26.2 C
Karnataka
Thursday, November 21, 2024

    ಐದು ದಶಕಗಳ ಹಿಂದೆ ವಿಜ್ಞಾನಿಯೊಬ್ಬರು ಗಮನಿಸದೇ ಹೋಗಿರದಿದ್ದರೆ ಪ್ರಾಯಶ: ಪ್ರಳಯ ನಡೆದೇ ಹೋಗಿರುತ್ತಿತ್ತು

    Must read

    ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಳಯದ  ಬಗ್ಗೆ ಇರುವ ವ್ಯಾಖ್ಯಾನ, ಭವಿಷ್ಯವಾಣಿಗಳು, ನಂಬಿಕೆ, ಅಪನಂಬಿಕೆಗಳು ಏನೇ ಇರಲಿ, ಆದರೆ ವೈಜ್ಞಾನಿಕ ದೃಷ್ಟಿಕೋನದಲ್ಲಿ ಮಾನವ ನಿರ್ಮಿತ ಕಾರಣದಿಂದ ಭೂವಾತಾವರಣದಲ್ಲಿ  ಉಂಟಾಗುತ್ತಿದ್ದ  ಅನಪೇಕ್ಷಿತ ಬದಲಾವಣೆಯೊಂದನ್ನು ಸುಮಾರು ಐದು ದಶಕಗಳ ಹಿಂದೆ ವಿಜ್ಞಾನಿಯೊಬ್ಬರು ಒಂದು ವೇಳೆ ಗಮನಿಸದೇ ಹೋಗಿರದಿದ್ದರೆ  ಪ್ರಾಯಶ: ಪ್ರಳಯ ಸದೃಶ್ಯ ಘಟನೆ ಇಷ್ಟರೊಳಗೆ ನಡೆದೇ ಹೋಗುವ ಸಂಭವ ಇರುತ್ತಿತ್ತು.

    ಹೊಸ ಸಹಸ್ರಮಾನ 2000 ಇಸವಿಗೆ ಕಾಲಿಡುತ್ತಿದ್ದಂತೆ ಭೀಕರ ಪ್ರಳಯದಿಂದ ಯುಗ ಅಂತ್ಯವಾಗುತ್ತದೆ  ಎಂದು  ಯಾವಾಗಲೋ ಕೆಲವು ಜ್ಯೋತಿಷಿಗಳು  ‘ಬರೆದಿಟ್ಟಿದ್ದನ್ನು’ ನಂಬಿಕೊಂಡು ತೊಂಬತ್ತರ ದಶಕದಲ್ಲಿ ಜನರನ್ನು  ಹುಯಿಲೆಬ್ಬಿಸಲಾಗಿತ್ತು. ಇನ್ನೇನು ಪ್ರಳಯವನ್ನು ಜನರು ಸಂಪೂರ್ಣ ಮರೆತ್ತಿದ್ದರೆನ್ನುವಾಗ  ಮತ್ತೊಮ್ಮೆ,  “ಡಿಸೆಂಬರ್ 11, 2012 ರಂದು ಪ್ರಳಯ ಸಂಭವಿಸುವುದು ಗ್ಯಾರಂಟಿ, ಈ ಸಲ  ಅದು ಸುಳ್ಳಾಗಲು   ಸಾಧ್ಯವೇ ಇಲ್ಲ” ಎಂದು  ಜ್ಯೋತಿಷಿಗಳು ಮಾಧ್ಯಮಗಳ ಮೂಲಕ ಬೊಂಬ್ಡ ಬಡಿದುಕೊಂಡರೂ   ‘ಒಮ್ಮೆ ಮೂರ್ಖರಾಗಿದ್ದು ಸಾಕು’ ಎಂದುಕೊಂಡು ಅದರ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳಲಿಲ್ಲ (ಜೀವ ಉಳಿಸಿಕೊಳ್ಳಲು ಮತ್ತು ಪ್ರಳಯದ ನಂತರ ಬದುಕಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಕೆಲವು ಜನರ  ಸ್ವಾರಸ್ಯಕಾರಿ ದೃಶ್ಯಾವಳಿಗಳು ಆಗಿನ ದಿನಗಳಲ್ಲಿ ಟೀವಿ,   ಪತ್ರಿಕೆಗಳಲ್ಲಿ   ಬಿತ್ತರವಾಗುತ್ತಿತ್ತು).      ಇದಕ್ಕೆ ಸಂಬಂಧಿಸಿದ ‘2012’ ಎಂಬ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಮೂಡಿಬಂದ ಭೀಕರ ಪ್ರಳಯ ಸದೃಶ್ಯಗಳನ್ನು ನೋಡಿ  ಮನರಂಜನೆ ಪಟ್ಟರೆ ಹೊರತು ಇನ್ನು ಸ್ವಲ್ಪ ದಿನದಲ್ಲಿ ಹೀಗೆ ಆಗುತ್ತದೆ ಎಂದು ಯಾರೂ ಭಯಪಡುವಷ್ಟು ಮೂರ್ಖರಾಗಲಿಲ್ಲ. ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಳಯದ  ಬಗ್ಗೆ ಇರುವ ವ್ಯಾಖ್ಯಾನ, ಭವಿಷ್ಯವಾಣಿಗಳು, ನಂಬಿಕೆ, ಅಪನಂಬಿಕೆಗಳು ಏನೇ ಇರಲಿ, ಆದರೆ ವೈಜ್ಞಾನಿಕ ದೃಷ್ಟಿಕೋನದಲ್ಲಿ ಮಾನವ ನಿರ್ಮಿತ ಕಾರಣದಿಂದ ಭೂವಾತಾವರಣದಲ್ಲಿ  ಉಂಟಾಗುತ್ತಿದ್ದ  ಅನಪೇಕ್ಷಿತ ಬದಲಾವಣೆಯೊಂದನ್ನು ಸುಮಾರು ಐದು ದಶಕಗಳ ಹಿಂದೆ ವಿಜ್ಞಾನಿಯೊಬ್ಬರು ಒಂದು ವೇಳೆ ಗಮನಿಸದೇ ಹೋಗಿರದಿದ್ದರೆ  ಪ್ರಾಯಶ: ಪ್ರಳಯ ಸದೃಶ್ಯ ಘಟನೆ ಇಷ್ಟರೊಳಗೆ ನಡೆದೇ ಹೋಗುವ ಸಂಭವ ಇರುತ್ತಿದ್ದರಬಹುದು…!  

    ಪ್ರಕೃತಿಯಲ್ಲಿ ಉಂಟಾಗುತ್ತಿರುವ ಒಂದು ಅನಪೇಕ್ಷಿತ ಬದಲಾವಣೆಯ ಹಿಂದಿರುವ ಕಾರಣವನ್ನು ಅರಿತುಕೊಂಡು ಅದನ್ನು ತಡೆಗಟ್ಟಲು 1961 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಂಡ  ಒಂದು ಒಡಂಬಡಿಕೆಯು ಮುಂದೆ ಸಂಭವಿಸಬಹುದಾದ ಪ್ರಳಯ ಸನ್ನಿಹಿತ ಘಟನೆಯನ್ನು ತಡೆಯಲು ಸಾಧ್ಯವಾಯಿತು.  ಹಾಗಿದ್ದರೆ, ಆ ವಿಜ್ಞಾನಿಯು ಭೂ ವಾತಾವರಣದಲ್ಲಿ ಗಮನಿಸಿದ ಅಂಶ ಯಾವುದು? ಭೂಮಿಯಲ್ಲಿರುವ ಜೀವಿಗಳಿಗೆಲ್ಲ ನಾಶವಾಗುವ ಪ್ರಳಯಸದೃಶ್ಯ ಸನ್ನಿವೇಷ ಹೇಗೆ ತಪ್ಪಿಸಲಾಯಿತು? ಪುಸ್ತತ ಸ್ಥಿತಿ ಹೇಗಿದೆ? ಬನ್ನಿ ನೋಡೋಣ.  

    ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಒಂದು ಸೇಬುಹಣ್ಣನ್ನು ಉದಾಹರಣೆಯಾಗಿ ತಗೆದುಕೊಳ್ಳೋಣ. ಸೇಬುಹಣ್ಣಿನ ಮೇಲಿರುವ  ತೆಳುವಾದ ಸಿಪ್ಪೆಯನ್ನು ಕೆರೆಸಿ ತೆಗೆದು ತೆರೆದ ಸ್ಥಿತಿಯಲ್ಲಿ  ಇಟ್ಟರೆ ಸ್ವಲ್ಪ ಹೊತ್ತಿನ ನಂತರ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಇನ್ನೂ ಸ್ವಲ್ಪ ಸಮಯ  ಹಾಗೆಯೇ ಬಿಟ್ಟರೆ ಹಣ್ಣು ಸಂಪೂರ್ಣ ಹಾಳಾಗುತ್ತದೆ. ಅಂದರೆ, ಇಡೀ ಸೇಬು ಹಣ್ಣಿನ  ನೈಜತೆಯನ್ನು ಕಾಪಾಡಲು ಅದರ ತೆಳುವಾದ ಸಿಪ್ಪೆಯು ರಕ್ಷಾಕವಚದಂತೆ ಇರುತ್ತದೆ. ಅದೇ ರೀತಿ ಭೂಮಿಯಲ್ಲಿರುವ ಎಲ್ಲಾ ಜೀವಸಂಕುಲಗಳನ್ನು ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ಅತಿನೇರಳೆ ಕಿರಣಗಳಿಂದ  ಕಾಪಾಡಲು ಭೂಮಿಯ ವಾತಾವರಣದಲ್ಲಿ ತೆಳುವಾದ ರಕ್ಷಾಕವಚವೊಂದಿದೆ. 

    ರಕ್ಷಾಕವಚ ಯಾವುದು?

    ಸೌರ ಶಕ್ತಿಯು ಭೂಮಿಯಲ್ಲಿರುವ ಎಲ್ಲಾ  ಜೈವಿಕ ಕ್ರಿಯೆಗಳಿಗೆ   ಮೂಲ.  ಆದರೆ ಎಲ್ಲಾ ಜೀವಿಗಳ ಶಕ್ತಿಯ ಮೂಲವಾದ ಬೆಳಕಿನ ಕಿರಣಗಳ ಜೊತೆಗೆ ಸೂರ್ಯನಿಂದ ಅಪಾಯಕಾರಿಯಾದ ನೇರಳಾತೀತ ವಿಕಿರಣಗಳೂ (Ultraviolet radiation) ಹೊರಹೊಮ್ಮುತ್ತವೆ.  ಅಗಾಧ ಪ್ರಮಾಣದಲ್ಲಿ ಸೂರ್ಯನಿಂದ ಉತ್ಸರ್ಜಿತವಾಗುವ   ನೇರಳಾತೀತ ಕಿರಣಗಳು ಭೂಮಿಯನ್ನು ತಲುಪಿದರೆ ಇಲ್ಲಿರುವ ಎಲ್ಲಾ ಜೀವಿಗಳು ನಾಶವಾಗುತ್ತವೆ. ಏಕೆಂದರೆ ಅತಿನೇರಳೆ ಕಿರಣವು ಜೈವಿಕ ಅಣುಗಳನ್ನು, ಮುಖ್ಯವಾಗಿ ತಳಿಮಾಹಿತಿಯನ್ನು ಹೊಂದಿರುವ ಡಿ.ಎನ್.ಎ.ಯನ್ನು ಛಿದ್ರಗೊಳಿಸುತ್ತದೆ. ಜೀವಕೋಶದ ಎಲ್ಲಾ ಕ್ರಿಯೆಗಳನ್ನು ನಿಯಂತ್ರಿಸುವ ಡಿಎನ್‍ಎ ಛಿದ್ರವಾದರೆ ಜೀವಕಣಗಳು ಸಾಯುತ್ತವೆ. ಸೂರ್ಯನಿಂದ ಹೊಂಬರುವ ಈ ಅಪಾಯಕಾರಿ ಅತಿನೇರಳಾತೀತ ವಿಕಿರಣಗಳನ್ನು ಆಕಾಶದಲ್ಲೇ ತಡೆಹಿಡಿದು ಭೂಮಂಡಲವನ್ನು ತಲುಪದಂತೆ ನಿರ್ಬಂಧಿಸಲು  ಒಂದು ತೆಳುವಾದ ಕವಚ ಇದೆ. ಭೂಮಿಯ ಮೇಲ್ಮೈಯಿಂದ  ಸುಮಾರು 12ರಿಂದ 30 ಮೈಲು ದೂರದಲ್ಲಿರುವ ಆ ರಕ್ಷಾ ಕವಚವೇ ಓಝೋನ್.

    ಆಮ್ಲಜನಕ ಜೀವಿಗಳ ಉಸಿರಿಗೆ ಎಷ್ಟು ಅಮೂಲ್ಯ ಎಂಬುವುದು ನಮಗೆಲ್ಲ ತಿಳಿದೇ ಇದೆ. ಅದೇ ಆಮ್ಲಜನಕವು ಆಕಾಶದಲ್ಲಿ ಇನ್ನೊಂದು ರೂಪಕ್ಕೆ ಪರಿವರ್ತನೆಗೊಂಡು ಭೂಮಿಯಲ್ಲಿರುವ ಜೀವಸಂಕುಲವನ್ನು ಉಳಿಸುವಲ್ಲಿಯೂ ಅತ್ಯಮೂಲ್ಯ ಪಾತ್ರ ವಹಿಸುತ್ತದೆ. 

    ಎರಡು ಆಮ್ಲಜನಕದ ಪರಮಾಣುಗಳು ಜೋಡಣೆಗೊಂಡು ಆಗಿರುವ ಆಮ್ಲಜನಕದ (ಆಕ್ಸಿಜನ್) ಅಣು ಸೂತ್ರ O2. ಅದುವೇ ಮೂರು ಆಮ್ಲಜನಕದ ಪರಮಾಣುಗಳನ್ನು ಹೊಂದಿರುವ ಅಣು ಓಝೋನ್; ಇದರ ಅಣು ಸೂತ್ರ  O3. ಕುತೂಹಲದ ಸಂಗತಿಯೆಂದರೆ ಅಪಾಯಕಾರಿಯಾದ  ನೇರಳಾತೀತ ವಿಕಿರಣಗಳನ್ನು  ತಡೆಹಿಡಿಯುವ ಓಝೋನ್  ಪದರ ನಿರ್ಮಾಣವಾಗಲು ಕಾರಣವೂ ಸಹ ಅವೇ ನೇರಳಾತೀತ ವಿಕಿರಣ. ಸಸ್ಯಗಳ  ದ್ಯುತಿಸಂಶ್ಲೇಷನೆ ಕ್ರಿಯೆಯ ಮೂಲಕ ಬಿಡುಗಡೆಯಾಗುವ ಆಮ್ಲಜನಕವು  ಗಾಳಿಯ ಮೂಲಕ ಭೂಮಿಯ ಮಧ್ಯ ಅಕ್ಷಾಂಶದಿಂದ  ಸುಮಾರು 10 ಕಿ. ಮೀ  ಅಂತರದಲ್ಲಿರುವ ಸ್ತರಗೋಳವನ್ನು   (Stratosphere) ತಲಪುತ್ತದೆ. ಅಲ್ಲಿ ಆಮ್ಲಜನಕದ ಅಣುಗಳು ಅತಿ ಶಕ್ತಿಯ  ನೇರಳಾತೀತ  ವಿಕಿರಣದ ಪ್ರಭಾವಕ್ಕೆ ಒಳಗಾಗಿ ವಿಭಜನೆಗೊಂಡು  ಅದರಲ್ಲಿ ಒಂದು ಆಮ್ಲಜನಕ ಪರಮಾಣು (O) ಇನ್ನೊಂದು ಆಮ್ಲಜನಕ ಅಣುವಿನೊಂದಿಗೆ (O2) ಸಂಯೋಗ ಹೊಂದಿ ಮೂರು ಆಮ್ಲಜನಕ ಪರಮಾಣುಯುಕ್ತ (O3) ಓಝೋನ್ ಅಣುಗಳಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಪಾಯಕಾರಿಯಾದ ಅತಿನೇರಳೆ ಕಿರಣದ ಅಗಾಧವಾದ ಶಕ್ತಿಯು  ಶಾಖವಾಗಿ ಪರಿವರ್ತಿನೆಯಾಗುತ್ತದೆ.

    ನೇರಳಾತೀತ ಕಿರಣ + ಓಝೋನ್ —-> ಆಮ್ಲಜನಕ ಪರಮಾಣು

    + ಆಮ್ಲಜನಕ  ಅಣು —-> ಓಝೋನ್ + ಶಾಖ

    ಹೀಗೆ ಉರ್ತ್ಪನ್ನವಾದ ಓಝೋನ್ ಅಣುಗಳಿಗೆ ನೇರಳಾತೀತ  ವಿಕಿರಣವು ಸ್ಪರ್ಶವಾದಾಗ ಓಝೋನ್  ಅಣುಗಳು ಪುನ: ಪರಮಾಣು ಆಮ್ಲಜನಕ ಮತ್ತು ಆಮ್ಲಜನಕದ ಅಣುಗಳಾಗುತ್ತವೆ.  ನಿರಂತರವಾಗಿ ನಡೆಯುವ ಈ ಪ್ರಕ್ರಿಯೆಯನ್ನು ‘ಆಮ್ಲಜನಕ – ಓಝೋನ್ ಚಕ್ರ’ (Oxygen-Ozone cycle) ಎನ್ನಲಾಗುವುದು.  ಹೀಗೆ ಉತ್ಪನ್ನವಾಗುವ ಅನೇಕಾನೇಕ ಓಝೋನ್ ಅಣುಗಳ ಅನಿಲದ ಪದರು ಭೂಮೇಲ್ಮೈನಿಂದ ಸುಮಾರು 12 ರಿಂದ 50 ಮೈಲುಗಳ ಎತ್ತರದಲ್ಲಿ ಸ್ತರಗೋಳದ ಹೊರವಲಯದ ಮೂರನೇ ಎರಡು ಭಾಗದಷ್ಟು ಭೂಮಿಯನ್ನು ಸುತ್ತುವರಿದಿದೆ.  ಓಝೋನ್ ಪದರು ಸೂರ್ಯನಿಂದ ಉತ್ಸರ್ಜಿತವಾಗುವ ಮಧ್ಯಮ- ತರಂಗಾಂತರದ (200 – 315 ನ್ಯಾನೊಮೀಟರ್) ಶೇಕಡಾ 97-99 ನೇರಳಾತೀತ ವಿಕಿರಣಗಳನ್ನು  ಹೀರಿಕೊಳ್ಳುತ್ತದೆ. ಒಂದು ವೇಳೆ ಓಝೋನ್ ಪದರು ಇಲ್ಲದೇ ಹೋಗಿದಲ್ಲಿ ಸೂರ್ಯನ ಅಪಾಯಕಾರಿ  ನೇರಳಾತೀತ ವಿಕಿರಣವು ಭೂಮಿಯನ್ನು  ಪ್ರವೇಶಿಸಿ  ಎಲ್ಲಾ ಜೀವಿಗಳು ಅಪಾಯಕ್ಕೆ ಸಿಲುಕುತ್ತಿತ್ತು.

     ‘ವಿಶ್ವಸಂಸ್ಥೆ – ಪರಿಸರ ಕಾರ್ಯಕ್ರಮ’ (The United Nations – Environmental program) ಸಂಸ್ಥೆಯು ನಡೆಸಿದ ಸಂಶೋಧನೆಯ ಪ್ರಕಾರ ಓಝೋನ್ ಪದರಿನಲ್ಲಿ ಶೇಕಡ 10 ರಷ್ಟು ಇಳಿಕೆ ಉಂಟಾದರೂ ವರ್ಷಕ್ಕೆ ಮೂರು ಲಕ್ಷ ಜನರು ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ ಮತ್ತು  1.6 ಮಿಲಿಯನ್ ಜನರು ಕಣ್ಣಿನ ಪೊರೆಯ (Cataract) ಸಮಸ್ಯೆಗೆ ಒಳಗಾಗುತ್ತಾರೆ. ಮಾತ್ರವಲ್ಲ  ಸಸ್ಯಗಳು, ಬೆಳೆಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಹಾನಿಗೊಳಿಸುತ್ತದೆ. ಇನ್ನು ಓಝೋನ್  ಕವಚ ಸಂಪೂರ್ಣವಾಗಿ ನಾಶವಾದರೆ ನೇರಳಾತೀತ ವಿಕಿರಣಗಳಿಂದ ಯಾವ ಮಟ್ಟದಲ್ಲಿ ಅನಾಹುತಗಳಾಗಬಹುದು. ಇಡೀ ಜೀವಸಂಕುಲವು ನಾಶವಾಗಬಹುದಲ್ಲವೇ…?  

    ಕುತೂಹಲದ ವಿಷಯ ಏನೆಂದರೆ, ನೇರಳಾತೀತ ವಿಕಿರಣವು  ಪುರಾತನ ಭೂಮಿಯಲ್ಲಿ ಜೀವಸೃಷ್ಟಿಯಲ್ಲಿಯೂ ಸಹ  ಬಹುಮುಖ್ಯ ಪಾತ್ರ ವಹಿಸಿದೆ  ಎಂದು  ವೈಜ್ಞಾನಿಕವಾಗಿ ನಂಬಲಾಗಿದೆ.    ಶಕ್ತಿಯ ಮೂಲವಾಗಿ  ನೇರಳಾತೀತ ವಿಕಿರಣವು  ಸಂಕೀರ್ಣಮಯ ಅಣುಗಳ ಜೋಡಣೆಗೆ ಅನುವು  ಮಾಡಿಕೊಟ್ಟು ಸಾವಯವ ಪದಾರ್ಥಗಳ ಸಂಶ್ಲೇಷಣೆಗೆ   ನಾಂದಿಯಾಗಿ  ಜೀವಸೃಷ್ಟಿ ಆಯಿತು.   ಯಾವಾಗ,  ಅಂದರೆ ಸುಮಾರು  540 ಮಿಲಿಯನ್ ವರ್ಷಗಳ ಹಿಂದೆ ದ್ಯುತಿಸಂಶ್ಲೇಷಣೆ ಸಾಮರ್ಥ್ಯವಿರುವ ಜೀವಿಗಳ ಉಗಮವಾಯಿತೋ ಆವಾಗಿನಿಂದ ಯಥೇಚ್ಛವಾಗಿ  ಆಮ್ಲಜನಕ ಅಣುಗಳು ಬಿಡುಗಡೆಯಾಗಲು ಪ್ರಾರಂಭವಾಯಿತು.   ವಾತಾವರಣದಲ್ಲಿ ಶೇಕಡ 21 ರಷ್ಟನ್ನು ಮಾತ್ರ ಹಿಡಿದಿಟ್ಟುಕೊಂಡು  ಉಳಿದ ಆಮ್ಲಜನಕದ ಅಣುಗಳು ವಾಯುಗೋಳದ ಮೇಲ್ಭಾಗದಲ್ಲಿ (ಸ್ತರಗೋಳ) ಶೇಖರಣೆಗೊಂಡು ಓಝೋನ್ ಪದರು ನಿರ್ಮಾಣವಾಗಲು ಕಾರಣವಾಯಿತು.  ಸುಮಾರು 500 ಮಿಲಿಯನ್ ವರ್ಷಗಳ ಹಿಂದೆ ನಿರ್ಮಿತವಾದ ಓಝೋನ್ ಪದರು ಸೂರ್ಯನ ಅಪಾಯಕಾರಿ ನೇರಳಾತೀತ ವಿಕಿರಣವನ್ನು   ತಡೆಹಿಡಿಯುವ ರಕ್ಷಾಕವಚ ಆಗುವೂದರ ಜೊತೆಗೆ ಭೂಮಿಯಲ್ಲಿ ವೈವಿಧ್ಯಮಯ ಜೀವಿಗಳ ವಿಕಸನ ಆಗಲು ಅವಕಾಶ ಉಂಟಾಯಿತು.  

    ವಿಜ್ಞಾನಿಗಳ ಕೊಡುಗೆಗಳು: 

    ಕೋಟ್ಯಾನುಕೋಟಿ ವರ್ಷಗಳಿಂದ ಓಝೋನ್ ಪದರು ಭೂಮಂಡಲದಲ್ಲಿ ಇದೆ. ಆದರೆ ಆ  ಇರುವಿಕೆಯನ್ನು 1913 ರಲ್ಲಿ  ಜಗತ್ತಿಗೆ    ತೋರಿಸಿಕೊಟ್ಟ ಕೀರ್ತಿ  ಚಾರ್ಲ್ಸ್ ಫ್ಯಾಬ್ರಿ  (Charles Fabry)  ಮತ್ತು ಹೆನ್ರಿ ಬ್ಯೂಸನ್   (Henri Buisson) ಇಬ್ಬರು ಫ್ರೆಂಚ್ ಭೌತವಿಜ್ಞಾನಿಗಳಿಗೆ ಸಲ್ಲುತ್ತದೆ. ಮುಂದೆ 1928 ರಲ್ಲಿ  ಜಿ. ಎಂ. ಬಿ. ಡಾಬ್ಸನ್ (G. M. B. Dobson)  ಬ್ರಿಟೀಷ್ ಖಗೋಳ ವಿಜ್ಞಾನಿಯು ಓಝೋನ್ ಪದರದ ಮೇಲೆ ಹೆಚ್ಚಿನ ಅಧ್ಯಯನ ನಡೆಸಿ ಭೂಮಿಯಲ್ಲಿದ್ದುಕೊಂಡೇ  ಸುಮಾರು 15 ರಿಂದ  35 ಕಿ.ಮೀ. ಎತ್ತರದಲ್ಲಿರುವ ಓಝೋನ್ ಪದರದ ಸಾಂಧ್ರತೆ (ದಪ್ಪವನ್ನು)  ಅಳತೆ ಮಾಡುವ  ಸಾಧನವನ್ನು ಅನ್ವೇಷಿಸಿದರು.  ಅವರ ನೆನಪಿಗಾಗಿ ಈ ಸಾಧನವನ್ನು  ‘ಡಾಬ್ಸನ್ ಓಝೋನ್ ಸ್ಪೆಕ್ಟ್ರೋಫೋಟೋಮೀಟರ್ (ಡಾಬ್ಸನ್‌ಮೀಟರ್)’  ಎಂದು ಹೆಸರಿಸಲಾಯಿತು. ಓಝೋನ್ ಕವಚದ ಸಾಂಧ್ರತೆಯ ಮೇಲೆ ಒಂದು ನಿಗಾ ಇಡಲು  ‘ಓಝೋನ್ ಮಾನಿಟರಿಂಗ್ ಸ್ಟೇಶನ್’ ಎಂಬ ಕೆಂದ್ರಗಳನ್ನು ವಿಶ್ವದಾದ್ಯಂತ  ಅನೇಕ ಕಡೆಗಳಲ್ಲಿ ಸ್ಥಾಪಿಸಿ  1928 ರಿಂದ 1958 ರವರೆಗೆ ಅವರೇ ಸ್ವತ: ಒಂದು ಜಾಗತಿಕ ಜಾಲಬಂಧವನ್ನು (Worldwide Network) ಸ್ಥಾಪಿಸಿ ಓಝೋನ್ ಪದರಿನಲ್ಲಿ ಉಂಟಾಗುವ ಬದಲಾವಣೆಗಳನ್ನು ದಾಖಲಿಸಿದರು. ಭಾರತದಲ್ಲಿ, ಶ್ರೀನಗರ, ನವದೆಹಲಿ, ವಾರಣಾಸಿ, ಕೋಲ್ಕತಾ, ಅಹಮದಾಬಾದ್ ಮತ್ತು ಕೊಡೈಕನಾಲ್   ಗಳಲ್ಲಿ ಡಾಬ್ಸನ್‌ಮೀಟರ್    ಅನುಸ್ಥಾಪಿಸಿ  ಒಟ್ಟು    ಆರು ನಿಲ್ದಾಣಗಳ ಜಾಲವನ್ನು ಸ್ಥಾಪಿಸಲಾಗಿದೆ.  ಆವಾಗ ಸ್ಥಾಪಿಸಿರುವ  ಡಾಬ್ಸನ್‌ಮೀಟರ್   ಇವತ್ತಿಗೂ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು,ಓಝೋನ್ ಪದರದಲ್ಲಿ ಉಂಟಾಗುತ್ತಿರುವ ಏರುಪೇರಿನ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತಿದೆ.  

    ಅಪಾಯದ ಮುನ್ಸೂಚನೆಗೆ ಪರಿಹಾರ:

    ಪ್ರದೇಶ ಮತ್ತು ಕಾಲಮಾನಕ್ಕೆ ತಕ್ಕಂತೆ ಓಝೋನ್ ಕವಚದ ಸಾಂಧ್ರತೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸ ಆಗುವುದು ಸಹಜ. ಆದರೆ ಅಸಹಜ ರೀತಿಯಲ್ಲಿ  ಓಝೋನ್ ಪದರವು  ವೇಗವಾಗಿ ಕ್ಷೀಣವಾಗುತ್ತಾ ಬರುತ್ತಿರುವುದನ್ನು ವಿಜ್ಞಾನಿಗಳು ಗಮನಿಸಿದರು.  ಆಗಲೇ ಓಝೋನ್ ಪದರದ ಮಹತ್ವವನ್ನು ಅರಿತುಕೊಂಡಿದ್ದ  ವಿಜ್ಞಾನಿಗಳು ಇದು ಹೀಗೆಯೇ ಮುಂದುವರಿದರೆ  ಮುಂಬರುವ ದಿನಗಳಲ್ಲಿ ಓಝೋನ್ ರಕ್ಷಾಕವಚವು  ಸಂಪೂರ್ಣ ನಾಶವಾಗಿ ಭೂಮಿಯಲ್ಲಿರುವ ಜೀವಸಂಕುಲಕ್ಕೆಲ್ಲಾ  ಮಹಾ ಅಪಾಯ ಕಾದಿದೆ ಎಂದು ಮನಗಂಡರು.  ಅಪಾಯವನ್ನು ತಡೆಗಟ್ಟಲು ಮೊದಲು ಸಮಸ್ಯೆಯ ಮೂಲ ಯಾವುದು ಎಂದು ಪತ್ತೆಹಚ್ಚಬೇಕು. ವಿಜ್ಞಾನಿಗಳು  ಓಝೋನ್ ಕ್ಷೀಣತೆ ಆಗುತ್ತಿರುವ ಕಾರಣವನ್ನು  ಪತ್ತೆಹಚ್ಚಲು ಬೆಂಬತ್ತಿ ಹೋದಾಗ ತಿಳಿದುಬಂದ ಅಂಶವೇ, ಹ್ಯಾಲೋಜನ್‍ಯುಕ್ತ ರಾಸಾಯನಿಕಗಳು, ಅದರಲ್ಲಿ ಪ್ರಮುಖವಾಗಿ ಕ್ಲೋರೊಫ್ಲೋರೊಕಾರ್ಬನ್‍ಗಳು ಮತ್ತು ಬ್ರೋಮೋಫ್ಲೋರೊಕಾರ್ಬನ್‍ಗಳು.  1974ರಲ್ಲಿ  ಫ್ರಾಂಕ್ ಶೆರ್ವುಡ್ ರೋಲ್ಯಾಂಡ್   (Frank Sherwood Rowland)  ಮತ್ತು  ಮಾರಿಯೋ ಜೆ. ಮೋಲಿನ (Mario J. Molina) ಗುರು-ಶಿಷ್ಯರು ಜಂಟಿಯಾಗಿ ಸಂಶೋಧನೆ ಮಾಡಿ ಓಝೋನ್ ಕುಸಿತಕ್ಕೆ ಕಾರಣವೇನು ಎಂದು ಪತ್ತೆಹಚ್ಚಿದರು. ಅವರ ಈ ಮಹತ್ವದ ಕೊಡುಗೆಗಾಗಿ 1995ರಲ್ಲಿ  ರಸಾಯನಶಾಸ್ತ್ರದಲ್ಲಿ ನೋಬೆಲ್ ಪಾರಿತೋಷಕವನ್ನು ನೀಡಲಾಯಿತು. 

    ಓಝೋನ್ ಪದರನ್ನು ಹಾನಿಗೊಳಿಸುವ ಅನಿಲಗಳಾದ  ನೈಟ್ರಿಕ್ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಹೈಡ್ರಾಕ್ಸಿಲ್, ಕ್ಲೋರಿನ್ ಮತ್ತು ಬ್ರೋಮಿನ್ ಅಣುಗಳು ಕೆಲವು ನೈಸರ್ಗಿಮೂಲಗಳಿಂದ ಬಿಡುಗಡೆಯಾದರೂ ಅವುಗಳೆಲ್ಲಾ ಒಂದು ಸಮತೋಲನ ಪ್ರಮಾಣದಲ್ಲಿರುವುದರಿಂದ ಓಝೋನ್ ಕವಚವು  ಅಪಾಯಕಾರಿ ರೀತಿಯಲ್ಲಿ ಹಾನಿಯಾಗುವುದಿಲ್ಲ.  ಏಕೆಂದರೆ, ‘ಓಝೋನ್ ಚಕ್ರ’ ನಿರಂತರವಾಗಿ ನಡೆಯುತ್ತಿದ್ದು ಹೊಸ ಓಝೋನ್ ಅಣುಗಳು ಉತ್ಪತ್ತಿಯಾಗುತ್ತಿರುತ್ತವೆ. ಆದರೆ ಅನೈಸರ್ಗಿಕ ಕಾರಣದಿಂದ  ಹಾನಿಕಾರಕ ಅಂಶಗಳ ಪ್ರಮಾಣ ಜಾಸ್ತಿಯಾದರೆ  ಓಝೋನ್ ಪದರು ವೇಗವಾಗಿ ಕ್ಷೀಣಿಸುತ್ತದೆ. ಇಲ್ಲಿ ಅನೈಸರ್ಗಿಕ ಕಾರಣ ಎಂದರೆ ಮಾನವ ಸಂಶ್ಲೇಷಿತ  ಕ್ಲೋರೊ ಫ್ಲೋರೊಕಾರ್ಬನ್‍ಗಳು (CFCs) ಮತ್ತು ಬ್ರೋಮೋ ಫ್ಲೋರೊಕಾರ್ಬನ್‍ಗಳು (BFCs).   ತಂಪಾಗಿಡುವ   ವಿಶೇಷ ಗುಣ ಹೊಂದಿರುವ ಈ ರಾಸಾಯನಿಕಗಳನ್ನು  ತಂಗಳುಪೆಟ್ಟಿಗೆ (ರೆಫ್ರಿಜರೇಟರ್), ಹವಾ ನಿಯಂತ್ರಿತ ಪೆಟ್ಟಿಗೆಯ ಕಂಪ್ರೆಸರ್‍ನಲ್ಲಿ,  ಕಾರ್ಖಾನೆಗಳಲ್ಲಿ ಶುದ್ಧೀಕರಿಸುವ ದ್ರವವಾಗಿ, ಬೆಂಕಿ ನಂದಿಸುವ ಪ್ಲಾಸ್ಟಿಕ್ ನೊರೆಯಾಗಿ, ಸುಗಂಧದೃವ್ಯ, ಕ್ರಿಮಿನಾಶಕ ಮತ್ತು  ಬಣ್ಣಗಳನ್ನು ಸಿಂಪಡಿಸಲು ಬಳಸುವ  ಕ್ಯಾನ್‍ಗಳಲ್ಲಿ ವಾಯುದ್ರವವಾಗಿಯೂ ಬಳಸಲಾಗುತ್ತದೆ.  ಹೀಗೆ ಬಳಸುವಾಗ  ಆವಿ ರೂಪದಲ್ಲಿ ವಾತಾವಾರಣಕ್ಕೆ ಬಿಡುಗಡೆಯಾಗಡೆಯಾಗಿ ಗಾಳಿಯ ಮೂಲಕ ಸ್ತರಗೋಳವನ್ನು  ತಲುಪುತ್ತವೆ. ಸ್ತರಗೋಳದಲ್ಲಿ  ಸೂರ್ಯನ ಅತಿನೇರಳೆ ಕಿರಣದ ಪ್ರಭಾವಕ್ಕೆ ಒಳಗಾಗಿ  ಅದರಲ್ಲಿರುವ ಕ್ಲೋರಿನ್ ಮತ್ತು ಬ್ರೋಮಿನ್ ಅಂಶಗಳು (ಸ್ವತಂತ್ರ ರಾಡಿಕಲ್‍ಗಳು) ಬಿಡುಗಡೆಯಾಗುತ್ತವೆ.   

    ಕ್ಲೋರೊ ಫ್ಲೋರೊಕಾರ್ಬನ್‍ಗಳು ಮತ್ತು ಬ್ರೋಮೋ ಫ್ಲೋರೊಕಾರ್ಬನ್‍ಗಳು ಏಕೆ ಅತ್ಯಂತ ಅಪಾಯಕಾರಿ ಮಾಲಿನ್ಯಕಾರಕಗಳು ಎಂದರೆ ಅವುಗಳಿಂದ ಬಿಡುಗಡೆಯಾಗುವ ಪ್ರತಿ ಕ್ಲೋರಿನ್ ಅಥವಾ ಬ್ರೋಮಿನ್ ರಾಡಿಕಲ್‍ ಸುಮಾರು ಒಂದು ಲಕ್ಷ ಓಝೋನ್ ಅಣುಗಳನ್ನು ವಿಭಜಿಸಿಬಲ್ಲವು. ಅಂದರೆ, O3 (ಓಝೋನ್) ಅಣುಗಳನ್ನು  ಆಮ್ಲಜನಕವಾಗಿ (O2) ಪರಿವರ್ತಿಸುತ್ತದೆ. ಯಾವುದೇ ಅಣು ಇರಬಹುದು  ಒಂದು ನಿರ್ಧಿಷ್ಟ ಸಂಖ್ಯೆಯಲ್ಲಿ ಪರಮಾಣುಗಳು ಜೋಡಣೆಯಾಗಿದ್ದರೆ ಮಾತ್ರ ಅದು ತನ್ನಲ್ಲಿರುವ ಗುಣಗಳನ್ನು ಪ್ರದರ್ಶಿಸುತ್ತದೆ. ಮೂರು ಆಮ್ಲಜನಕ ಪರಮಾಣುಗಳನ್ನು ಹೊಂದಿರುವ ಓಝೋನ್ ಮಾತ್ರ ಅತಿನೇರಳೆ ವಿಕಿರಣವನ್ನು ಹೀರಿಕೊಳ್ಳುವ ಗುಣ ಇದೆ. ಈ ಗುಣ ಪ್ರಾಣವಾಯುವಾಗಿರುವ   ಆಮ್ಲಜನಕ ಹೊಂದಿಲ್ಲ.  

    ಭೂಮಿಯ  ಉತ್ತರ ಧ್ರುವದಲ್ಲಿ  ಕಳೆದ ಎಂಟು ವರ್ಷಗಳಿಂದ ಸರಾಸರಿ ಶೇಕಡಾ 1 ಓಝೋನ್ ಸಾಂಧ್ರತೆಯಲ್ಲಿ ಕಡಿಮೆಯಾಗುತ್ತಿದೆ. 1985 ರಲ್ಲಿ ಅಂಟಾರ್ಟಿಕದಲ್ಲಿ ಓಝೋನ್ ‘ರಂಧ್ರ’ (ಅಂದರೆ  ಓಝೋನ್ ಪದರದ ಸಾಂಧ್ರತೆ ಬೇರೆ ಎಲ್ಲಾ ಕಡೆಗಳಿಗಿಂತ ಅತಿ ಹೆಚ್ಚು ಕ್ಷೀಣವಾಗಿರುವುದು) ಇರುವುದನ್ನು  ವರದಿ ಮಾಡಲಾಯಿತು. ಓಝೋನ್ ‘ರಂಧ್ರ’ ಎಷ್ಟು ಬೃಹತ್ತಾಗಿತ್ತೆಂದರೆ ಸರಿಸುಮಾರು ಅಮೇರಿಕಾ ದೇಶದ ವಿಸ್ತಾರದಷ್ಟು. 1993ರಲ್ಲಿ  ಉಪಗ್ರಹ ಚಿತ್ರವನ್ನು ಅವಲೋಕಿಸಿದಾಗ ರಂಧ್ರದಲ್ಲಿ ಇನ್ನಷ್ಟು  ದೊಡ್ಡದಾಗಿರುವುದನ್ನು ದಾಖಲಿಸಲಾಯಿತು.  ಅಮೇರಿಕಾದ  ಉತ್ತರಾರ್ಧ, ಕೆನಡಾ, ರಷ್ಯಾ ಮತ್ತು,  ಯುರೋಪ್  ದೇಶಗಳ ಪ್ರದೇಶಗಳಲ್ಲಿಯೂ ಕೂಡ  ಓಝೋನ್ ಪದರಿನಲ್ಲಿ ಕುಸಿತವಾಗಿರುವುದನ್ನು ವರದಿ ಮಾಡಲಾಯಿತು. 

    ಓಝೋನ್ ಪದರಿನ ಕುಸಿತಕ್ಕೆ ಇತರ ಕಾರಣಾಂಶಗಳು ಇದ್ದರೂ ಸಹ ಸಿಎಫ್‍ಸಿಗಳನ್ನು ಅತಿಯಾಗಿ ಬಳಸುವುದರಿಂದ ಇದರ ಪಾತ್ರ ಪ್ರಮುಖವಾದದ್ದು. ಆದುದರಿಂದ ಓಝೋನ್ ರಕ್ಷಾಕವಚವನ್ನು ಹಾಳುಗೆಡಿಸುವ  ಪ್ರಮುಖ ‘ಖಳನಾಯಕ’  ಸಿಎಫ್‍ಸಿಗಳ ಉತ್ಪತ್ತಿ ಹಾಗೂ ಬಳಕೆಯನ್ನು 2000 ಇಸವಿಯೊಳಗೆ ವಿಶ್ವದಾದ್ಯಂತ ಸಂಪೂರ್ಣವಾಗಿ ನಿಲ್ಲಿಸಬೇಕೆಂಬ ಒಂದು ಅಂತರಾಷ್ಟ್ರೀಯ ಮಟ್ಟದ ಒಪ್ಪಂದಕ್ಕೆ  ಬರಲಾಯಿತು (1985 ರಲ್ಲಿ, ಅನೇಕ ರಾಷ್ಟ್ರಗಳು ಓಝೋನ್ ಪದರದ ರಕ್ಷಣೆಗಾಗಿ ವಿಯೆನ್ನಾ ಸಮಾವೇಶದ ಮಾಂಟ್ರಿಯಲ್ ಪ್ರೋಟೋಕಾಲ್ ಅಡಿಯಲ್ಲಿ ಅಂಗೀಕರಿಸಲಾಯಿತು). ಸಿಎಫ್‌ಸಿಗಳು ಒಂದು  ಹಸಿರುಮನೆ ಅನಿಲ;  ಅದು ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗಿದ್ದು   ಪರಿಸರದ ಮೇಲೆ  ಇತರ ದುಷ್ಪರಿಣಾಮಗಳನ್ನೂ  ಉಂಟುಮಾಡುತ್ತದೆ.

    ಒಂದು ಸಮಾಧಾನದ ವಿಚಾರ:

    2003 ರಲ್ಲಿ ಅಮೇರಿಕನ್ ಜಿಯೋಫಿಸಿಕಲ್ ಯುನಿಯನ್ ಸಂಸ್ಥೆಯು ಉಪಗ್ರಹ ಹಾಗೂ ಜಿ.ಪಿ.ಎಸ್. ತಂತ್ರಜ್ಞಾನವನ್ನು ಬಳಸಿಕೊಂಡು ಬಾಹ್ಯ ವಾತಾವರಣದಲ್ಲಿರುವ ಓಝೋನ್ ಪದರದ ಸಾಂಧ್ರತೆಯನ್ನು ಪರೀಕ್ಷಿಸಿ ನೋಡಿದಾಗ ಒಂದು ಸಮಾಧಾನಕರವಾದ ವಿಷಯ ಗಮನಕ್ಕೆ ಬಂತು.  ಏನೆಂದರೆ, ಓಝೋನ್ ಪದರ ಕ್ಷೀಣತೆಯಾಗುತ್ತಿರುವ  ಪರಿಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದು.  ಓಝೋನ್ ಪದರದ ಸವಕಳಿಗೆ ಕಾರಣವಾಗಿರುವ ರಾಸಾಯನಿಕಗಳ ನಿಯಂತ್ರಣಕ್ಕೆ ಅಂತರಾಷ್ಟ್ರೀಯ ಮಟ್ಟದ ಒಪ್ಪಂದ ನಿಜವಾಗಿಯೂ ಫಲಪ್ರಧವಾಗಿದೆ ಎಂದು ವಿಜ್ಞಾನಿಗಳು ಸಂತಸಪಟ್ಟರು. 

    ಇನ್ನೂ  ಕಾಯಬೇಕು:  

    ಆದರೆ ಓಝೋನ್ ಪದರು ಮೊದಲಿನ ಅಂದರೆ ನೈಜ ಸ್ಥಿತಿಗೆ ಮರಳಲು ಇನ್ನೂ 30-40 ವರ್ಷಗಳು ಬೇಕಾಗಬಹುದು. ಏಕೆಂದರೆ, ಅಣುಗಳನ್ನು ವಿಭಜಿಸುವ ರಾಸಾಯನಿಕಗಳನ್ನು  ಇನ್ನೂ ಕೆಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಮಾತ್ರವಲ್ಲ, ಈ ಮೊದಲೇ  ಬಿಡುಗಡೆಯಾಗಿರುವ  ಕ್ಲೋರೊಫ್ಲೋರೊಕಾರ್ಬನ್‍ಗಳ ಆಯುಷ್ಯ   ಸುಮಾರು 55 ವರ್ಷಗಳು ಆಗಿರುವುದರಿಂದ ಅವುಗಳು  ವಾತಾವರಣದಲ್ಲಿ ಇರುವ ತನಕ ಓಝೋನ್  ಅಣುಗಳನ್ನು ವಿಭಜಿಸುವ ಕೆಲಸ ಮಾಡುತ್ತಿರುತ್ತವೆ.  

    ಓಝೋನ್ ಕವಚದ  ರಕ್ಷಣೆ ನಮ್ಮ ಹೊಣೆ:

    ಏನೇ ಇರಲಿ, ನೇರಳಾತೀತ ವಿಕಿರಣ ಆರಂಭದಲ್ಲಿ ಭೂಮಿಯಲ್ಲಿ ಜೀವಸೃಷ್ಠಿಗೆ ಪೂರಕವಾಗಿ ತದನಂತರ ಅಪಾಯಕಾರಿಯಾದರೂ ಆಮ್ಲಜನಕ ಅಣುಗಳನ್ನು ಓಝೋನ್ ಅಣುಗಳಾಗಿ ರೂಪಾಂತರಿಸಿ ತಡೆಹಿಡಿದುಕೊಳ್ಳುವುದು ನಿಸರ್ಗದ ಒಂದು ಅಪೂರ್ವ ಕೊಡುಗೆ. ಅಪಾಯಕಾರಿ ಅತಿನೇರಳೆ ಕಿರಣದಿಂದ ಜೀವಸಂಕುಲಗಳನ್ನು ರಕ್ಷಿಸುವ  ಓಝೋನ್ ಪದರದ ಅಸ್ಥಿತ್ವ, ಸಾಂದ್ರತೆಯನ್ನು ಅಳೆಯುವ  ಸಾಧನದ ಆವಿಷ್ಕಾರ ಹಾಗೂ   ಅದರ ಸವಕಳಿಗೆ  ಕಾರಣವಾಗುವ  ಹಿನ್ನೆಲೆಯನ್ನು  ಪತ್ತೆಹಚ್ಚಿ   ಆಗಬಹುದಾದ ಅನಾಹುತದಿಂದ  ಕಾಪಾಡಿರುವ ವಿಜ್ಞಾನಿಗಳೆಲ್ಲರಿಗೂ ಅಭಿನಂದನೆಗಳು ಮತ್ತು ಕೃತಜ್ಞತೆಗಳು. ಇನ್ನು ಓಝೋನ್ ಪದರವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲಿ ಇದೆ. 

    ಓಝೋನ್ ಪದರದ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:

    ಪ್ರತಿ ವರ್ಷ ಸೆಪ್ಟೆಂಬರ್    16  ರಂದು  ಅಂತರರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನ ಎಂದು ಆಚರಿಸಲಾಗುತ್ತದೆ.   ವಿಯೆನ್ನಾ ಸಮಾವೇಶದ ನಂತರ  35 ವರ್ಷಗಳ ಜಾಗತಿಕ ಓಝೋನ್ ಪದರ ರಕ್ಷಣೆಯ ದಿನವನ್ನು   ಆಚರಿಸುತ್ತಿರುವ ಈ ಸಂದರ್ಭದಲ್ಲಿ  ಪ್ರಸ್ತುತ  ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿರುವ  ಆಂಟೋನಿಯೊ ಗುಟೆರೆಸ್  ಅವರು ನೀಡಿದ  ಸಂದೇಶ ಹೀಗಿದೆ,  “ಓಝೋನ್ ಪದರವನ್ನು ಸಂರಕ್ಷಿಸಲು ನಾವು ಹೇಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂಬ ಸ್ಫೂರ್ತಿಯೊಂದಿಗೆ    ಭೂಗ್ರಹವನ್ನು  ಉಪಶಮನಗೊಳಿಸಲು ಹಾಗೂ  ಎಲ್ಲ ಮಾನವೀಯತೆಗೆ ಸಮಾನವಾದ ಪ್ರಕಾಶಮಯ  ಭವಿಷ್ಯವನ್ನು ರೂಪಿಸಿಕೊಳ್ಳಲು ನಾವೆಲ್ಲರೂ    ಕೈಜೋಡಿಸೋಣ”.
    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    31 COMMENTS

    1. ಅತ್ಯುತ್ತಮ ವೈಜ್ಞಾನಿಕ ಲೇಖನ. ಸರಳ ಶಬ್ದಗಳಲ್ಲಿ ಅತಿಮುಖ್ಯ ಮಾಹಿತಿಗಳನ್ನು ಡಾ. ಪ್ರಶಾಂತ್ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಓಜ಼ೋನ್ ಪದರ ರಕ್ಷಣೆ ಭೂಮಂಡಲದ ಎಲ್ಲಾ ನಾಗರೀಕರ ಕರ್ತವ್ಯ. Thank you Dr. Prashanth for this awareness article.

    2. ಓಝೋನ್‌ ಪದರದ ಬಗ್ಗೆ ಅನ್ವೇಷಿತ ಪರಿಪೂರ್ಣ ಲೇಖನ ಸರ್. ಅದ್ಭುತವಾಗಿದೆ. ಸಂಶೋದಕರಿಗೆ ಮಾರ್ಗದರ್ಶಕವಾಗಿದೆ

    3. ಅಭಿನಂದನೆಗಳು ಸರ್… ವೈಜ್ಞಾನಿಕ ಸತ್ಯಾ0ಶ ಗಳನ್ನು ತೆರೆದಿಟ್ಟಿರುವಿರಿ… ಮಾತ್ರವಲ್ಲದೇ… ವಿಜ್ಞಾನ ದ ಕಡೆ ಒಲವನ್ನು ಮೂಡಿಸುವ ಬರಹ…. ಅದ್ಭುತವಾಗಿದೆ… ಅಭಿನಂದನೆಗಳು ಡಾ. ಪ್ರಶಾಂತ್ ಅವರಿಗೆ.. 🌹🌹🌹

    4. ಸರ್, ಲೇಖನ ಓದುಗನನ್ನು ಹಿಡಿದಿಟ್ಟುಕೊಳ್ಳುವ ಗುಣಹೊಂದಿದೆ. ಪ್ರಕೃತಿಯ ಹಾಗೂ ಮನುಕುಲದ ಕಾಳಜಿ ಎದ್ದು ಕಾಣುತ್ತದೆ. ಸರಳ ಸುಲಿದ ಬಾಳೆಹಣ್ಣಿನ ತರಹ ಇದೆ. ವಿಜ್ಞಾನದ ಹಾಗೂ ವಿಜ್ಞಾನಿಗಳ ಕೊಡುಗೆಯನ್ನು ಸ್ಮರಿಸುತ್ತಾ, ನಾಗರಿಕರ ಜವಾಬ್ದಾರಿಯನ್ನು ನೆನಪಿಸುತ್ತಿದ್ದಾರೆ. ಮಾನವೀಯ ಸಮಾಜದ ಅವಶ್ಯಕತೆಯನ್ನು ಅವರದೇ ರೀತಿಯಲ್ಲಿ ಹೇಳಿದ್ದಾರೆ. ಒಂದು ವಿಷಯ ವಸ್ತುವಿನಲ್ಲಿ ಅನೇಕ ಉಪಯುಕ್ತ ಗುಣಾತ್ಮಕ ಅಂಶಗಳನ್ನು ಬಹುವಿಧ ವ್ಯಾಪ್ತಿಯಲ್ಲಿ ಚರ್ಚಿಸಿರುವ ರೀತಿ ಚೆನ್ನಾಗಿದೆ. ಎಲ್ಲರಿಗೂ ಅರ್ಥವಾಗುವಂತೆ ಬರೆದಿದ್ದೀರಿ.
      ನಿಮ್ಮ ಜ್ಞಾನದ ಸಂಪತ್ತು ಓದುಗರಿಗೆ ಹೀಗೆಯೇ ಸಿಗುತ್ತಿರಲಿ.
      ಇದನ್ನು ನಮಗೆ ತಲುಪಿಸುತ್ತಿರುವ ಕನ್ನಡಪ್ರೆಸ್.ಕಾಮ್ ನವರಿಗೂ ನಮನಗಳು.

    5. Very good scientific reasearch article in kannada sir. The students, researchers can understand easily about ozone layer, it’s depletion and it’s formation..

    6. ಅತ್ಯುತ್ತಮ ವೈಜ್ಞಾನಿಕ ಲೇಖನ. ಸರಳ ಶಬ್ದಗಳಲ್ಲಿ ಅತಿಮುಖ್ಯ ಮಾಹಿತಿಗಳನ್ನು ಡಾ. ಪ್ರಶಾಂತ್ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಓಜ಼ೋನ್ ಪದರ ರಕ್ಷಣೆ ಭೂಮಂಡಲದ ಎಲ್ಲಾ ನಾಗರೀಕರ ಕರ್ತವ್ಯ. Thank you Dr. Prashanth for this awareness article.ಹೀಗೆಯೇ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಮಾಡಿ ದೇಶಕ್ಕೆ ಒಳ್ಳೆಯ ಹೆಸರನ್ನು ತನ್ನಿ

    7. ಬರಹ ಉತ್ತಮವಾಗಿದೆ.ಸುಲಭವಾಗಿ ಅಥೖೆಸಬಹುದಾದ ವೆಜ್ಞಾನಿಕ ಲೇಖನ. ಧನ್ಯವಾದಗಳು ಸರ್

    8. ಬರಹ ಉತ್ತಮವಾಗಿದೆ.ಸುಲಭವಾಗಿ ಅಥೖೆಸಬಹುದಾದ ವೆಜ್ಞಾನಿಕ ಲೇಖನ. ಧನ್ಯವಾದಗಳು ಸರ್.

    9. ಭೂಮಿಯ ಓಝೋನ್ ಪದರದ ಬಗ್ಗೆ ಸವಿಸ್ತಾರವಾಗಿ ವೈಜ್ಞಾನಿಕ ಮಾಹಿತಿಯನ್ನು ನೀಡಿ ಜನರಲ್ಲಿನ ಮೌಢ್ಯ ನಿವಾರಣೆಗೆ ಉತ್ತಮ ಪ್ರಯತ್ನವನ್ನು ಲೇಖಕರು ಮಾಡಿರುತ್ತಾರೆ, ಇದಕ್ಕಾಗಿ ಅವರಿಗೆ ಅಭಿನಂದನೆಗಳು.

    10. Sir, really good information your giving to all who reads your article. Nicely written and easy to understand. Thank you sir for the wonderful article on ozone day.

    11. This article may brings awaress in people regarding protection of ourenvironemnt and more particularly ozone. Really wonderful article everyone should read this.

      Congrats Professor

    12. ಓಜೋನ್ ಪದರದ ಬಗ್ಗೆ ಸವಿಸ್ತಾರವಾಗಿ ಸರಳವಾಗಿ ವಿವರಿಸಿದ್ದೀರಿ. ಇದು ಜನರನ್ನು ಜಾಗ್ರತಗೊಳಿಸುವಲ್ಲಿ ಸಹಾಯಕವಾಗುತ್ತದೆ.

    13. ತುಂಬಾ ಅಪರೂಪದ ಲೇಖನ.. ವೈಜ್ಞಾನಿಕ ತಳಹದಿಯಲ್ಲಿ ಲೇಖನವನ್ನು ಪ್ರಚುರಪಡಿಸಿ,ಉಣಬಡಿಸಿದ್ದು ಅದರಲ್ಲೂ ಕನ್ನಡದಲ್ಲಿ ಬರೆದಿರುವುದು ನಿಮ್ಮ ಸಾಹಿತ್ಯಾಭಿಮಾನಕ್ಕೆ ಸಲ್ಲಲೇಬೇಕಾದ ಗೌರವ ಸರ್..

    14. ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು.

    15. ಓಝೋನ್ ಪದರ, ಅಪಾಯಕಾರಿ ಸಂಗತಿಗಳು ಹಾಗೂ ಪರಿಹಾರ ಕ್ರಮಗಳ ಬಗೆಗೆ ತಾವು ಬರೆದಿರುವ ಸಂಶೋಧನಾತ್ಮಕ ಲೇಖನ ಸಮಾಜದ ಪ್ರತಿಯೊಬ್ಬರ ಅರಿವಿನ ಪರಿಧಿಯನ್ನು ವಿಸ್ತರಿಸಲಿದೆ…ಅಭಿನಂದನೆಗಳು ಸರ್

    16. ಉತ್ತಮ ಬರಹ ಪ್ರಶಾಂತ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಓಜೋನ್ ಪದರದ ಬಗ್ಗೆ ಮಾಹಿತಿ ನೀಡುತ್ತಾ ಬಂದರೆ ಮುಂದೊಂದು ದಿನ ಪರಿಸರ ರಕ್ಷಣಾ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲು ಸಾಧ್ಯ. ಶಿಕ್ಷಕರು ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಲು ನಿಮ್ಮ ಬರಹ ಅತ್ಯಮೂಲ್ಯ. ಧನ್ಯವಾದಗಳು ಮಾರಾಯ…

    17. ಪೃಥ್ವಿಯ ವೈಜ್ಞಾನಿಕ ಜೀವಿಗಳ ವಿಕಸನಕ್ಕೆ ಕಾರಣವಾಗಿರುವ, ನಿಸರ್ಗದ ಅಪೂರ್ವ ಕೊಡುಗೆ ಆಗಿರುವ ಓಝೋನ್ ಪದರ, ಅದರ ರಹಸ್ಯವನ್ನು ಕೂಲಂಕುಶವಾಗಿ ಅರಿತುಕೊಳ್ಳಲು ಪ್ರಯತ್ನಪಟ್ಟ ನಮ್ಮ ವಿಜ್ಞಾನಿಗಳ ಪ್ರಯತ್ನವನ್ನು ಮೆಲುಕು ಹಾಕುತ್ತಾ ಸವಿಸ್ತಾರವಾಗಿ ತಮ್ಮ ವೈಜ್ಞಾನಿಕ ಲೇಖನದ ಮೂಲಕ ತಿಳಿಸಿ ಮಾನವನ ಜವಾಬ್ದಾರಿಯನ್ನು ಸ್ಪೂರ್ತಿದಾಯಕ ಪದಗಳಿಂದ ನೆನಪಿಸಿರುವ ಸರಳ ಸಜ್ಜನಿಕೆಯ ಪ್ರಾಧ್ಯಾಪಕ ಪ್ರೊ. ಪ್ರಶಾಂತ್ ರವರಿಗೆ ಹಾರ್ದಿಕ ಅಭಿನಂದನೆಗಳು. ಮತ್ತಷ್ಟು ಉತ್ತಮ ವೈಜ್ಞಾನಿಕ ಲೇಖನಗಳು ಮೂಡಿಬರಲಿ ಎಂದು ಆಶಿಸುತ್ತೇನೆ.
      ಮೀನಾಕ್ಷಿ ಕೆ.

    18. This article highlighted the importance of ozone layer because without the ozone layer, life on earth would face extreme environment and health challanges due to unfiltered UV radiation. Every student should read the article.

    LEAVE A REPLY

    Please enter your comment!
    Please enter your name here

    Latest article

    error: Content is protected !!