ಭಾರತ ರಕ್ಷಣಾ ಸಂಶೋಧನೆಗಳಲ್ಲಿ ಮುಂಚೂಣಿಯ ರಾಷ್ಟ್ರಗಳ ಸಾಲಿಗೆ ಸೇರಿದೆ. ಇದೀಗ ಸೋಮವಾರ ನಡೆಸಿದ ಕ್ಷಿಪಣಿ ಪರೀಕ್ಷೆ ವಿಶ್ವದ ಭೂಪಟದಲ್ಲಿ ಈ ತಂತ್ರಜ್ಞಾನ ಹೊಂದಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿ.ಆರ್.ಡಿ.ಒ) ಸೋಮವಾರ ಯಶಸ್ವಿಯಾಗಿ ಹೈಪರ್ ಸಾನಿಕ್ ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ವೆಹಿಕಲ್(ಎಚ್.ಎಸ್.ಟಿ.ಡಿ.ವಿ) ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು ಅಮೆರಿಕಾ, ಚೀನಾ ಮತ್ತು ರಷ್ಯಾ ನಂತರ ಅಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ನಾಲ್ಕನೇ ರಾಷ್ಟ್ರವಾಗಿದೆ.
ಸೋಮವಾರ ಈ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ವೀಲರ್ ದ್ವೀಪದಲ್ಲಿರುವ ಅಬ್ದುಲ್ ಕಲಾಂ ಉಡ್ಡಯನ ಕೇಂದ್ರದಿಂದ ನಡೆಸಲಾಗಿದೆ. ಒಂದು ವರ್ಷದ ಹಿಂದೆಯೇ ಈ ಪ್ರಯೋಗ ನಡೆಸಲಾಗಿದ್ದರೂ ಆಗ ಎಲ್ಲ ಮಾನದಂಡಗಳನ್ನೂ ತಲುಪಲಾಗಿರಲಿಲ್ಲ.
ಸೋಮವಾರ ನಡೆಸಲಾದ ಕ್ಷಿಪಣಿ ಪರೀಕ್ಷೆಯು ಶಬ್ದದ ವೇಗಕ್ಕಿಂತ ಆರು ಪಟ್ಟು ವೇಗವಾಗಿ ಚಲಿಸಬಲ್ಲ ತಂತ್ರಜ್ಞಾನ ಹೊಂದಿದ್ದು ಮುಂದಿನ ಐದು ವರ್ಷಗಳಲ್ಲಿ ಮೊದಲ ಹೈಪರ್ ಸಾನಿಕ್ ಕ್ಷಿಪಣಿ ನಿರ್ಮಿಸಲಿದೆ. ಈ ತಂತ್ರಜ್ಞಾನವನ್ನು ದೂರ ಪ್ರದೇಶಕ್ಕೆ ಹಾರಿಸುವ ಕ್ಷಿಪಣಿಗಳಿಗೆ ಹಾಗೂ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಹಾರಿಸಲು ಬಳಸಬಹುದು. ಈ ಕ್ಷಿಪಣಿಗೆ ದೇಸೀಯವಾಗಿ ಅಭಿವೃದ್ಧಿಪಡಿಸಲಾದ ಸ್ಕ್ರಾಮ್ ಜೆಟ್ ಪ್ರೊಪಲ್ಷನ್ ಸಿಸ್ಟಂ ಬಳಸಲಾಗಿದೆ.
ಈ ವ್ಯವಸ್ಥೆಯ ವಿಶೇಷವೆಂದರೆ ಅವು ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸುತ್ತವೆ ಮತ್ತು ಉಪಗ್ರಹವನ್ನು ಕಕ್ಷೆಯ ಮೇಲೆ ಕೂರಿಸಲು ಅಗತ್ಯವಾದ ಪ್ರೊಪೆಲ್ಲೆಂಟ್ ಅನ್ನು ಕಡಿಮೆ ಮಾಡುತ್ತವೆ. ಡಿ.ಆರ್.ಡಿ.ಒ ಪರೀಕ್ಷಿಸಿದ ಕ್ಷಿಪಣಿ ತಂತ್ರಜ್ಞಾನವು ಮುಂದಿನ ತಲೆಮಾರಿನ ಹೈಪರ್ ಸಾನಿಕ್ ವಾಹನಗಳನ್ನು ಸಿದ್ಧಪಡಿಸಲು ನೆರವಾಗಲಿದೆ. ಹೈಪರ್ ಸಾನಿಕ್ ಕ್ಷಿಪಣಿಗಳು ಗಂಟೆಗೆ 3,800 ಮೈಲಿ ಅಥವಾ 6,115 ಕಿ.ಮೀ.ಗಿಂತ ವೇಗವಾಗಿ ಪ್ರಯಾಣಿಸುತ್ತವೆ, ಇದು ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳಿಗಿಂತ ಅತ್ಯಂತ ವೇಗ ಹೊಂದಿವೆ. ಇವು ಸಾಂಪ್ರದಾಯಿಕ ಅಥವಾ ಪರಮಾಣು ಬಾಂಬ್ ಗಳನ್ನು ಕೆಲ ನಿಮಿಷಗಳಲ್ಲಿ ಗುರಿ ತಲುಪಿಸಬಲ್ಲವು. ಇವು ಪ್ರಯಾಣಿಸುವಾಗ ಊಹಿಸಬಲ್ಲ ಪರಿಧಿಯನ್ನು ಅನುಸರಿಸುವುದಿಲ್ಲ. ಅವು ಬ್ಯಾಲಿಸ್ಟಿಕ್ ಕ್ಷಿಪಣಿಗಳಂತೆ ವೇಗ ಮತ್ತು ಕ್ರೂಸ್ ಕ್ಷಿಪಣಿಗಳಂತೆ ದಾರಿ ಬದಲಿಸಬಲ್ಲವು. ಇದರ ವೇಗದಿಂದ ಸಾಂಪ್ರದಾಯಿಕ ಕ್ಷಿಪಣಿ ತಂತ್ರಜ್ಞಾನಕ್ಕೆ ಕಂಡುಕೊಳ್ಳಲು ಕಷ್ಟವಾಗಿಸುತ್ತದೆ. ಈಗಾಗಲೇ ಭಾರತ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದು ಅವು ರಾಮ್ಜೆಟ್ ಎಂಜಿನ್ ಹೊಂದಿವೆ.
ಭಾರತಕ್ಕೆ ಗಡಿ ತಂಟೆ ಮಾಡುತ್ತಿರುವ ಚೀನಾ ತನ್ನ ನೌಕಾಪಡೆಯ ಸಾಮರ್ಥ್ಯವನ್ನು ತೀವ್ರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ವಿಮಾನಗಳನ್ನು ಹೊತ್ತೊಯ್ಯುವ ಹಡಗುಗಳು, ಸಬ್ ಮೆರಿನ್ ಗಳು ಇತ್ಯಾದಿಗಳಿಂದ ತನ್ನ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ. ಆದರೆ ಚೀನಾಗೆ ಹೈಪರ್ ಸಾನಿಕ್ ಹಡಗು ನಿರೋಧಕ ಕ್ಷಿಪಣಿಗಳಿಲ್ಲ. ಭಾರತದ ಹಡಗು ನಿರೋಧಕ ಕ್ಷಿಪಣಿಗಳು ಚೀನಾಗೆ ಹೊಸ ಆತಂಕ ಹುಟ್ಟಿಸಿದೆ. ಇದು ಚೀನಾದ ಶಕ್ತಿಯುತಗೊಳ್ಳುತ್ತಿರುವ ನೌಕಾಬಲಕ್ಕೆ ಸೆಡ್ಡು ಹೊಡೆಯುತ್ತಿದೆ.
ಚೀನಾಕ್ಕೆ ಸೆಡ್ಡು ಹೊಡೆಯಬಹುದಾದ ತಾಂತ್ರಿಕತೆ ಅಂತ ತಿಳಿದು ಸಂತೋಷಕ್ಕಿಂತಲೂ ಗರ್ವ ಆಯ್ತು. ಕ್ಷಿಪಣಿ ಪರಿಚಯ ಚೆನ್ನಾಗಿದೆ.