ಇಚ್ಚಾ ಶಕ್ತಿ, ಅಪಾರ ಬುದ್ಧಿವಂತಿಕೆ, ಅಗತ್ಯವಾದ ಜ್ಞಾನ ಇದ್ದಾಗಲೂ ಜನರು ಯಾಕೆ ಕೆಲವೊಂದು ಕೆಲಸದಲ್ಲಿ ವಿಫಲರಾಗುತ್ತಾರೆ? ಹಲವಷ್ಟು ಬಾರಿ ಕೆಲಸ ಗೊಂದಲಮಯವಾಗಿ ಇಲ್ಲವೇ ಅಪೂರ್ಣವಾಗಿಯೇ ಉಳಿಯುತ್ತದೆ. ಇದೇಕೆ ಹೀಗೆ ಎನ್ನಿಸಬಹುದು.?
ಪ್ರತಿ ಸೆಕೆಂಡುನಲ್ಲೂ ಪ್ರತಿಯೊಬ್ಬರ ಮನಸ್ಸಿನ ಪರದೆಯಲ್ಲಿ ಹಲವಾರು ವಿಚಾರಗಳು ಹರಿದಾಡುತ್ತಿರುತ್ತದೆ. ಅದು ಏಕಾಗ್ರತೆಗೆ ಭಂಗ ತರುತ್ತದೆ. ಅದರಿಂದ ಮಾಡಲು ಹೊರಟಿರುವ ಕೆಲಸದ ಫಲಿತಾಂಶ ಅಪೂರ್ಣವೇ ಆಗಿರುತ್ತದೆ. ಗುರಿಯೆಡೆಗೆ ಮನಸ್ಸು ಏಕಾಗ್ರಗೊಳ್ಳದೇ ಇದ್ದರೆ ಯಾವುದೇ ಪ್ರಯತ್ನವೂ ಸಫಲವಾಗುವುದಿಲ್ಲ. ಏಕಮನಸ್ಸಿನಿಂದ ಕೆಲಸದ ಕಡೆಗೆ ಗಮನ ಹರಿಸದೇ ಇದ್ದರೆ ಖಂಡಿತಾ ಯಶಸ್ಸು ಸಾಧ್ಯವಿಲ್ಲ. ಕೇಂದ್ರೀಕೃತ ಮನಸ್ಸು ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ಹಾಗೂ ಅದರಿಂದ ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.
ಮನಸ್ಸನ್ನು ಕೇಂದ್ರೀಕರಿಸುವುದರಿಂದ ವ್ಯಕ್ತಿಯ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚುತ್ತದೆ. ಮನಸ್ಸನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಾಧ್ಯವಾಗುವುದಾದರೆ ಅದರಿಂದ ನಾವು ಸಮಂಜಸವಾಗಿ, ನಿಖರವಾಗಿ ನಮ್ಮನ್ನುನಾವು ವ್ಯಕ್ತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ದೊಡ್ಡಮಟ್ಟದ ಯಶಸ್ಸು ಗಳಿಸುವುದಕ್ಕೂ ಸಾಧ್ಯ. ಅಂತಹ ಯಶಸ್ಸು ಸಾಧ್ಯವಾಗುವುದು ನಮ್ಮ ಮನಸ್ಸನ್ನು ನಾವು ನಿಯಂತ್ರಣದಲ್ಲಿರಿಸಿ ಕೊಳ್ಳುವುದರಿಂದ ಮಾತ್ರ ಸಾಧ್ಯ. ಚಾಂಪಿಯನ್ಸ್, ಜೀನಿಯಸ್ ಎಂದೆಲ್ಲಾ ಕರೆಸಿಕೊಂಡವರ ಯಶಸ್ಸಿನ ಗುಟ್ಟು ಇದೇ ಆಗಿದೆ.
ಏಕಾಗ್ರತೆ ನಮ್ಮೊಳಗೆ ಆಧ್ಯಾತ್ಮಿಕ ಅರಿವನ್ನು ತಂದುಕೊಡುತ್ತದೆ, ನಮ್ಮಂತರಂಗವನ್ನು ಅರಿಯುವುದಕ್ಕೆ ಸಾಧ್ಯವಾಗಿಸುತ್ತದೆ. ಪ್ರತಿಯೊಬ್ಬನೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಶಕ್ತಿ ಹೊಂದಿರುತ್ತಾನೆ. ಮನಸ್ಸನ್ನು ಕೇಂದ್ರೀಕರಿಸಿಕೊಳ್ಳುವುದನ್ನು ಆಧ್ಯಾತ್ಮಿಕ ಗುರು ಮನವೊಲಿಸುವುದರ ಮೂಲಕ ಕಲಿಸಿಕೊಡುತ್ತಾನೆ. ಅದನ್ನವನು ಬಹಳ ಚತುರತೆಯಿಂದ ಬಳಸಿಕೊಂಡಿರುತ್ತಾನೆ.ವಿವಿಧ ಧರ್ಮಗ್ರಂಥಗಳು ಕೂಡಾ ಫೋಕಸ್ ಮಾಡುವುದರ ಬಗೆಗೆ ತಮ್ಮದೇ ನೆಲೆಯಲ್ಲಿ ಸಾರುತ್ತವೆ.
ಎಲ್ಲಾ ಧರ್ಮಗಳೂ ಕೂಡಾ ಕರ್ಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವಂತೆ ಹೇಳುತ್ತದೆ.ವಾಸ್ತವ ಅಂದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಹಲವಾರು ಗೊಂದಲಗಳು ಇದ್ದಾಗ ಒಂದೇ ಕಡೆಗೆ ಗಮನ ನೀಡುವುದು ಅಷ್ಟು ಸುಲಭದ ಮಾತಲ್ಲ. ಮನಸ್ಸಿನೊಂದಿಗೆ ಹಲವಾರು ವಿಷಯಗಳು ಸ್ಪರ್ಧೆ ಮಾಡುತ್ತಿರುತ್ತವೆ. ಹಾಗಾಗಿ ಒಂದೇ ವಿಷಯದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವ ವಿಧಾನ ಅಂದರೆ ಈ ಕ್ಷಣ ನಾನೇನು ಮಾಡಬೇಕು, ನಾನು ಮಾಡಬೇಕಾದ್ದದ್ದೇನು ಎಂಬುದನ್ನು ತಿಳಿದುಕೊಳ್ಳುವುದು. ಸದ್ಯದ ಪರಿಸ್ಥಿತಿಯಲ್ಲಿ ತಾನು ಮಾಡಬೇಕಾದ ಗುರಿಗಳೇನು ಎಂಬುದನ್ನು ತಿಳಿದುಕೊಳ್ಳುವುದು. ಮೊದಲ ಪ್ರಾಶಸ್ತ್ಯ ಯಾವುದಕ್ಕೆ ನೀಡಬೇಕು ಎಂಬುದನ್ನು ಅರಿತು ಕೆಲಸ ಮಾಡುವುದರಿಂದ ಒಂದೊಂದೇ ಗುರಿಗಳೊಂದಿಗೆ ಸರ್ವಶ್ರೇಷ್ಠ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ.
ನಮ್ಮ ಗಮನ ಯಾವಾಗ ಹಲವಾರು ಕೆಲಸಗಳೊಂದಿಗೆ ಒಂದೇ ಸಮಯದಲ್ಲಿ ವಿಭಜನೆಯಾಗಿ ಹೋಗಿರುತ್ತದೆಯೋ ಅದು ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುತ್ತಿರುವುದರಿಂದ (ಮಲ್ಟಿಟಾಸ್ಕ್) ಉದಾಹರಣೆಗೆ ಇಮೇಲ್ ಮಾಡುವುದು, ಫೇಸ್‍ಬುಕ್ ನೋಡುವುದು, ಟ್ವಿಟರ್ ಹೀಗೆ ಒಟ್ಟಿಗೆ ಎಲ್ಲವನ್ನೂ ಮಾಡುವುದರಿಂದ ಚಿಂತನೆಯನ್ನೇ ಹಾಳು ಮಾಡಿಬಿಡುತ್ತದೆ. ಇದರಿಂದ ಮಾಡುವ ಕೆಲಸದಲ್ಲಿ ಗುಣಮಟ್ಟ ಕಡಿಮೆಯಾಗುತ್ತದೆ.ಹಳೆಯದರ ಬಗ್ಗೆ ಚಿಂತೆ ಮಾಡದೆ, ಭವಿಷ್ಯದ ಬಗ್ಗೆ ವಿಚಲಿತರಾಗದೆ ಪ್ರಸ್ತುತ ಕೈಗೆತ್ತಿಕೊಂಡುದುದರ ಬಗ್ಗೆ ಗಮನ ಕೇಂದ್ರೀಕರಿಸಿ. ಧ್ಯಾನ ಅಭ್ಯಾಸ ಮಾಡುವವರ ಪ್ರಮುಖ ಅಂಶ.
ಧ್ಯಾನ ಮಾಡುವುದರಿಂದ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ಮನಸ್ಸು ಒತ್ತಡಮುಕ್ತವಾಗುತ್ತದೆ. ಮನಸ್ಸಿನ ಗೊಂದಲಗಳನ್ನು ತಳ್ಳಿ ಹಾಕುತ್ತದೆ.ಒಂದು ವಸ್ತುವಿನೆಡೆಗಿನ ನಮ್ಮ ಮನಸ್ಸಿನ ಜಾಗೃತಿಯು ನಮ್ಮ ಧ್ಯಾನಾವಸ್ಥೆಗೆ ಕೊಂಡೊಯುತ್ತದೆ.ಒಂದು ಗುರಿಯನ್ನು ಆಯ್ಕೆ ಮಾಡಿಕೊಂಡು ಅದರೆ ಮನಸ್ಸನ್ನು ಕೇಂದ್ರೀಕರಿಸಿ. ಅದು ಪೂರ್ಣಗೊಂಡ ನಂತರವೇ ಮತ್ತೊಂದನ್ನು ಆಯ್ಕೆ ಮಾಡಿಕೊಳ್ಳಿ.
ಒಂದು ಸಮಯಕ್ಕೆ ಒಂದೇ ವಿಷಯದ ಕಡೆಗೆ ಗಮನ ಕೇಂದ್ರೀಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ವಾಸ್ತವದ ಕಡೆಗೇ ಗಮನ ಇರಬೇಕು ಅನ್ನೋದನ್ನು ಮರೆಯಬಾರದು. ಪ್ರತಿದಿನ ಬೆಳಗ್ಗೆ ಎದ್ದಾಗ ಎಂತಹ ಅದ್ಭುತ ಮತ್ತೊಂದು ಗಳಿಗೆ ಬಂದಿದೆ. ಅದು ಜೀವನಕ್ಕೆ ಸಿಕ್ಕಿದ ಅದ್ಭುತ ಉಡುಗೊರೆ ಎಂದುಕೊಂಡು ಗುರಿಯೆಡೆಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡರೆ ಅದು ಒಳ್ಳೆಯ ದಿನವಾಗುವುದರಲ್ಲಿ ಸಂಶಯವಿಲ್ಲ.
ಗಮನ ಕೇದ್ರೀಕರಿಸುವುದು ಹೇಗೆ?
* ಒಂದಷ್ಟು ಹೊತ್ತು ಒಂದೇ ವಿಷಯ, ಗುರಿ, ಕೆಲಸದ ಕಡೆ ಗಮನ ನೀಡಲು ಪ್ರಯತ್ನಿಸಬೇಕು.
* ಗಮನ ಕೇಂದ್ರೀಕರಿಸುವುದು ಅಂದರೆ ಒಂದೊಳ್ಳೆ ಕಾರಣಕ್ಕಾಗಿ ಒಂದೊಳ್ಳೆಯ ಸಮಯ ಹಾಗೂ ಸ್ಥಳದಲ್ಲಿ ಕೆಲಸ ಮಾಡುವ ಕಲೆ.
* ಏನು ಬೇಕು ಎಂಬುದನ್ನು ಮತ್ತೆ ಮತ್ತೆ ಯೋಚಿಸಿ.
* ಕೃತಜ್ಞತೆ ಹೇಳಿ, ಕೃತಜ್ಞರಾಗಿರಿ.
* ಸಮಯ ನಿರ್ವಹಣೆ ಅಭ್ಯಸಿಸಿಕೊಳ್ಳಿ.
ಇಂದಿನ ಹಲವು ಆಕರ್ಷಣೆ ಗಳಿಂದ ವಿಚಲನೆ ಹೊಂದುವ ಮನಸ್ಸನ್ನು ನಿಯಂತ್ರಿಸಲು ಹಾಗೂ ಗುಣಮಟ್ಟದ ಕೆಲಸ ನಿರ್ವಹಿಸಲು ಸರಳವಾಗಿ ವಿವರಿಸಲಾಗಿದೆ. ಪ್ರಸ್ತುತ ನಮಗೆ ಈ ಲೇಖನದ ಪ್ರಯೋಜನ ಆಗಿದೆ.
ಥ್ಯಾಂಕ್ಯು ಮೇಡಂ
Thank you sir
ಸ್ಪೂರ್ತಿದಾಯಕ
ಉಪಯುಕ್ತ ಲೇಖನ
Thank you mam
ಚಂದ ವಿವರಣೆಯೊಂದಿಗಿನ ಲೇಖನ. ಈಗ ಎಲ್ಲರಿಗೂ ಸಹಾಯವಾಗುತ್ತದೆ. ಅಲ್ಲದೇ ಸೋತಾಗ ಕುಗ್ಗದೆ ತನ್ನ ಗುರಿಯೆಡೆಗೆ ಗಮನವಿದ್ದರೆ ಯಶಸ್ಸು ಖಂಡಿತಾ
ಶ್ರೀದೇವಿ ತಡವಾಗಿ ಓದಿದೆ…
ಚಂದ ಬರೆದಿದ್ದೀರಿ.. ಓದಿ
ಪ್ರೇರಣೆ ತುಂಬಿದ ಹಾಗಾಯ್ತು