16.8 C
Karnataka
Monday, November 25, 2024

    ಮ್ಯಾನಿಕ್ಯೂರ್, ಪೆಡಿಕ್ಯೂರ್ ಗಳಿಲ್ಲದ ದಿನಗಳು

    Must read

    ನೂತನ ಎಮ್. ದೋಶೆಟ್ಚಿ

    80ರ ದಶಕದ ಕೊನೆಯ ಭಾಗ. ನಮ್ಮ ಊರಿನಲ್ಲಿ ಆಗ ಬ್ಯೂಟಿಪಾರ್ಲರ್ ಇರಲಿಲ್ಲ ಎಂದರೆ ನೀವು ನಂಬಲೇಬೇಕು. ಅದು ತಾಲೂಕಿನ ಕೇಂದ್ರವಾಗಿದರೂ ದೊಡ್ಡ ಹಳ್ಳಿಯೇ ಆಗಿತ್ತು.ಆ ಕಾಲದಲ್ಲಿ ನಮ್ಮ ಊರು  ಆಗಷ್ಟೇ ಹೊಸತನಕ್ಕೆ, ಆಧುನಿಕತೆ ಎಂದು ಕರೆಯಲಾಗುತ್ತಿದ್ದ ಬ್ಯೂಟಿ ಪಾರ್ಲರ್ ನಂತಹ ಮುಜುಗರಗಳಿಗೆ ತೆರೆದುಕೊಳ್ಳಲು ಆರಂಭಿಸಿತ್ತು.

    ಬ್ಯೂಟಿ ಪಾರ್ಲರ್ ಎಂದರೆ ಈಗಿನಂತೆ ದೊಡ್ಡ ಬೋರ್ಡ್ ಹಾಕಿ ಆಹ್ವಾನಿಸುವ ಎದೆಗಾರಿಕೆ ಆಗ ಇರಲಿಲ್ಲ.  ಪಾರ್ಲರ್ ನಡೆಸುವವರ ಮನೆಯ ಎದುರಿನ ಕೋಣೆಯನ್ನೇ   ಅದಕ್ಕಾಗಿ ಬಳಸಲಾಗುತ್ತಿತ್ತು. ಅದರೊಳಗೆ ಕದ್ದು ಮುಚ್ಚಿಯೇ ಹೋಗಬೇಕು. ಊರಿನವರು ಯಾರಾದರೂ ನೋಡಿಬಿಟ್ಟರೆ ಎಂಬ ಎದೆಗುದಿ ಬೇರೆ.       

    ಇಂತಿಪ್ಪ ಒಂದು ಪಾರ್ಲರ್ ಕೂಡ ಊರಲ್ಲಿರದ ಕಾಲದಲ್ಲಿ ಮಲೆನಾಡಿನ ಮಳೆಗಾಲದ ಜಲಪಾತದಂತೆ ಇದ್ದ ನನ್ನ  ಉದ್ದನೆಯ, ದಪ್ಪ ಜಡೆ ಬಯಲು ಸೀಮೆಯ ಗಡಸು ನೀರಿಗೆ ಬಿಡು ಬೇಸಿಗೆಯ ಸಣ್ಣ ಝರಿಯಂತೆ ಸೊರಗಿತ್ತು. ಇದ್ದರೆ ಹಾಗೇ ಇರಬಹುದಿತ್ತೇನೋ. ಆದರೆ ನನ್ನೊಳಗೂ ಆಧುನಿಕತೆಯ ಗುಂಗಿ ಹುಳು ಸಣ್ಣಗೆ ಕೊರೆಯಲು ಶುರು ಹಚ್ಚಿಕೊಂಡಿತ್ತು. ಇದಕ್ಕೆ ನಾನೇ ನೇರವಾದ ಕಾರಣವಲ್ಲ.ಓರಗೆಯ ಶಹರದ ಗೆಳತಿಯರು, ಸಹಪಾಠಿಗಳ ಎದುರಿಗೆ ತೀರ ಹಳ್ಳಿಯವಳಂತೆ ಕಾಣುತ್ತಿದ್ದ ನನ್ನನ್ನು ಅವರ ಸಮಕ್ಕೆ ಹೇಗಾದರೂ ಏರಿಸಿಕೊಳ್ಳಬೇಕಿತ್ತು. ಇದಕ್ಕೆ ಇದ್ದ ಹಲವು ದಾರಿಗಳಲ್ಲಿ ಒಂದು ನೇರ ತಲೆಕೂದಲಿಗೇ ಸಾಗಿತು.  ಎರಡೂವರೆ ಅಡಿ ಇದ್ದ ಹೊಳೆಹೊಳೆವ, ನುಣುಪು ಕೂದಲಿಗೆ ಕತ್ತರಿ ಸೇವೆ ಮಾಡಿಸಲು 40 ಕಿಲೋ ಮೀಟರ್ ದೂರದಲ್ಲಿರುವ ಪಕ್ಕದ ಊರಿಗೆ ಅಮ್ಮನೊಂದಿಗೆ ಹೊರಟಿದ್ದು ಒಂದು ಬೇಸಿಗೆ ರಜೆಯಲ್ಲಿ. 

    ಹೊರಟಿದ್ದೇನೋ ಉತ್ಸಾಹದಿಂದಲೇ. ಆದರೆ ನನಗೆ ತೀರಾ ಹೊಸದಾಗಿದ್ದ  ಪಾರ್ಲರ್ ಎಂಬ  ಆ ಆಧುನಿಕತೆಯ ಎದುರು ನಿಂತಾಗ ಆದ ಮುಜುಗರವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಒಳ ಅಡಿಯಿಟ್ಟಾಗ ಎದುರುಗೊಂಡಿದ್ದು ಪಾರ್ಲರ್ ಒಡತಿ. ಅದುವರೆಗೂ ಕತ್ತರಿಸಿಯೇ ಇರದ ಕೂದಲನ್ನು ಕತ್ತರಿಸಲು ಹೇಳಲು ಯಾವ ಪದಗಳನ್ನು ಬಳಸಬೇಕು ಎಂಬುದೇ ತೋಚದಾಗಿತ್ತು. ವ್ಯವಹಾರದಲ್ಲಿ ಪಳಗಿದ್ದ ಆಕೆ ನನ್ನ ಮುಜುಗರವನ್ನು ತಿಳಿಯಾಗಿಸುತ್ತ ಹತಾರಗಳೊಂದಿಗೆ ಸಿದ್ಧವಾದರು. 

    ಮೊದಲ ಸಲಕ್ಕೇ ನೆಲದ ಮೇಲೆ ಒಂದೂವರೆ ಅಡಿ ಉದ್ದದ ಕಪ್ಪು ಹಾವಿನಂತಿದ್ದ ಕೂದಲ ಸಿಂಬಿ ಕತ್ತರಿಸಿಕೊಂಡು ಬಿದ್ದಾಗ ನನ್ನ  ತಗ್ಗಿಸಿದ ತಲೆ ಇನ್ನಷ್ಟು ಹುದುಗಿ ಹೋಯಿತು. ಏನೋ ಕಳೆದುಕೊಂಡಂತೆ,  ತಪ್ಪು ಮಾಡಿದಂತೆ ಅದೇಕೆ ಭಾಸವಾಯಿತೋ ಕಾಣೆ. ಆಧುನಿಕತೆಯಂತೂ ತಲೆಯ ಮೇಲೂ, ನೆಲದ ಮೇಲೂ ಸೂರೆಗೊಂಡಿತ್ತು. ಪಕ್ಕದಲ್ಲಿ ಅಮ್ಮ ಕಣ್ಣು ಪಿಳುಕಿಸುತ್ತ ಏನನ್ನೂ ಮಾತಾಡಿದೆ, ಓದಲಾಗದ ಭಾವನೆಗಳನ್ನು ಮುಖದ ತುಂಬಾ ಹರವಿಕೊಂಡು ಕುಳಿತಿದ್ದರು.

    ತಲಾ ಹತ್ತು ರೂಪಾಯಿ ಬಸ್ ಚಾರ್ಜ್, ಇಪ್ಪತ್ತು ರೂಪಾಯಿ ‘ತಲೆದಂಡ ‘ ಕೊಟ್ಟು ಹೊರಟಾಗ ತಲೆ ಹಗುರವಾಗಿತ್ತೋ, ಭಾರವಾಗಿತ್ತೋ ಹೇಳಲಾಗದು. ಮನೆಯ ದಾರಿ ತುಮುಲದಲ್ಲೇ ಸಾಗಿತು. ಮನೆ ತಲುಪುತ್ತಿದ್ದಂತೆ ಅಮ್ಮನಿಗೆ  “ನೀವಾದರೂ ಕತ್ತರಿಸಬೇಡ ಎಂದು ಹೇಳಬಹುದಿತ್ತಲ್ಲ. ಅಷ್ಟು ಉದ್ದದ ಕೂದಲು ಕತ್ತರಿಸಿಕೊಂಡು ಕೆಳಗೆ ಬಿದ್ದಿದ್ದನ್ನು ಸುಮ್ಮನೇ ನೋಡುತ್ತಾ ಕುಳಿತು ಬಿಟ್ಟಿರಿ ” ಎಂದು ಸಣ್ಣ ತಗಾದೆಗೆ ಶುರು ಹಚ್ಚಿಕೊಂಡೆ. 

    ಆಧುನಿಕತೆ ಎನ್ನುವುದು ಒಡಲಾಳದ ಇಂಥ ದ್ವಂದ್ವಗಳಿಗೆ ಮುಖಾಮುಖಿಯಾಗುತ್ತ, ತಪ್ಪು-ಒಪ್ಪುಗಳ ತುಮುಲಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಹುಟ್ಟಿದ್ದು. ಮುಂದಿನ  ಕೇವಲ ಅರ್ಧ ದಶಕದಲ್ಲಿ ಬೆನ್ನಿಗಂಟಿದ್ದ ಇಂಥ ಎಲ್ಲ ಬಲಿಯದ ರೆಕ್ಕೆಗಳು ಬಲಿತು ಆಧುನಿಕತೆ  ರಾಕೆಟ್ ವೇಗದಲ್ಲಿ   ಮೇಲೇರಿತು. ಇದರ ಭಾಗವಾಗಿದ್ದ ಪಾರ್ಲರ್ ಗಳು ವ್ಯವಸ್ಥಿತವಾದ ಉದ್ಯಮವಾಗುವಷ್ಟರ ಮಟ್ಟಿಗೆ ಬೆಳೆದವು. ಸೌಂದರ್ಯ ಕೇವಲ ಕನ್ನಡಿಯೆದುರಿನ ಸ್ವ ಆಸ್ವಾದನೆಯಾಗಿ  ಉಳಿಯದೇ ಸಾಗರಗಳಾಚೆ ವಿಸ್ತರಿಸಿದ ಬ್ರಹತ್ ಉದ್ದಿಮೆಯಾಯಿತು. ಇದರ ಅಡಿಯಲ್ಲಿ ಸೌಂದರ್ಯ ವರ್ಧಕಗಳು,  ಮಾಡೆಲಿಂಗ್, ಫ್ಯಾಷನ್ ಷೋ, ಇವೆಂಟ್ ಮ್ಯಾನೇಜ್ಮೆಂಟ್ , ವಸ್ತ್ರ ವಿನ್ಯಾಸ, ಫ್ಯಾಷನ್ ಡಿಸೈನಿಂಗ್ ಮೊದಲಾದ ಹತ್ತು ಹಲವು ಉದ್ದಿಮೆಗಳು ಸೇರಿದವು. ಈ ಇಡಿಯ ಸರಪಳಿಯ ಆರಂಭದ ಕೊಂಡಿಯಾಗಿದ್ದ ಪಾರ್ಲರ್ ಅತ್ಯಂತ ಚಿಕ್ಕ ಘಟಕವಾಗಿ ಉಳಿಯಿತು. ಆದರೆ ತನ್ನ ಮಹತ್ವವನ್ನು ಕಳೆದುಕೊಳ್ಳದೆ ಗಲ್ಲಿ ಗಲ್ಲಿಗಳಲ್ಲಿ ನೂರಾರು ಸಂಖ್ಯೆಗಳಲ್ಲಿ ಅಸ್ತಿತ್ವವನ್ನು ಹಾಗೆಯೇ ಉಳಿಸಿಕೊಂಡಿತು. 

    ಮುಜುಗರಗಳನ್ನೆಲ್ಲ ಹೊಡೆದೋಡಿಸಿದ ಪಾರ್ಲರ್

    ಈಗ ದಿನನಿತ್ಯದ ಅಗತ್ಯವಾಗಿ, ಸೌಂದರ್ಯದ ಭಾಷ್ಯವಾಗಿ, ಮಕ್ಕಳು, ಯುವತಿಯರು, ಮುದುಕಿಯರೆನ್ನದೆ ಎಲ್ಲ ವಯೋಮಾನದ, ಎಲ್ಲ ಆರ್ಥಿಕ ಸ್ಥಿತಿಗಳ ಮಹಿಳೆಯರಿಗೆ ಅವರವರ ಅಗತ್ಯ, ಆದ್ಯತೆಗೆ ಅನುಗುಣವಾಗಿ ಒದಗುತ್ತ , ಸಭೆ- ಸಮಾರಂಭ, ಮದುವೆ ಮೊದಲಾದ ಎಲ್ಲ ಸಂದರ್ಭಗಳಲ್ಲೂ ಅನಿವಾರ್ಯವಾಗಿದೆ. ಜೊತೆಗೆ ಆಧುನಿಕತೆಯ ಪರಿಭಾಷೆಯನ್ನು ಬದಲಿಸುತ್ತ ಸಾಗಿದೆ. ಇದಿಲ್ಲದ ಊರುಗಳನ್ನು ಈಗ ಊಹಿಸಿಕೊಳ್ಳುವುದೂ ಕಷ್ಟ. 

    ಮನೆಯ ಹೆಣ್ಣು ಮಕ್ಕಳ ಅಣ್ಣ-ತಮ್ಮಂದಿರು, ಅಪ್ಪ-ಚಿಕ್ಕಪ್ಪಂದಿರು, ಕೊನೆಗೆ ಗಂಡ- ಬಾಯ್ ಫ್ರೆಂಡ್ ಗಳಿಗೆ ಕೂಡ ಪಾರ್ಲರ್ ಎದುರಿಗೆ  ಆಗಾಗ ಕಾಯಬೇಕಾದ ಸಂದರ್ಭಗಳು ಸರ್ವೇ ಸಾಮಾನ್ಯ. ಅಷ್ಟರ ಮಟ್ಟಿಗೆ ಬ್ಯೂಟಿ ಪಾರ್ಲರ್ ಗಳು  ಕ್ರಾಂತಿಯ ಹರಿಕಾರವಾಗಿವೆ.

    ನಾಯಿಕೊಡೆಗಳಂತೆ ಹುಟ್ಟಿಕೊಂಡರೂ  ಸುಭಿಕ್ಷವಾದ ವಹಿವಾಟು, ಪುಷ್ಕಳವಾದ ಆದಾಯದೊಡನೆ ಆರಾಮವಾಗಿದ್ದ   ಇಂಥ ಪಾರ್ಲರ್ ಗಳಿಗೆ ಆಘಾತ ಉಂಟಾಗಿದ್ದು  ಸಧ್ಯದ   ಕೊರೊನಾದಿಂದ. ಲಾಕ್ ಡೌನ್ ಸಂದರ್ಭದಲ್ಲಿ ಇವುಗಳನ್ನು ಮುಚ್ಚಲು ಆದೇಶಿಸಿದಾಗ ಮೊದಲು 15-20 ದಿನಗಳು ತಕ್ಕಮಟ್ಟಿಗೆ  ಸಹಜವಾಗಿಯೇ ಕಳೆದವು. ಆನಂತರ ತಲೆಕೂದಲು ಉದ್ದವಾಗಿತ್ತು. ಹುಬ್ಬು ಬೆಳೆದಿತ್ತು. ಫೇಶಿಯಲ್ ಇಲ್ಲದೇ ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲು ಹೆದರುವಂತಾಗಿತ್ತು. ಇದರ ಕುರಿತ ಜೋಕುಗಳೂ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದವು. ಮ್ಯಾನಿಕ್ಯೂರ್ , ಪೆಡಿಕ್ಯೂರ್ ಗಳಿಲ್ಲದೆ ಕೈ ಕಾಲು ಸುಕ್ಕುಗಟ್ಟಿದಂತೆ ಅನ್ನಿಸಲು ಶುರುವಾಯಿತು. ಮನೆಯಲ್ಲಿ  ಹೆಣ್ಣುಮಕ್ಕಳ ಈ  ಸೈಲೆಂಟ್ ಪೇಚಾಟಗಳು ಗಂಡಸರಿಗೆ, ಹುಡುಗರಿಗೆ ಉಚಿತ ರಿಕ್ರಿಯೇಷನ್ ಆದವು. ಅನ್ನುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವುದು ಮಹಿಳಾ ಸ್ಥಿತಿಯಾದರೆ ಹಾಲು ಕುಡಿದಷ್ಟು ಖುಷಿ ಗಂಡುಗಳಿಗೆ! ಆದರೆ ಈ ಖುಷಿಯೇನು ಬಹಳ ಕಾಲ ಉಳಿಯಲಿಲ್ಲ. ಹುಡುಗರ ತಲೆಗೂದಲು, ಗಡ್ಡ ಉದ್ದವಾಗತೊಡಗಿತು. ತಲೆಗೂದಲೆಂದರೆ ಹುಡುಗಿಯರಿಗಿಂತ ಕೊಂಚ ಹೆಚ್ಚೇ ಕಾಳಜಿ ಮಾಡುವ ಹುಡುಗರು ಫಜೀತಿಗಿಟ್ಟುಕೊಂಡರು. ವಿರಾಟ್ ಕೊಹ್ಲಿಯ ಪತ್ನಿ ಅವನ ಕೂದಲು ಟ್ರಿಮ್ ಮಾಡಿದ್ದನ್ನು ಕಂಡು ಅದೆಷ್ಟು ಜನ ಮರುಗಿದರೋ? ಎಲ್ಲರಿಗೂ ಒಂದೇ ಸಮಾಧಾನ ಎಂದರೆ ಹೊರಗಡೆ ಹೋಗುವಂತಿಲ್ಲ. ಬೇರೆಯವರು ನೋಡುವಂತಿಲ್ಲ. ಮನೆಯಲ್ಲೇ ಇರುವುದರಿಂದ ಹೇಗಿದ್ದರೇನು ಎಂಬ ಅನಿವಾರ್ಯ ಅಸಡ್ಡೆ ಎಲ್ಲ  ಕೊರಗುಗಳಿಂದ ಬಿಡುಗಡೆಗೊಳಿಸಿತು. ಹಾಗಾದರೆ ಇಷ್ಟು ದಿನಗಳ ಒಪ್ಪ-ಓರಣ ಎಲ್ಲ ಬೇರೆಯವರಿಗಾಗಿ . ತನಗಾಗಿ ಅಲ್ಲ!! ಓನಿಡಾ ಟಿವಿ ಹೇಳುತ್ತೆ ನೋಡಿ ‘ ನೇಬರ್ಸ್ ಎನ್ವಿ’ ಅಂತ ಆ ಥರಾ. 

    ಆದರೆ  ಕೊರೊನಾ ವಿಷಯದಲ್ಲಿ  ಇದು  ಅನ್ವಯವಾಗಲಿಲ್ಲ.  ಯಾಕೆಂದರೆ ಈ ಕೊರೊನಾ ಮುಖ ಮೂತಿ ನೋಡದೆ ಎಲ್ಲರಿಗೂ ಮುಸುಕು ಹಾಕಿಸಿ, ತೊಳಿ, ಬಳಿ, ತಿಕ್ಕು ಎಕ್ಸರ್ಸೈಜಿನಲ್ಲಿ ಮನೆಮಂದಿಯನ್ನೆಲ್ಲ ತೊಡಗಿಸಿಬಿಟ್ಟಿತ್ತಲ್ಲ ! ಪಕ್ಕದ ಮನೆಯವರ ಮುಖ ನೋಡುವುದಿರಲಿ ತಮ್ಮ ಮನೆಯ ಅಂಗಳ ದಾಟಲೇ ಭಯಪಡಬೇಕಾದ ಪರಿಸ್ಥಿತಿಯಲ್ಲಿ ಮೇಕಪ್, ಹೇರ್ ಡೈಗಳ ಬಗ್ಗೆ ವಿರಕ್ತಿ ಹುಟ್ಟಿಬಿಟ್ಟಿತ್ತು. ಮನೆಯನ್ನು, ಪಾತ್ರೆ- ಪಡಗಳನ್ನು, ಬಟ್ಟೆಯನ್ನು, ಸೊಪ್ಪು-ತರಕಾರಿಗಳನ್ನು, ಹಣ್ಣುಗಳನ್ನು ತೊಳೆದು, ತೊಳೆದು ಹೈರಾಣಾಗಿದ್ದು ಸಾಲದೇ ಮತ್ತೆ ಹೇರ್ ಡೈ ತೊಳೆಯುವುದಾ? ಇರಲಿ ಬಿಡು ಬಿಳಿ ಕೂದಲು. ಯಾರು ನೋಡುತ್ತಾರೆ ಎಂಬ ವೇದಾಂತಕ್ಕೆ ಎಡೆ ಮಾಡಿಕೊಟ್ಟಿತ್ತು. 

    ಸರಿಯಾದ ಸಮಯಕ್ಕೆ ರಾಮಾಯಣ, ಮಹಾಭಾರತ ಧಾರಾವಾಹಿಗಳ ಪ್ರಸಾರ ಬೇರೆ ಟಿವಿಯಲ್ಲಿ ಶುರುವಾಯ್ತು.  ನಾರುಬಟ್ಟೆಯುಟ್ಟು ಕಾಡಿಗೆ ಹೋಗುವ ರಾಜಕುಮಾರಿ ಸೀತೆಯನ್ನು ಉದ್ದ ಕೂದಲ ಶ್ರೀರಾಮ, ಭೀಷ್ಮ, ಧರ್ಮರಾಯರನ್ನು ನೋಡುವ ದೃಷ್ಟಿಕೋನವೇ ಈಗ ಬದಲಾಗಿತ್ತು.  ಹೆಂಗಸರು ಮನೆಯೆಂಬ ವನವಾಸದಲ್ಲಿ ಶಾಂತಿ ಅರಸಿದರೆ, ಗಂಡಸರು ತಮ್ಮ ಉದ್ದ ತಲೆಕೂದಲನ್ನು ಮುಟ್ಟಿ ಸಮಾಧಾನ ಮಾಡಿಕೊಂಡರು. ಪುರಾಣ ಪುರುಷರ ಉದ್ದ ಕೂದಲು ಅನಾಗರಿಕವಲ್ಲ. ಬದಲಾಗಿ ಕಾಲದ ಅಗತ್ಯ ಎಂಬ ದಿವ್ಯ ಜ್ಞಾನದ ಬಲ್ಬ್ ಇವರ ಜೊಂಪೆ ಕೂದಲಲ್ಲಿ ಹೊತ್ತಿ ಅವರ ಮನವೆಲ್ಲ ಬೆಳಕಾಯಿತು.

     ಒಂದಾನೊಂದು ಕಾಲದಲ್ಲಿ ವಿಸ್ತಾರವಾಗಿ ಹರಡಿದ್ದ ಕಾಡಿನಲ್ಲಿ ಇಂಥ ‘ ನರ ಮನುಸರು’ ಇದ್ದರು. ಈಗ ಅದರ ದುಪ್ಪಟ್ಟು ವಿಶಾಲವಾದ  ಕಾಂಕ್ರೀಟ್ ಕಾಡಿನಲ್ಲಿ ಈ ‘ ನಾಗರಿಕರು’ ಇರುವ ಪ್ರಸಂಗ ಬಂದಿದೆ ಅಷ್ಟೆ ಎಂದು ಹಿಂದಕ್ಕೆಳೆದು  ತಂದು ನಿಲ್ಲಿಸಿರುವ ಕಾಲ ಮುಸಿಮುಸಿ ನಕ್ಕಿದ್ದು ಇವರ್ಯಾರಿಗೂ ಕಾಣಲಿಲ್ಲ.

    Photo by Anastasiia Chepinska on Unsplash

    ನೂತನ ಎಮ್. ದೋಶೆಟ್ಟಿ
    ನೂತನ ಎಮ್. ದೋಶೆಟ್ಟಿ
    ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ ಆಗಿರುವ ನೂತನ ಎಂ ದೋಶೆಟ್ಟಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಈಗ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿ. ಹಲವಾರು ಕವನ ಸಂಕಲನಗಳು, ಕಥಾ ಸಂಕಲನ, ಪ್ರಕಟವಾಗಿವೆ. ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ., ಆಕಾಶವಾಣಿಯಲ್ಹಿ ಮಾಡಿದ ಕಾರ್ಯಕ್ರಮಗಳಿಗೆ ಹಲವಾರು ಪ್ರಶಂಸನಾ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ.
    spot_img

    More articles

    2 COMMENTS

    1. ವೇಣಿ ಇಲ್ಲದಿದ್ದರೂ ನಾಗವೇಣಿ ಅಂತ ಹೆಸರಿಸುವ ಸಂಪ್ರದಾಯ ನಮ್ಮದು. ಇದ್ದ ವೇಣಿಗಳನ್ನು ನಾಗರೀಕತೆ, ಪ್ಯಾಷನ್ ಅಂತ ಕತ್ತರಿಸುವುದಂತೂ ಯಾರಿಗೂ ಒಗ್ಗಲ್ಲ.
      ಲೇಖನದ ಶೈಲಿ….nice

    2. ಲಘು ಬರಹ ಬಹಳ ಆಹ್ಲಾದಕರ ಅನುಭವ ನೀಡಿತು. ಕರೋನ ಅವಾಂತರ ಹೇಗೆ ನಮ್ಮನ್ನು ಆವರಿಸಿರುವ ಬಗ್ಗೆ ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ..
      ಒಳ್ಳೆಯ ಲೇಖನ..

    LEAVE A REPLY

    Please enter your comment!
    Please enter your name here

    Latest article

    error: Content is protected !!