ವೇದಗಳ ಕಾಲದಿಂದಲೂ ಭಾರತ ‘ಜ್ಞಾನ’ಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾ ಬಂದಿದೆ. ವೇದ, ಉಪನಿಷತ್, ಪುರಾಣ ಹೇಳುತ್ತಿದ್ದ ಕಾಲದಲ್ಲೇ ನಭೋ ಮಂಡಲದ ಗ್ರಹಗಳ ಚಲನೆ ಬಗ್ಗೆ, ಕರಾರುವಕ್ಕಾಗಿ ಹೇಳಿದ ಪ್ರಥಮ ವಿಜ್ಞಾನಿ ಆರ್ಯಭಟ. ವಿಜ್ಞಾನ ಬೆಳೆದಂತೆಲ್ಲಾ ಕಲಿಯುವ ವಿದ್ಯೆಯಲ್ಲೂ, ಮಾಡುವ ಕೆಲಸಗಳಲ್ಲೂ ಬದಲಾವಣೆ ಆಗುತ್ತಾ ಹೋಯಿತು.
ಹಿಂದಿನ ಕಾಲದ ವಾಸ್ತುಶಾಸ್ತ್ರ , ಶಿಲ್ಪಶಾಸ್ತ್ರ ಎಷ್ಟು ಉತ್ತುಂಗ ಮಟ್ಟದ್ದಾಗಿತ್ತು ಎನ್ನುವುದಕ್ಕೆ ಹಲವಾರು ದೇವಾಲಗಳ ನಿರ್ಮಾಣ ಮತ್ತು ಅವುಗಳು ಇಂದಿಗೂ ಸುಸ್ಥಿತಿಯಲ್ಲಿ ಇರುವುದು ಅಂದಿನ ಎಂಜಿನಿಯರಿಂಗ್ ಎಷ್ಟು ಅದ್ಭುತವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿವೆ.
ಎಂಜಿನಿಯರಿಂಗ್ ಅಂದರೆ ಏನು?
ಹಲವು ಸಾಮಾಜಿಕ ಹಾಗು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನ ಮತ್ತು ಗಣಿತದ ತತ್ವಗಳನ್ನು ಉಪಯೋಗಿಸಿ, ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಿ, ಸಾಮಾಜಿಕ ಮತ್ತು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹೊಸ ಹೊಸ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಇರುವ ತಾಂತ್ರಿಕತೆಯನ್ನ ಉತ್ತಮಗೊಳಿಸುತ್ತಾ ಹೋಗುವುದೇ ಎಂಜಿನಿಯರಿಂಗ್.
ಮೇಲೆ ತಿಳಿಸಿದ ಹಾಗೆ ಹೊಸ ಆವಿಷ್ಕಾರ, ಹೊಸ ಪ್ರಯೋಗ ಮಾಡಲು ಮಾನವ ಮೊದಲು ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ತನ್ನ ಕೌಶಲ್ಯಾಭಿವೃದ್ಧಿ ಮಾಡಲು ಒಂದು ವಿಷಯದ ಬಗ್ಗೆ ವ್ಯವಸ್ಥಿತವಾದ ಅಧ್ಯಯನ ನಡೆಸಿ, ಆ ವಿಷಯದಲ್ಲಿ ಪರಿಣಿತಿ ಹೊಂದಿದ ಮೇಲೆ ಅದಕ್ಕೆ ಸಂಬಂಧ ಪಟ್ಟ ಕೆಲಸಗಳಲ್ಲಿ ಉತ್ಕೃಷ್ಟವಾದ ಜನೋಪಯೋಗವಾದ ಕೆಲಸಗಳನ್ನು ಮಾಡುವುದು ಪ್ರಪಂಚದಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿದೆ. ಅಂಥ ಆಳ ಅಧ್ಯಯನ, ಬುದ್ಧಿಮತ್ತೆ ಹಾಗು ತೆಗೆದುಕೊಂಡ ಕೆಲಸಗಳಲ್ಲಿ ನೂರಕ್ಕೆ ನೂರರಷ್ಟು ವಿಜಯವನ್ನು ಇಪ್ಪತ್ತನೇ ಶತಮಾನದಲ್ಲಿ ಕಂಡ ಭಾರತದ ಅಪ್ರತಿಮ ಎಂಜಿನಿಯರ್ ನಮ್ಮ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರು.
ಮುದ್ದೇನ ಹಳ್ಳಿಯಲ್ಲಿ ಜನನ
ಸರ್ ಎಂ ವಿ 15 ನೇ ಸೆಪ್ಟೆಂಬರ್ 1860 ಯಲ್ಲಿ ಬೆಂಗಳೂರಿನ ಸಮೀಪ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನ ಹಳ್ಳಿಯಲ್ಲಿ ಜನಿಸಿದರು. ಸರ್ಕಾರಿ ಶಾಲೆಗಳಲ್ಲಿ ಓದಿ, ಸಿವಿಲ್ ಎಂಜಿನಿಯರಿಂಗ್ ನಲ್ಲಿ ವಿಶೇಷ ಪರಿಣಿತಿ ಹೊಂದಿ, ಇಡೀ ಪ್ರಪಂಚವೇ ನಿಬ್ಬೆರಗಾಗುವಂಥ ವಿದ್ವತ್ತನ್ನ ತಮ್ಮ ಕೆಲಸಗಳ ಮೂಲಕ ಮಾಡಿ ತೋರಿಸಿದರು.
ಭಾರತದ ಪ್ರಪ್ರಥಮ ಜಲಾಶಯಗಳ ನಿರ್ಮಾತೃ. ಜಲಾಶಯಗಳಲ್ಲಿ ನೀರು ಹೆಚ್ಚಾದಾಗ, ತನ್ನನ್ನು ತಾನೆ ತೆರೆದುಕೊಳ್ಳಬಹುದಾದ ಬಾಗಿಲುಗಳನ್ನು ಅಭಿವೃದ್ಧಿಪಡಿಸಿದ ಧೀಮಂತ. ಶಿಕ್ಷಣ, ಹಣಕಾಸು, ನೀರಾವರಿ, ಕೃಷಿ, ವಿದ್ಯುತ್, ಉದ್ಯೋಗ ಇನ್ನು ಹಲವಾರು ಕ್ಷೇತ್ರಗಳ ಅಭಿವೃದ್ಧಿ ಹರಿಕಾರ.
1908ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ರವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು ಮೈಸೂರ್ ರಾಜ್ಯದ 19ನೇ ದಿವಾನರಾಗಿ ಪ್ರಥಮ ಜಲವಿದ್ಯುತ್ ಶಿವನ ಸಮುದ್ರದಲ್ಲಿ ಅಭಿವೃದ್ಧಿ ಪಡಿಸಿ, ಮೈಸೂರು ಸ್ಯಾಂಡಲ್ ಸೋಪ್, ಬಿನ್ನಿ ಮಿಲ್, ಪುಸ್ತಕ ಕಾರ್ಖಾನೆ, ಭದ್ರಾವತಿಯಲ್ಲಿ ಕಬ್ಬಿಣದ ಕಾರ್ಖಾನೆ , ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇತ್ಯಾದಿಗಳು ಅವರ ಜನೋಪಯೋಗಿ ಕೆಲಸಗಳಿಗೆ, ಅವರ ವಿದ್ವತ್ ಗೆ ಹಿಡಿದ ಕನ್ನಡಿ.
ಇದಕ್ಕೆಲ್ಲಾ ಮುಕುಟ ಮಣಿಯಂತೆ ಕೇವಲ ಗಾರೆ ಹಾಗು ಕಲ್ಲುಗಳನ್ನು ಬಳೆಸಿ ಕಾವೇರಿ ನದಿಗೆ ಅಡ್ಡಲಾಗಿ ಇಡೀ ಏಷ್ಯಾ ಖಂಡದಲ್ಲೇ ದೊಡ್ಡದಾದ ಜಲಾಶಯ ಕೃಷ್ಣರಾಜಸಾಗರ ನಿರ್ಮಿಸಿದ್ದು ಇತಿಹಾಸ. ನಿರ್ಮಿಸುವ ಸಮಯದಲ್ಲಿ, ಕೆಲಸಗಾರರಿಗೆ 24/7 ಕೆಲಸ ಮಾಡಲು ಮೊದಲ ಪ್ಲಾನ್ ಮಾಡಿದ್ದು, ಹಣದ ಅಡಚಣೆ ಬಂದಾಗ ಮೈಸೂರು ರಾಜರ ಹತ್ತಿರ ವಿದ್ದ ಅಮೂಲ್ಯ ಚಿನ್ನಾಭರಣಗಳನ್ನ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಅಡವಿಟ್ಟು ಕೃಷ್ಣರಾಜಸಾಗರ ಸಂಪೂರ್ಣ ವಾಗುವಂತೆ ನೋಡಿಕೊಂಡಿದ್ದು ಒಂದು ಕಡೆ ಯಾದರೆ. ಮೈಸೂರು, ಮಂಡ್ಯ ಸುತ್ತಮುತ್ತ ಪ್ರತಿಯೊಂದು ಹಳ್ಳಿ ಹಳ್ಳಿಗೂ ಹೋಗಿ, ನಿಮ್ಮ ಭೂಮಿಯನ್ನು ಮಾರಬೇಡಿ, ಮುಂದೆ ಇದು ನೀರಾವರಿಯಾಗಿ ಚಿನ್ನದಂಥಾ ಬೆಳೆ ಬೆಳೆಯುವ ಭೂಮಿಯಾಗುತ್ತದೆ ಯಾವುದೇ ಕಾರಣಕ್ಕೂ ಮಾರಬೇಡಿ ಎಂದು ಡಂಗೂರ ಸಾರಿ ಆದರ್ಶ ಮೆರೆದ ಮೇರು ವ್ಯಕ್ತಿ.
ಅವರು ಮಾಡಿದ ಸಾಧನೆ ಕೇವಲ ಒಂದು ಲೇಖನದಲ್ಲಿ ತಿಳುಸುವುದು ಅಸಾಧ್ಯ, ಸರ್ ಎಂ ವಿ ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಭಾರತ ಸರ್ಕಾರ 1955 ರಲ್ಲಿ ಜೀವಮಾನದ ಸಾಧನೆಗೆ ಭಾರತ ರತ್ನ ಕೊಟ್ಟು ಗೌರವಿಸಿತು . ಪ್ರಪಂಚದ ಹಲವಾರು ದೇಶಗಳಲ್ಲಿ ಬೇರೆ ಬೇರೆ ದಿನ ಇಂಜಿನಿಯರ್ ದಿನ ಆಚರಿಸಿದರೂ ಭಾರತದಲ್ಲಿ ಸರ್ ಎಂ ವಿ ಅವರ ಹುಟ್ಟು ಹಬ್ಬದ ದಿನ ಎಂಜಿನಿಯರಿಂಗ್ ಡೇ ಆಚರಿಸಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿತು. ಅಂದಿನಿಂದ ಅವರ ಹುಟ್ಟಿದ ದಿನ ಸೆಪ್ಟೆಂಬರ್ 15 ಭಾರತದ ಎಂಜಿನಿಯರ್ ದಿನವಾಗಿ ಇಂದಿಗೂ ಆಚರಿಸುತ್ತಾ ಬರುತ್ತಿದೆ.
ಸರ್ ಎಂ ವಿ ಅವರು ಕೇವಲ ತಾಂತ್ರಿಕತೆಯಲ್ಲಿ ಮಾತ್ರ ಕೌಶ್ಯಲ್ಯ ಗಳಿಸಿರಲಿಲ್ಲ, ಜೊತೆಯಲ್ಲಿ ತಮ್ಮಲ್ಲೇ ಒಂದು ಕಟ್ಟು ನಿಟ್ಟಿನ ಶಿಸ್ತುಬದ್ಧ ಜೀವನ ಅಳವಡಿಸಿಕೊಂಡಿದ್ದರು. ಸಮಯದ ಉಪಯೋಗ, ಸರಳತೆ, ಪ್ರಾಮಾಣಿಕತೆ, ಮಾಡಿದ ಕೆಲಸಕ್ಕೆ ,ಅಗತ್ಯಕ್ಕೆ ತಕ್ಕಷ್ಟೇ ಸಂಬಳ ಪಡೆದಿದ್ದು, ಜೀವನದ ಮೌಲ್ಯ, ಪ್ರೀತಿ ಹಾಗು ಒಬ್ಬ ಎಂಜಿನಿಯರ್ ಸಾಮಾನ್ಯ ಮನುಷ್ಯರ ಜೀವನದಲ್ಲಿ ಏನೆಲ್ಲಾ ವ್ಯತ್ಯಾಸ ತರಬಹುದು ಎಂದು ತೋರಿಸಿಕೊಟ್ಟ ದಾರ್ಶನಿಕ. ಶತಾಯುಷಿಗಳಾಗಿ ಬದುಕಿ 12 ಏಪ್ರಿಲ್ 1962 ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು. ಅವರ ಜೀವನ, ಆದರ್ಶ ನಡುವಳಿಕೆ, ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೂ ಮಾದರಿ.
ಕಾಲ ಬದಲಾಗಿದೆ, ಎಂಜಿನಿಯರಿಂಗ್ ಶಾಖೆ ಹೆಮ್ಮರವಾಗಿ ಬೆಳೆದಿವೆ. ತಾಂತ್ರಿಕತೆ ದಿನದಿಂದ ದಿನಕ್ಕೆ ಹೊಸ ಆವಿಷ್ಕಾರ ಹೊಂದಿ ಮಾನವನ ಜೀವನ ಸೌಖ್ಯಗಳು ಬೆರೆಳುಗಳ ತುದಿಯಲ್ಲಿ ಬಂದು ನಿಂತಿವೆ.
ಎಂಜಿನಿಯರ್ ದಿನವನ್ನು ಕೇವಲ ಶುಭಾಶಯಗಳನ್ನು ಕೋರಲು ಮಾತ್ರ ಉಪಯೋಗಿಸದೆ, ಸರ್ ಎಂ ವಿ ಅವರ ಕೌಶಲ್ಯದ, ಸರಳತೆಯ ಹಾಗು ಅವರು ಮಾಡಿದ ಸಾಧನೆಗಳ ಒಂದು ಅಂಶವನ್ನಾದರೂ ಪ್ರತಿಯೊಬ್ಬ ಎಂಜಿನಿಯರ್ ಅಳವಡಿಸಿಕೊಳ್ಳುವಂತಾದರೆ, ಎಂಜಿನಿಯರ್ ಡೇ ಮಾಡಿದ್ದಕ್ಕೂ ಒಂದು ಅರ್ಥ ಬರುತ್ತದೆ. ಜೊತೆಗೆ ಅದು ನಮ್ಮ ದೇಶದ ಅಭಿವೃದ್ಧಿಗೂ ಪೂರಕ.
ಸರ್ ಎಂವಿ ವೃತ್ತಿ ಜೀವನದ ಘಟ್ಟಗಳು
1885 – ಬಾಂಬೆಯಲ್ಲಿ ಸರ್ವಿಸ್ ಇಂಜಿನಿಯರ್ ಆಗಿ ನೇಮಕ, ನಾಸಿಕ್ ಮತ್ತು ಪುಣೆಯಲ್ಲಿ ಕಾರ್ಯ ನಿರ್ವಹಣೆ.
1894 – ಸಿಂಧ್ ಪ್ರಾಂತದ ಸುಕ್ಕೂರ್ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಭಂದಪಟ್ಟ ವಿನ್ಯಾಸ ಹಾಗು ಕಾರ್ಯನಿರ್ವಹಣೆ.
1896 – ಸೂರತ್ ನಲ್ಲಿ ಎಸ್ಎಕ್ಯುಟಿವ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಣೆ.
1897 :ಪುಣೆಯಲ್ಲಿ ಕಾರ್ಯನಿರ್ವಾಹಕ ಆಗಿ ಕಾರ್ಯ ನಿರ್ವಹಣೆ.
1898 – ಚೀನಾ ಹಾಗು ಜಪಾನ್ ಭೇಟಿ
1899 – ಪುಣೆಯಲ್ಲಿ ವ್ಯವಸಾಯ ಕಾರ್ಯನಿರ್ವಾಹಕ ಎಂಜಿನಿಯರ್
1901 – ಬಾಂಬೆಯಲ್ಲಿಒಳಚರಂಡಿ ಕಾಮಗಾರಿ ಎಂಜಿನಿಯರ್ ಹಾಗೂ ಒಳಚರಂಡಿ ಮಂಡಳಿಯ ಸದಸ್ಯ – ಭಾರತೀಯ ವ್ಯವಸಾಯ ಆಯೋಗಕ್ಕೆ ದಾಖಲೆಗಳ ಸಲ್ಲಿಕೆ.
1903 – ಫೈಫ್ ಕೆರೆಗೆ ತಾವೇ ಪೇಟೆಂಟ್ ಪಡೆದುಕೊಂಡ ಅತ್ಯಾಧುನಿಕ ವಿಧಾನ ಬಳಸಿ ಸ್ವಯಂಚಾಲಿತ ಆಣೆಕಟ್ಟು ದ್ವಾರಗಳನ್ನು ಅಭಿವೃದ್ಧಿ ಪಡಿಸಿ ಅಳವಡಿಸುವ ಮೂಲಕ ಭಾರತ ನೀರಾವರಿ ಕ್ಷೇತ್ರದಲ್ಲಿ ಹೊಸ ಭಾಷ್ಯ. – ವ್ಯವಸಾಯ ದಲ್ಲಿ ‘ಬ್ಲಾಕ್ ಸಿಸ್ಟಮ್’ ಎಂಬ ಹೊಸ ವಿಧಾನ ಪರಿಚಯಿಸಿದ್ದು.
1904 – ಶಿಮ್ಲಾ ವ್ಯವಸಾಯ ಆಯೋಗದಲ್ಲಿ ಬಾಂಬೆ ಸರ್ಕಾರವನ್ನು ಪ್ರತಿನಿಧಿಸಿದ್ದು.
1907 – ಸುಪೆರಿಂಡೆಂಟ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಣೆ.
1908 – ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿಕೊಟ್ಟಿದ್ದು.
1909 – ಮೂಸಿ ನದಿ ಪ್ರವಾಹದಿಂದ ತತ್ತರಿಸಿದ ಹೈದೆರಾಬಾದ್ ನಗರಕ್ಕೆ ವಿಶೇಷ ನಿರ್ದೇಶಕ ಎಂಜಿನಿಯರ್ ಆಗಿ ನೇಮಕ ನಂತರ ಬ್ರಿಟೀಷ್ ಸರಕಾರದ ಸೇವೆಯಿಂದ ನಿವೃತ್ತಿ.
1909 – ಮೈಸೂರು ಸರ್ಕಾರದ ಮುಖ್ಯ ಎಂಜಿನಿಯರ್ ಹಾಗು ಕಾರ್ಯದರ್ಶಿಯಾಗಿ ನೇಮಕ.
1913 – ಮೈಸೂರು ದಿವಾನರಾಗಿ ನೇಮಕ , ಸಾರ್ವಜನಿಕ ಕಾಮಗಾರಿ ಹಾಗು ರೈಲ್ವೆ ಇಲಾಖೆ ಮೇಲ್ವಿಚಾರಣೆ.
1927-1955: ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ .
(ಚಿತ್ರಗಳು ವಿಎಲ್ ಪ್ರಕಾಶ್)
ಮಾಹಿತಿ ಪೂರ್ಣ ಲೇಖನ.
ಮುದ್ದೇನಹಳ್ಳಿಗೆ ಹೋಗಿ ನೋಡಿದಾಗ ಎಷ್ಟು ಖುಷಿಯಾಗುತ್ತದೆ ಅಂದರೆ ಅದನ್ನು ಅನುಭವಿಸಿಯೇ ನೋಡಬೇಕು. ಈ ಲೇಖನವಂತೂ ಅವರು ಬಗ್ಗೆ ಅನೇಕ ವಿಷಯಗಳನ್ನು ತಿಳಿಸಿಕೊಡುತ್ತದೆ.