ನೂತನ ರಾಷ್ಟ್ರೀಯ ನೀತಿ 2020 ರ ಪ್ರಮುಖಾಂಶಗಳು ಹಾಗೂ ಜಾರಿಗೊಳಿಸುವ ಸಂದರ್ಭದಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆಈ ಹಿಂದೆ ಅವಲೋಕಿಸಲಾಗಿತ್ತು. ಈ ಲೇಖನದಲ್ಲಿ, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೆಲವು ಸಲಹೆಗಳಿವೆ.
1) ನೂತನ ರಾಷ್ಟ್ರೀಯ ನೀತಿಯಲ್ಲಿ 2035 ರ ವೇಳೆಗೆ ಸರಾಸರಿ ದಾಖಲಾತಿ ಅನುಪಾತವನ್ನು ( GER ) ಶೇ 26.3 ರಿಂದ ಶೇ 50 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ನಿಜವಾಗಿಯೂ ಇದು ಉತ್ತಮವಾದಂತ ಗುರಿ. ಇದರಿಂದ ಹೆಚ್ಚಿನ ಯುವಕರಿಗೆ ಉನ್ನತ ಶಿಕ್ಷಣ ದೊರೆಯುವ ಅವಕಾಶಗಳು ಸಿಗುವಂತಾಗುತ್ತದೆ. ಆದರೆ ಇದನ್ನು ಜಾರಿಗೊಳಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಜೊತೆಗೆ ಇನ್ನು ಕನಿಷ್ಠ ಎಂಟನೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಬಂಡವಾಳದ ಆವಶ್ಯಕತೆಯಿದೆ.
2) 2035 ರ ವೇಳಗೆ ಪ್ರತಿಯೊಂದು ಮಹಾವಿದ್ಯಾಲಯವು ಬಹು ಶಿಸ್ತೀಯ ( multi disciplinary ) ಮತ್ತು ದೊಡ್ಡ ಮಟ್ಟದ ಕಾಲೇಜಾಗಿ ಬೆಳೆದು, ಕನಿಷ್ಠ ಮೂರು ಸಾವಿರ ವಿದ್ಯಾರ್ಥಿಗಳನ್ನು ಹೊಂದಿರಬೇಕೆಂದು ಸೂಚಿಸಲಾಗಿದೆ. ಜೊತೆಗೆ ಮುಂದಿನ 10 – 15 ವರ್ಷಗಳಲ್ಲಿ ವಿಶ್ವ ವಿದ್ಯಾಲಯಗಳಿಂದ ಸಂಯೋಜನೆಯನ್ನು ಪಡೆಯುವ ಪದ್ಧತಿಯನ್ನು ರದ್ದುಗೊಳಿಸಿ, ಪ್ರತಿಯೊಂದು ಕಾಲೇಜಿಗೆ, ಕೆಲವು ನಿಬಂಧನೆಗಳಿಗೆ ಒಳಪಟ್ಟು ಪದವಿಗಳನ್ನು ನೀಡುವ ಅಧಿಕಾರವನ್ನು ನೀಡಲು ಉದ್ದೇಶಿಸಲಾಗಿದೆ. ಗ್ರಾಮೀಣ ಮತ್ತು ಬಹುದೂರದ ( ರಿಮೋಟ್ ) ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜುಗಳಿಗೆ ನಿಬಂಧನೆಗಳನ್ನು ಪೂರೈಸಲು ನಿಜವಾಗಿಯೂ ಕಷ್ಟಕರ. ಆದ್ದರಿಂದ ಸ್ವಾಯತ್ತತೆಯನ್ನು ನೀಡುವ ಜೊತೆಗೆ, ವಿಶ್ವ ವಿದ್ಯಾಲಯಗಳಿಂದ ಸಂಯೋಜನೆಯನ್ನು ನೀಡುವ ಪದ್ಧತಿಯನ್ನು ಮುಂದುವರಿಸ ಬೇಕಾಗಿದೆ. ಇದರಿಂದ ಆ ಪ್ರದೇಶದಲ್ಲಿರುವ ಕಾಲೇಜುಗಳಿಗೆ ಮತ್ತು ಯುವಕರಿಗೆ ಅನುಕೂಲವಾಗಲಿದೆ.
3) ನೂತನ ಶಿಕ್ಷಣ ನೀತಿಯಲ್ಲಿ ನಿರ್ದಿಷ್ಟವಾದ ಕಲಿಕೆಯ ಫಲಿತಾಂಶಗಳು ( well defined learning outcomes ), ಜ್ಞಾನಾರ್ಜನೆ ಮತ್ತು ಕೌಶಲ್ಯಗಳ ಅಭಿವೃದ್ಧಿ ಇವುಗಳಿಗೆ ಒತ್ತು ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಪಠ್ಯ ಕ್ರಮದಲ್ಲಿ ಜ್ಞಾನಾರ್ಜನೆ ಮತ್ತು ಕೌಶಲ್ಯಗಳ ಅಭಿವೃದ್ಧಿಗೆ 60 : 40 ಅನುಪಾತದಲ್ಲಿ ಪಠ್ಯಕ್ರಮವನ್ನು ತಯಾರಿಸಿದರೆ ಉತ್ತಮ.
4) ನೂತನ ಶಿಕ್ಷಣ ನೀತಿಯಲ್ಲಿ, ನಾಲ್ಕು ವರ್ಷಗಳ ಪದವಿ ಕೋರ್ಸುಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದು ನಿಜವಾಗಿಯೂ ಉತ್ತಮವಾದ ಕ್ರಮ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ನಮ್ಮ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನಕಾರಿ. ನಾಲ್ಕನೇ ವರ್ಷದಲ್ಲಿ, ಸಂಶೋಧನಾ ಆಧಾರಿತ ಚಟುವಟಿಕೆಗೆ ಅಥವಾ ವಿಶೇಷಿತಾ ವಿಷಯಕ್ಕೆ ( specialisation ) ಸಂಬಂಧಿಸಿದ ಪ್ರಾಜೆಕ್ಟ್ ಗೆ ಆದ್ಯತೆಯನ್ನು ನೀಡಬೇಕು. ನಾಲ್ಕು ವರ್ಷಗಳ ಅಧ್ಯಯನದ ನಂತರ ಆನರ್ಸ್ ಪದವಿಯನ್ನು ನೀಡಬೇಕು. ನಾಲ್ಕನೇ ವರ್ಷದಲ್ಲಿ ಯಾವುದಾದರೂ ಸಂಶೋಧನಾ ಸಂಸ್ಥೆಯಲ್ಲಿ ಅಥವಾ ಪ್ರತಿಷ್ಠಿತ ಕಂಪನಿಗಳಲ್ಲಿ ಆಪ್ತ ಸೇವೆಯನ್ನು ( internship ) ಕಡ್ಡಾಯಗೊಳಿಸಬೇಕು.
5) ಪದವಿ ಶಿಕ್ಷಣದ ನಾಲ್ಕು ವರ್ಷದ ಅವಧಿಯಲ್ಲಿ ವಿವಿಧ ಬಗೆಯ ನಿರ್ಗಮನ ಆಯ್ಕೆಯ ಅವಕಾಶಗಳನ್ನು ನೀಡಲಾಗಿದೆ ( multiple exit options ). ಅಂದರೆ ಎರಡು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ, ಡಿಪ್ಲೊಮಾ ಪ್ರಮಾಣ ಪತ್ರ, ಒಂದು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಸರ್ಟಿಫಿಕೇಟ್ ಕೋರ್ಸ್ ಪ್ರಮಾಣ ಪತ್ರ ನೀಡಲಾಗುವುದು. ಇದು ಉತ್ತಮ ನಡೆಯಾದರೂ, ಒಂದು ಅಥವಾ ಎರಡು ವರ್ಷಗಳಲ್ಲಿ ನಿರ್ಗಮಿಸುವ ವಿದ್ಯಾರ್ಥಿಗಳಿಗೆ ಮಾರ್ಕೆಟ್‍ನಲ್ಲಿರುವ ಉದ್ಯೋಗವಕಾಶಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನ ತಯಾರಿಸ ಬೇಕು. ಇಲ್ಲದಿದ್ದರೆ ಈ ಯೋಜನೆ ಪ್ರಯೋಜನಕಾರಿಯಾಗುವುದಿಲ್ಲ.
6) ಕಾಲೇಜಿನ ಹಂತದಲ್ಲಿ ಅಧ್ಯಯನಕ್ಕಾಗಿ ವಿಷಯಗಳನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕೆಫೆಟೀರಿಯಾ ವಿಧಾನವನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಕಲೆ, ವಿಜ್ಞಾನ, ವಾಣಿಜ್ಯ, ಸಮಾಜ ವಿಜ್ಞಾನದ ವಿಷಯಗಳು ಮತ್ತು ಮಾನವೀಯ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು ಇವುಗಳ ನಡುವೆ ಈಗಿರುವ ಅಡ್ಡಗೋಡೆಗಳು ಇರದೆ ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳನ್ನು ಆರಿಸಿಕೊಳ್ಳ ಬಹುದು. ಇದು ಉತ್ತಮ ನಿರ್ಧಾರವೆಂದೇ ಹೇಳಬಹುದು. ಬಹಳ ವರ್ಷಗಳ ಹಿಂದೆಯೆ ಜಾರಿಗೆ ಬರಬೇಕಿತ್ತು. ಆದರೆ, ವಿಷಯಗಳನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ, ಮನಬಂದಂತೆ ಒಂದಕ್ಕೊಂದು ಪೂರಕವಾಗಿರದ ವಿಷಯಗಳನ್ನು ಆರಿಸಿಕೊಳ್ಳುವ ಬದಲು, ವಿಶೇಷ ಅಧ್ಯಯನಕ್ಕೆ ಆರಿಸಿಕೊಂಡಿರುವ ( specialisation ) ವಿಷಯಕ್ಕೆ ಪೂರಕವಾಗಿರುವ, ಸಂಬಂಧಿತ ಜ್ಞಾನಕ್ಕೆ ಉಪಯೋಗ ಪಡುವ ವಿಷಯಗಳನ್ನು ಆರಿಸಿಕೊಳ್ಳಲು ಉತ್ತೇಜನ ನೀಡಬೇಕು. ಉದಾಹರಣೆಗೆ, ರಸಾಯನಶಾಸ್ತ್ರದ ಬಿ.ಎಸ್ಸಿ ವಿದ್ಯಾರ್ಥಿ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ವಿಷಯಗಳನ್ನು ಆರಿಸಿಕೊಂಡರೆ ಉಪಯೋಗವಾಗುತ್ತದೆ. ಬದಲು, ಇತಿಹಾಸ ಅಥವಾ ಅರ್ಥಶಾಸ್ತ್ರವನ್ನು ಆರಿಸಿಕೊಂಡರೆ, ರಸಾಯನಶಾಸ್ತ್ರದಲ್ಲಿನ ಜ್ಞಾನ ಬೆಳವಣಿಗೆಗೆ ಉಪಯೋಗವಾಗುವುದಿಲ್ಲ. ಒಂದು ನಿರ್ಧಿಷ್ಟ ಶಿಸ್ತಿನಲ್ಲಿ ಜ್ಞಾನ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. Jack of All Master of None ಎಂಬಂತೆ ಆಗುತ್ತದೆ.
7) ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಸೃಜನಶೀಲತೆ ( Creativity ), ಹೊಸತನ್ನು ಕಂಡುಹಿಡಿಯುವಿಕೆ ( innovation ), ಪರಿಕಲ್ಪನಾ ತಿಳುವಳಿಕೆ ( conceptional understanding ) ಇವುಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅರ್ಥ ಮಾಡಿಕೊಳ್ಳದೆ, ಗಟ್ಟು ಹೊಡೆದು, ಪರೀಕ್ಷೆಯಲ್ಲಿ ಬರೆದು ಅಂಕಗಳನ್ನು ಗಳಿಸುವ ವಿಧಾನಕ್ಕೆ ತಿಲಾಂಜಲಿ ನೀಡಲು ಉದ್ದೇಶಿಸಲಾಗಿದೆ. ಹೊಸ ಅಂಶಗಳನ್ನು ಒಳಗೊಂಡ ಬೋಧನಾ ಪದ್ಧತಿಯಲ್ಲಿ ಯಶಸ್ಸನ್ನು ಕಾಣಬೇಕಾದರೆ, ವಿದ್ಯಾರ್ಥಿ ಕೇಂದ್ರ ಬಿಂದುವಿರುವ ( student centric ) ಬೋಧನಾ ಕ್ರಮವನ್ನು ಅಳವಡಿಸಬೇಕು. ಇದಕ್ಕೆ ಅನುಗುಣವಾಗಿ ಶಿಕ್ಷಕರಿಗೆ ತರಬೇತಿ ನೀಡಬೇಕಾಗುತ್ತದೆ. ಜೊತೆಗೆ ಪರೀಕ್ಷಾ ವಿಧಾನದಲ್ಲಿಯೂ ಸಹ ಪರಿವರ್ತನೆ ಮಾಡಬೇಕಾಗುತ್ತದೆ. ನಿರಂತರ ರಚನಾತ್ಮಕ ಮೌಲ್ಯಮಾಪನ ( Formative Assessment ) ಕ್ಕೆ ಹೆಚ್ಚು ಆದ್ಯತೆ ನೀಡ ಬೇಕಾಗುತ್ತದೆ. ಕನಿಷ್ಟ ಶೇ 30 – 40 ರಷ್ಟು ಪ್ರಮಾಣದ ಆಂತರಿಕ ಅಂಕಗಳನ್ನು ನೀಡಬೇಕು. ಪ್ರಶ್ನೆ ಪತ್ರಿಕೆಗಳಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿಯಲ್ಲಿಯು ಸಹ ಸುಧಾರಣೆಯ ಅವಶ್ಯಕತೆಯಿದೆ. ಉದಾಹರಣೆಗೆ, ಆರ್ಕಿಮಿಡೀಸ್ ತತ್ವವನ್ನು ಬರೆಯಿರಿ ಎಂದು ನೇರವಾಗಿ ಪ್ರಶ್ನೆ ಕೇಳುವ ಬದಲು, ಆರ್ಕಿಮಿಡೀಸ್ ತತ್ವವನ್ನು ಆಧರಿಸಿ ( ಪ್ರಾಬ್ಲಂ ) ಸಮಸ್ಯೆಯನ್ನು ಬಿಡಿಸಲು ಕೇಳಿದರೆ, ತತ್ವದ ಪರಿಕಲ್ಪನೆ ಚೆನ್ನಾಗಿ ಅರ್ಥವಾಗುವ ಸಾಧ್ಯತೆಯಿರುತ್ತದೆ.
8) ನೀತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು ನೀಡುವುದಾಗಿ ತಿಳಿಸಲಾಗಿದೆ. ಆದ್ದರಿಂದ, ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನೆಯ ಮೂಲಕ ಸ್ನಾತಕೋತ್ತರ ಪದವಿಯನ್ನು ಗಳಿಸುವ ಪದ್ಧತಿಯನ್ನು ( Master Degree by Research ) ಪ್ರಾರಂಭಿಸುವುದು ಉತ್ತಮ. ಸಂಶೋಧನೆಗೆ ಆಸಕ್ತಿ ಬೆಳೆಸುವ ಜೊತೆಗೆ ಅಡಿಪಾಯವು ಆಗುತ್ತದೆ. ಪ್ರಾರಂಭದಲ್ಲಿ, ಉದ್ದೇಶಿಸಲಾಗಿರುವ ರಿಸರ್ಚ್ ಇಂಟೆನ್ಸೀವ್ ವಿಶ್ವವಿದ್ಯಾಲಯಗಳಲ್ಲಿ ಜಾರಿಗೆ ತರಬಹುದು.
9) ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳ ಅನುಪಾತವು ಪದವಿ ತರಗತಿಗಳಲ್ಲಿ 1 : 60 ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ 1 : 40 ದಾಟದಂತೆ ಕಟ್ಟು ನಿಟ್ಟಿನ ನೀತಿಯನ್ನು ಅನುಸರಿಸ ಬೇಕಾಗಿದೆ.
10) ಸ್ನಾತಕೋತ್ತರ ಪದವಿಯ ಎರಡನೇ ವರ್ಷದ ಅಧ್ಯಯನದ ಕಾಲದಲ್ಲಿ, ವಿಶೇಷ ವಿಷಯಕ್ಕೆ ಸಂಬಂಧಿಸಿದಂತೆ ( specialisation ) ಸಂಶೋಧನಾ ಆಧಾರಿತ ಯೋಜನೆ ಅಥವಾ ಸಂಬಂಧಪಟ್ಟ ವಿಷಯಗಳಲ್ಲಿ ಕೋರ್ಸುಗಳಿಗೆ ಹಾಜರಾಗಿ ಗಳಿಸಿದ ಕ್ರೆಡಿಟ್‍ಗಳನ್ನು ಗಣನೆಗೆ ತೆಗದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ.
11) ಸಾಮಾನ್ಯ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣಗಳಲ್ಲಿ, ವೃತ್ತಿಪರ ತರಬೇತಿ / ಇಂಟರ್ನ್‍ಶಿಫ್ / ಉದ್ಯೋಗ ತರಬೇತಿ / ಕ್ಷೇತ್ರ ಅಧ್ಯಯನ ಮುಂತಾದವುಗಳನ್ನು ಕಡ್ಡಾಯಗೊಳಿಸಬೇಕು.
12) ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಾಪಕರ ವಿನಿಮಯ ( Faculty Exchange ) ಮತ್ತು ವಿದ್ಯಾರ್ಥಿಗಳ ವಿನಿಮಯ ( Student Exchange ) ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು. ಸಬ್ಬಟಿಕಲ್ ರಜೆಯನ್ನು ನೀಡುವ ಪದ್ಧತಿಯನ್ನು ಜಾರಿಗೊಳಿಸಿ. ಅನುಷ್ಠಾನಕ್ಕೆ ತರಬೇಕು.
13) ಶಿಕ್ಷಕರ ಸಮಗ್ರ ಮತ್ತು ನಿರಂತರ ವೃತ್ತಿಪರ ಅಭಿವೃದ್ಧಿಗೆ ( comprehensive and continuous professional Development ) ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸ ಬೇಕು. ಇದರಿಂದ ಶಿಕ್ಷಕರ ಜ್ಞಾನ ಮತ್ತು ಕೌಶಲ್ಯಗಳು ಅಭಿವೃದ್ಧಿಯಾಗಿ, ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗುತ್ತದೆ.
14) ವಿಶ್ವವಿದ್ಯಾಲಯಗಳಲ್ಲಿ Academic staff college ಗಳನ್ನು ಶಕ್ತಿಗೊಳಿಸಬೇಕಾಗಿದೆ.
15) ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿರುವ ಉನ್ನತ ಸಂಶೋಧನ ಕೇಂದ್ರವನ್ನು ಸ್ಥಾಪಿಸಬೇಕು. ವಿಶ್ವವಿದ್ಯಾಲಯದಲ್ಲಿರುವ ಎಲ್ಲಾ ಸಂಶೋಧಕರಿಗೆ ಸೌಲಭ್ಯಗಳನ್ನು ಉಪಯೋಗಿಸುವ ಅವಕಾಶವಿರಬೇಕು.
16) ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳನ್ನು ಮತ್ತು ಪ್ರಯೋಜನಗಳನ್ನು ನೀಡುವ ಪದ್ಧತಿಯನ್ನು, ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸ ಬೇಕು. ಇದರಿಂದ ಶಿಕ್ಷಕರಲ್ಲಿ ಮತ್ತು ಸಂಶೋಧಕರಲ್ಲಿ ಹೆಚ್ಚು ಕಲಿಯುವ ಆಸಕ್ತಿ ಬೆಳೆದು, ಶಿಕ್ಷಣದ ಗುಣಮಟ್ಟ ಹೆಚ್ಚಲು ಕಾರಣವಾಗುತ್ತದೆ.
17) ಸ್ವತಂತ್ರ ಬಿ.ಇಡಿ ಕಾಲೇಜುಗಳನ್ನು ಮುಂದಿನ 3 – 4 ವರ್ಷಗಳಲ್ಲಿ ರದ್ದುಗೊಳಿಸ ಬೇಕು. ನಾಲ್ಕು ವರ್ಷದ ಬಿ.ಇಡಿ ಕೋರ್ಸ್‍ನ್ನು ಬಹುಶಿಸ್ತೀಯ ಕಾಲೇಜುಗಳಲ್ಲಿ ಕೂಡಲೇ ಪ್ರಾರಂಭಿಸಲು ಅನುಮತಿಯನ್ನು ನೀಡಬೇಕು.
18) ಉನ್ನತ ವಿದ್ಯಾಸಂಸ್ಥೆಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸಲು, ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮತ್ತು ಮಾನ್ಯತೆಯನ್ನು ನೀಡುವ ಪದ್ಧತಿಯನ್ನು ಬಿಗಿಗೊಳಿಸಿ, ಸಾರ್ವಜನಿಕ ಪ್ರಕಟಣೆಗಳೊಂದಿಗೆ ಪಾರದರ್ಶಕತೆಯನ್ನು ಕಾಪಾಡಬೇಕಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗ ಬೇಕಾಗಿದೆ. ಅದಕ್ಕೆ ನಾವೆಲ್ಲರು ಕೈಜೋಡಿಸ ಬೇಕಾಗಿದೆ. ಈ ನೀತಿಯ ಅನುಷ್ಠಾನದಿಂದ ಪ್ರಪಂಚದ ಮಟ್ಟದಲ್ಲಿ ನಮ್ಮ ದೇಶದ ವಿದ್ಯಾಕ್ಷೇತ್ರದ ಘನತೆ ಹೆಚ್ಚಾಗಲೆಂದು ಆಶಿಸೋಣ.
(ಚಿತ್ರ: ಹೊಸ ಶಿಕ್ಷಣ ನೀತಿಯ ಕರಡು ಪ್ರತಿ ಸಲ್ಲಿಸುವ ಫೈಲ್ ಫೋಟೋ)
The NEP will be successful only the scheme is not politicised. We have dirty politics in our Country. If there is a change of Government the new Goverment is in the habit of tinkering and finally both Teaching Staff & Students will be in confusion.
Sir.. Valuable suggestions in the process of implementation of NEP2020 effectively…..
Everything is relevant.. but funding of colleges, university’s in developing in par with Global Education /Excellent university’s up-to/after 2035 ….as per NEP.. Institutions are not profit making agencies. Personally I feel in the present scenario India with huge population,effective implementation of NEP is very difficult. Thanks. With regards.