ಷೇರುಪೇಟೆಯ ಚಟುವಟಿಕೆ ಮತ್ತು ಸೂಚ್ಯಂಕಗಳ ಚಲನೆಯನ್ನು ಗಮನಿಸಿದಾಗ, ವಿಶೇಷವಾಗಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳು ಎಷ್ಟರ ಮಟ್ಟಿಗೆ ಏರಿಕೆ ಕಂಡಿವೆ ಅಂದರೆ, ಪಾಪ್ ಕಾರ್ನ್ ನನ್ನು ಹೊರಗಡೆ ಸ್ಟೋರ್ಸ್ ನಲ್ಲಿ ಖರೀದಿಸುವುದಕ್ಕೂ ಮತ್ತು ಅದನ್ನೇ ಮಲ್ಟಿಪ್ಲೆಕ್ಸ್ ಗಳಲ್ಲಿ ಖರೀದಿಸುವುದಕ್ಕೂ ಇರುವ ಬೆಲೆಯಲ್ಲಿರುವಷ್ಠೇ ವ್ಯತ್ಯಾಸವೆನ್ನುವಂತಾಗಿದೆ.
ಅಂದರೆ ಈಗಿನ ಈ ವಲಯಗಳ ಷೇರುಗಳು ಮಲ್ಟಿಪ್ಲೆಕ್ಸ್ ದರಗಳಲ್ಲಿವೆ ಎನ್ನಬಹುದು. ಕಂಪನಿಗಳ ಸಾಧನೆಯನ್ನು, ದೇಶದ ಆರ್ಥಿಕತೆಯನ್ನು ಪರಿಗಣಿಸದೆ, ಕೆಳ ರೇಟಿಂಗ್ ಗಳನ್ನು ಲೆಕ್ಕಿಸದೆ, ಎಲ್ಲವನ್ನೂ ಮೀರಿದ ರೀತಿಯಲ್ಲಿ ಏರಿಕೆ ಪ್ರದರ್ಶಿಸುತ್ತಿರುವ ಷೇರಿನಬೆಲೆಗಳು ʼವ್ಯಾಲ್ಯೂ ಪಿಕ್ ಗಿಂತ ಪ್ರಾಫಿಟ್ ಬುಕ್ʼ ಗೆ ಹೆಚ್ಚು ಆದ್ಯತೆ ನೀಡುವ ಹಂತದಲ್ಲಿವೆ.
ಇದಕ್ಕೆ ಪೂರಕ ಅಂಶವೆಂದರೆ ಎಸ್ ಬಿ ಐ ಸ್ಮಾಲ್ ಕ್ಯಾಪ್ ಫಂಡ್ ಗಜಗಾತ್ರದ ಹೂಡಿಕೆಯನ್ನು ನಿರಾಕರಿಸಲು ನಿರ್ಧರಿಸಿದೆ ಎಂಬ ಸುದ್ಧಿಯು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳ ವ್ಯಾಮೋಹವನ್ನು ತ್ಯಜಿಸಿ ವ್ಯಾಲ್ಯೂ ಪಿಕ್ ನತ್ತ ಗಮನ ಹರಿಸಿ ಹೂಡಿಕೆಮಾಡಿದ ಬಂಡವಾಳವನ್ನು ಸುರಕ್ಷಿತಗೊಳಿಸುವುದನ್ನು ಗುರಿಯಾಗಿಸಿಕೊಳ್ಳಬೇಕಾಗಿದೆ.
ಈಗಿನ ದಿನಗಳಲ್ಲಿ ಅಗ್ರಮಾನ್ಯ ಕಂಪನಿಗಳು ಪ್ರದರ್ಶಿಸುತ್ತಿರುವ ಏರಿಳತಗಳ ವೇಗ ಹೇಗಿದೆ ಎಂದರೆ ಅಲ್ಪಕಾಲದಲ್ಲೇ ಅಗಾಧವಾದ ಲಾಭ ಗಳಿಸುವ ಅವಕಾಶ ಸೃಷ್ಠಿಸಿಕೊಡುತ್ತಿವೆ ಎಂದೆನಿಸುತ್ತದೆ.
ಬಯೋಕಾನ್‌ಕಂಪನಿಯ ಷೇರಿನ ಬೆಲೆ ಈ ಒಂದೇ ವಾರದಲ್ಲಿ ರೂ.372 ರ ಸಮೀಪದಿಂದ ರೂ.434 ರವರೆಗೂ ಏರಿಕೆ ಕಂಡು ರೂ.420 ರ ಸಮೀಪಕ್ಕೆ ಹಿಂದಿರುಗಿದೆ.
ಗ್ಲೆನ್ ಮಾರ್ಕ್ ಫಾರ್ಮ ಕಂಪನಿಯ ಷೇರಿನ ಬೆಲೆ ಈ ವಾರದಲ್ಲಿ ರೂ.461 ರ ಸಮೀಪದಿಂದ ರೂ.501 ರವರೆಗೂ ಏರಿಕೆ ಕಂಡು ರೂ.476 ಕ್ಕೆ ಹಿಂದಿರುಗಿದೆ.
ಮಹೀಂದ್ರ ಅಂಡ್ ಮಹೀಂದ್ರ ಷೇರಿನ ಬೆಲೆ ರೂ.602 ರಿಂದ ರೂ.655 ರ ವಾರ್ಷಿಕ ಗರಿಷ್ಠ ತಲುಪಿ ನಂತರ ರೂ.632 ರ ಸಮೀಪಕ್ಕೆ ಹಿಂದಿರುಗಿದೆ.
ಸನ್ ಫಾರ್ಮ ಷೇರಿನ ಬೆಲೆ ಸಹ ರೂ.506 ರ ಸಮೀಪದಿಂದ ರೂ.560 ರವರೆಗೂ ಏರಿಳಿತ ಕಂಡು ರೂ.512 ರಲ್ಲಿ ಕೊನೆಗೊಂಡಿದೆ.
ಅಂತೆಯೇ ಪ್ರಮುಖ ಕಂಪನಿಗಳಾದ ಲಾರ್ಸನ್ ಅಂಡ್ ಟೋಬ್ರೋ, ಲುಪಿನ್, ಲೌರಸ್ ಲ್ಯಾಬ್, ಟಾಟಾ ಮೋಟಾರ್ಸ್, ಬಂಧನ್ ಬ್ಯಾಂಕ್, ಕೆನರಾ ಬ್ಯಾಂಕ್, ರೇಮಾಂಡ್ಸ್, ಆಕ್ಸಿಸ್ ಬ್ಯಾಂಕ್, ಎಸ್.ಬಿ.ಐ, ಹೆಚ್ ಎ ಎಲ್, ಆರತಿ ಡ್ರಗ್ಸ್, ಐಷರ್ ಮೋಟಾರ್ಸ್, ಇಂಡಸ್ ಇಂಡ್ ಬ್ಯಾಂಕ್ , ಐಸಿಐಸಿಐ ಬ್ಯಾಂಕ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಒ ಎನ್ ಜಿ ಸಿ, ಯು ಪಿ ಎಲ್, ಭಾರತ್ ಫೋರ್ಜ್, ಮುಂತಾದ ಕಂಪನಿಗಳು ಪ್ರದರ್ಶಿಸಿದ ರಭಸದ ಏರಿಳಿತಗಳು ಪೇಟೆಯ ಅಸ್ಥಿರತೆಗೆ ಹಿಡಿದ ಕನ್ನಡಿಯಾಗಿದೆ. ಈ ಏರಿಕೆ ಮತ್ತು ಇಳಿಕೆಗಳಿಗೆ ಕಾರಣಗಳು ವೈವಿಧ್ಯಮಯವಾಗಿದ್ದರೂ, ಅವಕಾಶಗಳು ಸೃಷ್ಠಿಯಾಗಿದ್ದಂತೂ ದಿಟವಲ್ಲವೇ?
ಅಗ್ರಮಾನ್ಯ ಕಂಪನಿಗಳು ಅಂದರೆ ಲಾರ್ಜ್ ಕ್ಯಾಪ್ ಕಂಪನಿಗಳ ಬೆಲೆಗಳು ಇಳಿಕೆ ಕಂಡಾಗಾಗಲಿ, ಏರಿಕೆಯಲ್ಲಿದ್ದಾಗಾಗಲಿ ಒಮ್ಮೆ ವ್ಯಾಲ್ಯು ಪಿಕ್ ಮತ್ತೊಮ್ಮೆ ಪ್ರಾಫಿಟ್ ಬುಕ್ ಗೆ ತ್ವರಿತ ಅವಕಾಶಗಳನ್ನು ಕಲ್ಪಿಸಿಕೊಡುತ್ತಿವೆ. ಇದನ್ನು ಪರಿಸ್ಥಿತಿಯು ಷೇರಿನ ಬೆಲೆಗಳು ಗರಿಷ್ಠ ಹಂತ ತಲುಪಿರುವ ಸಂಕೇತವೆನ್ನಬಹುದು.
ಆಕರ್ಷಕ ಕಾರ್ಪೊರೇಟ್ ಫಲಗಳನ್ನು ಘೋಷಿಸಿದ ಕಂಪನಿಗಳು
ಇನ್ನು ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಅನೇಕ ಉತ್ತಮ ಕಂಪನಿಗಳೂ ಇವೆ. ಬಾಲ್ಮರ್ ಲೌರಿ ಕಂಪನಿಯು ಪ್ರತಿ ಷೇರಿಗೆ ರೂ.7.50 ಯಂತೆ ಡಿವಿಡೆಂಡ್ ನೀಡಲಿದ್ದು ಷೇರಿನ ಬೆಲೆ ಮಾತ್ರ ರೂ.117 ರಲ್ಲಿದೆ. ಹೈಡಲ್ಬರ್ಗ್ ಇಂಡಿಯಾ ಕಂಪನಿ ಪ್ರತಿ ಷೇರಿಗೆ ರೂ.6 ರ ಡಿವಿಡೆಂಡ್ ನೀಡಲಿದ್ದು ರೂ.185 ರ ಸಮೀಪ ವಹಿವಾಟಾಗುತ್ತಿದೆ. ಬಾಲ್ಮರ್ ಲೌರಿ ಇನ್ವೆಸ್ಟ್ ಮೆಂಟ್ ಪ್ರತಿ ಷೇರಿಗೆ ರೂ.37.50 ರ ಡಿವಿಡೆಂಡ್ ನೀಡಲಿದ್ದು ರೂ.410 ರ ಸಮೀಪ ವಹಿವಾಟಾಗುತ್ತಿದೆ. ಪ್ರತಿ ಷೇರಿಗೆ ರೂ.9 ರಂತೆ ಡಿವಿಡೆಂಡ್ ಪ್ರಕಟಿಸಿರುವ ಗಾಂಧಿ ಸ್ಪೆಷಲ್ ಟ್ಯೂಬ್ ಷೇರಿನ ಬೆಲೆ ರೂ.225 ರ ಸಮೀಪವಿದೆ. ಪಿಟಿಸಿ ಇಂಡಿಯಾ ಪ್ರತಿ ಷೇರಿಗೆ ರೂ.5.50 ಯಂತೆ ಡಿವಿಡೆಂಡ್ ಘೋಷಿಸಿದ್ದು ರೂ.59 ರ ಸಮೀಪ ವಹಿವಾಟಾಗುತ್ತಿದೆ. ಹುಡ್ಕೋ ಕಂಪನಿ ಪ್ರತಿ ಷೇರಿಗೆ ರೂ.2.35 ರ ಡಿವಿಡೆಂಡ್ ನೀಡುವ ಕಂಪನಿ ಷೇರು ರೂ.37 ರ ಸಮೀಪದಲ್ಲಿದೆ. ಅಂದರೆ ನಿರಂತರವಾಗಿ ಆಕರ್ಷಕ ಕಾರ್ಪೊರೇಟ್ ಫಲಗಳನ್ನು ವಿತರಿಸುವ ಕಂಪನಿಗಳ ಬೆಲೆ ಕುಸಿತ ಕಂಡಾಗ ಧೀರ್ಘಕಾಲೀನ ಹೂಡಿಕೆಯನ್ನಾಗಿ ಆಯ್ಕೆಮಾಡಿಕೊಳ್ಳಬಹುದು.
ಕಾಯಂ ಹೂಡಿಕೆದಾರರನ್ನಾಗಿಸಿದ ಕಂಪನಿಗಳು
ಒಂದು ಸಮಯದಲ್ಲಿ ಪ್ರಚಂಡ ಬೇಡಿಕೆಯಿಂದ ಮಿಂಚಿದ್ದಂತಹ ಬರೋಡಾ ರೇಯಾನ್, ಐಸಿಡಿಎಸ್, ಸಿಫ್ಕೋ ಫೈನಾನ್ಸ್, ದೀವಾನ್ ಟೈರ್ಸ್, ಫ್ಲಾಲೆಸ್ ಡೈಮಂಡ್, ಶ್ಯಾಂಕಿನ್ ಮಲ್ಟಿಫ್ಯಾಬ್, ಶ್ಯಾಂಕಿನ್ ಸ್ಪಿನ್ನರ್ಸ್, ಎಸ್ ಎಂ ಡೈಕೆಂ, ಹಿಂದೂಸ್ಥಾನ್ ಡೆವೆಲಪ್ ಮೆಂಟ್ ಕಾರ್ಪೊರೇಷನ್, ಮಾಡರ್ನ್ ಡೆನಿಮ್, ಸ್ಪಾರ್ಟೆಕ್ ಸಿರಾಮಿಕ್ಸ್, ಸಿಲ್ವರ್ ಲೈನ್ ಟೆಕ್ನಾಲಜೀಸ್, ಸ್ಟೈಲ್ಸ್ ಇಂಡಿಯಾ ಕಂಪನಿಗಳು ಬದಲಾದ ಪರಿಸ್ಥಿತಿ, ಚಿಂತನೆಗಳೂ ಸೇರಿದಂತೆ ವೈವಿಧ್ಯಮಯ ಕಾರಣಗಳಿಂದ ವಹಿವಾಟಿನಿಂದ ಮಾಯವಾಗಿ, ನಂತರ ಸ್ಟಾಕ್ ಎಕ್ಸ್ ಚೇಂಜ್ ಗಳ ನಿಯಮಗಳಿಗೆ ಬದ್ಧರಾಗಲು ಎಡವಿ ಡಿಲೀಸ್ಟ್ ಆಗಿ ಹೂಡಿಕೆ ಮಾಡಿದ ಅಗಾಧ ಸಂಖ್ಯೆಯ ಹೂಡಿಕೆದಾರರನ್ನು, ಹೂಡಿಕೆಯ ಮೌಲ್ಯವನ್ನು ಶೂನ್ಯಗೊಳಿಸುವುದರೊಂದಿಗೆ ಕಾಯಂ ಹೂಡಿಕೆದಾರರನ್ನಾಗಿಸಿವೆ.
ಹಾಗಾಗಿ ಹೂಡಿಕೆಗೆ ಈಗ ಆಯ್ಕೆ ಮಾಡಿಕೊಳ್ಳುವಾಗ ಈ ರೀತಿಯ ಅಪಾಯದ ಅರಿವಿನಿಂದ ನಿರ್ಧರಿಸುವುದು ಸರಿ. ಈಗಿನ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡುವಾಗಲೇ, ರಿಟರ್ನ್ ಟಿಕೆಟ್ ನಂತೆ ಮಾರಾಟಮಾಡುವ ಉದ್ದೇಶದಿಂದಲೇ ಖರೀದಿಸುತ್ತಿದ್ದೇನೆ ಎಂಬ ಭಾವನೆಯಿರಬೇಕು. ಭಾವನಾತ್ಮಕತೆಯಿಂದ ದೂರವಿರುವುದೇ ಹೂಡಿಕೆಯ ಯಶಸ್ಸಿಗೆ ಸುಲಭ ಸೂತ್ರ.
ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.