26.2 C
Karnataka
Thursday, November 21, 2024

    ಹರಿದ ಬದುಕುಗಳನ್ನು ಹೊಲಿಯುತ್ತಿದ್ದ ಹೊಲಿಗೆ ಯಂತ್ರ

    Must read

    ಏನ್ರೀ ವತ್ಸಲ ಏನ್ ಮಾಡಿದ್ರಿ ತಿಂಡಿ ? ನೀವು ತಿಂದ್ರಾ ? ಅಂತ ಪಕ್ಕದ್ಮನೆ ಕಮಲಮ್ಮನವರು ಕೇಳಿದ್ದೇ ತಡ ಮಗೂನ ಕಂಕುಳಲ್ಲಿ ಎತ್ತಿಕೊಂಡಿರುವ ವತ್ಸಲ ಅವರು ….. ಬೆಳಿಗ್ಗೆಯಿಂದ ಬಿಡುವೇ ಇಲ್ಲಾ ಆಂಟಿ . ಇವನನ್ನ ಎತ್ಕೊಂಡು ಸುಧಾರಿಸೋದೇ ದೊಡ್ಡ ಕೆಲಸ ಆಗೋಗಿದೆ ಒಂದು ತುತ್ತೂ ತಿನ್ನಲ್ಲ ಅಂತ ಹಠ ಮಾಡ್ತಾನೆ .ಇವನಿಗೆ ತಿನ್ಸಿ ಸ್ನಾನ ಮಾಡಿಸಿ ಮಲಗ್ಸೋ ಅಷ್ಟರಲ್ಲಿ ನಂದು ಊಟದ್ ಟೈಮೇ ಆಗಿರುತ್ತೆ ಇನ್ ಎಲ್ಲಿ ತಿಂಡಿ ತಿನ್ನೋದು . ಹೀಗೆ ತಮ್ಮ ತೊಳಲಾಟವನ್ನು ಹಂಚಿಕೊಳ್ಳೋ ಈಗಿನ ಮಹಿಳೆಯರ ಮಧ್ಯೆ ನನಗೆ ಆಗಿನ ಮನೆಗಳ ವಾತಾವರಣ ನೆನಪಿಗೆ ಬರುತ್ತೆ.

    ಆಗೆಲ್ಲಾ ಮನೆಗಳಲ್ಲಿ ಹೆಂಗಸರು ಎಲ್ಲಾ ಕೆಲಸವನ್ನೂ ಮುಗಿಸಿ , ಬಿಡುವು ಮಾಡಿಕೊಂಡು ವೈರಿನ ಬುಟ್ಟಿ ಹೆಣೆಯೋವ್ರು . ಮಕ್ಕಳಿಗೆ ದೊಡ್ಡೋವ್ರಿಗೆ ಉಲ್ಲನ್ ಸ್ವೆಟರ್ ಹೆಣೆಯೋವ್ರು. ಪ್ರತೀ ಮೂರು ಮನೆಗೊಂದು ಹೊಲಿಗೆ ಯಂತ್ರ ಇರ್ತಿತ್ತು , ಅದರಲ್ಲಿ ಎಲ್ಲಾ ತರಹದ ಬಟ್ಟೆಗಳನ್ನು ಹೊಲಿಯುತ್ತಿದ್ದರು . 

    ರೋಡಲ್ಲಿ ನಡ್ಕೊಂಡ್ ಹೋಗ್ತಿದ್ರೆ ಒಂದಲ್ಲಾ ಒಂದು ಮನೆಯಿಂದ ಟೈಲರಿಂಗ್ ಮಿಷೀನ್ ತುಳಿಯುತ್ತಿರುವ ಸೌಂಡು ಕಿವೀಗ್ ಬೀಳೋದು . ಅಕ್ಕನೋ ಅಮ್ಮನೋ ಮನೆಯಲ್ಲಿ ಯಾರಾದರೊಬ್ಬರು ಟೈಲರಿಂಗ್ ಕಲ್ತಿರೋವ್ರು . ಟೈಲರಿಂಗ್ ಅನ್ನೋದು ಮಧ್ಯಮ ವರ್ಗದವರು ಕಲಿಯಲೇಬೇಕು ಅನ್ನುವಷ್ಟು ಅಪ್ತವಾಗಿ ಕಡ್ಡಾಯವಾಗಿ ಇರ್ತಿತ್ತು . 

    ಹೆಣ್ಣು ನೋಡಕ್ಕೆ ಗಂಡು ಕಡೆಯವರು ಬಂದ್ರೆ ಅವರತ್ರ ಹುಡುಗಿಗೆ ಟೈಲರಿಂಗ್ ಬರುತ್ತೆ ಅಂತ ಹೆಮ್ಮೆಯಿಂದ ಹೇಳೋವ್ರು . ಅದನ್ನ ಕೇಳುತ್ತಲೇ ಹುಡುಗನ ಅಮ್ಮನಿಗೆ ತನ್ನ ಕುಪ್ಸ ಇನ್ಮೇಲೆ ಸೊಸೇನೆ ಹೊಲೀತಾಳೆ ಅನ್ನೂ ಹಾಗೆ ಮುಖ ಅರಳೋಗಿರೋದು .

    ಸಾಮಾನ್ಯವಾಗಿ ಹೊಲಿಗೆ ಯಂತ್ರ ಮನೆಯ ಹಾಲ್ ನಲ್ಲಿ ಇರೋದು .ಆಕರ್ಷಕವಾದ ವುಡ್ ಟೇಬಲ್ಲಿನ ಮೇಲ್ಭಾಗದಲ್ಲಿ ಉಕ್ಕಿನಿಂದ ಮಾಡಿದ ಕಪ್ಪುಬಣ್ಣದ ಹೆಡ್ಡು ಅದಕ್ಕೊಂದು ಪುಟ್ಟ ಚಕ್ರ ಟೇಬಲ್ಲಿನ ಕೆಳಬಾಗದಲ್ಲಿ ಕಾಲಿನಂತೆ ಸ್ಟ್ಯಾಂಡು ಅದಕ್ಕಂಟಿಕೊಂಡಂತೆ ದೊಡ್ಡ ಚಕ್ರ . ಮೇಲಿನ ಚಿಕ್ಕ ಚಕ್ರ ಕೆಳಗಿನ ದೊಡ್ಡ ಚಕ್ರ ಇವೆರಡನ್ನೂ ಸೇರಿಸಿರುವ ಚರ್ಮದದಾರ. ಪಾದಗಳಿಂದ ತುಳಿಯಲು ವಿಶಾಲವಾದ ಸಿಂಗಲ್ ಪೆಡಲ್ಲು . ಟೇಬಲ್ಲಿನ ಅಡಿಯಲ್ಲಿ ದಾರದ ಡಬ್ಬ ಅದರ ಒಳಗಡೆ ಬಣ್ಣ ಬಣ್ಣದ ದಾರಗಳು . ದಾರಕ್ಕೆ ಚುಚ್ಚಿದ ಸೂಜಿಗಳು, ಅಳತೆಯ ಟೇಪು , ದೊಡ್ಡ ಕತ್ತರಿ ಹೀಗೆ ಬಿಡಿಬಾಗಗಳಿರುತ್ತಿದ್ದವು .

    ಮೊದಲು ಸೂಜಿಗೆ ದಾರ ಹಾಕುವುದನ್ನು ಕಲಿಯುವುದೇ ಒಂದು ಕುತೂಹಲ . ಬಾಬಿನ್ ಸೂಜಿ ಅಂತೆಲ್ಲಾ ಪುಟ್ಟ ಮಿಷಿನರಿಗಳ ಒಳಗೆ ಆ ದಾರ ಹಾದು ಹೋಗಿರೋದು . ಅಮ್ಮ ಹೊರಗೋದಾಗ ಎಷ್ಟೋ ಸಲ ಟೈಲರಿಂಗ್ ಕಲಿಯಲು ಪ್ರಯತ್ನಿಸಿದ್ದುಂಟು , ಅದು ಅವರಿಗೆ ಗೊತ್ತಾಗಿ ಸೂಜಿ ಮುರಿದಾಕ್ತೀಯಾ ಅಂತೇಳಿ ಹೊಡಿಯೋವ್ರು . ಸುಮ್ನೆ ಕುತ್ಕೊಂಡು ತುಳಿದ್ರೆ ಖಾಲಿ ಮಷಿನ್ ತುಳೀಬಾರದು ಅಂತ ಬಯ್ಯೋವ್ರು . 
    ನಾವಂತು ಹೊಲಿಗೇ ಯಂತ್ರವನ್ನ ಬಹುಪಯೋಗಿ ಮಾಡ್ಕೊಂಡ್ಬಿಟ್ಟಿದ್ವಿ…..ನಮಗೆ ಟೀವಿ ನೋಡಕ್ಕೆ ಅದೇ ಚೇರು .ಊಟ ಮಾಡಕ್ಕೆ ಅದೇ ಡೈನಿಂಗ್ ಟೇಬಲ್ . ಬರೆಯಕ್ಕೆ ಓದಕ್ಕೆ ಅದೇ ರೀಡಿಂಗ್ ಟೇಬಲ್ . ಬಾಲ್ಯ ಅದರ ಜೊತೇಗೆ ಕಳೆದಿದೀವಿ . 

    ಟೈಲರಿಂಗ್ ಮಾಡೋ ಮನೆಗಳಲ್ಲಿ ಬಣ್ಣ ಬಣ್ಣದ ಕಟ್ ಪೀಸುಗಳು ಹರಡಿರುತ್ತಿತ್ತು . ಲಂಗ ಬ್ಲೌಸು ಎಮಿಂಗು ಕಟಿಂಗು ಕಾಜಾ ಫಾಲ್ಸು ಎಂಬ ಪದಗಳು ಹರಿದಾಡುತ್ತಿತ್ತು . ಅಮ್ಮನನ್ನು ಪೀಡಿಸಿ ಆಕೆಯಿಂದ ಶಾಲೆಗೆ ಚಿಕ್ಕ ದಿಂಬಿನಾಕಾರದ ಡಸ್ಟರ್ ಹೊಲಿಸಿಕೊಂಡು ಹೋಗುತ್ತಿದ್ದೆವು .

    ಆಗಿನ ಸಿನಿಮಾಗಳಲ್ಲಿಯೂ ಸಹ ಹೀರೋ ತಾಯಿ ಟೈಲರಿಂಗ್ ಮಾಡಿಯೇ ಅವನನ್ನು ದೊಡ್ಡವನನ್ನಾಗಿ ಮಾಡುತ್ತಿದ್ದಳು .
    ಬರೀ ಬಟ್ಟೆಗಳನ್ನಷ್ಟೇ ಅಲ್ಲ ಆಗಿನ ಅದೆಷ್ಟೋ ಹರಿದ ಬದುಕುಗಳನ್ನು ಹೊಲಿಯುತ್ತಿದ್ದಿದ್ದು ಇದೇ ಹೊಲಿಗೆ ಯಂತ್ರ.

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!