21.5 C
Karnataka
Sunday, September 22, 2024

    ಚಿಕ್ಕಮಗಳೂರು ಚಂದವಾಗಿರಲಿ

    Must read

    ನೂತನ

    ಕೆಲ ದಶಕಗಳ ಹಿಂದೆ ಪ್ರವಾಸ ಎಂದರೆ ಅದೊಂದು ರೋಮಾಂಚನದ ಅನುಭವವಾಗಿರುತ್ತಿತ್ತು.  ಅದಕ್ಕಾಗಿ ತಮ್ಮ ತಮ್ಮ ಅಗತ್ಯಗಳ ತಯಾರಿಯಲ್ಲಿ ಮನೆಮಂದಿಯೆಲ್ಲ ಒಂದು ತಿಂಗಳಾದರೂ ಕಳೆಯುತ್ತಿದ್ದರು! ಅದು ತಿಂಡಿಗಳ ತಯಾರಿ, ಬಟ್ಟೆಗಳನ್ನು ಆಯಾ ಸ್ಥಳಗಳಿಗೆ ತಕ್ಕಂತೆ ಜೋಡಿಸಿಕೊಳ್ಳುವುದು, ಮಾರ್ಗದಲ್ಲಿ ಅಂತ್ಯಾಕ್ಷರಿ ಆಡಲು ಹಾಡುಗಳನ್ನು ಪಟ್ಟಿ ಮಾಡಿಕೊಳ್ಳುವುದು, ದಾರಿ ಖರ್ಚಿಗೆ ದುಡ್ಡನ್ನು ಹೊಂದಿಸಿಕೊಳ್ಳುವುದು ..ಮೊದಲಾಗಿ ಹತ್ತು ಹಲವು ಸಣ್ಣ ದೊಡ್ಡ ಬೇಡಿಕೆಗಳು ಪ್ರವಾಸಕ್ಕೆ ಹೊರಡುವವರೆಗೂ ಇರುತ್ತಿದ್ದವು. ಇನ್ನು ಮನೆಯಲ್ಲಿ ಒಂದು ರೋಲ್ ಹಾಕುವ ಕ್ಯಾಮರಾ ಇದ್ದರಂತೂ ನೆನಪುಗಳನ್ನು ದಾಖಲಿಸಿಕೊಳ್ಳಲು ರೋಲ್ ಕೊಳ್ಳುವುದು ಹಾಗೂ ಅಗತ್ಯವಾಗಿ ಬ್ಯಾಟರಿ ಸೆಲ್‌ಗಳನ್ನು ಕೊಳ್ಳುವ ಸಂಭ್ರಮವೇ ಸಂಭ್ರಮ.

    ಆಗ ಪ್ರವಾಸ ಹೊರಡುತ್ತಿದ್ದುದೇ ಬಹುತೇಕವಾಗಿ ಬೇಸಿಗೆ ರಜ ಅಥವಾ ದಸರಾ ರಜಗಳ ಸಂದರ್ಭದಲ್ಲಿ. ಆದರೆ ಈಗ ಹಾಗಲ್ಲ. ವಾರದ ಕೊನೆಯಲ್ಲಿ, ಸಾಲು ಹಬ್ಬಗಳ ದೀರ್ಘ ರಜೆಯಲ್ಲಿ, ಶಹರಿಗರಾದರೆ ಲಾಂಗ್ ವೀಕ್ ಎಂಡ್‌ನಲ್ಲಿ , ಬೇಸರವಾದಾಗಲೆಲ್ಲ , ಪ್ರವಾಸದ ಹುಳ ಕಡಿದಾಗಲೆಲ್ಲ ಅಥವಾ ಶೋಕಿಗಾದರೂ ಸರಿಯೇ ರಜೆಗೆ ಅನುಗುಣವಾಗಿ ಸಮೀಪದ ಅಥವಾ ದೂರದ ಸ್ಥಳಗಳಿಗೆ ಹೋಗಿಬಿಡುವುದು ಸಾಮಾನ್ಯ. ಈ ಬಾರಿ ಕೋವಿಡ್ ಇಂಥ ಪ್ರವಾಸಗಳಿಗೆ ತಡೆ ಹಾಕಿತ್ತು. ಆದರೆ ಇಷ್ಟು ದಿನ ಮನೆಯಲ್ಲೇ ಕೂತವರು ನಿಧಾನವಾಗಿ ಮತ್ತೆ ಸುತ್ತಾಡಲು ಆರಂಭಿಸುತ್ತಿದ್ದಾರೆ.

    ಇದಕ್ಕೆ ಹೆಚ್ಚಿನ ಪೂರ್ವ ತಯಾರಿಯೂ ಬೇಕಿಲ್ಲ. ಇಂಟರ್‌ನೆಟ್ಟಿನಲ್ಲ ಸ್ಥಳಗಳನ್ನು ಜಾಲಾಡಿ ಅಲ್ಲಿನ ಹೊಟೆಲ್ಲುಗಳಲ್ಲೋ, ಹೋಂ ಸ್ಟೇಗಳಲ್ಲೋ ಸ್ಥಳ ಕಾದಿರಿಸಿದರೆ ಮುಗಿಯಿತು. ಸ್ವಂತ ಕಾರಿಗಾದರೆ ಇಂಧನ ಹಾಕಿಸುವ ಕೆಲಸವಾದರೂ ಇದ್ದೀತು. ಝೂಂ ಕಾರಾದರೆ, ಬಾಡಿಗೆ ಕಾರಾದರೆ ದುಡ್ಡು ತುಂಬುವುದು ಅಷ್ಟೇ. ಸಮೀಪದ ಸ್ಥಳಗಳಾದರೆ ಡಿಕ್ಕಿಯಲ್ಲಿ ಕೆಲವಾರು ಬಟ್ಟೆ ಬರೆಗಳು, ಮೊಬೈಲ್ ಫೋನ್ ಹಾಗೂ ಚಾರ್ಜರ್‌ಗಳು, ಇವುಗಳ ಹೊರತಾಗಿ ಪರ್ಸ ತುಂಬ ದುಡ್ಡು ಅಥವಾ ಕೆಡಿಟ್/ಡೆಬಿಟ್ ಕಾರ್ಡಗಳು ಉಳಿದ ಎಲ್ಲ ಸೇವೆಗಳನ್ನು ಪೂರೈಸಲು ಸನ್ನದ್ಧವಾಗಿರುತ್ತವೆ.

    ಇಂಥ ಪ್ರವಾಸಗಳ ದಾಹಕ್ಕೆ ಕರ್ನಾಟಕದಲ್ಲಿ ಗುರಿಯಾದದ್ದು ಕೊಡಗು ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳು. ಅದರಲ್ಲೂ ಕೊಡಗು, ಪ್ರವಾಸಿಗರ ದಾಳಿಗೆ ಹೋಂ ಸ್ಟೇ ಎಂಬ ಹೊಸ ತಂತ್ರವನ್ನು ಹೆಣೆದು ಅವರನ್ನು ಆಕರ್ಷಿಸಿದ್ದಷ್ಟೆ ಅಲ್ಲ. ಆ ಮೂಲಕ ಅಲ್ಲಿನ ಜನ ಸಾಕಷ್ಟು ಆದಾಯವನ್ನೂ ಮಾಡಿಕೊಂಡರು. ಹೀಗೆ ಸ್ಥಿತಿವಂತರಾದವರನ್ನು ಕಂಡು ಸಣ್ಣ ಪುಟ್ಟ ಮನೆಗಳವರೂ ಕೂಡ ಪ್ರವಾಸಿಗರಿಗೆ ಒಂದೆರಡು ದಿನದ ಮಟ್ಟಿಗೆ ತಮ್ಮ ಮನೆಯಲ್ಲಿ ಇದ್ದ ಎರಡನೇ ಕೋಣೆಯನ್ನು ಬಿಟ್ಟುಕೊಟ್ಟು ಕೈಲಾದಷ್ಟು ಗಳಿಸಿಲು ಪ್ರಯತ್ನಿಸಿದರು. ಪ್ರವಾಸದ ಆಕರ್ಷಣೆಯಿಂದ ಕೊಡಗು ಜಿಲ್ಲೆಯಲ್ಲಿ ಬಹಳ ಬದಲಾವಣೆಗಳಾದವು. 

    ಹೋಟೆಲ್ಲುಗಳು, ಹೋಂ ಸ್ಟೇಗಳು ಹೆಚ್ಚಿದಂತೆ ಸಾರಿಗೆ, ಸಾಗಾಟವೂ ಹೆಚ್ಚಿತು. ಮಹಾ ಪ್ರಳಯ ಸನ್ನಿವೇಶದ ನಂತರ ಕೊಡಗಿಗೆ ಪ್ರವಾಸಿಗರ ಸಂಖ್ಯೆ ಒಮ್ಮೆಲೇ ಕುಸಿದು ಹೋಗಿತ್ತು. ಈಗ ಆ ಸ್ಥಾನವನ್ನು ತುಂಬಿಕೊಡಲು ಸಿದ್ಧವಾಗಿದ್ದು ಚಿಕ್ಕಮಗಳೂರು ಜಿಲ್ಲೆ. 

    ಸುತ್ತುವರೆದ ಪರ್ವತಗಳ ಕೋಟೆ, ನಿತ್ಯ ಹರಿದ್ವರ್ಣದ ಕಾಡಿನ ನಡುವೆ ತಣ್ಣಗೆ ಹಾಯಾಗಿರುವ ಈ ‘ಸಾಂಬಾರಗಳ ನಾಡು’ ಈಗ ಪ್ರವಾಸಿಗರ ದಾಂಗುಡಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಕಳೆದ ದಸರೆಯ ಸಾಲು ರಜದ ಸಂದರ್ಭದಲ್ಲಿ ಬಾಬಾ ಬುಡನ್‌ಗಿರಿಯ ಬೆಟ್ಟದ ಮೇಲೆ ನಾಲ್ಕು ತಾಸುಗಳ ಟ್ರಾಫಿಕ್ ಜಾಮ್ ಆಗಿದ್ದು ಇದಕ್ಕೆ ಒಂದು ನಿದರ್ಶನ ! ಸಂಸಾರ ಸಮೇತ ಅಲ್ಲಿಗೆ ತೆರಳಿದ್ದ ಬೆಂಗಳೂರಿಗರೊಬ್ಬರು ‘ಬೆಂಗಳೂರಿನ ಟ್ರಾಫಿಕ್ಕನ್ನು ನಾವು ಅಲ್ಲಿಯೂ ಮಿಸ್ ಮಾಡಿಕೊಳ್ಳಲಿಲ್ಲ ‘ ಎಂದು ವ್ಯಂಗ್ಯವಾಡಿದರು.

    ಚಿಕ್ಕಮಗಳೂರು, ‘ಎಸ್ಟೇಟ್ ಮಾಲೀಕರ ’ ಊರು ಎಂದೇ ಪ್ರಸಿದ್ಧ. ಸಮೃದ್ಧ ನೀರು, ಮಳೆಯ ಸೌಕರ್ಯದ ಕಾರಣ ಅಡಿಕೆ, ಕಾಳು ಮೆಣಸು, ಇತರ ಸಾಂಬಾರ ಪದಾರ್ಥಗಳು, ಕಾಫಿಯನ್ನು ಬೆಳೆದು ಸ್ಥಿತಿವಂತರಾಗಿರುವ ಇಲ್ಲಿಯ ಜನ ಪ್ರವಾಸೋದ್ಯಮದತ್ತ ಇದುವರೆಗೂ ಅಷ್ಟಾಗಿ ಒಲವು ತರಿಸಿರಲಿಲ್ಲ. ಅಲ್ಲೊಂದು ಇಲ್ಲೊಂದು ಹೋಂ ಸ್ಟೇಗಳು ಬಿಟ್ಟರೆ ದೊಡ್ಡ ಹೊಟೆಲ್ಲುಗಳಾಗಲೀ, ಲಾಡ್ಜುಗಳಾಗಲೀ ಇಲ್ಲಿ ಇಲ್ಲ. ಜಿಲ್ಲಾ ಕೇಂದ್ರವಾದರೂ ಚಿಕ್ಕಮಗಳೂರು ಚಿಕ್ಕ ಪಟ್ಟಣದಂತೆ ಇದೆ. ಆದರೆ ಈ ಜಿಲ್ಲೆಯ ಸುತ್ತಮುತ್ತಲೂ ಪ್ರವಾಸಿಗರನ್ನು ಸೆಳೆಯಬಲ್ಲ ಅನೇಕ ಸ್ಥಳಗಳಿವೆ. ಚಾರಣಿಗರಿಗೆ ಹೇಳಿ ಮಾಡಿಸದಂತಿರುವ ಅನೇಕ ಬೆಟ್ಟಗಳು ಇಲ್ಲಿವೆ. ಇದು ಪ್ರವಾಸೋದ್ಯಮ ಇಲಾಖೆಯನ್ನು ಚುರುಕಾಗಿಸಿದೆ. ಚಿಕ್ಕಮಗಳೂರಿನ ಪ್ರವಾಸಕ್ಕೆ ಕೈಬೀಸಿ ಕರೆಯುವ ಅನೇಕ ಜಾಹಿರಾತುಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿವೆ. 

    ಚಿಕ್ಕಮಗಳೂರಿನ ವಿಶೇಷತೆಯನ್ನು ಸಾರುವ , ೧೨ ವರ್ಷಗಳಿಗೊಮ್ಮೆ ಅರಳುವ ಕುರಂಜಿ ಹೂವು ಬಾಬಾ ಬುಡನ್‌ಗಿರಿ ಹಾಗೂ ಮುಳ್ಳಯ್ಯನಗಿರಿ ಬೆಟ್ಟಗಳಲ್ಲಿ ಅರಳುವ ಕಾಲ ಈ ವರ್ಷ ಅಕ್ಟೋಬರಿನಿಂದ ಆರಂಭವಾಗುತ್ತದೆ ಎಂದು ಅಂತರ್ಜಾಲದಲ್ಲಿ ನೋಡಿದ ಪ್ರವಾಸಿಗರೆಲ್ಲ ಅಲ್ಲಿಗೆ ಸಾಲುಗಟ್ಟಿ ಹೊರಟಿದ್ದಾರೆ. ಉಳಿದಂತೆ ವಾರದ ಕೊನೆಗೆ ಅಲ್ಲಿ ಸುಮಾರು ೨೦೦-೩೦೦ ಪ್ರವಾಸಿಗರು ಬರುತ್ತಾರೆ. ಚಿಕ್ಕಮಗಳೂರಿನ ಧೋ ಎಂದು ಸುರಿವ ಮಳೆಗಾಲದಲ್ಲೂ ಪ್ರವಾಸಿಗರು ಇದ್ದೇ ಇರುತ್ತಾರೆ ಎನ್ನುವುದು ಅಚ್ಚರಿ ಹುಟ್ಟಿಸುವ ಸಂಗತಿ.


     ಪ್ರವಾಸೋದ್ಯಮ ಒಳ್ಳೆಯ ಆದಾಯದ ಮೂಲ ಎಂದು ಮಲೇಷಿಯಾದಂಥ ಪುಟ್ಟ ದೇಶ ಹಾಗೂ ಕೇರಳದಂಥ ಸಣ್ಣ ರಾಜ್ಯ ಜಗತ್ತಿಗೇ ತೋರಿಸಿಕೊಟ್ಟ ಮೇಲೆ ಪ್ರವಾಸೋದ್ಯಮದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಸ್ಥಳೀಯ ಉತ್ಸವ, ಜಾತ್ರೆ, ಊಟ-ತಿಂಡಿ ಮೊದಲಾದ ಎಲ್ಲವನ್ನೂ ಪ್ರವಾಸೋದ್ಯಮದ 

    ಹೆಸರಿನಲ್ಲಿ ಬಳಸಿಕೊಂಡು ಹಣ ಮಾಡಲಾಗುತ್ತಿದೆ. ಇದು ಒಂದು ಭಾಗದ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಬಹು ಒಳ್ಳೆಯ ಮಾಧ್ಯಮವೂ ಆಗಿರುವುದರ ಜೊತೆಗೆ ಅನೇಕ ಸಂದಿಗ್ಧಗಳನ್ನೂ ತರುತ್ತಿದೆ. ಇದರಲ್ಲಿ ಮುಖ್ಯವಾದದ್ದು ಸುಗಮ ಸಾಗಾಟಕ್ಕಾಗಿ ರಸ್ತೆಯ ನಿರ್ಮಾಣ. ಕಾಡಿನಲ್ಲಿ ರಸ್ತೆ ಮಾಡುವುದು ಎಂದರೆ ಕಾಡೆಂಬ ಅರ್ನಘ್ಯ ರತ್ನವನ್ನು ದೋಚುವುದು. ಇದಕ್ಕೆ ಸರ್ಕಾರಗಳೇ ಮುಂದೆ ನಿಲ್ಲುವುದು ದೊಡ್ಡ ದುರಂತ. ಇಂತಹ ದುರಂತ ಈಗ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ.

      
    ಚಿಕ್ಕಮಗಳೂರಿನಿಂದ ಬಾಬಾ ಬುಡನ್‌ಗಿರಿಗೆ ಸರ್ಕಾರಿ ಬಸ್‌ಗಳು ಇನ್ನೂ ಇಲ್ಲ. ಏಕೆಂದರೆ ಆ ಕಡಿದಾದ , ಕಿರುಹಾದಿಯ, ತೀವೃಏರು ಬೆಟ್ಟಕ್ಕೆ ಮಿನಿ ಬಸ್‌ಗಳು ಮಾತ್ರ ಹೋಗಬಹುದು. ಇದನ್ನು ಬಂಡವಾಳವಾಗಿಸಿಕೊಂಡು ಖಾಸಗಿ ಮಿನಿ ಬಸ್‌ಗಳು ಅಲ್ಲಿಗೆ ಓಡಾಡುತ್ತವೆ. ಅದೂ ನಿಯಮಿತ ಸಮಯದಲ್ಲಿ ಮಾತ್ರ. ರಸ್ತೆಗಳು ತಕ್ಕ ಮಟ್ಟಿಗೆ ವಿಶಾಲವಾಗಿರುವುದರಿಂದ ತಮ್ಮ ಸ್ವಂತ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಅಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.

    ಆದರೆ ಮುಳ್ಳಯ್ಯನಗಿರಿಯ ರಸ್ತೆಗಳು ಬಹಳ ಕಿರಿದಾಗಿವೆ. ಇದು ಕಾಫಿ ಪ್ಲಾಂಟೇಶನ್ ನಡುವೆ ದಟ್ಟ ಅರಣ್ಯದಲ್ಲೇ ಸಾಗುವ ಹಾದಿ. ಆದ್ದರಿಂದ ಅಲ್ಲಿಗೆ ಯಾವುದೇ ಬಸ್ ವ್ಯವಸ್ಥೆ ಸಾಧ್ಯವಿಲ್ಲ. ಸಮುದ್ರ ಮಟ್ಟದಿಂದ ಸುಮಾರು ೬೩೫೦ ಅಡಿ ಎತ್ತರವಿರುವ ಈ ಮುಳ್ಳಯ್ಯನಗಿರಿ ಈ ಕಾರಣದಿಂದಲೇ ಪ್ರವಾಸಿಗರಿಗೆ ಇದುವರೆಗೂ ಅಪರಿಚಿತವಾಗಿಯೇ ಉಳಿದಿದೆ. ಆದರೆ ಈ ಬಾರಿಯ ಕುರಂಜಿ ಹೂವಿನ ಆಕರ್ಷಣೆ ಹಾಗೂ ಕೊಡಗಿನಲ್ಲಿ ಪ್ರವಾಸೋದ್ಯಮ ಸ್ಥಗಿತವಾಗಿರುವುದು ಪ್ರವಾಸಿಗರು ಮುಳ್ಳಯ್ಯನಗಿರಿಯನ್ನು ಹುಡುಕುವಂತೆ ಮಾಡಿದೆ.

    ಚಿಕ್ಕಮಗಳೂರಿನಿಂದ ೨೨ ಕಿ.ಮೀ ದೂರದಲ್ಲಿರುವ ಇಲ್ಲಿಗೆ ಆಟೋಗಳು, ಟ್ಯಾಕ್ಸಿಗಳು ಹಾಗೂ ಸ್ವಂತ ವಾಹನಗಳು ಮಾತ್ರ ಓಡಾಡುತ್ತವೆ. ಈ ಯಾವುದೇ ವಾಹನಗಳಾದರೂ ಬೆಟ್ಟದ ಮಧ್ಯದಲ್ಲಿರುವ ಸೀತಾಳಯ್ಯನಗಿರಿಯ ಬುಡದವರೆಗೆ ಮಾತ್ರ ಹೋಗುತ್ತವೆ. ಅಲ್ಲಿಂದ ೨.೫ ಕಿ.ಮೀ. ದೂರ ನಡೆದು ಹೋಗಬೇಕು ಅಥವಾ ಅಲ್ಲಿ ಕಾಯುತ್ತಿರುವ ಖಾಸಗಿ ಬಾಡಿಗೆ ಜೀಪುಗಳಲ್ಲಿ ಹೋಗಬೇಕು. ತೀರ ಕಿರಿದಾದ ರಸ್ತೆಗಳು, ತೀವೃ ತಿರುವುಗಳು, ಆಳ ಪ್ರಪಾತಗಳು ಎದುರಾಗುವ ಈ ಏರು ರಸ್ತೆಯಲ್ಲಿ ಸ್ವಂತ ವಾಹನಗಳ ಚಾಲನೆ ನಿಜಕ್ಕೂ ಒಂದು ಸವಾಲೇ ಸರಿ. ಜೀಪುಗಳೂ ಕೂಡ ಪ್ರಪಾತ ದರ್ಶನ ಮಾಡಿಸುತ್ತಲೇ ಸಾಗುತ್ತವೆ. ಈ ಎಲ್ಲ ಕಾರಣಗಳಿಂದ ಜನನಿಬಿಡತೆ ಇಲ್ಲಿ ಇಲ್ಲ.


    ಈಗ ಸರ್ಕಾರ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಅಗಲ ರಸ್ತೆಗಳ ನಿರ್ಮಾಣ ಮಾಡುತ್ತಿದೆ. ಕೆಂಪು ಜೇಡಿ ಮಣ್ಣಿನ ಆ ರಸ್ತೆಗಳು ಅಲ್ಲಿನ ಭsಮಿಯ ಮೃದುತ್ವವನ್ನು ತೋರಿಸುತ್ತವೆ. ಬೆಟ್ಟದ ಒಂದು ಬದಿಯ ಬದುಗಳನ್ನು ಕ್ರೇನುಗಳಿಂದ ಸವರಿರುವುದರಿಂದ ಕಲ್ಲಿನ ಅನೇಕ ಪದರುಗಳು ಗೋಚರಿಸುತ್ತವೆ. ಈ ಪದರಗಳು ಬೆಟ್ಟದ ದೀರ್ಘ ಆಯುಷ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಬಾಡಿಗೆ ಜೀಪುಗಳು ಬೆಟ್ಟದ ಬುಡದವರೆಗೆ ಮಾತ್ರ 

    ಕೊಂಡೊಯುತ್ತವೆ. ಅಲ್ಲಿಂದ ಸುಮಾರು ೩೦೦-೪೦೦ ಕಿರಿದಾದ ಮೆಟ್ಟಿಲುಗಳನ್ನು ಏರಿ ಮುಳ್ಳಯ್ಯನ ದರ್ಶನ ಪಡೆಯಬೇಕು. ಈ ಮೆಟ್ಟಿಲುಗಳ ಬದಿಯಲ್ಲಿ ಹಿಡಿಕೆಗಳು ಇಲ್ಲವಾದ್ದರಿಂದ ಕಡಿದಾದ ಬೆಟ್ಟವನ್ನು ಏರುವುದು ಬಹಳ ಕಷ್ಟ. ಬೆಟ್ಟದ ಬುಡದ ಮೆಟ್ಟಿಲುಗಳ ಸಮೀಪ ಎಳೆನೀರು, ಬಿಸ್ಕತ್ತುಗಳು, ಹಣ್ಣುಗಳು, ತಂಪು ಪಾನೀಯಗಳು, ನೀರು, ಐಸ್ಕ್ರೀಂ ಇವಿಷ್ಟು ಮಾತ್ರ ಸಧ್ಯಕ್ಕೆ ಲಭ್ಯ ಇವೆ. ಇವುಗಳನ್ನು ಮೇಲೆ ಸಾಗಿಸಲು ಸಣ್ಣ ಕ್ಯಾರಿಯರ್ ವಾಹನಗಳು ಓಡಾಡುತ್ತವೆ. ಇದು ಇಂದಿನ ಮುಳ್ಳಯ್ಯನಗಿರಿ. ಆದರೆ ಬಹುಬೇಗ ಇದರ ಸ್ವರೂಪ ಬದಲಾಗುವ ಎಲ್ಲ ಲಕ್ಷಣಗಳೂ ಈಗ ಅಲ್ಲಿ ಕಾಣಿಸುತ್ತಿವೆ. ರಸ್ತೆ ಅಗಲೀಕರಣವಾದ ನಂತರ ವಾಹನ ಸಾಗಾಟ ತೀವೃವಾಗಿ ಹೆಚ್ಚಬಹುದು. ಜೊತೆಗೆ ಚಾರಣಿಗರ ಸಂಖ್ಯೆಯೂ ಏರಬಹುದು. ಇದರೊಂದಿಗೆ ತಿಂಡಿ ತಿನಿಸುಗಳ ಮಾರಾಟಗಾರರು, ಹೊಟೆಲ್ಲುಗಳು, ಕೊನೆಗೆ ಲಾಡ್ಜಗಳು ಎಲ್ಲವೂ ಒಂದರ ಹಿಂದೆ ಒಂದು ಬಂದೇ ಬರುತ್ತವೆ. ಈ ಎಲ್ಲ ಬೆಳವಣಿಗೆಗಳಿಗೆ ಬಹಳ ಕಾಲ ಹಿಡಿಯುವುದಿಲ್ಲ. ರಸ್ತೆ ಅಗಲೀಕರಣವಾದ ಕೂಡಲೇ ನೋಡುನೋಡುತ್ತಲೇ ಇವೆಲ್ಲ ಆಗಿ ಬಿಡುತ್ತವೆ. ಆಗ ಮುಳ್ಳಯ್ಯನಗಿರಿಯಲ್ಲಿರುವ ಈಗಿನ ಪ್ರಶಾಂತತೆ, ಸ್ವಚ್ಛತೆ, ಶುದ್ಧ ಗಾಳಿ ಎಲ್ಲವೂ ಮಾಯವಾಗಿ ವ್ಯಾಪಾರೀಕರಣ ತಾಂಡವವಾಡುತ್ತದೆ. ಇದು ನಮ್ಮ ಪ್ರವಾಸೋದ್ಯಮ ಅಭಿವೃದ್ಧಿಯ ಮಾದರಿ!

    ಮುಳ್ಳಯ್ಯನಗಿರಿಗೆ ಸರ್ಕಾರ ರಸ್ತೆಗಳನ್ನು ನಿರ್ಮಿಸಿದರೂ ಉಳಿದ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಇನ್ನು ತಿಂಡಿ ತಿನಿಸುಗಳ ಅಂಗಡಿಗಳು, ಹೊಟೆಲ್ಲುಗಳು ಆಗದಂತೆ ನೋಡಿಕೊಂಡರೆ ಒಳಿತು. ಅಲ್ಲಿಂದ ಚಿಕ್ಕಮಗಳೂರೇನು ದೂರವಿಲ್ಲ. ಅಲ್ಲಿ ಈಗಾಗಲೇ ಇರುವ ಹೊಟೆಲ್ಲುಗಳು, ಹೋಂಸ್ಟೇಗಳು ಇದರ ಸದುಪಯೋಗ ಪಡೆಯಬಹುದು. ಕಡಿದಾದ ಬೆಟ್ಟಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಕಡಿದು ನಾಡಾಗಿಸಿದ ದುರಂತವನ್ನು ಈಗಾಗಲೇ ನಾವು ಹರಿದ್ವಾರ, ಕೇದಾರನಾಥ, ಹೃಷಿಕೇಶ, ಕೊಡಗು, ಕೇರಳಗಳಲ್ಲಿ ಕಂಡಿದ್ದೇವೆ. ಇವುಗಳಿಂದ ಪಾಠ ಕಲಿತಾದರೂ ಸರ್ಕಾರಗಳು ಪ್ರವಾಸೋದ್ಯಮ ಅಭಿವೃದ್ಧಿಯ ವ್ಯಾಖ್ಯೆಯನ್ನು ಬದಲಿಸಿಕೊಳ್ಳಬೇಕಾಗಿದೆ.

    ರಸ್ತೆ ಅಗಲೀಕರಣ, ಕಾಡು ಕಡಿಯುವುದು, ಬೆಟ್ಟಗಳನ್ನು ಸವರುವುದರಿಂದ ಅಭಿವೃದ್ಧಿಯ ಬದಲಾಗಿ ಅವಘಡಗಳೇ ಆಗಿದ್ದನ್ನು ಕಣ್ಣಾರೆ ಕಂಡೂ ಅದೇ ತಪ್ಪನ್ನು ಮಾಡಬಾರದು. ಕರ್ನಾಟಕದ ಊಟಿಯಾಗಿರುವ ತಂಪು ತಂಪು ಚಿಕ್ಕಮಗಳೂರು ಸಮೃದ್ಧ ಕಾಡು, ನೀರು, ಮಳೆ-ಬೆಳೆಗಳಿಂದ ಸಂಪನ್ನವಾಗಿರಲಿ ಎಂದು ಹಾರೈಸುವ ಸನ್ಮತಿಯನ್ನು ಮುಳ್ಳಯ್ಯ ಹಾಗೂ ಬುಡನ್‌ಗಿರಿಯ ಬಾಬಾ ಎಲ್ಲರಿಗೂ ನೀಡಲಿ. 

                                   *

    ನೂತನ ಎಮ್. ದೋಶೆಟ್ಟಿ
    ನೂತನ ಎಮ್. ದೋಶೆಟ್ಟಿ
    ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ ಆಗಿರುವ ನೂತನ ಎಂ ದೋಶೆಟ್ಟಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಈಗ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿ. ಹಲವಾರು ಕವನ ಸಂಕಲನಗಳು, ಕಥಾ ಸಂಕಲನ, ಪ್ರಕಟವಾಗಿವೆ. ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ., ಆಕಾಶವಾಣಿಯಲ್ಹಿ ಮಾಡಿದ ಕಾರ್ಯಕ್ರಮಗಳಿಗೆ ಹಲವಾರು ಪ್ರಶಂಸನಾ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ.
    spot_img

    More articles

    4 COMMENTS

    1. ಚೆಂದ‌ ಲೇಖನ.‌ಈ ಸಲ ಅಕ್ಟೋಬರ್ ನಲ್ಲಿ ಮುಳ್ಳಯ್ಯನಗಿರಿ ಬೆಟ್ಟ, ಬಾಬಾ ಬುಡನ್ ಗಿರಿ ನೋಡುವ ಆಸೆ ಹೆಚ್ಚಾಯಿತು..

      • ಥ್ಯಾಂಕ್ಯೂ..ಖಂಡಿತ ಹೋಗಿ.. ನಿಮ್ಮ ಜಿಲ್ಲೆಯ ಅನುಭವವೇ ಇಲ್ಲೂ…ಆದ್ರೆ ಮುಳ್ಳಯ್ಯನಗಿರಿ ಹತ್ತೋದು ಒಳ್ಳೆಯ ಅನುಭವ

    LEAVE A REPLY

    Please enter your comment!
    Please enter your name here

    Latest article

    error: Content is protected !!