ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಕಾಡು ಪ್ರಾಣಿಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತರು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು.
ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಗಣೇಶನನ್ನು ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು.
ಚೌತಿ ಗಣೇಶನನ್ನು ನಿತ್ಯ ಪೂಜೆ ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು. ದಕ್ಷಿಣ ಭಾರತದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.
ಇನ್ನು ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ / ಕಡುಬು ತಯಾರಿಸಿ ನೈವೇದ್ಯ ಅರ್ಪಿಸಿದರೇನೇ ಹಬ್ಬ ಪರಿಪೂರ್ಣವಾಗುವುದು ಎಂಬ ನಂಬಿಕೆಯಿದೆ. ಮೋದಕ ಪ್ರಿಯ ನಮ್ಮ ಗಣೇಶ.ಅಂಥ ಕೆಲವು ಮೋದಕಗಳ ಪರಿಚಯ ಇಲ್ಲಿದೆ.
1. ಕಡುಬು/ ಮೋದಕ – ಎಣ್ಣೆಯಲ್ಲಿ ಕರಿಯುವ ವಿಧಾನ
ಬೇಕಾಗುವ ಪದಾರ್ಥಗಳು:ಮೈದಾ ಹಿಟ್ಟು/ಗೋಧಿ ಹಿಟ್ಟು 2 ಬಟ್ಟಲು
2 ದೊಡ್ಡ ಚಮಚ ಚಿರೋಟಿ ರವೆ
ಬೆಲ್ಲ 1 ಬಟ್ಟಲು
ತುರಿದ ಕೊಬ್ಬರಿ 1 ಬಟ್ಟಲು
ಏಲಕ್ಕಿ ಪುಡಿ
ಸ್ವಲ್ಪ ಎಣ್ಣೆ
ಹೂರಣ: ಮೊದಲಿಗೆ ಪುಡಿ ಮಾಡಿದ ಬೆಲ್ಲ , ಏಲಕ್ಕಿ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ
ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡುತ್ತಾ ಸೌಟ್ ನಿಂದ ಕೈಆಡಿಸುತ್ತಿರಬೀಕು.
ಬೆಲ್ಲ ಕಾದು ನೀರಾಗಿ ನಂತರ ಗಟ್ಟಿಯಾಗಿ ಬೆಲ್ಲ ಮತ್ತು ಕೊಬ್ಬರಿಯ ಹೂರಣ ರೆಡಿಯಾಗುತ್ತದೆ.
ಕಣಕ: ಮೈದಾ /ಗೋಧಿ , ಚಿರೋಟಿ ರವೆ ಜೊತೆ ಸೇರಿಸಿ ಸ್ವಲ್ಪ ಗಟ್ಟಿಯಿರುವಂತೆ ಎಣ್ಣೆ ಮತ್ತು ನೀರಿನೊಡನೆ ನಾದಿಕೊಳ್ಳಬೇಕು. ಕಲೆಸಿದ ಹಿಟ್ಟು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು.
ಈಗ, ಹಿಟ್ಟನ್ನು ಒಂದು ಉಂಡೆಯಷ್ಟು ತೆಗೆದುಕೊಂಡು ಪೂರಿಯ ಗಾತ್ರದಲ್ಲಿ ಲಟ್ಟಿಸಿ ಅದರಲ್ಲಿ ಸ್ವಲ್ಪ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಅದರ ಮೇಲ್ತುದಿಯನ್ನು ಮುಚ್ಚಬೇಕು. (ಮೋದಕ ನೋಡಲು ಬೆಳ್ಳುಳ್ಳಿಯ ಆಕಾರದಲ್ಲಿರುವಂತೆ ತುದಿಯನ್ನು ಮುಚ್ಚಿ).
ಈ ರೀತಿ ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.
ಅದೇ ಹಿಟ್ಟನ್ನು ಹಪ್ಪಳದಂತೆ ಲಟ್ಟಿಸಿ ಹೂರಣವನ್ನು ಅದರಲ್ಲಿ ಇಟ್ಟು ಎರಡೂ ತುದಿಯನ್ನು ಅಂಟಿಸಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ. ಅದು ಕಡುಬು.
2. ಆವಿಯಲ್ಲಿ ಬೇಯಿಸಿ ಮಾಡುವ ಮೋದಕ/ ಕುಚ್ಚಿದ ಕಡುಬು.
ಬೇಕಾಗುವ ಪದಾರ್ಥಗಳು:
ಕಣಕ:ಒಂದು ಕಪ್ ಅಕ್ಕಿ ಹಿಟ್ಟು
ಒಂದೂವರೆಯಿಂದ ಎರಡು ಕಪ್ಪು ನೀರು
ಚಿಟಿಕೆ ಉಪ್ಪು, ಎಣ್ಣೆ.
ಮಾಡುವ ವಿಧಾನ :ಒಂದು ಬಾಣಲೆಯಲ್ಲಿ ನೀರು ಅರ್ಧ ಟೀ ಸ್ಪೂನ್ ಎಣ್ಣೆ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. ಅಕ್ಕಿಹಿಟ್ಟು ಬಿಸಿಯಾಗಿರುತ್ತದೆ. ಆರಿದ ನಂತರ ಚೆನ್ನಾಗಿ ನಾದಿ ಒಂದು ನಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು ಹಪ್ಪಳದ ಗಾತ್ರ ಲಟ್ಟಿಸಿ ಕಾಯಿ ಹೂರಣ ಇಟ್ಟು ಎರಡೂ ತುದಿ ಅಂಟಿಸಿ ಕಡುಬು ಮಾಡಿ.
ಹಿಟ್ಟನ್ನು ಒಂದು ಉಂಡೆಯಷ್ಟು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಅದರ ಮೇಲ್ತುದಿಯನ್ನು ಮುಚ್ಚಬೇಕು. ಮೋದಕ ನೋಡಲು ಬೆಳ್ಳುಳ್ಳಿಯ ಆಕಾರದಲ್ಲಿರುವಂತೆ ತುದಿಯನ್ನು ಮುಚ್ಚಿ.
ಈಗ ಕಡುಬು ಮತ್ತು ಮೋದಕವನ್ನು ಆವಿಯಲ್ಲಿ ಬೇಯಿಸಿ.
3 ಕರ್ಜಿಕಾಯಿ
ಒಣ ಕೊಬ್ಬರಿ ತುರಿ, ಬೆಲ್ಲ, ಏಲಕ್ಕಿ, ಬಿಳಿ ಎಳ್ಳು, ಗಸಗಸೆ ಸೇರಿಸಿ ಪುಡಿ ಮಾಡಿ ಕಲೆಸಿ ಹೂರಣ ಕಲೆಸಿಕೊಂಡು
ಮೈದಾ, ರವೆಯ ಕಣಕದಲ್ಲಿಟ್ಟು ಕಡುಬು ಎಣ್ಣೆಯಲ್ಲಿ ಕರಿಯುವುದು.
4 ಖಾರದ ಕಡುಬು
ಬೇಳೆಗಳನ್ನು ನೆನೆಸಿ ರುಬ್ಬಿ ಉಪ್ಪು ಖಾರ ಹಾಕಿ ಅಕ್ಕಿಹಿಟ್ಟಿನ ಕಣಕದಲ್ಲಿಟ್ಟು ಬೇಯಿಸುವುದು.
ಅರಿಶಿನ ಎಲೆಯಲ್ಲಿ ಇಟ್ಟು ಕುಚ್ಚಿದ ಕಡುಬು ಮಾಡಿದರೆ ಅದರ ಘಮವೇ ಬೇರೆ.
5ಅಕ್ಕಿತರಿ ಕಡುಬು
ಇದು ಮಲೆನಾಡ ಅಡಿಗೆ. ಆವಿಯಲ್ಲಿ ಬೇಯಿಸುವ ಈ ಕಡುಬುಗಳು ರುಚಿಕರ ಹಾಗೂ ಆರೋಗ್ಯಕರ. ಅಕ್ಕಿತರಿ ಉಪಯೋಗಿಸಿ ಮಾಡುತ್ತಾರೆ.
6 ಹಲಸಿನ ಹಣ್ಣಿನ ಕಡುಬು
ಮಳೆಗಾಲದಲ್ಲಿ ಮಲೆನಾಡಿನಲ್ಲಿ ಹಲಸಿನ ಮೇಳ ನಡೆಯುತ್ತದೆ .
ಈ ಹಣ್ಣಿನಲ್ಲಿ ತರತರದ ಖಾದ್ಯಗಳನ್ನು ಮಾಡುತ್ತಾರೆ . ಅದರಲ್ಲಿ ಹಲಸಿನ ಇಡ್ಲಿ ಅಥವಾ ಕಡುಬು ಕೂಡ ಒಂದು.
7 ಕುಂಬಳ ಕಾಯಿ ಕಡುಬು
ಸಿಹಿ ಕುಂಬಳಕಾಯಿ ಹಾಕಿ ಮಾಡುತ್ತಾರೆ. ಇದು ತುಂಬ ಆರೋಗ್ಯಕರವಾದದ್ದು.
8ಕೊಟ್ಟೆ ಕಡುಬು
ಹಲಸಿನ ಅಥವಾ ಬಾಳೆ ಎಲೆಗಳಲ್ಲಿ ಕೊಟ್ಟೆ ಮಾಡಿ ಅದಕ್ಕೆ ಇಡ್ಲಿಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸುವುದು.
ಒಟ್ಟಿನಲ್ಲಿ ಕಣಕ ಎರಡೆ. ಒಂದು ಅಕ್ಕಿ ಹಿಟ್ಟಿನದು ಇನ್ನೊಂದು ಗೋಧಿ/ ಮೈದಾಹಿಟ್ಟಿನದು. ಅದರೊಳಗಿನ ಹೂರಣ ಮಾತ್ರ ನಿಮ್ಮ ಇಚ್ಛೆಯಂತೆ ಬದಲಾಯಿಸಿ ಕೊಳ್ಳಬಹುದು.
ಈಗಿನ ಜನರೇಶನ್ ಮಕ್ಕಳಿಗೆ ಬೇಕಾದಲ್ಲಿ ನೀವು
ಡ್ರೈಫ್ರೂಟ್ ಹೂರಣ ಮಾಡಿ ಮೋದಕ ತಯಾರಿಸಬಹುದು, ಕ್ಯಾರೆಟ್ ಹೂರಣ ಮಾಡಿ ಕಡುಬು , ಚಾಕೊಲೇಟ್ ಮೋದಕ, ರವೆ ಮೋದಕ ಹೀಗೆ ನಾನಾ ತರಹದ ಮೋದಕ, ಕಡುಬುಗಳನ್ನು ಮಾಡಿ ವಿಘ್ನರಾಜನಿಗೆ ನೈವೇದ್ಯಮಾಡಬಹುದು.
Photo by Mohnish Landge on Unsplash
ನಾಳೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೆ. ಸರಿಯಾದ ಸಮಯಕ್ಕೆ ರೆಸಿಪಿ ನೀಡಿದ ಭಾರತಿ ಅವರಿಗೆ ಧನ್ಯವಾದ.
ಮೊದಲು ಭಾರತಿ ಕಳಿಸಿದ ವಿವಿಧ ಮೋದಕಗಳು ಸೂಪರ್. ಹವ್ಯಕರಲಿಗಣಪನಿಗೆ 21 ಬಗೆಯ ತಿಂಡಿ ಮಾಡುವರು . ಉಂಡಳೇ ಕಾಳು, ಕೆಸವಿನ ವಡೆ, Akkiವಡೆ, ಅತ್ರಸ, Chakkuli, Pancha kajjaya ಇವು ಮಾಡಲೇ ಬೇಕು. ಮಂಗಳೂರಿನ ಕಡೆ ಅಷ್ಟಮಿಯಲಿ ಮೂಡೆ ಮಾಡಲೇ ಬೇಕು
Very nice info about different recepies
ಧನ್ಯವಾದಗಳು
ವಿವಿಧ ಬಗೆಯ ಸಿಹಿ ಅಡುಗೆಗಳ ಮಾಹಿತಿಯನ್ನು ಒದಗಿಸಿ , ಗಣೇಶನಿಗೆ ನಿವೇದನೆ ಮಾಡಿ, ಸ್ವಾದಿಷ್ಟವಾದ ಸಿಹಿಯಾದ ರುಚಿಕರವಾದ ಭೋಜನವನ್ನು ಸವಿಯುತ್ತಾ, ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಹಳೆಯ/ಹೊಸ, ಮಲೆನಾಡಿನ/ಬಯಲುಸೀಮೆಯ ಸಂಪ್ರದಾಯ ಬದ್ಧ ಆಚರಣೆಗಳನ್ನು ಮೆಲುಕು ಹಾಕುವಂತೆ ಪ್ರೇರೇಪಿಸಿದ ಭಾರತಿಯವರಿಗೆ ಧನ್ಯವಾದಗಳು.
ಭಾರತಿ.. ಮೋದಕಗಳ ತಯಾರಿಕೆಯ ಬಗ್ಗೆ ತುಂಬ ಚೆನ್ನಾಗಿ ವಿವರಿಸಿದ್ದೀರಿ. ಬಾಯಲ್ಲಿ ನೀರೂರುವ ಚಿತ್ರಗಳು. ಒಂದೊಂದು ವಿಧವನ್ನೂ ಪ್ರಯೋಗ ಮಾಡಿ ನೋಡುವೆ. ಧನ್ಯವಾದಗಳು .
ಒಂದೊಂದು ವಿಧವನ್ನೂ try ಮಾಡಿ ಹೇಗಿತ್ತು ಎಂದು ಖಂಡಿತ ತಿಳಿಸಿ ಪ್ರಭಾ..