19.5 C
Karnataka
Thursday, November 21, 2024

    ಹಿರಿಯ ಮಿತ್ರ ಶೇಷನಾರಾಯಣ

    Must read

    ಶೇಷನಾರಾಯಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಾದಂಬರಿ, ಸಣ್ಣ ಕಥೆ , ಅನುವಾದ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ ಪ್ರತಿಭಾವಂತ. ಆದರೆ ವಿಮರ್ಶಕರಿಂದ ಅವರ ಸಾಹಿತ್ಯಕ್ಕೆ ದೊರಕಬೇಕಾದ ಮನ್ನಣೆ ಸಿಗಲಿಲ್ಲ.ಕಳೆದ ವರ್ಷ ಇದೇ ಆಗಸ್ಟ್ ತಿಂಗಳಲ್ಲಿ ನಮ್ಮಿಂದ ದೂರವಾದ ಶೇಷನಾರಾಯಣ ಅವರನ್ನು ಅವರ ಬಹುಕಾಲದ ಗೆಳೆಯ ಸಾಹಿತಿ ಈಶ್ವರಚಂದ್ರ ಇಲ್ಲಿ ನೆನಪಿಸಿಕೊಂಡಿದ್ದಾರೆ.

    ಈಶ್ವರಚಂದ್ರ

    ನಾನು ಶೇಷನಾರಾಯಣ ಅವರನ್ನು ನೋಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಬಿಎಂಶ್ರೀ ಅಚ್ಚುಕೂಟದಲ್ಲಿ. ಅವರು ಅಲ್ಲಿ ಮ್ಯಾನೇಜರಾಗಿದ್ದರು. ಆ ವೇಳೆಗೆ ನಾನು ಅವರ ‘ಮೊಲ್ಲೆ ಮಲ್ಲಿಗೆ’ ಕಥಾ ಸಂಕಲನವನ್ನು ಓದಿ ಮೆಚ್ಚಿಕೊಂಡಿದ್ದೆ. ನನ್ನ ಒಂದು ಕಥಾಸಂಕಲನವನ್ನು ಮುದ್ರಿಸಲು ಸಾಧ್ಯವೇ ಎಂದು ವಿಚಾರಿಸಲು ಹೋಗಿದ್ದೆ. ಅಲ್ಲಿ ಕನ್ನಡ ನಿಘಂಟುವಿನ ಕೆಲಸ ಭರದಿಂದ ನಡೆಯುತ್ತಿತ್ತು. ಹೊರಗಿನ ಕೆಲಸಗಳನ್ನು ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ.

    ಅಲ್ಲದೆ ಲೇಖಕನೊಬ್ಬ ಸ್ವಂತ ಹಣದಿಂದ ಪುಸ್ತಕ ಪ್ರಕಟಿಸಿ ಕೈ ಸುಟ್ಟುಕೊಳ್ಳುವುದು ಸೂಕ್ತವಲ್ಲ , ಯಾರಾದರೂ ಪ್ರಕಾಶಕರನ್ನು ಹಿಡಿಯಿರಿ ಎಂದು ಅವರು ಸಲಹೆ ಕೊಟ್ಟರು. ಹೀಗೆ ಪ್ರಾರಂಭವಾದ ನಮ್ಮ ಸ್ನೇಹ ಸುಮಾರು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಅವಿರತವಾಗಿ ಮುಂದುವರಿಯಿತು. ಅವರು ವಿಕಾಸ ಮುದ್ರಣ ಎಂಬ ದೊಡ್ಡ ಮುದ್ರಣಾಲಯವನ್ನು ಸ್ಥಾಪಿಸಿದರು. ಅದು ಲೇಖಕರು ಸೇರುವ ಒಂದು ತಾಣವೇ ಆಯಿತು .ನಾವು ಕೆಲವು ಸ್ನೇಹಿತರು ಸೇರಿ ಆರಂಭಿಸಿದ ಅಭಿರುಚಿ ಪ್ರಕಾಶನದ ಕೆಲವು ಪುಸ್ತಕಗಳನ್ನು ಅವರು ಅಚ್ಚುಕಟ್ಟಾಗಿ ಮುದ್ರಿಸಿದರು. ಉತ್ತಮ ಮುದ್ರಣಕ್ಕೆ ಅವರ ಮುದ್ರಣಾಲಯ ಪ್ರಸಿದ್ಧವಾಯಿತು. ಎಲ್ಲಾ ಕಡೆಯಿಂದ ಲೇಖಕರು ಬಂದು ತಮ್ಮ ಪುಸ್ತಕಗಳನ್ನು ಅಲ್ಲಿ ಮುದ್ರಿಸಲು ಕೊಟ್ಟರು. ಕೆಲವರು ಹಣ ಕೊಡಲಿಲ್ಲ. ಸಾಲ ಬೆಳೆಯಿತು. ಅದು ‘ ಮನೆಹಾಳ ಬಡ್ಡಿಯ ಸಾಲ ‘ ಎಂದು ಶೇಷನಾರಾಯಣ ಹೇಳುತ್ತಿದ್ದರು. ಅವರು ವ್ಯವಹಾರ ಕುಶಲಿಯಲ್ಲದ ಭೋಳೆ ಮನುಷ್ಯ. ಎಲ್ಲರನ್ನೂ ನಂಬುತ್ತಿದ್ದರು ಅದರಿಂದ ನಷ್ಟ ಅನುಭವಿಸುವಂತಾಯಿತು. ಅನಿವಾರ್ಯವಾಗಿ ಮುದ್ರಣಾಲಯವನ್ನು ಮುಚ್ಚಿದರು.

    ಶೇಷನಾರಾಯಣ ಅವರದು ಆರಂಭದಿಂದಲೂ ಕಷ್ಟದ ಜೀವನ. ಜಲ್ಲಿಕಲ್ಲಿನ ಮೇಲೆ ಪೇಪರ್ ಹಾಸಿಕೊಂಡು ಮಲಗುತ್ತಿದ್ದ ದಿನಗಳನ್ನು ಆಗಾಗ ನೆನೆಯುತ್ತಿದ್ದರು. ಹಿರಿಯ ಪತ್ರಕರ್ತರೊಡನೆ ಮತ್ತು ಮುದ್ರಣಾಲಯಗಳಲ್ಲಿ ಕೆಲಸಮಾಡಿ ಗಳಿಸಿದ ಅನುಭವದಿಂದ ಸ್ವಂತ ಮುದ್ರಣಾಲಯವನ್ನು ಸ್ಥಾಪಿಸಿದರೂ ಅದೃಷ್ಟ ಅವರಿಗೆ ಒಲಿಯಲಿಲ್ಲ.

    ಶೇಷನಾರಾಯಣ ಆಗಾಗ ನಮ್ಮ ಮನೆಗೆ ಭೇಟಿ ಕೊಡುತ್ತಿದ್ದರು. ಹಾಗೆ ಬಂದಾಗಲೆಲ್ಲ ತಮ್ಮ ಹೊಸ ಪುಸ್ತಕವೊಂದನ್ನು ನನಗೆ ಕೊಡುತ್ತಿದ್ದರು. ‘ ಶ್ರೀ ಈಶ್ವರಚಂದ್ರ ಅವರಿಗೆ, ವಿಶ್ವಾಸದಿಂದ, ಶೇನಾ ‘ ಎಂದು ತಮ್ಮ ವಿಶಿಷ್ಟ ಶೈಲಿಯ ಅಕ್ಷರದಲ್ಲಿ ಬರೆದಿರುತ್ತಿದ್ದರು. ಅವರು ಮೂಲತಃ ಕಾದಂಬರಿಕಾರರು. ಹದಿನೇಳು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ‘ಬೀಸು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ‘ಅಯೋಧ್ಯೆಯಲ್ಲಿ ರಾಮನಿಲ್ಲ’ ಅವರ ವಿಶಿಷ್ಟವಾದ ರಾಜಕೀಯ ಕಾದಂಬರಿ. ಪ್ರಾಣಿಗಳನ್ನು ಪಾತ್ರಗಳನ್ನಾಗಿ ಮಾಡಿಕೊಂಡು ಅವರು ಕಥೆ, ಕಾದಂಬರಿಗಳನ್ನು ರಚಿಸಿರುವುದುಂಟು. ಅವರು ಆರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ವಿಭೀಷಣ’ ನಾಟಕವಾದರೆ, ‘ಬಾಲಮುರಳಿ’ ಮಕ್ಕಳ ಪುಸ್ತಕ. ಒಬ್ಬ ಮುದ್ರಕನಾಗಿ ಸಾಹಿತಿಗಳ ಒಡನಾಟದಲ್ಲಿ ಆದ ಅನುಭವಗಳನ್ನು ‘ಛಾಪಕನ ಛಾಪು’ ಕೃತಿಯಲ್ಲಿ ನಿರೂಪಿಸಿದ್ದಾರೆ.

    ‘ಕಾವೇರಿ : ಒಂದು ಚಿಮ್ಮು ಒಂದು ಹೊರಳು’ ಎಂಬ ಅವರ ಕೃತಿ ಕಾವೇರಿ ಜಲವಿವಾದದ ಸಂಪೂರ್ಣ ಚಿತ್ರವನ್ನು ನೀಡುತ್ತದೆ. ಈ ಪುಸ್ತಕವನ್ನು ಅವರೇ ತಮಿಳಿಗೆ ಅನುವಾದ ಮಾಡಿ ತಮಿಳರ ಕೆಂಗಣ್ಣಿಗೆ ಗುರಿಯಾಗಿರುವುದೂ ಉಂಟು.

    ಶೇಷನಾರಾಯಣ ಉತ್ತಮ ಅನುವಾದಕರೂ ಹೌದು. ಸುಮಾರು ಹತ್ತು ಕೃತಿಗಳನ್ನು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ . ಅವುಗಳಲ್ಲಿ ‘ಪಾರ್ಥಿಬನ ಕನಸು’, ‘ಒಂದು ಕಡಲ ತೀರದ ಗ್ರಾಮದಲ್ಲಿ’ ಮುಖ್ಯವಾದವು. ‘ಹದಿನೆಂಟನೆಯ ಅಕ್ಷರೇಖೆ’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಪಾತ್ರವಾಗಿದೆ. ಅವರು ಮಾಸ್ತಿಯವರ ಸಣ್ಣಕಥೆಗಳನ್ನು ‘ಮಾಸ್ತಿ ಸಿರು ಕತೈಗಳ್’ ಎಂಬ ಹೆಸರಿನಲ್ಲಿ ತಮಿಳಿಗೆ ಅನುವಾದಿಸಿದ್ದಾರೆ. ಎಸ್ ಎಲ್ ಭೈರಪ್ಪ ಅವರ ದಾಟು ಕಾದಂಬರಿಯನ್ನು ‘ತಾಂಡು’ ಎಂಬ ಹೆಸರಿನಲ್ಲಿ ತಮಿಳಿಗೆ ಅನುವಾದಿಸಿದ್ದಾರೆ. ಕನ್ನಡ ಮತ್ತು ತಮಿಳು ಭಾಷೆಗಳ ನಡುವಣ ಸೇತುವಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತಮಿಳರು ಅವರನ್ನು ಸನ್ಮಾನಿಸಿದ್ದಾರೆ.

    ಕರ್ನಾಟಕದಲ್ಲಿ ವಿಮರ್ಶಕರು ಶೇಷನಾರಾಯಣರಿಗೆ ನ್ಯಾಯ ಸಲ್ಲಿಸಲಿಲ್ಲ. ರಾಜ್ಯೋತ್ಸವ ಪ್ರಶಸ್ತಿಯನ್ನು ಕೊನೆಯ ಕ್ಷಣದಲ್ಲಿ ಎರಡನೆಯ ಪಟ್ಟಿಯಲ್ಲಿ ಪ್ರಕಟಿಸಿದ ಕಾರಣದಿಂದ ಅವರು ಪ್ರಶಸ್ತಿ ಪ್ರದಾನ
    ಸಮಾರಂಭಕ್ಕೆ ಹೋಗಲಿಲ್ಲ. ಅನಂತರ ಮನೆಯಲ್ಲಿಯೇ ಅವರಿಗೆ ಸನ್ಮಾನ ಮಾಡಿದರು. ಸರ್ಕಾರದಿಂದ ಬರುತ್ತಿದ್ದ ವೃಧ್ಧಾಪ್ಯ ವೇತನ ಕೂಡ ಇದ್ದಕ್ಕಿದ್ದಂತೆ ನಿಂತು ಹೋಯಿತು. ಅವರು ಯಾರನ್ನೂ ಯಾಚಿಸಲಿಲ್ಲ . ಎಲ್ಲ ನೋವುಗಳನ್ನು ನುಂಗಿಕೊಂಡು ನಗುತ್ತಿದ್ದರು. ಅವರನ್ನು ನೆನೆದಾಗ ಆ ನಗುವಿನ ಚಿತ್ರವೇ ಮನಸ್ಸಿನಲ್ಲಿ ಮೂಡುತ್ತದೆ.

    ಶೇಷನಾರಾಯಣ ಅವರು ತಮ್ಮ ಕೊನೆಯ ಕೆಲವು ವರ್ಷಗಳನ್ನು ಪತ್ನಿ ಶ್ರೀಮತಿ ಸುಭದ್ರ ಮತ್ತು ನಾಲ್ಕು ಮಕ್ಕಳೊಡನೆ ಲಕ್ಕಪ್ಪಾ ಲೇಔಟಿನ ಸಿಂಗಾಪುರ ಬಡಾವಣೆಯಲ್ಲಿ ನೆಮ್ಮದಿಯಿಂದ ಕಳೆದರು. ಮಕ್ಕಳು ಅವರನ್ನ ಕಾಳಜಿಯಿಂದ ನೋಡಿಕೊಂಡರು. ಅಕ್ಕಪಕ್ಕದ ರಸ್ತೆಗಳಲ್ಲಿ ಮಕ್ಕಳು ಕಟ್ಟಿದ ನಾಲ್ಕೂ ಮನೆಗಳಿಗೆ ಓಡಾಡಿಕೊಂಡು ಗೆಲುವಿನಿಂದಲೇ ಇದ್ದರು. ದಿನಾಂಕ 07.08.2019 ರಂದು ತಮ್ಮ 92ನೇ ವಯಸ್ಸಿನಲ್ಲಿ ತೀರಿಕೊಂಡರು. ಇದೀಗ ಒಂದು ವರ್ಷ ಕಳೆದಿದೆ ಪ್ರಥಮ ಪುಣ್ಯತಿಥಿಯಂದು ಈ ಹಿರಿಯ ಮಿತ್ರರನ್ನು ನೆನೆಯುತ್ತಾ ಹಿಂದಿನ ಸ್ನೇಹ ಪ್ರಸಂಗಗಳೆಲ್ಲ ಸ್ಮೃತಿಪಟಲದಲ್ಲಿ ಹಾದುಹೋಗುತ್ತವೆ.

    spot_img

    More articles

    2 COMMENTS

    1. ಶೇಷನಾರಾಯಣ ಅವರ ಹೆಸರು ಚಿರ ಪರಿಚಿತ. ಅವರು ಬಗ್ಗೆ ಬರೆದ ಲೇಖನ ಆತ್ಮೀಯವಾಗಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!