ ದೇಶದ ಸಂಪ್ರದಾಯ ಹಬ್ಬ-ಹರಿದಿನಗಳನ್ನು ತಪ್ಪದೆ ಈ ನಾಡಲ್ಲೂ ಆಚರಿಸುವುದು ಒಂದು ಹೆಮ್ಮೆ ಹಾಗೂ ಹಾಗೂ ವಿಶಿಷ್ಟ.

    ದುಬೈನಲ್ಲಿ ಎಷ್ಟೊ ಹಿಂದೂ ಭಾರತೀಯರು ಇಂಡಿಯನ್ ಕಮ್ಯುನಿಟಿ ತರಹ ಭಾರತದ ವಿವಿಧ ಭಾಗದ ಜನರು ಸೇರಿ ಸಂಘಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಸದಸ್ದೆಯರಾಗಿ ಅದೆಷ್ಟೊ ಅಪರಿಚಿತ ಭಾರತೀಯರು ಸ್ನೇಹ ಬಾಂಧವ್ಯದ ಜೊತೆಗೆ ಪುಟ್ಟ ಕೌಟುಂಬಿಕ ಭಾವನೆಗಳೊಂದಿಗೆ ಹಬ್ಬ-ಹರಿದಿನಗಳನ್ನು ಸಂಭ್ರಮಿಸುತ್ತಾರೆ. ಬರ್ ದುಬಾಯಿ, ಮೀನಾ ಬಜಾರ್ ನಲ್ಲಿ ಪ್ರತಿ ವರ್ಷ ದೊಡ್ಡ ಗಣೇಶನ ಮೂರ್ತಿ ಇಟ್ಟು ಎಲ್ಲ ರೀತಿಯ ಸಂಪ್ರದಾಯ ಆಚಾರ ವಿಚಾರಗಳೊಂದಿಗೆ ಮೋದಕದ ಪ್ರಸಾದ ದೊಂದಿಗೆ ಐದು ದಿನ ಗಣೇಶ ಉತ್ಸವ ನಡೆಯುತ್ತದೆ.

    ಮೀನಾ ಬಜಾರ್ ರಸ್ತೆಯಲ್ಲಿ ಎಷ್ಟೊ ವಿಧವಿಧದ ಗಣೇಶ ಮೂರ್ತಿಗಳು ಮಾರಾಟ ವಾಗುತ್ತವೆ. ಎಷ್ಟೋ ಜನರು ಭಾರತದಂತೆ ತಮ್ಮ ತಮ್ಮ ಮನೆಗಳಿಗೆ ಮೂರ್ತಿಗಳನ್ನು ಖರೀದಿಸಿ ಪೂಜೆ ಮಾಡಿ ಹಬ್ಬ ಆಚರಿಸುವರು. ಈ ದಿನಗಳಲ್ಲಿ ಹಬ್ಬದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು ಗಣೇಶನ ದರ್ಶನ ಮಾಡುತ್ತಾರೆ. ಸಂಜೆ ಭಜನೆ ಕೀರ್ತನೆಗಳು ನಮ್ಮ ದೇಶದ ಆಚರಣೆಗಳನ್ನು ನೆನಪಿಸುತ್ತವೆ. ಚಿಕ್ಕ ಪುಟ್ಟ ಮಕ್ಕಳಿಗೆ ತಮ್ಮ ಸಂಪ್ರದಾಯವನ್ನು ಪರಿಚಯಿಸಲು, ದೂರದಲ್ಲಿ ತಮ್ಮ ಕುಟುಂಬಸ್ಥರಿಂದ ದೂರವಿದ್ದು ಅವರನ್ನು ಮನದಲ್ಲಿ ನೆನೆಯುತ್ತಾ ಅಪರಿಚಿತರೊಂದಿಗೆ ಸ್ನೇಹದಿಂದ, ಭಕ್ತಿಭಾವನೆಗಳನ್ನು ಗಣೇಶನ ಪಾದಕ್ಕೆ ಇಟ್ಟು ಭಕ್ತಿಪೂರ್ವಕವಾಗಿ ನಮಿಸುತ್ತಾರೆ.

    ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಸಾರ್ವಜನಿಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದಾದರೂ, ಹೆಚ್ಚಾಗಿ ಸಾಮೂಹಿಕ ಆಚರಣೆಗೆ ನಿರ್ಬಂಧ ಇರಲಿ ಎಂದು ಕಮ್ಯುನಿಟಿ ಅವರ ಅಭಿಪ್ರಾಯ ಹಾಗೂ ಮನವಿ. ಜನರು ಕೂಡ ತಮ್ಮ ತಮ್ಮ ಮನೆಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಮಾಡಿ ಆಚರಿಸುವ ಮನೋಭಾವನೆಯಲ್ಲಿದ್ದಾರೆ.ಮಿಸ್ ಕಿಸ್ನಿ ದುಬೈವಾಸಿ, ಗಣೇಶ ಮೂರ್ತಿಗಳನ್ನು ಮಾಡಿ ಮಾರುವ ವ್ಯಾಪಾರಿ.ಒಂದು 15-50ಸೆಂಮಿ ಎತ್ತರದ ಮೂರ್ತಿಯನ್ನು ಮಾಡಲು 10ಕೆಜಿ ಮಣ್ಣನ್ನು ಬಳಸುವರು.ಅವರ ಪ್ರಕಾರ ಈ ಮೂರ್ತಿಯ ವಿಸರ್ಜನೆಗೆ 3-4ಗಂಟೆ ಸಾಕು ಹಾಗು ಮಣ್ಣಿನ ಪೋಷಕಾಂಶಗಳು ಸಸಿಗಳನ್ನು ಬೆಳೆಸಲು ಸಹಕಾರಿ. ಈ ಬಾರಿ ಹೆಚ್ಚಿನ ಜನರು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ ಎಂಬುದು ಅವರ ಅನಿಸಿಕೆ.

    ಒಟ್ಟಿನಲ್ಲಿ ಸಂದರ್ಭ ಹೇಗೆ ಇರಲಿ ಯಾವ ದೇಶದಲ್ಲೆ ಇರಲಿ,ಆಚರಣೆ ನಿಲ್ಲದೆ ನಿಜವಾದ ಸಂಪ್ರದಾಯಗಳೊಂದಿಗೆ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ವಿಧಿವಿಧಾನಗಳನ್ನು ಕೀರ್ತನೆಗಳನ್ನು ಭಾವದಿಂದ ಮಾಡುವುದು ಮುಖ್ಯ. ಆಡಂಬರ ತಾತ್ಕಾಲಿಕ ಖುಷಿಗಾದರೂ ಮೂಲ ಉದ್ದೇಶ ಮರೆಯಬಾರದು. ರಾಸಾಯನಿಕಯುಕ್ತ ಮೂರ್ತಿ ಪರಿಸರಕ್ಕೆ ಹಾನಿಕರ ಹಾಗೆ ವಿಸರ್ಜನೆಯಿಂದ ನೀರು ಕಲುಷಿತ. ಪಟಾಕಿ ಸಿಡಿಸುವುದು ವಾಯುಮಾಲಿನ್ಯಕ್ಕೆ ದಾರಿ. ದೇವರು ಪರಿಸರಕ್ಕೆ ಹಾನಿ ಮಾಡಿ ಪೂಜಿಸು ಎಂದು ಎಲ್ಲೂ ಹೇಳಿಲ್ಲ ಅಲ್ಲವೇ. ಹಾಗಾದರೆ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಸಂಪ್ರದಾಯಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸೋಣ. ದುಬೈನಲ್ಲೇ ಇರಲಿ, ಅಮೆರಿಕದಲ್ಲಿ ಇರಲಿ, ಸ್ವದೇಶದಲ್ಲೇ ಇರಲಿ ಭಾರತೀಯರಾಗಿ ಇರೋಣ.

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    spot_img

    More articles

    3 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!