19.9 C
Karnataka
Sunday, September 22, 2024

    ಹುಟ್ಟು ಹಬ್ಬದ ಶುಭಾಶಯಗಳು ಆಶಾ ಜೀ

    Must read

    ನಮ್ಮ ಬಾಲಿವುಡ್ ಸಂಗೀತದ ಜೀವನಾಡಿ, ಕಲಾವಿದರ ಧ್ವನಿಯಾಗಿ ಪಾತ್ರಗಳು ಹಾಡುವ ಚೇತನವಾಗಿ ಸುಮಾರು ಏಳೂವರೆ ದಶಕಗಳಿಂದ ಹಲವಾರು ತಲೆಮಾರು ಕಲಾವಿದರ ಪಾತ್ರಗಳಲ್ಲಿ ಹಾಡುತ್ತಾ ಇಂದಿಗೂ ಹಾಡುತ್ತಲೇ ಇದ್ದಾರೆ ಆಶಾ ಭೋಂಸ್ಲೆ. ಈ ಇಂಪಾದ ದನಿ ಬಹುಶಃ ಮತ್ತೊಬ್ಬರಿಗಿಲ್ಲ. ಹತ್ತಿರದ ಪ್ರತಿದ್ವಂದಿ ಇವರ ಅಕ್ಕ ಲತಾಮಂಗೇಶ್ಕರ್.

    ತಂದೆ ದೀನಾನಾಥ ರವರಿಂದ ಶಾಸ್ತ್ರೀಯ ಗಾಯನವನ್ನು ಅಭ್ಯಸಿಸಿದ್ದರು. ಮುಂದೆ ಜೀವನದುದ್ದಕ್ಕೂ ಈ ಸಂಗೀತವೇ ಕೈ ಹಿಡಿಯಿತು. ಹತ್ತನೇ ವಯಸ್ಸಿನಲ್ಲಿ ಮರಾಠಿ ಚಿತ್ರವೊಂದರ ಹಿಂಬದಿಯ ಗಾಯಕಿಯಾಗಿ ಹಾಡುವ ಅವಕಾಶ ಸಿಕ್ಕಿತು, ನಂತರ ಹಿಂದಿ ಸಿನಿಮಾಗಳಲ್ಲೂ ಅವಕಾಶಗಳು ಬಂತು.

    ಯೌವನಕ್ಕೆ ಕಾಲಿಡುತ್ತಿದ್ದ ಆಶಾರವರು ಮನೆಯವರೆಲ್ಲರ ವಿರುದ್ಧವಾಗಿ ಲತಾ ಅವರ ಸೆಕ್ರೆಟ್ರಿಯಾಗಿದ್ದ ಗಣಪತ್ ಭೋಂಸ್ಲೆಯವರನ್ನು  ವಿವಾಹವಾದರು. ಆದರೆ ವಿವಾಹ ಊರ್ಜಿತವಾಗಲಿಲ್ಲ. ಇಬ್ಬರು ಮಕ್ಕಳು ಮತ್ತು ಗರ್ಭಿಣಿ ಯಾಗಿದ್ದ ಆಶಾರವರನ್ನು ಮನೆಯಿಂದ ಹೊರಹಾಕಲಾಯಿತು. ವಿಧಿಯಿಲ್ಲದೆ ತವರಿಗೆ ವಾಪಸ್ಸಾದರು. ತನ್ನ ತಪ್ಪಿನ ಅರಿವಾಯಿತು. ಜೀವನವನ್ನು ಮೂರು ಮಕ್ಕಳೊಂದಿಗೆ ಹೇಗೆ ಸಾಗಿಸಬೇಕೆಂದು ಅಳುತ್ತಿದ್ದರು.

    ಆಶಾ ತನ್ನ ಜೀವನದ ಜಂಜಾಟದಲ್ಲಿ ನರಳುತ್ತಿದ್ದಾಗ ಲತಾ ಅವರು ಹಲವು ಸಿನಿಮಾಗಳಲ್ಲಿ ಹಾಡಿ ವಿಖ್ಯಾತರಾದರು. ಆರ್ಥಿಕವಾಗಿ ಕಂಗಾಲಾಗಿದ್ದ ಆಶಾ ಜೀವನ ನಿರ್ವಹಣೆಗಾಗಿ ಹಾಡಲು ಶುರು ಮಾಡಿದರು. ಆದರೆ ಮೊದಮೊದಲು ಆಶಾತಾಯಿಯವರಿಗೆ ಸೈಡ್ ರೋಲ್ ಪಾತ್ರಕ್ಕೆ ಕ್ಯಾಬರೆ ಹಾಡುಗಳು ಅಥವಾ ‘ಸಿ’ ಗ್ರೇಡ್ ಸಿನಿಮಾಗಳಲ್ಲಿ ಹಾಡುವಂತಾಯಿತು. 1956ರಲ್ಲಿ ಒ ಪಿ ನಯ್ಯರ್  ಅವರ ಆಶ್ರಯದಲ್ಲಿ ಮತ್ತು
    ಉತ್ತೇಜನದಿಂದ ಹಾಡಲು ಶುರು ಮಾಡಿದ ಮೇಲೆ ಅದೃಷ್ಟದ ಬಾಗಿಲು ತೆರೆಯಿತು. ಹಲವಾರು ಹಾಡುಗಳು ಬಹಳ ಹಿಟ್ ಆದವು. ಪ್ರಸಿದ್ಧರಾದ ಎಲ್ಲಾ ಸಂಗೀತ ನಿರ್ದೇಶಕರು ಆಹ್ವಾನ ನೀಡಿ ಹಾಡಿಸಿದರು . ನಮ್ಮ ದೇಶದ ಮೂಲೆ ಮೂಲೆಯಲ್ಲಿ ಆಶಾ ಅವರ ಹಾಡುಗಳು ವಿಜೃಂಭಿಸಿದವು . ಡ್ಯುಯೆಟ್ ಹಾಡುಗಳನ್ನು ಕಿಶೋರ್ ಕುಮಾರ್, ಹೇಮಂತ್ ಕುಮಾರ್, ಮೊಹಮ್ಮದ್ ರಫಿ , ಮುಖೇಶ್ ಹೀಗೆ ಪ್ರಸಿದ್ಧರಾದ ಎಲ್ಲರ ಜತೆ ಹಾಡಿದ್ದಾರೆ. 1980ರಲ್ಲಿ ಸಂಗೀತ ನಿರ್ದೇಶಕರಾದ ಆರ್ ಡಿ ಬರ್ಮನ್ ಜೊತೆ ಮತ್ತೆ ವಿವಾಹವಾದರು. ಸಂತೋಷದ ಜೀವನ ಕೇವಲ ಹದಿನಾಲ್ಕು ವರ್ಷಗಳು ಮಾತ್ರ. ಪತಿ ಹೃದ್ರೋಗದಿಂದ ದೈವಾಧೀನರಾದರು.

    ಆಶಾ ಭೋಸ್ಲೆ ಅವರ ಕಂಠದಲ್ಲಿ ಅದೆಷ್ಟು ಇಂಪು ತಂಪು ಇದೆಯೆಂದರೆ ಎಂಥವರಿಗೂ ಗಾನಸುಧೆಯನ್ನು ಕೇಳುತ್ತಿದ್ದರೆ ಮನದಲ್ಲಿ ಸಂತೋಷದ ಅಲೆಗಳು ಏಳುತ್ತವೆ. ಅದೇನು ಸ್ಫೂರ್ತಿ, ಸಕಾರಾತ್ಮಕವಾಗಿ ಹಾಡುವ ಅವರನ್ನು ನೋಡುತ್ತಿದ್ದರೆ ಮತ್ತಷ್ಟು ಆನಂದ. ದುಃಖ ಕಷ್ಟಗಳಿಲ್ಲದ ಕನಸಿನ ಲೋಕದಲ್ಲಿ ತೇಲುತ್ತೇವೆ ಎನಿಸುತ್ತದೆ. ಅವರು ಹಾಡುವ ಪ್ರಣಯಗೀತೆಗಳಂತೂ ಯುವ ಜನತೆಗೆ ಬಹಳ ಇಷ್ಟ….ತಮ್ಮ ಜೀವನದ ಝಲಕ್ ಕಾಣುತ್ತಾರೆ.

    ಆಶಾರವರ ಸ್ಟೈಲ್ ನಲ್ಲಿ ಬಹಳ ವೈವಿಧ್ಯತೆಯಿರುತ್ತದೆ. ಅವರು ಹಾಡುವ ಹಾಡಿನ ರೇಂಜ್ ಬಹುಶಃ ಬೇರೆ ಯಾರಿಗೂ ತಲುಪಲು ಸಾಧ್ಯವಿಲ್ಲ.ಅಷ್ಟು ಸಲೀಸಾದ ದನಿಯ ಏರಿಳಿತಗಳು. ಲಿರಿಕ್ಸ್ ನಲ್ಲಿ ಸ್ಪಷ್ಟತೆ ಹಾಗೂ ಹಾಡುವಾಗ ಅವರು ಅನುಭವಿಸುವ ಸಂತಸ, ಪ್ರೇಕ್ಷಕರೂ ಗುನಗುನಾಯಿಸುವಂತೆ ಮಾಡುತ್ತದೆ. ಯಾವುದೋ  ಮಾಯಾಲೋಕದಲ್ಲಿ ಎಲ್ಲರೂ ಮಂತ್ರಮುಗ್ಧರಾಗುವಂತೆ ಮಾಡುತ್ತದೆ!  1981ರ ಉಮರೋಜಾನ್ ಚಿತ್ರದ ರೇಖಾಳ ದುಃಖತಪ್ತ ಅಭಿನಯ ಹಾಗೂ ಅದಕ್ಕೆ ತಕ್ಕ ಆಶಾರ ವಿರಹ ಗಾನ ಎಂತಹ ಸಂಜೋಗ್. ನಿಮ್ಮ ಕಣ್ಣಲ್ಲೂ ಎರಡು ಹನಿ ನೀರು ಬರುತ್ತೆ . ಎದೆ ಕಿವುಚಿದಂತಾಗುತ್ತದೆ . ಜ಼ರಾಸೆ ಝೂಮ್ ಲೆ … DDLJಯ ಈ ಗಾನ ಕೇಳಿದಾಗ ಹಾಡಿನ ಜತೆ ನೀವೂ ಡ್ಯಾನ್ಸ್ ಮಾಡುತ್ತೀರ! . ಆಶಾ ಅವರು ನಮ್ಮ ಕನ್ನಡದಲ್ಲೂ  ಹಾಡು ಹಾಡಿದ್ದಾ‌ರೆ.

    ಎಲ್ಲಾ ಸಂಗೀತ ಕಾರ್ಗಯಕ್ರಮಗಳಲ್ಲೂ ಅವರು ಬಿಳಿಯ ರೇಷ್ಮೆ ಕಾಂಟ್ರಾಸ್ಟ್ ಬಾರ್ಡರ್ ಇರುವ ಸೀರೆ ಉಟ್ಟಿರುತ್ತಾರೆ. ಕಿವಿಯಲ್ಲಿ ದೊಡ್ಡದಾದ ವಜ್ರದ ಓಲೆ , ಚಿನ್ನದ ನೆಕ್ಲೇಸ್ ಮತ್ತು ಕೈಗೆ ಮುತ್ತಿನ ಪಟ್ಟಿ ಅದಕ್ಕೆ ತೂಗಾಡುವ ವಜ್ರಗಳು. ಶ್ವೇತಾಂಬರಿಯಾದ ಆಶಾ ನೋಡಲು ನಿಜಕ್ಕೂ ಗಾನ ದೇವತೆಯೇ ಭೂಮಿಗೆ ಇಳಿದು ಬಂದಂತಿರುತ್ತದೆ.

    2018ರಲ್ಲಿ ಬೆಂಗಳೂರಿಗೆ ಬಂದು ಇಷ್ಟು ಇಳಿ ವಯಸ್ಸಿನಲ್ಲಿ ಮೂರು ಗಂಟೆಗಳ ಕಾಲ ನಮ್ಮೆಲ್ಲರನ್ನೂ ರಂಜಿಸಿದ್ದಾರೆ. ಸಾವಿರಾರು ಜನ ಮೂರು ಸಾವಿರ ರೂಪಾಯಿಯ ಟಿಕೆಟ್ ತೆಗೆದುಕೊಂಡು ಕಿಕ್ಕಿರಿದು ನೆರೆದಿದ್ದರು.ಇಷ್ಟೆಲ್ಲಾ ನಮ್ಮನ್ನು ರಂಜಿಸುವ ಆಶಾ ತಾಯಿಗೆ ಹೃದಯದಲ್ಲಿ ದುಃಖ ಹೆಪ್ಪುಗಟ್ಟಿದೆ. ಮಗಳು ವರ್ಷಾ 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡಳು, ಮಗ ಹೇಮಂತ್ ಕ್ಯಾನ್ಸರ್ ನಿಂದ ಮರಣಿಸಿದ್ದಾನೆ, ಆದರೆ ತನ್ನ ದುಃಖವನ್ನು ಎಲ್ಲೂ ತೋರಿಸಿಲ್ಲ.

    ಈ ತಿಂಗಳ 8ಕ್ಕೆ 87 ವರ್ಷ ತುಂಬುತ್ತದೆ. ಈ ವಯಸ್ಸಿನಲ್ಲಿ ವೃದ್ಧಾಪ್ಯದ ತೊಂದರೆಗಳಿರುತ್ತವೆ. ಆದರೆ ಇವರು ಇವನ್ನೆಲ್ಲಾ ಮೆಟ್ಟಿ ನಿಂತಿದ್ದಾರೆ.ಆಶಾ ಸಂಗೀತ ಒಂದರಲ್ಲೇ ಪರಿಣಿತಿ ಪಡೆದಿಲ್ಲ ಇವರು ರುಚಿ ರುಚಿಯಾದ ಅಡುಗೆಯನ್ನೂ ಮಾಡುತ್ತಾರೆ. ಇವರು ದುಬೈ ಮತ್ತು ಕುವೇಟ್ ನಲ್ಲಿ ತಮ್ಮ ರೆಸ್ಟೋರೆಂಟ್ ಗಳನ್ನು ತೆಗೆದು ಬಿಸ್ನೆಸ್ ವುಮನ್ ಸಹ ಆಗಿದ್ದಾರೆ.

    ಜನ್ಮದಿನವಾದ  ಇಂದು (8ನೇ ಸೆಪ್ಟೆಂಬರ್ ) ಆಶಾ ತಾಯಿಯವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ.

    ಶಶಿಕಲಾ ರಾವ್
    ಶಶಿಕಲಾ ರಾವ್
    ಬೆಂಗಳೂರಿನಲ್ಲಿ ವಾಸ. ಕನ್ನಡ ಬರವಣಿಗೆಯಲ್ಲಿ ಆಸಕ್ತಿ
    spot_img

    More articles

    7 COMMENTS

    1. ಉತ್ತಮ ಲೇಖನ. ಆಶಾ ಭೋಂಸ್ಲೆ ಹಾಡುಗಳನ್ನು ಕೇಳಿ ದ್ದರೂ ಅವರ ಬದುಕು, ವೃತ್ತಿ ಬದುಕು, ಅದರ ಏರಿಳಿತದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.

    2. ನಿಮ್ಮ ಲೇಖನದಲ್ಲಿ ತಿಳಿಸಿರುವಂತೆ umraojan and DDLJಯ ಹಾಡುಗಳ video at least audio tag ಮಾಡಿದ್ದಿದ್ದರೆ ಲೇಖನದ ಝಲಕ್ ಬೇರೆಯೇ ಇರುತ್ತಿತ್ತು madam. But good article.

    3. Ede tharaha Asha avara akka Lataji baggeyu ondu article baredare channagi irrutte.
      Dinakke ondu bari Lataji yavara hadu keladiddare eno miss agutte.
      Nice article. Your hidden talent is coming out late in life.

    4. ಬಹಳ ಉತ್ತಮವಾದ ಬರಹ. ಆಶಾ ಜಿ ಅವರು ಜೀವನದಲ್ಲಿ ನಡೆದು ಬಂದಂತಹ ಹಾದಿ, ಅವರು ಅನುಭವಸಿದ ಕಷ್ಟ -ನಷ್ಟಗಳು, ಅವರ ಛಲ ಎಂಥವರಿಗೂ ಬದುಕಿನಲ್ಲಿ ಸ್ಪೂರ್ತಿಯನ್ನು ನೀಡುತ್ತದೆ. ಇಂತಹ ಸ್ಫೂರ್ತಿದಾಯಕ ಬರಹಗಳನ್ನು ನೀಡಿ ಓದುಗರಿಗೂ ಜೀವನದಲ್ಲಿ ಸಮತೋಲನವನ್ನು ಕಂಡು ಏಳಿಗೆಯನ್ನು ಕಾಣಲು ಪ್ರೇರೇಪಿಸುವಂತಾಗಲಿ. ತುಂಬಾ ಧನ್ಯವಾದಗಳು 🙏

    LEAVE A REPLY

    Please enter your comment!
    Please enter your name here

    Latest article

    error: Content is protected !!