| ಬಲಾಢ್ಯವಾಗುತ್ತಿರುವ ಭಾರತವನ್ನು ಅಷ್ಟು ಸುಲಭವಾಗಿ ಬಗ್ಗು ಬಡಿಯಲು ಅಸಾಧ್ಯ ಎಂಬುದು ಚೀನಾಕ್ಕೆ ಗೊತ್ತಿದೆ. ಅದಕ್ಕಾಗಿಯೇ ಅದು ಲಡಾಕ್ ಗಡಿ ಭಾಗದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದೆ. ಈ ಮೂಲಕ ಈಗಾಗಲೇ ಕೋವಿಡ್ -19 ಸಮಸ್ಯೆಯಿಂದಾಗಿ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಭಾರತಕ್ಕೆ ಮತ್ತಷ್ಟು ಏಟು ನೀಡುವ ಯತ್ನ ಮಾಡಿದೆ. ತನ್ನ ಮನೆಯಲ್ಲೇ ಊಟಕ್ಕೆ ಮಿತಿ ಹಾಕಿರುವ ಚೀನಾ, ಆದರೂ ನನ್ನ ಒಂದು ಕಣ್ಣು ಹೋದರೂ ಸರಿ, ಅವರ ಕಣ್ಣನ್ನೂ ತೆಗೆಯಬೇಕು ಎಂಬ ಕುತಂತ್ರಕ್ಕೆ ಮುಂದಾಗಿದೆ.
ಗಡಿಯಲ್ಲಿ ಸೇನೆಪೂರ್ವ ಲಡಾಕ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಅತಿಕ್ರಮಣದ ದುಸ್ಸಾಹಸ ಮಾಡಿದೆ. ಅದನ್ನು ಬಹುತೇಕ ಭಾರತೀಯ ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿ, ಎತ್ತರದ ಪ್ರದೇಶದ ಮೇಲೆ ಪಾರಮ್ಯ ಸಾಧಿಸಿದ್ದಾರೆ. ಆದರೆ, ಬೀಜಿಂಗ್ ನ ಈ ತಂತ್ರದ ಹಿಂದಿದೆ ಭಾರತದ ಆರ್ಥಿಕತೆಯ ಮೇಲೆ ಹೊಡೆತ ನೀಡುವ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಭಾಗದಲ್ಲಿ ಸುಮಾರು 250ರಿಂದ 300 ಕಿ.ಮೀ. ಗಡಿ ಭಾಗವನ್ನು ಭಾರತ-ಚೀನಾ ಹಂಚಿಕೊಂಡಿದೆ. ಸದ್ಯದ ಮಟ್ಟಿಗೆ 25ರಿಂದ 30 ಸಾವಿರ ಯೋಧರನ್ನು (ಟುಟು, ಘಾತಕ್ ಪಡೆ ಹೊರತು ಪಡಿಸಿ) ನಿಯೋಜಿಸಲಾಗಿದೆ. ಇದರಿಂದ ದೇಶದ ಬೊಕ್ಕಸಕ್ಕೆ ಹಾನಿ ಮಾಡುವ ಏಕಮಾತ್ರ ಉದ್ದೇಶವೇ ಚೀನಾದ ಈ ಗಡಿ ಕಬಳಿಸುವ ಷಡ್ಯಂತ್ರದ ಹಿಂದಿರುವ ಉದ್ದೇಶವಾಗಿದೆ.
1962ಕ್ಕೆ ಹೋಲಿಸಿದರೆ ಈಗ ಭಾರತ ಚೀನಾಕ್ಕಿಂತ ಸೇನಾ ಬಲದಲ್ಲಿ ಕಡಿಮೆಯೇನಿಲ್ಲ. ಹೀಗಾಗಿ ಅದನ್ನು ಮಣಿಸಲು ಕೇವಲ ಸೇನಾ ಸಾಮರ್ಥ್ಯವಲ್ಲ ಬದಲಾಗಿ ಆರ್ಥಿಕ ಒತ್ತಡವನ್ನೂ ಹೇರಬೇಕು ಎಂಬುದು ಚೀನಾದ ಈಗಿನ ಪ್ರತಿಯೊಂದು ನಡೆಯೂ ತೋರಿಸಿಕೊಡುತ್ತಿದೆ. ಈ ಮೂಲಕ ಸಶಸ್ತ್ರ ಹೋರಾಟದ ಬದಲಾಗಿ ಅಡ್ಡ ದಾರಿಯಲ್ಲಿ ಭಾರತವನ್ನು ಮಣಿಸಲು ಅದು ಮುಂದಾಗಿದೆ.
ಆದರೆ, ಭಾರತವೇನೂ ಕಡಿಮೆಯಿಲ್ಲ. ಈಗಾಗಲೇ ಚೀನಾ ಉತ್ಪನ್ನಗಳಾದ ಹಲವಾರು ಆಪ್ ಗಳನ್ನು ನಿಷೇಧಿಸುವ ಮೂಲಕ ತಕ್ಕ ತಿರುಗೇಟು ನೀಡಿದೆ ಬಿಡಿ.ಅಗಾಧ ವೆಚ್ಚಈಗಾಗಲೇ ಕೋವಿಡ್-19 ಸಮಸ್ಯೆಯಿಂದ ಎದುರಾಗಿರುವ ಸಮಸ್ಯೆಯನ್ನು ಭಾರತ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಎದುರಿಸುತ್ತಿವೆ ಎಂಬುದು ಹಗಲಿನಷ್ಟೇ ನಿಚ್ಚಳ. ಈಗ ಮುಂಗಾರು ಕಳೆದು ಚಳಿಗಾಲ ಆರಂಭವಾಗಲಿದೆ. ಉತ್ತರ ಭಾರತದಲ್ಲಿ ಅಕ್ಟೋಬರ್ ಮಧ್ಯ ಭಾಗದಿಂದ ಚಳಿಗಾಲ ಆರಂಭವಾಗುತ್ತಿದ್ದು, ಹಿಮಪಾತವಾಗುತ್ತದೆ.
ಈ ಸಂದರ್ಭದಲ್ಲಿ ಒಂದು ಅಂಶವನ್ನು ನಾವು ನೆನಪಿಸಿಕೊಳ್ಳಲೇಬೇಕು. 1962ರ ಚೀನಾ ಜತೆಗಿನ ಯುದ್ಧದ ಸಮಯದಲ್ಲಿ ನಮ್ಮ ಬಹುತೇಕ ಸೈನಿಕರು ಚೀನಾದ ಆಕ್ರಮಣದಿಂದಲೇ ಸಾವನ್ನಪ್ಪಿಲ್ಲ. ಬದಲಾಗಿ ಹವಾಮಾನದಲ್ಲಾದ ಬದಲಾವಣೆಯಿಂದ ಕೊರೆಯುವ ಚಳಿಯಲ್ಲಿ (ಮೂಲಭೂತ ಸೌಕರ್ಯ ಕೊರತೆಯಿಂದ) ಕೈ-ಕಾಲು ಬೆರಳು ಸೇರಿದಂತೆ ದೇಹದ ಅಂಗಾಂಗಳು ಕೊಳೆತು ಹೋಗಿ ಸತ್ತು ಹೋಗಿದ್ದರು ಎಂದು ಹೇಳಲಾಗುತ್ತದೆ (ಇಂಡಿಯಾಸ್ ಚೈನಾ ವಾರ್ – ನೆವಿಲ್ ಮ್ಯಾಕ್ಸ್ ವೆಲ್ ).
ಈಗ ಹಳೆ ಭಾರತವಲ್ಲ
1962ರ ಭಾರತದ ಪರಿಸ್ಥಿತಿಯನ್ನೇ ಅವಲೋಕಿಸಿ ಮತ್ತೊಮ್ಮೆ ಚೀನಾ ದುಸ್ಸಾಹಸಕ್ಕೆ ಮುಂದಾಗಿದೆ. ಆದರೆ ಈಗ ಸನ್ನಿವೇಶ ಬದಲಾಗಿದೆ. ಭಾರತವು ಬಲಾಢ್ಯವಾಗಿದೆ. ಅಂತಾರಾಷ್ಟ್ರೀಯ ಸಮುದಾಯದ ಸಕಲ ಬೆಂಬಲವನ್ನೂ ಪಡೆದಿದೆ.
ಸುಮಾರು 250ರಿಂದ 300 ಕಿ.ಮೀ. ಉದ್ದವಿರುವ ಗಡಿ ಭಾಗದಲ್ಲಿ ಭಾರತ ಈಗಾಗಲೇ 25ರಿಂದ 30 ಸಾವಿರ ಯೋಧರನ್ನು ನಿಯೋಜಿಸಿದೆ.ಇನ್ನು ಮುಂದೆ ಆರು ತಿಂಗಳು ಅಂದರೆ ಚಳಿಗಾಲದಲ್ಲಿ ಅಲ್ಲಿ ಸೇನೆ ನಿಯೋಜನೆಯನ್ನು (ಐದು ಅಂಶಗಳ ಒಪ್ಪಂದವಾಗಿದ್ದರೂ) ಹಿಂತೆಗೆಯುವ ಪರಿಸ್ಥಿತಿಯಲ್ಲಿ ಭಾರತ ಇಲ್ಲ.ಹೀಗಾಗಿ ಭಾರತ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಬೇಕಾಗಿದೆ.
1993ರಲ್ಲಿ ಚೀನಾವು ಭಾರತದ ಜತೆಗೆ ಒಪ್ಪಂದ ಮಾಡಿಕೊಂಡಿದ್ದರೂ ಬಳಿಕ ಪದೇ ಪದೇ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಈ ಗಡಿ ಭಾಗದಲ್ಲಿ ಬಂಕರ್ ಗಳ ನಿರ್ಮಾಣ, ಹೆದ್ದಾರಿ ರಚನೆ ಸೇರಿದಂತೆ. ಒಪ್ಪಂದವನ್ನು ಉಲ್ಲಂಘನೆ ಮಾಡಿಕೊಂಡೇ ಬಂದಿತ್ತು ಎಂಬುದು ಇಲ್ಲಿ ಗಮನಾರ್ಹ. ಚೀನಾವು ತನ್ನ ರಾಜಕೀಯ ಲಾಭಕ್ಕಾಗಿ ಇಂತಹ ಕೆಲಸವನ್ನು ಮುಂದುವರಿಸುತ್ತಲೇ ಬಂದಿದೆ. ಎಲ್ ಎಸಿ ಸಮೀಪ ಸೇನಾ ಜಮಾವಣೆ ಮಾಡುವುದನ್ನು ಮುಂದುವರಿಸುವ ಮೂಲಕ ಉಭಯ ದೇಶಗಳ ನಡುವಿನ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಬಂದಿದೆ ಎಂದು ನಿವೃತ್ತ ಮಿಲಿಟರಿ ಜನರಲ್ ಹಾಗೂ ಚೀನಾ ವ್ಯವಹಾರಗಳ ಕುರಿತ ತಜ್ಞ ಎ. ಪಿ. ಸಿಂಗ್ ಹೇಳುತ್ತಾರೆ.
ದುಬಾರಿ ಗಡಿ ಕಾವಲು
ಹಾಗೆ ನೋಡಿದರೆ ಭಾರತದ ದುಬಾರಿ ಗಡಿ ಕಾವಲು ಎಂದರೆ ಪಾಕ್ ಗಡಿಗೆ ಹೊಂದಿರುವ ಸಿಯಾಚಿನ್ ಹಿಮಾಚ್ಛಾದಿತ ಪರ್ವತ ಪ್ರದೇಶ. 17,700 ಅಡಿ ಎತ್ತರದ ಈ ಪರ್ವತ ಪ್ರದೇಶವನ್ನು ಕಾಯಲು ಸುಮಾರು 5,000 ಯೋಧರನ್ನು ಪಾಳಿಯಲ್ಲಿ ನಿಯೋಜಿಸಲಾಗಿದೆ. 76 ಕಿ.ಮೀ. ಉದ್ದದ ಈ ಗಡಿಯನ್ನು ಕಾಯಲು ಪ್ರತಿ ದಿನಕ್ಕೆ ಭಾರತ ಸುಮಾರು 4-6 ಕೋಟಿ ರೂ. ಅಂದರೆ ವರ್ಷಕ್ಕೆ ಸುಮಾರು 2,190 ಕೋಟಿ ರೂ. ಖರ್ಚು ಮಾಡುತ್ತಿದೆ. ಕೇಂದ್ರ ಸರಕಾರ ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, 1984ರ ಬಳಿಕ ಸಿಯಾಚಿನ್ ನಲ್ಲಿ ಹವಾಮಾನ ವೈಪರೀತ್ಯದಿಂದ 869 ಯೋಧರು ಹುತಾತ್ಮರಾಗಿದ್ದಾರೆ. ಯೋಧರಿಗೆ ರಕ್ಷಣೆ ಒದಗಿಸುವುದಕ್ಕಾಗಿಯೇ ( ಚಳಿಯಿಂದ ರಕ್ಷಿಸಿಕೊಳ್ಳಲುವ ಬಟ್ಟೆ ಸೇರಿದಂತೆ ಇತರ ಪರಿಕರಗಳು) 7,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದೆಲ್ಲ ಅಂಕಿ ಅಂಶಗಳನ್ನು ನೋಡಿದರೆ ಖಚಿತವಾಗಿಯೂ ಚೀನಾವು ಭಾರತದ ಮೇಲೆ ಭೌತಿಕ ಬದಲಾಗಿ ಆರ್ಥಿಕ ಯುದ್ಧವನ್ನೇ ಸಾರಿದೆ ಎಂಬುದರಲ್ಲಿ ಸಂದೇಹವಿಲ್ಲ.
ಪರ್ವತ ಪಡೆಗೆ ಹಣ
ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 90,270 ಯೋಧರ ಸಾಮರ್ಥ್ಯದ 17ನೇ ಪರ್ವತ ಯುದ್ಧ ಯೋಧರ ಬೆಟಾಲಿಯನ್ (ಎಂಎಸ್ಸಿ)ಗೆ ಮುಂದಾಗಿದೆ. ಕಳೆದ ಮೂರು ವರ್ಷಗಳಿಂದ ಹಣಕಾಸು ಮುಗ್ಗಟ್ಟಿನಿಂದಾಗಿ ಈ ಬೆಟಾಲಿಯನ್ ಗೆ ಹೆಚ್ಚಿನ ಚೇತನ ಸಿಕ್ಕಿರಲಿಲ್ಲ. ಸುಮಾರು 60,000 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಡಲು 2013ರಲ್ಲಿ ಕೇಂದ್ರ ಸರಕಾರ ಒಪ್ಪಿಗೆ ನೀಡಿತ್ತು.
| |