ಚೀನಾದ ಅತಿಕ್ರಮಣದ ಕುತಂತ್ರದಿಂದ ಭಾರತಕ್ಕೆ ಬಲುದೊಡ್ಡ ಲಾಭ ಆಗಿದೆ. ಅದುವೇ ಮುಂದಿನ ಪೀಳಿಗೆ ಅಂದರೆ ಮಕ್ಕಳನ್ನು ಹಂತ ಹಂತವಾಗಿ ಕೊಂದು ಹಾಕುವ, ಅವರ ಮಾನಸಿಕತೆಯನ್ನೇ ಹಾಳುಗೆಡವುವ ಪಬ್ಜಿ ಗೇಮ್ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧರಿಸಿರುವುದು. ಇದರೊಂದಿಗೆ ಬಹುದೊಡ್ಡ ಪಿಡುಗು ದೇಶದಿಂದ ಹೊರ ನಡೆದಂತಾಗಿದೆ.
ಕೊರೊನಾ ಸರಣಿಯ ಸಾರ್ಸ್, ಮಾರ್ಸ್, ಕೋವಿಡ್ -19 ಹೀಗೆ ಎಲ್ಲವೂ ಚೀನಾದ ಕೊಡುಗೆ ಎಂದು ಪರಿಗಣಿತವಾಗಿದೆ. ಜಗತ್ತಿನ ಸ್ವಾಸ್ಥ್ಯ ಕಾಪಾಡುವ ಯಾವುದೇ ಒಂದು ಉತ್ತಮ ಪ್ರಾಡಕ್ಟ್ ಚೀನಾದಿಂದ ಬಂದಿದೆ ಎಂದು ಹೆಸರಿಸಲು ಸಾಧ್ಯವೇ ಇಲ್ಲ. ಇವುಗಳ ಪೈಕಿ ಈಗ ನಿಷೇಧಕ್ಕೆ ಒಳಗಾಗಿರುವ ಪಬ್ಜಿ ಎಂಬ ಗೇಮಿಂಗ್ ಕೂಡ ಸೇರ್ಪಡೆಯಾಗುತ್ತದೆ. ಮಕ್ಕಳ ಮನಸ್ಸನ್ನು ಹಾಳು ಮಾಡಿ ಅವರನ್ನು ಮಾನಸಿಕ ಗುಲಾಮರನ್ನಾಗಿಸುವ ಈ ಮೊಬೈಲ್ ಗೇಮ್ ಜಗತ್ತಿನಲ್ಲಿ ಏನೆಲ್ಲಾ ಅನಾಹುತ ಮಾಡಿದೆ ಎಂದರೆ, ಒಮ್ಮೆ ಡೌನ್ ಲೋಡ್ ಮಾಡಿದರೆ ಸಾಕು ಇದೊಂದು ಮಾದಕ ದ್ರವ್ಯದಂತೆ ಕೆಲಸ ಮಾಡುತ್ತದೆ. ಅದೊಂದು ವ್ಯಸನವಾಗಿ (ಅಡಿಕ್ಷನ್) ಕಾರ್ಯ ನಿರ್ವಹಿಸಿ ಮಕ್ಕಳ ಬಾಳನ್ನೇ ಹಾಳು ಮಾಡುತ್ತದೆ.
ಅಡಿಕ್ಷನ್ ಪ್ರಮಾಣ
ಇತ್ತೀಚೆಗಷ್ಟೇ ಪಂಜಾಬಿನ 17 ವರ್ಷದ ಹುಡುಗನೊಬ್ಬ ತನ್ನ ಹೆತ್ತವರ ಬ್ಯಾಂಕ್ ಅಕೌಂಟ್ ನಿಂದ 16 ಲಕ್ಷ ರೂ.ಗೆ ಕನ್ನ ಹಾಕಿದ್ದ. ಕೇಳಿದರೆ ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಪಾಠಕ್ಕಾಗಿ ಈ ಹಣ ವ್ಯಯ ಮಾಡಿದ್ದೆ ಎಂದು ಸಮಜಾಯಿಸಿಕೊಟ್ಟಿದ್ದ. ಆದರೆ ನಿಜವಾಗಿ ಆತ ಈ ಪಬ್ಜಿ ಗೇಮ್ ನ ಹುಚ್ಚಾಟಕ್ಕೆ ಬಿದ್ದಿದ್ದ. ಅದಕ್ಕಾಗಿ ಬೇಕಾಗುವ ಸಾಮಗ್ರಿಗಳ (ವರ್ಚುವಲ್ ಸಾಮಗ್ರಿಗಳಾದ ಗನ್, ಮದ್ದು ಗುಂಡು ಇತ್ಯಾದಿ) ಖರೀದಿಗಾಗಿ ಈ ಹಣವನ್ನು ವ್ಯಯಿಸಿದ್ದ. ಅವರ ತಂದೆ ಈ ಹಣವನ್ನು ತಮ್ಮ ಆರೋಗ್ಯದ ಸಮಸ್ಯೆಯ ನಿವಾರಣೆಗಾಗಿ ಉಳಿತಾಯ ಮಾಡಿದ್ದರು. ಇದು ಹಣದ ಸಮಸ್ಯೆಯಾದರೆ ಇದನ್ನು ಆಡುತ್ತಾ ಪ್ರಾಣ ಕಳೆದುಕೊಂಡ ಮಕ್ಕಳ ಪ್ರಮಾಣವೂ ಕಡಿಮೆಯೇನಿಲ್ಲ. ಅಧಿಕೃತ ಲೆಕ್ಕಾಚಾರದ ಪ್ರಕಾರ ಇದು 10ನ್ನು ದಾಟಿದ್ದರೆ, ಉಳಿದಂತೆ ಅಜ್ಞಾತವಾಗಿ ಉಳಿದ ಪ್ರಕರಣಗಳಷ್ಟೋ ಗೊತ್ತಿಲ್ಲ. ಇದರ ವ್ಯಸನ ಎಷ್ಟರ ಮಟ್ಟಿಗೆ ಇದೆಯೆಂದರೆ, ಬೆಳಗಾವಿಯಲ್ಲಿ ಈ ಗೇಮ್ ಆಡುತ್ತಿದ್ದ ಬೈಯ್ದ ಅಪ್ಪನ ತಲೆಯನ್ನೇ ಕಡಿದು 21 ವರ್ಷದ ಮಗ ಕೊಲೆ ಮಾಡಿದ್ದು, ವಿಜಯಪುರದಲ್ಲಿ ಇನ್ನೊಬ್ಬ ಹುಡುಗ ಪಬ್ಜಿ ಗೇಮ್ ನಲ್ಲಿ ಸೋತ ಬಳಿಕ ಬಾಜಿಯಂತೆ ನೀರಿಗೆ ಹಾರಿದ ನಿದರ್ಶನಗಳೂ ಇದರಲ್ಲಿ ಸೇರಿದೆ.
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ಗೇಮ್ ವ್ಯಸನವನ್ನು ಹೊಂದಿರುವ ಹದಿಹರೆಯದವರ ಸಂಖ್ಯೆ 10ರಿಂದ 15 ಲಕ್ಷ ಎಂದು ಹೇಳಲಾಗುತ್ತಿದೆ.
ಅಗಾಧ ಮೌಲ್ಯದ ಇಂಡಸ್ಟ್ರಿ
ಭಾರತದಲ್ಲಿ ಆನ್ ಲೈನ್ ಗೇಮಿಂಗ್ ಕ್ಷೇತ್ರ ಇನ್ನಷ್ಟೇ ಅಂಬೆಗಾಲು ಇಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಮಾರ್ಟ್ ಫೋನ್ ಯಾವಾಗ ಕಾಲಿಟ್ಟಿತೋ ಆ ಕ್ಷಣದಿಂದ ಇದು ಶರವೇಗದಲ್ಲಿ ಮುನ್ನಡೆಯುತ್ತಿದೆ. ಸದ್ಯದ ಮಟ್ಟಿಗೆ 1.4 ಶತ ಕೋಟಿ ಡಾಲರ್ ಮೌಲ್ಯದ ಇದು 2022ರ ಹೊತ್ತಿಗೆ 5 ಶತ ಕೋಟಿ ಡಾಲರ್ ಮೌಲ್ಯದ ಉದ್ಯಮವಾಗಲಿದೆ. 24 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಶೇ. 66 ನಗರ ವಾಸಿಗಳು ಇದರ ವ್ಯಸನ ಹಚ್ಚಿಕೊಂಡಿದ್ದಾರೆ ಎಂದು ಕೆಪಿಎಂಜಿ ವರದಿ ಹೇಳುತ್ತದೆ. ಇದರ ಜತೆಗೆ ಉದ್ಯೋಗಿಗಳು, ಮನೆಯಲ್ಲೇ ಇರುವ ಗೃಹಿಣಿಯರು ಕೂಡ ಸೇರಿದ್ದಾರಂತೆ. ಚೀನಾವು ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿರುವುದು ಕೂಡ ಫೋನ್ ಬಳಕೆಯ ಜತೆಗೆ ಆನ್ ಲೈನ್ ಗೇಮ್ ಪ್ರಮಾಣ ಹೆಚ್ಚಲು ಕಾರಣ ಎಂದು ಅದು ಅಭಿಪ್ರಾಯ ಪಟ್ಟಿದೆ.
ಹಲವು ದೇಶಗಳಲ್ಲಿ ನಿಷೇಧ
ಹೀಗೆ ಎಲ್ಲರಿಗೂ ಅನಾಹುತ ಹಂಚುವ ಚೀನಾ ಪಬ್ಜಿ ಗೇಮ್ ನ ಮೇಲೆ ಮೊದಲ ವರ್ಷವೇ ನಿರ್ಬಂಧ ಹೇರಿತ್ತು. ಅಲ್ಲಿ 13 ವರ್ಷಕ್ಕಿಂತ ಕೆಳಗಿನವರು ಈ ಗೇಮ್ ಆಡುವುದು ಶಿಕ್ಷಾರ್ಹ ಅಪರಾಧ. ಇದಕ್ಕಾಗಿ ಪ್ರತ್ಯೇಕ ಆಪ್ ಕೂಡ ಚೀನಾ ಸಿದ್ಧ ಪಡಿಸಿತ್ತು. ಡಿಜಿಟಲ್ ಲಾಕ್ ಮೂಲಕ ಇಂತಹ ನಿರ್ಬಂಧವನ್ನು ಸರಿಯಾಗಿ ಜಾರಿಗೆ ತರುವಲ್ಲಿ ಅದು ಯಶಸ್ವಿಯಾಗಿತ್ತು. ಮುಖ ಚಹರೆ ಗುರುತು, ಐಡಿ ಗುರುತು ಮೂಲಕ ಇಂತಹ ನಿರ್ಬಂಧ ಯಶಸ್ವಿಯಾಗಿತ್ತು.
ಇದರ ಮೇಲೆ ನಿಷೇಧ ಹೇರಿದ ದೇಶಗಳ ಪೈಕಿ ಪಾಕಿಸ್ತಾನ, ಜೋರ್ಡನ್, ಇರಾಕ್ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಇದರ ಅನಾಹುತದ ಅರಿವು ಆದ ಕೂಡಲೇ ಈ ದೇಶಗಳು ಗೇಮ್ ಮೇಲೆ ನಿಷೇಧ ಹೇರಿದ್ದವು. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ರಾಜ್ಯಗಳು ಈ ಗೇಮ್ ಮೇಲೆ ನಿಷೇಧ ಹೇರಿದ್ದವು. ಆದರೆ, ಅಮೆರಿಕದ ಸುಪ್ರೀಂ ಕೋರ್ಟ್ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಸಂವಿಧಾನ ನೀಡಿದ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಿ ಅದನ್ನು ವಜಾಗೊಳಿಸಿತ್ತು.
ಕಾನೂನು ಹೋರಾಟ
ಹಾಗೆಂದು ಭಾರತದಲ್ಲಿ ಈ ಮಾರಕ ಗೇಮ್ ನಿಷೇಧಕ್ಕೆ ಈ ಮೊದಲೇ ಹೋರಾಟ ಆಗಿಲ್ಲವೆಂದೇನಿಲ್ಲ. ಇದರ ನಿಷೇಧಕ್ಕೆ ಆದೇಶ ನೀಡುವಂತೆ ಕೋರಿ ಹಿರಿಯ ವಕೀಲ ಎಚ್ ಸಿ ಅರೋರಾ ಎನ್ನುವವರು ಪಂಜಾಬ್-ಹರಿಯಾಣ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದೊಂದು ಮಾದಕ ದ್ರವ್ಯದಂತೆ ವ್ಯಸನಕ್ಕೆ ಒಳಪಡಿಸುವ ಗೇಮ್ ಎಂದವರು ಪ್ರತಿಪಾದಿಸಿದ್ದರು. ಆ ಬಳಿಕ 2019ರಲ್ಲಿ ಅಹಮದಾಬಾದ್, ರಾಜ್ ಕೋಟ್, ಸೂರತ್, ವಡೋದರ ಮತ್ತು ಭಾವನಗರದಲ್ಲಿ ಇದರ ಮೇಲೆ ನಿಷೇಧ ಹೇರಲ್ಪಟ್ಟಿತ್ತು.ಮುಂಬೈ ಹೈಕೋರ್ಟ್ ನಲ್ಲಿ ಕೂಡ ಇಂತಹುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.
ಹರಯದ ಮಕ್ಕಳಿರುವ ತಂದೆ ತಾಯಿಗೆ ಈ ಆಟದ ನಿಷೇದ Blessing in disguise ಆಯಿತು…
ಇಂತಾದೊಂದು ಆಟ ಇದೆ ಅಂತ ಇತ್ತೀಚೆಗೆ ತಿಳಿಯಿತು.ನನ್ನ ಪರಿಚಯದವರ ಮಕ್ಕಳು ಈ ಕರೋನಾ ರಜೆಯಲ್ಲಿಇಡೀ ದಿನ ಇದೇ ಆಟವಾಡುತಿದ್ದರು. ಸದ್ಯ ನಿಷೇಧಿಸಿದ್ದು ಒಳ್ಳೆಯದಾಯಿತು