26 C
Karnataka
Thursday, November 21, 2024

    ದುಡಿದ ಹೆಚ್ಚಿನ ಹಣ ಹೋಗುವುದೆ ಆಸ್ಪತ್ರೆಗೆ, ಶಿಕ್ಷಣಕ್ಕೆ

    Must read

    ಹಣ ಇರುವುದು ಖರ್ಚು ಮಾಡಲು ಅಂತ ಕೆಲವರ ವಾದ. ಅಲ್ಲ ಅದು ಇರುವುದೇ ಗಳಿಸಲು ಅಂತ ಮತ್ತೊಬ್ಬರ ವಾದ ಎಂದು ನಿನ್ನೆ ಹೇಳಿದ್ದ ಮಂಜುನಾಥ ಬೊಮ್ಮಘಟ್ಟ ಅವರು ಈ ಸರಣಿಯ ಎರಡನೇ ಲೇಖನದಲ್ಲಿ ಶೇಖರಿಸಿದ ಹಣ ತರುವ ಅಪಾಯಗಳನ್ನು ತಿಳಿಸಿದ್ದಾರೆ.

    ತಾಮ್ರದ ನಾಣ್ಯ ತಾಯಿ ಮಕ್ಕಳನ್ನು ಅಗಲಿಸುತ್ತೆ. ಸಂಬಂಧಗಳಲ್ಲಿ ಹಣದ ವ್ಯವಹಾರ ಬೇಡ ಅಂತ ಮನೆಗಳಲ್ಲಿ ಹಿರಿಯರಾಡುವುದು ಇತ್ತೀಚಿನ ತನಕ ಸಾಮಾನ್ಯವಾಗಿತ್ತು. . ಹಣದ ವಿಷಯ ಕುಟುಂಬದ ಕೆಲವರಿಗೆ ಮಾತ್ರ ಸಂಬಂಧಿಸಿದ್ದಾಗಿರುತ್ತಿತ್ತು. ಕುಟುಂಬದ ಒಡೆಯನನ್ನು ಬಿಟ್ಟರೆ ಒಬ್ಬಿಬ್ಬರು ಮಾತ್ರ ಅದರ ವಿಚಾರಕ್ಕೆ ಅರ್ಹರು ಎಂಬಂತಿತ್ತು ನಮ್ಮ ಅವಿಭಕ್ತ ಕುಟುಂಬಗಳ ಹಣಕಾಸು ವಿಚಾರ. ಬೇರೆ ಎಲ್ಲರ ಭಾವನೆಯಲ್ಲಿ ಹಣ ಪಾಷಾಣ(ವಿಷ)  ಸಮ ಅಂತ ಬಿಂಬಿತವಾಗಿರುತ್ತಿತ್ತು.ಈಗಿನ ರೀತಿ ಎಲ್ಲಿಯಂದರಲ್ಲಿ ನಾಣ್ಯಗಳು,ನೋಟುಗಳು ಆಗ ಕಾಣ ಸಿಗುತ್ತಿರಲಿಲ್ಲ.
    ಇದು ಮನೆಗಳ ವಿಚಾರ ಆದರೆ, ಇನ್ನು ಊರ ವಿಚಾರದಲ್ಲೂ ಅಷ್ಟೇ. ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನರ ಹತ್ತಿರ ಮಾತ್ರ ಹಣ ಇರ್ತಿತ್ತು. ಶೆಟ್ಟರ ಅಂಗಡಿಗಳಲ್ಲೂ ನಾಣ್ಯದ ವಿನಿಮಯಕ್ಕಿಂತ ಹೆಚ್ಚಾಗಿ ಹೊಲಗಳಲ್ಲಿ ಬೆಳೆಯುತ್ತಿದ್ದ ಕಾಳು, ದವಸ ಧಾನ್ಯ,ಹುಣಸೇ ಹಣ್ಣು, ಕೆಲವು ಕಾಡಿನ ಉತ್ಪನ್ನಗಳು ವಿನಿಮಯಕ್ಕೆ ಉಪಯೋಗಿಸಲ್ಪಡುತ್ತಿದ್ದವು. ಉಪ್ಪು ಬೇಕೆಂದರೆ ಪಾವು ರಾಗಿ ಅಥವಾ ಜೋಳ ಅಂಗಡಿಗೆ  ಹಾಕಿ ತರುತ್ತಿದ್ದರು. ಕೊನೆಗೆ ಬೀಡಿ, ಕಡ್ಡಿಪುಡಿ(ತಂಬಾಕು) ಬೇಕೆಂದರೂ ಮನೆಗಳಲ್ಲಿ ಚೀಲ,ಚೀಲ ಇರುತ್ತಿದ್ದ ಕಾಳನ್ನು ಅಂಗಡಿಗೆ ಹಾಕಿ ವ್ಯವಹಾರ ಮಾಡುತ್ತಿದ್ದರು. ಅಷ್ಟೇ ಅಲ್ಲ, ಏನಕ್ಕಾದರೂ ಹಣ ಬೇಕಾದಾಗಲೂ ಕಾಳು ಹಾಕಿ ಹಣ ತೆಗೆದುಕೊಳ್ಳುವ ಪದ್ದತಿ ಸಾಮಾನ್ಯವಾಗಿರುತ್ತಿತ್ತು.
    1,2,3,5,10,20 ಪೈಸೆ ನಾಣ್ಯಗಳಿಗೆ ಭಾರೀ ಬೆಲೆ. ಅದಕ್ಕಿಂತಲೂ ಮುಂಚೆ ಡಂಬಡಿ,ದುಗ್ಗಾಣಿ ಅಂತ ಕರೆಯಿಸಿಕೊಳ್ಳುವ ಬಿಲ್ಲೆಗಳು ಇದ್ದವು ಅಂತ ತಾತ ಹೇಳುತ್ತಿದ್ದರು. 25,50 ಪೈಸೆ ಮತ್ತು  1ರೂಪಾಯಿ ನಾಣ್ಯ ಇತ್ತು.(ಈಗಲೂ ಇವೆ,ಬೆಲೆ ಕಳೆದುಕೊಂಡು) 6 ಪೈಸೆಗೆ  ಆಣೆ ಅಂತಲೂ 25 ಪೈಸೆಗೆ ನಾಲ್ಕಾಣೆ,50 ಪೈಸೆಗೆ ಎಂಟಾಣೆ ಅಂತ ಕರೆಯುತ್ತಿದ್ದೆವು. ಮೊದಲೇ ಹೇಳಿದಹಾಗೆ ಇವು ಎಲ್ಲರ ಹತ್ತಿರ ಇರ್ತಿರಲಿಲ್ಲ.
    ಇನ್ನು ನೋಟಿನ ವಿಷಯ ಎಂದರೆ 1,2,5,10,20,50,100 ರ ನೋಟುಗಳು. ಅಪ್ಪನ ತಿಂಗಳ 130 ರೂಪಾಯಿ ಸಂಬಳ ಬಂದಾಗ, ಅಜ್ಜಿಗೆ ಕೆಲವು ನೋಟುಗಳನ್ನು ತೋರಿಸುತ್ತಿದ್ದರಂತೆ. ಅಲ್ಲಿಯವರೆಗೆ ಅಜ್ಜಿ ಆ ನೋಟುಗಳನ್ನು ನೋಡೇ ಇರುತ್ತಿರಲಿಲ್ಲ ಅಂತೆ. ಸಮಾಜದಲ್ಲಿ ಅಷ್ಟೊಂದು ವಿರಳ ನೋಟು,ನಾಣ್ಯಗಳು. ಊರಲ್ಲಿ ಸಾಹುಕಾರ, ಶೆಟ್ಟರು ಎನ್ನಿಸಿಕೊಂಡವರ ಹತ್ತಿರ ಬಿಟ್ಟರೆ, ಬೇರೆಯವರ ಹತ್ತಿರ ನೋಟುಗಳು ನೋಡಲೂ ಸಿಗುವುದು ಕಡಿಮೆ. ಹತ್ತು ರೂಪಾಯಿ ಜೇಬಲ್ಲಿ ಇಟ್ಟು ಹೊರಟವ ಊರ ಸಾಹುಕಾರನೆ ಆಗಿರಬೇಕಿತ್ತು!.
    ಇದು 70ರ ದಶಕದ ತನಕ ಇದ್ದ ಭಾರತದ ಗ್ರಾಮೀಣ ಭಾಗದ  ಹಣಕಾಸಿನ ಚಿತ್ರಣ. ಸಾವಿರ ರೂಪಾಯಿ ನೋಟುಗಳೂ ಇದ್ದವಂತೆ. ಪ್ರಥಮ ಬಾರಿಗೆ,ತುರ್ತುಪರಿಸ್ಥಿತಿ ಆದ ನಂತರ 1977 ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಂತ ಬಂದ ಮುರಾರ್ಜಿ ದೇಸಾಯಿ ಸರ್ಕಾರ ಅಮಾನತ್ತು ಮಾಡಿತ್ತು. ನಮ್ಮೂರಲ್ಲಿ ಇರಲಿಲ್ಲ, ನಾನೂ ನೋಡಿಲ್ಲ. ಒಟ್ಟಾರೆ ಹಣದ ವಿನಿಮಯ ಕೆಲವೇ ಕೆಲವು ಜನರಿಗೆ ಸೀಮಿತವಾಗಿತ್ತು.
    ಇನ್ನೂ 30 ವರ್ಷ ಹಿಂದಕ್ಕೆ,ಸ್ವತಂತ್ರ ಬಂದ ವೇಳೆಯ ಭಾರತದ ಹಣಕಾಸು ಪರಿಸ್ಥಿತಿಯನ್ನು ನೀವೇ ಊಹಿಸಿಕೊಳ್ಳಿ. ನನಗೆ ನೆನಪಿರುವ ಹಾಗೆ, ಸುಮಾರು ಐದಾರು ಅಂಗಡಿಗಳ ನಮ್ಮೂರಲ್ಲಿ ಅಂಗಡಿಗೊಂದರಂತೆ  ದಿನಕ್ಕೆ ಸರಾಸರಿ ಹತ್ತು ರೂಪಾಯಿಗಳ ವಹಿವಾಟು ಇರುತ್ತಿತ್ತು. ಅಂದರೆ ಇಡೀ ನಮ್ಮೂರ ದಿನವೊಂದರ ವಹಿವಾಟು ಐವತ್ತರಿಂದ ಅರವತ್ತು ರೂಪಾಯಿಗಳು!
    ಗಮನಿಸಬೇಕಾದ ಅಂಶವೆಂದರೆ, ಪ್ರತೀ ಮನೆಗಳಲ್ಲಿ ಅಲ್ಪ ಸ್ವಲ್ಪ ಬೆಳ್ಳಿ,ಬಂಗಾರ,ತಾಮ್ರ ಇರುತ್ತಿತ್ತು, ವ್ಯವಸಾಯೋತ್ಪನ್ನ ಸರಕುಗಳೊಂದಿಗೆ. ಹಾಗಾಗಿ ಹಣಕಾಸು ವ್ಯವಹಾರ ತನ್ನ ಗಂಭೀರತೆಯನ್ನು ಉಳಿಸಿಕೊಂಡು ಆಯ್ದ ಕೆಲವರು ಮಾತ್ರ ಇದರ ಗೊಡವೆಗೆ ಹೋಗುತ್ತಿದ್ದರು. ಆದ್ದರಿಂದ ಹಣ ಎನ್ನುವುದು ಸಾರ್ವತ್ರಿಕವಾಗಿ ಮನ್ನಣೆಗೆ ಪಾತ್ರವಾದ ಅಂಶ ಆಗಿರಲಿಲ್ಲ ಆಗ.
    ಪ್ರತಿ ಹಳ್ಳಿಗಳಲ್ಲೂ ಆಗಿನ ಜೀವನ ಕ್ರಮಕ್ಕೆ ಅವಶ್ಯ ಅನ್ನಿಸಿಕೊಂಡಿದ್ದ ವೃತ್ತಿ ಧರ್ಮದವರಿದ್ದರು. ಯಾರದರೊಬ್ಬರ ಕೊರತೆ ಇದ್ದರೆ ಊರವರೆಲ್ಲ ಸೇರಿ ಬೇರೆ ಊರಿನಿಂದ ಕರೆತಂದು ತಮ್ಮ ಊರಲ್ಲಿರಲು ಅನುಕೂಲ ಮಾಡಿಕೊಡುತ್ತಿದ್ದರು. ಇವರೆಲ್ಲರ ವಿನಿಮಯ ರೂಪಕವಾಗಿರುತ್ತಿದ್ದುದು ಬೆಳೆದ ದವಸ ಧಾನ್ಯಗಳೇ. ಹಾಗಾಗಿ ಸಮಾಜಕ್ಕೂ ಈ ಹಣದ ಆವಶ್ಯಕತೆ ಅಷ್ಟಾಗಿ ಇರುತ್ತಿರಲಿಲ್ಲ. ಪಟ್ಟಣಗಳ ವ್ಯವಹಾರಕ್ಕೆ ಹಣ ಬೇಕಿತ್ತು. ಅದಕ್ಕೆ ವ್ಯಾಪಾರಸ್ಥರು ಇದ್ದರು. ಹೀಗೆ ಅನ್ಯೋನ್ಯೆತೆಯ ಸಮಾಜಕ್ಕೆ ಹಣದ ಅವಶ್ಯಕತೆ ಅಷ್ಟಾಗಿ ಇರುತ್ತಿರಲಿಲ್ಲ. ಯಾವಾಗ ನಮ್ಮ ಸಾಮಾಜಿಕ ವ್ಯವಸ್ಥೆ ಹಲವಾರು ಕಾರಣಗಳಿಗೆ ಒಡೆದು ಹೊಯ್ತೋ ಆಗ ಈ ಹಣ ಮುಂದಲೆಗೆ ಬಂದು ಬಿಡುತ್ತದೆ. ಜೀವನ ಪೂರ್ತಿ ನೋಟುಗಳನ್ನು ನೋಡದೇ, ಹಣಕಾಸಿನ ವಿನಿಮಯ ಇಲ್ಲದೇ ಬಂದಂತಹ ಜನರಿಗೆ, ಈ ಹಣ ಕೈಯಲ್ಲಿ ಒಂದು ದಿನ ಇಲ್ಲವೆಂದರೂ ಜೀವನ ನಡೆಯದ ಪರಿಸ್ಥಿತಿಗೆ ಸಮಾಜ ತಲುಪಿದಾಗ, ಆಗಿನ ಎಲ್ಲ ರೀತಿಯ ಪರಿಹಾರಕ್ಕೆ ಹಣವೇ ಮುಖ್ಯವಾಗಿ, ಅಲ್ಲಿಯ ತನಕ ಇದ್ದ ವಿಶ್ವಾಸ,ನಂಬಿಕೆ ಅಂತಹ ಮಾನವೀಯ ಗುಣಗಳನ್ನು ತಿಂದು ಹಾಕುವ ರಾಕ್ಷಸ ಹಣ ಎಲ್ಲರ ಅನಿವಾರ್ಯ ಆಗುತ್ತದೆ. ಈಗ ಎಲ್ಲರೂ ಇದರ ಬೆನ್ನು ಹತ್ತುವುದು ಜೀವನದ ಗುರಿಯಾಗಿ ಬಿಡುತ್ತದೆ.
    ನಮ್ಮ ಸಂಸ್ಕೃತಿಯಲ್ಲಿ ಪೂಜ್ಯ ಭಾವನೆ ಬೆಳೆಸಿಕೊಂಡಿದ್ದಂತಹ,ಸಮಾಜಕ್ಕೆ ಅನಿವಾರ್ಯ ಆಗಿದ್ದಂತಹ ವೈದ್ಯ ಪದ್ದತಿ, ಗುರು ಪದ್ಧತಿಗಳಿಗೆ ಈ ಹಣದ ಸೋಂಕು ಹತ್ತದಿರಲು ರೂಢಿಸಿಕೊಂಡಿದ್ದ ಪದ್ದತಿ ನನಗೆ ಆಶ್ಚರ್ಯ ತರಿಸಿತ್ತು. ಇಂತಹ ಅನಿವಾರ್ಯ ವೃತ್ತಿಯವರು ತಮ್ಮ ಕೊಡುಗೆಗೆ ಇಂತಿಷ್ಟೇ ಹಣ ಕೊಡಬೇಕು ಎನ್ನುವ ನಿಯಮವನ್ನು  ನಿಷೇಧಿಸಿದ್ದರು. ಉಪಕಾರ ಪಡೆದವರು ಸಂತೋಷದಿಂದ  ಕೊಡಮಾಡುವ ದಕ್ಷಿಣೆ ಪದ್ದತಿ ಇತ್ತೇ ಹೊರತು,ಕಡ್ಡಾಯದ ಶುಲ್ಕ ಇರಲಿಲ್ಲ. ಅದೂ ಹಣದ ರೂಪದಲ್ಲಿಯೇ ಇರಬೇಕು ಎನ್ನುವ ನಿಯಮವೂ ಇರಲಿಲ್ಲ. ಏನೂ ಕೊಡದಿದ್ದರೂ ಕೃತಜ್ಞತಾಪೂರ್ವಕ ಗೌರವ ಸಾಕು ಅಂತ ಹೇಳಿದ್ದ ಆ ಸಮಾಜದ ನಿಯಮ ನನ್ನನ್ನು ಮೂಕನಾಗಿಸಿತ್ತು. ಬರೀ ಎಲೆ,ಅಡಿಕೆಗೆ ನಮ್ಮೂರಲ್ಲಿ ಸೂಲಗಿತ್ತಿಯರು ಹೆರಿಗೆ ಮಾಡಿಸಿದ್ದು ಇನ್ನೂ ನನ್ನ ನೆನಪಲ್ಲಿ ಇದೆ!
    ಇದರ ಹಿನ್ನಲೆಯಲ್ಲಿ ಸುಮ್ಮನೆ ಒಂದು ಸಾರಿ ನಾವು ದುಡಿದ ಹಣದ ಹೆಚ್ಚಿನ ಭಾಗ ಎಲ್ಲಿ ಹೋಗುತ್ತದೆ ಈಗ ಅಂತ ಯೋಚಿಸಿದಾಗ ನನಗೆ ಕಂಡದ್ದು ಈಗಿನ ಆಸ್ಪತ್ರೆಗಳಿಗೆ ಮತ್ತು ವಿದ್ಯಾಲಯಗಳಿಗೆ!  ನಮ್ಮ ಹಿರಿಯರು ರೂಪಿಸಿದ್ದ ನಮ್ಮ ಸಂಸ್ಕಾರಯುತ ನಿಯಗಳಲ್ಲಿ ಈ ಎರಡೂ ಸಮಾಜಕ್ಕೆ ಉಚಿತವಾಗಿ ದೊರೆಯುತ್ತಿದ್ದವು. ಅವರ ದೂರದೃಷ್ಟಿಗೆ ನಮನ ಹೇಳಲೇ ಬೇಕಲ್ಲವೇ?
    ಸಮಾಜದಲ್ಲಿ ನಂಬಿಕೆ,ವಿಶ್ವಾಸ,ಪ್ರೀತಿ ಕಡಿಮೆ ಆದಾಗ ಅವು ಮಾಡುತ್ತಿದ್ದ ಕೆಲಸವನ್ನು ಈ ಹಣ ಮಾಡಲು ಶುರು ಮಾಡಿತು ನೋಡಿ,ಆಗ ಎಲ್ಲರಿಗೂ ಇದು ಬೇಕಾಯ್ತು. ಹಾಗಾಗಿಯೇ ಮಾನವೀಯ ಮೌಲ್ಯ ಕಳೆದುಕೊಂಡ ಸಮಾಜಕ್ಕೆ ಹಣ ಅನಿವಾರ್ಯವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣದ ವಹಿವಾಟು ಸಮಾಜದ ಎಲ್ಲ ಹಂತಗಳಲ್ಲಿಯೂ ಅನಿವಾರ್ಯವಾಯ್ತು. ಎಂತಹ ವಿಪರ್ಯಾಸ ಅಲ್ಲವಾ?
    ಇದರ ಹಿನ್ನಲೆಯಲ್ಲೇ ಬೆಳೆದ ನಮ್ಮನ್ನೂ ಸೇರಿದ ಪೀಳಿಗೆ  ಹಣಕ್ಕಾಗಿ ಎಲ್ಲ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಲು ಸಿದ್ದವಾಗಿಬಿಟ್ಟಿದೆ. ಕಾರಣ ಹಣ ಈ ಎಲ್ಲ ಮೌಲ್ಯಗಳನ್ನೂ ಸರಿಗಟ್ಟುತ್ತದೆ ಅಥವಾ ಮೀರಿಸಿದೆ ಅಂತ ಭಾವಿಸಿರುವುದು.
    ಈಗ ಹೇಳಿ ಸಮಸ್ಯೆ ಹಣದ್ದಾ ಅಥವಾ ಬದಲಾದ ಮೌಲ್ಯರಹಿತ ಸಮಾಜದ್ದಾ?
    ಸಂಸ್ಕೃತಿಯನ್ನು ಮರೆತು,ಲಂಗು ಲಗಾಮು ಇಲ್ಲದೆ ಗುರಿತಪ್ಪಿದ ಕುದುರೆಯಂತೆ ಹಣದ ಹಿಂದೆ ಓಡುತ್ತಿರುವ ಪೀಳಿಗೆಯದ್ದಾ?? ಅದಕ್ಕೇ ಹೇಳೋದು, ನಾವೆಷ್ಟೇ ಪದವಿಗಳನ್ನು ಪಡೆದು,ವಿದೇಶ ಸುತ್ತಿ ನಾಗರಿಕತೆಯ ಮುಸುಕು ಹಾಕಿಕೊಂಡರೂ ಹಿರಿಯರ ಪಂಕ್ತಿಗಳನ್ನು ಧಿಕ್ಕರಿಸಿ ಹೋದಷ್ಟೂ ಕತ್ತಲೆಯ ಕೂಪದ ಮಂಡೂಕಗಳಾಗುತ್ತೇವೆ ಅಂತ.
    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    4 COMMENTS

    1. ನೀವು ಹೇಳಿರೋದು ನೂರಕ್ಕೆ ನೂರು ನಿಜವಾದ ಮಾತು ನಾವು ಚಿಕ್ಕವರಿದ್ದಾಗ ದುಡ್ಡು ಅಜ್ಜನ ಹತ್ತಿರ ಅಪ್ಪನ ಹತ್ತಿರ ಮಾತ್ರ ಇರುತಿತ್ತು. ಊರಲ್ಲಿ ದುಡ್ಡಿನ ವ್ಯವಹಾರ ಬೆರಳು ಎಣಿಕೆ ಯಷ್ಟು ಜನರಲ್ಲಿ ಮಾತ್ರ. ನಮಗೆ ಯಾವುದೇ ವಸ್ತು ಬೇಕಾದರೂ ನಾವು ಬೆಳೆದ ದವಸ ದಾನ್ಯ ಕೊಟ್ಟು ಕೊಳ್ಳುತ್ತಿದ್ರು. ಆದ್ರೆ ಈಗ ಚಿಕ್ಕ ಮಕ್ಕಳಲ್ಲೂ ಪಾಕೆಟ್ ಮನಿ ಇರೋದು ನೋಡ್ತಿವಿ. Bm ನೀವು ಹೇಳಿರುವ ಎಲ್ಲ ವಿಷಯ ಅರ್ಥ ಗರ್ಭಿತ ವಾಗಿದೆ. ನಿಮ್ಮ ಬರವಣಿಗೆ ಯ ಶ್ಯಲಿ ತುಂಬಾ ಚನ್ನಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನವ ಗಾದೆ ಮಾತಿನಂತೆ. ನೀನು ಎಲ್ಲ ವಿಷಗಳ ಬಗ್ಗೆ ಕೂಲಂಕುಷ ವಾಗಿ ತಿಳಿದುಕೊಂಡು ಇರುವಿರಿ. ಈ ಜ್ಞಾನ ಕ್ಕೆ ನೂರು ನಮನಗಳು.

    2. ಹಣವೇ ಎಲ್ಲವೂ ಎನ್ನುವ ಈ ಸಂದರ್ಭದಲ್ಲಿ ತಮ್ಮ ಈ ಬರವಣಿಗೆ ತುಂಬಾ ಸಂದರ್ಭೋಚಿತ ಎನಿಸುತಿದೆ
      ಕೇವಲ ವಸ್ತುಗಳ ವಿನಿಮಯದಿಂದಲೇ ಅಥವಾ ನಿಸ್ವಾರ್ಥ ವಾಗಿ ಸೇವೆ ಎಂದು ಬದುಕನ್ನು ಸಾಗಿಸುತ್ತಿದ್ದ ಆದರೆ ಕಾಲ ಅದೆಷ್ಟು ನೆಮ್ಮದಿಯದಾಗಿತ್ತು ಎಂಬ ಅಂಶವನ್ನು ಎತ್ತಿ ತೋರಿಸುವ ನಿಮ್ಮ ಬರವಣಿಗೆ ಅತ್ಯುತ್ತಮ ವಾದುದು ಧನ್ಯವಾದಗಳು BM

    3. ಕರೆನ್ಸಿ ಮೌಲ್ಯದ ಮಾಧ್ಯಮ ವಿಲ್ಲದೆ ವಸ್ತುಗಳ ರೂಪದ ವಿನಿಮಯ ಬಾಲ್ಯದಲ್ಲಿ ನಡೆದಿತ್ತು. ನಾವು ಕಣಸುಗ್ಗಿ ಮಾಡಿದಾಗ ರಾಶಿ ಪೂಜೆ ನಂತರ ಮೊರದಲ್ಲಿ ಅದೆಷ್ಟೋ ಬಡಬಗ್ಗರಿಗೆ ತುಂಬಿ ಸುರಿಯುತ್ತಿದ್ದ ಅಜ್ಜ ಅಜ್ಜಿಗೆ ದುಡ್ಡಿನ ಲಕ್ಷ್ಯ ಇರಲಿಲ್ಲ. ಅದೆಷ್ಟು ಬೆಳೆದರು ಸರಳ ಜೀವನ. ತೀರಾ ಅವಶ್ಯಕತೆ ಗೆ ಖರ್ಚು. ಒಂದು ಲೈಫ್ಬಾಯ್ ಸೋಪು ಮನೆ ಮಂದಿಗೆಲ್ಲಾ. ಈಗ ಒಬ್ಬರಿಗೆ ಮೂರು ಸೋಪು. ಕೊಳ್ಳುಬಾಕ ಸಂಸ್ಕೃತಿಯ ಆಮದು. ಲೇಖನ ಹಿಡಿಸಿತು ಗೆಳೆಯ

    4. ದುಗ್ಗಾಣಿ ಎಂಬುದು ದುರ್ಜನ ಸಂಗ !
      ದುಗ್ಗಾಣಿ ಬಲು ಕೆಟ್ಟದಣ್ಣಾ !!

      ಹಣವೇ ನಿನ್ನಯ ಗುಣ ಎಂತು ವರ್ಣಿಸಲೀ !
      ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ !!

      ಎಂಬ ದಾಸರ ವಾಣಿಯಂತೆ ಹಿಂದಿನ ಕಾಲದಲ್ಲಿ ಹಣಕ್ಕೆ ಅಂತಹ ಪ್ರಾಮುಖ್ಯತೆ ಇರದೆ, ತಮ್ಮಲ್ಲಿರುವ ದವಸ-ಧಾನ್ಯಗಳು, ವಸ್ತುಗಳನ್ನು ವಿನಿಮಯ ಮಾಡಿಕೊಂಡು, ತಮಗೆ ಬೇಕಾದ ವಸ್ತುಗಳನ್ನು ಪಡೆಯುತ್ತಿದ್ದರು. ಇಂದಿನ ದಿನಗಳಲ್ಲಿ ಕೊಳ್ಳುಬಾಕ ಸಂಸ್ಕೃತಿಯ ಹುಚ್ಚಿನಿಂದ ಹಣದ ದಾಹ ಅತೀವವಾಗಿದೆ. ಸಂದರ್ಭೋಚಿತವಾಗಿ ಲೇಖನ ಮೂಡಿ ಬಂದಿರುವುದಕ್ಕೆ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!