ಅಂತೂ ಇಂತೂ ಕಲಿಯುಗದ ಒಂದು ಪ್ರಮುಖ ವಿದ್ಯಮಾನವಾದ ಕೊರೊನಾ ಶಕೆಯ ಆರಂಭ ಕಾಲ ಮುಗಿದು ಇದು ಮಧ್ಯಕಾಲವೋ ಅಂತಿಮವೊ ಎಂಬ ಚಿಂತೆಯಲ್ಲಿರುವಾಗಲೇ ಸಲೂನೂ,ಸ್ಪಾ,ಪಾರ್ಲರ್ರುಗಳನ್ನು ತೆರೆಯಬಹುದು ಎನ್ನುವ ಸರ್ಕಾರದಿಂದ ಸುತ್ತೋಲೆ ಬಂದಾಗ ನನಗಂತೂ ಈ ಕೆಳಗಿನ ಸಂಗತಿಗಳು ಇನ್ನು ಮಿಸ್ ಆಗುತ್ತವಲ್ಲ ಅಂಥ ಅನ್ನಿಸಿದ್ದು ಸುಳ್ಳಲ್ಲ.
ತಮ್ಮ ಪತಿದೇವರಿಗೋ, ಮಗನಿಗೋ, ಸೋದರರಿಗೊ ಹೇರ್ಕಟ್ ಮಾಡುತ್ತಿರುವ ಹೆಂಗೆಳೆಯರ ಅಪರೂಪದ ವಾಟ್ಸ್ ಆಪ್ ಸ್ಟೇಟಸ್ ಗಳನ್ನು ನೋಡುವ ಸೌಭಾಗ್ಯ ಇಲ್ಲದೇ ಹೋದದ್ದು ಮೊದಲ ನಷ್ಟ.
‘ಕೊರೊನಾ ಲುಕ್ಸ್’ಎನ್ನುವ ಕ್ಯಾಪ್ಷನ್ ಇಟ್ಟು ಡಿಪಿಗೆ ಅಪ್ಟೇಡಿಟಿಸಲಾಗುತ್ತಿದ್ದ ಅಡ್ಡಾದಿಡ್ಡಿ ಗಡ್ಡದಾರಿ ಸ್ಪುರದ್ರೂಪಿಗಳನ್ನ ಮತ್ತೆ ಮತ್ತೆ ಝೂಮಿಸಿ ಇವ ಹಿಂಗ ಚಂದವೋ, ಹಂಗೋ ಅನ್ನುವ ಮಹತ್ವದ ಪ್ರಶ್ನೆಗಳಿಗೆ ನಾವು ಗೆಳತಿಯರು ಚರ್ಚಿಸಿ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳು ನಿಂತದ್ದು ಎರಡನೇ ನಷ್ಟ.
ನಮ್ ನಮ್ಮ ತಲೆಗೂದಲು ಉದುರುವುದೇ ಭಾರಿ ಚಿಂತೆಯಾಗಿದ್ದ ಕಾಲವೊಂದಿತ್ತು. ಆ ದುರಿತ ಕಾಲ ಕೊರೊನಾ ಭಾಗ್ಯದಲ್ಲಿ ಕಳೆದು ಹೋಗಿ ಮೂರನೇ ವಾರಕ್ಕೇ ಆರಿಂಚು ಬೆಳೆದ ತಮ್ಮ ಗಡ್ಡ ಮೀಸೆ ,ತಲೆಕೂದಲ ಸಾಮರ್ಥ್ಯ ಕಂಡು ನಿಬ್ಬೆರಗಾಗಿ ಇನ್ನೂ ಕೂದಲು ಉದುರುವ ಸಮಸ್ಯೆಗೆ ಕಾಸು ಖರ್ಚು ಮಾಡಬೇಕಿಲ್ಲ ಎಂದು ನಿಟ್ಟುಸಿರು ಬಿಡುವಾಗಲೇ ಈ ವೃತ್ತಿಯಲ್ಲಿ ಕೈ ತುಂಬಾ ಸಂಪಾದಿಸುತ್ತಿದ್ದವರು ಕಣ್ಕಣ್ಣು ಬಿಡುವಂತಾಗಿದ್ದು ಮೂರನೇ ನಷ್ಟ.ಆದರೆ ಕೊರೊನಾ ಕಾಲದ ಭತ್ಯೆಯಾಗಿ ಈ ವೃತ್ತಿಯಲ್ಲಿನ ಶ್ರಮಿಕರಿಗೂ ತಲಾ ಇಂತಿಷ್ಟು ಎಂಬೊಂದು ಮೊತ್ತ ಸಮಾಜದ ಉಳಿದೆಲ್ಲ ಶ್ರಮಿಕರಂತೆ ಸಿಕ್ಕಿದ್ದು ಸಂತಸದ ಸುದ್ದಿ.
ಕೊನೆಯದಾಗಿ ಒಂದು ಸಂತಸದ ಸಂಗತಿ.ಹೇಳೇ ಬಿಡ್ತೀನಿ.ಚಿಕ್ಕಂದಿನಲ್ಲಿ ಸದಾ ಅಪ್ಪನ ಮೊಡ್ಡು ಕತ್ತರಿ ಜೊತೆಗೇ ಆಟವಾಡುತ್ತಾ ಸಿಕ್ಕಿದ ವೇಸ್ಟು ಪದಾರ್ಥಗಳನ್ನೆಲ್ಲಾ ಆ ಮೊಡ್ಡು ಕತ್ತರಿಯಿಂದ ತುಂಡುತುಂಡು ಮಾಡಲು ಯತ್ನಿಸಿ ,ಅಮ್ಮನಿಂದ ಸಾಕಷ್ಟು ಬೈಗುಳಗಳನ್ನೂ ಅದಕ್ಕಾಗಿ ಗಿಟ್ಟಿಸಿಕೊಂಡವಳು ನಾನು.ಯಾವುದನ್ನಾದರೂ ಒಂದು ಶೇಪಲ್ಲಿ ಕತ್ತರಿಸಬೇಕೆನ್ನುವ ನನ್ನ ಅದಮ್ಯ ಆಸೆಗೆ ಯಾರಾದಾದರೂ ಫಲಭರಿತ ಮಂಡೆ ಸಿಕ್ತದಾ ಅಂತ ಹುಡುಕಾಡ್ತಾ ಒಬ್ಬೊಳ್ಳೆ ಹೇರ್ ಸ್ಟೈಲಿಸ್ಟ್ ಆಗಬೇಕು ಎನ್ನುವ ನನ್ನ ಬಯಕೆ ಅಂತೂ ಇಂತೂ ಕೊರೊನಾ ಕಾಲದಲ್ಲಿ ಈಡೇರಿದೆ.
ಈ ಕೊರೊನಾ ದುರಿತ ಕಾಲದಲ್ಲಿ ಸಲೂನಿನ ಸಹಯೋಗವಿಲ್ಲದೆ ವಿಪರೀತ ಬೆಳೆದ ತನ್ನ ತಲೆಗೂದಲ ಜೊತೆಗೆ ತಲೆಯನ್ನೂ ನೆಚ್ಚಿನ ತಂಗಿಯ ಕೈಗಿಟ್ಟು ನನ್ನಣ್ಣ ನಿರಾಂತಕದಲಿ ಅರೆಗಣ್ಣಾದದ್ದೆ ತಡ.ನನಗೆ ಮರೆತೇ ಬಿಟ್ಟಿದ್ದ ಹಳೆಯ ಕನಸೊಂದು ಮತ್ತೆ ಸಾಕಾರವಾಗುತ್ತಿರುವ ಸಡಗರವಾಗಿ ಹೋಯಿತು.ಯಾವುದೋ ಸೌಭಾಗ್ಯ ಸಿಕ್ಕಂತಾಗಿ ಅಣ್ಣನ ತಲೆಗೂದಲನ್ನು ಒಮ್ಮೆ ಕೈಯಲ್ಲಿ ಹಾಗೆ ಹೀಗೆ ನೋಡಿ ಅದರ ಲೆಂತೂ,ಡೆನ್ಸಿಟಿ,ಮೃದುತ್ವವನ್ನು ಪರೀಕ್ಷೆ ಮಾಡಿದೆ.ಹೀಗೆ ಸಲೂನಿನವರು ಮಾಡ್ತಾರೋ ಇಲ್ವೋ ಅದಂತೂ ಗೊತ್ತಿಲ್ಲ. ಆದರೆ ನಾನು ಮಾತ್ರಮಹಾ ಕಸುಬುದಾರಿಣಿಯಂತೆ ಸಿಕ್ಕಿದ ವಿಪುಲ ಕೇಶದ ಮಂಡೆಯನ್ನು ಆಚೀಚೆ ತಿರುಗಿಸಿ ಸೂಕ್ಷ್ಮವಾಗಿ ಒಮ್ಮೆ ಗಮನಿಸಿ ಕೊಂಡೆ.ಆಮೇಲೆ ಅಣ್ಣನನ್ನು ಕೆಳಗೆ ಕೂರಿಸಿ ನಾನು ಅಂಗಳದ ಒಂದು ಕಟ್ಟೆಯ ಮೇಲೆ ಕುಳಿತು ಅವನ ತಲೆಗೂದಲಿಗೆ ಒಂದಿಷ್ಟು ನೀರು ಪ್ರೋಕ್ಷಿಸಿಕೊಂಡೆ.ಆಮೇಲೆ ಅಣ್ಣನಕೈಗೆ ಕೊಟ್ಟಿದ್ದ ಕನ್ನಡಿಯಲ್ಲಿ ಗಮನಿಸುತ್ತಾ ಒಂದು ಅಗಲ ಹಲ್ಲಿನ ಬಾಚಣಿಗೆಯಿಂದ ಸೈಡಿನ ಕೂದಲನ್ನು ಕತ್ತರಿಸಿದೆ.ಆಹಾ…ಮೊತ್ತ ಮೊದಲ ಪ್ರಯತ್ನವೇ ಪರ್ಫೆಕ್ಟ್ ಎನಿಸಿ ನಾನಿನ್ನು ಜಗದ ಅತಿ ದೊಡ್ಡ ಕೇಶ ವಿನ್ಯಾಸಕಿ ಆಗೇ ಬಿಟ್ಟೆ ಎನ್ನುವ ಹೆಮ್ಮೆ ಯಲ್ಲಿ ಹಿಂಬದಿಯ ಕೂದಲನ್ನೂ ಹಾಗೇ ಬಾಚಣಿಗೆಯಿಂದ ಮೇಲೆತ್ತಿ ಕತ್ತರಿಸಿದೆ.ಹಾಗೇ ಈ ಬದಿಯದ್ದೂ.
ಅಣ್ಣ ಹಾಗೇ ಕನ್ನಡಿಯಲ್ಲಿ ಗಮನಿಸುತ್ತಿದ್ದವ ‘ಏನೇ ನೀನು’ ಅಂದಿದ್ದಕ್ಕೆ ನಾನೇನೂ ಕಮ್ಮಿಯಿಲ್ಲದವಳಂತೆ”ಹೆಂಗೆ ನಾವು” ಎಂದೆ.ಮೊದಲಿಗೆ ಮಂಡೆಯ ಸುತ್ತಲಿನ ಕೂದಲನ್ನು ಕತ್ತರಿಸಬೇಕೆಂದು ಯಾವ ಹೇರ್ ಹೋಸ್ಟೆಸ್ ಯೂನಿವರ್ಸಿಟಿಯಲ್ಲೂ ಕಲಿತಿಲ್ಲವಾದರೂ ನಾನು ಮಾತ್ರ ಸುತ್ತಲೂ ಕಲಾಯಿ ಹೊಡೆಯುವವಳಂತೆ ಕತ್ತರಿಸಿ ಆಮೇಲೆ ಮೇಲೆ ಮೇಲೆ ಹೋಗಲಾರಂಬಿಸಿದೆ.ಅದೇನೋ ಗೊತ್ತಿಲ್ಲ.ಬಹಳ ಚೆನ್ನಾಗಿ ಹೇರ್ಕಟ್ ಮಾಡ್ತಿದ್ದೀನಿ ಎನ್ನುವ ಆತ್ಮವಿಶ್ವಾಸವೋ ,ಹುಸಿಜಂಭವೋ ಆಗಲೇ ನನ್ನ ಬೆರಳುಗಳಿಗೆ ಬಂದಾಗಿತ್ತು.ಅಂತೂ ಕತ್ತರಿಸುತ್ತಾ ಹೋದೆ.
ಅಣ್ಣ ಮಾತ್ರ ಹೇಗೂ ವರ್ಕ್ ಫ್ರಮ್ ಹೋಮ್ ಇದ್ದುದ್ದರ ಜೊತೆಗೆ ಕೊರೊನಾ ಕಾರಣ ದಿಂದಾಗಿ ಯಾವ ಅತಿಥಿ ಅಭ್ಯಾಗತರ ಭೇಟಿಯ ,ಮುಖಾಮುಖಿಯಸಾಧ್ಯತೆಗಳೂ ಮುಚ್ಚಿದ್ದರಿಂದ ತಂಗಿಯ ಕೈಗೆ ತನ್ನ ಕೇಶಭರಿತ ಬುರುಡೆ ಕೊಟ್ಟು ಕುಳಿತು ಬಿಟ್ಟಿದ್ದ.ನಾನು ಆಗಾಗ ಸ್ಪೆಷಲ್ ಸ್ಕಿಲ್ಲಿನ ಸಲೂನಿನವನ ಥರ ಸೈಡ್ ಎಷ್ಟು ಗಿಡ್ಡ ಇರಬೇಕು ಅಣ್ಣಾ?ಹಿಂದೆ ಇನ್ನೂ ಸ್ವಲ್ಪ ಶಾರ್ಟ್ ಮಾಡಲಾ…ಈಗ ನೋಡ್ಕೋ..ಅಂತೆಲ್ಲಾ ಮಾತಾಡ್ತಾ ಕಚಕಚಕಚ ಕತ್ತರಿ ಆಡಿಸಿ,ಟ್ರಿಮ್ ಮಾಡಿ ಅಣ್ಣನಿಗೆ ಕಣ್ಣು ಬಿಡಲು ಹೇಳಿದೆ.
ಸೇಮ್ ಟು ಸೇಮ್ಮ್ ಖಾಲಿ ಬಿಳಿಮಡಿಕೆ ಥರ ಕಾಣ್ತಿತ್ತು ನನ್ನ ಕೈ ಚಳಕಕ್ಕೆ ಸಿಕ್ಕಿದ ಅಣ್ಣನ ಮಂಡೆ. ಕನ್ನಡಿ ಕೊಟ್ಟಾಗ ಒಂಥರ ಮುಖ ಮಾಡಿಕೊಂಡ ಅಣ್ಣ ದೇವರು ಕೊಟ್ಟ ತಂಗಿ ಮಾಡಿದ ಹೇರ್ಕಟ್ಟನ್ನು ಅಲ್ಲಗಳಲೆಯೂ ಆಗದೇ ಒಪ್ಪಲೂ ಆಗದೇ ‘ಬೆಳೆಯುತ್ತೆ ಬಿಡು.ಇನ್ನೆರಡು ದಿನದಲ್ಲಿ’ ಅಂತ ಸಮಾಧಾನ ಮಾಡಿಕೊಂಡ.
ಆದರೆ ..ನನಗೇ ಸ್ಪುರದ್ರೂಪಿ ಅಣ್ಣನ ಚಲುವು ನನ್ನ ಕೈಚಳಕಕ್ಕೆ ಬಲಿಯಾದ ವಿಚಿತ್ರ ಹೇರ್ಸ್ಟೈಲನ್ನಿಂದಾಗಿಒಂದು ವಾರವಾದರೂ ನೋಡಲಾಗದೇ ‘ಅಣ್ಣಾ…ಟೋಪಿ ಹಾಕಳೋ..ಚೆನ್ನಾಗಿ ಕಾಣ್ತಿಯಾ’ ಅಂತ ಟೋಪಿ ಹಾಕಲು ನೋಡಿದೆ.ಆದರೆ ಅಣ್ಣಾ ಮಾತ್ರ ಸ್ಥಿತಪ್ರಜ್ಞನಂತೆ “ಇಟ್ಸ್ ಓಕೆ ಬಿಡಮ್ಮಾ.ಈಗಾಗಲೇ ನೀ ಹಾಕಿರೋ ಟೋಪಿ ಚೆನ್ನಾಗೇ ಇದೆ.ಇದಕ್ಕೆ ಕೊರೊನಾ ಹೇರ್ಕಟ್ ಅಂತ ಹೊಸ ಹೆಸರಿಡಬಹುದು”ಅಂತ ಜೋರು ನಕ್ಕಿದ್ದು ಮಾತ್ರ ಯಾರ ತಲೆಗೂದಲನ್ನಾರೂ ಒಂದು ಶೇಪಿಗೆ ಕತ್ತರಿಸಬಲ್ಲೆ ಎನ್ನುವ ಕನಸನ್ನು ಈಡೇರಿಸಿದೆ.
ಕೊರೊನಾ ಭಾಗ್ಯ ಕಾಲದಲ್ಲಿ ಯಾರು ಯಾರೋ ಏನೇನೋ ಸಂಪಾದಿಸಿಕೊಂಡು ತಮ್ಮ ಕಿಸೆಯನ್ನೂ, ಖಾತೆಯನ್ನೂ ತುಂಬಿಸಿಕೊಂಡ ಸಂಗತಿ ಆಗಾಗ ಕಿವಿ ಮೇಲೆ ಬೀಳುತ್ತಲೆ ಇರುವಾಗ ಅಣ್ಣನಿಗೆ ಹೇರ್ಕಟ್ ಮಾಡಿದ ಸಡಗರವನ್ನು ನನಗೆ ಕೊರೊನಾ ಕೊಟ್ಟಿದೆ.ಜೊತೆಗೆ ಅಣ್ಣನಿಗೆ ತನ್ನ ದೇವರು ಕೊಟ್ಟ ತಂಗಿಯ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ದೃಢಪಡಿಸಿ ನನ್ನ ಜವಬ್ದಾರಿಯನ್ನೂ ಹೆಚ್ಚಿಸಿದೆ.ಅದಕ್ಕಾಗಿ…
ಥ್ಯಾಂಕ್ಯೂ ಕೊರೋನಾ.
ಟಾಂಕೀಸ್ ಅಣ್ಣಾ…!!
ಕಿರಣ್ ಮಾಡಾಳು
ಇಲ್ಲಿ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಚ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156
ನಮ್ಮ ಮನೆಯಲ್ಲೂ ಈ haircut ರಾಮಾಯಣ ನಡೆದಿದ್ದರಿಂದ
ಲೇಖನ ತುಂಬಾ ಇಷ್ಟವಾಯಿತು. ಎಲ್ಲೂ ನಿಲ್ಲದೆ ಓದಿಸಿಕೊಂಡು ಹೋಯಿತು. Enjoy ಮಾಡಿದೆ.
ಹ ಹಾ ಹಾಆಆಆ