ಹಿಂದಿನ ಲೇಖನದಲ್ಲಿ (ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಇರುವುದಾದರು ಏನು?) ನೂತನ ಶಿಕ್ಷಣ ನೀತಿ – 2020 ರ ಪ್ರಮುಖಾಂಶಗಳ ಬಗ್ಗೆ
ಅವಲೋಕಿಸಲಾಗಿತ್ತು. ಈ ಲೇಖನದಲ್ಲಿ ಅದರ ಜಾರಿ ಸಮಯದಲ್ಲಿ ಎದುರಾಗಬಹುದಾದ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ.
ಹೊಸ ಶಿಕ್ಷಣ ನೀತಿಯನ್ನು ಯಾವ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲಾಗುವುದು ಎಂಬ ಪ್ರಶ್ನೆ ಹಲವಾರು ಜನರಲ್ಲಿ ಮೂಡಿರುವುದು ಸಹಜ. ಜೊತೆಗೆ ಇಂತಹ ದೊಡ್ಡ ಮಟ್ಟದಲ್ಲಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ, ಅದರಲ್ಲೂ ಹೆಚ್ಚು ಜನಸಂಖೈ ಮತ್ತು ದೊಡ್ಡ ಶಿಕ್ಷಣ ಜಾಲವಿರುವ ನಮ್ಮ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಬಯಸುವ
ನೀತಿಯನ್ನು ಕಾರ್ಯರೂಪಕ್ಕೆ ತರಲು ಕಷ್ಟ ಸಾಧ್ಯ ಮತ್ತು ಅನುಷ್ಠಾನಕ್ಕೆ ತರುವ ಸಮಯದಲ್ಲಿ
ಹಲವಾರು ಸಮಸ್ಯೆಗಳು ಉದ್ಬವಿಸಬಹುದು, ಅವುಗಳನ್ನು ಹೇಗೆ ನಿವಾರಣೆ ಮಾಡಬೇಕು ಎಂಬ
ಆಲೋಚನೆಗಳು ಬರುವುದು ಸರ್ವೇ ಸಾಮಾನ್ಯ.
ಈ ಲೇಖನದಲ್ಲಿ ಸವಾಲುಗಳ ಬಗ್ಗೆ ಅವಲೋಕಿಸಲು ಪ್ರಯತ್ನಿಸೋಣ. ಮೊಟ್ಟ ಮೊದಲಿಗೆ, ಒಂದು ಅಂಶವನ್ನು ಹೇಳ ಬಯಸುತ್ತೇನೆ. ಯಾವುದೇ ಒಂದು ನೀತಿಯು ಸರ್ಕಾರದ ಮಟ್ಟದಲ್ಲಿ ಅನುಷ್ಠಾನಗೊಳ್ಳ ಬೇಕಾದರೆ, ರಾಜಕೀಯ ಇಚ್ಛಾಶಕ್ತಿ ಬಹಳ ಮುಖ್ಯ.
ಅದೃಷ್ಟವಶಾತ್, ಈ ನೀತಿಯನ್ನು ಕಾರ್ಯರೂಪಕ್ಕೆ ತರಲು, ಇಂದಿನ ಕೇಂದ್ರ ಸರ್ಕಾರ ಮತ್ತು ನಮ್ಮರಾಜ್ಯ ಸರ್ಕಾರಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಎದ್ದು ಕಾಣುತ್ತಿದೆ.
ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದೆಹಲಿಯಲ್ಲಿ ಮಾತನಾಡುತ್ತ ‘This policy has the stamp of my political will’ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ನಮ್ಮರಾಜ್ಯದ ಉಪಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಡಾ. ಅಶ್ವತ್ಥ
ನಾರಾಯಣರವರು, ವಿಶ್ವ ವಿದ್ಯಾಲಯದ ಸಮಾರಂಭದಲ್ಲಿ ಮಾತನಾಡುತ್ತಾ, ನೀತಿಯನ್ನು
ಜಾರಿಗೊಳಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲಿ ಅನುಷ್ಠಾನಕ್ಕೆ ತರುತ್ತೇವೆ
ಎಂಬ ಮಾತನ್ನು ಹೇಳಿದ್ದಾರೆ. ಇದರಿಂದ ರಾಜಕೀಯ ಇಚ್ಛಾಶಕ್ತಿಯಿರುವುದು ದೃಢಪಡುತ್ತದೆ.
ಈ ವರ್ಷದಿಂದ, ಅಥವಾ ಕೋವಿಡ್ 19 ರಿಂದ ತೊಂದರೆಯಾಗಿರುವ ಕಾರಣ, ಮುಂದಿನ ಶೈಕ್ಷಣಿಕ
ವರ್ಷದಿಂದ ಹಂತ ಹಂತವಾಗಿ ಹೊಸ ಶಿಕ್ಷಣ ನೀತಿಯು ಜಾರಿಗೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಸವಾಲುಗಳು
1 . ನಮ್ಮ ದೇಶದಲ್ಲಿ, ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಬೇಕಾದ
ವಯೋಮಾನವನ್ನು ಹೊಂದಿರುವ ಯುವ ಜನಸಂಖ್ಯೆ ಸುಮಾರು 35 ಕೋಟಿ. ಅಂದರೆ
ನೂತನ ಶಿಕ್ಷಣ ನೀತಿಯ ಅನುಷ್ಠಾನವು ಅತಿದೊಡ್ಡ ಮಟ್ಟದಲ್ಲಿ ಪ್ರಪಂಚದ ಬೇರೆ ಯಾವ
ದೇಶದಲ್ಲೂ ಕಂಡು ಅರಿಯದ ಪ್ರಮಾಣದಲ್ಲಿ ಜಾರಿಗೊಳಿಸ ಬೇಕಾಗಿದೆ. ಇದು ನಿಜವಾಗಿಯೂ
ದೊಡ್ಡ ಸವಾಲು.
2. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳನ್ನು ಗಮನಿಸಿದಾಗ, ಶಾಲೆಯಿಂದ ಹೊರಗೆ ಉಳಿದಿರುವ ಸುಮಾರು ಎರಡು ಕೋಟಿ ಮಕ್ಕಳನ್ನು ಮುಂದಿನ 15 ವರ್ಷಗಳಲ್ಲಿ ಮತ್ತೆ
ಶಾಲೆಗೆ ಬರುವಂತೆ ಮಾಡ ಬೇಕಾಗಿರುವ ಉದ್ದೇಶವನ್ನು ಹೊಂದಿದೆ. ಇದನ್ನು ಜಾರಿಗೊಳಿಸಲು ಸಾವಿರಾರು ಶಾಲೆಗಳನ್ನು ತೆರೆಯ ಬೇಕಾಗುತ್ತದೆ. ಅಥವಾ, ಹೀಗಿರುವ ಶಾಲೆಗಳನ್ನು ವಿಸ್ತರಿಸಿ,ಲಕ್ಷಾಂತರ ಶಿಕ್ಷಕರನ್ನು ನೇಮಕಾತಿ ಮಾಡಬೇಕಾಗುತ್ತದೆ. ಜೊತೆಗೆ, ಮೂಲಭೂತ
ಸೌಕರ್ಯಗಳನ್ನು ಹೆಚ್ಚಿಸ ಬೇಕಾಗುತ್ತದೆ. ಇಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ತಗಲುವ
ವೆಚ್ಚವನ್ನು ಅದರಲ್ಲೂ, ಕೋವಿಡ್ 19 ರಿಂದ ಹಣಕಾಸಿನ ವ್ಯವಸ್ಥೆಗೆ ಬಹಳ ದೊಡ್ಡ
ಪೆಟ್ಟು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು
ನೋಡ ಬೇಕಾಗಿದೆ.
3. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ( Early Childhood Care and
Education ) ಅಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ತಯಾರು
ಮಾಡಬೇಕಾಗಿದೆ. ಇದು ದೊಡ್ಡ ಸವಾಲು.
4. ನೀತಿಯಲ್ಲಿ ಪ್ರಸ್ತಾಪಿಸಿರುವಂತೆ, ಎಲ್ಲಾ ಮಕ್ಕಳು ವೃತ್ತಿ ಪರ ಶಿಕ್ಷಣದ ಅಡಿಯಲ್ಲಿ
ಯಾವುದಾದರೂ ಒಂದು ಔದ್ಯೋಗಿಕ ಶಿಕ್ಷಣ ತರಬೇತಿಯನ್ನು ಕಡ್ಡಾಯವಾಗಿ
ಪಡೆಯಬೇಕಾಗಿರುತ್ತದೆ. ಸ್ಥಳೀಯವಾಗಿ ದೊರಕುವ ಪ್ರತಿಭೆಯನ್ನು ಉಪಯೋಗಿಸಿಕೊಂಡರು
ಸಹ, ಬಹಳ ದೊಡ್ಡ ಮಟ್ಟದಲ್ಲಿ ವೃತ್ತಿ ಪರ ಶಿಕ್ಷಣದ ಶಿಕ್ಷಕರನ್ನು ತಯಾರು ಮಾಡ
ಬೇಕಾಗಿರುತ್ತದೆ.
5. ಬೋಧನಾ ಕ್ರಮದಲ್ಲಿ ಸೃಜನಶೀಲತೆ ( Creativity ), ಹೊಸತನ್ನು ಕಂಡು ಹಿಡಿಯುವಿಕೆ (innovation ), ಪರಿಕಲ್ಪನಾ ತಿಳಿವಳಿಕೆ ( Conceptual understanding ), ಇವುಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಹೊಸ ರೀತಿಯಲ್ಲಿ ಬೋಧನೆ ಮಾಡುವಂತಹ
ಶಿಕ್ಷಕರನ್ನು, ತರಬೇತಿ ನೀಡಿ ತಯಾರು ಮಾಡುವುದು ದೊಡ್ಡ ಪ್ರಮಾಣದ ಯೋಜನೆ ಎಂದರೆ ತಪ್ಪಾಗಲಾರದು.
6. ಶಿಕ್ಷಣ ನೀತಿಯಲ್ಲಿ ಕನಿಷ್ಠ 5 ನೇ ತರಗತಿಯವರಿಗೆ, ಮಾತೃ ಭಾಷೆ ಅಥವಾ ಸ್ಥಳೀಯ
ಭಾಷೆಯು ಬೋಧನಾ ಮಾಧ್ಯಮವಾಗಿರ ಬೇಕೆಂದು ಉದ್ದೇಶಿಸಲಾಗಿದೆ. ಆದರೆ ಈ ಅಂಶದ
ಬಗ್ಗೆ ಈಗಾಗಲೆ ಕೆಲವು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿವೆ. ನಮ್ಮ ದೇಶದಲ್ಲಿ ಇದು ಬಹಳ ಸೂಕ್ಷ್ಮ ರೀತಿಯ ಸಮಸ್ಯೆಯಾದ್ದರಿಂದ, ಬಹಳ ದಕ್ಷತೆಯಿಂದ, ಸವಾಲನ್ನು ಎದುರಿಸ ಬೇಕಾಗಿದೆ.
7. ರಾಷ್ಟ್ರೀಯ ಮಟ್ಟದ ಪಠ್ಯಕ್ರಮದ ಚೌಕಟ್ಟನ್ನು ತಯಾರಿಸುವಾಗ ವರ್ಗಾವಣೆಗೆ ಒಳಪಡುವ
ಕೇಂದ್ರ ಸರ್ಕಾರದ ಉದ್ಯೋಗಿಗಳ ಮಕ್ಕಳ ಆಸಕ್ತಿ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳ ಬೇಕಾಗಿದೆ.
8. ನೀತಿಯಲ್ಲಿ ಪಾಲಿ, ಪ್ರಾಕೃತ್ ಮತ್ತು ಪರ್ಶಿಯನ್ ಭಾಷೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸದ್ಯಕ್ಕೆ ಪ್ರಾರಂಭದಲ್ಲಿ ಈ
ಕಾರ್ಯವನ್ನು ಮೈಸೂರಿನಲ್ಲಿರುವ Central Institute of Indian Languages
ಇದಕ್ಕೆ ವಹಿಸಬಹುದು.
9. ಉನ್ನತ ಶಿಕ್ಷಣದಲ್ಲಿ 2035 ರ ವೇಳೆಗೆ ಶೇ 50 ರಷ್ಟು ಸರಾಸರಿ ದಾಖಲಾತಿ ಅನುಪಾತವನ್ನು
( ಜಿಇಆರ್ ) ಮುಟ್ಟುವ ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ಮುಟ್ಟ ಬೇಕಾದರೆ, ಕನಿಷ್ಠ ಇನ್ನೂ 800 ವಿಶ್ವ ವಿದ್ಯಾಲಯವನ್ನು ಸ್ಥಾಪಿಸ ಬೇಕಾಗಿರುತ್ತದೆ. ಜೊತಗೆ, ಈಗಿರುವ ವಿಶ್ವ ವಿದ್ಯಾಲಯಗಳಲ್ಲಿ ಮೂಲ ಭೂತ ಸೌಕರ್ಯಗಳನ್ನು ಹೆಚ್ಚಿಸಿ ಸಾವಿರಾರು ಪ್ರಾಧ್ಯಾಪಕರನ್ನು ನೇಮಕಾತಿ ಮಾಡಬೇಕಾಗುತ್ತದೆ. ಪ್ರಸ್ತುತ ವಿಶ್ವ ವಿದ್ಯಾಲಯಗಳಲ್ಲಿ ಶೇ.30 ರಷ್ಟು ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಇದು ನಿಜವಾಗಿಯೂ ಬೃಹತ್ ಸವಾಲೇ ಸರಿ.
10. 2035 ರ ವೇಳೆಗೆ ವಿಶ್ವ ವಿದ್ಯಾಲಯಗಳಿಂದ ಕಾಲೇಜುಗಳು ಸಂಯೋಜನೆ ಪಡೆಯುವ
ಪದ್ಧತಿ ಇರುವುದಿಲ್ಲ ( No affiliation system ). ಈ ವೇಳೆಗೆ ಪ್ರತಿಯೊಂದು ಮಹಾ
ವಿದ್ಯಾಲಯವು ಬಹು ಶಿಸ್ತೀಯ ( multi disciplinary ) ಮತ್ತು ದೊಡ್ಡ ಮಟ್ಟದ
ಕಾಲೇಜಾಗಿ ಬೆಳೆದು ಕನಿಷ್ಠ ಮೂರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು
ಉದ್ಧೇಶಿಸಲಾಗಿದೆ. ಜೊತೆಗೆ ಪ್ರತಿಯೊಂದು ಕಾಲೇಜು ಪದವಿಗಳನ್ನು ಪ್ರದಾನ ಮಾಡುವ
ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿ ಬೆಳೆಯ ಬೇಕಾಗುತ್ತದೆ. ತಾತ್ವಿಕವಾಗಿ ಒಳ್ಳೆಯ ವ್ಯವಸ್ಥೆ.
ಆದರೆ ಈ ವ್ಯವಸ್ಥೆ ಕಾಸ್ಮೋಪಾಲಿಟನ್ ನಗರಗಳಲ್ಲಿ, ಸ್ವಲ್ಲ ಮಟ್ಟಿಗೆ ಜಿಲ್ಲಾ
ಕೇಂದ್ರಗಳಲ್ಲಿ ಸಾಧ್ಯವಾಗಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದು ಸಾಧ್ಯವೆ? ಎಂಬ
ಪ್ರಶ್ನೆ ಕಾಡುತ್ತದೆ. ಗ್ರಾಮೀಣ ಪ್ರದೇಶದ ಚಿಕ್ಕ ಕಾಲೇಜುಗಳು ಪದವಿಯನ್ನು ನೀಡಿದರೆ, ಈ
ಪದವಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳು ಸಿಗುವ ನಂಬಿಕೆಯಾದರು ಏನು. ಈಗ ಗ್ರಾಮೀಣ ಪ್ರದೇಶದಲ್ಲಿರುವ ಕಾಲೇಜುಗಳು, ವಿಶ್ವ ವಿದ್ಯಾಲಯಗಳ ಸಂಯೋಜಿತ ಕಾಲೇಜುಗಳಾಗಿದ್ದು ವಿದ್ಯಾರ್ಥಿಗಳು
ವಿಶ್ವ ವಿದ್ಯಾಲಯಗಳಿಂದ ಪದವಿಗಳನ್ನು ಪಡೆಯುತ್ತಿದ್ದಾರೆ. ನಂತರ ಅವರ ಸ್ವಂತ
ಪ್ರತಿಭೆಯಿಂದ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಂಯೋಜನಾ ಪದ್ಧತಿಯನ್ನು
ಮುಂದುವರಿಸುವುದು ಒಳ್ಳೆಯದು ಎಂಬುವುದು ನನ್ನ ಅಭಿಪ್ರಾಯ.
11. ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವಂತೆ, ಒಂದು ವೇಳೆ 2035 ರ ವೇಳೆಗೆ ಯಾವುದೇ
ಶಿಕ್ಷಣ ಸಂಸ್ಥೆಯು ಬಹುಶಿಸ್ತೀಯ ದೊಡ್ಡ ಮಟ್ಟದ ಕಾಲೇಜಾಗಿ ಬೆಳೆಯಲು ಸಾಧ್ಯವಾಗದ
ಪಕ್ಷದಲ್ಲಿ, ಅಂತಹ ಕಾಲೇಜನ್ನು ವಿಶ್ವ ವಿದ್ಯಾಲಯಕ್ಕೆ ಸೇರಿಸಲಾಗುವುದು. ಅಥವಾ ವಿಶ್ವವಿದ್ಯಾಲಯದ ಘಟಕದ ಕಾಲೇಜಾಗಿ ( constituent college ) ಪರಿವರ್ತನೆ
ಮಾಡಲಾಗುವುದು. ಈ ವ್ಯವಸ್ಥೆ ಆಡಳಿತಾತ್ಮಕ ದೃಷ್ಟಿಯಿಂದ ಕಷ್ಟ ಸಾಧ್ಯವಾಗಬಹುದು.
12. ಪದವಿ ಶಿಕ್ಷಣದ ಅವದಿಯಲ್ಲಿ ವಿವಿಧ ಬಗೆಯ ನಿರ್ಗಮನ ಆಯ್ಕೆಯ ಅವಕಾಶಗಳನ್ನು
ನೀಡಲಾಗಿದೆ. ಅಂದರೆ 2 ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ, ಡಿಪ್ಲೊಮ
ಪ್ರಮಾಣ ಪತ್ರ, ಒಂದು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಸರ್ಟಿಫಿಕೇಟ್
ಕೋರ್ಸ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದು ಉತ್ತಮವಾದ ಕ್ರಮ. ಏಕೆಂದರೆ,
ಪ್ರಸ್ತುತ ವ್ಯವಸ್ಥೆಯಲ್ಲಿ, ಪದವಿ ಶಿಕ್ಷಣದ ಮಧ್ಯದಲ್ಲಿ ನಿರ್ಗಮಿಸಿದರೆ, ಯಾವ ಸರ್ಟಿಫಿಕೇಟ್
ಸಿಗುವುದಿಲ್ಲ. ಆದರೆ ಮೇಲೆ ತಿಳಿಸಿರುವ ರೀತಿಯಲ್ಲಿ ಪದವಿ ಶಿಕ್ಷಣದ ಮಧ್ಯದಲ್ಲಿ ನಿರ್ಗಮಿಸಿ ಡಿಪ್ಲೊಮ ಅಥವಾ ಸರ್ಟಿಫಿಕೇಟ್ ಪ್ರಮಾಣ ಪತ್ರವನ್ನು ಪಡೆದವರಿಗೆ
ಉದ್ಯೋಗಾವಕಾಶಗಳನ್ನು ಸೃಷ್ಠಿಸ ಬೇಕಾಗುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ
ಅವರನ್ನು ಗುರುತಿಸುವಂತೆ ಪಠ್ಯ ಕ್ರಮವನ್ನು ತಯಾರು ಮಾಡ ಬೇಕಾಗಿದೆ. ಬಹಳ
ಎಚ್ಚರಿಕೆಯಿಂದ ಹೆಜ್ಜೆ ಇಡ ಬೇಕಾಗಿರುತ್ತದೆ.
13. ಪ್ರೌಢ ಮತ್ತು ಕಾಲೇಜು ಹಂತಗಳಲ್ಲಿ ಅಧ್ಯಯನಕ್ಕೆ ವಿಷಯಗಳನ್ನು ಆರಿಸಿಕೊಳ್ಳುವ
ಸಂದರ್ಭದಲ್ಲಿ ಕೆಫೆಟೀರಿಯಾ ವಿಧಾನವನ್ನು ( cafeteria approach ) ಅಳವಡಿಸಲು
ಉದ್ದೇಶಿಸಲಾಗಿದೆ. ಇದರ ಅರ್ಥ, ನಾವು ಹೋಟೆಲ್‍ಗೆ ಹೋದಾಗ ನಮಗೆ ಬೇಕಾದ ತಿಂಡಿ
ಪದಾರ್ಥಗಳನ್ನು ಆರಿಸಿಕೊಳ್ಳುವಂತೆ. ಕಲೆ, ವಾಣಿಜ್ಯ, ವಿಜ್ಞಾನ, ಸಮಾಜ ವಿಜ್ಞಾನದ
ವಿಷಯಗಳು, ಮಾನವೀಯ ಶಾಸ್ತ್ರಕ್ಕೆ ಸಂಬಂಧ ಪಟ್ಟ ವಿಷಯಗಳು, ಇವುಗಳ ನಡುವೆ
ಈಗಿರುವ ಅಡ್ಡ ಗೋಡೆಗಳನ್ನು ಸರಿಸಿ, ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳನ್ನು
ಅಧ್ಯಯನಕ್ಕೆ ಆರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನಿಜವಾಗಿಯೂ ಉತ್ತಮ ಪದ್ಧತಿ.
ಇನ್ನೂ ಮುಂಚೆಯೇ ಈ ಪದ್ಧತಿ ಜಾರಿಗೆ ಬರ ಬೇಕಾಗಿತ್ತು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ
ಭೌತಶಾಸ್ತ್ರ, ಸಂಗೀತ ಮತ್ತು ಇತಿಹಾಸದ ವಿಷಯಗಳನ್ನು ಆರಿಸಿಕೊಳ್ಳ ಬಹುದು. ಆದರೆ
ಆಡಳಿತ ಮಂಡಳಿಗಳ ದೃಷ್ಠಿಯಿಂದ ಇದು ಸ್ವಲ್ಪ ಮಟ್ಟಿಗೆ ತೊಂದರೆಯಾಗಬಹುದು. ಅನೇಕ
ವಿಷಯಗಳಿಗೆ ಸಂಬಂಧ ಪಟ್ಟಂತೆ, ಮೂಲ ಸೌಕರ್ಯ ಮತ್ತು ಶಿಕ್ಷಕರನ್ನು ಒದಗಿಸುವುದು
ಕಷ್ಟಕರವಾದಂತ ನಿರ್ಧಾರವಾಗಬಹುದು.
14. ಬಹು ಶಿಸ್ತೀಯ ವಿಧಾನವನ್ನು ( multi disciplinary ) ಅಳವಡಿಸುವಾಗ
ಮಾನಸಿಕವಾಗಿ ಶಿಕ್ಷಕರಲ್ಲೂ ಸಹ ಸಾಂಸ್ಕೃತಿಕ ಬದಲಾವಣೆ ( cultural shift ) ಬರ
ಬೇಕಾಗಿರುತ್ತದೆ. ಈ ಪ್ರಕ್ರಿಯೆ 10 – 15 ವರ್ಷಗಳಲ್ಲಿ ಪೂರ್ಣಗೊಳ್ಳ ಬೇಕಾಗಿರುತ್ತದೆ.
ಪ್ರಾಧ್ಯಾಪಕರಲ್ಲಿ ಇದರ ಬಗ್ಗೆ ನಿರುತ್ಸಾಹ ಉಂಟಾಗುವ ಸಾಧ್ಯತೆಗಳಿವೆ.
15. ಹಿಂದಿನ ಲೇಖನಕ್ಕೆ ಪ್ರತಿಕ್ರಿಯಿಸಿ, ಕೆಲವರು ಹಾಲಿ ಸೇವೆಯಲ್ಲಿರುವ ಶಿಕ್ಷಕರ ಸ್ಥಿತಿ
ಅಥವಾ ಸ್ಥಾನಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹಾಲಿ ಸೇವೆಯಲ್ಲಿರುವ ಶಿಕ್ಷಕರ
ಸೇವೆಯನ್ನು ಅವಶ್ಯಕತೆಗೆ ಅನುಗುಣವಾಗಿ ತರಬೇತಿ ನೀಡಿ, ಅವರುಗಳ ಸೇವೆಯನ್ನು ಹೆಚ್ಚಿನ
ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಪ್ರಸ್ತುತ ಅಂಗನವಾಡಿ ಕಾರ್ಯ ಕರ್ತೆಯರಲ್ಲಿ ಪಿಯುಸಿ ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಹತೆ ಪಡೆದಿರುವವರಿಗೆ ಆರು ತಿಂಗಳ ತರಬೇತಿ,
ಕಡಿಮೆ ವಿದ್ಯಾರ್ಹತೆ ಪಡೆದಿರುವ ಕಾರ್ಯ ಕರ್ತೆಯರಿಗೆ ಒಂದು ವರ್ಷದ ತರಬೇತಿಯನ್ನು
ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದಡಿಯಲ್ಲಿ ನೀಡಲಾಗುವುದು. ಪ್ರೌಢ ಶಿಕ್ಷಣ
ಹಂತದಲ್ಲಿ 9 ರಿಂದ 12 ನೇ ತರಗತಿಯವರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಅನುಷ್ಠಾನ
ಮಾಡಲಾಗುತ್ತದೆ. ಹಾಲಿ ಶಿಕ್ಷಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗುವುದಿಲ್ಲ.
16. ಶಿಕ್ಷಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ, ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ
ಕಾರ್ಯಕ್ರಮವನ್ನು ಬಹು ಶಿಸ್ತಿನ ವಿದ್ಯಾ ಸಂಸ್ಥೆಗಳಿಗೆ ವರ್ಗಾಯಿಸಲು ಯೋಜಿಸಿರುವುದು
ನಿಜವಾಗಲೂ ಉತ್ತಮ ಹೆಜ್ಜೆ. ಹಾಲಿ ಬಿ. ಎಡ್ ಕಾಲೇಜುಗಳು ಸಹ ಬಹು ಶಿಸ್ತೀಯ
ಕಾಲೇಜುಗಳಾಗಿ ಬೆಳೆದು ಪರಿವರ್ತನೆಯಾಗ ಬೇಕೆಂಬ ನಿರ್ಧಾರ ಬಹಳ ಒಳ್ಳೆಯದು. ಇದರಿಂದ
ಶಿಕ್ಷಕರ ಶಿಕ್ಷಣ ಗುಣಮಟ್ಟ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಎರಡು ವರ್ಷದ ಬಿ. ಎಡ್
ಕೂಡ ಬಹು ಶಿಸ್ತೀಯ ವಿದ್ಯಾ ಸಂಸ್ಥೆಗಳಿಗೆ ಮಾತ್ರ ನೀಡ ಬೇಕು.
ನೂತನ ಶಿಕ್ಷಣ ನೀತಿಯಲ್ಲಿ ಹಲವಾರು ಉತ್ತಮ ಸಲಹೆಗಳನ್ನು ನಾವುಗಳು ಕಾಣಬಹುದು. ಉದಾಹರಣೆಗೆ ಮೂರು ವರ್ಷದ ಮಕ್ಕಳ ಶಿಕ್ಷಣವನ್ನು ಮುಖ್ಯವಾಹಿನಿಗೆ ತಂದಿರುವುದು, ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ಸ್ವಾಯತ್ತತೆ, ಸಮಾಜದ ಎಲ್ಲಾ ವರ್ಗಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಕೈಗೆಟಕುವಂತೆ ಪ್ರಯತ್ನ, ವೃತ್ತಿ ಪರ ಶಿಕ್ಷಣವನ್ನು ಮುಖ್ಯ ವಾಹಿನಿ ಶಿಕ್ಷಣದ ಜೊತೆಯಲ್ಲಿ ಸಂಯೋಜಿಸಿರುವುದು, ಪಠ್ಯ ಕ್ರಮದಲ್ಲಿ ನಮ್ಮ ದೇಶದ ಎಥೋಸ್, ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳಿಗೆ ಒತ್ತು ನೀಡಿರುವುದು, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಗಳಿಗೆ ಒತ್ತು ನೀಡಿರುವುದು.
ಈ ನೂತನ ಶಿಕ್ಷಣದ ನೀತಿಯು ಮುಂಬರುವ ವರ್ಷಗಳಲ್ಲಿ ಹಂತ ಹಂತವಾಗಿ ಯಶಸ್ವಿಯಾಗಿ ಜಾರಿಗೆ ಬಂದು, ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗಿ ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಲೆಂದು ನಾವೆಲ್ಲರೂ ಆಶಿಸೋಣ.
Photo by Ian Panelo from Pexels
ಪೂರ್ಣ ಪ್ರಮಾಣದಲ್ಲಿ ಹೊಸ ಶಿಕ್ಷಣ ನೀತಿಯ ಪ್ರಭಾವ ಸಮಾಜದಲ್ಲಿ ಬೀರಲು 15 ವರ್ಷಗಳ ಗಡವು ಪ್ರಾಯೋಜಿಕವಾದದ್ದೇ?!
ಹಾಗಿದ್ದರೆ, ಈ 15 ವರ್ಷಗಳ ಸಂಧಿಕಾಲದ ವಿದ್ಯಾರ್ಥಿಗಳ ಭವಿಷ್ಯ ಏನು?!
ದೊಡ್ಡ ಕಾಲೇಜು, ಸಣ್ಣ ಕಾಲೇಜುಗಳ ವ್ಯತ್ಯಾಸ ಅಷ್ಟೇನೂ ಪ್ರಭಾವ ಬೀರಲ್ಲ. ಕಾರಣ ಅದು ಈಗಲೂ ಇದೆ. ಯಾವುದೇ ಕಾಲೇಜಿನಿಂದ ಬಂದಿದ್ದರೂ,ಪದವಿ ಪಡೆದಿದ್ದರೂ ನೌಕರಿ ಗಳಿಸಲು ಆಯಾಯ ಸಂಸ್ಥೆಗಳ ಪರೀಕ್ಷೆ ಕಡ್ಡಾಯ. ಇದರ ಹೊರತಾಗಿ ಸರ್ಕಾರಿ ಕಾಲೇಜುಗಳಲ್ಲೇ,ಸರ್ಕಾರಿ ವಿಶ್ವವಿದ್ಯಾಲಯದ ಲ್ಲಿ ಪದವಿ ಗಳಿಸಿದ್ದರೂ, ಸರ್ಕಾರಿ ಕೆಲಸಕ್ಕೆ ಮತ್ತೆ ಪರೀಕ್ಷೆಗಳು ಇರುವ ವ್ಯವಸ್ಥೆ ಎಷ್ಟು ಸಮಂಜಸ?! ಸರ್ಕಾರಕ್ಕೆ ತನ್ನದೇ ಸಂಸ್ಥೆಗಳ ಮೇಲೆ ಇಲ್ಲದಿರುವ ಭರವಸೆಯನ್ನು ಇದು ಎತ್ತಿ ತೋರುವುದಿಲ್ಲವೇ?
ಏನೇ ಕಷ್ಟ ಆದರೂ ಹೊಸ ನೀತಿಯ ಶಿಕ್ಷಣ ಈಗ ಇರುವುದಕ್ಕಿಂತಲೂ ಹೊಸತನ್ನು, ಭರವಸೆಯನ್ನು ಕೊಡುತ್ತದೆ ಅಂತಾದರೆ, ಮುಂದುವರೆಯುವುದು ಒಳಿತು. ಈಗಿನ ಶಿಕ್ಷಣ ವ್ಯವಸ್ಥೆ ನೌಕರರನ್ನು ಸೃಷ್ಟಿ ಮಾಡಲು ಬ್ರಿಟಿಷರಿಂದ ಆದದ್ದು. ಇದರಲ್ಲಿ ಸ್ವಾವಲಂಬನೆ ಕಂಡುಕೊಳ್ಳುವುದು ಎಲ್ಲರಿಗೂ ಸಾಧ್ಯ ಇಲ್ಲ. ಹಾಗಾಗಿಯೇ ಪ್ರತಿಯೊಬ್ಬ ಪದವೀಧರನ ಮೊದಲ ಆದ್ಯತೆ ಸರ್ಕಾರಿ ಅಥವಾ ಖಾಸಗಿ ನೌಕರಿ ಆಗಿದೆ.
ಬದಲಾಗುತ್ತಿರುವ ಸ್ವಾವಲಂಬಿ ಭಾರತಕ್ಕೆ ಮೊದಲಿಗೆ ಬೇಕಿರುವುದು ಹೊಸ ಶಿಕ್ಷಣ ನೀತಿ.
ಸಾಧಕ ಬಾಧಕಗಳನ್ನು ವಿವರವಾಗಿ ಪಟ್ಟಿ ಮಾಡಿದ ಲೇಖನ ಚೆನ್ನಾಗಿದೆ. ಲೇಖಕರಿಗೆ ಮತ್ತು ಕನ್ನಡ ಪ್ರೆಸ್.ಕಾಮ್ ಗೆ ವಂದನೆಗಳು.
ಅಕ್ಷರಗಳನ್ನು ಹೀಗೆಯೇ ಬರೀಬೇಕು ಅನ್ನುವ ಶಿಕ್ಷಣ ಕ್ರಮದಿಂದ ರಚನಾತ್ಮಕ (creativity) ಶಿಕ್ಷಣಕ್ಕೆ ಹೋಗುತ್ತೇವೆ ಅನ್ನುವ ಯೋಚನೆಯೇ ರೋಮಾಂಚನವಾಗುತ್ತಿದೆ.
ಸುದೀರ್ಘ ,ಸರಳ, ಮಾಹಿತಿಯುಕ್ತ ಮತ್ತು ಉಪಯುಕ್ತ ಲೇಖನ.