ಭಾರತ-ಚೀನಾ ಗಡಿ ಪ್ರದೇಶ (ವಾಸ್ತವ ನಿಯಂತ್ರಣ ರೇಖೆ)ದಲ್ಲಿ ದಿನೇ ದಿನೇ ಪ್ರಕ್ಷುಬ್ಧ ಪರಿಸ್ಥಿತಿ ಹೆಚ್ಚುತ್ತಿದೆ. ಗುರುವಾರ ಸೆ. 10ರಂದು ಅತ್ಯಾಧುನಿಕ ರಫಲ್ ಯುದ್ಧ ವಿಮಾನ ಭಾರತೀಯ ಸೇನೆಯ ಬತ್ತಳಿಕೆಯನ್ನು ಸೇರಿದೆ. ಹೀಗಾಗಿ ರಫಲ್ ಯುದ್ಧ ವಿಮಾನ ಮತ್ತು ಚೀನಾದ ಇತ್ತೀಚಿನ ನಡವಳಿಕೆಯನ್ನು ಒಂದಿಷ್ಟು ಅವಲೋಕನ ಮಾಡಬೇಕಾಗುತ್ತದೆ.
ಈಗಾಗಲೇ ಟುಟು ರೆಜಿಮೆಂಟ್ ಯೋಧರನ್ನು ನಿಯೋಜಿಸಿರುವ ಭಾರತ ಈ ಮೂಲಕ ಚೀನಾದ ಷಡ್ಯಂತ್ರಕ್ಕೆ ತಕ್ಕ ಪ್ರತ್ಯುತ್ತರವನ್ನೇ
ನೀಡಿದೆ. ಮಾತ್ರವಲ್ಲ ಕಾರ್ಗಿಲ್ ಯುದ್ಧದ ಸಮಯದಲ್ಲಿ ಆದ ತಪ್ಪು ಮರುಕಳಿಸದಂತೆ ಮಾಡಿಕೊಂಡಿದೆ. ಆಗ ಪಾಕಿಸ್ತಾನ ಪಡೆಗಳು
ರಹಸ್ಯವಾಗಿ ಕಾರ್ಗಿಲ್ ಬೆಟ್ಟದ ತುದಿಯನ್ನು ತಲುಪಿಯಾಗಿತ್ತು. ಅದನ್ನು ಮರು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆ ಮುಂದುವರಿದರೆ ಮೇಲೇರುತ್ತಿದ್ದಂತೆಯೇ ಮೇಲಿನಿಂದ ಸುಲಭವಾಗಿ ನಮ್ಮ ಯೋಧರನ್ನು ಟಾರ್ಗೆಟ್ ಮಾಡುತ್ತಿತ್ತು. ಹೀಗಾಗಿಯೇ ಕಾರ್ಗಿಲ್
ಯುದ್ಧ ವಿಜಯಕ್ಕೆ ಭಾರತ ಹರ ಸಾಹಸ ಮಾಡಲೇಬೇಕಾಯಿತು. ಹಲವು ಯೋಧರು ಬಲಿದಾನಗೈಯಬೇಕಾಯಿತು.
ಕಲಿತ ಪಾಠ
ಆದರೆ ಕಾರ್ಗಿಲ್ ಯುದ್ಧದಿಂದ ಭಾರತ ಪಾಠ ಕಲಿತಿದೆ. ಹೀಗಾಗಿಯೇ ಲಡಾಕ್ ವಲಯದಲ್ಲಿ ಚೀನಾ ಸೇನೆಯು ಮುಂದುವರಿಯುತ್ತಿದ್ದಂತೆಯೇ
ನಮ್ಮ ಯೋಧರು ಆಯಕಟ್ಟಿನ ಮತ್ತು ಹಿಮಚ್ಛಾದಿತ ಪರ್ವತ ಶ್ರೇಣಿಯ ಎತ್ತರದ ಪ್ರದೇಶವಾದ (ಫಿಂಗರ್-2 ಮತ್ತು 3 ಹಾಗೂ 4, 8) ಪಾಂಗಾಂಗ್ ತ್ಸು ಮೇಲೆ ಹಿಡಿತ ಸಾಧಿಸಿದೆ. ತಡೆಯೊಡ್ಡಲು ಬಂದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಮೇಲೆ ಗುಂಡು ಹಾರಿಸಲು
ಹಿಂಜರಿಯಲಿಲ್ಲ. ಅದಕ್ಕಾಗಿ ವಾಸ್ತವ ನಿಯಂತ್ರಣ ರೇಖೆಯನ್ನೂ ದಾಟಿ ಮುಂದೆ ಹೋಗಿತ್ತು ಎಂದು ಹೇಳಲಾಗುತ್ತಿದೆ. ಈ ಕುರಿತು ರಾಜತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಉಭಯ ದೇಶಗಳು
ತಮ್ಮದೇ ವಾದ ಮುಂದಿಡುತ್ತಿವೆ .
ಆದರೆ ಭಾರತೀಯ ಸೇನೆ ಆ ಪ್ರದೇಶವನ್ನು ವಶಪಡಿಸಿಕೊಂಡು ತಳವೂರಿದ್ದು ಮಾತ್ರ ನಿಜ. ಸುಮಾರು 8 ಕಿ.ಮೀ. ಉದ್ದದ ಈ ಭಾಗದಲ್ಲಿ ತನ್ನ ಪಾರಮ್ಯ ಸಾಧಿಸುವ ಮೂಲಕ ಚೀನಾಕ್ಕೆ ಭಾರತ
ಸರಿಯಾದ ತಿರುಗೇಟು ನೀಡಿದೆ. ಇದರಿಂದಾಗಿ ಚೀನಿಯರು ಬೆಟ್ಟ ಹತ್ತುವ ಸಾಹಸ ಮಾಡುವ ಹಾಗಿಲ್ಲ. ಹಾಗೇನಾದರೂ ಆದರೆ
ಮೇಲಿನಿಂದ ಸುಲಭವಾಗಿ ಭಾರತೀಯ ಯೋಧರು, ಕೆಂಪು ಸೇನೆಯನ್ನು ಟಾರ್ಗೆಟ್ ಮಾಡಲು ಸಾಧ್ಯವಾಗುತ್ತದೆ ಮಾತ್ರವಲ್ಲ
ಅದರ ಚಲನವಲನವನ್ನು ಕೂಡ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಇದಲ್ಲದೆ ಪರ್ವತ ಪ್ರದೇಶದ ಯುದ್ಧದಲ್ಲಿ ಬಹುಮುಖ್ಯ ಪಾತ್ರ ವಹಿಸಬಹುದಾದ ದೆಪ್ಸಂಗ್- ದೌತ್ ಬೆಗ್ ಆಲ್ಡೀ ಎಂಬ ಆಯಕಟ್ಟಿನ ಪ್ರದೇಶದಲ್ಲಿ ಚೀನಾ ಈಗಾಗಲೇ ಸೇನಾ ಪಡೆಯನ್ನು ನಿಯೋಜಿಸಲು ಆರಂಭಿಸಿದೆ. ಇದಕ್ಕೆಪ್ರತಿಯಾಗಿ ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನುಕಟ್ಟೆಚ್ಚರದಿಂದ
ಭಾರತ ನೋಡುತ್ತಿದ್ದು, ಇದಕ್ಕಾಗಿ ಈಗಾಗಲೇ ಅಲ್ಲಿಗೆ ಸಮೀಪದ ಪ್ರದೇಶಕ್ಕೇ ಯುದ್ಧ ಟ್ಯಾಂಕರ್ ಗಳನ್ನು ರವಾನಿಸಿದೆ.
ಸುಮಾರು 14-17 ಸಾವಿರ ಅಡಿ ಎತ್ತರದ ಈ ಪರ್ವತ ಪ್ರದೇಶದಲ್ಲಿ ಏಳು ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದೆ. ಈ ಮೂಲಕ ಚೀನಾ ನಡೆಸುವ ಪ್ರತಿಯೊಂದು ವಿದ್ಯಮಾನ ಭಾರತಕ್ಕೆ ಗೊತ್ತಾಗಲಿದೆ.
ಷಡ್ಯಂತ್ರಕ್ಕೆ ಪ್ರತಿತಂತ್ರ
ಚೀನಾದ ಷಡ್ಯಂತ್ರದ ಅರಿವು ಭಾರತಕ್ಕೆ ಇದ್ದೇ ಇದೆ. ಹೀಗಾಗಿಯೇ ಇಸ್ರೇಲ್ ನಿಂದ ಅತ್ಯಾಧುನಿಕ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿದೆ. ಕಳೆದ ಜೂನ್ 27ರಂದೇ ಈ ಕುರಿತ ಒಪ್ಪಂದವು ಅಂತಿಮ ರೂಪ ಪಡೆದಿದೆ. ಈ ಆಧುನಿಕ ರಕ್ಷಣಾ ವ್ಯವಸ್ಥೆಯು ಶತ್ರು ರಾಷ್ಟ್ರದ ಕಡೆಯಿಂದ ಬರುವ ಯಾವುದೇ ವಿಮಾನ, ಕ್ಷಿಪಣಿ, ದ್ರೋಣ್ ಸೇರಿದಂತೆ ಎಲ್ಲಾ ವಾಯು ಮಾರ್ಗದಲ್ಲಿ
ಎದುರಾಗಬಹುದಾದ ದಾಳಿಯನ್ನು ಅರ್ಧ ದಾರಿಯಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇನ್ನೂ ಹೆಸರಿಡದ ಈ ರಕ್ಷಣಾ ವ್ಯವಸ್ಥೆಯನ್ನು ಲಡಾಕ್ ವಲಯದಲ್ಲಿ ಅಳವಡಿಸಲು ಭಾರತ- ಇಸ್ರೇಲ್ ಒಪ್ಪಂದಕ್ಕೆ ಬಂದಿವೆ ಎಂದು ರಕ್ಷಣಾ ಸಚಿವಾಲಯದ ಉನ್ನತ
ಮೂಲಗಳು ಸ್ಪಷ್ಟಪಡಿಸಿವೆ.
ಇದೇನಾದರೂ ಸಾಕಾರವಾದರೆ, ಚೀನಾದ ಇಂತಹ ಏರ್ ಬೋರ್ನ್ ಮ್ಯುನಿಶನ್ಸ್ (ಯುದ್ಧ ಸಾಮಗ್ರಿ) ಡಿಸ್ಪೆನ್ಸರ್ ಎಂಬ ಅಸ್ತ್ರ ಅರ್ಧ ದಾರಿಯಲ್ಲೇ ಅಂದರೆ ಭಾರತದ ಗಡಿ ಪ್ರವೇಶಿಸುವ ಮೊದಲೇ ಛಿದ್ರವಾಗುವುದರಲ್ಲಿ ಸಂಶಯವಿಲ್ಲ.
ಸದ್ಯದ ಮಟ್ಟಿಗೆ ಭಾರತದ ವಾಯು ಪಡೆ ಎಸ್ಪಿವೈಡಿಇಆರ್ ಎಂಬ ಭೂಮಿಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ.
ಉತ್ತರ ಮತ್ತು ಪಶ್ಚಿಮ ಗಡಿ ಭಾಗದಲ್ಲಿ ಇದನ್ನು ಈಗಾಗಲೇ ನಿಯೋಜಿಸಲಾಗಿದೆ. ಈಗಾಗಲೇ ಪೂರ್ವ ಕರಾವಳಿಯ ಸೂರ್ಯಾಲಂಕಾ ವಾಯು ನೆಲೆಯಿಂದ ಇದನ್ನು ಯಶಸ್ವಿಯಾಗಿ ಪರೀಕ್ಷೆ
ನಡೆಸಲಾಗಿದೆ. ಬಾಲಕೋಟ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ ಕ್ಷಿಪಣಿ ವ್ಯವಸ್ಥೆ ಇದು ಎಂಬುದು ಇಲ್ಲಿ ಗಮನಾರ್ಹ.
ಈಗ ಬರಾಕ್-8 ಎಂಬ ವೈಮಾನಿಕ ರಕ್ಷಣಾ ವಸ್ಥೆಯನ್ನು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿದ್ದು, ಸದ್ಯವೇ ಅದು ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.ಎಲ್ಆರ್ ಎಸ್ಎಂ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ನೆಲ, ಆಕಾಶ ಮತ್ತು ಸಮುದ್ರ ವಲಯಗಳಲ್ಲೂ ದೇಶಕ್ಕೆ ರಕ್ಷಣೆ ನೀಡುತ್ತವೆ. ಇದಲ್ಲದೆ ಈಗಾಗಲೇ ಭಾರತವು ಅಮರಿಕದ ಪಿಎಸಿ-3, ಎನ್ ಎಎಸ್ ಎಎಂಎಸ್-2
ಮೊದಲಾದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಹೀಗಾಗಿ ಚೀನಾದ ಹೊಸ ದಾಳಿ ತಂತ್ರಕ್ಕೆ ಪ್ರತಿತಂತ್ರವಾಗಿ ಭಾರತ ಇನ್ನಷ್ಟು ಅತ್ಯಾಧುನಿಕ ಶಸ್ತ್ರಗಳನ್ನು ಹೊಂದಿದೆ ಎಂದು ಹೇಳಬಹುದು.
ಚೀನಾದ ತಂತ್ರ
ಚೀನಾವು ಈಗ ಏರ್ ಬೋರ್ನ್ ಮ್ಯುನಿಶನ್ಸ್ (ಯುದ್ಧ ಸಾಮಗ್ರಿ) ಡಿಸ್ಪೆನ್ಸರ್ ಎಂಬ ದ್ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಆಕಾಶದಿಂದ ಭೂಮಿಗೆ ಪ್ರಯೋಗಿಸಲ್ಪಡುವ ಕ್ಷಿಪಣಿಯಾಗಿದ್ದು, ಯುದ್ಧ ವಿಮಾನದ ಮೂಲಕ ರವಾನೆಯಾಗುತ್ತದೆ. ವೈರಿಯ ವಾಯು ನೆಲೆಗಳ ಮೇಲೆ ಏಕ ಕಾಲದಲ್ಲಿ ನೂರಾರು ಬಾಂಬುಗಳನ್ನು ಹಾಕುವ ಸಾಮರ್ಥ್ಯ ಹೊಂದಿದೆ.
ಇದರಿಂದ ಶತ್ರು ದೇಶದ ವಾಯು ನೆಲೆಯಲ್ಲಿ ಇರುವ ಜೆಟ್ ವಿಮಾನಗಳು ಧ್ವಂಸಗೊಳ್ಳುವ ಮೂಲಕ ವಾಯು ದಾಳಿಯ ಸಾಮರ್ಥ್ಯವನ್ನು ಶೂನ್ಯಕ್ಕೆ ಇಳಿಸುವ ಸಾಧ್ಯತೆಯಿದೆ.
ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ಈ ಕ್ಷಿಪಣಿಯು ಸುಮಾರು 500 ಕೆ.ಜಿ. ತೂಕದ ಬಾಂಬ್ ಗಳನ್ನು ಹೊತ್ತೊಯ್ಯಬಲ್ಲುದು. ಒಮ್ಮೆ ಕ್ಷಿಪಣಿಯಿಂದ ಬೇರ್ಪಟ್ಟರೆ ಆಗ ನಾನಾ ಗುರಿಗಳಿಗೆ ಬಾಂಬು ಸಿಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ರಾಡಾರ್ ಕಣ್ಣಿಗೂ ಕಾಣದ ರೀತಿಯಲ್ಲಿ ಇದು ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.
ಜೂನ್ ನಿಂದಲೇ ಈ ನಿಟ್ಟಿನಲ್ಲಿ ಜೂನ್ ನಿಂದಲೇ ಪೈಲಟ್ ಗಳ ತರಬೇತಿ ಕಾರ್ಯಕ್ರಮ ಆರಂಭವಾಗಿದೆ ಎಂದು ತಿಳಿದು ಬಂದಿದೆ.
ಅದರಲ್ಲೂ ಮುಖ್ಯವಾಗಿ ಶತ್ರುವಿನ ವಾಯುನೆಲೆ ಅಥವಾ ರಕ್ಷಣಾ ನೆಲೆಯನ್ನು ಪ್ರವೇಶಿಸುವ ಮೊದಲೇ ಅಂದರೆ ಸುಮಾರು 60 ಕಿ.ಮೀ.
ದೂರದಿಂದಲೇ ಇದು ಬಾಂಬು ಹಾಕಬಲ್ಲುದು ಎಂಬುದು ಇಲ್ಲಿ ಗಮನಾರ್ಹ.
ಹಾಗೆಂದು ಭಾರತ ಸುಮ್ಮನೆ ಕುಳಿತಿಲ್ಲ. ಈಗಾಗಲೇ ರಫಲ್ ಯುದ್ಧ ವಿಮಾನವು ಭಾರತದ ವಾಯು ಪಡೆಯ ಸಾಮರ್ಥ್ಯವನ್ನು ಹತ್ತಾರು ಪಟ್ಟು ಹೆಚ್ಚಿಸಿದೆ.
(ಚಿತ್ರ: ರಫಲ್ ಯುದ್ಧ ವಿಮಾನದ ಅಧಿಕೃತ ಸ್ವೀಕಾರ ಸಮಾರಂಭ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಇದ್ದಾರೆ)