ವಿಶ್ವದ ಅತಿ ಉದ್ದದ ಗಡಿ ಭಾಗವನ್ನು ಹಂಚಿಕೊಂಡಿರುವ ಭಾರತ-ಚೀನಾದ ಈ ಭಾಗದಲ್ಲಿ ಕಳೆದ ಸುಮಾರು 45 ವರ್ಷಗಳಿಂದ ಗುಂಡು ಹಾರಿರಲೇ ಇಲ್ಲ. ಆದರೆ ಈಗ ಗುಂಡಿನ ಮೊರೆತ ಕೇಳಿಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಉಭಯ ದೇಶಗಳು ಕೂಡ ಇದನ್ನು ಅಲ್ಲಗಳೆಯುತ್ತಿವೆ ಮತ್ತು ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.
ಗಡಿ ಇತಿಹಾಸ
ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಮಾಡಿದ ಅನಾಹುತಗಳು ಒಂದೆರಡಲ್ಲ. ಇವುಗಳ ಪೈಕಿ ಭಾರತ-ಚೀನಾ ಗಡಿ ವಿವಾದವೂ ಕೂಡ ಒಂದು. 1914ರಲ್ಲಿ ಬ್ರಿಟಿಷ್ ಅಧಿಕಾರಿ ಹೆನ್ರಿ ಮೆಕ್ ಮಹನ್ ಈ ಗಡಿ ರೇಖೆಯನ್ನು ಸಿದ್ಧ ಪಡಿಸಿದ್ದರು. ಆದರೆ ಆಗಲೂ ಚೀನಾ ಇದನ್ನು ಒಪ್ಪಿರಲಿಲ್ಲ. ಪ್ರಸಕ್ತ ಚೀನಾ ಸುಮಾರು 90,000 ಚದರ ಕಿ.ಮೀ. ಜಾಗವನ್ನು ತನ್ನದೆಂದೇ ಹೇಳಿಕೊಳ್ಳುತ್ತಿದೆ. ಇದು ಬಹುತೇಕ ನಮ್ಮ ಅರುಣಾಚಲ ಪ್ರದೇಶದಲ್ಲಿರುವ ಜಾಗವಾಗಿದೆ. ಇದನ್ನು ಹೊರತು ಪಡಿಸಿದರೆ ಸುಮಾರು 38 ಸಾವಿರ ಚದರ ಕಿಮೀ. ಜಾಗ ಚೀನಾದ ನಿಯಂತ್ರಣದಲ್ಲಿದೆ. ಈಗ ಗದ್ದಲ ನಡೆಯುತ್ತಿರುವ ಲಡಾಕ್ ಪ್ರದೇಶದ ಅಕ್ಸಾ ಚಿನ್ ಅಥವಾ ಅಕ್ಸೈ ಚಿನ್ ಪ್ರದೇಶದ ಭಾಗ ಇದಾಗಿದೆ.
ಅತಿ ಎತ್ತರದ ಗಡಿ
ಭಾರತ ಚೀನಾ ನಡುವಿನ ಗಡಿ ಭಾಗವು ಜಗತ್ತಿನ ಅತಿ ಎತ್ತರದ ಗಡಿ ಭಾಗವೆಂದೇ ಪರಿಗಣಿತವಾಗಿದೆ. ಸುಮಾರು 21,000 ಅಡಿ ಎತ್ತರದಲ್ಲಿರುವ ಈ ಪ್ರದೇಶದ ಹಿಮಾಲಯದ ಕಡಿದಾಡ ಪರ್ವತ ಪ್ರದೇಶ ಮತ್ತು ಅತಿ ಶೀತದಿಂದ ಕೂಡಿರುವ (ಮೈನಸ್ ಡಿಗ್ರಿ ಸೆಲ್ಸಿಯಸ್) ಭಾಗವಾಗಿದೆ. ಈ ಹಿಂದೆ 1962ರಲ್ಲಿ ಭಾರತ-ಚೀನಾ ನಡುವೆ ಯುದ್ಧವಾಗಿತ್ತು. ಆದರೆ ಆ ಬಳಿಕ ಉಭಯ ದೇಶಗಳು ಶಾಂತಿ ಪ್ರಕ್ರಿಯೆಯಲ್ಲಿ ತೊಡಗಿ ಗಡಿ ಭಾಗದಲ್ಲಿ ಅಘೋಷಿತ ಕದನ ವಿರಾಮಕ್ಕೆ ಮುಂದಾಗಿದ್ದವು. 1980ರ ದಶಕದಲ್ಲಿ ನಡೆದ ಒಂದು ಚಿಕ್ಕ ಘಟನೆಯನ್ನು ಬಿಟ್ಟರೆ ಇದುವರೆಗೆ ಚೀನಾ-ಭಾರತ ಗಡಿ ಭಾಗದಲ್ಲಿ ಯೋಧರು ಕೈ-ಕೈ ಮಿಲಾಯಿಸಿದ ಉದಾಹರಣೆಯೇ ಇಲ್ಲ. 2017ರಲ್ಲಿ ಸಂಭವಿಸಿದ ದೋಕ್ಲಾಮ್ ಕೂಡ ಮಾತುಕತೆಯ ಮೂಲಕ ಬಗೆಹರಿಸಿದಿತ್ತು.
ಹಲವು ವಿಭಾಗ
ಭಾರತ-ಚೀನಾ ಗಡಿ ವಿಷಯಕ್ಕೆ ಬಂದರೆ ಇಲ್ಲಿ ಹಲವು ಪ್ರದೇಶಗಳು ಬರುತ್ತವೆ. ಮುಖ್ಯವಾಗಿ ಎದುರಾಗುವುದೇ ಅರುಣಾಚಲ ಪ್ರದೇಶ ಸೇರಿದ ಪೂರ್ವ ವಲಯ. ಚೀನಾದ ಜತೆಗೆ ಇದು 1,129 ಕಿ.ಮೀ. ಗಡಿ ಪ್ರದೇಶವನ್ನು ಹೊಂದಿದೆ. 1962ರ ಯುದ್ಧಕ್ಕೆ ಮೂಲ ಕಾರಣವಾಗಿದ್ದೇ ಚೀನಾ ಇದನ್ನು ತನ್ನ ಭೂಭಾಗವೆಂದು ಪ್ರತಿಪಾದಿಸಿದ್ದು. ಆಗ ಕೆಲವು ಪ್ರದೇಶ ಭಾರತದ ಕೈ ತಪ್ಪಿ ಹೋಗಿತ್ತು. ಹೀಗಾಗಿಯೇ ವಾಸ್ತವ ನಿಯಂತ್ರಣ ರೇಖೆ ಎಂಬ ಹೊಸ ಶಬ್ದದ ಉತ್ಪತ್ತಿಯಾಯಿತು.
ಕೇಂದ್ರ ಭಾಗಕ್ಕೆ ಬಂದರೆ 4,600 ಕಿ.ಮೀ. ಎತ್ತರದಲ್ಲಿರುವ ದೋಕ್ಲಾಮ್. ಸಿಕ್ಕಿಂ ರಾಜ್ಯದ ಗಡಿ ಭಾಗದಲ್ಲಿರುವ ನಾತು ಲಾ ಪಾಸ್ ಮೂಲಕ ಈ ಭಾಗದ ಮೇಲೆ ಹಿಡಿತ ಸಾಧಿಸಲು ಚೀನಾ ಬಯಸಿದೆ. 2017ರಲ್ಲಿ ಭಾರತ-ಚೀನಾ ಯೋಧರ ನಡುವೆ ಚಿಕ್ಕ ಪ್ರಮಾಣದ ಸಂಘರ್ಷ ಬಿಟ್ಟರೆ ಈ ಭಾಗ ಯಾವತ್ತೂ ಶಾಂತಿಯುತವಾಗಿಯೇ ಇದೆ.
ಈಗ ಸಂಘರ್ಷದ ಕೇಂದ್ರ ಬಿಂದುವಾಗಿರುವ ಲಡಾಕ್, ಚೀನಾದ ಜತೆಗಿನ ಗಡಿಯ ಪಶ್ಚಿಮ ವಲಯಕ್ಕೆ ಬರುತ್ತದೆ. 5,300 ಮೀಟರ್ ಎತ್ತರದ ಈ ಭೂ ಪ್ರದೇಶವನ್ನು ಇತ್ತೀಚೆಗಷ್ಟೇ ಭಾರತ ಸರಕಾರ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಹಿಮಾಚಲ ಪ್ರದೇಶ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಇದನ್ನು ಕೇಂದ್ರಾಡಳಿತ ಪ್ರದೇಶವೆಂದು ನರೇಂದ್ರ ಮೋದಿ ಸರಕಾರ ಘೋಷಿಸಿದ ಕೂಡಲೇ, ಪಾಕಿಸ್ತಾನ ಸ್ನೇಹಿಯಾದ ಚೀನಾ ಕೊತ ಕೊತನೆ ಕುದಿಯಲಾರಂಭಿಸಿತು. ಅದಾದ ಬಳಿಕವೇ ಆರಂಭವಾಗಿದ್ದು, ಕೆಂಪು ರಾಷ್ಟ್ರದ ಈ ಹೊಸ ಪ್ರಹಸನ. ಪಂಗಾಗ್ ತ್ಸು ಸರೋವರ, ಗುಲ್ವಾನ್ ಕಣಿವೆ ದೆಪ್ಸಂಗ್, ಡೆಮ್ಚಕ್ ಪ್ರದೇಶದಲ್ಲಿ ಚೀನಿ ಯೋಧರು ಬಂಕರ್ ರಚಿಸಿ, ಶಸ್ತ್ರ ಸಜ್ಜಿತ ವಾಹನಗಳು ಮತ್ತು ಮದ್ದು ಗುಂಡುಗಳನ್ನು ಸಾಗಿಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಭಾರತ ಈ ಭಾಗದಲ್ಲಿ ಹೆದ್ದಾರಿ, ವಿಮಾನ ನಿಲ್ದಾಣ (ಯುದ್ಧ ವಿಮಾನ) ಸೇರಿದಂತೆ ಹಲವು ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಿತು. ಆಗಲೇ ಆರಂಭವಾಗಿದ್ದು ಮೊದಲ ಹಂತದ ಸಂಘರ್ಷ.
ಕಾಶ್ಮೀರದಲ್ಲೂ ಹಸ್ತಕ್ಷೇಪ
ಜಮ್ಮು-ಕಾಶ್ಮೀರ ವಿವಾದ ಎಲ್ಲರಿಗೂ ತಿಳಿದಿದ್ದೇ. ಭಾರತ-ಪಾಕಿಸ್ತಾನ ನಡುವೆ ಎರಡು ಪೂರ್ಣ ಪ್ರಮಾಣದ ಯುದ್ಧಗಳಿಗೆ ಕಾರಣವಾದ ಈ ವಿವಾದದ ಜತೆಗೆ ಕೂಡ ಚೀನಾದ ಕುಟಿಲ ನಂಟಿದೆ. ಕಾಶ್ಮೀರದ ತೀರಾ ಚಿಕ್ಕ ಭಾಗವಾದ ಅಕ್ಸೈ ಚಿನ್ ಎಂದು ಕರೆಯಲ್ಪಡುವ ಪ್ರದೇಶದ ಮೇಲೆ ಚೀನಾ ನಿಯಂತ್ರಣ ಹೊಂದಿದೆ ಎಂಬುದು ಇಲ್ಲಿ ಸ್ಮರಣಾರ್ಹ.