29.3 C
Karnataka
Sunday, September 22, 2024

    ತಿರುಮಲೇಶರೆಂಬ ಸವ್ಯಸಾಚಿಗೆ…

    Must read

    ತಿರುಮಲೇಶ್ ಕನ್ನಡದ ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳಬಹುದಾದ ಕವಿ. ಅವರು ಕವಿ, ಕಥೆಗಾರ, ಅಂಕಣಕಾರ, ಭಾಷಾ ಶಾಸ್ತ್ರಜ್ಞ, ನಾಟಕಕಾರ ಏನೆಲ್ಲವೂ ಹೌದು.. ಈ ಸೆಪ್ಟೆಂಬರ್ ಹನ್ನೆರಡಕ್ಕೆ ಅಂದರೆ ಇಂದು ಎಂಬತ್ತು ವರ್ಷಗಳನ್ನು ಪೂರೈಸಲಿರುವ ತಿರುಮಲೇಶರೀಗ ಹೈದರಾಬಾದಿನಲ್ಲಿ ವಾಸ. ಅವರ ಅಕ್ಷಯಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ವಿಫುಲ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ.ಈ ಹೊತ್ತಿನಲ್ಲಿ ಅವರ ಸಾಹಿತ್ಯ ಲೋಕದಲ್ಲೊಂದು ಸುತ್ತು

    ಆಶಾ ಜಗದೀಶ್

    ತಿರುಮಲೇಶ್ ಎನ್ನುವ ಹೆಸರಿಗೇ ಒಂದು ಆಕರ್ಷಣೆ ಬಂದಾಗಿತ್ತು. ನಾನಾಗಿನ್ನು ಸಾಹಿತ್ಯ ಪ್ರಪಂಚದಲ್ಲಿ ಕಣ್ಣುಬಿಡುತ್ತಿದ್ದೆ. ಅವರ ಕವಿತೆಯೊದು ಎಲ್ಲೇ ಬರಲಿ, ಅವರ ಲೇಖನವೊಂದು ಎಲ್ಲೇ ಪ್ರಕಟವಾಗಲಿ ಬೆಲ್ಲದ ತುಂಡನ್ನು ಕಂಡಂತೆ ಹಿಡಿದು ಕೂರುತ್ತಿದ್ದೆ. ಕವಿತೆ ಎಂದರೆ ಏನು ಹೇಗೆ ಅಂತ ಕಲಿಯಲು ತಿಳಿಯಲು ಶುರುಮಾಡಿದ್ದೇ ಅವರ ಕವಿತೆಗಳಿಂದ.

    ಅವರ ಅಕ್ಷಯ ಕವಿತೆಗಳನ್ನು ಓದುತ್ತಾ ಓದುತ್ತಾ ಅಚ್ಚರಿಗೊಳ್ಳುತ್ತಿದ್ದೆ ಹಲವು ಸಲ. ಅಕಗಷಯ ಕಾವ್ಯ ಒಂದಿ ರೀತಿಯಲ್ಲಿ ಬದುಕಿನ ಹಲವು ಆಯಾಮಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಅವರ ಕವಿತೆಗಳು ಸರಳ ಮತ್ತು ಸುಂದರ. ಒಂದು ಚಂದದ ಧ್ಯಾನದ ಫಲ. ಅವರ “ಆಳ ನಿರಾಳ” ಎನ್ನುವ ಅಂಕಣ ಬರಹದ ಆಳ ಮತ್ತು ವ್ಯಾಪಕತೆ ಹರವುಳ್ಳದ್ದು. ಮತ್ತೆ ಅವರ ಕಥೆಗಳದ್ದು ಮತ್ತೊಂದೇ ತೂಕ. ಅದೊಂದು ಅದ್ಭುತ ಲೋಕ.

    ತಿರುಮಲೇಶರ ಬಿಡಿ ಕಥೆಗಳನ್ನು ಮಾತ್ರ ಓದಿ ಗೊತ್ತಿದ್ದ ನನಗೆ ಅಚಾನಕ್ ಒಂದು ದಿನ ಅವರ “ಜಾಗುವಾ ಮತ್ತು ಇತರರು” ಎನ್ನುವ ಸಂಕಲನ ನನ್ನ ಕಣ್ಣಿಗೆ ಬಿತ್ತು. ಅವರನ್ನು ಮತ್ತಷ್ಟು ಒಳನೋಟಗಳಿಂದ ಅರಿಯಲು ಸಾಧ್ಯವಾಯಿತು. ಸುಮಾರು ಹದಿನೈದು ಕಥೆಗಳಿರುವ ಈ ಸಂಕಲನದ ಒಂದೊಂದು ಕಥೆಯೂ ತನ್ನ ವಸ್ತು ಮತ್ತು ರಾಚನಿಕ ದೃಷ್ಟಿಯಿಂದ ನಮ್ಮನ್ನು  ಸೆಳೆಯುತ್ತಾ ಹೋಗುತ್ತವೆ. ರಸ್ಕಿನ್ ಬಾಂಡರದೂ ಒಂದು “Tha bent double begger” ಎನ್ನುವ ಭಿಕ್ಷುಕನೊಬ್ಬನ ಬಗೆಗಿನ ಕಥೆಯಿದೆ. ಎಲ್ಲರೂ ಸಾಮನ್ಯ ಭಿಕ್ಷುಕ ಎಂದು ಪರಿಗಣಿಸುವ ವ್ಯಕ್ತಿಯೊಬ್ಬ ತನ್ನ ವಿಶಿಷ್ಟ ನಡವಳಿಕೆ ಮತ್ತು ಮಾತುಕತೆಯಿಂದ ಜೀವನ ದರ್ಶನ ಮಾಡಿಸುತ್ತಾನೆ. ಕೊನೆಯಲ್ಲಿ ಲೇಖಕರಿಗೆ ಕಾಡುವುದು ನಿಜವಾದ ಭಿಕ್ಷುಕ ಯಾರು ಎನ್ನುವುದು… ಈ ಕಥೆ ನನ್ನನ್ನು ಬಹಳ ಕಾಡಿತ್ತು. 

    ಅದೇ ರೀತಿಯಲ್ಲಿ ತಿರುಮಲೇಶರ “ಜಾಗುವಾ ಮತ್ತು ಇತರರು” ಸಂಕಲನದ “ಇಬ್ಬರು ಹುಚ್ಚರು” ಎನ್ನುವ ಕಥೆಯೂ ನನ್ನನ್ನು ಬಹಳವಾಗಿ ಕಾಡಿತ್ತು. ಈ ಕಥೆಯಲ್ಲಿ ಬರುವ ಸದಾನಂದ ತನಗೇ ಗೊತ್ತಿಲ್ಲದ ತನ್ನ ನಿರೀಕ್ಷೆಗಳ ಸ್ಪಷ್ಟತೆ ಇಲ್ಲದೆ ಆ ಕ್ಷಣಕ್ಕೆ ತಲೆ ಏರಿದ ಹುಚ್ಚು ಕುದುರೆಯನ್ನು ಸವಾರಿ ಮಾಡುವಂಥವನು. ಅವನಿಗೆ ಸ್ವಾತಂತ್ರ್ಯ ಬೇಕು. ಆದರೆ ಆ ಸ್ವಾತಂತ್ರ್ಯ ಯಾವುದೆನ್ನುವ ಸ್ಪಷ್ಟತೆ ಅವನಿಗಿಲ್ಲ. ಆ ಆ ಇಚ್ಛೆ ಅವನನ್ನು ಹುಚ್ಚನನ್ನಾಗಿಸುತ್ತದೆ. ವಿಚಿತ್ರ ಕೆಲಸಗಳನ್ನು ಅವನಿಂದ ಮಾಡಿಸುತ್ತದೆ. ಅವನು ನಿಜವಾಗಿಯೂ ಹುಚ್ಚನಾ ಅಥವಾ ಹುಚ್ಚನಂತೆ ವರ್ತಿಸುತ್ತಿದ್ದಾನಾ ಎನ್ನುವುದು ಅವರರವರ ತರ್ಕಕ್ಕೆ ನಿಲುಕಿದ್ದು. ಆದರೆ ಸಮಾಜಕ್ಕೆ ಹಾಗಲ್ಲ ಹುಚ್ಚನಾಗಲೀ ಹುಚ್ಚನಂತೆ ವರ್ತಿಸುವವನಾಗಲೀ ಯಾರಾದರೂ ಸರಿ ತಮ್ಮ ವಿಚಿತ್ರ ಕುತೂಹಲಕ್ಕೆ, ತಮ್ಮ ಹೀಗಳಿಕೆಗೆ, ವಿನೋದಕ್ಕೆ, ಕುಚೋದ್ಯಕ್ಕೆ… ಈಡಾಗುವ ಒಂದು ಪ್ರಾಣಿ ಸಿಕ್ಕಿದರೆ ಸಾಕು. ಅವನ ಯಾವ ಬಗೆಯ ಸ್ವಾಸ್ಥ್ಯದ ಕಾಳಜಿ ಅವರಿಗೆ ಬೇಕಿಲ್ಲ.

    ಇಲ್ಲಿ ಒಂದು ಸಂದರ್ಭ ಏರ್ಪಡುತ್ತದೆ. ಅದು ಸದಾನಂದ ಹುಚ್ಚ ಸದ್ದು ಆಗಲು ಅನುಕೂಲಕರವೂ ಆಗಿರುತ್ತದೆ. ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಆಯಿತೆನ್ನುವ ಹಾಗೆ. ಸದಾನಂತ ತನ್ನ ಹುಚ್ಚು ಅವತಾರದಿಂದ ತಾನು ಯಾವ ಸ್ವಾತಂತ್ರ್ಯವನ್ನು ಬಯಸಿದ್ದನೋ ಅದನ್ನು ಪಡೆಯುತ್ತಾನೆ. ಕುಟುಂಬದ ಜವಾಬ್ದಾರಿ ನಿರ್ವಹಿಸಲಾಗದ, ದುಡಿದು ಕುಟುಂಬವನ್ನು ಸಾಕಲಾಗದ ಹೇಡಿಯೊಬ್ಬ ಎತ್ತುವ ಹೊಸ ಅವತಾರವೇ ಈ ಹುಚ್ಚನ ಅವತಾರ ಅಂತಲೂ ಅನಿಸುತ್ತದೆ.  
    ಈ ಮಧ್ಯೆ ಆ ಊರಿಗೆ ಮತ್ತೊಬ್ಬ ಹುಚ್ಚನ ಆಗಮನವಾಗುತ್ತದೆ. ಇವನ ಚೇಷ್ಟೆ ಕುಚೇಷ್ಟೆಗಳು ಸದ್ದೂವಿನ ಚೇಷ್ಟೆಗಳ ಹದ್ದನ್ನೂ ಮೀರುವಂತಿರುತ್ತವೆ. ಈಗ ಸದ್ದು ಕಂಗಾಲಾಗಿಬಿಡುತ್ತಾನೆ. ಪೈಪೋಟಿಗೆ ಬೀಳುತ್ತಾನೆ. ಕೊನೆಗೆ ಅವನೊಂದಿಗೆ ಸ್ಪರ್ಧಿಸಲಾಗದೆ ಅವನ ಬಳಿಗೆ ಸಂಧಾನಕ್ಕೆ ಹೋಗುತ್ತಾನೆ. ಆಗ ಅವರಿಬ್ಬರ ನಡುವೆ ನಡೆಯುವ ಮಾತುಕತೆ ಸ್ವಾರಸ್ಯಕರವಾಗಿದೆ. ಒಂದು ಹಂತದಲ್ಲಿ ಈ ಇಬ್ಬರೂ ಹುಚ್ಚರೇ ಅಲ್ಲ. ಹುಚ್ಚರಂತೆ ನಟಿಸುತ್ತಿದ್ದಾರೆ ಎಂದು ಓದುವ ಪ್ರತಿಯೊಬ್ಬರಿಗೂ ಗಾಢವಾಗಿ ಅನ್ನಿಸಿಬಿಡುತ್ತದೆ. 
    ಕೊನೆಗೆ ಹೊಸ ಹುಚ್ಚ ಇವನಿಗೆ “ನೀನು ನಿಜವಾದ ಹುಚ್ಚನಲ್ಲ, ನಿನಗೆ ಹೆಸರಿದೆ, ಕುಟುಂಬವಿದೆ, ಮಲಗಲು ಮನೆಗೆ ಹೋಗುತ್ತೀ… ಆದರೆ ನಾನು ನಿಜವಾದ ಹುಚ್ಚ, ನನಗೆ ಹೆಸರು ಮನೆ ಏನೂ ಇಲ್ಲ” ಎನ್ನುತ್ತಾನೆ. ಅಂದು ರಾತ್ರೋ ರಾತ್ರಿ ಸದ್ದು ಊರಿನಿಂದ ಮಾಯವಾಗುತ್ತಾನೆ. ಒಂದಾರು ತಿಂಗಳು ಕಳೆದು ಮನೆಗೆ ಬರುವ ಸದ್ದುವಿಗೆ ಹುಚ್ಚು ಇಳಿದಿರುತ್ತದೆ. ಬಹುಶಃ ಅವನಿಗೆ ಬದುಕಿನ ಕರಾಳತೆ ಅರ್ಥವಾಗಿರಬೇಕು… ಇದನ್ನೆಲ್ಲಾ ಬಿಟ್ಟು ಮರ್ಯಾದೆಯಿಂದ ಬದುಕೋಣ ಎನಿಸಿರಬೇಕು… ಇವನು ಊರಿಗೆ ಮರಳಿ ಬರುವ ಹೊತ್ತಿಗೆ, ಆ ಹೊಸ ಹುಚ್ಚನೂ ಕಣ್ಮರೆಯಾಗಿರುತ್ತಾನೆ. ಬಹುಶಃ ಅವನಿಗೂ ಇಂತಹುದೇ ಮನಃಪರಿವರ್ತನೆಯಾಗಿರಬೇಕು ಅಂತೆಲ್ಲಾ ಓದುಗರಿಗೆ ಅನಿಸತೊಡಗುತ್ತದೆ. ಅದನ್ನೇ ಕಥೆಯೂ ಹೇಳುತ್ತದೆ. 
    ಒಟ್ಟಾರೆ ಮನುಷ್ಯನಿಗೆ ತೃಪ್ತಿ ಎನ್ನುವುದು ಯಾವುದರಲ್ಲಿಯೂ ಸಿಗುವುದಿಲ್ಲ. ಇರುವುದನ್ನು ಬಿಟ್ಟು ಇಲ್ಲದಿರುವುದಕೆ ಹಲುಬುತ್ತಾ ಕೂರುತ್ತಾನೆ. ಕೊನೆಗೆ ಬದುಕಿನ ನಿಷ್ಠುರತೆಯ ಪೆಟ್ಟು ಬಿದ್ದಾಗಲೇ ಅವನಿಗೆ ಸತ್ಯದರ್ಶನವಾಗುವುದು. ಆಗ ಮರಳಿ ತನ್ನ ಅದೇ ಹಳೇ ಬದುಕಿಗೆ ಬರಲು ಅವನಿಗೆ ಅವಕಾಶವಿದ್ದರೆ ಅದೇ ಅವನ ಪಾಲಿನ ಅದೃಷ್ಟ.

    ತಿರುಮಲೇಶರ ಕಥೆಗಳಲ್ಲಿ ವಸ್ತುವಿನ ಆಯ್ಕೆ ಮತ್ತು ಅದನ್ನು ನಿರೂಪಿಸುವ ರೀತಿ ಬಹಳ ಚಂದ. ಅವರ ಕಥೆಗಳಲ್ಲಿ ಓದುಗರಿಗೆ ಸ್ಕೋಪ್ ಇರುತ್ತದೆ. ಯಾಕೆ, ಏನು, ಹೇಗೆ ಎಂದೆಲ್ಲಾ ಓದುಗ ಯೋಚಿಸ ತೊಡಗುತ್ತಾನೆ. ಅವರ ಕಥೆಗಳು ಆಚಾರ ಹೇಳುತ್ತಾ ಹೊರಡುವುದಿಲ್ಲ, ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿ ಓದುಗರ ಯೋಚನೆಯನ್ನು ಮೊಟಕುಗೊಳಿಸುವುದಿಲ್ಲ. ಇದು ಬಹಳ ಮುಖ್ಯ ಎನಿಸುತ್ತದೆ. ಅಲ್ಲದೆ ತಿರುಮಲೇಶರು ಕಥೆ ಮತ್ತು ಪಾತ್ರದ ಆಳಕ್ಕೆ ಓದುಗರನ್ನು ಒಯ್ಯುವ ರೀತಿಯಂತೂ ಅದ್ಭುತ. ಓದುಗನಿಗಂತೂ ಈ ಕಥೆ ಇಲ್ಲೇ ಎಲ್ಲೋ ಪಕ್ಕದಲ್ಲೇ ನಡೆದಿದೆ ಎನಿಸುವಷ್ಟು ಆಪ್ತವಾಗಿಬಿಡುತ್ತದೆ. 

    ಕಥೆ, ಕವಿತೆ, ಅಂಕಣ ಬರಹ ಹೀಗೆ ಪ್ರತಿಯೊಂದು ಪ್ರಕಾರದಲ್ಲೂ ತಮ್ಮ ವೈಶಿಷ್ಟ್ಯತೆಯ ಛಾಪನ್ನು ಮೂಡಿಸುತ್ತಲೇ ಹೋದವರು ಕೆ.ವಿ.ತಿರುಮಲೇಶರು. ಹಾಗಾಗಿಯೇ ಅವರು ಸವ್ಯಸಾಚಿ. ಅವರಿಗೀಗ ಎಂಭತ್ತರ ಸಂಭ್ರಮ. ಅವರ ಹುಟ್ಟುಹಬ್ಬಗಳು ಅನಂತವಾಗಲಿ ಎನ್ನುವ ಮುಗಿಯದ ಆಸೆಯೊಂದನ್ನು ಎದೆಯಲ್ಲಿ ಹಚ್ಚಿಟ್ಟುಕೊಂಡು ಸದಾ ಖುಷಿಯಿಂದಿರಿ ಸರ್ ಎಂದು ಹಾರೈಸುವೆ.

    ಆಶಾ ಜಗದೀಶ್

    ಗೌರಿಬಿದನೂರಿನವರಾದ ಆಶಾ ಜಗದೀಶ್ ತಮ್ಮ ಬರಹಗಳಿಂದ ಕನ್ನಡಿಗರಿಗೆ ಪರಿಚತರು. ಹಲವಾರು ಕವನ, ಕಥೆ , ಪ್ರಬಂಧ ಬರೆದಿದ್ದಾರೆ.

    spot_img

    More articles

    1 COMMENT

    1. First time I am hearing about Mr.Thirumalesh and instantly I have become his fan and follower. I will definitely read his work done in Kannada Literature inspired by the article written about him by Ms.Asha Jagadish , be about Jaguva and others . Well written article and wishing happy birthday to Mr.Thirumalesh Sir.

    LEAVE A REPLY

    Please enter your comment!
    Please enter your name here

    Latest article

    error: Content is protected !!