.
ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ಕಳೆದ ಆರು ತಿಂಗಳಲ್ಲಿ ಪ್ರದರ್ಶಿಸಿದ ಭಾರಿ ಏರಿಕೆಯು ಷೇರುಪೇಟೆಯ ಚಮತ್ಕಾರಿ ಬೆಳವಣಿಗೆ ಬಗ್ಗೆ ತಿಳಿಸುತ್ತದೆ. ಲಾಕ್ ಡೌನ್ ಕಾರಣ ಎಲ್ಲಾ ವಲಯದ ಕಂಪನಿಗಳು ಹೆಚ್ಚಿನ ಆರ್ಥಿಕ ಒತ್ತಡವನ್ನೆದುರಿಸುತ್ತಿದ್ದರೂ ಈ ಕಂಪನಿಯ ಷೇರಿನ ಬೆಲೆ ಮಾರ್ಚ್ ನ ರೂ.880 ರ ಕನಿಷ್ಠ ಬೆಲೆಯಿಂದ ರೂ.2,340 ರ ವಾರ್ಷಿಕ ಗರಿಷ್ಠಕ್ಕೆ ಏರಿಕೆ ಕಂಡಿದೆ.
ಹಲವು ದಶಕಗಳಿಂದ ಈ ಕಂಪನಿಯು ಸಂಪಾದಿಸಿರುವ ಗೌರವ, ಘನತೆ, ಪ್ರತಿಷ್ಠೆಗಳ ಕಾರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಪಡೆದಿರುವ ಅಂಶ ಈಗ ಕಂಪನಿಯನ್ನು ಬೆಳೆಸಲು ಸಹಯೋಗ ನೀಡಿವೆ. ಈಗ ಕಂಪನಿಯ ಟೆಲಿಕಾಂ ವಲಯವು ಹೆಚ್ಚು ಆದ್ಯತೆಯನ್ನು ಪಡೆದಿದ್ದು, ಅದಕ್ಕೆ ಪೂರಕವಾದ ಬಂಡವಾಳವೂ ಹಲವಾರು ಜಾಗತಿಕ ಹೂಡಿಕೆದಾರರಿಂದ ಹರಿದುಬಂದಿದೆ, ಬರುತ್ತಲಿದೆ. ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ತಾ, ಜನರಲ್ ಅಟ್ಲಾಂಟಿಕ್, ಇಂಟೆಲ್, ಟಿಪಿಜಿ, ಕೆಕೆಆರ್ ನಂತಹ ಬೃಹತ್ ಸಂಸ್ಥೆಗಳು ಸರದಿಯಲ್ಲಿ ಬಂದು ಹೂಡಿಕೆ ಮಾಡಿರುವುದು ಕಂಪನಿಯ ಗಳಿಸಿರುವ ಜಾಗತಿಕ ಮಟ್ಟದಲ್ಲಿರುವ ಮಾನ್ಯತೆಯನ್ನು ತೋರುತ್ತದೆ.
ಈ ಕಂಪನಿಯು ಜಿಯೋ ಪ್ಲಾಟ್ ಫಾರಂ ನ ಭಾಗಿತ್ವವನ್ನುಈ ಸಂಸ್ಥೆಗಳಿಗೆ ನೀಡಿ ಸಂಗ್ರಹಿಸಿರುವ ಸಂಪನ್ಮೂಲವನ್ನು ತನ್ನ ಸಾಲದ ಹೊರೆಯನ್ನು ಇಳಿಸಿಕೊಳ್ಳುವ ಮೂಲಕ ಸಾಲ ಮುಕ್ತವನ್ನಾಗಿಸ ಬಯಸಿದೆ.ಈ ದಿಕ್ಕಿನಲ್ಲಿ ಭಾಗಿತ್ವ ವಿತರಣೆಯ ಮೂಲಕ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿ ಸಂಗ್ರಹಿಸಿದ ದಾಖಲೆಯನ್ನು ನಿರ್ಮಿಸಿದ ಕಂಪನಿ ಇದಾಗಿದೆ. ಇದಲ್ಲದೆ ಕಂಪನಿಯು ಪ್ರತಿ ಷೇರಿಗೆ ರೂ.1,257 ರಂತೆ ಹಕ್ಕಿನ ಷೇರು ವಿತರಿಸಿದೆ. ಈ ಹಕ್ಕಿನ ಷೇರಿಗೆ ಕೇವಲ ಶೇಕಡ 25 ರಷ್ಟು ಹಣವನ್ನು ಸಂಗ್ರಹಿಸಿದ್ದು ಉಳಿದ ಹಣವನ್ನು 2021 ರ ಮೇ ಮತ್ತು ನವೆಂಬರ್ ತಿಂಗಳಲ್ಲಿ ಪಾವತಿಸಬೇಕು. ಅಂದರೆ ಸಧ್ಯ ರೂ.53,125 ಕೋಟಿ ಮೌಲ್ಯದ ವಿತರಣೆಯಲ್ಲಿ ಶೇ.25 ರಷ್ಟು ಸಂಗ್ರಹಣೆಯಾಗಿದೆ. ಈಗ ಮತ್ತೊಮ್ಮೆ ಬಿಗ್ ಬಜಾರ್ ಸಮೂಹದ ಕಂಪನಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಮತ್ತೊಮ್ಮೆ ರಿಲಯನ್ಸ್ ರೀಟೇಲ್ ನ ಭಾಗಿತ್ವವನ್ನು ಹೂಡಿಕೆದಾರರಿಗೆ ಹಂಚುತ್ತಿದೆ. ಈ ಕಾರಣ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ಗುರುವಾರದಂದು ರೂ.2,344 ರವರೆಗೂ ತಲುಪಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ.
ಈ ಎಲ್ಲಾ ಬೆಳವಣಿಗೆಗಳ ಕಾರಣ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮಾರ್ಕೆಟ್ ಕ್ಯಾಪಿಟಲೈಸೇಷನ್ ಮೌಲ್ಯವು ರೂ.15.68 ಲಕ್ಷ ಕೋಟಿಯನ್ನು ತಲುಪಿದೆ. ಅಂದರೆ ಬಾಂಬೆ ಷೇರು ವಿನಿಮಯ ಕೇಂದ್ರದ ಮಾರ್ಕೆಟ್ ಕ್ಯಾಪಿಟಲೈಸೇಷನ್ ಮೌಲ್ಯವು ರೂ.156.88 ಲಕ್ಷ ಕೋಟಿಯಲ್ಲಿದೆ. ಅಂದರೆ ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಕೆಟ್ ಕ್ಯಾಪ್, ಬಿ ಎಸ್ ಇ ಯ ಮಾರ್ಕೆಟ್ ಕ್ಯಾಪ್ ನ ಶೇ.10 ರಷ್ಟಿದೆ. ಮಾರ್ಚ್ 2020 ರಲ್ಲಿ ರೂ.6 ಲಕ್ಷಕೋಟಿಯಷ್ಟರಲ್ಲಿದ್ದ ಮಾರ್ಕೆಟ್ ಕ್ಯಾಪಿಟಲ್ ಹೊಂದಿದ್ದ ಕಂಪನಿ ಕೇವಲ ಆರು ತಿಂಗಳಲ್ಲಿ ರೂ.15.68 ಲಕ್ಷ ಕೋಟಿಗೆ ಹೆಚ್ಚಿಸಿಕೊಂಡಿದೆ. ಇದು ಅದ್ಬುತವಾದ ಸಾಧನೆಯಾಗಿದೆ.
ಈ ಸಮಯದಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಈ ಎಲ್ಲಾ ಬೆಳವಣಿಗೆಗಳಿಗೆ ಪೂರಕವಾದ ರೀತಿಯಲ್ಲಿ ಕಂಪನಿಯ ಆಂತರಿಕ ಸಾಧನೆಯಿಲ್ಲ. ಇದಕ್ಕೆ ಮುಖ್ಕ ಕಾರಣ ಎಲ್ಲೆಡೆ ಹರಡಿಕೊಂಡಿರುವ ಮಹಾಮಾರಿ ಕೋವಿಡ್ 19 ಆಗಿದೆ. ಇಂತಹ ಕರೋನಾ ಪಿಡುಗಿನ ಸಮಯದಲ್ಲಿಯೂ ಕಂಪನಿಯ ಷೇರಿನ ಬೆಲೆ ಈ ರೀತಿಯ ಏರಿಕೆಯು, ಹೂಡಿಕೆದಾರರಿಗೆ ಕಂಪನಿಯ ಮೇಲೆ ಇರುವ ನಂಬಿಕೆಯನ್ನು ಬಿಂಬಿಸುತ್ತದೆ. ಈ ರೀತಿ ಸಂಗ್ರಹಿಸಿರುವ ಹಣವನ್ನು ಕಂಪನಿಯು ತನ್ನ ಸಾಲದ ಹೊರೆಯನ್ನು ಇಳಿಸಿಕೊಳ್ಳುವುದಕ್ಕೆ ಬಳಸಿಕ್ಕೊಳ್ಳುವುದು ಸರಿ. ಆದರೆ ಇದು ಬಡ್ಡಿಹೊರೆಯನ್ನು ಇಳಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಸಾಲದ ಹೊರೆ ಬದಲು, ಷೇರುದಾರರನ್ನ ನಿಭಾಯಿಸುವ ಜವಾಬ್ಧಾರಿ ಹೆಚ್ಚಿಸಿಕೊಂಡಿದೆ.
ಷೇರುದಾರರಿಗೆ ಕಂಪನಿ ನೀಡುವ ಡಿವಿಡೆಂಡ್ ಕೇವಲ ರೂ.6.50ಯು ಈಗಿನ ಷೇರಿನ ಮೌಲ್ಯಕ್ಕೆ ಸರಿದೂಗದು. ಅಂದರೆ ಈಗಿನ ರೂ.2,300 ರೂಪಾಯಿಗಳಿಗೆ ವರ್ಷಕ್ಕೆ ರೂ.6.50 ಡಿವಿಡೆಂಡ್ ಆಕರ್ಷಕವಲ್ಲ. ಹಾಗಾದರೆ ಕಂಪನಿಯ ಷೇರಿನ ಬೆಲೆ ಹೆಚ್ಚಿದಾಗ ಷೇರನ್ನು ಮಾರಾಟಮಾಡಿದಲ್ಲಿ ಮಾತ್ರ ಲಾಭದಾಯಕವಾಗುತ್ತದೆ, ಇಲ್ಲವಾದಲ್ಲಿ ಹೂಡಿಕೆ ಯೋಗ್ಯವೆನಿಸಿಕೊಳ್ಳದು. ಇದು ಷೇರುದಾರರಲ್ಲಿ ನಮ್ರತೆ ಬದಲು ವ್ಯವಹಾರಿಕತೆ ಹೆಚ್ಚಿಸುತ್ತದೆ. ಈ ಕ್ರಮವು ಕಂಪನಿಯ ಆಡಳಿತದ ಮೇಲೆ, ಉತ್ತಮ ಸಾಧನೆ, ಫಲಿತಾಂಶ, ಲಾಭಾಂಶ ವಿತರಣೆಗೆ ಹೆಚ್ಚಿನ ಒತ್ತಡವನ್ನು ಹಾಕಲಿದೆ. ಕಂಪನಿಯು ಈ ಪ್ರಮಾಣದ ಸಾಧನೆಗೆ ಪೂರಕವಾದ ಬ್ಲೂಪ್ರಿಂಟ್ ಸಿದ್ಧಗೊಳಿಸಿಕೊಂಡಿರುತ್ತದೆ. ಅದನ್ನು ಜಾರಿಗೊಳಿಸಲು ಯಶಸ್ಸು ಕಾಣಲೂಬಹುದು.
ಎಲ್ಲವೂ ನಿರೀಕ್ಷಿತ ಮಟ್ಟದಲ್ಲಿ ನಡೆದರೆ ಅಂಗೈಯಲ್ಲಿ ಅರಮನೆಯಂತಾಗುತ್ತದೆ.
ಆದರೆ ಈಗಿನ ಸ್ಪರ್ಧಾತ್ಮಕ ಸಮಯದಲ್ಲಿ, ಅನಿರೀಕ್ಷಿತವಾಗಿ ಪ್ರೊಜೆಕ್ಟೆಡ್ ಸಾಧನೆ ತೋರಲು ವಿಫಲವಾದಲ್ಲಿ ಷೇರಿನ ಬೆಲೆ ದಿಶೆ ಬದಲಿಸಿದಲ್ಲಿ ಗುರುತ್ವಾಕರ್ಷಣೆ ಥಿಯರಿ ಅಳವಡಿಸಿದಲ್ಲಿ ಏನಾಗಬಹುದು ಎಂಬ ಕಲ್ಪನೆಯನ್ನೂ ಸಹ ಹೂಡಿಕೆದಾರರು ಗಮನದಲ್ಲಿಸಿಕೊಂಡಿರಬೇಕು. ಇಲ್ಲಿ ನೆನಪಿಲ್ಲಿಡಬೇಕಾದ ಅಂಶವೆಂದರೆ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆಯಲ್ಲಿ ಪ್ರತಿ ಒಂದು ರೂಪಾಯಿಯ ಏರಿಕೆಯಾದರೆ ಆ ಕಂಪನಿಯ ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.670 ಕೋಟಿಯಷ್ಟು ಹೆಚ್ಚುತ್ತದೆ. ಅದೇ ಪ್ರಮಾಣದಲ್ಲಿ ಕಡಿಮೆಯಾದರೆ ಬಂಡವಾಳವೂ ಕರಗುವುದು. ಒಂದು ವೇಳೆ ಕಂಪನಿಯು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ತೋರದಿದ್ದರೆ ಈಗ FAVORITE ಆಗಿರುವುದು FAVOUR HIT ಎಂದು ಈ ಗಣ್ಯ ಹೂಡಿಕೆ ಕಂಪನಿಗಳು ನಿರಂತರ ಮಾರಾಟ ಮಾಡಿದಲ್ಲಿ ಷೇರಿನ ಬೆಲೆ ಎಲ್ಲಿಗೆ ಕುಸಿಯಬಹುದೆಂಬುದು ಕಲ್ಪನೆಗೂ ಎಟುಕದು.
ಈ ಹಿಂದೆ ಡಿ ಎಸ್ ಕ್ಯು ಸಾಫ್ಟ್ ವೇರ್, ಪೆಂಟಾಮೀಡಿಯಾ ಗ್ರಾಫಿಕ್ಸ್, ಹಿಮಾಚಲ್ ಫ್ಯೂಚರಿಸ್ಟಿಕ್ ಗಳ ಬೆಲೆ ರೂ.3,000 ದಿಂದ ಕುಸಿದ ವೇಗ ಹಿಮ ಕರಗುವುದಕ್ಕಿಂತಲೂ ವೇಗವಾಗಿತ್ತು. ಅಲ್ಲದೆ ಒಮ್ಮೆ ಷೇರಿನ ಬೆಲೆ ಈ ರೀತಿ ಕುಸಿದಲ್ಲಿ ಉಂಟಾಗಬಹುದಾದ ಪರಿಸ್ಥಿತಿಯು ಎಲ್ಲಿಗೆ ತಲುಪಬಹುದೆಂಬುದನ್ನು ಎಡಿಎಜಿ ಸಮೂಹವು ತೋರಿಸಿದೆ. ಬಂಡವಾಳ ಸುರಕ್ಷತೆಗೆ ಆದ್ಯತೆ ಇರಲಿ.
ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.