20.6 C
Karnataka
Sunday, September 22, 2024

    ಪಾಟ್ ನಲ್ಲೂ ಬೆಳೆಯಿರಿ ತಾವರೆ

    Must read

    ಜಯಶ್ರೀ ಅಬ್ಬಿಗೇರಿ

    ಹಾಗೆ ನೋಡಿದರೆ ಹೂಗಳನ್ನು ಇಷ್ಟಪಡದವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಹೂ ಮನಸ್ಸನ್ನು ಹಗುರಗೊಳಿಸಿ ಸಂತಸವನ್ನು ಮನದಂಗಳದಲ್ಲಿ ನೆಲೆಸುವಂತೆ ಮಾಡುತ್ತದೆ. ವಿವಿಧ ಸುಗಂಧ ಸುವಾಸನೆ ಸುಂದರ ಭಾವನೆ ಹೊರಹೊಮ್ಮಿಸುವ ಹೂಗಳು ಸರ್ವರನ್ನೂ ಮಂತ್ರಮುಗ್ಧಗೊಳಿಸುವ ಶಕ್ತಿ ಹೊಂದಿವೆ. ಸೌಂದರ್ಯ ಮತ್ತು ಸಮೃದ್ಧಿಯ ಪ್ರತೀಕವಾದ ಹೂ ದೇವರ ಅತ್ಯದ್ಭುತ ಸೃಷ್ಟಿಯಲ್ಲೊಂದು.

    ಕೋಮಲತೆಯನ್ನು ಸಂಕೇತಿಸುವ ಕೋಮಲವಾದ ಹೂಗಳೆಂದರೆ ಕೋಮಲೆಯರಿಗೆ ತುಂಬಾ ಇಷ್ಟ. ಹೂವಿನಂಥ ಮನಸ್ಸುಳ್ಳ ಹೆಂಗಳೆಯರಿಗೆ ಹೂಗಳನ್ನು ಬೆಳೆಯಲು ಬಹಳಷ್ಟು ತಾಳ್ಮೆ ಮತ್ತು ದೃಢತೆ ಇದ್ದೇ ಇರುತ್ತದೆ. ಹೆಚ್ಚಿನ ಆರೈಕೆ ಮತ್ತು ಕಾಳಜಿ ಬೇಕಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು.

    ಹೂಗಳನ್ನು ಆಹಾರದ ಬಣ್ಣ ಬದಲಿಸಲು ಬಳಸುತ್ತಾರೆ. ಇಲ್ಲವೇ ಇವುಗಳ ಎಲೆಗಳನ್ನು ಬೇಯಿಸಿ ಹಾಗೆ ತಿನ್ನಬಹುದು. ಆದರೆ ತುರ್ತು ಆಹಾರವಾಗಿ ತಿನ್ನಲು ಯೋಗ್ಯವಾದ ಕಡುಗೆಂಪು ಬಣ್ಣದ ಡೈ ಯನ್ನು ಕೇಕ್ ಮತ್ತು ಜೆಲ್ಲಿಗಳ ಬಣ್ಣ ಬದಲಿಸಲು ಬಳಸಬಹುದು. ಕೆಲವು ಹೂಗಳನ್ನು ಚಿಕಿತ್ಸೆಯಲ್ಲೂ ಬಳಸುತ್ತಾರೆ.
    ಹೂಗಳಿಂದಲೇ ದೇವರ ಪೂಜೆಗೆ ಒಂದು ವಿಶೇಷ ಕಳೆ. ಹೂಗಳಿಲ್ಲದೇ ದೇವರ ಪೂಜೆ ಸಂಪೂರ್ಣವಾಗಲಾರದು.

    ಶುಭ ಸಮಾರಂಭಗಳಲ್ಲಂತೂ ಇದರದು ಅಗ್ರ ಸ್ಥಾನ. ದೇವರ ಆರಾಧನೆಗೆ ಪ್ರಾರ್ಥನೆಗೆ ಹೂ ಬೇಕೇ ಬೇಕು. ನಿರ್ಮಲ ಮನಸ್ಸಿನಿಂದ ಹೂಗಳನ್ನು ದೇವರಿಗೆ ಸಮರ್ಪಿಸಿದರೆ ಮನದ ಆಸೆ ಆಕಾಂಕ್ಷೆಗಳು ಈಡೇರುವವು ಎಂಬ ಬಲವಾದ ನಂಬಿಕೆಯೂ ಇದೆ. ದೇವರ ಪಾದಗಳಿಗೆ ಹೂಗಳನ್ನು ಭಕ್ತಿ ಭಾವದಿಂದ ಸಮರ್ಪಿಸಿ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ. ವಿವಿಧ ಬಣ್ಣದ ಹೂಗಳಿಂದ ದೇವರ ಅಲಂಕಾರ ಅಷ್ಟೇ ಅಲ್ಲ ದೇವರ ಮನೆಯನ್ನೂ ಸಿಂಗರಿಸಲಾಗುವುದು. ದೇವಸ್ಥಾನವೂ ಇವುಗಳಿಂದಲೇ ಅಲಂಕೃತಗೊಂಡಿರುವುದನ್ನು ನಾವು ನೋಡಿ ಖುಷಿ ಪಡುತ್ತೆವೆ. ದೇವತೆಗಳಿಗೆ ಇಷ್ಟವಾಗುವ ಹೂಗಳನ್ನು ಸಮರ್ಪಿಸಿದರೆ ಅದೃಷ್ಟ ಹಾಗೂ ಸಮೃದ್ಧಿ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆಯೂ ಇದೆ.

    ಮಹಾಭಾರತದಲ್ಲಿ ಉಲ್ಲೇಖವಾಗಿರುವ ಮಾಹಿತಿಯಂತೆ “ಯಾರು ಶುದ್ಧವಾದ ಮನಸ್ಸಿನಿಂದ, ಧಾರ್ಮಿಕವಾದ ವಿಧಿ ವಿಧಾನದ ಮೂಲಕ ದೇವರಿಗೆ ಹೂವನ್ನು ಸಮರ್ಪಿಸುತ್ತಾರೋ ಅಂತಹ ವ್ಯಕ್ತಿಗಳ ಬಗ್ಗೆ ದೇವರು ತೃಪ್ತನಾಗುತ್ತಾನೆ ಮತ್ತು ಆ ವ್ಯಕ್ತಿಗಳಿಗೆ ಸಮೃದ್ಧಿಯಿಂದ ಹರಿಸುತ್ತಾನೆ..” ವಿವಿಧ ದೇವತೆಗಳಿಗೆ ವಿಭಿನ್ನ ಹೂಗಳು ಹಾಗೂ ಅವುಗಳ ದಳಗಳು ಅತ್ಯಂತ ಪ್ರಿಯವಾದವುಗಳು ಆಗಿರುತ್ತವೆ. ಎಂಬ ವಿಷಯಗಳು ಪುರಾಣ ಇತಿಹಾಸದಲ್ಲಿ ಉಲ್ಲೇಖವಾಗಿರುವುದನ್ನು ಕಾಣುತ್ತೇವೆ. ದೇವರು ಕುಳಿತುಕೊಳ್ಳುವ ಪೀಠ ವಿಶೇಷ ಹೂಗಳಿಂದ ಕೂಡಿರುತ್ತವೆ. ದೇವತೆಗಳ ಕೈಯಲ್ಲೂ ವಿಭಿನ್ನ ಹೂಗಳನ್ನು ಹಿಡಿದಿರುವುದು ಹೂಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
    ದಾಸವಾಳ ಹೂವು, ಪಾರಿಜಾತ ಹೂವು ,ಕಮಲದ ಹೂವು, ಚೆಂಡು ಹೂವು, ತುಳಸಿ, ಮಲ್ಲಿಗೆ ಹೂವು ಪೂಜೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿವೆ.

    ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಹಸಿರಿನೊಂದಿಗೆ ವಿವಿಧ ನಮೂನೆಯ ರಂಗು ರಂಗಿನ ಹೂಗಳು ಕಣ್ಮನ ಸೆಳೆಯುತ್ತವೆ. ಕೆಲವು ಮಹಿಳೆಯರು ಇಂಥ ಚಿತ್ತಾಕರ್ಷಕ ಹೂಗಳನ್ನು ಬೆಳೆಯುವ ಸಲುವಾಗಿ ಮಳೆಗಾಲಕ್ಕೆ ಕಾಯುತ್ತಿರುತ್ತಾರೆ. ಇಳೆಗೆ ತಂಪು ತಂದ ಮಳೆರಾಯ ಸಕಲ ಜೀವಿಗಳಿಗೂ ನವೋಲ್ಲಾಸ ನೀಡುತ್ತಾನೆ. ಇಡೀ ಪ್ರಕೃತಿಯೇ ಸೌಂದರ್ಯ ರಾಶಿಯಿಂದ ಕಂಗೊಳಿಸುತ್ತಿರುವಾಗ ಹೂಗಳ ಪ್ರೇಮಿಗಳಾದ ಹೆಂಗಳೆಯರು ಪರಿಸರದ ಸೌಂದರ್ಯ ವರ್ಧನೆಯಲ್ಲಿ ತಮ್ಮದೂ ಒಂದಿಷ್ಟು ಪಾಲು ಇರಲೆಂದು ಸಜ್ಜಾಗಿರುತ್ತಾರೆ.

    ಮಳೆಗೆ ಹಿಗ್ಗಿ ಹಿಗ್ಗಿ ಹೂವಾಗುವ ಪುಷ್ಪಗಳು ಅನೇಕ ಅವುಗಳಲ್ಲಿ ತಾವರೆಯೂ ಒಂದು. ಇದನ್ನು ಡೇರೆ ಹೂವೆಂದೂ ಕರೆಯುವರು. ಈ ಸಮಯದಲ್ಲಿ ತಾವರೆಯನ್ನು ತಮ್ಮ ಕೈ ತೋಟದಲ್ಲಿ, ಹೂದೋಟದಲ್ಲಿ ಬೆಳೆಸಲು ಹೆಂಗಳೆಯರು ನಾ ಮುಂದು ತಾ ಮುಂದು ಎಂದು ಸ್ಪರ್ಧೆ ಒಡ್ಡುವಷ್ಟು ಕೌತುಕರಾಗಿರುತ್ತಾರೆ.

    ತಾವರೆ ಗಡ್ಡೆ ಪ್ರಕೃತಿ ದತ್ತವಾಗಿ ದೊರೆಯತ್ತದೆ ಕೆಲವೊಮ್ಮೆ ಅವರಿವರನ್ನು ಕೇಳಿ ವಿವಿಧ ಬಣ್ಣದ ಹೂ ಬಿಡುವ ತಾವರೆ ಗೆಡ್ಡೆಗಳನ್ನು ಪಡೆದು ಭೂಮಿಯನ್ನು ಅಗೆದು ಅದರಲ್ಲಿ ಮರಳು ಮಣ್ಣು ಮತ್ತು ಗೊಬ್ಬರದ ಮಿಶ್ರಣ ಮಾಡಿ ಗಡ್ಡೆಯನ್ನು ಅದರೊಳಗಿಟ್ಟು ಬೆಳೆಸುವರು. ಇನ್ನು ಕೆಲವರು ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣು ಮರಳು ಗೊಬ್ಬರ ಬೆರೆಸಿ ಅದರಲ್ಲಿ ತಾವರೆ ಗಡ್ಡೆಯನ್ನಿಟ್ಟು ಬೆಳೆಸುವರು. ಸುರಿಯುವ ಮಳೆಗೆ ನೋಡು ನೋಡುತ್ತಿದ್ದಂತೆ ಒಂದೇ ವಾರದಲ್ಲಿ ಚಿಗುರೊಡೆದು ವಿಸ್ಮಯ ಮೂಡಿಸುವುದು. ನಂತರ ಮೊಳಕೆಯೊಡೆದು ಸಣ್ಣ ಸಣ್ಣ ಗಿಎಡವಾಗಿ ಬೆಳೆಯುತ್ತಾ ಹೋಗುತ್ತವೆ. ಈ ಸಂದರ್ಭದಲ್ಲಿ ಗಿಡಗಳಿಗೆ ಕಂಬಗಳನ್ನು ಆಧಾರವಾಗಿಡುವುದು ಸೂಕ್ತ. ತಿಂಗಳು ಕಳೆಯುವಷ್ಟರಲ್ಲಿ ಮೊಗ್ಗುಗಳು ಹಿಗ್ಗಿ ಹಿಗ್ಗಿ ಹೂವಾಗಿ ಮನಸೂರೆಗೊಳ್ಳುತ್ತವೆ.

    ಮಳೆಗಾಲದ ನಂತರ ಇವುಗಳಿಗೆ ನೀರುಣಿಸುವುದು ಅತ್ಯಗತ್ಯ. ಮಳೆಗಾಲದ ನಂತರ ಗಿಡ ಒಣಗಿದಾಗ ಗಿಡದ ಬುಡದಲ್ಲಿ ಕಟಾವು ಮಾಡಿ ಪ್ಲಾಸ್ಟಿಕ್ ಚೀಲಗಳನ್ನಿಟ್ಟರೆ ಮತ್ತೆ ಮುಂದಿನ ಮಳೆಗಾಲಕ್ಕೆ ಮನಮೋಹಕ ತಾವರೆಗಳನ್ನು ಬೆಳೆದು ಮನಾನಂದ ಪಡೆಯಬಹುದು.

    ಈಗ ನಗರ ಭಾಗಗಳಲ್ಲಿ ಟೆರೆಸ್ ಗಾರ್ಡನ್ ಅನಿವಾರ್ಯವಾಗಿರುವುದರಿಂದ ಮೇಲಿನ ವಿಧಾನದಲ್ಲಿ ಪಾಟ್ ನಲ್ಲೂ ತಾವರೆಗಿಡ ಬೆಳಸಬಹುದು. ಪಾಟ್ ಅಗಲವಾಗಿರಬೇಕಪ. ಅದರಲ್ಲಿ ಪೂರ್ಣ ಮಣ್ಣು ತುಂಬದೆ ಮಕ್ಕಾಲು ಮಣ್ಣು ತುಂಬಿ ಮೇಲೆ ನೀರ ಹಾಕಬೇಕು. ಕೆಸರಿನಂತೆ ಇರಬೇಕು.ಅದರಲ್ಲಿ ತಾವರೆ ಗೆಡ್ಡೆಗಳನ್ನುಇಟ್ಟು ಬೆಳೆಸಬಹುದು.

    ಜಯಶ್ರೀ ಅಬ್ಬೀಗೇರಿ
    ಜಯಶ್ರೀ ಅಬ್ಬೀಗೇರಿ
    ಜಯಶ್ರೀ ಅಬ್ಬಿಗೇರಿ ಮೂಲತಃ ಗದಗ ಜಿಲ್ಲೆಯವರು. ವ್ಯಕ್ತಿತ್ವ ವಿಕಸನ, ಪ್ರಸ್ತುತ ವಿದ್ಯಮಾನ, ಹಾಸ್ಯ ಭಾವನಾತ್ಮಕ, ಆದ್ಯಾತ್ಮಿಕ,ಮಹಿಳಾ ಪರ, ಚಿಂತನ ಪರ ಲೇಖನಗಳುಳ್ಳ ೧೨ ಕೃತಿಗಳನ್ನು ರಚಿಸಿದ್ದಾರೆ. ಸದ್ಯ ಬೆಳಗಾವಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ.
    spot_img

    More articles

    4 COMMENTS

    1. ಹೂವಿನ ಮಹತ್ವ. ತಾವರೆ ಬೆಳೆಸುವ ಕ್ರಮ. ಉಪಯುಕ್ತ ಮಾಹಿತಿ ನಿಡಿದ್ದಿರಿ ಧನ್ಯವಾದಗಳು ಮೇಡಂ.

    LEAVE A REPLY

    Please enter your comment!
    Please enter your name here

    Latest article

    error: Content is protected !!