26.3 C
Karnataka
Saturday, November 23, 2024

    ನಮಗೂ ಕರೋನ ಬಂದು ಹೋಗಿರಬಹುದೇ?

    Must read

    ತನ್ನ ಇರುವಿನ ಸುಳಿವನ್ನೇ ನೀಡದೆ, ಮನುಷ್ಯರಲ್ಲಿ ಹರಡಬಹುದಾದ ಸೋಂಕು ಉಂಟಾದರೆ ಅದು ನಮಗೆ ಬಂದು ಹೋಗಿರಬಹುದೇ ಎಂಬ ಸಂಶಯವೂ ಜನರಲ್ಲಿರುತ್ತದೆ. ಕೊರೊನಾ ಸೋಂಕು ಕೂಡ ಇಂತಹ ಒಂದು ರಹಸ್ಯ ಸೋಂಕಾಗಿರುವುದು, ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ರೀತಿ ಕಾಣಿಸಿಕೊಳ್ಳುತ್ತಿರುವುದು ಪ್ರತಿದೇಶದಲ್ಲಿ ವರದಿಯಾಗಿರುವ ವಿಚಾರ.ಆದರೆ ಈ ಆರು ತಿಂಗಳಲ್ಲಿ ಬಂದು ಹೋಗಿರುವ ಕೆಮ್ಮು-ಜ್ವರಗಳೆಲ್ಲ ಕೋವಿಡ್ ಸೋಂಕೇ ಅಲ್ಲದಿದ್ದರೂ ತಮಗೆ ಸೋಂಕು ಬಂದುಹೋಗಿರಬಹುದೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಜನರನ್ನು ಸುಪ್ತವಾಗಿ ಕಾಡುತ್ತಿದೆ. ರೋಗ ಲಕ್ಷಣಗಳ ಅಗತ್ಯವಿಲ್ಲದೆಯೂ ಕೋವಿಡ್ ಬರಬಹುದಾದ್ದರಿಂದ ಅಕ್ಷರಶಃ ನಮ್ಮಲ್ಲಿ ಯಾರಿಗೆ ಬೇಕಾದರೂ ಸೋಂಕು ಇರಬಹುದು ಅಥವ ಬಂದುಹೋಗಿರಬಹುದು.

    ಒಂದು ದಿನ ಅಥವಾ ಎರಡು ದಿನಗಳ ಕಾಲ ಬಂದು ಹೋದದ್ದು ಸಣ್ಣ ಜ್ವರ -ಕೆಮ್ಮು ಕೋವಿಡ್ ಆಗಿರಬಹುದೇ? ಕೋವಿಡ್ ಪರೀಕ್ಷೆಗೆ ತೆರಳಲೇ, ಬೇಡವೇ?- ಎಂದು ಯೋಚಿಸುತ್ತಿರುವಾಗಲೇ ಮತ್ತೆ ಪೂರ್ಣ ಆರೋಗ್ಯಕ್ಕೆ ಮರಳಿದ ಲಕ್ಷಾಂತರ ಜನರೂ ಇದ್ದಾರೆ. ಅವರಲ್ಲೂ ಈ ಪ್ರಶ್ನೆಗಳಿವೆ. ಆದರೆ ಹೇಳಲು ಅಪರಾಧಿ ಪ್ರಜ್ಞೆಅವರನ್ನು ಕಾಡುತ್ತಿರಬಹುದು. ತಾವೂ ಈ ಸೋಂಕನ್ನು ಹರಡುವಲ್ಲಿ ಅರಿವೇ ಇಲ್ಲದೆ  ಭಾಗಿಯಾಗಿರಬಹುದೆ ಎನ್ನುವ ಸಂಶಯ ಇವರನ್ನ ಭಾಧಿಸುತ್ತಿರಬಹುದು.

    ಆತ್ಮಸಾಕ್ಷಿಯುಳ್ಳ, ಕರ್ತವ್ಯ ಪ್ರಜ್ಞೆಯಿರುವ ಎಲ್ಲರಲ್ಲೂ ತಾವೊಂದು ಅಂಗಡಿಗೆ ಹೋಗಿ ಬಂದರೂ ಕೋವಿಡ್ ಬಂದಿರಬಹುದೇ ಅಥವಾ ಅದನ್ನು ಹರಡುವಲ್ಲಿ ತಾವೊಂದು ಅಪರಾಧ ಎಸಗಿರಬಹುದೇ ಎನ್ನುವ ವಿಚಿತ್ರ ಅನುಭೂತಿಗಳು ಕಾಡುತ್ತಿರುವ ಅತ್ಯಂತ ವಿರಳವಾದ,ವಿಶೇಷವಾದ ಕಾಲ ಘಟ್ಟವಿದು

    ಮೌನವಾಗಿ ಹರಡಿ ಹಬ್ಬುತ್ತಿರವ ಸೋಂಕು

    ಭಾರತದಲ್ಲಂತೂ ಮೌನವಾಗಿ ಹರಡಿ ಹಬ್ಬುತ್ತಿರವ ಸೋಂಕಿನ ವರದಿಗಳು ಅಪಾರಮಟ್ಟದಲ್ಲಿವೆ.ಆಗಾಗ ಕೆಮ್ಮೋ ಜ್ವರವೋ ಬರುವುದು ಪುಟ್ಟ ಮಕ್ಕಳಲ್ಲಿ ಅತ್ಯಂತ ಸಾಮಾನ್ಯ.ಆದರೆ ಕಳೆದ ತಿಂಗಳುಗಳಲ್ಲಿ ಮಕ್ಕಳಿಗೆ ಬಂದು ಹೋಗಿರಬಹುದೇ? -ಎನ್ನುವ ಅನುಮಾನಗಳು ನಮ್ಮಲ್ಲಿ ತಲೆ ಎತ್ತುತ್ತಿವೆ.ಹಾಗಿರುವಾಗ ಇಂಥಹ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ನೆಮ್ಮದಿಯಲ್ಲವೇ?

    ಮೊದಲಿಗೆ ನಮ್ಮಲ್ಲಿ ಕೊರೊನಾ ಲಕ್ಷಣಗಳಿದ್ದವೇ ಎಂದು ಆಲೋಚಿಸಬೇಕಾಗುತ್ತದೆ.

    ಕೊರೋನಾ ಸೋಂಕಿನ ಲಕ್ಷಣಗಳು

    ಈ ವೇಳೆಗೆ ಕೊರೊನಾ ಸೋಂಕಿನ ಮುಖ್ಯ ಲಕ್ಷಣಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ.

    1.ಜ್ವರ ಬರುವುದು

    ದೇಹದ ತಾಪಮಾನವನ್ನು ನೋಡಿಕೊಳ್ಳಲು ಅಳೆಯುವ ಮಾಪಕಗಳನ್ನು ಬಳಸಲೇಬೇಕು ಎಂದೇನಿಲ್ಲ. ಆದರೆ ನಿಮ್ಮ ದೇಹದ ಉಷ್ಣತೆ ಏರಿದಂತಾದರೆ ಅದು ನಿಮಗೆ ತಿಳಿಯುತ್ತದೆ.ಎದೆ ಅಥವಾ ಬೆನ್ನನ್ನು ಮುಟ್ಟಿದರೆ ಅದು ನಿಮ್ಮ ಅನುಭವಕ್ಕೆ ಬರುತ್ತದೆ.

    2. ಹೊಸದಾಗಿ ಶುರುವಾಗುವ ಅವಿರತ ಕೆಮ್ಮು

    ಅಂದರೆ ಗಂಟೆಯೊಂದರಲ್ಲಿ ಬಹಳಷ್ಟು ಕೆಮ್ಮುವುದು ಅಥವಾ ದಿನವೊಂದರಲ್ಲಿ ಮೂರು ಅಥವಾ ಅದಕ್ಕಿನ್ನ ಹೆಚ್ಚು ಬಾರಿ ಅವಿರತ ಕೆಮ್ಮು ಬರುವುದು. ಹಳೆಯ ಗೂರಲು, ಕಫದ ಕೆಮ್ಮು ಇತ್ಯಾದಿ ಇರುವವರು ಅದಕ್ಕಿನ್ನ ಹೆಚ್ಚಿನ ಕೆಮ್ಮು ಬಂದಿತೇ ಎಂದು ಗಮನಿಸಬೇಕಾಗುತ್ತದೆ.

    3. ನಿಮ್ಮ ವಾಸನಾ ಗ್ರಹಿಕೆ ಮತ್ತು ರುಚಿಯ ಗ್ರಹಿಕೆ ಕುಂದುವುದು ಅಥವಾ ಇಲ್ಲವಾಗುವುದು

    ಇದು ಒಂದೆರಡು ದಿನವಿರಬಹುದು ಅಥವಾ ಒಂದು ವಾರವೇ ಇರಬಹುದು.

    ಒಟ್ಟಿನಲ್ಲಿ ಮೇಲಿನ ಮೂರು ಲಕ್ಷಣಗಳಲ್ಲಿ ಎಲ್ಲ ಅಥವಾ ಯಾವುದಾದರೂ ಒಂದಾದರೂ ಇದ್ದರೆ ಅಥವಾ ಬಂದುಹೋಗಿದ್ದರೆ ಅದು ಕೊರೊನಾ ಸೋಂಕನ್ನು ಹೋಲುತ್ತದೆ.

    ಇತರೆ : ಇವಲ್ಲದೆ ಮೈ ಕೈ ನೋವು, ಗಂಟಲು ನೋವು, ತಲೆನೋವು, ವಾಂತಿ-ಬೇಧಿ, ಮೂಗು ಕಟ್ಟುವುದು ಅಥವಾ ಸೋರುವುದು ಮುಂತಾದ ಎಲ್ಲ ಲಕ್ಷಣಗಳನ್ನು ಜನರು ವರದಿಮಾಡಿದ್ದಾರೆ. ಕೆಲವರಲ್ಲಿ ಉಸಿರಾಟದ ತೊಂದರೆಗಳಾಗಿದ್ದರೆ ಇನ್ನು ಹಲವರಲ್ಲಿ ಅತ್ಯಂತ ತೀವ್ರ ನ್ಯೂಮೋನಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನು ಕೆಲವರಲ್ಲಿ ಯಾವುದೇ ಲಕ್ಷಣಗಳನ್ನು ಉಂಟುಮಾಡದ ವೈರಸ್ ಗಳು ಅವರಿಂದ ಸದ್ದಿಲ್ಲದೆ ಇನ್ನೊಬ್ಬರಿಗೆ ನೆಗೆದಿವೆ.

    ಅವರವರ ಲಕ್ಷಣಗಳಿಗನುಸಾರವಾಗಿ ಜನರು ಗುಣಮುಖವಾಗುತ್ತಾರೆ. ಅಂದರೆ ಕಡಿಮೆ ಲಕ್ಷಣಗಳಿರುವವರು ಎರಡು ವಾರಗಳಲ್ಲಿ ಗುಣಮುಖರಾದರೆ ಹೆಚ್ಚಿನ ತೊಂದರೆ ಅನುಭವಿಸುವ ಜನರು ಆರುವಾರಗಳ ಕಾಲ ತೆಗೆದುಕೊಳ್ಳಬಹುದು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಾಗುವ ಜನರು ಗುಣಮುಖರಾಗಲು ಮತ್ತೂ ಹೆಚ್ಚಿನಕಾಲ ಬೇಕಾಗಬಹುದು.

    ಮಕ್ಕಳಲ್ಲಿ ಮೇಲಿನ ಎಲ್ಲ ಲಕ್ಷಣಗಳು ಅತ್ಯಂತ  ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಬಹುತೇಕರು ಅತ್ಯಂತ ಬೇಗನೆ ಚೇತರಿಕೆಯನ್ನು ತೋರಿದ್ದಾರೆ.

    ಕೊರೊನಾ ಬಂದು ಹೋಗಿದೆಯೇ ಎಂದು ತಿಳಿಯುವುದು ಹೇಗೆ?

    ಬಹಳಷ್ಟು ಜನರ ಜೊತೆ ಒಡನಾಡಿದ ಜನರಿಗೆ ತಮಗೆ ಕೊರೊನಾ ಬಂದು ಹೋಗಿರಬಹುದೇ ಎನ್ನುವ ಅನುಮಾನವಿರಬಹುದು. ಅಥವಾ ಕೊರೊನಾ ಪರೀಕ್ಷೆಗೆ ಹೆದರಿ ಅದನ್ನು ಮಾಡಿಸಿಕೊಳ್ಳದೆ ಹೋಗಿರಬಹುದು. ಆದರೆ ಆ ಅನುಮಾನವನ್ನು ಬಗೆಹರಿಸಲು ಮತ್ತೊಂದು ಪರೀಕ್ಷೆಯಿದೆ. ಇದನ್ನು  ’ಆಂಟಿಬಾಡಿ ಟೆಸ್ಟ್ ’ ಎನ್ನುತ್ತೇವೆ.

     ’ಆಂಟಿಬಾಡಿ ಪರೀಕ್ಷೆ’ ಹೇಗೆ ನಡೆಯುತ್ತದೆ?

    ಕೊರೊನಾ ಸೋಂಕು ಬಂದು ಹೋಗಿರಬಹುದೇ ಎನ್ನುವುದನ್ನು ತಿಳಿಯಲು ಪರೀಕ್ಷೆಯನ್ನು ಗಂಟಲು ಮತ್ತು ಮೂಗಿನ ದ್ರವದ ಮಾದರಿಯ ಪರೀಕ್ಷೆಯಿಂದ ಮಾಡಿದರೆ ಆಂಟಿಬಾಡಿ ಪರೀಕ್ಷೆಯನ್ನು ರಕ್ತದ ಪರೀಕ್ಷೆಯ ಮೂಲಕ ಮಾಡುತ್ತಾರೆ. ನಮ್ಮ ದೇಹವನ್ನು ಯಾವುದೇ ಪರಜೀವಗಳು ಪ್ರವೇಶಿಸಿದಾಗ ಅವುಗಳನ್ನು ಹತ್ತಿಕ್ಕಲು ನಿರ್ದಿಷ್ಟ ಜೀವನಿರೋಧಕ ಪ್ರೋಟೀನುಗಳು ಉತ್ಪತ್ತಿಯಾಗುತ್ತವೆ

    ನಮ್ಮ ರಕ್ತದಲ್ಲಿ ಕೊರೊನಾ ವೈರಸ್ಸನ್ನು ವಿರೋಧಿಸುವ ಈ ಜೀವನಿರೋಧಕ ಪ್ರೋಟೀನುಗಳು ಕಂಡುಬಂದಲ್ಲಿ ನಮಗೆ ಕೊರೊನಾ ಸೋಂಕು ಬಂದುಹೋಗಿರಬಹುದು ಎಂದು ತಿಳಿಯುತ್ತದೆ. ಆ ಮೂಲಕ ನಮ್ಮ ಶಂಕೆಗಳಿಗೆ ಈ ಪರೀಕ್ಷೆ ಅಂತಿಮ ತೆರೆಯನ್ನು ಎಳೆಯುತ್ತದೆ.

    ಆಂಟಿಬಾಡಿ ಪರೀಕ್ಷೆಯ ಮಿತಿಗಳು

    ಈ ಜೀವ ನಿರೋದಕ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗಿ ಕಾಣಿಸಲು ಕನಿಷ್ಠ1-3 ವಾರಗಳು ಬೇಕಾಗುತ್ತದೆ. ಹಾಗಾಗಿ ಅಕಸ್ಮಾತ್ ನಮಗೆ ಲಕ್ಷಣಗಳೇ ಇಲ್ಲದ ಕೊರೊನಾ ಸೋಂಕು ಆಗ ತಾನೇ ಶುರುವಾಗಿದ್ದರೆ ಈ ಪರೀಕ್ಷೆಯಿಂದ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.

    ಆಂಟಿಬಾಡಿ ಫಲಿತಾಂಶಕ್ಕೆ ಬಹಳ ಮಿತಿಗಳಿವೆ. ಅಂದರೆ, ನಿಮಗೆ ಸೋಂಕು ಬಂದು ಹೋಗಿತ್ತೇ ಎಂದು ಇದರಿಂದ ಹೇಳಬಹುದೇ ಹೊರತು ನೀವು ಇನ್ನು ಮುಂದೆ ಮತ್ತೊಮ್ಮೆ ಈ ಸೋಂಕಿಗೆ ತುತ್ತಾಗಬಲ್ಲಿರೇ ಅಥವಾ ಇಲ್ಲವೇ ಎನ್ನುವುದನ್ನು ಹೇಳಲು ಬರುವುದಿಲ್ಲ.ಜೊತೆಗೆ ನೀವು ಮತ್ತೊಬ್ಬರಿಗೆ ಇನ್ನೂ ಸೋಂಕನ್ನು ಹರಡುತ್ತಿರುಬಹುದೇ ಎನ್ನುವುದು ಕೂಡ ತಿಳಿಯುವುದಿಲ್ಲ.

    ಆದ್ದರಿಂದ ಈ ಪರೀಕ್ಷೆಯಲ್ಲಿ ನಿಮಗೆ ಸೋಂಕು ಬಂದು ಹೋಗಿದೆ ಎಂದಾದರೂ ಎಲ್ಲರಂತೆ ಸಾಮಾಜಿಕ ಅಂತರ ಮತ್ತು ಪದೇ ಪದೇ ಕೈ ತೊಳೆಯುವುದನ್ನು ಮುಂದುವರೆಸಬೇಕಾಗುತ್ತದೆ.

    ನನಗೆ ತಿಳಿದ ಒಬ್ಬರಲ್ಲಿ ಒಂದ ವಾರದ ಕಾಲ ವಾಸನಾ ಶಕ್ತಿ ಇಲ್ಲವಾಗಿತ್ತು. ಆದರೆ ಇನ್ನಾವುದೇ ಖಾಯಿಲೆಯ ಲಕ್ಷಣಗಳಿರಲಿಲ್ಲ. ಆಕೆ ತನಗೆ ದೊರೆತ ನಿರ್ದೇಶನದ ಪ್ರಕಾರ ಕೋವಿಡ್ ಟೆಸ್ಟ್ ನ್ನು ಮಾಡಿಸಿಕೊಂಡರು. ಆಕೆಗ ಕೋವಿಡ್ ಇಲ್ಲ ಎಂದು ವರದಿ ಬಂದಾಗ ಆಕೆ ಅದುವರೆಗೆ ತನ್ನನ್ನು ತಾನು ಪ್ರತ್ಯೇಕಿಸಿಕೊಂಡದ್ದು, ಇತರರಿಗೆ ತೊಂದರೆ ಕೊಟ್ಟದ್ದು ಎಲ್ಲ ನೆನೆದು “ ಅಯ್ಯೋ ಸುಮ್ಮ ಸುಮ್ಮನೆ ಹೆದರಿದೆನಲ್ಲ “ ಎಂದು ಅಂದುಕೊಂಡರು. ಆದರೆ ಒಂದು ತಿಂಗಳ ನಂತರ ಆಕೆ ಕೆಲಸಕ್ಕೆ ಮರಳುವ ಕಾಲ ಬಂದಿತು. ಆಗ ಆಂಟಿ ಬಾಡಿ ಟೆಸ್ಟ್ ಮಾಡಿಸಲೇಬೇಕಿತ್ತು. ವರದಿಯಲ್ಲಿ ಅಶ್ಚರ್ಯಕರವಾಗಿ ಆಕೆಗೆ ಕೋವಿಡ್ ಬಂದು ಹೋದ ವರದಿಯಿತ್ತು.

    ಹಾಗಂದರೆ ಏನರ್ಥ?

    ಕಳೆದವಾರದ ಲೇಖನದಲ್ಲಿ ಹೇಳಿದಂತೆ ಕೊರೊನಾ ಪರೀಕ್ಷೆಎಲ್ಲ ಬಾರಿ ನಿಖರವಾದ ಫಲಿತಾಂಶವನ್ನು ನೀಡುವ ಪರೀಕ್ಷೆಯೇನಲ್ಲ.ಪರೀಕ್ಷೆಯಲ್ಲಿ ನಡೆಯಬಹುದಾದ ತಪ್ಪುಗಳು, ದ್ರವ ಮಾದರಿಯ ಪ್ರಮಾಣ, ಪರೀಕ್ಷಾ ವಿಧಾನ, ಪ್ರಯೋಗಾಲಯದ ಗುಣಮಟ್ಟ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪರೀಕ್ಷೆ ಯಾವಾಗ ಮಾಡಲಾಯಿತು ಇತ್ಯಾದಿ ಹಲವು ವಿಚಾರಗಳನ್ನು ನಾವು ವಿಷ್ಲೇಶಿಸಬೇಕಾಗುತ್ತದೆ. ಜೊತೆಗೆ ಎಲ್ಲವೂ ಸರಿಯಿದ್ದರೂ ಪ್ರತಿಬಾರಿ ನಿಖರ ಫಲಿತಾಂಶವನ್ನು ನೀಡಲು ಕೊರೊನಾ ಪರೀಕ್ಷೆ ಸಫಲವಾಗದೇ ಹೋಗಬಹುದು.

    ಅದರಂತೆಯೇ ಆಂಟಿಬಾಡಿ ಪರೀಕ್ಷೆಗಳೂ ಕರಾರುವಕ್ಕಾದ ಫಲಿತಾಂಶವನ್ನು ನೀಡುವುದಿಲ್ಲ.ಆಂಟಿಬಾಡಿಗಳಿದ್ದವು ಆದ್ದರಿಂದ ನಿಮಗೆ ಕೊರೊನಾ ಬಂದಿರಬಹುದು ಎನ್ನುವ ಸುಳ್ಳು ಫಲಿತಾಂಶ ಬರುವ ಸಾಧ್ಯತೆಗಳುಅರ್ಧಕ್ಕಿಂತ ಹೆಚ್ಚಿವೆ!ನಿಖರವಾದ ಫಲಿತಾಂಶ ನೀಡುವ ಸಾಧ್ಯತೆಯಿರುವುದು ಕೇವಲ 49 % ಪರೀಕ್ಷೆಗಳಲ್ಲ್ ಮಾತ್ರಎಂದು Infectious Disease Society of Americaಹೇಳಿದೆ.

    ಇನ್ನೂ ನೇರವಾಗಿ ಹೇಳಬೇಕೆಂದರೆ ಕೇವಲ ಅರ್ಧದಷ್ಟು ಕೇಸುಗಳಲ್ಲಿ ಮಾತ್ರ ಕೊರೊನಾ ವಿರುದ್ಧ ಜೀವನಿರೋಧಕ ಕಣಗಳು ನಿಜಕ್ಕೂ ಇದ್ದುದನ್ನು ಧೃಡ ಪಡಿಸುವ ಶಕ್ತಿಯಷ್ಟೇ ಈ ಪರೀಕ್ಷೆಗಿರುವುದು. ಉಳಿದಂತೆ  ಜೀವನಿರೋಧಕ ಕಣಗಳು ಕೊರೊನಾ ವಿರುದ್ಧ ಹುಟ್ಟಿದ್ದೇ ಎಂಬುದನ್ನು ಧೃಡಪಡಿಸುವಲ್ಲಿ ಈ ಪರೀಕ್ಷೆ ಸೋಲುತ್ತದೆ. ಅದರ ಮೇಲೆ,ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಇತ್ತೀಚೆಗಿನ ವರದಿಯ ಪ್ರಕಾರ ಕೋವಿಡ್  ಬಂದು ಹೋಗಿದ್ದರು ಆಂಟಿಬಾಡಿಗಳಿಲ್ಲವೆಂದು ಹೇಳುವ false-negative rateಶೇಕಡ 20%  ರಷ್ಟಿದೆ ಎನ್ನುತ್ತದೆ. ಅಂದರೆ ಇಲ್ಲಿ ಕೂಡ ಈ ಪರೀಕ್ಷೆಯನ್ನು ಯಾವಾಗ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ.ಅಂದರೆ ಈ ಪರೀಕ್ಷೆ ನಡೆವಾಗ ನಿಮ್ಮಲ್ಲಿ ಕೊರೊನಾ ಬಂದು ಹೋಗಿದ್ದ ಗುಮಾನಿಯಿದ್ದರೇನೋ ಪರವಾಗಿಲ್ಲ ಆದರೆ ಕೊರೊನಾ ಲಕ್ಷಣಗಳೇ ಇಲ್ಲದವರನ್ನು ಯಾವಾಗ  ಈ ಪರೀಕ್ಷೆಗ ಒಳಪಡಿಸಬೇಕು? ಎನ್ನುವ ಪ್ರಶ್ನೆಗೆ ತಾರ್ಕಿಕ, ಪ್ರಯೋಗಾತ್ಮಕ   ಉತ್ತರವನ್ನಿನ್ನೂ ಹುಡುಕುತ್ತಿದ್ದಾರೆ.

    ಯಾವ ಪರೀಕ್ಷೆಯೇ ಆದರೂ ಸುಳ್ಳು ಸುಳ್ಳೇ ಸೋಂಕಿಲ್ಲವೆಂದು ಬರುವ ಫಲಿತಾಂಶಗಳು ಸುಳ್ಳು ಸುಳ್ಳೇ ಸೋಂಕಿದೆಯೆಂದು ಬರುವ ಫಲಿತಾಂಶಕ್ಕಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಸೋಂಕು ಬಂದಿದ್ದರೂ ಫಲಿತಾಂಶ ಸೋಂಕಿಲ್ಲವೆಂದು ಬರುವ ಕಾರಣ ಜನರು ಕೊರೊನಾ ಸೋಂಕನ್ನು ಸಮಾಜದ ತುಂಬೆಲ್ಲ ಹರಡುತ್ತ ಹೋಗುತ್ತಾರೆ.

    ಹಾಗಾದರೆ ಆಂಟಿ ಬಾಡಿ ಟೆಸ್ಟನ್ನು ಯಾರು ಮತ್ತು ಏಕೆ ಮಾಡಿಸಿಕೊಳ್ಳಬೇಕು?

    ಕೊರೊನಾ ಎನ್ನುವ ಸೋಂಕು ವಿಶ್ವವ್ಯಾಪಿ ಹೊಸವ್ಯಾಧಿ. ಅಂದರೆ ಈ ಕ್ಷಣದಲ್ಲೂ ಈ ಹೊಸಪಿಡುಗಿನ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.ಆ ಕಾರಣ ಈ ವ್ಯಾಧಿಯ ಬಗ್ಗೆ ಮನುಷ್ಯನಿಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಜಾಸ್ತಿ.

    ಈಗಾಗಲೇ ಹಲವು ದೇಶಗಳು ಸಮುದಾಯಮಟ್ಟದಲ್ಲಿ ಆಂಟಿಬಾಡಿ ಪರೀಕ್ಷೆಗಳನ್ನು ಶುರುಮಾಡಿದ್ದಾರೆ. ಮತ್ತೆ ಕೆಲವು ದೇಶಗಳು ಅಗತ್ಯ ಕೆಲಸಗಾರರನ್ನು, ಅಥವಾ ಕೊರೊನಾ ಬಂದುಹೋದವರ ಸಂಪರ್ಕದಲ್ಲಿ ಇದ್ದವರನ್ನು ಅವರ ಮನೆಯವರನ್ನು ಈ ಪರೀಕ್ಷೆಗೆ ಒಳಪಡಿಸುತ್ತಿವೆ.

    ಸೋಂಕು ಬಂದು ಹೋಗಿದ್ದರೂ ಗೊತ್ತಿರದ ಜನರನ್ನು ಗಣಿಸುವುದು ಇದರ ಮುಖ್ಯ ಉದ್ದೇಶ.ಈ ಗಣತಿಯಿಂದ ಅರ್ಧದಷ್ಟು ಸಂಖ್ಯೆಯನ್ನು ಮಾತ್ರವೇ ತೆಗೆದುಕೊಂಡರೂ ಸೋಂಕಿನ ತೀವ್ರತೆಯನ್ನು ಕಂಡು ಹಿಡಿಯಬಹುದು. ಲಕ್ಷಣರಹಿತ ಸೋಂಕಿನ ಮಟ್ಟ ಎಷ್ಟಿರಬಹುದು ಎಂಬುದನ್ನು ಅಳೆಯಬಹುದು.

    ಜೊತೆಗೆ ಕೋವಿಡ್ ಸೋಂಕಿನ ದಟ್ಟ ಲಕ್ಷಣಗಳಿದ್ದೂ ಕೋವಿಡ್ ಪರೀಕ್ಷೆ ಯಲ್ಲಿ ಸೋಂಕು ಇಲ್ಲ ಎಂದು ಫಲಿತಾಂಶ ಬಂದಿರುವ ಜನರಿಗೆ ನಿಜವನ್ನು ತಿಳಿಯಲು ಇರುವ ಇನ್ನೊಂದು ಏಕೈಕ ಮಾರ್ಗವೆಂದರೆ ಈ ಆಂಟಿಬಾಡಿ ಪರೀಕ್ಷೆ.ಆದರೆ ಫಲಿತಾಂಶವನ್ನು ಅನುಮಾನದ ದೃಷ್ಟಿಯಿಂದಲೇ ನೋಡಬೇಕಾದ ಅನಿವಾರ್ಯತೆ ನಮಗಿದೆ.

    ಆದರೆ ಆಂಟಿಬಾಡಿ ಟೆಸ್ಟ್ ಗಳನ್ನು ಕೋವಿಡ್ ಪಾಸ್ ಪೋರ್ಟುಗಳಂತೆ ಬಳಸಿಕೊಳ್ಳುವ ಸಂಸ್ಥೆ ಮತ್ತು ದೇಶಗಳು ಈ ಪರೀಕ್ಷೆಯ ನಿಖರತೆಯನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಕೆಲಸಕ್ಕೆ ಹಿಂತಿರುಗುವ ಮುನ್ನ ಆಂಟಿಬಾಡಿ ಟೆಸ್ಟ್ ಮಾಡಿಸಿಕೊಂಡು ಅದರಲ್ಲಿ ನಮಗೆ ಕೋವಿಡ್ ಬಂದು ಹೋಗಿದೆ ಎನ್ನುವ ಫಲಿತಾಂಶ ಬಂದಿದ್ದರೆ “ ಇನ್ನು ನಿಮಗೆ ಈ ಸೋಂಕು ಬರುವುದಿಲ್ಲ, ನಿಮ್ಮ ದೇಹದಲ್ಲಿ ಆ ಸೋಂಕನ್ನು ಹೊಡೆದೋಡಿಸುವ ಶಕ್ತಿ ಬಂದುಬಿಟ್ಟಿದೆ “ ಎನ್ನುವ ಮಾತುಗಳನ್ನು ಆಡಲಾಗುತ್ತಿದೆ.

    ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ಪಾಸಿಟಿವ್ ಇದ್ದಲ್ಲಿ “ ರೋಗಿಯಲ್ಲಿ ಈಗಾಗಲೇ ಕೋವಿಡ್ ವಿರೋಧಕ ಇಮ್ಯೂನಿಟಿ ಇರುವ ಕಾರಣ ಅವರನ್ನು ಇನ್ನು ಮನೆಗೆ ಕಳಿಸಬಹುದು” ಎನ್ನುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

    ಒಂದು ಆಫೀಸು, ಆಸ್ಪತ್ರೆ ಹೀಗೆ ಗುಂಪಿನಲ್ಲಿ ಕೆಲಸಮಾಡುವ ಸ್ಥಳಗಳಲ್ಲಿ  ಒಬ್ಬರಿಗೋ- ಇಬ್ಬರಿಗೋ ಕೋವಿಡ್ ಲಕ್ಷಣಗಳಿರಬಹುದು. ಅವರು ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. ಆದರೆ ಅವರಿಂದ ಇತರರಿಗೂ ಕೋವಿಡ್ ಬಂದು ಹೋಗಿದೆಯೇ ಮತ್ತು ಎಂತಹ ಸ್ಥಳಗಳಲ್ಲಿ ಇದು ಗುಂಪಿನ ಎಷ್ಟು ಜನರಿಗೆ ಹರಡಿತು ಎನ್ನುವುದನ್ನು ಕೂಡ ಈ ಪರೀಕ್ಷೆಯಿಂದ ತಿಳಿಯಬಹುದಾಗಿದೆ. ಸೋಂಕು ಬಂದು ಹೋದ ತಿಂಗಳುಗಳ ನಂತರವೂ ಆಂಟಿಬಾಡಿ ಪರೀಕ್ಷೆಯ ಮೂಲಕ ಬಂದಿತ್ತೇ? ಎಂದು ಕಂಡುಹಿಡಿಯುವ ಪ್ರಯತ್ನ ಮಾಡಬಹುದು.

    ಕೊರೊನಾ ಪರೀಕ್ಷೆಯಲ್ಲಿ ಸೋಂಕಿದೆ ಎಂದು ಗೊತ್ತಾಗಿ ಅವರು ಗುಣಮುಖರಾದ ನಂತರ ಅವರ ದೇಹದಲ್ಲಿ ಆಂಟಿಬಾಡಿಗಳಿವೆ ಎಂದು ಆಂಟಿಬಾಡಿ ಪರೀಕ್ಷೆಯ ಮೂಲಕ ತಿಳಿದಲ್ಲಿ ಅವರ ರಕ್ತದ ಪ್ಲಾಸ್ಮಾವನ್ನು ಇತರೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಆ ಮೂಲಕ ಆಂಟಿಬಾಡಿಗಳನ್ನು ಅಂದರೆ ಕೊರೊನಾ ವಿರುದ್ಧ ಹೋರಾಡಬಲ್ಲ ಸೈನಿಕರನ್ನು ನೇರವಾಗಿ ಗುಣಮುಖರಾಗಲು ಶ್ರಮಪಡುತ್ತಿರುವವರ ದೇಹಕ್ಕೆ ವರ್ಗಾಯಿಸಲಾಗುತ್ತಿದೆ. ಹೀಗಾಗಿ ಈ ಪರೀಕ್ಷೆಯ ಫಲಿತಾಂಶಗಳು ಕರಾರುವಕ್ಕಲ್ಲದಿದ್ದರೂ ಬಹಳಷ್ಟು ವಿಚಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದಿದೆ.

    ಆದರೆ ಈ ಪರೀಕ್ಷೆಗಳ ಬಗ್ಗೆ ಬಹಳಷ್ಟು ಅಧ್ಯಯನಗಳು ಈಗಲೂ ಜಾರಿಯಲ್ಲಿವೆ. ಈ ಅಧ್ಯಯನಗಳ ಮೂಲಕ ಇಂತಿಷ್ಟು ಆಂಟಿಬಾಡಿಗಳ ಪ್ರಮಾಣ ಇದ್ದರೆ ವೈರಸ್ಸಿನಿಂದ ರಕ್ಷಣೆ ಪಡೆಯಬಹುದು ಎಂಬುದನ್ನೇನಾದರೂ ಪತ್ತೆ ಹಚ್ಚಿದರೆ ಕೊರೊನಾ ಪರೀಕ್ಷೆ ಮತ್ತು ಆಂಟಿಬಾಡಿ ಪರೀಕ್ಷೆಗಳು ಕೊರೊನಾ ವಿರುದ್ಧದ ಸಮರದಲ್ಲಿ ನಮ್ಮ ಬತ್ತಳಿಕೆಯಲ್ಲಿರುವ ಅತ್ಯಮೂಲ್ಯ ಅಸ್ತ್ರಗಳಾಗುತ್ತವೆ. ಅಲ್ಲಿಯವರೆಗೂ ಆಂಟಿಬಾಡಿ ಪರೀಕ್ಷೆಗಳನ್ನು ನಾವು ಅದರ ಮಿತಿಗಳ ಪರಿಮಿತಿಯಲ್ಲೇ ನೋಡಬೇಕಾಗಿದೆ.

    ಏಕೆಂದರೆ ಸಧ್ಯದ ಆಂಟಿಬಾಡಿ ಟೆಸ್ಟ್ ಗಳು ನೀವು ವೈರಸ್ಸಿನ ಸಂಪರ್ಕಕ್ಕೆ ಬಂದಿದ್ದಿರೇ ಎನ್ನುವುದನ್ನು ಮಾತ್ರ ತಿಳಿಸುತ್ತವೆ. ಆದರೆ ಎಷ್ಟುಕಾಲ ಈ ಆಂಟಿಬಾಡಿಗಳು ಕೊರೊನಾ ಜೊತೆ ಹೋರಾಡಬಲ್ಲವು? ಆಂಟಿಬಾಡಿ ಇದ್ದವರಿಗೆ ಮತ್ತೆ ಇನ್ನೊಂದು ಬಾರಿ ಕೊರೊನಾ ಸೋಂಕು ಬರಬಹುದೇ?  ಎಷ್ಟು ಪ್ರಮಾಣದಲ್ಲಿ ಈ ಆಂಟಿಬಾಡಿಗಳು ಕೊರೊನಾ ವಿದ್ಧ ಫಲಪ್ರದವಾಗಿ ಹೋರಾಡಬಲ್ಲವು?-ಇತ್ಯಾದಿ ಹಲವು ಪ್ರಶ್ನೆಗಳಿಗೆ ಈ ಪರೀಕ್ಷೆಯಿಂದ ಉತ್ತರ ದೊರಕುವುದಿಲ್ಲ.

    ಮುಖ್ಯವಾಗಿ ಇವಿಷ್ಟು ತಿಳಿದಿದ್ದರೆ ಸಾಕು.

    ಆಂಟಿಬಾಡಿ ಪರೀಕ್ಷೆ ಪಾಸಿಟಿವ್ ಬಂದಲ್ಲಿ

    1.  ನಿಮ್ಮ ದೇಹದಲ್ಲಿ ಕೋವಿಡ್-19 ಎನ್ನುವ ವೈರಾಣುವಿನ ವಿರುದ್ಧ ಉತ್ಪತ್ತಿಯಾಗುವ ಪ್ರೋಟೀನುಗಳಿವೆ ಎಂದು ತಿಳಿಯುತ್ತದೆ. ಆದರೆ ಇದು ಕೊರೊನಾ ವೈರಸ್ ಎನ್ನುವ ಫ್ಯಾಮಿಲಿಯ ಇತರೆ ವೈರಸ್ಸುಗಳ ಸಂಪರ್ಕಕ್ಕೆ ಬಂದ ಕಾರಣದಿಂದಲೂ ಇರಬಹುದು. ಸಾಮಾನ್ಯ ಕೆಮ್ಮು-ನೆಗಡಿ ತರುವ ವಿಧದ ವೈರಸ್ಸುಗಳ ಕಾರಣವೂ ನಮ್ಮಲ್ಲಿ ಕೋವಿಡ್-೧೯ ರ ವಿರುದ್ಧ ಹೋರಾಡಬಲ್ಲ ಜೀವನಿರೋಧಕ ಪ್ರೋಟೀನುಗಳು ಉತ್ಪತ್ತಿಯಾಗಬಲ್ಲವು.

    2. ನಮ್ಮ ದೇಹಕ್ಕೆ ಕೋವಿಡ್ -19 ರ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾದ್ದನ್ನು ಖಾತರಿಮಾಡಿಕೊಳ್ಳಬಹುದು. ಆದರೆ, ಎಷ್ಟು ಕಾಲ ಎಷ್ಟು ಮತ್ತು  ರಕ್ಷಣೆ ಸಿಗಬಲ್ಲದು ಎನ್ನುವುದು ಇನ್ನೂ ತಿಳಿದಿಲ್ಲದ ವಿಚಾರ.

    3. ಇನ್ನೂ ಖಾತರಿಬೇಕೆಂದರೆ, ಮತ್ತೊಂದು ವಿಶೇಷ ಆಂಟಿಬಾಡಿ ಪರೀಕ್ಷೆ ಲಭ್ಯವಿದೆ. ಆದರೆ ಎಲ್ಲ ರೀತಿಯ ರಕ್ಷಣಾ ಧಿರಿಸುಗಳನ್ನು ಮುಂದುವರಿಸಲೇ ಬೇಕು.

    ಆಂಟಿಬಾಡಿ ಪರೀಕ್ಷೆ ನೆಗೆಟಿವ್ ಬಂದರೆ

    1.ನಮಗೆ ಕೊರೊನಾ ಫ್ಯಾಮಿಲಿಯ ವೈರಾಣುವಿನ ಸಂಪರ್ಕ ಆಗಿಲ್ಲದಿರಬಹುದು

    2 . ನಿಮ್ಮಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಇನ್ನೂಇರಬಹುದು ಅಥವಾ ಆಗಷ್ಟೆ ಬಂದಿರಬಹುದು

    3.ಮುಂದೆಕೊರೊನಾಸೋಂಕುಬರುವಸಾಧ್ಯತೆಗಳುಇರಬಹುದು

    4. ಏಕೆಂದರೆ, ಕೆಲವರಲ್ಲಿ ತಕ್ಷಣ ಆಂಟಿ ಬಾಡಿಗಳು ಉತ್ಪತ್ತಿಯಾದರೆ ಇನ್ನು ಕೆಲವರಲ್ಲಿ ನಿಧಾನಕ್ಕೆ ಉತ್ಪತ್ತಿಯಾಗಬಹುದು

    ಮೇಲಿನ ಈ ಕಾರಣಗಳಿಗಾಗಿ, ಫಲಿತಾಂಶ ಏನೇ ಆದರೂ ಸ್ವತಃ ನಿಮ್ಮನ್ನು ಮತ್ತು ಇತರರನ್ನು ರಕ್ಷಣೆ ಮಾಡುವುದನ್ನು ಮುಂದುವರೆಸಬೇಕಾಗುತ್ತದೆ.

    Photo by cottonbro from Pexels

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    12 COMMENTS

    1. ಆಂಟಿಜೆನ್ ಪರೀಕ್ಷೆಯ ಆಧಾರದ ಮೇಲೆ ನಡೆಸಲಾಗುವ COVID-19 ಪಾಸಿಟಿವ್ ಅಥವಾ ನೆಗೆಟಿವ್ ಫಲಿತಾಂಶವು ಮುಖ್ಯವಾಗಿ SARS-Cov-2 ಸೋಂಕಿನ ಮಿತಿ ಮತ್ತು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ. ಮಾಹಿತಿಪೂರ್ಣ ಲೇಖನಕ್ಕಾಗಿ ಧನ್ಯವಾದಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!