ಕೆಲವು ದಿನಗಳ ಹಿಂದೆಯಷ್ಟೇ ಭಾರತವು ಚೀನಾ ಹಿಮಾಲಯ ಪ್ರದೇಶದಲ್ಲಿರುವ ಗಡಿಯ ಎತ್ತರದ ಪ್ರದೇಶವನ್ನು ಮರು ಸ್ವಾಧೀನ ಮಾಡಿಕೊಂಡು, ಕೆಂಪು ಸೇನೆಯ ಚಲನವಲನದ ಮೇಲೆ ನಿರಂತರ ನಿಗಾ ಇಡುವಲ್ಲಿ ಯಶಸ್ವಿಯಾಗಿದೆ. ಆದರೆ ಅದಕ್ಕಾಗಿ ಒಬ್ಬ ಯೋಧನನ್ನು ಕಳೆದುಕೊಂಡಿದೆ. ಆ ಯೋಧ ಟು ಟು -22- ರೆಜಿಮೆಂಟ್ ಎಂದು ಕರೆಯಲಾಗುವ Special Frontier Force (SFF) ಗೆ ಸೇರಿದವರು.
ಆರಂಭದಲ್ಲಿ ಟು ಟು -22 – ಎಂದು ಕರೆಯಲಾಗುತ್ತಿದ್ದ ಈ ತುಕುಡಿಯನ್ನು ಈಗ Special Frontier Force (SFF) ಎಂದು ಕರೆಯಲಾಗುತ್ತಿದೆ. (ವಿಕಾಸ್ ಬೆಟಾಲಿಯನ್ ಎಂದೂ ಕರೆಯಲಾಗುತ್ತದೆ) ಈ ರೆಜಿಮೆಂಟಿನ ಮೊದಲ ಇನ್ ಸ್ಪೆಕ್ಟರ್ ಜನರಲ್ ಸುಜನ್ ಸಿಂಗ್. ಅವರು, ಎರಡನೇ ವಿಶ್ವ ಯುದ್ಧದ ಸಮಯದಲ್ಲಿ 22ನೇ ಮೌಂಟೇನ್ ರೆಜಿಮೆಂಟಿನ ಮುಖ್ಯಸ್ಥರಾಗಿದ್ದರು. ಹಾಗಾಗಿ ಈ ರೆಜಿಮೆಂಟನ್ನು 22 ಎಂದು ಕರೆಯಲಾಯಿತು. ಮುಂದೆ ಇದು ಟು ಟು -22- ಎಂದು ಹೆಸರಾಯಿತು.
1962ರ ಯುದ್ಧದಲ್ಲಿ ಭಾರತ ಚೀನಾ ಎದುರು ಹೀನಾಯ ಸೋಲು ಕಂಡಿತ್ತು. ಆಗ ತೀರಾ ಆಘಾತಕ್ಕೆ ಒಳಗಾದ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು, ಶಾಂತಿ ಮಂತ್ರದ ಜತೆಗೆ ಸೇನಾ ಸನ್ನದ್ಧತೆ ಅನಿವಾರ್ಯ ಎಂದು ಮನಗಂಡರು. ಇದರ ಪರಿಣಾಮವಾಗಿಯೇ ಅಸ್ತಿತ್ವಕ್ಕೆ ಬಂದಿದ್ದು ಈ ರೆಜಿಮೆಂಟ್. ಚೀನಾ ಗಡಿಯಲ್ಲಿ ಚೀನಿ ಭಾಷೆಯನ್ನು ಮತ್ತು ಅಲ್ಲಿನ ಚಲನವಲನಗಳನ್ನು ಅರ್ಥೈಸಿಕೊಂಡು, ಆ ರಾಷ್ಟ್ರದ ಯುದ್ಧ ತಂತ್ರಕ್ಕೆ ಪ್ರತಿಯಾಗಿ ಅಂದರೆ ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ಹೋರಾಟ ನಡೆಸುವ ಯೋಧರ ಪಡೆಯು ಸಿದ್ಧವಾಗಬೇಕಾಗಿತ್ತು. ಇದರ ಪರಿಣಾಮವೇ ಟುಟು -22- ರೆಜಿಮೆಂಟ್.
ಸಿಐಎ ತರಬೇತಿ
1962ರಲ್ಲಿ ನಡೆದ ಯುದ್ಧದ ಬಳಿಕ ಆಗ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥರಾಗಿದ್ದ ಭೋಲಾನಾಥ್ ಮಲ್ಲಿಕ್, ಭವಿಷ್ಯದಲ್ಲಿ ಚೀನಿಯರ ದುಸ್ಸಾಹಸವನ್ನು ಮಣಿಸಲು ಇಂತಹ ವಿಶೇಷ ಪರಿಣತಿ ಪಡೆದ ಯೋಧರ ಪಡೆ ಬೇಕು ಎಂದು ಪ್ರತಿಪಾದಿಸಿದರು. ಅಳೆದು-ಸುರಿದು ಪ್ರಧಾನಿ ನೆಹರು ಒಪ್ಪಿಗೆ ಸೂಚಿಸಿದರು. ಚೀನಾದ ಗಡಿ ಭಾಗವನ್ನು ಒಳನುಗ್ಗುವ ಸಾಮರ್ಥ್ಯ ಹೊಂದಿರುವ ಯೋಧರ ಅಗತ್ಯತೆ ಕೊನೆಗೂ ಅವರಿಗೆ ಮನವರಿಕೆ ಆಯಿತು ಎಂದು ಕಾಣಿಸುತ್ತದೆ. ಹೀಗಾಗಿ ಟುಟು ರೆಜಿಮೆಂಟ್ ಸಿದ್ಧವಾಯಿತು. ಆಗ ಅದರಲ್ಲಿ ಇದ್ದವರು ಟಿಬೆಟ್ ನಿರಾಶ್ರಿತರು. ಅವರಿಗೆ ಅಮೆರಿಕ ಸಿಐಎ ಗೆರಿಲ್ಲಾ ಯುದ್ಧ ತರಬೇತಿ ನೀಡಿತು ಎಂದು ಹೇಳಲಾಗುತ್ತಿದೆ. ಎಂ-1, ಎಂ-2, ಎಂ-3ನಂತಹ ಆಧುನಿಕ ಬಂದೂಕುಗಳನ್ನು ಒದಗಿಸುವುದರ ಜತೆಗೆ ಕರಾರುವಕ್ ಪ್ರಯೋಗದ ಕುರಿತು ಕೂಡ ತರಬೇತಿ ನೀಡಲಾಗಿತ್ತು ಎನ್ನಲಾಗಿದೆ. ಕಡಿದಾದ ಬೆಟ್ಟ ಹತ್ತುವುದು, ಪ್ಯಾರಾ ಲೀಪಿಂಗ್, ಹಿಮಪಾತದಂತಹ ಕಠಿಣ ಸನ್ನಿವೇಶಗಳಲ್ಲಿ ಬದುಕುಳಿಯುವ ಮಾರ್ಗದ ಬಗ್ಗೆ ಇವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
ತನ್ನದೇ ಆದ ತರಬೇತಿ ವ್ಯವಸ್ಥೆ
ಈ ರೆಜಿಮೆಂಟಿನ ಯೋಧರ ನೇಮಕಾತಿಯೂ ಪರಮ ರಹಸ್ಯವಾಗಿಯೇ ಉಳಿದಿದೆ. ಸೇನಾ ಪಡೆಯ ಮೂರು ವಿಭಾಗದ ಅಧೀನಕ್ಕೂ ಇದು ಬರುವುದಿಲ್ಲ.ಇದು ತನ್ನದೇ ಆದ ತರಬೇತಿ ವ್ಯವಸ್ಥೆಯನ್ನು ಹೊಂದಿದೆ. ಬದಲಾಗಿ ಭಾರತದ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಆಂಡ್ ಅನಲೈಸಿಸ್ ವಿಂಗ್ (ಆರ್ ಎಡಬ್ಲ್ಯೂ) ಮೂಲಕ ಇದು ನೇರವಾಗಿ ಪ್ರಧಾನ ಮಂತ್ರಿ ಕಚೇರಿಗೆ ರಿಪೋರ್ಟ್ ಮಾಡಿಕೊಳ್ಳುತ್ತದೆ.
ಒಂದು ನಿದರ್ಶನ
2018ರಲ್ಲಿ ಯುರೋಪ್ ದೇಶದ ಖ್ಯಾತ ಗಾಯಕರಾದ ಎಸ್ಟೋನಿಯಾ ಯಾನಾ ಕಾಸ್ಕ್ ಎಂಬವರು ತಮ್ಮ ಹೊಸ ಆಲ್ಬಂಗೆ ಗಡಿ ಭಾಗವಾದ ಉತ್ತರಖಂಡದ ಚಕ್ರತಾ (ಚಿತ್ರ ನೋಡಿ) ಎಂಬ ಕಣಿವೆ ಶೂಟಿಂಗ್ ಮಾಡಲು ಬಯಸಿದ್ದರು. ಡೆಹ್ರಾಡೂನ್ ನಿಂದ 100 ಕಿ.ಮೀ. ದೂರದ ಹಿಮಚ್ಛಾದಿತ ಪರ್ವತ ಪ್ರದೇಶದಲ್ಲಿ ಅವರು ಕೆಲವೊಂದು ಫೋಟೋಗಳನ್ನು ಹಿಡಿದರಷ್ಟೇ ! ಆಗಲೇ ಟುಟು ಯೋಧರು ಆಗಮಿಸಿ ಅವರನ್ನು ವಶಕ್ಕೆ ಪಡೆದುಕೊಂಡರು. ಯಾಕೆಂದರೆ ಅಲ್ಲಿ ಒಂದು ಫೋಟೋ ತೆಗೆಯಬೇಕಾದರೂ (ಭಾರತದ ನಾಗರಿಕರು ಸೇರಿದಂತೆ) ಕೇಂದ್ರ ಗೃಹ ಸಚಿವಾಲಯದ ಅನುಮತಿ ಕಡ್ಡಾಯ. ಯೋಧರಿಗೆ ತರಬೇತಿ ನೀಡುವುದುಇಲ್ಲಿಯೇ.
ಯಶಸ್ವಿ ಕಾರ್ಯಾಚರಣೆ
1971ರ ಬಾಂಗ್ಲಾ ದೇಶ ವಿಮೋಚನೆ ಕಾರ್ಯಾಚರಣೆಯಲ್ಲೂ ಟುಟು ಪಡೆ ಮಹತ್ವದ ಪಾತ್ರ ವಹಿಸಿತ್ತು. ಅಪರೇಶನ್ ಈಗಲ್ ಹೆಸರಿನ ಈ ಕಾರ್ಯಾಚರಣೆಯಲ್ಲಿ ಟುಟು ಪಡೆಯ 46 ಯೋಧರು ಹುತಾತ್ಮರಾಗಿದ್ದರು. ಇನ್ನು 1984ಕ ಅಪರೇಶನ್ ಬ್ಲೂ ಸ್ಟಾರ್, ಬಳಿಕದ ಅಪರೇಶನ್ ಮೇಘದೂತ್, ಕಾರ್ಗಿಲ್ ಯುದ್ಧದ ಅಪರೇಶನ್ ವಿಜಯದಲ್ಲೂ ಪ್ರಮುಖ ಪಾತ್ರವನ್ನು ಟುಟು ರೆಜಿಮೆಂಟ್ ವಹಿಸಿತ್ತು ಎಂಬುದಿಲ್ಲಿ ಗಮನಾರ್ಹ.