ಇತ್ತೀಚೆಗಷ್ಟೇ ಕಾಂಗ್ರೆಸ್ 23 ನಾಯಕರು ಪ್ರಭಾರಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ನಾಯಕತ್ವ ಬದಲಾವಣೆಯನ್ನು ಒತ್ತಾಯಿಸಿದ್ದರು. ಬಳಿಕ ಅದೊಂದು ಅಘೋಷಿತ ಬಂಡಾಯವನ್ನು ಹತ್ತಿಕ್ಕಲಾಯಿತು ಬಿಡಿ. ಆದರೆ ಇದರ ಹಿಂದೆ ಇನ್ನಷ್ಟು ರಹಸ್ಯಗಳು ಅಡಗಿವೆ ಎಂದು ಈಗ ತಿಳಿದು ಬರುತ್ತಿವೆ.
ಇದೊಂದು ಸೌರವ್ಯೂಹ
ಕಾಂಗ್ರೆಸ್ ಪಕ್ಷವೆಂಬುದು ಒಂದು ರೀತಿಯಲ್ಲಿ ಸೌರವ್ಯೂಹವಿದ್ದಂತೆ. ಅಲ್ಲಿ ನವಗ್ರಹಗಳಲ್ಲದೆ ಅನೇಕ ಉಪಗ್ರಹಗಳು, ಕ್ಷುದ್ರಗ್ರಹಗಳು ಸುತ್ತುತ್ತಿವೆ. ಸೌರವ್ಯೂಹದಲ್ಲಿ ಸೂರ್ಯನೊಬ್ಬನೇ ಕೇಂದ್ರವಾಗಿದ್ದರೆ, ಕಾಂಗ್ರೆಸ್ ನಲ್ಲಿ ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೀಗೆ ಯಾರು ಕೇಂದ್ರವಾಗಬೇಕು ಎಂಬ ಜಿಜ್ಞಾಸೆ ಆರಂಭವಾಗಿದ್ದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ಅಂದರೆ ಅಲ್ಲೀಗ ತಾಯಿ-ಮಗ ಇವರಿಬ್ಬರ ಮಧ್ಯೆ ಯಾರ ಮೇಲೆ ನಿಷ್ಠೆ ತೋರಬೇಕು ಮತ್ತು ಅದರಿಂದ ತಮಗಾಗುವ ಲಾಭ ಏನು ಎಂಬ ಚಿಂತನೆ ಆರಂಭವಾಗಿದೆ ಎಂದೇ ಹೇಳಬೇಕಾಗುತ್ತದೆ.
ಹಿಂದಿನಿಂದಲೂ ನೆಹರು-ಗಾಂಧಿ ಕುಟುಂಬದ ಆಪ್ತವಲಯದಲ್ಲೇ ಭಟ್ಟಂಗಿತನ ಮಾಡುತ್ತಿದ್ದ ಹಳೆಯ ಹುಲಿಗಳು ಹೊಸ ಮುಖದ ಶೋಧನೆಗೆ ತೊಡಗಿರುವ ರಾಹುಲ್ ಗಾಂಧಿಯ ನಡೆಯಿಂದ ಕಂಗೆಟ್ಟಿದ್ದಾರೆ. ಮೋದಿ- ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ನಡೆಸುತ್ತಿರುವ ಹೊಸ ಮುಖಗಳ ಹುಡುಕಾಟ (ಉದಾ-ಯೋಗಿ ಆದಿತ್ಯನಾಥ್ ಅವರನ್ನು ಉ.ಪ್ರ. ಮುಖ್ಯಮಂತ್ರಿಯಾಗಿ ಆರಿಸಿದ್ದು, ಕರ್ನಾಟಕ ವಿಧಾನ ಪರಿಷತ್ ಗೆ ಅನಿರೀಕ್ಷಿತ ಮುಖಗಳನ್ನು ಆಯ್ಕೆ ಮಾಡಿದ್ದು)ವು ರಾಹುಲ್ ಗಾಂಧಿಯವರನ್ನು ಇಂತಹುದೇ ನಡೆಗೆ ಪ್ರೇರೇಪಿಸಿತ್ತು. ಆದರೆ, ಹಳೆ ಹುಲಿಗಳು ಬಿಡಬೇಕಲ್ಲ. ಇದಕ್ಕಾಗಿ ಇಂತಹದ್ದೊಂದು ಪತ್ರ ಅಭಿಯಾನವನ್ನು ಅರಂಭಿಸಿದವು.
ಸೋನಿಯಾ ನಿಷ್ಠರ ಪಡೆ
ಸೋನಿಯಾ ಗಾಂಧಿ ಬಣದಲ್ಲಿ ಹಳೆ ಹುಲಿಗಳಿಗೇ ಪ್ರಾಧಾನ್ಯ. ಮನಮೋಹನ್ ಸಿಂಗ್, ಪಿ. ಚಿದಂಬರಂ, ಜೈರಾಮ್ ರಮೇಶ್, ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ಎ. ಕೆ. ಆಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಅಶೋಕ್ ಗೆಲ್ಹೋಟ್, ಅಭಿಷೇಕ್ ಮನು ಸಿಂಘ್ವಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇವರ ಪೈಕಿ ನಿಜವಾದ ಸ್ಕಾಲರ್ ಆಗಿರುವ ಮನಮೋಹನ್ ಸಿಂಗ್, ಸೋನಿಯಾ ನಿಷ್ಠರಾದರೂ ರಾಜಕಾರಣ ತಂತ್ರ ನಿಪುಣರಲ್ಲ. ಇವುಗಳ ಮಧ್ಯೆ, ಗುಲಾಂ ನಬಿ ಆಜಾದ್, ಕಬಿಲ್ ಸಿಬಲ್, ಆನಂದ್ ಶರ್ಮಾ, ಕರ್ನಾಟಕದವರೇ ಆದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಸೇರಿದಂತೆ ಪತ್ರಕಾರರ 23 ನಾಯಕರಿಗೆ ಸ್ಥಾನವಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯೊಬ್ಬರೇ ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಸಾಧನೆ ಮಾಡಿದವರು ಎಂದರೆ ಅತಿಶಯೋಕ್ತಿಯಲ್ಲ.
ರಾಹುಲ್ ಬಣ
ರಾಹುಲ್ ಗಾಂಧಿಯವರ ನಿಷ್ಠರತ್ತ ಗಮನ ಹರಿಸಿದರೆ ಮುಖ್ಯವಾಗಿ ಕೇಳಿ ಬರುತ್ತಿರುವ ಹೆಸರು ಸುರ್ಜೇವಾಲಾ, ವೇಣುಗೋಪಾಲ್. ಇವರನ್ನು ಹೊರತು ಪಡಿಸಿದರೆ, ರಾಹುಲ್ ಗಾಂಧಿಯವರ ಟ್ವಿಟರ್ ಅಕೌಂಟ್ ನ ಗೇಟ್ ಕೀಪರ್ ಎಂದೇ ಹೆಸರಾಗಿರುವ ನಿಖಿಲ್ ಆಳ್ವ (ಮಾರ್ಗರೇಟ್ ಆಳ್ವ ಪುತ್ರ), ಮಾಜಿ ಹೂಡಿಕೆ ತಜ್ಞ ಅಲಂಕಾರ್ ಸವಾಯಿ, ವ್ಯೂಹಾತ್ಮಕ ಸಲಹೆಗಾರ ಸಚಿನ್ ರಾವ್, ಆಕ್ಸ್ ಫರ್ಡ್ ವಿವಿ ಖ್ಯಾತಿಯ ಕೌಶಲ್ ಕಿಶೋರ್ ವಿದಾರ್ಥೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕಾಲದಲ್ಲಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದ ಸ್ಯಾಮ್ ಪಿತ್ರೋಡ (ಅಮೆರಿಕದಲ್ಲಿ ಭಾರತೀಯ ಸಂಜಾತರ ಜತೆಗಿನ ಸಂವಾದ ಕಾರ್ಯಕ್ರಮ ಏರ್ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ಪಿತ್ರೋಡ ವಹಿಸಿದ್ದರು).
ಆತಂಕ ಆರಂಭ
ಯಾವಾಗ ರಾಹುಲ್ ಗಾಂಧಿಯವರು (ಅಧ್ಯಕ್ಷರಾಗಿದ್ದ ಸಂದರ್ಭ) ಕೌಶಲ್, ಸವಾಯಿ, ಪಿತ್ರೋಡಾ, ಆಳ್ವ ಮೊದಲಾದವರನ್ನು ಎಐಸಿಸಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲು ಆರಂಭಿಸಿದರೋ ಆಗ ಹಳೆ ಹುಲಿಗಳಿಗೆ ನಡುಕ, ಆತಂಕ ಆರಂಭವಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೀಗಾಗಿ ಕೋರ್ ಟೀಮ್ ರಾಹುಲ್ ಗಾಂಧಿ ಎಂಬ ಹೊಸ ಬಣ ಕಾಂಗ್ರೆಸ್ ನಲ್ಲಿ ಹುಟ್ಟಿಕೊಂಡಿತು. ಅದರಲ್ಲಿ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಪುತ್ರ ಗೌರವ್ ಗೊಗೋಯ್, ಅಜಯ್ ಮಕನ್, ಸುಶ್ಮಿತಾ ದೇವ್ (ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ), ಶ್ರೀನಿವಾಸ ಬಿ.ವಿ, ತಮಿಳುನಾಡಿನಲ್ಲಿ ವೈಕೋ ಅವರನ್ನೇ ಸೋಲಿಸಿದ್ದ ಮಣಿಕಾ ಟಾಗೋರ್, ರಾಜಸ್ತಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಕರ್ನಾಟಕದ ಮಾಜಿ ಸಂಸದ ರಾಜೀವ್ ಗೌಡ ಹೀಗೆ ಯುವ ಪಡೆಯನ್ನೇ ರಚಿಸಿದ ರಾಹುಲ್, ಹಳೆ ಹುಲಿಗಳು ಮತ್ತು ಅವರ ಹಳಸಲು ಚಿಂತನೆಗಳನ್ನು ಹಿಂದಕ್ಕೆ ಹಾಕಿ, ಕಾಂಗ್ರೆಸ್ ಗೆ ಮತ್ತೆ ಜೀವ ಕಳೆ ನೀಡಲು ಮುಂದಾಗಿದ್ದರು. ಇದುವೇ ಪತ್ರಕಾರ ರಾಜಕಾರಣಿಗಳ ಕೋಪಕ್ಕೆ ಕಾರಣವಾಯಿತು.
ಹೀಗಾಗಿ ಸೋನಿಯಾ ಗಾಂಧಿಯವರ ಅನಾರೋಗ್ಯದ ನಡುವೆ ಅವರನ್ನು ಹೊರತು ಪಡಿಸಿ ರಾಹುಲ್ ಗಾಂಧಿ ಅಧ್ಯಕ್ಷ ಪಟ್ಟಕ್ಕೇರಿದರೆ ಖಚಿತವಾಗಿಯೂ ತಮಗೆ ಕಿಮ್ಮತ್ತೂ ಬೆಲೆ ಸಿಗುವುದಿಲ್ಲ ಎಂಬ ಆತಂಕ ಅವರಲ್ಲಿ ಉಂಟಾಗಿದ್ದೇ ಈ ಪತ್ರ ವ್ಯವಹಾರದ ರಾಜಕಾರಣಕ್ಕೆ ಕಾರಣ ಎಂದೇ ಹೇಳಬೇಕಾಗುತ್ತದೆ.
ಹಳೇ ಹುಲಿಗಳ ಅಧಿಕಾರ ಲಾಲಸೆ, ಜೊತೆಗೆ ಇಬ್ಬರಿಗೂ ಜನರ ನಾಡಿ ಮಿಡಿತದ ಅರಿವಿಲ್ಲ.ಹೊಸಬರಿಗೆ ಅವಕಾಶವಿತ್ತರೆ ಮುಂದೆ ತಮ್ಮ ಮಾತು ನಡೆಯೋದೇ ಇಲ್ಲ ಅಂತ ಗೊತ್ತು ಅದಕೆ ಇಂತಹ ಘಟನೆಗಳು ನಡೀತಾ ಇರುತ್ತದೆ