19.9 C
Karnataka
Sunday, September 22, 2024

    ಚೀನಾದ ಗಡಿ ತಂಟೆಗೆ ಅಸಲಿ ಕಾರಣ

    Must read

    ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಯಾವುದೇ ಬಿಕ್ಕಟ್ಟುಗಳಿಗೆ ನಾನಾ ಆಯಾಮಗಳಿರುತ್ತವೆ. ಇವುಗಳ ಪೈಕಿ ಭಾರತ-ಚೀನಾ ನಡುವಿನ ಈಗಿನ ಸಂಘರ್ಷ ಕೂಡ ಸೇರುತ್ತದೆ. ಹಾಗಾದರೆ, ಜಗತ್ತೇ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ (ಮುಖ್ಯವಾಗಿ ಕೋವಿಡ್ -19ನಿಂದ ಆದ ಸಮಸ್ಯೆ) ಯಾಕೆ ಭಾರತದ ಗಡಿಯನ್ನು ಅತಿಕ್ರಮಿಸಲು ಮುಂದಾಯಿತು ?  ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ ಮತ್ತು ಸರಳವಾಗಿ ಹೇಳುವಂತೆಯೂ ಇಲ್ಲ. ಇದಕ್ಕೆ ಸುದೀರ್ಘ ವಿವರಣೆ ಬೇಕಾಗುತ್ತದೆ.

    ಚೀನಾದಲ್ಲಿ ಆಹಾರ ಅಭಾವ

    ಇತ್ತೀಚೆಗಷ್ಟೇ ಅಂದರೆ ಮೇ ತಿಂಗಳಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ “ಅಪರೇಶನ್ ಕ್ಲೀನ್ ಪ್ಲೇಟ್” ಎಂಬ ಯೋಜನೆಯನ್ನು ಘೋಷಿಸಿದ್ದರು. ಆಹಾರವು ವ್ಯರ್ಥ ಮಾಡಬಾರದು ಎಂಬುದು ಇದರ ಹಿಂದಿನ ಉದ್ದೇಶ.

    ಹಿಂದೆ 1949ರಲ್ಲೂ ಚೀನಾ, ಅತಿಯಾದ ಆಹಾರ ಅಭಾವವನ್ನು ಎದುರಿಸಿತ್ತು. ಆಗ ಲಕ್ಷಾಂತರ ಜನರು ಹಸಿವಿನಿಂದಲೇ ಸಾವನ್ನಪ್ಪಿದ್ದರು. ಬಳಿಕ 1962ರಲ್ಲಿ ಮಾವೋ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಆಹಾರ ಸಿಗದೆ ಆಗಲೂ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ತನ್ನ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು, ಮಾವೋ ಭಾರತದ ಗಡಿ ಭಾಗವನ್ನು ಅತಿಕ್ರಮಿಸಿ, ಅತಿಯಾದ ರಾಷ್ಟ್ರೀಯತೆ ಭಾವನೆಯನ್ನು ಚೀನೀಯರಲ್ಲಿ ಕೆರಳಿಸುವ ಅಥವಾ ಪ್ರಚೋದಿಸುವ ಮೂಲಕ ತಮ್ಮ ಪಟ್ಟವನ್ನು ಗಟ್ಟಿ ಮಾಡಿಕೊಂಡರು. ಆದರೆ ಅದಕ್ಕೆ ಬಲಿಪಶುವಾಗಿದ್ದು ಭಾರತ ಎಂಬುದು ಈಗ ಇತಿಹಾಸ.

    ಈಗ ಮತ್ತೆ ಚರಿತ್ರೆ ಮರುಕಳಿಸಿದೆ. ಅಧ್ಯಕ್ಷ ಮಾವೋ ಬದಲು ಜಿನ್ ಪಿಂಗ್ ಅಧಿಕಾರದಲ್ಲಿದ್ದಾರೆ. ಆಂತರಿಕ ಭಿನ್ನಮತ, ವಿದೇಶಗಳ ರಾಜತಾಂತ್ರಿಕ ವೈಫಲ್ಯ ಮತ್ತು ಕಾಡುತ್ತಿರುವ ಬಡತನದಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಭಾರತದ ಗಡಿ ವಿವಾದವನ್ನು ಕೆಣಕುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

    ತೂಕದ ಮೇಲೆ ಆಹಾರ

    ಇದಕ್ಕೆ ಪುರಾವೆ ಇಲ್ಲದಿಲ್ಲ. ಚೀನಾದ ಪ್ರಮುಖ ರೆಸ್ಟೋರೆಂಟ್ ಗಳಲ್ಲಿ ಈಗ ತೂಕ ನೋಡಿ ಆಹಾರ ಒದಗಿಸುತ್ತಿದ್ದಾರಂತೆ. ಒಳಗೆ ನುಗ್ಗಿತ್ತಿದ್ದಂತೆ ಗ್ರಾಹಕರ ತೂಕವನ್ನು ನೋಡಲಾಗುತ್ತದೆ. ಬಳಿಕವಷ್ಟೇ ಅವರಿಗೆ ಸೂಕ್ತವಾದ ಆಹಾರದ ಮೆನು (ಪ್ರತ್ಯೇಕ-ಪ್ರತ್ಯೇಕವಾಗಿ) ಒದಗಿಸಲಾಗುತ್ತದೆ. 88 ಪೌಂಡ್ ಗಳಿಗಿಂತ ಕಡಿಮೆ ತೂಕ ಇರುವವರಿಗೆ ಬೀಫ್ ಮತ್ತು ಮೀನು, 175 ಪೌಂಡ್ ಗಳಿಗಿಂತ ಹೆಚ್ಚುವರಿಗೆ ಪೋರ್ಕ್ ಡಿಶ್ ಮಾತ್ರ ಒದಗಿಸಲಾಗುತ್ತದೆ. ಪ್ರತಿಯೊಂದು ವಿವರವೂ ಆಪ್ ಮೂಲಕ ಸರಕಾರಕ್ಕೆ ಸಲ್ಲಿಕೆಯಾಗುತ್ತಲೇ ಇರುತ್ತದೆ.

    ಎನ್ -1, ಎನ್ -2 ಇತ್ಯಾದಿ ಡಿಶ್ ಗಳನ್ನು ಸೂಚಿಸಲಾಗುತ್ತದೆ. ಬೇಕಾದರೆ ತಿನ್ನಬಹುದು. ಇಲ್ಲವಾದರೆ ಬಿಡಬಹುದು. ಆದರೆ ರೆಸ್ಟೋರೆಂಟ್ ಮಾತ್ರ ಸರಕಾರದ ನಿಯಮವನ್ನು ಮೀರುವಂತಿಲ್ಲ. ಎಷ್ಟೆಂದರೂ ಅದು ಚೀನಾ ಅಲ್ಲವೇ ?

    ಚೀನಾದ ಸಮಸ್ಯೆ

    ಚೀನಾಕ್ಕೆ ಆಹಾರ ವಸ್ತು ಪೂರೈಸುವ ಪ್ರಮುಖ ದೇಶಗಳೆಂರೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ. ಆದರೆ ಇವುಗಳ (ಕೃಷಿ ಉತ್ಪನ್ನಗಳು ಸೇರಿದಂತೆ) ಮೇಲೆ ಈಗ ಚೀನಾ, ಶೇ. 80ಕ್ಕೂ ಹೆಚ್ಚು ಆಮದು ಶುಲ್ಕವನ್ನು ವಿಧಿಸಿದೆ. ಇದರಿಂದ ಸಹಜವಾಗಿಯೇ ಆಮದು ಕಡಿಮೆಯಾಗಿ, ಆಹಾರ ಧಾನ್ಯ ಅಥವಾ ವಸ್ತುಗಳ ಕೊರತೆ ಎದುರಾಗಿದೆ.

    ಆಸ್ಟ್ರೇಲಿಯಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಚೀನಾದ ಒಟ್ಟು ಕೃಷಿ ಮತ್ತು ಆಹಾರ ಸಾಮಗ್ರಿಗಳ ಆಮದಿನಲ್ಲಿ ಆಸ್ಟ್ರೇಲಿಯಾದ ಪಾಲು ಶೇ. 60-70. ಇದರ ಜತೆಗೆ ಕೆನಡಾ, ಆರ್ಜೆಂಟೀನಾ, ಫ್ರಾನ್ಸ್ ಮತ್ತು ಉಕ್ರೈನ್ ಮೇಲೆಯೂ ಅದು ಅವಲಂಬಿತವಾಗಿದೆ. ಈಗ ಅವುಗಳು ಹಿಂಜರಿಯುತ್ತಿರುವುದರಿಂದ ತನ್ನ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಭಾರತದ ಗಡಿ ಭಾಗದಲ್ಲಿ ಗದ್ದಲ ಎಬ್ಬಿಸಿ ಆ ಮೂಲಕ ಜನರಲ್ಲಿ ರಾಷ್ಟ್ರಪ್ರೇಮ ಭಾವನೆಯನ್ನು ಉತ್ತೇಜಿಸಿ, ನೈಜ ಸಮಸ್ಯೆಯನ್ನು ಮರೆ ಮಾಚುವ ಕೆಲಸಕ್ಕೆ ಮುಂದಾಗಿದೆ. ಕೋವಿಡ್ -19 ಜತೆಗೆ ಇದು ಸೇರಿಕೊಂಡರೆ ತನ್ನ ಪಟ್ಟ ಅಬಾಧಿತವಾಗುತ್ತದೆ ಎಂಬುದು ಜಿನ್ ಪಿಂಗ್ ಅಭಿಪ್ರಾಯ ಎಂದೇ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

    ಆಹಾರ ಬೆಲೆಯೇರಿಕೆ

    ಚೀನಾದ ಕೃಷಿ ಸಚಿವರ ಮಾತನ್ನೇ ನಂಬಬಹುದಾದರೆ ಆಫ್ರಿಕನ್ ಸ್ವೇನ್ ಫ್ಲೂನಿಂದಾಗಿ ಕನಿಷ್ಠವೆಂದರೂ 100 ದಶಲಕ್ಷ ಹಂದಿಗಳನ್ನು ಕೊಲ್ಲಲಾಗಿದೆ. ಇದರಿಂದಾಗಿ ಜುಲೈನಿಂದ ಆಹಾರ ಸಾಮಗ್ರಿ ಬೆಲೆಯಲ್ಲಿ ಶೇ. 13ರಷ್ಟು ಮತ್ತು  ಹಂದಿ ಮಾಂಸದ ಬೆಲೆ ಶೇ. 85ರಷ್ಟು ಏರಿಕೆಯಾಗಿದೆ. ಇನ್ನೊಂದೆಡೆ ಚೀನಾದ ಯಾಂಗ್ಟ್ಝ್ ನದಿಯಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದೆಗೆಡುವಂತೆ ಮಾಡಿದ್ದು, ಲಕ್ಷಾಂತರ ಜನರ ಕೃಷಿ ಭೂಮಿ ನೀರಿನಲ್ಲಿ ಮುಳುಗಿ ಏನೂ ಬೆಳೆಯಿಲ್ಲದಂತೆ ಆಗಿದೆ.

    ಚೀನಾದ ಅಧಿಕೃತ ಮಾಹಿತಿಯ ಪ್ರಕಾರ ಕಳೆದ ವರ್ಷದ ಜನವರಿ-ಜುಲೈ ಅವಧಿಗೆ ಹೋಲಿಸಿದರೆ ಈ ಬಾರಿ ದವಸ ಧಾನ್ಯಗಳ ಆಮದು ಶೇ. 22.7ರಷ್ಟು ಎರಿಕೆಯಾಗಿದೆ. ಗೋಧಿ ಆಮದು ಶೇ. 197ರಷ್ಟು ಹೆಚ್ಚಳವಾಗಿದೆ. ಜೋಳದ ಆಮದು ಶೇ. 23ರಷ್ಟು ಏರಿಕೆಯಾಗಿದೆ. ಇವೆಲ್ಲವೂ ಚೀನಾದ ಆಡಳಿತವನ್ನು ಕಂಗೆಡಿಸಿದ್ದು, ಜನರ ಗಮನವನ್ನು ಇದರಿಂದ ಬೇರೆಡೆಗೆ ಸೆಳೆಯಲು ಭಾರತದ ಮೇಲೆ ಶಸ್ತ್ರ ಝಳಪಿಸಲು ಮುಂದಾಗಿದೆ ತಜ್ಞರು ವಿಶ್ಲೇಷಿಸುತ್ತಾರೆ.

    ವಾಗೀಶ್ ಕುಮಾರ್ ಜಿ ಎ
    ವಾಗೀಶ್ ಕುಮಾರ್ ಜಿ ಎ
    ಪತ್ರಕರ್ತ, ಸಮಕಾಲೀನ ಸಂಗತಿಗಳ ಬಗ್ಗೆ ಆಸಕ್ತಿ
    spot_img

    More articles

    2 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!