ಅಶೋಕ ಹೆಗಡೆ
ಕರ್ನಾಟಕದ ಮಟ್ಟಿಗೆ ಅನಿರೀಕ್ಷಿತವಾಗಿ ಎದುರಾಗಿರುವ ಉಪ ಚುನಾವಣೆ ಎಂದರೆ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ್ದು. ಜೆಡಿಎಸ್ ಶಾಸಕರಾಗಿದ್ದ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಈ ಕ್ಷೇತ್ರ ತಿಂಗಳ ಹಿಂದೆ ತೆರವಾಗಿದೆ.
ಯಾವಾಗ ಕಳೆದ ವಾರ ಚುನಾವಣಾ ಆಯೋಗವು, `ಬಿಹಾರ ವಿಧಾನಸಭೆ ಚುನಾವಣೆ ಜತೆಗೇ ಶಿರಾ
ಸೇರಿದಂತೆ ದೇಶದ ೬೪ ವಿಧಾನಸಭಾ ಕ್ಷೇತ್ರಗಳು, ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲಾಗುವುದು’ ಎಂದು ಘೋಷಿಸಿತೋ, ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಇದ್ದಕ್ಕದ್ದಂತೆ ತೀವ್ರಗೊಂಡಿವೆ.
ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ ಅಸ್ತಿತ್ವ ಅಷ್ಟಾಗಿ ಕಾಣಿಸುವುದಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಬಿಗಿ ಹಿಡಿತ ಹೊಂದಿವೆ. ಹೀಗಾಗಿ ಒಮ್ಮೆ ಜೆಡಿಎಸ್, ಮತ್ತೊಮ್ಮೆ ಕಾಂಗ್ರೆಸ್ ಹೀಗೆ ಸರದಿಯಂತೆ ಆ ಎರಡು ಪಕ್ಷಗಳ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಸ್ಥಳೀಯವಾಗಿಯೂ ಜೆಡಿಎಸ್, ಕಾಂಗ್ರೆಸ್‌ನದ್ದೇ ಜಟಾಪಟಿ, ಹಣಾಹಣಿ. ಬಿಜೆಪಿಗೆ ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದ ಗೆಲುವು ಹೊಸ ಹುರುಪು ನೀಡಿದೆ. ಅಸ್ತಿತ್ವವೇ ಇಲ್ಲದ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿಸಿದಂತೆ ಮಧುಗಿರಿಯಲ್ಲಿಯೂ ವಿಜಯ ಪತಾಕೆ ಹಾರಿಸುವ
ಉಮೇದಿಯಲ್ಲಿದೆ ಪಕ್ಷ.
ಹಾಗೆ ನೋಡಿದರೆ ಬಿಜೆಪಿ ವಿಚಾರದಲ್ಲಿ ಮಂಡ್ಯಕ್ಕೂ, ತುಮಕೂರಿಗೆ ಬಹಳ ವ್ಯತ್ಯಾಸವಿದೆ.
ಈಗಲೇ ಹೇಳಿದಂತೆ ಮಂಡ್ಯದಲ್ಲಿ ಬಿಜೆಪಿ ಸಂಘಟನೆ ಹೆಚ್ಚೂಕಡಿಮೆ ಶೂನ್ಯವೇ ಆಗಿತ್ತು.
ಪಕ್ಷದ ಅಭ್ಯರ್ಥಿಗಳು ಗೆದ್ದಿರುವ ದಾಖಲೆ ಇರಲಿಲ್ಲ. ತುಮಕೂರು ಜಿಲ್ಲೆ ಹಾಗಲ್ಲ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದಶಕಗಳಿಂದಲೂ ಬಿಜೆಪಿ ಗೆಲುವು ಸಾಧಿಸಿದೆ. ತುಮಕೂರು ನಗರ, ತುಮಕೂರು ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ, ಸಚಿವರೂ ಆಗಿದ್ದಾರೆ. ಈಗ ಆಡಳಿತ ಪಕ್ಷವೆಂಬ `ಅಸ್ತ್ರ’ ಬೇರೆ ಇದೆ. ಹೀಗಾಗಿ ಬಿಜೆಪಿ ಗೆಲುವು ಸಾಧಿಸಿದರೂ ಅಚ್ಚರಿ ಪಡಬೇಕಾದ ಸಂಗತಿ ಅಲ್ಲ.
ಒಳಜಗಳದ ಲಾಭ: ಜೆಡಿಎಸ್, ಕಾಂಗ್ರೆಸ್‌ಗೆ ಶಿರಾದಲ್ಲಿ ಅಭ್ಯರ್ಥಿ ಆಯ್ಕೆಯೇ ಕಷ್ಟವಾಗಬಹುದು. ಆ ಪಕ್ಷಗಳು ಇನ್ನೂ ಅಭ್ಯರ್ಥಿ ಕುರಿತು ತಲೆ ಕೆಡಿಸಿಕೊಂಡಿದ್ದರೆ ಬಿಜೆಪಿಯು ಅಭ್ಯರ್ಥಿ ವಿಚಾರವಾಗಿ ಚಿಂತಿಸದೇ ಪಕ್ಷ ಸಂಘಟನೆಯನ್ನು ಆರಂಭಿಸಿದೆ. ಬೂತ್
ಸಮಿತಿಗಳನ್ನು ಪುನರ್ ರಚಿಸಲಾಗಿದೆ. ಯಡಿಯೂರಪ್ಪ ಸರಕಾರದ ಸಾಧನೆಗಳನ್ನು
ಮುಂದಿಟ್ಟುಕೊಂಡು ಪ್ರಚಾರವನ್ನೂ ಆರಂಭಿಸಿಯಾಗಿದೆ. ಹೀಗಾಗಿ ಆರಂಭಿಕವಾಗಿ ಬಿಜೆಪಿ ಮುನ್ನಡೆ ಸಾಧಿಸಿದೆ ಎಂದೇ ಹೇಳಬಹುದು.
ಜೆಡಿಎಸ್‌ನಲ್ಲಿ ಸತ್ಯನಾರಾಯಣ ಕುಟುಂಬ ಮತ್ತು ಇತರ ಮುಖಂಡರ ನಡುವೆ ಪೈಪೋಟಿ ಶುರುವಾಗಿದೆ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಸ್ಪರ್ಧೆಗೆ ನಿರಾಕರಿಸಿದ್ದು,
ಪುತ್ರ ಬಿ.ಎಸ್.ಸತ್ಯಪ್ರಕಾಶ್‌ಗೆ ಟಿಕೆಟ್ ನೀಡುವಂತೆ ವರಿಷ್ಠರನ್ನಮು ಕೋರಿದ್ದಾರೆ. ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ರಾಜೇಶ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್.ಉಮೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ಅವರ ಪತಿ ಕಲ್ಕೆರೆ ರವಿಕುಮಾರ್ ಟಿಕೆಟ್‌ಗಾಗಿ ಪ್ರಯತ್ನ ಆರಂಭಿಸಿದ್ದಾರೆ. ಅನುಕಂಪದ ಲಾಭ ಪಡೆಯುವ ಜೆಡಿಎಸ್ ಸಂಪ್ರದಾಯ ಗಮನಿಸಿದರೆ ಸತ್ಯಪ್ರಕಾಶ್‌ಗೆ ಟಿಕೆಟ್ ಸಿಗಬಹುದು.
ಕಾಂಗ್ರೆಸ್‌ನಲ್ಲಿ ಕಳೆದ ಬಾರಿ ಸೋತರೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಕ್ಷೇತ್ರದ
ಜತೆ ಸತತ ಸಂಪರ್ಕ ಇಟ್ಟುಕೊಂಡಿದ್ದಾರೆ. ಅದರಲ್ಲಿಯೂ ಕೊರೊನಾ ಲಾಕ್‌ಡೌನ್ ಸಮಯದಲ್ಲಂತೂ ಆಹಾರ, ಔಷಧ ವಿತರಿಸಿ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ತಮಗೇ ಟಿಕೆಟ್ ಖಚಿತ ಎನ್ನುವ ವಿಶ್ವಾಸದಲ್ಲಿದ್ದಾರೆ. ಆದರೆ ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಾವೂ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದು ಜಯಚಂದ್ರ
ಅವರಿಗೆ ಸ್ವಲ್ಪ ಕಸಿವಿಸಿ ತಂದಿದೆ.
ಕ್ಷೇತ್ರದಲ್ಲಿ ಕುರುಬರು ಹಾಗೂ ಕುಂಚಿಟಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದೆ ಸೋತಿದ್ದ ಬಿಜೆಪಿಯ ಬಿ.ಕೆ.ಮಂಜುನಾಥ್, ಜೆಡಿಎಸ್‌ನ ಕಲ್ಕೆರೆ ರವಿಕುಮಾರ್ ಕುರುಬರು, ಉಳಿದವರು ಕುಂಚಿಟಿಗರು. ಹೀಗಾಗಿ ಅಭ್ಯರ್ಥಿ ಆಯ್ಕೆಯಲ್ಲಿ ಜಾತಿಯೂ ಪ್ರಮುಖ ಪಾತ್ರವಾಗಲಿದೆ. ಅದೇನೇ ಇರಲಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ಗಳು ಇನ್ನೂ ಅಭ್ಯರ್ಥಿ ಆಯ್ಕೆ, ಒಳಜಗಳ ಬಗೆಹರಿಸಿಕೊಳ್ಳುವುದರಲ್ಲೇ ತಲ್ಲೀನವಾಗಿದ್ದರೆ ಬಿಜೆಪಿ ಮಾತ್ರ ಶಿರಾದಲ್ಲಿಯೂ ಗೆಲುವು ಸಾಧಿಸಲೇಬೇಕೆಂಬ ರಣೋತ್ಸಾಹದಿಂದ ಮುನ್ನುಗ್ಗುತ್ತಿರುವುದರಂತೂ ಸತ್ಯ.