ಅಮೆರಿಕಾದ ಮಹಾಚುನಾವಣೆಗೆ ಇನ್ನೆರಡೇ ತಿಂಗಳು. ಇದುವರೆಗೆ ಕೊರೊನಾ ಸ್ವಲ್ಪ ಕಡಿಮೆಯಾಗಲಿ ಎಂದು ಕಾಯುತ್ತಿದ್ದ ರಾಜಕೀಯ ಪಕ್ಷಗಳ ಸಮಾವೇಶಗಳು ಇದೀಗ ಸುದ್ದಿಮಾಡಲು ದಾಂಗುಡಿಯಿಡುತ್ತಿವೆ. ಪ್ರಪಂಚವೇ ಎದುರುನೋಡುತ್ತಿರುವ ಈ ಮಹಾಚುನಾವಣೆಯ ಮುನ್ನೋಟ ವಿರೋಧ ಪಕ್ಷದ ನಾಯಕ ಜೋ ಬಿಡೆನ್ ಕಡೆಗೆ ವಾಲಿದೆ. ಆದರೆ ನಿಜವಾದ ಚುನಾವಣೆಯಲ್ಲಿ ಏನೂ ಆಗಬಹುದು. ಇತ್ತೀಚೆಗಿನ ಸಮೀಕ್ಷೆಗಳ ಪ್ರಕಾರ ಗೆಲ್ಲುವ ಸಾಧ್ಯತೆ ಟ್ರಂಪ್: ಬಿಡೆನ್ :: 41:49 ಎಂದು ವರದಿಯಾಗಿದೆ.
ಭಾರತೀಯರ ಒಲವು ಎರಡೂ ಪಕ್ಷಗಳ ಕಡೆಗೆ ತೂಗುತ್ತಿದೆ. ಭಾರತೀಯ ಮೂಲದ ಅಮೆರಿಕನ್ನರು ಸಾಂಪ್ರದಾಯಿಕವಾಗಿ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿಗಳನ್ನು ಅನುಮೋದಿಸಿದ್ದರು. 2016 ರ ಚುನಾವಣೆಯಲ್ಲಿ ಕೂಡ ಟ್ರಂಪ್ ಗೆ ವೋಟ್ ಮಾಡಿದವರು ಕೇವಲ 16 % ಮಾತ್ರ.
ಆದರೆ ಟ್ರಂಪ್ ತಮ್ಮನ್ನು ಭಾರತದ ಪ್ರಧಾನಿ ಮೋದಿಯ ಜೊತೆಗೆ ಮಿತ್ರನೆಂದು ಗುರುತಿಸಿಕೊಂಡು ಭಾರತದ ಗುಜರಾತಿಗೆ ಭೇಟಿ ನೀಡಿ ಬಂದಿದ್ದು ಅನಂತರ ಮೋದಿ ಅಮೆರಿಕಾದಲಿ ಭಾರತೀಯರು ಕಿಕ್ಕಿರಿದು ನೆರೆದಿದ್ದ ಸಮಾವೇಶದಲ್ಲಿ ಟ್ರಂಪ್ ಜೊತೆ ಕಾಣಿಸಿಕೊಂಡಿದ್ದು ಮೋದಿ ಬೆಂಬಲಿಗ ಭಾರತೀಯರು ಟ್ರಂಪ್ ನನ್ನು ಈ ಚುನಾವಣೆಯಲ್ಲಿ ಹೆಚ್ಚು ಬೆಂಬಲಿಸಬಹುದು ಎನ್ನುವ ಊಹೆಗಳಿವೆ.
ಡೆಮೊಕ್ರಾಟಿಕ್ ಪಕ್ಷದ ಜೋ ಬಿಡೆನ್ ಭಾರತೀಯ ಮತ್ತು ಜಮೈಕ ಮೂಲದ ಕಮಲಾ ಹ್ಯಾರಿಸ್ ರನ್ನು ಉಪಾಧ್ಯಕ್ಷೆಯ ಸ್ಥಾನಕ್ಕೆ ಆರಿಸಿದ ನಂತರ ಚೆನ್ನೈ ಮೂಲದ ಕಮಲಾ ಭಾರತೀಯರ ನಾರಿಯಾಗಿ ಅಮೆರಿಕಾದ ಪ್ರ-ಪ್ರಥಮ ಮಹಿಳಾ ಉಪಾಧ್ಯಕ್ಷಳಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಬಹುದಾದ ಎಲ್ಲ ಸಾಧ್ಯತೆಗಳು ಪ್ರಕಾಶಮಾನವಾಗಿವೆ. ಕಮಲಾ ಚೆನ್ನೈ ನ ತಮ್ಮ ಬಂಧುಗಳಿಗೆ ದೇವಾಲಯದಲ್ಲಿ ತೆಂಗಿನಕಾಯಿ ಒಡೆದು ಪೂಜೆ ಮಾಡಿಸಲು ಹೇಳಿರುವ ವಿಚಾರಗಳು ಸಂಚಲನೆಗಳನ್ನು ಮೂಡಿಸುತ್ತಿವೆ!
ಒಟ್ಟಾರೆ ಅಮೆರಿಕಾದಲ್ಲಿರುವ 4.5 ಮಿಲಿಯನ್ ಭಾರತೀಯರು ನಿರ್ಣಾಯಕ ಪಾತ್ರ ವಹಿಸುವ ಚುನಾವಣೆ ಇದಾಗಬಹುದು. ಸೋಲು-ಗೆಲುವು ಅತ್ಯಂತ ಕಡಿಮೆ ವ್ಯತ್ಯಾಸದಲ್ಲಿ ಬದಲಾಗಬಲ್ಲ ಸಾಧ್ಯತೆಗಳಿರುವ ಫೋಟೋ ಫಿನಿಷ್ ಚುನಾವಣೆ ಇದು.
ವಾಸ್ತವದಲ್ಲಿ ಜಾರ್ಜ್-ಫ್ಲಾಯ್ಡ್ ಹತ್ಯೆ , ದಾಖಲೆ ನಿರುದ್ಯೋಗ, ಕೊರೊನಾ ವೈರಸ್ಸಿನ ಹಾವಳಿ, ಜನಾಂಗೀಯ ವಿಭಜನೆಯ, ಕುಸಿದ ಆರ್ಥಿಕತೆಯ ಮಹತ್ತರ ತಿರುವುಗಳ ನಂತರದ 2020 ರ ಅಮೆರಿಕಾದ ಚುನಾವಣಾ ಕಣ ಭಾವೋದ್ರೇಕಗಳ ಸಮರ ಭೂಮಿಯಾಗಿದೆ.
ಇದೇ ಕಾರಣಕ್ಕೆ ಜನರಿಗೆ ಭರವಸೆಗಳ ಮಹಾಪೂರವೇ ಹರಿದು ಬರುತ್ತಿವೆ. ಇತ್ತೀಚೆಗೆ ನಡೆದ ಡೆಮಾಕ್ರಟಿಕ್ಸ್ ಮಾವೇಶದಲ್ಲಿ (ಆಗಸ್ಟ್ 17-20) ಅಮೆರಿಕಾವನ್ನು ಒಗ್ಗೂಡಿಸುವ, ಜನಾಂಗೀಯ ಮತ್ತು ಮತೀಯ ಭೇದಗಳನ್ನು ನಿರ್ನಾಮಗೊಳಿಸುವ ಮತ್ತು ಉದ್ಯೋಗ ಮತ್ತು ಶಾಂತಿಯ ಭರವಸೆಗಳನ್ನು ಜೋ ಬಿಡೆನ್, ಆತನ ಪತ್ನಿ ಮತ್ತು ಕಮಲಾ ಹ್ಯಾರಿಸ್ ನೀಡಿದ್ದಾರೆ.
ಅವರನ್ನು ಬೆಂಬಲಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಬಾರಕ್ ಒಬಾಮ ಮತ್ತು ಅವರ ಪತ್ನಿ ಮಿಶಲ್ ಒಬಾಮ, ಟ್ರಂಪ್ ಪ್ರಜಾ ಪ್ರಭತ್ವವನ್ನು ಪೂರ್ಣವಾಗಿ ನಿರ್ನಾಮ ಮಾಡುವುದನ್ನು ತಡೆಯಬೇಕೆಂದಿದ್ದರೆ, ರಕ್ಷಿಸಬೇಕೆಂದಿದ್ದರೆ ಜೋ ಬಿಡೆನ್ ಗೆ ಮತ ಚಲಾಯಿಸುವ ತುರ್ತು ಅಗತ್ಯವೆಂದು ಬಣ್ಣಿಸಿದ್ದಾರೆ. ಟ್ರಂಪ್ ಆಡಳಿತ ಶೈಲಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಟ್ರಂಪ್ ಸ್ವತಃ ತಮಗೆ ಮತ್ತು ತಮ್ಮ ಸ್ನೇಹಿತರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾತ್ರ ಮಾಡಿದ್ದಾರೆ ಆದರೆ ಅಮೆರಿಕಾಕ್ಕೆ ಏನೂ ಪ್ರಯೋಜನವಾಗಿಲ್ಲ ಎಂಬುದು ಇವರ ಆಪಾದನೆಯಾಗಿದೆ.
ಇದೀಗ ನಡೆಯುತ್ತಿರುವ ರಿಪಬ್ಲಿಕನ್ ಸಮಾವೇಶವನ್ನು(ಆಗಸ್ಟ್-24-27)ಕೂಡ ಜನರ ಭಾವೋದ್ವೇಗಗಳನ್ನೇ ಕೇಂದ್ರಬಿಂದುವನ್ನಾಗಿಟ್ಟುಕೊಂಡು ನಡಸಲಾಗುತ್ತಿದೆ. ಮಂಗಳವಾರ ಮಾತಾಡಿದ ಅಮೆರಿಕಾದ ಪ್ರಥಮ ಮಹಿಳೆ ಮಿಲಾನಿಯ, ತಮ್ಮ ಪತಿ ಎಲ್ಲರಂಥವರಲ್ಲ, ಬಹಳ ಭಿನ್ನ ಎಂದು ವ್ಯಕ್ತಿತ್ವ ಅವರದ್ದು ಎಂದು ಹೇಳಿದ್ದಾರೆ. ಅನ್ನಿಸಿದ್ದನ್ನು ನೇರ ಮಾತುಗಳಲ್ಲಿ ಹೇಳಿಬಿಡುವ ಪಾರದರ್ಶಕ ವ್ಯಕ್ತಿ ಅವರು ಎಂದು ವಿವರಿಸಿದ್ದಾರೆ. ಆದರೆ ಮಂಗಳವಾರದ ಅವರ ಭಾಷಣದಲ್ಲಿ ಜನಾಂಗೀಯ ಒಡಕುಗಳನ್ನು ಸರಿಪಡಿಸಲು ಟ್ರಂಪ್ ಗೆ ಮತ ಹಾಕಿರೆಂದು ಕೇಳಿದಾಗ ಅಲ್ಲಿ ನೆರೆದಿದ್ದ ಜನರಲ್ಲಿ ಸ್ವಲ್ಪ ಮುಜುಗರ, ಆಶ್ಚರ್ಯ ಜೊತೆಗೆ ಅವರ ಧೈರ್ಯದ ಬಗ್ಗೆ ಮೆಚ್ಚುಗೆ ಎಲ್ಲವೂ ಕಂಡುಬಂದಿತು.
ಈ ನಡುವೆ ಅಮೆರಿಕಾದ ಟಿವಿ ಹೋಸ್ಟ್ ಮತ್ತು ಸೆಲೆಬ್ರಿಟಿ ಟೋಮಿ ಲಾರೆನ್ “President Trump is wise like an owl, or as you say in Hindi, wise like an ullu,” (ಭಾರತೀಯರು ಹಿಂದಿ ಭಾಷೆಯಲ್ಲಿ ಹೇಳುವಂತೆ ಅಧ್ಯಕ್ಷ ಟ್ರಂಪ್ ಗೂಬೆಯಂತೆ ಬುದ್ದಿವಂತ ) ಎಂದು ಅಧ್ಯಕ್ಷ ಟ್ರಂಪ್ ರನ್ನು ಹೊಗಳಲು ಹೋಗಿ ಗೊತ್ತಿಲ್ಲದಂತೆಯೇ ಆಡುಭಾಷೆಯ ‘ಮಂದಮತಿ ’ ಎನ್ನುವ ಅರ್ಥ ನೀಡಿ ನಗೆಪಾಟಲಿಗೀಡಾಗಿದ್ದಾರೆ. ನಿಜಾರ್ಥದಲ್ಲಿ ಹಿಂದಿಯ ನುಡಿಗಟ್ಟನ್ನ ಭಾಷಾಂತರಿಸುವಾಗ ನಡೆದ ಈ ಅಚಾತುರ್ಯದ ವೀಡೀಯೋ ತುಣುಕು ಮಿಲಿಯನ್ ಗಟ್ಟಳೆ ಹಿಂಬಾಲಕರಿರುವ ಆಕೆಯ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿ ಕೊನೆಗೆ ಆಕೆ ಅದನ್ನು ತೆಗೆದುಹಾಕಿ ಯಾವುದೇ ಮಾಧ್ಯಮದವರ ಕರೆಯನ್ನು ಸ್ವೀಕರಿಸದೆ ಮೌನ ವ್ರತ ಆಚರಿಸಿದ್ದಾಳೆ.
ಯಾರೂ ಏನೇ ಆದರೂ ಪ್ರಜಾ-ಪ್ರಭುತ್ವದ ಈ ಚುನಾವಣೆಯಲ್ಲಿ ಮತದಾರರು ಕೊನೆಗೆ ಉಲ್ಲೂಗಳಾಗದಿದ್ದರೆ ಸಾಕೆನ್ನುವುದು ಎಲ್ಲ ಹಿತಚಿಂತಕರ ಆಶಯವಾಗಿದೆ.
.
Well covered!👍
Thank you.