ಊರು …..ಊರಿಗೆ ಹೊಂದಿಕೊಂಡಂತಿರುವ ಹಳ್ಳಿ . ಅದರಲ್ಲೊಂದು ಬಾಡಿಗೆ ಮನೆಯ ಹುಡುಗ. ಪ್ರೌಢ ವಯಸ್ಸು. ಪ್ರೀತಿ ಪ್ರೇಮವೆಂಬ ಅವಳಿ ಜವಳಿ ಮನಸ್ಸನ್ನು ಮೆದುಲನ್ನು ಬಾಡಿಗೆ ಪಡೆದುಕೊಂಡಂತಹ ಸಮಯ .
ಓದು, ತಿಂಡಿ, ಆಟ , ನಿದ್ದೆ , ಸ್ನೇಹ ಎನ್ನುವ ಹೊತ್ತಲ್ಲೇ….ಎದುರು ಮನೆಯಲ್ಲಿ ಒಂದು ಸ್ವಂತ ಮನೆಯ ಹುಡುಗಿ ಸ್ವಭಾವದಲ್ಲೂ ಪ್ರಭಾವದಲ್ಲೂ ಸೌಮ್ಯತೆಯನ್ನು ಮೈ ಗೂಡಿಸಿಕೊಂಡಿದ್ದಂತಹ ಹುಡುಗಿ . ಅದಾವ ಘಳಿಗೆಯಲ್ಲಿ ಇಬ್ಬರ ನೋಟ ಬೆರೆಯಿತೋ, ಅವನಿಗರಿವಿಲ್ಲದಂತೆಯೇ ಅವನಿಗೂ ಅವಳಿಗೂ ಪರಿಚಯವಿಲ್ಲದ ಪರಿಚಯ . ತುಂಬಾನೇ ಆಪ್ತವೆನಿಸುವಷ್ಟು ನೋಟ . ಕಣ್ಣಲ್ಲೇ ಗಂಟಗಟ್ಟಲೇ ಮಾತು .ಮನಸ್ಸು ಕೊಡಬೇಕಾ ಪಡೆಯಬೇಕಾ ಎನ್ನುವ ಗೊಂದಲ , ನಗಲೂ ಚೌಕಾಸಿ . ಸ್ಕೂಲು ಮುಗಿಸಿ ಬಿಳೀ ಬಣ್ಣದ ಷರ್ಟು ಕಡುನೀಲಿ ಸ್ಕರ್ಟಿನ ಯೂನಿಫಾರಂ ಧರಿಸಿ BSA SLR ಬೈಸಿಕಲ್ ಮೇಲೆ ಬರುತ್ತಿದ್ದ ಅವಳನ್ನು ನೋಡುತ್ತಿದ್ದರೆ ಇವನಿಗೆ ಸಣ್ಣ ಭಯ , ಬಲು ದೊಡ್ಡ ಖುಷಿ .
ಕಣ್ಣುಮಿಟಿಕಿಸಿದರೆ ಅವಳು ಮನೆ ಹೊಕ್ಕಿಬಿಡುತ್ತಾಳೆ ಪುನಃ ಹೊರಗೆ ಬರುತ್ತಾಳೋ ಇಲ್ಲವೋ ಎಂಬ ನಿರಾಶೆ . ಯಾರು ನೋಡಿದರೆ ನನಗೇನು ಎಂಬ ತಾತ್ಸಾರ . ಅಕಸ್ಮಾತ್ ನೋಡಿ ಕೇಳಿಬಿಟ್ಟರೆ ಎಂಬ ಭಯ . ಒಟ್ಟಿನಲ್ಲಿ ಹರೆಯದ ಯೌವನದ ಹೊಸ ಪ್ರೀತಿ ಅದು . ಅವಳ ಕಣ್ಣೋಟಕ್ಕೇ ಕಾಯೋ ನಿತ್ಯ ನಿರಂತರ ಕಾಯಕ ಅವನದ್ದಾಗಿತ್ತು .ಆಟ ಆಡುತ್ತಿರುವಾಗ ಊಟ ಮಾಡುತ್ತಿರುವಾಗ ಪಾಠ ಓದುತ್ತಿರುವಾಗ ರಪ್ ಅಂತ ನೆನಪಾಗುತ್ತಿದ್ದಳು . ನೋಡಲು ನೆಪವಾಗುತ್ತಿದ್ದಳು . ಶುದ್ಧ ಪ್ರೀತಿಗೆ ಸಾಕ್ಷಿ ಅವಳು , ಪರಿಶುದ್ಧ ಪ್ರೀತಿಗೆ ಅರ್ಥ ಅವಳು. ಅರ್ಥವಾಗದ ಪ್ರೀತಿಯ ವ್ಯಾಕರಣಕ್ಕೆ ನಿಘಂಟವಳು .
ಒಂದು ಕ್ಷಣ ಅವಳು ಕಾಣಲಿಲ್ಲವೆಂದರೂ ಕಂಗಾಲಾಗುವಂಥ ಮನಸ್ಥಿತಿ ಅವನದ್ದಾಗಿತ್ತು . ಇಬ್ಬರಿಗೂ ಮೊದ ಮೊದಲಾ ಪ್ರೀತಿ ಎಷ್ಟು ಚೆಂದ ಎನ್ನಿಸುತ್ತಿತ್ತು . ಪ್ರಪಂಚ ದುಂಡಗಿಲ್ಲ ಹೃದಯಾಕಾರದಲ್ಲಿದೆ ಎನ್ನಿಸುವಷ್ಟು ಪರಸ್ಪರ ಆವರಿಸಿಕೊಂಡಿದ್ದರು . ಇಡೀ ದಿನ ತುಟಿಯಾಡಿಸದ ನಾಲಿಗೆಯನ್ನೂ ನಲುಗಾಡಿಸದ ಪಿಸುಮಾತಿನ ಪ್ರೀತಿ ಇಬ್ಬರದ್ದಾಗಿತ್ತು . ಅವಳಿಗೆ ತನ್ನ ಮೇಲೆ ಪ್ರೀತಿ ಇದೆಯಾ ? ಗೊತ್ತಿಲ್ಲ , ಒಮ್ಮೆಯೂ ಅವನು ಕೇಳಿ ತಿಳಿದುಕೊಳ್ಳುವ ಗೋಜಿಗೇ ಹೋಗಲಿಲ್ಲ .
ಅವಳು ತುಂಬಾ ಶ್ರದ್ಧೆಯಿಂದ ಅವನಿಗಾಗಿ ಕಾಯುತ್ತಿದ್ದಳು . ಪದೇ ಪದೇ ನೆಪವೊಡ್ಡಿ ಮನೆ ಅಂಗಳದ ಕೆಲಸಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಳು . ಒಂದು ನೂರು ಪ್ರೆಶ್ನೆಗಳನ್ನು ಮೌನದಲ್ಲೇ ಕೇಳುತ್ತಿದ್ದಳು ಸಾವಿರ ಉತ್ತರಗಳನ್ನು ಕಣ್ಣಲ್ಲೇ ಉತ್ತರಿಸುತ್ತಿದ್ದಳು . ಅವನು ಕಾಣದಿದ್ದಾಗ ವಿಚಲಿತಳಾಗುತ್ತಿದ್ದಳು . ಕಂಡಾಗ ಹರ್ಷಿಸುತ್ತಿದ್ದಳು . ಹಾಗಂತ ಅವಳಿಗೆ ಸಂಬಂಧಗಳ ಬರವಿರಲಿಲ್ಲ .ಒಟ್ಟು ಕುಟುಂಬದ ಭಾಂಧವ್ಯವೇ ಅವಳಿಗಿತ್ತು . ಇಬ್ಬರಿಗೂ…. ಆ ವಯಸ್ಸು ಹೊಸದು , ಪ್ರೀತಿ ಹೊಸದು , ಅನುರಾಗ ಹೊಸದು, ಪ್ರತಿಯೊಂದೂ ಹೊಸದು .
ಬದುಕು ಒಂದು ಪ್ರಯಾಣ ಅಂತಾರೆ ಅದರಂತೆ ಆ ಪ್ರಯಾಣದಲ್ಲಿ ಅವನ ಜೊತೆ ಪ್ರಯಾಣಿಸಿದ ಹುಡುಗಿಯವಳು . ಅವನೊಂದು ಸ್ಟಾಪಿನಲ್ಲಿ ಇವಳೊಂದು ಸ್ಟಾಪಿನಲ್ಲಿ ಇಳಿದ ಯಾತ್ರಿಕರು ಅವರು
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಮಾಸ್ತಿಯವರ ಲೇಖನ, ಕಿರಣ್ ರವರ ಕಲಾಕೃತಿ ಮಸ್ತ್.
ಬೆಳಗಿನ ಹಿಮದಂತಾ ಸಿಂಚನ. ಖುಷಿ ಆಯ್ತು.