ಜಯಶ್ರೀ ಅಬ್ಬಿಗೇರಿ
ಮೊನ್ನೆ ಸಂಜೆ ಸಂಜೆ ಬಾಲ್ಯದ ಗೆಳತಿ ರಾಜಿಯ ಮನೆಗೆ ಹೋಗಿದ್ದೆ. ಮನೆಯಲ್ಲಿ ಮಕ್ಕಳ ತುಂಟಾಟ ಚೆಲ್ಲಾಟಗಳ ಸದ್ದು ಇರಲಿಲ್ಲ. ಅವಳ ಪತಿ ಉರಿಯುತ್ತಿದ್ದ ಟಿವಿ ಮುಂದೆ ಕುಳಿತು ಲೈವ್ ಕ್ರಿಕೆಟ್‌ನಲ್ಲಿ ಕಣ್ಣು ನೆಟ್ಟುಕೊಂಡು ಸೋಫಾದ ಮೇಲೆ ಕಾಲು ಚಾಚಿ ಕೂತಿದ್ದರು. ರಾಜಿ ನನ್ನ ನೋಡಿ ಬಾಯಗಲಿಸಿ ತನ್ನ ಖಾಸಗಿ ಕೋಣೆಗೆ ಕರೆದೊಯ್ದಳು. ನಾನೇ ಅವಳನ್ನು ಮಾತಿಗೆಳೆಯುತ್ತ ಎಲ್ಲಿ ನಿನ್ನ ಮಕ್ಕಳ ಸದ್ದೇ ಇಲ್ಲ ಎಂದೆ. ಅವರಿಬ್ಬರೂ ತಮ್ಮ ಕೋಣೆಗಳಲ್ಲಿ ಮೊಬೈಲ್ ,ಲ್ಯಾಪ್ ಟಾಪಿನಲ್ಲಿ ಬಿಜಿಯಾಗಿದ್ದಾರೆ. ಎಂದಳು.
ಕ್ಷಣಾರ್ಧದಲ್ಲಿ ನನ್ನ ಮೆದುಳು ಮೂವತ್ತು ವರ್ಷ ಹಿಂದೆ ಓಡಿತು. ಭಲೆ ಛೀನ್ ಲೋ ಮುಝಸೆ ಮೇರೀ ಜವಾನಿ
ಮಗರ್ ಮುಝಕೋ ಲೌಟಾದೋ
ವೋ ಬಚಪನ್ ಕೀ ಯಾದೇ ಹಾಡು ನೆನಪಿಗೆ ಬಂದು ಬಾಲ್ಯದ ಸವಿ ನೆನಪುಗಳು ಸುರಳಿ ಬಿಚ್ಚಿಕೊಂಡಿತು.
ಅದೊಂದು ದೇವಲೋಕದ ಅನುಭವದಂತಿತ್ತು. ಬಾಲ್ಯದಲ್ಲಿಯ ಆಟೋಟಗಳಿಗೆ ಬರವೇ ಇರಲಿಲ್ಲ. ಅದೆಷ್ಟು ಕುಣಿದು ಕುಪ್ಪಳಿಸಿದರೂ ಆಟದ ಹಸಿವು ಹಿಂಗುತ್ತಿರಲಿಲ್ಲ. ಮತ್ತೆ ಬೇರೆ ಬೇರೆ ಆಟವಾಡಬೇಕೆಂಬ ತವಕ ಕಾಡುತ್ತಿತ್ತು. ತಂದೆ ತಾಯಿಯರಾಗಲಿ ಮನೆ ಹಿರಿಯರಾಗಲಿ ಅಭ್ಯಾಸದ ಒತ್ತಡದ ಮಾತುಗಳನ್ನು ತಪ್ಪಿಯೂ ಆಡುತ್ತಿರಲಿಲ್ಲ. ಕೇವಲ ಪಾಟಿ ಪೇಣೆ ಬಹಳವೆಂದರೆ ಒಂದೆರಡು ಪುಸ್ತಕವಿರುವ ಪಾಟೀ ಚೀಲವನ್ನು ಶಾಲೆಯಿಂದ ಬಂದ ಕೂಡಲೇ ಒಂದು ಮೂಲೆಗೆಸೆದು ಕೈ ಕಾಲು ತೊಳೆದು ಹೊಟ್ಟೆಗೆ ಒಂದಿಷ್ಟು ಇಳಿಸಿ ಓಣಿಗಿಳಿದರೆ ನಮ್ಮದೇ ಸಾಮ್ರಾಜ್ಯ.
ಗಂಡು ಹುಡುಗರು ಗುಂಡ ಗಜಗವೆಂದು ಬಯಲಲ್ಲಿ ಕೇಕೆ ಹಾಕುತ್ತಿದ್ದರೆ ನಾವು ದೇವರ ಗುಡಿಯ ಕಟ್ಟೆಯ ಮೇಲೆ ಕೈಯಲ್ಲಿ ಆಲಿಕಲ್ಲುಗಳನ್ನು ಹಿಡಿದು ಅಂಕಿ ಎಣಿಸುತ್ತ ಮೇಲೆ ತೂರಿ ಹಿಡಿಯುವದರಲ್ಲಿ ಅದೇನೋ ಸಂತಸ ಪಡುತ್ತಿದ್ದೆವು. ಹಿರಿಯರು ನೋಡಿ ಆಲಿಕಲ್ಲುಗಳನ್ನಾಡಿದರೆ ಮಳೆ ಬರುವುದಿಲ್ಲವೆಂದು ಬೈದಾಗ ಕಟ್ಟೆಯಿಂದ ಜಾಗ ಖಾಲಿ ಮಾಡಿ ಅಂಗಳದಲ್ಲಿ ಚೌಕಗಳನ್ನು ಹಾಕಿ ಕುಂಟೆಬಿಲ್ಲೆಗೆ ತಯಾರಾಗುತ್ತಿದ್ದೆವು. ಡಾಂಬರಿನ ಮುಖವನ್ನೇ ನೋಡದ ರಸ್ತೆಗಳಲ್ಲಿ ಒಬ್ಬರನ್ನೊಬ್ಬರು ಮುಟ್ಟುವ ಆಟದಲ್ಲಿ ಕಾಲಿಗೆ ಮುಳ್ಳು ಕಲ್ಲು ಚುಚ್ಚಿಕೊಂಡು ಉಟ್ಟ ಬಟ್ಟೆಗಳಿಗೆ ಮಣ್ಣು ಮೆತ್ತಿಕೊಂಡು ಬಿದ್ದು ಮೊಣಕಾಲಿಗೆ ನೋವು ಮಾಡಿಕೊಂಡರೂ ಮತ್ತೆ ಏನೂ ಆಗದವರಂತೆ ಆಟ ಮುಂದುವರೆಸುವಲ್ಲಿ ಅದೆನೋ ಒಂಥರ ಖುಷಿ ಇರುತ್ತಿತ್ತು.
ಇದೆಲ್ಲ ಸಾಕಾಗಿಲ್ಲವೆಂಬಂತೆ ರವಿವಾರ ಊರ ಹೊರಗಿನ ಬೇವಿನ ಮಾವಿನ ಮರಕ್ಕೆ ಅಪ್ಪ ವ್ಯವಸಾಯಕ್ಕೆ ತಂದ ಹಗ್ಗ ಮತ್ತು ಅವ್ವನ ಹಳೆಯ ಸೀರೆಯನ್ನು ಜೋಡಿಸಿ ಜೋಕಾಲಿ ಕಟ್ಟಿ ಜೀಕುತ್ತ ಚೀರುತ್ತ ಸಂಭ್ರಮಿಸುತ್ತಿದ್ದೆವು. ಊರಿಗಂಟಿಕೊಂಡಿರುವ ತೋಟದಲ್ಲಿ ಮಂಗಗಳಿಗಿಂತ ಹೆಚ್ಚು ನಮ್ಮದೇ ಹಾವಳಿ ಇರುತ್ತಿತ್ತು. ತರಹೇವಾರಿ ಹೂಗಳನ್ನು ಕಿತ್ತು ಒಬ್ಬರಿಗೊಬ್ಬರು ಮುಡಿಗೆ ಮುಡಿಸಿ ಒಂದಿಷ್ಟು ಮನೆಂiಲ್ಲಿಯ ದೇವರುಗಳಿಗೆಂದು ಕಿಸೆ ತುಂಬಿಸಿಕೊಳ್ಳುತ್ತಿದ್ದೆವು.
ತಾಜಾ ತಾಜಾ ಹಣ್ಣುಗಳನ್ನು ಎಗ್ಗಿಲ್ಲದೇ ತಿಂದು ತೇಗುವದು ರೂಢಿಯಾಗಿಬಿಟ್ಟಿತ್ತು. ತೋಟ ಕಾಯುವವನ ಕಣ್ಣಿಗೆ ಬಿದ್ದರೆ ಸತ್ತೆನೋ ಬಿದ್ದೆನೋ ಎನ್ನುತ್ತ ಓಡಿ ಬಿದ್ದು ಗಾಯ ಮಾಡಿಕೊಂಡ ಕಲೆಗಳು ಇನ್ನೂ ಹಣೆ ಮೊಳಕೈ ಮೊಣಕಾಲುಗಳ ಮೇಲೆ ತಮ್ಮ ಗುರುತನ್ನು ಉಳಿಸಿ ಮೇಲಿಂದ ಮೇಲೆ ಆ ನೆನಪನ್ನು ಮರುಕಳಿಸುತ್ತವೆ.
ಈಗಿನ ಮಕ್ಕಳ ಯುನಿಫಾರ್ಮ್ ಕೊಳೆಯಾಗುವುದೇ ಕಮ್ಮಿ. ಇನ್ನು ಗಾಯದ ಕಲೆಗಳಂತೂ ದೂರವೇ ಉಳಿಯಿತು. ಒಳಾಂಗಣ ಆಟಕ್ಕೆ ಒಗ್ಗಿಕೊಂಡಿರುವ ಅವರ ರವಿವಾರ ತಿಂಡಿ ತೀರ್ಥವೆಲ್ಲ ಟಿವಿ ಮುಂದೆಯೇ ಆಗಬೇಕು. ಟಿವಿ ಮುಂದಿರುವಾಗ ಯಾರು ಕರೆದರೂ ಕೇಳುವುದೇ ಇಲ್ಲ. ಕೇಳಿದರೆ ಮೈಯಲ್ಲಿ ವೀರಭದ್ರ ಬಂದವರಂತೆ ಆಡುತ್ತಾರೆ. ಈಗಿನ ತರ ವಿವಿಧ ತರಹದ ಆಟಿಕೆಗಳು ಆಗ ಇರುತ್ತಿರಲಿಲ್ಲ. ಮಣ್ಣು ಕಲ್ಲುಗಳೊಂದಿಗೆ ಆಟ. ನಿಸರ್ಗದೊಂದಿಗಿನ ಒಡನಾಟವೇ ಹೆಚ್ಚು. ಅಣ್ಣ ತಮ್ಮಂದಿರೆಲ್ಲ ತುಕ್ಕು ಹಿಡಿದ ಹಳೆಯ ಕಬ್ಬಿಣದ ಗಾಲಿಗಳನ್ನು ಸೈಕಲ್ ಚಕ್ರಗಳನ್ನು ನಾ ಮುಂದೆ ತಾ ಮುಂದೆ ಎನ್ನುತ್ತ ಊರ ಬೀದಿಗಳಲೆಲ್ಲ ಸುತ್ತುತ್ತಿದ್ದರು. ಸಂಜೆ ದೀಪ ಹಚ್ಚಿದ ಕೆಲ ತಾಸಿನಲ್ಲಿಯೇ ನಿದ್ರಾದೇವಿ ನಮ್ಮನ್ನು ಆವರಿಸಿ ಬಿಡುತ್ತಿದ್ದಳು.
ಮುಂಜಾನೆ ಕೋಳಿ ಕೂಗುವ ಮುನ್ನವೇ ಅಜ್ಜಿಯಂದಿರೆಲ್ಲ ಎದ್ದು ಮಿನಕ್ ಎನ್ನುವ ದೀಪದಲ್ಲಿ ಮನೆ ಶುಚಿಗೊಳಿಸುವ ಭರದಲ್ಲಿರುವಾಗ ಏನೋ ಘನಂದಾರಿ ಕೆಲಸವಿರುವವರಂತೆ ಅವ್ವನ ಜೊತೆಗೆ ಎದ್ದು ಒಲೆಯಲ್ಲಿ ಕಟ್ಟಿಗೆಗಳನ್ನು ತುರುಕುತ್ತ ಮನೆಯಲೆಲ್ಲ ಹೊಗೆಯಾಡುವಂತೆ ಮಾಡಿ ಬೈಸಿಕೊಂಡಾಗ ಕೈಯಲ್ಲಿ ಚೊಂಬು ಹಿಡಿದು ಮುಂಜಾನೆ ವಾಯು ವಿಹಾರದೊಂದಿಗೆ ಬಯಲು ಶೌಚದಲ್ಲಿ ಗೆಳೆತಿಯರೆಲ್ಲ ಹಿಂದಿನ ದಿನ ಆಡಿದ ಆಟದ ಖುಷಿ ಹಂಚಿಕೊಳ್ಳುತ್ತ ಅವತ್ತು ಯಾರ ತೋಟ ಗದ್ದೆಗಳಿಗೆ ಲಗ್ಗೆ ಹಾಕುವದು ಯಾವ ಯಾವ ಆಟ ಆಡುವದರ ಕುರಿತು ಯೋಜನೆಗಳು ಅಲ್ಲಿಯೇ ನಿರ್ಧರಿಸಲ್ಪಡುತ್ತಿದ್ದವು. ಮನೆಗೆ ಮರಳಿ ಜಳಕದ ಶಾಸ್ತ್ರ ಮುಗಿಸಿ ಬಿಸಿ ಬಿಸಿ ರೊಟ್ಟಿ ಇಲ್ಲವೆ ಆಗ ತಾನೆ ಒಲೆಯಿಂದ ಇಳಿಸಿದ ಉಪ್ಪಿಟ್ಟನ್ನು ಊಫ್ ಊಫ್ ಎಂದು ಊದುತ್ತ ಗಂಟಲಿಗಳಿಸಿ ಪಾಟಿ ಚೀಲ ಹೆಗಲಿಗೇರಿಸಿಕೊಂಡು ಹೊರಟಾಗಲೂ ಅಭ್ಯಾಸದ ಅಥವಾ ಹೋಂ ವರ್ಕ್ ಕುರಿತ ಮಾತುಗಳು ತಪ್ಪಿಯೂ ಇರಲಿಲ್ಲ.
ದಾರಿಯಲ್ಲಿ ಸಿಗುವ ಬಳಿಸಿ ಬೀಸಾಡಿದ ಹಾಳೆ ಚಿಂದಿಗಳನ್ನು ಒಳ್ಳೆ ಮುತ್ತು ರತ್ನಗಳನ್ನು ಶೇಖರಿಸುವಂತೆ ಸಂಗ್ರಹಿಸುತ್ತಿದ್ದೆವು. ಬಣ್ಣದ ಬಣ್ಣದ ಬುಗುರಿಗಳನ್ನು ಗುಯ್ಯೆನಿಸುತಿದ್ದ ಹುಡುಗರ ದಂಡು ರಸ್ತೆಯಲ್ಲಿ ಸಿಕ್ಕಾಗ ಬಾಯಿ ತೆಗೆದು ನೋಡುತ್ತ ನಮ್ಮ ಬಣ್ಣದ ಕೋಲುಗಳನ್ನು ನೆನಪಿಸಿಕೊಂಡು ಅಂದು ಸಂಜೆ ಕೋಲಾಟವನ್ನೇ ಆಡುವದೆಂದು ತೀರ್ಮಾನಿಸಿ ಬೆಳಿಗ್ಗೆ ಬೆಳಿಗ್ಗೆನೆ ಹುಳಿಯಾದ ಹಸಿ ಹುಣಸೆಕಾಯಿ ಮಾವಿನ ಕಾಯಿ ನೆಲ್ಲಿಕಾಯಿ ಮರಗಳನ್ನು ಗಂಡು ಬೀರಿಯರಂತೆ ಹತ್ತಿ ಹರಿದುಕೊಂಡು ಕದ್ದು ಒಳ್ಳೆ ಚಾಟ್ಸ್‌ಗಳನ್ನು ತಿಂದಂತೆ ಕುರುಂ ಕುರುಂ ತಿನ್ನುತ್ತ ಒಬ್ಬರ ಲಂಗದ ಚುಂಗು ಒಬ್ಬರು ಹಿಡಿದು ಮರದ ಸುತ್ತ ಸುತ್ತು ಹಾಕುತ್ತ ಚುಕು ಬುಕು ರೈಲಿನಾಟವಾಡುವುದರಲ್ಲಿ ಮಗ್ನರಾಗಿದ್ದ ನಮ್ಮನ್ನು ಕಂಡು ಹೊಲಕ್ಕೆ ಹೋಗುವವರು ಬೈದಾಗ ಶಾಲೆ ಕಡೆ ಮುಖ ಮಾಡುತ್ತಿದ್ದೆವು.
ಈಗ ಸ್ಕೂಲ್ ಬಸ್ ಆಟೋ ಮನೆಗೆ ಬರುತ್ತವೆ ಹೀಗಾಗಿ ಇಂಥ ಯಾವುದೇ ಪ್ರಸಂಗಗಳಿಗೆ ಆಸ್ಪದವೇ ಇಲ್ಲ. ಅಲ್ಲದೇ ಮಕ್ಕಳಿಗೆ ಸಮಯವೂ ಇಲ್ಲ. ಪೆನ್ಸಿಲ್ಲ(ಪೇಣೆ)ನ್ನು ಉಗುಳು ಹಚ್ಚಿ ಪಾಟಿ ಮೆಲೆ ಬರೆಯೋದು ಅದನ್ನು ಚೂಪು ಮಾಡಲು ನೆಲದ ಪಾಟಿಕಲ್ಲಿಗೆ ತಿಕ್ಕುವದು ಎಲ್ಲರಿಗೂ ಸಾಮಾನ್ಯ ಕಾಯಿಲೆ. ಈಗೆಲ್ಲ ಪೆನ್‌ಗಳದ್ದೆ ರಾಜ್ಯಭಾರ. ಹೀಗಾಗಿ ಮಕ್ಕಳ ಉಗುಳು ಉಪಯೋಗವಾಗುತ್ತಿಲ್ಲ. ಇಂಥ ರಸಪ್ರಸಂಗಗಳಿಗೆ ಜಾಗವೇ ಇಲ್ಲ. ಮಳೆಗಾಲದಲ್ಲಿ ಹರಿಯುವ ನೀರಲ್ಲಿ ಕಾಗದದ ದೋಣಿ ಬಿಡುವದು.ಅಡುಗೆ ಆಟ ಮದುವೆ ಆಟಗಳಲ್ಲಿ ನಾವು ಪಟ್ಟ ಖುಷಿಯಂತೂ ಇಂದಿಗೂ ಹಸಿರಾಗಿದೆ.
ಕೊಟ್ಟಿಗೆಯಲ್ಲಿ ಕಟ್ಟಿರುತ್ತಿದ್ದ ಆಕಳು ಎತ್ತುಗಳಿಗೆ ಗೌರಿ ಬಸವ ಎಂದು ಹೆಸರಿಟ್ಟು ಚೆಂಗನೆ ಜಿಗಿದಾಡುವ ಕರುಗಳೊಂದಿಗೆ ಚಿನ್ನಾಟವಾಡುವುದೆಂದರೆ ಎಲ್ಲಿಲ್ಲದ ಖುಷಿ ಸಮಯ ಸಮಯಕ್ಕೆ ಮೇವು ಉಣಿಸುತ್ತ ಕಾಳಜಿ ಪ್ರೀತಿ ತೋರುತ್ತಿದ್ದೆವು. ಮನೆಯ ಮುಂದೆ ನಿಂತ ನಾಯಿ ನಮ್ಮ ವಾಸನೆ ಹಿಡಿದು ಹೆಗಲಿನ ಮಟ್ಟಕ್ಕೆ ಜಿಗಿದು ತನ್ನ ಪ್ರೀತಿ ತೋರುತ್ತಿದ್ದ ರೀತಿ. ಹಗಲು ಹನ್ನೆರಡು ತಾಸು ಕಣ್ಣುಮುಚ್ಚಿ ನಿದ್ರೆ ಮಾಡುತ್ತಿದ್ದ ಕಳ್ಳ ಬೆಕ್ಕು ನಮ್ಮ ಗದ್ದಲಕ್ಕೆ ಹಿಂದೆ ಹಿಂದೆ ಮಿಯಾಂವ್ ಮಿಯಾಂವ್ ಎಂದು ಕಾಲು ಕಾಲಿಗೆ ಸಿಕ್ಕುತ್ತ ಬೈಸಿಕೊಳ್ಳುತ್ತಿತ್ತು. ಕೋಳಿ, ಹುಂಜ, ಆಡು, ಮೇಕೆ, ಕುರಿ, ಕತ್ತೆ ,ಕುದುರೆ ಮುಂತಾದವು ನಮ್ಮ ಆಟಿಕೆಯ ಸಾಮಾನುಗಳಾಗಿದ್ದವು. ಇಂದಿನ ಮಕ್ಕಳಿಗೆ ಚಾನೆಲ್‌ಗಳಲ್ಲಿ ಮಾತ್ರ ಎಲ್ಲ ಪ್ರಾಣಿಗಳ ಮುಖ ಕಾಣೋದು.
ಇತ್ತೀಚಿಗೆ ನಮ್ಮ ಜೀವನದಲ್ಲಿ ಬರೀ ಗಡಿಬಿಡಿಯ ಧಾವಂತ ತುಂಬಿಕೊಂಡಿದೆ. ಹೀಗಾಗಿ ನಮ್ಮ ಮಕ್ಕಳಿಗೆಲ್ಲ ಇಂಥ ಬಂಗಾರದಂಥ ಬಾಲ್ಯ ಸಿಗುತ್ತಿಲ್ಲ. ಅವರ ಬಾಲ್ಯವೆಲ್ಲ ಟಿವಿ ಕಂಪ್ಯೂಟರ್, ಮೊಬೈಲ್ ವಿಡಿಯೋ ಗೇಮ್‌ಗಳಲ್ಲಿ ಕಳೆದು ಹೋಗುತ್ತಿದೆ. ಹೊರಾಂಗಣ ಆಟದ ಖುಷಿಯಿಂದ ವಂಚಿತರಾಗುತ್ತಿದ್ದಾರಲ್ಲದೇ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಮನೆಯಲ್ಲಿ ಒಂದೊಂದೇ ಮಗು ಇರುವದರಿಂದ ಸೇರಿ ನಲಿಯುವದನ್ನು ಕೂಡಿ ಬಾಳುವ, ಒಗ್ಗಟ್ಟಿನ ಪಾಠವನ್ನು ಪಡೆಯಲಾಗುತ್ತಿಲ್ಲ. ಬರಿ ವಿದ್ಯಾಭ್ಯಾಸ ಮತ್ತು ಸ್ಪರ್ಧೆಗಳ ಹಾವಳಿಯ ಬಗ್ಗೆ ಹೆಚ್ಚು ಗಮನ ನೀಡುತ್ತಿರುವದರಿಂದ ಸೂಟಿಗಳಲ್ಲೂ ಟ್ಯೂಷನ್ ಭರಾಟೆಯಿಂದ ಮಾನವೀಯ ಸಂಬಂಧ ಹಾಗೂ ಮೌಲ್ಯಗ ಅರಿವು ಮೂಡುತ್ತಿಲ್ಲ. ನಿಸರ್ಗ ಸೌಂದರ್ಯವನ್ನು ಆಸ್ವಾದಿಸಲು ಪುರುಸೊತ್ತಿಲ್ಲ ಎಂಬ ಕಟುವಾದ ವಾಸ್ತವ ಚಿತ್ರಣ ಕಣ್ಣ ಮುಂದೆ ಸುಳಿದಾಗ ಮನಸ್ಸು ಭಾರವಾಗುತ್ತದೆ.
ಬದಲಾದ ಕಾಲಕ್ಕೆ ಹೊಂದಿಕೊಳ್ಳುವದು ಅನಿವಾರ್ಯವಾದರೂ ಬಾಲ್ಯದ ಸುಂದರ ಘಳಿಗೆಗಳು ಮರಳಿ ಬಾರವು. ಹೀಗಾಗಿ ಅವರ ಬಾಲ್ಯವನ್ನು ಯಾಂತ್ರಿಕ ಜಗತ್ತಿನಲ್ಲಿ ಮುದುಡಲು ಬಿಡದೇ ಹೂವಾಗಿ ಅರಳಿಸಲು ನಾವೆಲ್ಲ ಅಲ್ಪವಾದರೂ ಪುರುಸೊತ್ತು ಮಾಡಿಕೊಂಡು ಸುಂದರ ಬಾಲ್ಯಕ್ಕೆ ಕಾರಣವಾಗುವ ಅಂಶಗಳನ್ನು ಕಲ್ಪಿಸುವ ಅಗತ್ಯತೆಯಿದೆ. ನೋಡಿದ್ದನ್ನು, ಕೈಗೆ ಸಿಕ್ಕಿದ್ದನ್ನು ಹಿಡಿದುಕೊಂಡು ಆಟವಾಡುವ ವಯಸ್ಸಿನ ಮಕ್ಕಳಿಗೆಲ್ಲ ಪಿಳಿ ಪಿಳಿ ಕಣ್ಣು ಬಿಟ್ಟು ಕೌತುಕದಿಂದ ಜಗವ ನೋಡಿ ಆನಂದಿಸುವ ವಾತಾವರಣ ಕಲ್ಪಿಸಿ ಸುಂದರ ಬಾಲ್ಯ ಚಿಗುರೊಡೆಯಲು ಇಂಬು ಕೊಡೋಣ. ಬಾಲ್ಯದಂಗಳದಲ್ಲಿ ತುಂಟಾಟ ಚೆಲ್ಲಾಟ ಹುಡುಗಾಟದ ಮೆರಗಿನ ಮೆರವಣಿಗೆ ನಡೆಸಲು ಮಕ್ಕಳೊಂದಿಗೆ ಕೈ ಜೋಡಿಸೋಣ.
(ಚಿತ್ರ: ಕಿರಣ ಆರ್)
ಹೌದು ಯಾಂತ್ರಿಕ ಬದುಕಿನಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸಬೇಕು. . ಒಳ್ಳೆಯ ಸಂದೇಶವಿರುವ ಲೇಖನ. .
👌🏻ಲೇಖನ ಓದಿ ನಮ್ಮ ಬಾಲ್ಯದ ನೆನಪು ಗಳು ಹಾದು ಹೋದವು😊
Very nice.