ಮನೆಯವರಿಗೆಲ್ಲಾ ಸೇರಿ ಎರಡೇ ಟೂತ್ ಬ್ರಷ್ ಒಂದೇ ಟವಲ್ಲು , ವಾರಕ್ಕೆರಡೇ ದಿನ ಸ್ನಾನ . ನಾವು ಮುಖ ತೊಳ್ಕೊಂಡು ಹಾಲ್ ಗೆ ಬಂದ್ರೆ ಕಣ್ಣಲ್ಲಿ ಗೀಜೇ ಹೋಗಿಲ್ಲ ಅದೇನ್ ಮುಖ ತೊಳ್ದಿದಿಯೋ ಅಂತ ಬಯ್ಯೋವ್ರು . ಬಚ್ಚಲು ಮನೆಯಲ್ಲಿ ಅರ್ಧ ಕಟ್ ಮಾಡಿಟ್ಟಿರೋ ಕೆಂಪಿಟ್ಟಿಗೆ ಮಾದರಿಯ ಲೈಫ್ ಬಾಯ್ ಸೋಪು ವಾರಗಟ್ಟಲೇ ಕರಗ್ತಿರಲಿಲ್ಲ ಅಂದ್ರೆ ಲೆಕ್ಕಾ ಹಾಕಿ ಯಾವ ಮಟ್ಟದಲ್ಲಿ ಶುಚಿತ್ವ ಕಾಪಾಡ್ಕೋತಿದ್ವಿ ಅಂತ.
ನಮ್ ಅವತಾರ ನೊಡಕ್ಕಾಗದೇ ತಂದೆಯವರೇ ‘ ನಾನು ಮಾಡಿಸ್ತೀನಿ ನಡೀ ಅಂತ ಬಚ್ಚಲಿಗೆ ಕರ್ಕೊಂಡ್ ಹೋಗಿ ಮೈ ಉಜ್ಜೋ ಕಲ್ಲಿನಿಂದ ಮೀನು ಉಜ್ಜೊ ಥರ ಉಜ್ಜವ್ರು , ನೀರಿನೊಂದಿಗೆ ಕಿತ್ತುಬರುತ್ತಿರುವ ಕೊಳೆಯನ್ನು ತೋರಿಸಿ ತೋರಿಸಿ ಉಗಿಯವ್ರು .
ರಜೆ ಬಂತು ಅಂದ್ರೆ ಮುಗೀತು ಹಾದೀಲಿ ಬೀದೀಲಿ , ಮನೆ ಕಟ್ಟಕ್ಕೆ ತೋಡಿರೋ ಪಾಯದ ಗುಂಡಿಗಳಲ್ಲಿ , ಸುರಿದಿರುವ ಮರಳು ರಾಶಿಯಲ್ಲಿ , ಇಟ್ಟಿಗೇಲಿ ದಿನವಿಡೀ ಆಡ್ತಾಇದ್ವಿ .ಮಾವಿನಕಾಯಿ , ಸೀಬೇಕಾಯಿ , ನೆಲ್ಲೀ ಕಾಯಿ , ಹುಣಿಸೇ ಹಣ್ಣು , ನೇರಳೆ ಹಣ್ಣು , ಹೀಗೇ ಹೆಸರು ಗೊತ್ತಿರೋ ಕಾಯಿಗಳನ್ನು ಗೊತ್ತಿಲ್ಲದೇ ಇರೋ ಹಣ್ಣುಗಳನ್ನು ಹುಡುಕ್ಕೊಂಡ್ ಹೋಗಿ ತಿಂತಿದ್ವಿ . ಮರದಲ್ಲಿ ಅದ್ಯಾವ್ ಪ್ರಾಣಿ ತಿಂದು ಅರ್ಧಕ್ಕೇ ಬಿಟ್ಟು ಹೋಗಿತ್ತೋ ಏನೋ ನಾವು ಅದನ್ನ ಗಿಣಿ ಕಚ್ಚಿರೋ ಹಣ್ಣು ಅಂತ ಬಯಸಿ ಬಾಯಿಗಾಕ್ಕೊತಿದ್ವಿ . ಗಸಗಸೆ ಹಣ್ಣಿನ ರೀತಿ ಕಾಣುವ ಅಂಟು ಅಂಟಿನ ಕಾಯೊಂದನ್ನು ಗೋಂದು ಕಾಯಿ ಅಂತ ತಿಂದಿದೀವಿ.
ಅಕ್ ಪಕ್ಕದ್ ಮನೆಯವರು ಅಂಗಡೀಗ್ ಕಳಿಸಿದ್ರೆ ಚಿಲ್ರೆ ಕಾಸ್ ಸಿಗುತ್ತೆ ಅದರಲ್ಲಿ ತಿಂಡಿ ತಗೋಬಹುದು ಅಂತ… ಕರೆದ್ರೆ ಸಾಕು ಒಂದೇ ಕೂಗಿಗೇ ಓಡ್ತಾ ಇದ್ವಿ. ಪರಿಚಯವೇ ಇಲ್ಲದ ಯಾರೋ ಅಂಗಡಿ ಪೂಜೆ , ಗಾಡಿ ಪೂಜೆ ಮಾಡ್ತಾರೆ ಅಂತ ಬೂದುಗುಂಬಳದಲ್ಲಿ ಚಿಲ್ಲರೆ ಕಾಸು ಕುಂಕುಮ ಸುರಿಯುತ್ತಿದ್ದರೆ ಹೊಡೆಯುವುದನ್ನೇ ಕಾದು ಅದರ ಮೇಲೆ ಬಿದ್ದು ಕಾಂಪಿಟೇಷನ್ನಲ್ಲಿ ಚಿಲ್ಲರೆ ಆಯ್ಕೋತಿದ್ವಿ . ಕಾಯಿ ಹೊಡೆದರೆ ಕಾಯಿಚೂರು ಚಿಪ್ಪು ಆಯ್ಕೊಂಡು ಮಣ್ಣಲ್ಲಿ ಬಿದ್ದಿದ್ರೆ ಉರುಬಿಕೊಂಡು ತಿಂತಿದ್ವಿ . ಸಿಕ್ಕ ಆ ಚಿಲ್ಲರೆಯಲ್ಲಿ ಕಣ್ಣಿಗ್ ಕಾಣಿಸ್ತಿದ್ ತಿಂಡಿ ತಿನ್ಕೊಂಡು ನಿಜವಾದ ಹಬ್ಬ ಆಚರಿಸ್ತಾ ಇದ್ವಿ .
ಗಣೇಶನ ಕೂರಿಸಿದ ಮನೆಗಳಿಗೆ ಹೋಗಿ ಅಕ್ಷತೆ ಹಾಕಿದರೆ ತಿಂಡಿ ಕೊಡುತ್ತಾರೆಂದು ಮನೆಯಲ್ಲಿ ಗೊತ್ತಾಗದಂತೆ ಹಿಡಿಅಕ್ಕಿ ಕದ್ದು ಅರಿಷಿಣ ಬೆರಸಿ ಅಕ್ಷತೆ ರೆಡಿ ಮಾಡ್ಕೊಂಡು ಮನೆಮನೆಗೆ ಅಲೆಯುತ್ತಿದ್ದೆವು . ಸಕ್ಕರೆಪುಡಿ ಕಡಲೆಹಿಟ್ಟಿನ ಆ ಬಿಳೀ ಕವರಿನ ಪುಡಿ ರುಚಿ ಈಗಲೂ ನಾಲಿಗೆಯಲ್ಲಿಯೇ ಇದೆ .
ಇನ್ನು ಕ್ರಿಕೆಟ್ ಆಡಕ್ಕೋದಾಗಂತೂ ಆ ಬಾಲು ಅದೆಷ್ಟ್ ಸಾರಿ ಮೊರಿಗ್ ಬಿದ್ದಿದೀಯೋ , ಚಿಕ್ಕವ್ರು ಅಂತ ನಮ್ ಕೈಯಲ್ಲೇ ಎತ್ತಿಸವ್ರು ಅದನ್ನ ಮೂರು ಸಲ ಪಿಚ್ ಹೊಡೆದು ಆ ಮೇಲೆ ಅವರು ತಗೊಳವ್ರು …. ನಾವು ಅದೇ ಕೈಗಳಲ್ಲೇ ಐಸ್ ಕ್ಯಾಂಡೀನ ಚಪ್ಪರಿಸ್ಕೊಂಡು ತಿಂದಿದೀವಿ. ಕೈ ತೊಳಿಯೋದು ಅಂದ್ರೆ ಅದು ತಿಂದಾದ ಮೇಲೇ ಅನ್ನೋ ಬಲವಾದ ನಂಬಿಕೆ ನಮ್ಮಲ್ಲಿ ಬೇರೂರಿತ್ತು . ಊರಿಗೆ ಕರ್ಕೊಂಡ್ ಹೋಗ್ತಿದ್ರೆ ಕೆಂಪುಬಸ್ಸಿನ ಕಿಟಕಿಯಲ್ಲಿರುವ ಅಷ್ಟೂ ಧೂಳನ್ನು ಸೌತೆಕಾಯಿ ಪಾಪಿನ್ಸ್ ಪೆಪ್ಪರ್ಮೆಂಟ್ ಜೊತೆ ತಿಂದಿದ್ದೇವೆ .
ಇಲಿ ಕಾಟಕ್ಕೆ ಬೋನು ತಂದು ಅದರಲ್ಲಿ ಬೋಂಡ ಸಿಕ್ಕಿಸಿದ್ರೆ ಆ ಬೋಂಡಾವನ್ನೂ ಸಹ ಆಸೆಯಿಂದ ನೊಡಿದ್ದೇವೆ .ನಾಕಾಣಿಯ ಕಣ್ಣು ಟ್ಯೂಬಿನಲ್ಲಿ ಮದ್ರಾಸ್ ಐ ಎಂಬ ಕಣ್ಣಿನ ಸೋಂಕನ್ನು ವಾಸಿ ಮಾಡಿಕೊಂಡಿದ್ದೇವೆ . ಸಿಬ್ಜಲ್ ಮಾತ್ರೆಯನ್ನು ಕುಟ್ಟಿ ಒಂದೆರೆಡು ತೊಟ್ಟು ಕೊಬ್ಬರಿಎಣ್ಣೆ ಬೆರೆಸಿ ಮಂಡಿ ಕುಂಡಿಗಳ ಗಾಯ ವಾಸಿ ಮಾಡಿಕೊಂಡಿದ್ದೇವೆ . ಹೊಕ್ಕಳಿಗೆ ಹರೆಳೆಣ್ಣೆಯನ್ನು ಹಾಕಿಸಿಕೊಂಡು ಹೊಟ್ಟೆ ನೋವು ನಿವಾರಿಸಿಕೊಂಡಿದ್ದೇವೆ. ಕಳ್ಳಿ ಹಾಲು ಸುರಿದು ಕಾಲಿಗೆ ಚುಚ್ಚಿದ ಮುಳ್ಳು ಮರುದಿವಸ ಅದಾಗೇ ಹೊರಗೆ ಬರುವಂತೆ ಮಾಡಿದ್ದೇವೆ .
ಮಳೆಗಾಲದ ಗುಂಡಿಗಳಲ್ಲಿ ನಿಂತಿದ್ದ ನೀರಿನಲ್ಲಿ ಕಡುಗಪ್ಪುಬಣ್ಣದ ಕಪ್ಪೆ ಮರಿಗಳನ್ನು ಮೀನಿನ ಮರಿಗಳೆಂದು ಬೊಗಸೆಯಲ್ಲಿ, ಪ್ಲಾಸ್ಟಿಕ್ ಕವರಿನಲ್ಲಿ ಹಿಡಿದು….ಬಿಟ್ಟು ಮೀನುಗಾರರೆಂಬ ಭ್ರಮೆಯಲ್ಲಿ ಆಡಿದ್ದೇವೆ . ಪಾರ್ಥೇನಿಯಂ ಗಿಡಗಳನ್ನು ಕಿತ್ತು ಅದರಿಂದ ಚಿಟ್ಟೆ ಹಿಡಿಯುತ್ತಿದ್ದೆವು . ಹೆಲಿಕಾಪ್ಟರ್ ಕೀಟಕ್ಕೆ ದಾರ ಕಟ್ಟಿ ಹಾರಾಡಿಸುವುದು . ಜೀರಿಂಬೆಯನ್ನು ಖಾಲಿ ಬೆಂಕಿಪೊಟ್ಟಣದಲ್ಲಿಟ್ಟು ಸಂಶೋಧಿಸುವುದು . ಹೋತಿಕೆತ್ತಕ್ಕೆ ಬೀಡಿ ಸೇದಿಸುವುದು ….ಒಂಥರ ಇದು ಹಿಸ್ಟ್ರಿ ಅನ್ನಿಸಿದರೂ ….ಕೀಟಗಳೊಂದಿಗೆ ಕೆಮಿಸ್ಟ್ರಿ ನಮ್ಮದು.
ಏನೇ ಆಗಲಿ ಮರಳಿಬಾರದ ಬಾಲ್ಯದ ನೆನಪುಗಳನ್ನು ಮೆಲಕುಹಾಕುವುದು ನಿಜಕ್ಕೂ ಜೀವಾನುಭವ
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಎಲ್ಲರ ಬಾಲ್ಯದ ನೆನಪು ಮರುಕಳಿಸುವಂತಹ ಲೇಖನ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಬಾಲ್ಯದ ಆ ದಿನಗಳ ನೆನಪಿಸಿದ್ದಕ್ಕೆ ಧನ್ಯವಾದಗಳು ಮಾಸ್ತಿ ಮತ್ತು ಚಿತ್ರ ರಚಿಸಿದ ಕಿರಣ ಅವರಿಗೆ.
ಬಾಲ್ಯದ ನೆನಪು ಮತ್ತೆ ಮತ್ತೆ ಕಾಡಿಸಿದ ಲೇಖನ ಧನ್ಯವಾದಗಳು ಲೇಖಕ ಮಾಸ್ತಿ ಮತ್ತು ಸೊಗಸಾದ ಚಿತ್ರ ಬರೆದಿರುವ ಕಿರಣ ಅವರಿಗೆ
ಮತ್ತೆ ಕಾಡಿದ ಆ ಬಾಲ್ಯದ ನೆನಪುಗಳು, ಮನಕ್ಕೆ ಮುದ ನೀಡಿತು.
ಬಾಲ್ಯದ ನೆನಪುಗಳನ್ನು ನೆನಪಿಸಿ ಮನಸ್ಸಿಗೆ ಮುದ ನೀಡಿದ ಮಾಸ್ತಿ ಮತ್ತು ಸೊಗಸಾದ ಚಿತ್ರ ಬರೆದ ಕಿರಣ ಅವರಿಗೆ ಧನ್ಯವಾದಗಳು