ಷೇರುಪೇಟೆಯಲ್ಲಿ ವಿವಿಧ ಇಂಡೆಕ್ಸ್ ಗಳು ಏಕಮುಖವಾಗಿ ಏರಿಕೆ ಕಾಣುತ್ತಿರುವುದು ಅನೇಕ ಹೊಸ ಹೂಡಿಕೆದಾರರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ. ವಿಶೇಷವಾಗಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ವಲಯದ ಕಂಪನಿಗಳು ಚಿಗರೊಡೆಯುತ್ತಿರುವುದು ಹೆಚ್ಚಿನವರ ಗಮನವನ್ನಾಕರ್ಷಿಸುತ್ತಿದೆ. ಸೆನ್ಸೆಕ್ಸ್ ನ ರಭಸದ ಏರಿಕೆಯ ಹಿಂದೆ 30 ಕಂಪನಿಗಳಲ್ಲಿ ವಿತ್ತೀಯ ವಲಯದ 9, ನವರತ್ನ ಕಂಪನಿಗಳ ಕೊಡುಗೆ ಅಪಾರ. ಖರೀದಿಸುವ ಕಂಪನಿಗಳ ಚರಿತ್ರೆಯನರಿತು ನಡೆಸುವ ವಹಿವಾಟು ಉತ್ತಮ ಫಲ ನೀಡಬಲ್ಲದು.
ಕೆಲವು ಕಂಪನಿಗಳ ವಿವರ ಇಂತಿದೆ:
ವಾಟೆಕ್ ವಾಬಾಗ್ ಕಂಪನಿಯ ಷೇರಿನ ಬೆಲೆ ಏಪ್ರಿಲ್ ತಿಂಗಳಲ್ಲಿ ರೂ.73 ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿದ್ದು ಆಗಸ್ಟ್ ತಿಂಗಳಲ್ಲಿ ರೂ.235 ಕ್ಕೆ ಏರಿಕೆ ಕಂಡಿರುವುದು, ಅದರಲ್ಲೂ ಒಂದೇ ತಿಂಗಳಲ್ಲಿ ರೂ.115 ರ ಸಮೀಪದಿಂದ ರೂ.235 ಕ್ಕೆ ಜಿಗಿತ ಕಂಡಿರುವುದು ಆಂತರಿಕ ಕಾರಣಗಳಿಗಿಂತ ಹೆಚ್ಚಾಗಿ ಬಾಹ್ಯ ಕಾರಣಗಳು ಕಾರಣ .ಈ ಕಂಪನಿಯ ಷೇರಿನ ಬೆಲೆ 2017 ರಲ್ಲಿ ರೂ.600 ರ ಸಮೀಪವಿದ್ದು ಆಗ ಖರೀದಿಸಿದವರಿಗೆ ಬಂಡವಾಳ ಉಳಿಸಿಕೊಂಡು ಹೊರಬರಬೇಕಾದ ಅವಕಾಶಗಳ ವಂಚಿತರಾಗಿದ್ದಾರೆ ಎಂಬುದು ಅರಿಯಬೇಕು.
ಸ್ಟರ್ಲೈಟ್ ಟೆಕ್ನಾಲಜೀಸ್ ಕಂಪನಿಯ ಷೇರಿನ ಬೆಲೆ ಒಂದು ತಿಂಗಳಲ್ಲಿ ರೂ.115 ರ ಸಮೀಪದಿಂದ ರೂ.170 ರ ಗಡಿಯನ್ನು ದಾಟಿದೆ, ಈ ಏರಿಕೆಗೆ ಕಂಪನಿಯ ಸಾಧನೆ ಕಾರಣವಾಗಿರದೆ ಕೇವಲ ಹೊರಗಿನ ಪ್ರಚಾರಿಕತೆಯಿಂದ ಏರಿಕೆ ಕಂಡಿದೆ. ಇದೇ ಷೇರಿನ ಬೆಲೆ ಸೆಪ್ಟೆಂಬರ್ 2018 ರಲ್ಲಿ ರೂ.300 ಕ್ಕೂ ಹೆಚ್ಚಿದ್ದು ಈ ವರ್ಷದ ಮಾರ್ಚ್ ನಲ್ಲಿ ರೂ.60 ರ ಸಮೀಪಕ್ಕೆ ಕುಸಿತ ಕಂಡಿದ್ದ ಷೇರು ಇಷ್ಟು ಬೇಗ ನಿಶ್ಷೇಷ್ಟಿತ ವಾತಾವರಣದಲ್ಲಿ ಚಿಗರೊಡೆದಿರುವುದರಿಂದ ಚಟವಟಿಕೆಗೆ ಮುಂಚೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ನೋಸಿಲ್ ಕಂಪನಿ ಷೇರು ಕಳೆದ ಎರಡು ವರ್ಷಗಳ ಹಿಂದೆ ಖರೀದಿಸಿದವರು ಸಧ್ಯ ತಮ್ಮ ಖರೀಸಿದಿಸಿದ ಬೆಲೆ ಹತ್ತಿರ ಬರುತ್ತಿದೆ ಎಂದು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಮಾರ್ಚ್ ನಲ್ಲಿ ರೂ.45 ರ ಸಮೀಪದಲ್ಲಿದ್ದ ಈ ಷೇರಿನ ಬೆಲೆ ಈಗ ರೂ.135 ರ ಸಮೀಪದಲ್ಲಿದೆ. 2018 ರ ಅಕ್ಟೋಬರ್ ನಲ್ಲಿ ಈ ಷೇರಿನ ಬೆಲೆ ರೂ.160 ರಲ್ಲಿತ್ತು. ಜೂನ್ 2020 ರ ತ್ರೈಮಾಸಿಕ ಸಾಧನೆಯಂತೂ ಈ ಏರಿಕೆಗೆ ಪೂರಕ ಅಂಶವಂತೂ ಅಲ್ಲ.
ಎಚ್ ಎ ಎಲ್ ಕಂಪನಿಯ ಷೇರಿನ ಬೆಲೆ ಇತ್ತೀಚೆಗೆ ಹೆಚ್ಚು ಚುರುಕಾದ ಚಟುವಟಿಕೆಭರಿತವಾಗಿದೆ. ಒಂದು ತಿಂಗಳಲ್ಲಿ ರೂ.860 ರ ಸಮೀಪದಿಂದ ರೂ.1,400 ನ್ನು ದಾಟಿ ಈಗ ರೂ.1,010 ರ ಸಮೀಪ ಕೊನೆಗೊಂಡಿದೆ. 2018 ರಲ್ಲಿ ಈ ಕಂಪನಿಯು ರೂ.1,215ರಂತೆ ಆರಂಭಿಕ ವಿತರಣೆ ಮಾಡಿತ್ತು ಎಂಬ ವಿಚಾರ ಓದುಗರು ಗಮನಿಸಬೇಕಾಗಿದೆ. ಈ ಕಂಪನಿಯ ಷೇರಿನ ವಿಸ್ಮಯಕಾರಿ ಅಂಶವೆಂದರೆ ಎರಡು ವರ್ಷಗಳ ಹಿಂದೆ ಐಪಿಒ ಮೂಲಕ ಖರೀದಿಸಿದವರಿಗೆ ಹೂಡಿಕೆಯ ಹಣ ಪಡೆದುಕೊಳ್ಳಲು ಎರಡು ವರ್ಷ ಕಾಯಬೇಕಾಯಿತು. ಆದರೆ ಮಾರ್ಚ್ – ಏಪ್ರಿಲ್ ನಲ್ಲಿ ಖರೀದಿಸಿದವರು ಕೆಲವೇ ತಿಂಗಳಲ್ಲಿ ಎರಡು – ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ರೂ.1,215 ರಂತೆ ವಿತರಣೆಮಾಡಿದ ಕಂಪನಿ ಈಗ ರೂ.1,000 ದ ಸಮೀಪ ಮರುವಿತರಣೆ ಮಾಡಲು ಹರಸಾಹಸ ಮಾಡುವ ಪರಿಸ್ಥಿತಿ ಬಂದಿದೆ.
ಮಾರ್ಚ್ ತಿಂಗಳಲ್ಲಿ ಪ್ರತಿ ಷೇರಿಗೆ ರೂ.755 ರಂತೆ ಐಪಿಒ ಮೂಲಕ ಪೇಟೆ ಪ್ರವೇಶಿಸಿದ ಎಸ್ ಬಿ ಐ ಕಾರ್ಡ್ಸ್ ಅಂಡ್ ಪೇಮೆಂಟ್ಸ್ ಸರ್ವಿಸಸ್ ಕಂಪನಿಯ ಷೇರುಗಳು ಲೀಸ್ಟಿಂಗ್ ಆದ ಮೇಲೆ ರೂ.500 ರ ಸಮೀಪಕ್ಕೆ ಕುಸಿದಿತ್ತು. ಒಂದು ತಿಂಗಳ ಹಿಂದೆ ರೂ.725 ರ ಸಮೀಪದಲ್ಲಿದ್ದ ಈ ಷೇರಿನ ಬೆಲೆ ಶುಕ್ರವಾರದಂದು ರೂ.845 ರ ಸರ್ವಕಾಲೀನ ಗರಿಷ್ಠಕ್ಕೆ ಏರಿಕೆ ಕಂಡಿದೆ.
ಇದೇ ರೀತಿ ಕಂಪನಿಗಳಾದ ಕ್ವೆಸ್ ಕಾರ್ಪ್, ಹೆಲ್ತ್ ಕೇರ್ ಗ್ಲೋಬಲ್, ರೇನ್ ಇಂಡಸ್ಟ್ರೀಸ್, ಅಪೆಕ್ಸ್ ಫ್ರೋಜನ್, ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ, ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್, ಆದಿತ್ಯ ಬಿರ್ಲಾ ಕ್ಯಾಪಿಟಲ್, ನ್ಯೂ ಇಂಡಿಯಾ ಅಶ್ಶುರನ್ಸ್, ಜನರಲ್ ಇನ್ಶೂರನ್ಸ್ ಕಾರ್ಪೊರೇಷನ್*, ನಂತಹ ಅನೇಕ ಕಂಪನಿಗಳನ್ನು ಒಂದೆರಡು ವರ್ಷಗಳಲ್ಲಿ ಕೊಂಡವರು ತಮ್ಮ ಅಸಲು ಹಣ ಹಿಂಪಡೆಯಲು ಕಾಯುತ್ತಿದ್ದಾರೆ. ಆದರೆ ಕೆಲವೇ ತಿಂಗಳಲ್ಲಿ ಹೂಡಿಕೆ ಮಾಡಿದವರಿಗೆ ಅತ್ಯಧಿಕ ಲಾಭ ತಂದುಕೊಟ್ಟಿದೆ.
ಇನ್ನು ಕಂಪನಿಗಳಾದ ರಿಲಯನ್ಸ್ ಇನ್ ಫ್ರಾ, ರಿಲಯನ್ಸ್ ಕ್ಯಾಪಿಟಲ್, ಸಿಂಟೆಕ್ಸ್ ಇಂಡಸ್ಟ್ರೀಸ್, ಸಿಂಟೆಕ್ಸ್ ಪ್ಲಾಸ್ಟಿಕ್ಸ್, ಎಂ ಎಂಟಿಸಿ, ಗೋವಾ ಕಾರ್ಬನ್, ಯೆಸ್ ಬ್ಯಾಂಕ್ ನಂತಹ ಕಂಪನಿಗಳ ಷೇರು ಖರೀದಿಸಿದವರು ಒತ್ತಾಯಪೂರ್ವಕವಾಗಿ, ಹೂಡಿಕೆ ಹಣ ಕರಗಿಸಿಕೊಳ್ಳಲು ಇಷ್ಟಪಡದೆ, ಹೂಡಿಕೆಯನ್ನು ಮುಂದುವರೆಸಿಕೊಂಡುಹೋಗುತ್ತಿದ್ದಾರೆ.
ಬ್ಯಾಂಕಿಂಗ್ ವಲಯ ಚುರುಕು
ಸಧ್ಯ ಬ್ಯಾಂಕಿಂಗ್ ವಲಯ ಚುರುಕಾಗಿದೆ. ಬ್ಯಾಂಕಿಂಗ್ ವಲಯದ ಕೆನರಾ ಬ್ಯಾಂಕ್ 2014 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲು ನಿರ್ಧರಿಸಿತ್ತು. ಆದರೆ ಇದುವರೆಗೂ ಅದು ಜಾರಿಗೊಳಿಸಲಿಲ್ಲ. ಆದರೆ ಪೇಟೆ ಮಾತ್ರ ಷೇರಿನ ಬೆಲೆಯನ್ನು ಮುಖಬೆಲೆ ಸೀಳಿಕೆಯ ನಂತರದ ಮಟ್ಟಕ್ಕೆ ಷೇರಿನಬೆಲೆಯನ್ನು ಇಳಿಸಿದೆ. ಅಂದರೆ ಆಗ ಸುಮಾರು ರೂ.450-500 ರ ಸಮೀಪವಿದ್ದ ಷೇರು ಈಗ ಸುಮಾರು ರೂ.113 ರ ಸಮೀಪವಿದೆ.
ಸಾರ್ವಜನಿಕ ವಲಯದ ಷೇರುಗಳು ಇನ್ನೂ ಚುರುಕಾದ ಚಟುವಟಿಕೆಗೆ ಒಳಪಟ್ಟಿಲ್ಲವಾದರೂ, ಇದೇ ರೀತಿ ಪೇಟೆಯೊಳಗಿನ ಹರಿವು ಮುಂದಾದರೆ ಆಂತರಿಕಸಾಧನೆಯಾಧಾರಿತ ಕಂಪನಿಗಳು ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆ ಹೆಚ್ಚು.
ಇದಕ್ಕೆ ಉದಾಹರಣೆ ಶುಕ್ರವಾರ ಎನ್ ಎಂಡಿಸಿ ಷೇರು ಪ್ರದರ್ಶಿಸಿದ ಏರಿಕೆಯಾಗಿದೆ. ಐಒಸಿ, ಹೆಚ್ ಪಿ ಸಿ ಎಲ್, ಬಿ ಪಿ ಸಿ ಎಲ್, ಆರ್ ಇ ಸಿ, ಪಿ ಎಫ್ ಸಿ, ಗೇಲ್, ಬಾಲ್ಮರ್ ಲೌರಿ, ಪಿಟಿಸಿ ಇಂಡಿಯಾ, ಬಿ ಇ ಎಲ್, ಹುಡ್ಕೋ* ಗಳಂತಹ ಕಂಪನಿಗಳು ಹೂಡಿಕೆದಾರರಿಗೆ ಆಕರ್ಷಕ ಕಾರ್ಪೊರೇಟ್ ಫಲಗಳನ್ನು ವಿತರಿಸುವುವಾಗಿದ್ದರೂ, ಅದಕ್ಕೆ ಪೂರಕವಾದ ಬೆಂಬಲ ಇದುವರೆಗೂ ಲಭ್ಯವಾಗಿಲ್ಲ. ಇಂತಹ ಕಂಪನಿಗಳು ದೀರ್ಘಕಾಲೀನ ಹೂಡಿಕೆಗೆ ಆಯ್ಕೆ ಮಾಡಿಕೊಂಡರೂ, ಅನಿರೀಕ್ಷಿತ ಲಾಭ ತಂದುಕೊಟ್ಟಲ್ಲಿ ನಗದೀಕರಿಸಿಕೊಳ್ಳುವುದು ಬಂಡವಾಳ ಸುರಕ್ಷತೆಗೆ ಉತ್ತಮ ಮಾರ್ಗ.
ಕೇವಲ ಹೃದಯದ ರಾಗಕ್ಕೆ ಮನಸೋಲದೆ, ಮಿದುಳಿನ ಚಿಂತನೆಗೂ ಆದ್ಯತೆ ಈಗಿನ ಅವಶ್ಯಕತೆ.
ನೆನಪಿಡಿ: ಷೇರುಪೇಟೆ ಹೂಡಿಕೆ ಈಗಿನ ದಿನಗಳಲ್ಲಿ, ಪ್ರವೇಶ ದೀರ್ಘಕಾಲೀನದ ಉದ್ದೇಶವಾದರೂ, ನಂತರ ವ್ಯವಹಾರಿಕ ದೃಷ್ಠಿಯಿಂದ ನಿರ್ಧರಿಸಬೇಕು.
ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಉತ್ತಮ ಮಾಹಿತಿ. ವಂದನೆಗಳು ಲೇಖಕರಿಗೆ