20.6 C
Karnataka
Sunday, September 22, 2024

    ಸಂವಿಧಾನದ ಆಶಯ ಎತ್ತಿ ಹಿಡಿಯಲು ನೆರವಾದ ಸ್ವಾಮೀಜಿ

    Must read


    ಕೇರಳದ ಗಡಿಯಲ್ಲಿರುವ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಅವರು ದೇವರ ಪಾದ ಸೇರಿದ್ದಾರೆ. ಅವರು ಬಿಟ್ಟು ಹೋದ ಹೆಜ್ಜೆಗಳು ಹಲವು. ಅವುಗಳ ಪೈಕಿ ಭಾರತದ ಪ್ರಜಾತಂತ್ರದ ಉಳಿವಿಗೆ ಅವರು ನೀಡಿದ ಕಾಣಿಕೆಯೂ ಬಹು ಮುಖ್ಯವಾಗುತ್ತದೆ.

    ಕೇಶವಾನಂದ ಭಾರತಿ ಸ್ವಾಮೀಜಿ ಮತ್ತು ಕೇರಳ ಸರಕಾರದ ನಡುವಿನ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ಅಲ್ಲಿ 13 ಸದಸ್ಯರ ಪೂರ್ಣಪೀಠ 7-6ರ ಅನುಪಾತದಲ್ಲಿ ನೀಡಿದ ತೀರ್ಪು ಭಾರತದ ಸಂವಿಧಾನದ ರಕ್ಷಣೆ, ಭಾರತೀಯ ನಾಗರಿಕರ ಹಕ್ಕುಗಳ ಸುರಕ್ಷತೆಯ ಬಗ್ಗೆ ನೀಡಿದ್ದ ಐತಿಹಾಸಿಕ ತೀರ್ಪು ಆಗಿಯೇ ಪರಿಗಣಿತವಾಗಿದೆ. ಮೂಲಭೂತ ಹಕ್ಕಿನ ಬಗ್ಗೆ ಯಾವುದೇ ಪ್ರಕರಣ ಬಂದರೂ ಇದೇ ಪ್ರಕರಣವನ್ನು ನ್ಯಾಯಾಲಯ ಉಲ್ಲೇಖಿಸುತ್ತಲೇ ಬಂದಿದೆ.

    ಏನಿದು ಪ್ರಕರಣ
    ಕೇರಳ ಸರಕಾರ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಿತ್ತು. ಕರ್ನಾಟಕದಲ್ಲೂ ಇದು ಜಾರಿಗೆ ಬಂದಿತ್ತು ಬಿಡಿ. ಆದರೆ ಇದು ಅದಕ್ಕಿಂತ ಭಿನ್ನ. ಎಡನೀರು ಮಠದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡು ಅದನ್ನು ಬೇರೆಯವರಿಗೆ ಹಂಚುವ ಹುನ್ನಾರ ಅದರಲ್ಲಿತ್ತು. ಇದನ್ನು ಮನಗಂಡ ಶ್ರೀ ಕೇಶವನಾಂದ ತೀರ್ಥ ಭಾರತಿ ಸ್ವಾಮೀಜಿಗಳು ನ್ಯಾಯಾಲಯದ ಮೊರೆ ಹೋದರು. ಆದರೆ ರಾಜ್ಯ ಹೈಕೋರ್ಟ್ ನಲ್ಲಿ ಅವರ ಪರವಾಗಿ ತೀರ್ಪು ಬರಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು.

    ರಾಜ್ಯಾಂಗ ಅಂದರೆ ಸಂಸತ್ತು ಮತ್ತು ನ್ಯಾಯಾಂಗ ನಡುವಿನ ತಿಕ್ಕಾಟ ಆಗಿನ ಸಂದರ್ಭ ಸಾಮಾನ್ಯವಾಗಿತ್ತು. ಆಗಿನ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಅವರು ಆಗಲೇ ರಾಷ್ಟ್ರೀಕರಣದ ಮೂಲಕ ಹೆಸರು ಮಾಡಿದ್ದರು.ಅನಂತರ ಆಗ ಅವರ ಮನಸ್ಸಿಗೆ ಬಂದಿದ್ದೇ ಮಠ-ಮಾನ್ಯಗಳ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವುದು. ಪ್ರಾಯಶಃ ಅದರಲ್ಲಿ ಉತ್ತರ ಭಾರತದ ಊಳಿಗಮಾನ್ಯ ಪದ್ಧತಿಯ ಜಮೀನ್ದಾರರನ್ನು ಮಟ್ಟಹಾಕುವ ಉದ್ದೇಶ ಇರಬಹುದಿರಬಹುದು. ಆದರೆ, ಅದಕ್ಕಿಂತಲೂ ಮುಖ್ಯವಾಗಿ ಓಟ್ ಬ್ಯಾಂಕ್ ಅವರಿಗೆ ಮುಖ್ಯವಾಗಿತ್ತು.

    ಸಂಸತ್ತಿನ ಎರಡೂ ಸದನಗಳಲ್ಲಿ ಬಲಾಢ್ಯ ಮತ್ತು ಏಕಮೇವ ದ್ವಿತೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದಿರಾ ಗಾಂಧಿ ನೇತೃತ್ವದಲ್ಲಿ ಹೊಸದೊಂದು ಕಾಯ್ದೆ ಜಾರಿಗೆ ಮುಂದಾಯಿತು. ಅದುವರೆಗೆ ರಾಜ್ಯ ಪಟ್ಟಿಯಲ್ಲಿ ಬರುವ ಭೂ ವ್ಯವಹಾರ, ಕೇಂದ್ರ ಸರಕಾರದ ಪಟ್ಟಿಯಲ್ಲಿ ಸೇರುವ ರೀತಿಯಲ್ಲಿ ಸಂವಿಧಾನಕ್ಕೇ ತಿದ್ದುಪಡಿ ನಡೆಸುವಲ್ಲಿ ಯಶಸ್ವಿಯಾಯಿತು (9ನೇ ಪರಿಚ್ಚೇದ).

    ಶುರುವಾಯಿತು ಕಾನೂನು ಹೋರಾಟ

    ಇದು ಕೇವಲ ಕೇಶವಾನಂದ ಭಾರತಿ ಸ್ವಾಮೀಜಿಗಳಿಗೆ ಮಾತ್ರ ಸೀಮಿತವಲ್ಲ. ಅದಕ್ಕೆ ಮೊದಲು, ಗೋಲಕ್ ನಾಥ್ ವರ್ಸಸ್ ಪಂಜಾಬ್ ಗವರ್ನೆಂಟ್ (1967) ಸೇರಿದಂತೆ ಇಂತಹ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸಂಸತ್ತಿನ ಪಾರಮ್ಯ ಅಥವಾ ಸಾರ್ವಭೌಮತೆಯನ್ನು ಎತ್ತಿ ಹಿಡಿದಿತ್ತು. ಆದರೆ, ಯಾವಾಗ ಕೇಶವಾನಂದ ಭಾರತಿ ಸ್ವಾಮೀಜಿಗಳ ಪ್ರಕರಣ ಮೆಟ್ಟಿಲೇರಿತು ಆಗ ಸ್ವತಃ ಆಗಿನ ಖ್ಯಾತ ವಕೀಲ ಹಾಗೂ ಸಂವಿಧಾನ ತಜ್ಞ ನಾನಿ ಪಾಲ್ಕಿವಾಲ್ ಸ್ವಯಂ ಸಂವಿಧಾನದ ಆಶಯಗಳ ರಕ್ಷಣೆಗೆ ಮುಂದಾಗಿ ಸ್ವಾಮೀಜಿಯವರ ಮನವೊಲಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಿದ್ದರು ಎಂದು ಹೇಳಲಾಗಿದೆ (ದಂತ ಕಥೆಯೆಂದರೆ ನಾನಿ ಪಾಲ್ಕಿವಾಲ್ ಅವರ ಆಗಿನ ದರ ನಿಮಿಷಗಳಿಗೆ ಒಂದು ಲಕ್ಷ ರೂ. ಇತ್ತಂತೆ !).

    ಸಂವಿಧಾನದ 13ನೇ ವಿಧಿ ಮತ್ತು ಹೆಚ್ಚುವರಿಯಾಗಿ ಇಂದಿರಾ ಗಾಂಧಿ ಸರಕಾರ ಸೇರಿಸಿದ 9ನೇ ಪರಿಚ್ಛೇದದ ಕಾನೂನಾತ್ಮಕತೆಯನ್ನು ಅವರು ಪ್ರತ್ಯೇಕ ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ತಮ್ಮ ಪ್ರಖರ ವಾದದ ಮೂಲಕ ಪ್ರಶ್ನಿಸಿದ್ದರು.ಕೊನೆಗೆ ನ್ಯಾಯಕ್ಕೆ ಜಯ ಸಂದಿತು. ಸ್ವಾಮೀಜಿ ಗೆಲವು ಸಾಧಿಸಿದರು. ಆ ಮೂಲಕ ಇಡೀ ಭಾರತದ ಪ್ರಜಾತಂತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದರ.

    ಈಗಲೂ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಬಂದರೆ ಆಗ ಉಲ್ಲೇಖವಾಗುವುದೇ ಕೇಶವಾನಂದ ಭಾರತಿ ಸ್ವಾಮೀಜಿ ವರ್ಸಸ್ ಕೇರಳ ಗವರ್ನಮೆಂಟ್ ಎಂಬ ಲ್ಯಾಂಡ್ ಮಾರ್ಕ್ ಜಡ್ಜ್ ಮೆಂಟ್.ಕೊನೆಗೂ ಸ್ವಾಮೀಜಿ ಗೆದ್ದು ಬಿಟ್ಟರು. ಮೂಲಭೂತ ಹಕ್ಕು ಮತ್ತು ಸಂಸತ್ತಿನ ಪಾರಮ್ಯದ ನಡುವಿನ ತೆಳುವಾದ ಗೆರೆಯನ್ನು ಸುಪ್ರೀಂ ಕೋರ್ಟ್ ಅಳಿಸಿ, ಅದಕ್ಕೆ ಸ್ಪಷ್ಟ ಗಡಿ ರೇಖೆ ಹಾಕಿ ಬಿಟ್ಟಿತು. ಇಲ್ಲವಾದರೆ ಈಗ ಸಂಸತ್ತು ಅಂಗೀಕರಿಸುವ ಯಾವುದೇ ಕಾಯ್ದೆಯನ್ನು ವಿಧಿಯಿಲ್ಲದೆ ನಾವು ಒಪ್ಪಿಕೊಳ್ಳಬೇಕಾಗುತ್ತಿತ್ತು

    ವಾಗೀಶ್ ಕುಮಾರ್ ಜಿ ಎ
    ವಾಗೀಶ್ ಕುಮಾರ್ ಜಿ ಎ
    ಪತ್ರಕರ್ತ, ಸಮಕಾಲೀನ ಸಂಗತಿಗಳ ಬಗ್ಗೆ ಆಸಕ್ತಿ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!