ನಮ್ಮ ವೇದಿಕೆ ಅಂಕಣಕ್ಕೆ ಹಲವಾರು ಲೇಖನಗಳು ಹರಿದು ಬರುತ್ತಿವೆ. ಹುಡುಗು ಬುದ್ಧಿ ಎಂಥ ಅವಾಂತರಗಳ ಮಾಡಿಸಬಲ್ಲದು ಎಂಬುದಕ್ಕೆ ಈ ಲೇಖನದ ಘಟನೆ ಒಂದು ಉದಾಹರಣೆ. ಈ ಲೇಖನವನ್ನು ಕಳುಹಿಸಿದ ದಾವಣಗೆರೆಯ ಮಮತಾ ವೀರಯ್ಯ ಹೀಗೆ ಬರೆಯುತ್ತಾರೆ…..ಇದು ನನ್ನ ತಾತ ಜಿ. ಚಂದ್ರಯ್ಯ ಬರೆದ ಲೇಖನ. ತಮ್ಮ 90 ರ ವಯಸ್ಸಿನಲ್ಲಿ ನಿನ್ನೆ ಅವರ ವ್ಯಾಸಂಗ ಬದುಕಿನಲ್ಲಿ ನಲ್ಲಿ ನಡೆದ ಒಂದು ಘಟನೆ ಬರೆದಿದ್ದಾರೆ . 13 ವರ್ಷಗಳ ಹಿಂದೆ ಗ್ಯಾಂಗ್ರಿನ್ ಗೆ ತುತ್ತಾಗಿ ತಮ್ಮ ಒಂದು ಕಾಲು ಕಳೆದುಕೊಂಡಿದ್ದಾರೆ. ಇಂದಿಗೂ ಬತ್ತದ ಸಾಹಿತ್ಯ ಪ್ರೇಮ .ಇವರು ಮೂಲತಃ ಚನ್ನಗಿರಿ ತಾಲ್ಲೂಕಿನ ಸೋಮಲಾಪುರದವರು ಕಳೆದ 35 ವರ್ಷಗಳಿಂದ ಕುಟುಂಬದವರೊಂದಿಗೆ ಮೈಸೂರಿನಲ್ಲಿ ವಾಸವಾಗಿದ್ದಾರೆ. ಇವರನ್ನು ಪರಿಚಯಿಸಬೇಕೆಂದು ಮನ ಮಿಡಿಯಿತು. ಇವರ ಬರಹ ಓದಿ ಪ್ರತಿಕ್ರಿಯಿಸಿ ನಮ್ಮ ಬಾಲ್ಯದ ಇಂತಹ ಸಾಹಸವನ್ನು ಮೆಲುಕುಹಾಕೋಣ.
ಜಿ. ಚಂದ್ರಯ್ಯ
ಇದು ನಡೆದು ಇಂದಿಗೆ 64 ವರ್ಷಗಳಾಯಿತು, 1956ನೇ ಇಸವಿ. ನನಗೆ ಆಗ ಸುಮಾರು 25 ವರ್ಷ. ಬೆಂಗಳೂರಿನ ಗೌರ್ನಮೆಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ವರ್ಷದ ಅವಧಿ. ಕಾಲೇಜಿನಿಂದ ನಂದಿಬೆಟ್ಟದ ಹತ್ತಿರ ಸರ್ವೆ ಕ್ಯಾಂಪ್ ಹಾಕಿದ್ದರು. ನಾವುಗಳು ಸುಮಾರು ನೂರು ಹುಡುಗರಿದ್ದೆವು. ನಂದಿಬೆಟ್ಟದ ಹತ್ತಿರ ಇರುವ ಭೋಗನಂದೀಶ್ವರ ದೇವಾಲಯದಲ್ಲಿ ನಮ್ಮ ಕ್ಯಾಂಪ್ ಇತ್ತು. ಅದರ ಪಡಸಾಲೆಯಲ್ಲಿ ನಾವು ಮಲಗುತ್ತಿದ್ದೆವು.
ಒಂದು ದಿನ ನಾನೂ ಸೇರಿ ಕೆಲವು ಹುಡುಗರು ನಂದಿಬೆಟ್ಟವನ್ನು ಬಂಡೆಯ ಮೇಲಿಂದಲೇ ಹತ್ತಬೇಕೆಂದು ತೀರ್ಮಾನಿಸಿದೆವು. ನಾವೆಲ್ಲರೂ 22ರಿಂದ 25 ವರ್ಷದೊಳಗಿದ್ದೆವು. ನಮಗೆ ಆಗ ಯಾವ ಟ್ರೆಕಿಂಗ್ ಆಗಲೀ ಬೆಟ್ಟ ಹತ್ತುವ ಟ್ರೈನಿಂಗ್ ಆಗಲೀ ಇರಲಿಲ್ಲ. ಏನೋ ಹುಮ್ಮಸ್ಸು – ಹುಡುಗುತನ.
ಸುಮಾರು 25-30 ಹುಡುಗರು ಬೆಟ್ಟ ಹತ್ತಲು ಸಾಯಂಕಾಲ ನಾಲ್ಕು ಘಂಟೆಗೆ ಹೊರೆಟೆವು. ಬೆಟ್ಟದ ತಳದಿಂದ ಸುಮಾರು 5000 ಸಾವಿರ ಅಡಿ ಎತ್ತರ ಪೂರ್ತಿ ಬಂಡೆಗಳು.ಸುಮಾರು ಹುಡುಗರು ಅರ್ಧಕ್ಕಿಂತ ಕಡಿಮೆ ಎತ್ತರದಲ್ಲೇ ಆಗುವುದಿಲ್ಲ ಎಂದು ಇಳಿದುಹೋದರು. ಎತ್ತರವಾದಂಗೆ ಬಂಡೆ ಬಹಳ ಸ್ಟೀಪ್ ಆಗುತ್ತಾ ಹೋಯಿತು. ಇನ್ನೂ ಕೆಲವರು ಸ್ವಲ್ಪ ಹತ್ತಿ ಅವರೂ ಇಳಿದುಹೋದರು. ಕೊನೆಗೆ ಎಂಟು ಜನ ಮಾತ್ರ ಉಳಿದುಕೊಂಡೆವು.
ಹತ್ತಲೇ ಬೇಕೆಂದು ನಮ್ಮ ತೀರ್ಮಾನ. ಮೇಲೆ ಹತ್ತುವುದು ಕಷ್ಟವಾದರೂ ಕೆಳಗಿಳಿಯುವುದು ಇನ್ನೂ ಅಪಾಯವಾಗಿತ್ತು. ತುಂಬಾ ಇಳಿಜಾರು. ಬಂಡೆ ಮೇಲೆ ತೆವಳುತ್ತಾ ಮೇಲೇರಿದೆವು. ಆಗ ಸ್ವಲ್ಪ ಸಣ್ಣದಾಗಿ ಮಳೆ ಬಂತು. ಬಂಡೆ ಜಾರಲಿಕ್ಕೆ ಶುರುವಾಯಿತು. ನಾವಿನ್ನು ಬೆಟ್ಟದ ಕೆಳಗೆ ಬೀಳುತ್ತೇವೆಂದು ತಿಳಿದು ನಮ್ಮ ಕೊನೆ ಇವತ್ತೇ ಎಂದೆನಿಸಿತು. ಒಂದು ಕಡ್ಡಿ ಸಿಕ್ಕರೂ ಆಸರೆಗೆ ಹಿಡಿದುಕೊಳ್ಳಬೇಕೆಂಬ ಮನಸ್ಸು. ಹಾಗೇ ಬಂಡೆಮೇಲೆ ಮಲಗಿ ತೆವಳುತ್ತಾ ಮೆಲ್ಲಮೆಲ್ಲನೆ ಮೇಲೇರುತ್ತಾ ಹೋದೆವು. ನಮ್ಮಕಥೆ ಮುಗಿಯಿತು ಎಂದು ಹೆದರಿಕೆಯಾಯಿತು. ಏನೋ ಹುಚ್ಚು ಧೈರ್ಯ ಮಾಡಿದೆವು. ಮರಣವೇ ಸಿದ್ಧ ಎಂದಮೇಲೆ ಹೆದರಿಕೆ ಏಕೆ?
ಆಗಲೇ ಕತ್ತಲಾಯಿತು. ಕೊನೆಗೆ ಬಂದಾಗ ಸುಮಾರು 8-9 ಅಡಿಯ ಕಲ್ಲಿನ ಗೋಡೆಯ ಬುಡಕ್ಕೆ ಬಂದೆವು.ಒಬ್ಬರು ನಿಂತು ಇನ್ನೊಬ್ಬರು ಅವರ ಸಪೋರ್ಟ್ ಇಂದ ಕಲ್ಲಿನ ಸಂಧಿ ಹಿಡಿದುಕೊಂಡು ಮೂರು ಜನ ಮೇಲೆ ಹತ್ತಿದೆವು. ಬಂಡೆಯ ಆಚೆಕಡೆ ಧುಮಕಿ ಹತ್ತಿರವೇ ಇದ್ದ ಹೋಟೆಲ್ಗೆ ಹೋಗಿ ಹೇಳಿದೆವು.ಅವರಲ್ಲಿ ಕೆಲವರು ಲಾಟೀನು ಹಿಡಿದು ಹಗ್ಗ ತಂದು ಉಳಿದ ಐವರನ್ನು ಮೇಲಕ್ಕೆ ಎಳೆದರು.
ಏನಾದರೂ ಹಾವುಗಳದ್ದರೆ ನಿಮ್ಮ ಗತಿ ಏನಾಗುತ್ತಿತ್ತು ಅಂತ ಹೇಳಿ ನಮ್ಮ ಹುಚ್ಚು ಸಾಹಸಕ್ಕೆ ಚೆನ್ನಾಗಿ ಬೈದರು.ಆಮೇಲೆ ಅಲ್ಲೇ ಹೋಟೆಲಿನಲ್ಲಿ ಊಟ ಮಾಡಿದೆವು. ಒಂದು ರೂಪಾಯಿಗೆ ಫುಲ್ ಊಟ, ಅನ್ನ, ಸಾರು, ಪಲ್ಯ ಹಪ್ಪಳ ಮತ್ತು ಮಜ್ಜಿಗೆ. ನಂತರ ರಸ್ತೆಯ ಮೂಲಕ ಕೆಳಗೆ ಬಂದೆವು. ಕೆಳಗೆ ಇದ್ದ ಎಲ್ಲರಿಗೂ ಗಾಬರಿಯಾಗಿತ್ತು. ನಮ್ಮ ಲೆಕ್ಚರರ್ಸ್ ಬಾಯಿಗೆ ಬಂದ ಹಾಗೆ ಬೈದರು. ನಾವು ಸುಮ್ಮನೆ ಬೈಸಿಕೊಂಡು ನಿಂತಿದ್ದೆವು.
ಮೊದಲು ಹತ್ತಿದ ಮೂವರಲ್ಲಿ ನಾನು , ಕೃಷ್ಣಪ್ಪ ಮತ್ತು ಮೂರನೇ ಹೆಸರು ಮರೆತುಹೋಗಿದೆ, ಬಹುಶಃ ಬಸವರಾಜು ಇರಬೇಕು. ಈ ಸುದ್ದಿಯನ್ನು ಕೇಳಿದವರೆಲ್ಲಾ ಇದುವರೆಗು ಯಾರೂ ಬಂಡೆಯ ಕಡೆಯಿಂದ ಮೇಲೇರಿದ್ದನ್ನು ಕೇಳೇಯಿಲ್ಲ ಎಂದರು. ಪಕ್ಕದಲ್ಲೇ ಟಿಪ್ಪು ಡ್ರಾಪ್ ಇತ್ತು. ಅನೇಕರು ನಂಬಲೇ ಇಲ್ಲ.
ಬೆಟ್ಟ ಹತ್ತುವ ಟ್ರೈನಿಂಗ್ ಏನೂ ಇಲ್ಲದೇ, ಯಾವ ಸಲಕರಣೆಯೂ ಇಲ್ಲದೇ ನಾವು ಹತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ಮೈ ಝಂ ಎನಿಸುತ್ತದೆ. ಮರಣ ಗ್ಯಾರಂಟಿ ಎಂದು ತಿಳಿದುಕೊಂಡಮೇಲೆ ಒಂದು ಹುಚ್ಚು ಧೈರ್ಯ ಬರುತ್ತದೆ.
ಏಕೋ ನೆನೆಪು ಬಂತು, ಬರೆದು ಇಡಬೇಕೆಂದು ಮನಸ್ಸು ಮಾಡಿದೆ.
Photo by Sebin Thomas on Unsplash
ಇದನ್ನು ಓದಿದ ಮೇಲೂ ಯಾರಾದರೂ ಅಂತಹ ಹುಚ್ಚು ಸಾಹಸಕ್ಕೆ ಕೈ ಹಾಕದಿರುವುದು ಒಳಿತು, ಇಲ್ಲವಾದರೆ ಅಂತಹವರು ಜೀವದ ಮೇಲಿನ ಆಸೆಯನ್ನು ಬಿಡಬೇಕು.
ಜಿ. ಚಂದ್ರಯ್ಯ ಅವರ ಕಾಲೇಜು ಜೀವನದ ಸಾಹಸಮಯ ಅನುಭವ ಓದಿ ರೋಮಾಂಚನವಾಯಿತು. ‘ಅನುಭವವವು ಸವಿಯಲ್ಲ ಅದರೆ ನೆನಪುಗಳೇ’. ಅವರ ನೆನಪಿನ ಬುತ್ತಿಯಿಂದ ಇಂತಹ ಅನುಭವಗಳು ಇನ್ನಷ್ಟೂ ಹೊರಬರಲಿ. ಓದಿ ಖುಷಿ ಪಡುತ್ತೇವೆ.
90ರ ಹರೆಯದಲ್ಲಿ ಬರೆಯುವ ಹವ್ಯಾಸ ! ನಿಜಕ್ಕೂ ಶ್ಲಾಘನೀಯ. ಈ ವಯಸ್ಸಿನಲ್ಲಿ ಅವರ ಬತ್ತದ ಜೀವನೋತ್ಸಾಹ , ಸಾಹಿತ್ಯ ಪ್ರೇಮಕ್ಕೆ ನನ್ನ ನಮಸ್ಕಾರಗಳು.
ಅಪಾಯಗಳು ಸಾಹಸಿಗರನ್ನು ಕೂಗಿ ಕರೆಯುತ್ತವೆ. ಅದು ಯಾವ ಕಾಲಕ್ಕೂ ನಿಜ. ಸಾಹಸಗಳನ್ನು ಮಾಡುವಾಗ ಆಗುವ ಆಯಾಸವೆಲ್ಲ ಗುರಿಮುಟ್ಟಿದಾಗ ರೋಮಾಂಚನಗಳಾಗಿಬಿಡುತ್ತವೆ. ಮುಂದೆ ನೆನಪುಗಳು ಸದಾ ಕಚಗುಳಿಯನ್ನು ನೀಡುತ್ತವೆ. ಉತ್ತಮ ಲೇಖನ. ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ಜಿ.ಚಂದ್ರಯ್ಯ ನವರ ‘ಹುಡುಗ ಬುದ್ಧಿ’ ಲೇಖನ ರೋಮಾಂಚನಕಾರಿಯಾಗಿತ್ತು. ಅದೃಷ್ಟವಶಾತ್ ಯಾರೊಬ್ಬರೂ ಏನೂ ಅನಾಹುತಗಳಿಗೆ ಎಡತಾಕದೆ ಸುರಕ್ಷಿತವಾಗಿ ಮರಳಿ ಬಂದದ್ದು ದೈವಬಲವೇ ಸರಿ.
ಸುದ್ದಿ ಓದಿ, ಮುಗಿದ ನಂತರ ಒಂದು ದೀಘ೯ ನಿಟ್ಟುಸಿರು ಬಿಟ್ಟೆ. ವಯಸ್ಸಿನ ವೇಳೆ ಮನಸ್ಸು ಇಂಥಹ ಹುಚ್ಚು ಸಾಹಸಗಳಿಗೆ ಎಡತಾಕುವುದು ಸಾಮಾನ್ಯ. ಹುಷಾರಾಗಿರಬೇಕಷ್ಟೆ! ಲೈವ್ ಟ್ರೆಕಿಂಗ್ ನೋಡಿದ ಅನುಭವವಾಯ್ತು.
ಅವರ ಮೊಮ್ಮಗಳ ಮೂಲಕ, ಅವರ ಅನುಭವದ ಬುತ್ತಿಯ ಪ್ರಸಾದ ದೊರೆತದ್ದು, ನಮ್ಮ ಸೌಭಾಗ್ಯವೇ ಸರಿ.
ಲೇಖನ ಚೆನ್ನಾಗಿದೆ. ಬಂಡೆಯ ಫೋಟೋ ಹಾಕಿದ್ದರೆ ಚೆನ್ನಾಗಿತ್ತು. ಯಾರೂ ಮಾಡಲಾಗದ ಸಾಹಸ
ಇದನು ಓದಿದಾಗ ಈಗ 35 ವರ್ಷದ ಹಿಂದೆ. ಶೃಂಗೇರಿಯ ದಟ್ಟ ಕಾಡಿನ ನಡುವೆ ಅಮಾವಾಸೆ ಕತ್ತಲೆ ಬೇರೆ, ಚಿಕ್ಕ ದಾರಿ, ಬಲಗಡೆ ಪ್ರಪಾತ, ಎಡಗಡೆ ದಟ್ಟ ಕಾಡು ಜೊತೆಗೆ ಭಯದ ನಡುವೆ 5 ನಿಮಿಷಕೆ ತಲುಪಬೇಕಾದ ಕಡೆ ಒಂದೂವರೆ ಘಂಟೆ ತಗೊಂಡು ಅಂತೂ ಮನೆ ತಲುಪಿದೆವು. ಈಗಲೂ ಮೈ ನಡುಗುತ್ತದೆ ಆ ದಾರಿ ನೋಡಿದಾಗ
Good article