26.3 C
Karnataka
Saturday, November 23, 2024

    ರಾಜ್ಯ ಸಭೆಗೆ ಖರ್ಗೆ ಆಯ್ಕೆಯೇ ಕಾಂಗ್ರೆಸ್ ಭಿನ್ನಮತಕ್ಕೆ ಕಾರಣವಾಯಿತೇ ?

    Must read


    ಕಾಂಗ್ರೆಸ್ ಏನೇ ಸಮಜಾಯಿಸಿ ಕೊಟ್ಟುಕೊಳ್ಳಲಿ, ಆದರೆ ಪಕ್ಷದೊಳಗೆ ಭಿನ್ನಮತ ಉಲ್ಭಣಿಸಿರುವುದಂತೂ ಸತ್ಯ. ಕಾಂಗ್ರೆಸ್ ನ ಒಳಗೆ ಭಿನ್ನಮತ ಭುಗಿಲೇಳಲು ಕಾರಣಗಳಾದರೂ ಏನು ? ಕೇವಲ ನಾಯಕತ್ವ ಬದಲಾವಣೆಯ ಆಗ್ರಹವೇ ? ಅಥವಾ ಇನ್ನೇನಾದರೂ ಅಘೋಷಿತ ಅಂಶಗಳು ಇವೆಯೇ ? ಹೌದು, ಈ ಪ್ರಶ್ನೆ ಏಳಲು ಸಾಕಷ್ಟು ಕಾರಣಗಳಿವೆ.

    ರಾಜ್ಯಸಭೆ ಚುನಾವಣೆ

    ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆಗೆ ಸ್ಥಾನ ಕಲ್ಪಿಸಲಾಯಿತು. ಸ್ಥಳೀಯ ನಾಯಕರಿಗೂ ಗೊತ್ತಿಲ್ಲದ ರೀತಿಯಲ್ಲಿ ಏಕಾಏಕಿ ಖರ್ಗೆಯವರ ಅಭ್ಯರ್ಥಿತನವನ್ನು ಘೋಷಿಸಿ ಟಿಕೆಟ್ ನೀಡಲಾಯಿತು. ಒಟ್ಟು ನಾಲ್ಕು ಸೀಟುಗಳ ಪೈಕಿ ಒಂದು ಸೀಟು ಕಾಂಗ್ರೆಸ್ ಗೆ ದಕ್ಕಿತು. ಇನ್ನೊಂದು ನಮ್ಮವರೇ ಆದ ಮಾಜಿ ಪ್ರಧಾನಿ ದೇವೇಗೌಡರಿಗೆ ಲಭಿಸಿತು ಬಿಡಿ.

    ಆದರೆ 2014 ಮತ್ತು 2019ರ ನಡುವೆ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ (ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಇಲ್ಲದಿದ್ದರೂ) ಸಮರ್ಥವಾಗಿ ತನ್ನ ವಾಗ್ಝರಿಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯನ್ನು ತಬ್ಬಿಬ್ಬು ಮಾಡಿದವರು ಖರ್ಗೆ. ಆದರೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಹೀಗಾಗಿ ಲೋಕಸಭೆಯಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್ ನ್ನು ಪ್ರಬಲವಾಗಿ ಸಮರ್ಥಿಸಿಕೊಂಡು ಬಿಜೆಪಿಯ ವಾಕ್ಚಾತುರ್ಯದ ಯುದ್ಧದಲ್ಲಿ ಸಮದಂಡಿಯಾಗಿ ನಿಲ್ಲುವ ನಾಯಕರು ಇಲ್ಲ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ. ಆದರೆ ರಾಜ್ಯಸಭೆಯಲ್ಲಿ ಸದ್ಯದ ಮಟ್ಟಿಗಂತೂ ಇಲ್ಲ. ಮುಂದಿನ ಜೂನ್ ವೇಳೆಗೆ ಅದೇನಾದರೂ ಸಾಧನೆಯಾಗಬಹುದೇನೋ ?

    ಹೀಗಾಗಿ ರಾಜ್ಯಸಭೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಪ್ರತಿನಿಧಿಸುವ, ಪ್ರತಿತಂತ್ರ ರೂಪಿಸುವ, ಮಾತಿನ ಓಘದ ಮೂಲಕ ಬಿಜೆಪಿಯನ್ನು ಕಟ್ಟಿಹಾಕುವ ನಾಯಕರು ಬೇಕಾಗಿತ್ತು. ಇದಕ್ಕಾಗಿಯೇ ಏಕಾಏಕಿ ಖರ್ಗೆ ಅವರನ್ನು ಕಾಂಗ್ರೆಸ್ ರಾಜ್ಯಸಭೆಗೆ ಆಯ್ಕೆ ಮಾಡಿತು. ಇದಕ್ಕಾಗಿ ಸಿದ್ಧರಾಮಯ್ಯ ಸೇರಿದಂತೆ ಯಾವ ನಾಯಕರ ಮಾತನ್ನೂ ಆಲಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.

    ಆತಂಕದ ಕಿಡಿ

    ಖರ್ಗೆ ಆಯ್ಕೆಯಾಗುವ ಮೊದಲು ಗಾಂಧಿ ಕುಟುಂಬದ ನಿಷ್ಠಾವಂತ ರಾಜೀವ್ ಗೌಡ ಹೆಸರು ಕೇಳಿ ಬರುತ್ತಿತ್ತು. ಐಐಎಂನ ಮಾಜಿ ಪ್ರೊಫೆಸರ್ ಆಗಿದ್ದ ಗೌಡ, ರಾಹುಲ್ ಗಾಂಧಿಯವರಿಗೆ ತೀರಾ ನಿಕಟವರ್ತಿಯಾಗಿದ್ದರು. ಆದಾಗ್ಯೂ, ಖರ್ಗೆಯ ಅಭ್ಯರ್ಥಿತನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿತ್ತು. ಇದುವೇ ಕಾಂಗ್ರೆಸ್ ಒಳಗಿನ ನಾಯಕತ್ವ ಬದಲಾವಣೆಯ ಭಿನ್ನಮತಕ್ಕೆ ಮೂಲ ಕಾರಣವಾಯಿತೇ ?

    ಯಾಕೆಂದರೆ, ಖರ್ಗೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಸಮರ್ಥವಾಗಿ ತುಂಬುತ್ತಿದ್ದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ ಒಂದು ರೀತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಯಾವಾಗ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರೋ ಆಗ, ಸಹಜವಾಗಿಯೇ ಕಾಂಗ್ರೆಸ್ ರಾಜ್ಯಸಭೆಯಲ್ಲಾದರೂ ಸಮರ್ಥ ಪ್ರತಿಪಕ್ಷ ನಾಯಕನ ಹುಡುಕಾಟದಲ್ಲಿತ್ತು. ಆಗ ಸಿಕ್ಕಿದವರೇ ಖರ್ಗೆ.

    ಸಹಿ ಸಂಗ್ರಹ ಅಭಿಯಾನ

    ಮಲ್ಲಿಕಾರ್ಜುನ ಖರ್ಗೆಯವರು ಯಾವಾಗ ರಾಜ್ಯಸಭೆಗೆ ಆಯ್ಕೆಯಾದರೋ ಆಗ, ತಮ್ಮ ಪಟ್ಟ ಅಲುಗಾಡುತ್ತಿರುವ ವಾಸನೆಯನ್ನು ಗುಲಾಂ ನಬಿ ಆಜಾದ್ ಗ್ರಹಿಸಿದರು ಎಂದೇ ಹೇಳಬೇಕಾಗುತ್ತದೆ. ಯಾಕೆಂದರೆ, ನಾಯಕತ್ವದ ಬದಲಾವಣೆಯ ಆಗ್ರಹವನ್ನು ಮಾಡಿ ಪತ್ರ ಬರೆದವರ ಪೈಕಿ ಆಜಾದ್ ಅವರೇ ಮುಖ್ಯ ಭೂಮಿಕೆಯಲ್ಲಿದ್ದರು. ಉಳಿದವರು ಅವರನ್ನು ಅನುಸರಿಸಿದರು ಅಷ್ಟೇ. ಅದಕ್ಕಾಗಿಯೇ ರಾಹುಲ್ ಗಾಂಧಿ ಅವರು ಬಿಜೆಪಿಯ ಷಡ್ಯಂತ್ರದ ಅಂಗವಾಗಿ ಈ ಪತ್ರವನ್ನು ಬರೆಯಲಾಗಿದೆ ಮತ್ತು ಅದನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸಲಾಗಿದೆ ಎಂದು ಪರೋಕ್ಷವಾಗಿ ಆಜಾದ್ ಮೇಲೆ ಕಿಡಿ ಕಾರಿದ್ದು.

    ಆಜಾದ್ ಆತಂಕ

    ಗುಲಾಂ ನಬಿ ಆಜಾದ್ ಅವರ ರಾಜ್ಯಸಭೆ ಸದಸ್ಯತ್ವ ಮುಂದಿನ ವರ್ಷದ ಫೆಬ್ರವರಿಗೆ ಅಂತ್ಯವಾಗುತ್ತದೆ. ಆ ಬಳಿಕ ಮುಂದೇನು ? ಸದ್ಯ, ನಾಮ್ ಕೇ ವಾಸ್ತೆ ಅಧಿವೇಶನ ನಡೆಯಬಹುದಷ್ಟೇ. ಆದರೆ ಮುಂದಿನ ದಿನಗಳಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಆ ಸಂದರ್ಭದಲ್ಲೇ ಆಜಾದ್ ಅವರ ಸದಸ್ಯತ್ವ ಅವಧಿ ಕೊನೆಗೊಳ್ಳುತ್ತದೆ. ಆಗ ಸಹಜವಾಗಿಯೇ ಖರ್ಗೆ, ಪ್ರತಿಪಕ್ಷದ ನಾಯಕನಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ಅದೇ ರೀತಿ ಮತ್ತೊಂದು ಅವಧಿಗೆ ಆಜಾದ್ ಗೆ ಅವಕಾಶ ಸಿಗುತ್ತದೆಯೋ ಎಂಬುದು ಸ್ಪಷ್ಟವಿಲ್ಲ.

    ಹೀಗಾಗಿಯೇ ಅಧಿಕಾರವಿಲ್ಲದಿದ್ದರೆ ಹಪಹಪಿಗೆ ಬೀಳುವ ಹಳೆಯ ಹುಲಿಗಳು ಮತ್ತೆ ಕಣಕ್ಕಿಳಿದಿದ್ದಾರೆ ಎಂದೇ ವಿಶ್ಲೇಷಿಸಬೇಕಾಗುತ್ತದೆ.
    ಸೋನಿಯಾ ಗಾಂಧಿ ಅವರು ಈ ತಿಂಗಳ ಆರಂಭದಲ್ಲಿ ಪಕ್ಷದ ರಾಜ್ಯಸಭಾ ಸದಸ್ಯರ ಸಭೆ ನಡೆಸಿದ್ದರು. ಬಳಿಕ ಮುಖ್ಯವಾಗಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆಯುವ 24 ಗಂಟೆಗಳ ಮೊದಲು ಸಹಿ ಸಂಗ್ರಹ ಅಭಿಯಾನದ ಪತ್ರಗಳು ಸೋರಿಕೆಯಾಗಿದವು !

    ಇಲ್ಲಿ ಮತ್ತೊಂದು ವಿಷಯವನ್ನು ಉಲ್ಲೇಖಿಸಲೇಬೇಕು. ದಕ್ಷಿಣ ಭಾರತ (ಮಹಾರಾಷ್ಟ್ರ ಬಿಟ್ಟು) ಕಾಂಗ್ರೆಸ್ ನಲ್ಲಿ ಉನ್ನತ ಸ್ಥಾನ ಪಡೆದವರೇ ಕಡಿಮೆ ಅಥವಾ ಇಲ್ಲವೆಂದೇ ಹೇಳಬಹುದು. ಉತ್ತರ ಭಾರತದ ಲಾಬಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆಯಾ ?

    ವಾಗೀಶ್ ಕುಮಾರ್ ಜಿ ಎ
    ವಾಗೀಶ್ ಕುಮಾರ್ ಜಿ ಎ
    ಪತ್ರಕರ್ತ, ಸಮಕಾಲೀನ ಸಂಗತಿಗಳ ಬಗ್ಗೆ ಆಸಕ್ತಿ
    spot_img

    More articles

    1 COMMENT

    1. ಖಗೆ೯ಯವರು ವಿರೋಧಪಕ್ಷ ದ ಸ್ಥಾನವನ್ನು ಸಮಥ೯ವಾಗೇನೂ ನಿಭಾಯಿಸಿರಲಿಲ್ಲ. ಒಲಿದು ಬಂದ ಅದೃಷ್ಟವನ್ನು ನಿಭಾಯಿಸಿದರಷ್ಟೆ. ಅವರು ಸಮಥ೯ವಾಗಿ ನಿಭಾಯಿಸಿದ್ದರೆ, ಬಿಜೆಪಿ ಎರಡನೇ ಅವಧಿಗೆ ಬಹುಮತದಿಂದ ಆಡಳಿತಕ್ಕೆ ಬರುತ್ತಿರಲಿಲ್ಲ. ಈ ಸರಳ ಸತ್ಯವನ್ನು ಅರಿಯದ ಕಾಂಗ್ರೆಸ್ ನವರು, ಬಿಜೆಪಿ ವಾಮಮಾಗ೯ದಿಂದ ಅಧಿಕಾರ ಹಿಡೀತು ಎಂದು ಬೊಗಳೆ ಬಿಡುವುದನ್ನು ಇಂದಿನ ಮೊಯ್ಲಿಯವರ ಹೇಳಿಕೆಯಿಂದ ಮನಗಾಣಬಹುದು. ಜನ ತಿರಸ್ಕರಿಸಿದ್ದನ್ನ ಅರಗಿಸಿಕೊಳ್ಳಲಾರದೇ ಹಿಂಗೆ ಎಡಬಿಡಂಗಿ ಹೇಳಿಕೆ ಕೊಡ್ತಾರೆ. ಸ್ವಾಮಿ ಜನ ದಡ್ರು ಅನ್ನೋದನ್ನ ಮರೆತುಬಿಡಿ. ನೀವು ರಚನಾತ್ಮಕವಾಗಿ ಕಾಯ೯ನಿವ೯ಹಿಸಿ, ಆಡಳಿತ ಪಕ್ಷದಲ್ಲಿರುವ ಹುಳುಕನ್ನು ಸಮಥ೯ವಾಗಿ ಜನರಿಗೆ ತಿಳಿಸಿ ಕೊಟ್ಟಲ್ಲಿ ಮಾತ್ರ, ಮುಂದೆ ನೀವು ಅಧಿಕಾರ ಹಿಡಿಯಲು ಸಾಧ್ಯ. ಇಲ್ಲದಿದ್ದರೆ ಇನ್ನೂ ಅಧೋಗತಿಗೆ ಹೋಗ್ತೀರಾ.

    LEAVE A REPLY

    Please enter your comment!
    Please enter your name here

    Latest article

    error: Content is protected !!