ಕೊರೊನಾ ಎಂಬ ಕಾಯಿಲೆ ಬಂದ ಕಾಲದಿಂದ ಏನೆಲ್ಲಾ ಆಗೋಯ್ತು. ಕಾಲಕಾಲಕ್ಕೆ ಲಾಕ್‍ಡೌನ್ ಆಯ್ತು. ನಿಯಮಗಳು ಜಾರಿಗೆ ಬಂದವು. ಎಂತಹದ್ದೇ ಕಷ್ಟ ಬಂದಾಗ ದೇವರಿದ್ದಾನೆ ಬಿಡು ಎಂದುಕೊಂಡು ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರಿಗೆ ಹರಕೆ ಹೊತ್ತು ಮನಸ್ಸಿಗೆ ತುಸು ನೆಮ್ಮದಿ ನೀಡುತ್ತಿದ್ದ ದೇವರ ಗುಡಿಗಳೂ ಬಂದ್ ಆದವು. ದೈವದೆಡೆಗೆ ಅಪಾರ ನಂಬಿಕೆ ಹೊಂದಿದ ಭಕ್ತಗಣಗಳ ಮನದೊಳಗೆ “ದೇವರಿದ್ದಾನಾ ಅಥವಾ ದೇವರೇ ಇದೆಲ್ಲವನ್ನು ಮಾಡಿಸುತ್ತಿದ್ದಾನಾ?’ ಎನ್ನುವ ಸಂಶಯ ಮೂಡಿಸಿದ್ದು ಸುಳ್ಳಲ್ಲ.ದಿನೇ ದಿನೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸಹ (ಕೆಲವು ಹೊರತುಪಡಿಸಿ)ಎಲ್ಲವೂ ತೆರವುಗೊಂಡಿದ್ದು ಜನರಿಗೆ ಎಂದಿನಂತೆ ಓಡಾಡಲು ಅವಕಾಶ ಸಿಕ್ಕಿದೆ.
ಇದೆಲ್ಲವನ್ನು ಗಮನಿಸಿದರೆ ಪರಿಸ್ಥಿತಿ ಒಂದೇ ತೆರನಾಗಿರುವುದಿಲ್ಲ ಎಂಬುದು ಸ್ಪಷ್ಟ.
ಕೊರೊನಾ ಬಂದಾಗಿನಿಂದ ಹೆಚ್ಚಿನವರ ಬದುಕಿನಲ್ಲಿ ಸಂಕಷ್ಟ. ಮುಂದೇನು, ಬದುಕಿಗೆ ದಾರಿ ಯಾವುದು ಎನ್ನುವ ಅನಿಶ್ಚಿತತೆ ಕಾಡಿದ್ದು ಅಷ್ಟೇ ಸತ್ಯ. ಬದಲಾವಣೆ ಬದುಕಿನ ಭಾಗವೇ. ಬದುಕೆಂಬ ಕಾಲಚಕ್ರದಲ್ಲಿ ಏರಿಳಿತಗಳು ಸಹಜ. ಅದನ್ನು ನಿಖರವಾಗಿ ಹೇಳುವುದು ಸುಲಭ ಸಾಧ್ಯವಿಲ್ಲ. ಯಾಕೆಂದರೆ ಬದುಕಿನ ಲೆಕ್ಕಾಚಾರಗಳು ಗಣಿತದಂತೆ ನಿಖರವಾಗಿಲ್ಲ. ಬುದ್ಧಿವಂತ ಮನುಷ್ಯ ಯಾವಾಗಲೂ ಅನಿಶ್ಚಿತತೆಯಿಂದಲೇ ಕೂಡಿರುತ್ತಾನೆ. ಅನಿಶ್ಚಿತತೆಯಲ್ಲಿ ಉಳಿಯುವುದು ಅಂದರೆ ಅದೊಂದು ರೀತಿಯ ಧೈರ್ಯವೇ ಸರಿ.
ಮತ್ತೊಂದು ರೀತಿಯಲ್ಲಿ ಹೇಳುವುದಾದರೆ “ಅನಿಶ್ಚಿತತೆಯ” ಖಚಿತತೆಯನ್ನು ಒಪ್ಪಿಕೊಳ್ಳುವುದು.ಪರಿಸ್ಥಿತಿ ಯಾವುದೇ ಆಗಿರಲಿ, ಅದನ್ನು ಹೃದಯಪೂರ್ವಕವಾಗಿ ಒಪ್ಪಿಕೊಳ್ಳುವ ಜಾಣ್ಮೆ ಬೇಕು. ವಿಜ್ಞಾನದ ವಿಷಯಗಳಂತೆ ನಿರ್ದಿಷ್ಟ ಕಾರಣ ಮತ್ತು ಪರಿಣಾಮವನ್ನು “ಬದುಕಿನ ಹಾದಿ’ ಒಳಗೊಂಡಿಲ್ಲ. ಜೀವನದಲ್ಲಿ ಬರುವ ಏರಿಳಿತಗಳಿಗೆ ಕಾರಣ ಏನೋ ಇರಬಹುದು, ಹಾಗೆನೇ ಅದರ ಪರಿಣಾಮ ಇನ್ನೇನೋ ಆಗಿರಬಹುದು. ಅಂದರೆ ನಾವು ಎಣಿಸಿದಂತೆ ಇರದು. ನೀರನ್ನು 100 ಡಿಗ್ರಿಯಲ್ಲಿ ಕುದಿಸಿದರೆ ಕ್ರಮೇಣ ಆದು ಆವಿಯಾಗುತ್ತದೆ. ಅದು ವಿಜ್ಞಾನ. ಅದು ಎಲ್ಲರಿಗೂ ತಿಳಿದಿರುವ ವಿಚಾರ. ಮಾತ್ರವಲ್ಲ ಅದು ನಿಶ್ಚಿತ. ಆದರೆ ಜೀವನ ಹಾಗಲ್ಲವಲ್ಲ.
ಮನುಷ್ಯನಿಗೆ ಕೆಲವೊಮ್ಮೆ ಅಭದ್ರತೆ ಕಾಡುವುದು ಸಹಜ. ಕೆಲವೊಮ್ಮೆ ಆ ಅಭದ್ರತೆಗಳೇ ಮನುಷ್ಯನ ಶಕ್ತಿಯಾಗಿ ಮಾರ್ಪಡಬಹುದು. ಯಾಕಂದರೆ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕತೆ ಇರುತ್ತದೆ. ತಾನು ಮತ್ತೊಬ್ಬರಂತೆ ಇರಬೇಕು ಎಂದುಕೊಂಡರೆ ಅದರಲ್ಲಿ ಭಿನ್ನತೆ ಏನೂ ಇರದು. ವಿಭಿನ್ನತೆ ಇಲ್ಲದೇ ಇದ್ದರೆ ಜಗತ್ತು ಅತಿ ಸುಂದರವಾಗಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯನಾ? ಇಲ್ಲವಲ್ಲ.
ಕೆಲವರಿಗೆ ಬದಲಾವಣೆಗೆ ತೆರೆದುಕೊಳ್ಳಲು ಹೆಜ್ಜೆ ಇಡುವುದಕ್ಕೂ ಭಯ. ಯಾಕೆಂದರೆ ಅವರಲ್ಲೊಂದು ಅನಿಶ್ಚಿತತೆಯ ಭಯ ಕಾಡುತ್ತಿರುತ್ತದೆ. ಒಬ್ಬ ವ್ಯಕ್ತಿಯಲ್ಲಿರುವ ಬಲ ಮತ್ತು ಬಲಹೀನತೆಗಳೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುತ್ತದೆ. ಅವೆರಡೂ ಕೂಡಾ ವ್ಯಕ್ತಿಗೆ ಪೂರಕವೂ ಆಗಿರಬಹುದು, ಮಾರಕವೂ ಆಗಬಹುದು.
ಅಭದ್ರತೆಯ ಸಾಮಾನ್ಯ ಲಕ್ಷಣಗಳು ಉದಾಹರಣೆಗೆ ನಾಚಿಕೆ. ನಾಚಿಕೆ ಸ್ವಭಾವ ಇರುವವರು ಗೆಳೆಯರನ್ನು ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದ ಸಂದರ್ಶನಗಳಲ್ಲಿ ಅನುತ್ತೀರ್ಣರಾಗುತ್ತಾರೆ.ನಾಚಿಕೆ ಪಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ, ಆದರೆ ಯಾವ ಸಂದರ್ಭದಲ್ಲಿ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.
ಇತರರು ನಮ್ಮನ್ನು ಹೇಗೆ ಗ್ರಹಿಸುತ್ತಾರೆ ಎನ್ನುವ ವಿಚಾರ ಪದೇಪದೆ ಕಾಡುತ್ತಿರುತ್ತದೆ. ಇತರರು ನಮ್ಮ ಬಾಹ್ಯ ನೋಟ, ಮನೆ ಮಕ್ಕಳು, ಗಂಡಹೆಂಡತಿ ಬಗ್ಗೆ ಏನು ಗ್ರಹಿಸುತ್ತಾರೆ, ಯಾವ ರೀತಿಯ ಕಾಮೆಂಟ್ ಮಾಡುತ್ತಾರೆ ಎನ್ನುವ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ನಮ್ಮ ಜೀವನ ವಿಧಾನದ ಬಗ್ಗೆ “ಇತರರು ಏನು ಯೋಚಿಸುತ್ತಾರೋ ಏನೋ” ಎನ್ನುವುದೇ ದೊಡ್ಡ ವಿಚಾರವಾಗಿರುತ್ತದೆ. ನಮ್ಮ ಬಲಹೀನತೆಗಳನ್ನು ಬೇರೆಯವರ ಸ್ಟ್ರೆಂಥ್‍ನೊಂದಿಗೆ ಹೋಲಿಸಿಕೊಳ್ಳುವುದೇ ನಮಗೆ ಅಭ್ಯಾಸ ಆಗಿಬಿಟ್ಟಿರುತ್ತದೆ. ಇತರರಿಂದ ಬರುವ ಕಾಮೆಂಟ್‍ಗಳೇ ನಮಗೆ ಮುಖ್ಯವಾಗಿರುತ್ತದೆ. ಆದರೆ ಇತರರ ಅಪಾದನೆಯನ್ನು ಒಪ್ಪಿಕೊಳ್ಳಬೇಕೋ ಅಥವಾ ನಾವೇನು ಎಂಬುದನ್ನು ನಮಗೆ ನಾವೇ ಅರ್ಥ ಮಾಡಿಸಿಕೊಳ್ಳಬೇಕೋ ಎಂಬುದರ ಆಯ್ಕೆ ನಮ್ಮ ಕೈಯಲ್ಲೇ ಇದೆ.
ಬದುಕಿನಲ್ಲಿ ಅನಿಶ್ಚಿತತೆ ಅನ್ನೊದು ಸತ್ಯ. ಆದಾಗ್ಯೂ ಜೀವನದಲ್ಲಿ ಬದಲಾವಣೆ ಬೇಕಿದ್ದರೆ ಹಲವು ದಿನಗಳವರೆಗೆ ಕಾಯಬೇಕು. ರಾತ್ರಿ ಬೆಳಗಾಗುವುದರೊಳಗೆ ಬದಲಾವಣೆ ನಿರೀಕ್ಷಿಸುವುದಕ್ಕೆ ಸಾಧ್ಯ ಇಲ್ಲ. ಅದಕ್ಕೆ ಮುಂದೊಂದು ದಿನ ಹೀಗಾದರೆ ಹೇಗೆ ಎನ್ನುವ ಜಾಗೃತಿ, ಮುಂದಾಲೋಚನೆಯೂ ಇರಬೇಕು.
Photo by Fabio Comparelli on Unsplash