21.2 C
Karnataka
Sunday, September 22, 2024

    ದುಡ್ಡು ಇದ್ದರೆ ಜಗವೆಲ್ಲ..ದುಡ್ಡು ಇಲ್ದೆ ಜಗವಿಲ್ಲ ದುಡ್ಡಿನ ಮುಂದೆ ಜಗದಲ್ಲಿ ಬೇರೆ ದೇವ್ರೆ ಇಲ್ವಲ್ಲ ಈ ಲೋಕ ಹೀಗೇತಕೋ…

    Must read

    ಅನ್ನವಿಲ್ಲದ ಜ್ಞಾನಿ ಬೋಧಿಸಲಾರ.

    ಅನ್ನವಿಲ್ಲದ ರಾಜ ರಾಜ್ಯಭಾರ ಮಾಡಲಾರ

    ಅನ್ನವಿಲ್ಲದ ಗಂಡಸು ಎಂಥ ಹೆಣ್ಣಿಗೂ,ಎಂದಿಗೂ ಗಂಡನಾಗಲಾರ

     ಅಪ್ಪ ಯಾವಾಗಲೂ ಹೇಳ್ತಿದ್ದ ಮಾತುಗಳು ಇವು. ಎಳೆಯ ದಿನಗಳಲ್ಲಿ ಏನೆಂದ್ರೆ ಏನೂ ಅರ್ಥ ಆಗದಿದ್ದ ಈ ವಾಕ್ಯಗಳು ಸರಿಯಾಗಿ ಅರ್ಥವಾದಾಗ ನಾನು ಸಿವಿಲ್ ಎಂಜಿನಿಯರಿಂಗ್ ಪದವೀಧರನಾಗಿ, ಹಸಿದ ಹೊಟ್ಟೆಯಲ್ಲಿ ಎಷ್ಟೋ ದಿನ ಮಲಗಿ, ಆ ವಾಕ್ಯಗಳಿಗೆ ಅನ್ನಕ್ಕೆ ಬದಲಾಗಿ ಹಣ ಎನ್ನುವುದನ್ನು ನಾನೇ ಸೇರಿಸಿಕೊಂಡು ದಿನವೂ ನೋಡುವ ಕನ್ನಡಿ ಪಕ್ಕ ಬರೆದುಕೊಂಡಿದ್ದೆ ಮತ್ತು ಈ ವಾಕ್ಯಗಳ ಮೇಲೆ ಕಣ್ಣು ಹಾಯಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ.

    ಮಕ್ಕಳ ಕೈಯಲ್ಲಿ ಹಣ ಕೊಡಬಾರದು,ಕೊಟ್ಟರೆ ಕೆಡುವುದಕ್ಕೆ ದೊಡ್ಡವರೇ ದಾರಿ ಹೇಳಿದ ಹಾಗೆ ಆಗುತ್ತೆ ಅಂತ ನಂಬಿದ್ದ ಅಪ್ಪ,  ನನ್ನ ಕೈಗೆ ಐದು,ಹತ್ತು ಪೈಸೆಯನ್ನೂ ಕೊಡುತ್ತಿರಲಿಲ್ಲ. ಆಗ ಬೇಕೂ ಆಗಿರಲಿಲ್ಲ,ಅದು ಬೇರೆ ವಿಷಯ. ಬೇರೆ ನನ್ನ ಗೆಳೆಯರಂತೆ ನಮ್ಮೂರ ಜಾತ್ರೆಯಲ್ಲಿಯೂ ಏನನ್ನು ಕೊಂಡದ್ದು ಇಲ್ಲ. ದೀಪಾವಳಿಯ ದಿನದಂದು ಪಟಾಕಿ ಹೊಡೆಯಲೂ ಅಪ್ಪನ ಅಪ್ಪಣೆ ಇಲ್ಲ. ಇದಕ್ಕೆಲ್ಲ ನನಗೆ ಆಗ ಹಣ ಕೊಡುತ್ತಿದ್ದದ್ದು ಎಂದರೆ ನನ್ನ ಕೊನೆಯ ಚಿಕ್ಕಪ್ಪ. ಅಪ್ಪನ ಸ್ಟ್ರಿಕ್ಟ್ ರಾಜ್ಯಭಾರವನ್ನು ನನಗಿಂತ ಮೊದಲು ಅನುಭವಿಸಿದರು ಅವರು,ಹಾಗಾಗಿ ನನ್ನ ಇಷ್ಟ,ಕಷ್ಟ ಅವರಿಗೆ ಬಲು ಬೇಗ ಅರ್ಥವಾಗುತ್ತಿದ್ದವು. ಹಾಗಾಗಿ ನಾನು ಕಂಡ ಮೊದಲ ಐದು,ಹತ್ತು ಪೈಸೆಗಳು ನನ್ನ ಚಿಕ್ಕಪ್ಪನವೇ. ಅವು ಆಗ್ಗೆ ನಮ್ಮೆಲ್ಲಾ ಇಷ್ಟಾರ್ಥಗಳನ್ನು ತೀರಿಸುತ್ತಿದ್ದವು.

    ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಲ್ಲಾಡಿಹಳ್ಳಿಯ ಆಶ್ರಮದಲ್ಲಿ ಮುದ್ದೆ ಊಟದೊಂದಿಗೆ ಮುಗಿಸಿದ್ದೆ. ಆ ಐದು ವರ್ಷಗಳೂ ನನ್ನ ಖರ್ಚಿಗೆಂದು ಅಪ್ಪ ,ಆಶ್ರಮಕ್ಕೆ ಕೊಡುತ್ತಿದ್ದ ಹತ್ತು ರೂಪಾಯಿಯ ಮೇಲೆ ಐದು ರೂಪಾಯಿ ಕಳುಹಿಸುತ್ತಿದ್ದರು ಎಂ. ಓ. ಮೂಲಕ. ಅದರಲ್ಲೇ ಸೋಪು,ಪೇಸ್ಟ್, ಪೆನ್, ಇಂಕು, ಪೆನ್ಸಿಲ್, ರಬ್ಬರ್, ಗ್ರಾಫ್ ಪೇಪರ್…ಇತ್ಯಾದಿ. ಎಂಜಿನಿಯರಿಂಗ್ ಓದುವಾಗ ಇದು ಐವತ್ತು ರೂಪಾಯಿಗಳಿಗೆ ಬಡ್ತಿ ಹೊಂದಿತ್ತು, ಅಷ್ಟೇ ವ್ಯತ್ಯಾಸ. ಪ್ರತಿ ತಿಂಗಳೂ ಲೆಕ್ಕ ತೋರಿಸಬೇಕು!

    ಪಿಯು 2 ಓದುವಾಗ ಎಕ್ಸಾಮ್ ಟೈಂ, ರಾತ್ರಿ ತುಂಬಾ ಹೊತ್ತಿನವರೆಗೆ ಓದಬೇಕು, ಅದಕ್ಕೆ ಟೀ ಕುಡಿಯಬೇಕು, ಐದು ರೂಪಾಯಿ ಹೆಚ್ಚಿಗೆ ಮೂರು ತಿಂಗಳು ಕಳಿಸಿ ಅಂತ ಜನವರಿಯಲ್ಲಿ  ಪತ್ರ ಬರೆದಿದ್ದಕ್ಕೆ ಸಾಧನೆಗೆ ಅನುಕೂಲಗಳ ಅಗತ್ಯ ಇಲ್ಲ. ಸಾಧಕ ಅವನ್ನು ಬೇಡುವುದೂ ಇಲ್ಲ. ಅರ್ಜುನ ಪಾಶು ಪತಾಸ್ತ್ರ ತರಲು ಕಾಡಿಗೆ ಹೋದಾಗ ಧರ್ಮರಾಯನನ್ನು ಅದು ಬೇಕು,ಇದು ಬೇಕು ಅಂತ ಕೇಳಲಿಲ್ಲ. ಎಲೆ ತಿಂದು,ನೀರು ಕುಡಿದು ಕೊನೆಯಲ್ಲಿ ಬರೀ ಗಾಳಿ ಸೇವನೆ ಮಾಡಿ ಪಾಶುಪತಾಸ್ತ್ರ ಪಡೆದ ಅಂತ ಉತ್ತರ ಬಂದಾಗ,ಮತ್ತೆಂದೂ ಅಪ್ಪನನ್ನು ಹಣ ಕೇಳಬಾರದು ಅಂತ ನಿರ್ಧಾರ ಮಾಡಿಬಿಟ್ಟೆ,ಹಾಗೆಯೇ ನಡೆದುಕೊಂಡೆ ಸಹಾ,ಕೊನೆಯತನಕ! ಹಾಗಾಗಿ ನನಗೆ ಹಣದ ಆವಶ್ಯಕತೆ ಯಾವಾಗಲೂ ಇದೆ ಅಥವಾ ಬೇಕು ಅಂತ ಅನ್ನಿಸಲಿಲ್ಲ ಏನೋ ಆಗ.

    ಡಾಕ್ಟರ್ ಆಗಬೇಕು ಅಂತ ಬಹುದಿನದ ಕನಸು ನನಗೆ. ಬರೀ ಒಂದು ಮಾರ್ಕ್ ಲ್ಲಿ ನನಗೆ ಸರ್ಕಾರಿ ಸೀಟು ತಪ್ಪಿದ್ದ ದಿನ ಪೂರ್ತಿ ಬಳ್ಳಾರಿ ಮೆಡಿಕಲ್ ಕಾಲೇಜ್ ಎದುರಿಗೆ ಕುಳಿತುಕೊಂಡು ಅತ್ತಿದ್ದೆ. ಒಂದು ವೇಳೆ ಡಾಕ್ಟರ್ ಆಗಿದ್ದರೆ,ಇನ್ನೂ ಓದುತ್ತಲೇ ಇರ್ತಿದ್ದೆ ಏನೋ…ಆಗ ಆಶ್ರಮದಲ್ಲಿ ಆಯುರ್ವೇದ ಕಾಲೇಜು ಇದ್ದಿದ್ದರೂ ಅಲ್ಲಿಯೇ ಓದಿ ಬಿಡುತ್ತಿದ್ದೆ,ಶಿಸ್ತಿನ ಜೀವನ ರೂಪಿಸಿಕೊಂಡು. ಅದಾಗಲಿಲ್ಲ ಅಂತ ಸುರತ್ಕಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಸೀಟ್ ಸಿಕ್ಕಿದೆ, ಒಳ್ಳೆಯದು ಹೋಗಿ ಬಿಡು ಅಂದ್ರು. ಆಗ ಎಂಜಿನಿಯರಿಂಗ್ ಲ್ಲಿ ಎಷ್ಟು ಭಾಗಗಳು ಇದ್ದವು ಅಂತಾನೂ ಗೊತ್ತಿಲ್ಲ! ಬೇಕಿಲ್ಲದ ಹೆಂಡತಿಯೊಡಗಿನ ಸಂಸಾರ ಆಯ್ತು ನನ್ನ ಎಂಜಿನಿಯರಿಂಗ್. ಮುಂದೆ ಓದಲು ಮನಸ್ಸಿರಲಿಲ್ಲ, ಸರ್ಕಾರಿ ಸ್ಟೈಪೆಂಡ್ ನೊಂದಿಗೆ ಎಂ ಟೆಕ್ ಸೀಟ್ ಸಿಕ್ಕರೂ. ಅದೇನೋ ನನಗೆ ಹೃದಯಪೂರ್ತಿ ಇಷ್ಟ ಇಲ್ಲದ್ದನ್ನು ಮಾಡಲು ಇಂದಿಗೂ ಆಗಲ್ಲ. ನನ್ನ ಜೀವನದಲ್ಲಿ ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನು ಏನನ್ನೂ ಮಾಡಿಲ್ಲ,ಎಷ್ಟೇ ಕಷ್ಟ ಬಂದರೂ. ನನ್ನ ಈ ಗುಣ ನನಗಷ್ಟೇ ಅಲ್ಲ, ನನ್ನ ಸುತ್ತ ಇರುವವರಿಗೂ ತೊಂದರೆ ಮಾಡುತ್ತದೆ ಅಂತಾದ ಮೇಲೆ, ಸ್ವಂತವಾಗಿ ಜೀವನ ರೂಪಿಸಿಕೊಳ್ಳಲು ಪ್ರಾರಂಭಿಸಿದೆ ನೋಡಿ,ಅಲ್ಲಿಂದ ಶುರು ಆಯ್ತು ಜೀವನದ ಮತ್ತೊಂದು ಮುಖದ ದರ್ಶನ! ಮತ್ತು ಹಣ,ಅನ್ನದ ಬೆಲೆ ಏನು ಅನ್ನುವ ವಿಷಯ.

    ಬಳ್ಳಾರಿಯಲ್ಲಿ ಈಗ ನನ್ನ ವೃತ್ತಿ ಆರಂಭಿಸುವವರು 3-4 ವರ್ಷಗಳಲ್ಲಿ ಎಸಿ ಕಾರ್ ಗಳಲ್ಲಿ ಅಡ್ಡಾಡುತ್ತಾರೆ. 90 ರ ದಶಕ ಹಾಗಿರಲಿಲ್ಲ. ನಾನು ಎಸಿ ಕಾರಿನಲ್ಲಿ ಅಡ್ಡಾಡಲು ಬರೋಬ್ಬರಿ 10 ವರ್ಷ ಹಿಡಿದವು. ಅದರ ಮಧ್ಯೆ ಮದುವೆ,ಮನೆ. ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಲ್ಲದರ ಮಧ್ಯೆ ಇವತ್ತಿಗೂ ಸಮಾಧಾನದ ವಿಷಯ ಎಂದರೆ ನಾನಂದು ಕೊಂಡ ಜೀವನವನ್ನು,ಅಂದು ಕೊಂಡಿದ್ದಕ್ಕಿಂತಲೂ ಹೆಚ್ಚಿನ ಸ್ತರದಲ್ಲಿ ಯಾರನ್ನೂ ನೋಯಿಸದೆ,ಹಿಂಸಿಸದೆ ಸ್ವಂತವಾಗಿಯೇ  ರೂಪಿಸಿಕೊಂಡೆ ಅನ್ನುವುದು. ಇದೇ ಈ ಸಮಾಧಾನವೇ ನನ್ನಲ್ಲಿ ಇವತ್ತಿಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿರುವುದು.
    ದಾರಿ ಮುಖ್ಯವಲ್ಲ,ಗುರಿ ಮುಖ್ಯ ಅನ್ನುವ ಒಂದು ಸಿದ್ದಾಂತ ಇದೆ. ಇದಕ್ಕೆ ನನ್ನದೇ ಆದ ತಕರಾರು ಇದೆ. ಗುರಿ ಮುಟ್ಟಿದ ಮೇಲೂ ಜೀವನ ಆನಂದವಾಗಿರಬೇಕು ಅಂತಾದರೆ,ನಡೆದು ಬಂದ ದಾರಿಯ ಪಾತ್ರ ತುಂಬಾ ಇರುತ್ತದೆ. ಈ ದಾರಿಯ ನೆರಳು ಗುರಿಯ ಮೇಲೆ ಪ್ರಭಾವ ಬೀರುತ್ತವೆ. ಅದಕ್ಕೆ ಸಾಕಷ್ಟು ನಿದರ್ಶನ ದಿನ ಬೆಳಗಾದರೆ ಎಲ್ಲರೂ ನೋಡುತ್ತೇವೆ. 

    ಕಾರು,ಬಂಗಲೆಗಳು ಇಲ್ಲದ ದಿನಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದ ಸಂಸಾರಗಳು, ಅವೆಲ್ಲವುಗಳನ್ನು ಹೊಂದಿಯೂ ಅಪಘಾತಕ್ಕೀಡಾಗಿರುವುದು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ ಕೂಡಾ. ನೆಪಕ್ಕೆ ನಾವು ಯಾರನ್ನೋ ಹೊಣೆ ಮಾಡಿದರೂ,ಆಳದಲ್ಲಿ ನಡೆದು ಬಂದ ದಾರಿಯ ಕರಿ ನೆರಳು ಅಂತಹ ಸಂದರ್ಭದಲ್ಲಿ ಕಾಣುತ್ತೇವೆ. ಎಷ್ಟೋ ಸಾರಿ ಹಣ ಎಲ್ಲವನ್ನೂ ಸರಿದಾರಿಗೆ ತರುತ್ತದೆ ಅನ್ನುವ ಅಂಶ ಇತ್ತೀಚೆಗೆ ಸಮಾಜದಲ್ಲಿ ಗಾಢವಾದ ಪ್ರಭಾವ ಬೀರುತ್ತದೆ. ಅದು ತಪ್ಪು. ಹಣ ಎಷ್ಟಿರಬೇಕೋ ಅಷ್ಟಿದ್ದರೆ ಚೆನ್ನ. ಎಲ್ಲದ್ದಾಕ್ಕೂ ಹಣ ಬೇಕು,ಆದರೆ ಹಣದಿಂದಲೇ ಎಲ್ಲವೂ ಅಲ್ಲ. ಅದು ಇರದಿದ್ದಾಗ ಏನೂ ಇಲ್ಲ,ಎಲ್ಲವೂ ಶೂನ್ಯ ಅನ್ನುವ ಭ್ರಮೆ ಬರುವುದು ನಿಜ. ಅದಕ್ಕಾಗಿಯೇ ಎಲ್ಲವನ್ನು ಕಳೆದುಕೊಂಡು ಗಳಿಸುವುದು ಮೂರ್ಖತನ.
    ಹಣ ಒಂದೇ ಸುಖಕ್ಕೆ ಕಾರಣ ಅಂತಾಗಿದ್ದರೆ, ಇಂದು ಯಾವ ಶ್ರೀಮಂತರೂ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರಲಿಲ್ಲ ಮತ್ತು ಸಾವಿರ ಸಾವಿರ ಬಡ ಜನರು ನಗುತ್ತಾ ಜೀವನ ನಡೆಸುತ್ತಿರಲಿಲ್ಲ. ಅದೂ ಒಂದು ಜೀವನಕ್ಕೆ ಬೇಕಾದ ವಸ್ತು, ಅದೇ ಜೀವನವಲ್ಲ.

    ಇಂದು ಇಡೀ ಪ್ರಪಂಚ ಇದರ ಹಿಂದೆ ಯಾವ ರೀತಿ ಓಡುತ್ತಿದೆ ಅಂದರೆ, ಯಾರೂ ಇದನ್ನು ನಿಯಂತ್ರಿಸಲು ಆಗುತ್ತಿಲ್ಲ. ಎಲ್ಲರೂ ಮರೆತಿರುವುದು ಅದರ ಹೊರತಾಗಿಯೂ ಜೀವನ ಇದೆ ಎನ್ನುವಂಥ ಅಂಶವನ್ನು. ಸಮಾಜವೂ ಹಣ ಇದ್ದವರಿಗೆ ಮಾತ್ರ ಗೌರವ ತೋರುವುದು,ಈ ನಡಿಗೆಗೆ ಇನ್ನಷ್ಟು ಹುರುಪು ತಂದಿದೆ. ಬಹುಶಃ ಮನುಷ್ಯನ ಆಸೆ ಎನ್ನುವ ಗುಣ ಈ ಹಣದಿಂದ ಉತ್ತೇಜನ ಗೊಂಡು, ಇದರ ಪ್ರಾಮುಖ್ಯತೆಯನ್ನು ಹೆಚ್ಚಿಸಿ,ಬೇರೆಲ್ಲ ವಿಷಯಗಳನ್ನು ಗೌಣ ಮಾಡಿದೆಯೇನೋ ಅಂತ ನನ್ನ ಅನ್ನಿಸಿಕೆ.

    ನಿಮಗೆ ಮತ್ತೊಂದು ಅಪ್ಪಟ ಸತ್ಯ ಹೇಳ್ತೇನೆ. ಈ ಹಣವನ್ನು ಗಳಿಸಿದವರು ಯಾರೂ ಅದನ್ನು ಖರ್ಚು ಮಾಡಿ ಸುಖವಾಗಿಲ್ಲ. ಅದರ ಸುಖ ಪಡುವವರು ಬೇರೆ ಯಾರೋ. ಗಳಿಸುವುದಕ್ಕಾಗಿ ಎಲ್ಲವನ್ನು ತೊರೆದವರು ಅದನ್ನು ಅನುಭವಿಸಲು ಸಮಯ ಇಲ್ಲದೆ ಸತ್ತಿರುವುದು ಕಟು ಸತ್ಯ. ಅದನ್ನು ನೋಡಿಯೂ ಎಲ್ಲರೂ ಅದರ ಗಳಿಕೆಯ ಹಿಂದೆ ಬಿದ್ದಿರುವುದು ಅದರ ಮಾಯೆ ಏನೋ ಅಂತ ತುಂಬಾ ಸಾರಿ ನನಗೆ ಅನ್ನಿಸಿದೆ. ಅದನ್ನು ಗಳಿಸಿದ ಮೇಲೆ,ಗಳಿಸಿದವರ ಹತ್ತಿರ ಕುಳಿತುಕೊಂಡು ಮಾತನಾಡಿ. ಗಳಿಸುವ ಭರದಲ್ಲಿ ಏನೆಲ್ಲಾ ಅವರು ಕಳೆದು ಕೊಂಡರು ಅಂತ ಅರ್ಥ ಆಗುತ್ತೆ.

    ಇಷ್ಟೆಲ್ಲಾ ಹೇಳಿದ ನಂತರ, ನಾನು ಸರಿಯಾದ ಮಾರ್ಗದಲ್ಲೇ ಹಣ ಗಳಿಸುತ್ತಿದ್ದೇನೆ,ಅದನ್ನು ನಿಲ್ಲಿಸಿಬಿಡಬೇಕಾ ಅನ್ನುವ ಅನುಮಾನ ಬರುವುದು ಸಹಜ. ಹಾಗೆ ಹಣಕ್ಕಾಗಿಯೇ ಕರ್ಮಗಳನ್ನು ಮಾಡದೆ,ಹಣ ತಾನಾಗಿ ಬರುತ್ತಿರುವುದನ್ನು ಹಲವರಲ್ಲಿ ನಾವು ನೋಡುತ್ತೇವೆ. ಕೃಷ್ಣ ಭಗವದ್ಗೀತೆಯಲ್ಲೂ ಮಾಡಬೇಕಾದ ಕರ್ಮವನ್ನು ಪ್ರತಿಯೊಬ್ಬರೂ ಮಾಡಲೇಬೇಕು ಅಂತಾನೇ ಹೇಳಿರೋದು. ಹಣಕ್ಕಾಗಿ ಕರ್ಮ ಮಾಡೋದು, ಮಾಡಿದ ಕರ್ಮಕ್ಕೆ ಹಣ ಬರೋದು ಎರಡು ಬೇರೆ ಬೇರೆ ವಿಷಯ. ಉದಾಹರಣೆಗೆ ಒಬ್ಬ ಒಳ್ಳೆಯ ಡಾಕ್ಟರ್ ತನ್ನ 90ನೆಯ ಇಳಿ ವಯಸ್ಸಿನಲ್ಲಿ, ರಾತ್ರಿ 11 ರವರೆಗೆ ರೋಗಿಗಳನ್ನು ನೋಡುವುದನ್ನು ಗಮನಿಸಿರುತ್ತೇವೆ. ಅಲ್ಲಿ ಹಣಕ್ಕಾಗಿ ಆ ವೃದ್ಧ ಕರ್ಮ ಮಾಡುತ್ತಿಲ್ಲ. ಕರ್ಮಕ್ಕೆ ಪ್ರತಿಫಲವಾಗಿ ಹಣ ಬರುತ್ತಿರುತ್ತದೆ. ಆದರೆ ಆ ವೃದ್ಧ ವೈದ್ಯ ಬರುವ ಹಣಕ್ಕಿಂತಲೂ ಹೆಚ್ಚಿನ ಆನಂದವನ್ನು ತನ್ನ ಕರ್ಮದಿಂದ ಕಾಣುತ್ತಾನೆ. ತನ್ನೆಲ್ಲಾ ಬಾಹ್ಯ ಪ್ರಾಪಂಚಿಕ ಸುಖಗಳಿಂದ ವಂಚಿತನಾದರೂ ರೋಗಿಗಳ ಮುಗುಳ್ನಗೆಯಲ್ಲಿ ಅವರು ಸುಖ ಕಾಣುತ್ತಾರೆ. ಅಂತಹ ಸುಖವನ್ನು ಎಲ್ಲರೂ ಕಾಣಲು ಸಾಧ್ಯವಿಲ್ಲ.

    ಹಾಗೆ ಎಲ್ಲರನ್ನೂ ಅರಸಿ ಹಣ ಬರುವುದಿಲ್ಲ. ಹಣಕ್ಕಿಂತಲೂ ಮುಖ್ಯವಾದದ್ದು ಏನೋ ಇದೆ ಅಂತಾದಾಗ ಪ್ರತಿಯೊಬ್ಬರೂ ಅಂತಹ ಕರ್ಮ ಮಾಡಬೇಕಾಗುತ್ತದೆ. ಇಲ್ಲವಾದರೆ ಸಮಾಜಕ್ಕೆ ಅಂತಹವರಿಂದ ಅನ್ಯಾಯ ಆಗುತ್ತದೆ. ಈ ಹಣದಲ್ಲಿ ಅದರ ಗಳಿಸುವ ಮಾರ್ಗಗಳನ್ನು ಅನುಸರಿಸಿ ಒಳ್ಳೆ ಹಣ,ಕೆಟ್ಟ ಹಣ ಎರಡು ವಿಧ ಇದೆ ಎನ್ನುವುದನ್ನು ಪ್ರತಿಯೊಬ್ಬರೂ ಅರಿತಾಗ ಇದರಿಂದ ಉಂಟಾಗುವ ಎಲ್ಲ ರೀತಿಯ ಸಮಸ್ಯೆ,ತೊಂದರೆಗಳು ಇಲ್ಲವಾಗುತ್ತವೆ.ಹಣ ಎಲ್ಲರಿಗೂ ಬೇಕು, ಹಣವೇ ಎಲ್ಲವೂ ಅಲ್ಲ.

    ಅಪ್ಪ ನನ್ನ ಕೈಗೆ ಎಳೆ ವಯಸ್ಸಲ್ಲಿ ಐದು,ಹತ್ತು ಪೈಸೆ ಕೊಡಲಿಲ್ಲ ಅಂತ ಬೇಸರ ಆಗ ಇತ್ತು. ಆದರೆ ಹಾಗೆ ಕೊಡದೇ ಇದ್ದುದರಿಂದ ಇಂದು ನನ್ನಲ್ಲಿ ಇರುವುದೇ ಹೆಚ್ಚಾಗಿ ಕಾಣುತ್ತಿದೆಯೇನೋ ಅನ್ನುವ ಅನುಮಾನ ತುಂಬಾ ಸಾರಿ ಬಂದಿದೆ. ನಿನಗೆ ಖರ್ಚು ಮಾಡಲು ಬರುವುದಿಲ್ಲ ಅಂತ ನನ್ನ ಹೆಂಡತಿ,ಮಕ್ಕಳು ಹೇಳುತ್ತಿದ್ದರೆ, ಅಪ್ಪ ನಿನ್ನ ಖರ್ಚು ನನಗೆ ನೋಡಲು ಆಗಲ್ಲ,ತುಂಬಾ ದುಂದು ವೆಚ್ಚ ಮಾಡುತ್ತಿದ್ದಿಯ,ಹಾಗಾಗಿಯೇ  ನಿನ್ನ ಮನೆಯಲ್ಲಿ ಇರಲು ನನಗೆ ಆಗುತ್ತಿಲ್ಲ ಎನ್ನುತ್ತಿದ್ದರು.

    ಈ ಹಣ, ಇದರ ಮಾಯೆ ನನಗೆ ಇನ್ನೂ ಅರ್ಥ ಆಗುತ್ತಿಲ್ಲ. ಹಣ ಇರುವುದು ಖರ್ಚು ಮಾಡಲು ಅಂತ ಕೆಲವರ ವಾದ. ಅಲ್ಲ ಅದು ಇರುವುದೇ ಗಳಿಸಲು ಅಂತ ಮತ್ತೊಬ್ಬರ ವಾದ. ನೀವೇನಂತಿರಾ??

    Photo by Josh Appel on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    11 COMMENTS

    1. ಮಂಜುನಾಥ್ ಅವರೆ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಹೌದು, ಹಣ ಎಲ್ಲದಕ್ಕೂ ಬೇಕು . ಆದ್ರೂ ಹಣವೇ ಎಲ್ಲವೂ ಅಲ್ಲ. ಹಣವು ನಾವು ಮಾಡುವ ಕರ್ಮದ ಪ್ರತಿಫಲ ವಾಗಿರಬೇಕು ಎನ್ನುವ ನಿಮ್ಮ ಅನಿಸಿಕೆ ನಿಜ. ಅದು ಒಂದು ತರ ಇನ್ಸೂರೆನ್ಸ್ ಇದ್ದ ಹಾಗೆ. ಕಷ್ಟ ಕಾಲಕ್ಕೆ ಅಥವ ತೀರಿ ಹೋದ ಮೇಲೆ ಬೇರೆಯವರಿಗೆ ಉಪಯೋಗಕ್ಕೆ ಬರುತ್ತೆ ಅಷ್ಟೆ. ಪ್ರೀಮಿಯಂ ಕಟ್ಟಲು ಮಾತ್ರ ಹಣ ಬೇಕು.

    2. ಲೇಖನ ತುಂಬಾ ಅರ್ಥ ಗರ್ಭಿತವಾಗಿದೆ. ಹಣ ಇದ್ರೆ ಜೀವನ ಅದು ಸತ್ಯ. ಆದ್ರೆ ಅದು ಎಷ್ಟು ಬೇಕೋ ಅಷ್ಟು ಇರಬೇಕು. ನಾವು ಈ ಭೂಮಿಗೆ ಬರುವಾಗಲೂ ಖಾಲಿ ಕೈಲಿ ಬಂದಿದ್ದೇವೆ ಹೋಗುವಾಗಲೂ ಖಾಲಿ ಕೈಲಿ ಹೋಗುತ್ತೇವೆ. ಇದು ಗೊತ್ತಿದ್ದರೂ ಹಣದ ಸಂಪಾದನೆ ನೆಗೋಸ್ಕರ ಒದ್ದಾಡಿ ಜೀವನ ಸಾಗಿಸುತ್ತೇವೆ. ಇದರ ಸಂಪಾದನೆ ಮಾಡೋಕ್ಕೆ ಅಡ್ಡ ದಾರಿನೂ ಇಡೀತೀವಿ ಆದ್ರೆ. ಅದರಿಂದ ಸುಖವಾಗಿ ಇರೋಕ್ಕೆ ಆಗೋಲ್ಲ. Ella ವಿಷಯಗಳ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ದಿರಾ. Bm. ಆದ್ರೂ ಹಣದ ಸಂಪಾದನೆ ನೆಗೋಸ್ಕರ ಇವತ್ತು ಕೆಟ್ಟ ಮಾರ್ಗನೇ
      ಬಳಕೆ ಮಾಡೋದೇ ಹೆಚ್ಚು. ಅಮೃತ ಕೂಡಾ ಜಾಸ್ತಿ ಆದ್ರೆ ವಿಷ ಆಗುತ್ತೆ. ಅಲ್ಲವಾ. ಧನ್ಯವಾದಗಳು.

    3. ಗುರಿ ತಲುಪಲು ಬಳಸಿದ ಮಾರ್ಗ ನಮಗೆ ತೃಪ್ತಿ ನೀಡುವಂತಿರಬೇಕು ಮತ್ತು ಹಣದ ಗಳಿಕೆ ನೆಮ್ಮದಿ ಕಳೆದುಕೊಂಡ ಬದುಕಿಗೆ ಕಾರಣವಾಗದೆ ಸೇವೆಯ ತೃಪ್ತಿ ಗೆ ಪೂರಕವಾಗಿರಬೇಕೆಂಬ ಮಾತು ನಿಜಕ್ಕೂ ಅರ್ಥ ಪೂರ್ಣ ಧನ್ಯವಾದಗಳು ಮಂಜುನಾಥ್ ಸಾರ್

    4. ನಿನ್ನ ಬಾಲ್ಯ ಜೀವನದ ಅನುಭವದೊಂದಿಗೆ, ಪ್ರಸ್ತುತ ವಾಸ್ತವತೆಗಳನ್ನು ಅವಲೋಕಿಸಿ ಅತ್ಯುತ್ತಮವಾಗಿ ಬರಹವನ್ನು ಹೊರ ಹೊಮ್ಮಿಸ್ಸಿದ್ದೀಯ ಗೆಳೆಯ.
      ಅವಶ್ಯಕತೆಗಿಂತ ಹೆಚ್ಚಿನ ಹಣಗಳಿಕೆ ಮತ್ತು ಐಷಾರಾಮಿ ಜೀವನಶೈಲಿ ಒಂದು ರೀತಿಯ ಹುಲಿ ಸವಾರಿ ಮಾಡಿದಂತೆ.ಪ್ರಾರಂಭದಲ್ಲಿ ಗಳಿಸಲು ಕಷ್ಟಪಟ್ಟರೆ ನಂತರ ಉಳಿಸಿಕೊಳ್ಳಲು ಕಷ್ಟಪಡಬೇಕು. ಹಣ ಬೇಕು ನಿಜ ಆದರೆ ನೆಮ್ಮದಿಯನ್ನು ಕಸಿದುಕೊಳ್ಳುವಂತಹ ಹಣ ವ್ಯರ್ಥ.

    5. ದುಡ್ಡು ಬೇಕು ದುಡ್ಡೇ ಜಗತ್ತಲ್ಲ ಅನ್ನುವ ವಾಸ್ತವ ಅನುಭವದೊಂದಿಗೆ ಕಟ್ಟಿಕೊಟ್ಟಿದ್ದೀಯ. ದುಡ್ಡಿಲ್ಲದೆ ಗಾಂಧೀಜಿಯ ಸಾಧನೆ ಅಚ್ಚರಿ ಮೂಡಿಸುತ್ತದೆ. ದುಡ್ಡಿಗಿಂತ ಇನ್ನೇನೊ ಸಮಾಜದಲ್ಲಿ ಮೂಲಭೂತ ಮೌಲ್ಯ ಇದೆ ಎನಿಸುತ್ತದೆ. ಮೇಲ್ನೋಟದ ಜಗತ್ತಿಗೆ ದುಡ್ಡೇ ಮುಖ್ಯ ಆಗಿದೆ. ಲೇಖನ ಅದ್ಭುತ ಅನುಭವಗಳ ನೆಲೆ ಗೆಳೆಯ

    6. ಕೈಯಲ್ಲಿ ಹಣವಿಲ್ಲದಾಗ ಅದೊಂದು ಇದ್ದರೆ ಎಲ್ಲಾ ಪಡೆಯಬಹುದು ಅನ್ನಿಸುತ್ತೆ. ಆದರೆ ಹಣ ಗಳಿಸಿದ ಮೇಲೆ ಒಂದು ಹಂತದಲ್ಲಿ ಹಣ ಎಲ್ಲವನ್ನೂ ತಂದುಕೊಡುವಲ್ಲಿ ಅಂತ ಅರ್ಥವಾಗುತ್ತದೆ. ಅಲ್ಲದೇ ನಾವು ಶ್ರಮ. ಪಟ್ಟು ಹಣ ಮಾಡುವ ಜಾಗದಲ್ಲಿ ಅನೇಕ ಖುಷಿಯ ಕ್ಷಣಗಳನ್ನು ಕಳೆದು ಕೊಂಡಿರುತ್ತೇವೆ. ಕಡೆಗೆ ನಾವು ದುಡಿಯುವ ಹಣ ನಮ್ಮ ಜೊತೆ ಇರೋರಿಗೆ ಅಷ್ಟೇ. ತಿಳಿದು ಅರ್ಥಮಾಡಿಕೊಂಡರೆ ಒಳ್ಳೆಯ ಸಂದೇಶ ಕೊಡುವ ಲೇಖನ ಬಿ.ಎಮ್.

    7. ಗುರಿ ಮುಟ್ಟಿದ ಮೇಲೂ ಜೀವನ ಆನಂದವಾಗಿರಬೇಕು ಅಂತಾದರೆ,ನಡೆದು ಬಂದ ದಾರಿಯ ಪಾತ್ರ ತುಂಬಾ ಇರುತ್ತದೆ. ಈ ದಾರಿಯ ನೆರಳು ಗುರಿಯ ಮೇಲೆ ಪ್ರಭಾವ ಬೀರುತ್ತವೆ.
      ಈ ಸಾಲುಗಳು ಅತ್ಯಂತ ನಿಜ. ಕೆಲವರು ದುಡಿಯುತ್ತಾರೆ …ಇನ್ನು ಕೆಲವರು ಅನುಭವಿಸುತ್ತಾರೆ. ಈಗಿನ ತಲೆಮಾರು ಗಳು ಎರಡನ್ನೂ ಮಾಡಬಲ್ಲರು. ಉತ್ತಮ ಲೇಖನ.

    8. Mr.Manjunath Bommagatta has written contemporary theme a thought provoking article where he has asked a question to all richness that is money is magic. Indeed it is . In most of our life we have seen money from nothing to something to everything to nothing. We should use at the later stage of our life for our simple necessary and simple luxuries and not be misers. We don’t have to hoard money and leave to next generation or society. Use it wisely and enjoy the richness till the end. Good article Mr.Manjunath Bommagatta.

    LEAVE A REPLY

    Please enter your comment!
    Please enter your name here

    Latest article

    error: Content is protected !!