| ಕೋವಿಡ್ 19 ಇಡೀ ವಿಶ್ವದ ಜೀವನ ಶೈಲಿಯನ್ನೇ ಬದಲಿಸಿ, ಸಂಘ ಜೀವನದಿಂದ ಸಂಸಾರಿಕ ಜೀವನದತ್ತ ಸೆಳೆದಿದೆ. ಹೆಚ್ಚಿನ ದೇಶಗಳನ್ನು ಆರ್ಥಿಕ ಒತ್ತಡಕ್ಕೆ ತಳ್ಳಿದೆ. ಈ ಪರಿಸ್ಥಿತಿಯಲ್ಲಿ ಪೂರ್ವನಿಯೋಜಿತ ಯೋಜನೆಗಳೆಲ್ಲವೂ ಬುಡಮೇಲಾಗುವಂತಾಗಿದೆ.
ಹೆಚ್ಚಿನ ಕಾರ್ಪೊರೇಟ್ ಗಳು ಕೊರೋನಾ ಆರಂಭದ ದಿನಗಳಿಗಿಂತ ಮುಂಚೆಯೇ ಆರ್ಥಿಕ ಒತ್ತಡ, ಹಿಂಜರಿತದ ಪರಿಸ್ಥಿತಿಯಲ್ಲಿದ್ದವು. ಈಗ ಕಾರ್ಪೊರೇಟ್ ಗಳು, ವ್ಯವಹಾರಿಕ ಸಂಸ್ಥೆಗಳು ಮುಂತಾದ ಔದ್ಯಮಿಕ ಜಗತ್ತಿನವರ ಪ್ರಮುಖವಾದ ಕಾರ್ಯ ʼಫಂಡ್ ರೈಸಿಂಗ್ʼ ಅಂದರೆ ಸಂಪನ್ಮೂಲ ಸಂಗ್ರಹಣೆಯೇ ಮುಖ್ಯಗುರಿಯಾಗಿದೆ.
ಈ ದಿಶೆಯಲ್ಲಿ ಅನೇಕ ಬ್ರಾಂಡೆಡ್ ಕಂಪನಿಗಳೂ ಆರಂಭಿಕ ಷೇರು ವಿತರಣೆಗೆ ಮುಂದಾಗಿವೆ. ಐ ಪಿ ಒ ಮೂಲಕ ಫಂಡ್ ರೈಸಿಂಗ್ ಷೇರುಪೇಟೆಯ ಸಹಜ ಕ್ರಿಯೆ. ಆದರೆ ಈ ಪ್ರಕ್ರಿಯೆಯ ಮೂಲಕ ಸಂಪನ್ಮೂಲ ಸಂಗ್ರಹಣೆಯಲ್ಲಿ ವಿತರಿಸುತ್ತಿರುವ ಷೇರುಗಳ ಬೆಲೆಯು ಹೇಗಿದೆ ಎಂದರೆ, ಆ ಷೇರುಗಳು ಲಿಸ್ಟಿಂಗ್ ಆದ ಮೇಲೆ ಅಲಾಟ್ ಆದವರು ಪಡೆಯಬಹುದಾದ ಲಾಭವನ್ನು ಸೇರಿಸಿಕೊಂಡು ಪ್ರೀಮಿಯಂ ನಿಗದಿಪಡಿಸಿರುವಂತೆ ತೋರುತ್ತಿದೆ. ಈ ಸಂದರ್ಭದಲ್ಲಿ ಸ್ಟಾಟಿಸ್ಟಿಕ್ಸ್ ಹೆಚ್ಚು ಪ್ರಭಾವಿಯಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ, ಚಿಂತಿಸಿ ನಿರ್ಧರಸಿರಿ. ಕೇವಲ ಆಂಕರ್ ಇನ್ವೆಸ್ಟರ್ಸ್, ಮರ್ಚಂಟ್ ಬ್ಯಾಂಕರ್ಸ್, ಹಿಂದಿನ ಘಟನೆಗಳನ್ನು ಆಧಾರವಾಗಿರಿಸಿಕೊಂಡು ನೀಡುವ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡದೆ, ವಾಸ್ತವ ಅಂಶ, ಪೇಟೆಯ ಪರಿಸ್ಥಿತಿಯಂತಹ ಅಂಶಗಳೊಂದಿಗೆ, ಘೋಷಿತ ಗುರಿಸಾಧನೆ ಸಾಧ್ಯವೇ? ಎಂಬ ಅಂಶಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದು ಸರಿಯಾದ ಕ್ರಮ.
ಈ ಹಿಂದೆ ವಿತರಣೆಯಾದ ಕೆಲವು ಐ ಪಿ ಒ ಗಳು
ಈಗಿನ ದಿನಗಳಲ್ಲಿ ಸಾಕ್ಷರತೆ ಹೆಚ್ಚಾಗಿದ್ದರೂ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಲು ಮರ್ಚಂಟ್ ಬ್ಯಾಂಕರ್ / ಕಂಪನಿಗಳ ದುರಾಸೆಗಳಿಗೆ ಬ್ರೇಕ್ ಹಾಕಬೇಕಾದರೆ, ರಿಟೇಲ್ ಹೂಡಿಕೆದಾರರಲ್ಲಿ ನಂಬಿಕೆ ಮೂಡಿಸಲು ಸೂಕ್ತವಾದ ನಿಯಮ, ನಿಯಂತ್ರಣ ಅಧವಾ ತಿದ್ದುಪಡಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ.
2007 ರಿಂದ ರೇಟಿಂಗ್ ಪಡೆದು ಆರಂಭಿಕ ಷೇರು ವಿತರಣೆ ಮಾಡುವ ನಿಯಮ ಜಾರಿಯಾದ ಮೇಲೂ ಕಾರ್ಪೊರೇಟ್ ಗಳು ನಿಗದಿಪಡಿಸುವ ವಿತರಣಾ ಬೆಲೆಗಳು ಅತಿ ಹೆಚ್ಚಾಗಿದ್ದು, ವಿತರಣೆಯಾದ ನಂತರದ ವರ್ಷಗಳಲ್ಲಿ ಈ ಕಂಪನಿಗಳ ಷೇರುಗಳು ಕಂಡ ಅತಿಯಾದ ಕುಸಿತವು ಹೇಗೆ ಹೂಡಿಕೆದಾರರ ಬಂಡವಾಳವನ್ನು ಕರಗಿಸಿವೆ. ರೇಟಿಂಗ್ ಎಂಬುದು ಕೇವಲ ಕಣ್ಣೊರೆಸುವ ತಂತ್ರದಂತಾಗಿ ಅದರ ಘನತೆಯನ್ನು ಕಳೆದುಕೊಂಡಿದೆ.
ಇತ್ತೀಚಿಗೆ ಈ ರೇಟಿಂಗ್ ಎಂಬುದು ವಹಿವಾಟುದಾರರ ದಿನನಿತ್ಯದ ಚಟುವಟಿಕೆಗೆ ಆಹಾರವಾಗಿದೆ. ಒಂದು ಕಂಪನಿಯ ಷೇರಿನ ಬೆಲೆ ಕುಸಿತ ಕಂಡಾಗ ರೇಟಿಂಗ್ ಇಳಿಸುವುದು ಮತ್ತು ಏರಿಕೆ ಕಂಡಾಗ ರೇಟಿಂಗ್ ಹೆಚ್ಚಿಸುವ ಈ ಪ್ರಕ್ರಿಯೆಗೆ ಹೆಚ್ಚಿನ ಮಹತ್ವ ನೀಡುವಂತಹ ಅಗತ್ಯವಿಲ್ಲದಾಗಿದೆ. ಸಹಜತೆಯಿಂದ ಆರ್ಥಿಕ ಸ್ಥಿರತೆ ಹಣದುಬ್ಬರ ನಿಯಂತ್ರಣಕ್ಕೆ ಐಪಿಒ
ಆರಂಭಿಕಷೇರು ವಿತರಣೆಗಳಲ್ಲಿ ಜನಸಾಮಾನ್ಯರು ಭಾಗವಹಿಸುವುದರಿಂದ ಕಾರ್ಪೊರೇಟ್ ಗಳು ಸಹಜ, ಅರ್ಹಬೆಲೆಯಲ್ಲಿ ವಿತರಣೆಮಾಡಲು ಮುಂದಾದರೆ ಹೂಡಿಕೆಗೂ ಪ್ರೋತ್ಸಾಹಿಸುವದರ ಜೊತೆಗೆ ಹಣದುಬ್ಬರದ ನಿಯಂತ್ರಣವು ತನ್ನಷ್ಟಕ್ಕೆ ತಾನೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ಸಾರ್ವಜನಿಕರ ಭಾಗಿತ್ವದಿಂದ ಆರ್ಥಿಕ ಸ್ಥಿರತೆಯನ್ನು ಸ್ಥಾಪಿಸುವಂತಹ ಕ್ರಮವಾಗಿದೆ.
ಕೋಲ್ ಇಂಡಿಯಾ: 2010 ರಲ್ಲಿ ನವರತ್ನ ಕಂಪನಿ ಕೋಲ್ ಇಂಡಿಯಾ ರೂ.15 ಸಾವಿರಕೋಟಿ ಸಂಗ್ರಹಣೆಯ ಉದ್ದೇಶದಿಂದ, ತನ್ನ ಚೊಚ್ಚಲ ಆರಂಭಿಕಷೇರು ವಿತರಣೆಮಾಡಿತು. ಆಸಂದರ್ಭದಲ್ಲಿ ಸಾರ್ವಜನಿಕ ಸ್ಪಂದನ ಹೆಚ್ಚಾಗಿ ಸುಮಾರು ಎರಡು ಲಕ್ಷ ಕೋಟಿ ಹಣ ಸಂಗ್ರಹಣೆಯಾಯಿತು. ಅಂದರೆ ಸುಮಾರು ರೂ.1.85 ಲಕ್ಷಕೋಟಿ ಹೆಚ್ಚು ಸಂಗ್ರಹವಾಗಿ, ಅಷ್ಟು ಹಣ ಪೇಟೆಯಿಂದ ಸ್ವಲ್ಪ ಸಮಯದವರೆಗೂ ದೂರಸರಿಯಿತು ಇದು ಭಾರತೀಯ ರಿಸರ್ವ್ ಬ್ಯಾಂಕ್ ಪೇಟೆಯಿಂದ ಹರಿದಾಡುವ ಹಣವನ್ನು ಹೀರಲು ಜಾರಿಗೊಳಿಸಬಹುದಾದ ಸೆಕ್ಯುರಿಟೀಸ್ ಮಾರಾಟದ ಕ್ರಮಕ್ಕೆ ಸ್ವಲ್ಪಮಟ್ಟಿನ ಬ್ರೇಕ್ ಹಾಕುವ ಕ್ರಮವೂ ಆಗಿರುತ್ತದೆ.
ಈ ಷೇರಿನ ಬೆಲೆ 2005 ರಲ್ಲಿ ರೂ.440 ನ್ನು ತಲುಪಿದ್ದು ನಂತರದಲ್ಲಿ ನಿರಂತರವಾಗಿ ಕುಸಿಯುತ್ತ ಬಂದು ರೂ.119 ರ ಕನಿಷ್ಠಕ್ಕೆ ತಲುಪಿ ಈಗ ರೂ.123/124 ರ ಸಮೀಪದಲ್ಲಿದೆ. ಬಿ ಎಸ್ ಇ ಲಿಮಿಟೆಡ್: 2017ರಲ್ಲಿ ಪ್ರತಿ ಷೇರಿಗೆ ರೂ.806 ರಂತೆ ವಿತರಣೆ ಮಾಡಿದ, ದೇಶದ 140 ವರ್ಷ ಹಳೆಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಷೇರುಪೇಟೆಯ ಹೆಗ್ಗುರುತಾದ ʼಸೆನ್ಸೆಕ್ಸ್ʼ ನ್ನು ಸೂಚ್ಯಂಕವನ್ನಾಗಿಸಿಕೊಂಡಿರುವ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಷೇರಿನ ಬೆಲೆ ರೂ.1,100 ನ್ನು ದಾಟಿತ್ತು. ಈ ಸಂಸ್ಥೆಯು ಸೇವಾಕ್ಷೇತ್ರದಲ್ಲಿದ್ದು, ಕಂಪನಿಗಳ ಲಿಸ್ಟಿಂಗ್ ನಿಂದ ಆದಾಯ ಪಡೆಯಲಿರುವುದರಿಂದ ಯಾವುದೇ ಬದಲಾವಣೆಗಳು ಹೆಚ್ಚು ಪ್ರಭಾವಿಯಾಗಿರುವುದಿಲ್ಲ. ಆದರೂ ಈ ಷೇರಿನ ಬೆಲೆ ಈ ವರ್ಷದ ಮಾರ್ಚ್ ನಲ್ಲಿನ ಕುಸಿತದಲ್ಲಿ ರೂ.275 ರ ಸಮೀಪಕ್ಕೆ ಕುಸಿದು ಸರ್ವಕಾಲೀನ ಕನಿಷ್ಠದ ದಾಖಲೆ ನಿರ್ಮಿಸಿ, ನಂತರ ಚೇತರಿಕೆಯಿಂದ ರೂ.570 ರ ಸಮೀಪ ವಹಿವಾಟಾಗುತ್ತಿದೆ. ಆದರೂ ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿದ್ದು ಅಂದು ಹೂಡಿಕೆ ಮಾಡಿದವರ ಬಂಡವಾಳವನ್ನು ಕರಗಿಸಿದೆ.
ಸಿ ಡಿ ಎಸ್ ಎಲ್ ಲಿಮಿಟೆಡ್: ಅದೇ ವರ್ಷ ಪ್ರತಿ ಷೇರಿಗೆ ರೂ.149 ರಂತೆ ವಿತರಿಸಿದ ಬಿ ಎಸ್ ಇ ಯ ಅಂಗಸಂಸ್ಥೆ ಸಿಡಿಎಸ್ ಎಲ್ ಷೇರು ವಿತರಣೆ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲೇ ವಹಿವಾಟಾಗುತ್ತಿದ್ದು, ಹೂಡಿಕೆದಾರರನ್ನು ಹರ್ಷಿತಗೊಳಿಸಿದೆ. ಸಧ್ಯ ಈ ಷೇರಿನ ಬೆಲೆ ರೂ.470 ರ ಸಮೀಪವಿದೆ.
ಪಿ ಎನ್ ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ : 2016 ರಲ್ಲಿ ಪ್ರತಿ ಷೇರಿಗೆ ರೂ.775 ರಂತೆ ಐ ಪಿ ಓ ಮೂಲಕ ಪೇಟೆ ಪ್ರವೇಶಿಸಿದ ಪಿ ಎನ್ ಬಿ ಹೌಸಿಂಗ್ ಫೈನಾನ್ಸ್ ಕಂಪನಿ ಷೇರಿನ ಬೆಲೆ ರೂ.1,039 ರ ವಾರ್ಷಿಕ ಗರಿಷ್ಠವನ್ನು ನವೆಂಬರ್ 2018 ರಲ್ಲಿತ್ತು. ಈ ವರ್ಷದ ಮಾರ್ಚ್ ನಲ್ಲಿ ರೂ.146 ಕ್ಕೆ ಜಾರಿದ್ದ ಈ ಷೇರಿನ ಬೆಲೆ ನಂತರ ಚೇತರಿಕೆಯಿಂದ ರೂ.335 ರವರೆಗೂ ಜಿಗಿತ ಕಂಡಿದೆ.
ಆಂಜನೇಯ ಲೈಫ್ ಕೇರ್ ಲಿಮಿಟೆಡ್: 2011 ರಲ್ಲಿ ಪ್ರತಿಷೇರಿಗೆ ರೂ.240 ರಂತೆ ಐಪಿಒ ಮೂಲಕ ವಿತರಣೆಮಾಡಿದ ಆಂಜನೇಯ ಲೈಫ್ ಕೇರ್, ಷೇರಿನ ಬೆಲೆ ರೂ.720 ನ್ನು 2013 ರಲ್ಲಿ ತಲುಪಿತಾದರೂ, ನಂತರ ತನ್ನ ಹೆಸರನ್ನು ಡಾಕ್ಟರ್ ಡಾಟ್ಸನ್ಸ್ ಲ್ಯಾಬ್ ಲಿಮಿಟೆಡ್ ಎಂದು ಬದಲಾಯಿಸಿಕೊಂಡರೂ, ಏಳ್ಗೆಯಾಗಲಿಲ್ಲ. 2015 ರಲ್ಲಿ ಒಂದಂಕಿಗೆ ತಲುಪಿ ನಂತರ, ಷೇರುಪೇಟೆಯಿಂದ ನಿರ್ಗಮಿಸಿದೆ.
ಜೆಟ್ ಏರ್ ವೇಸ್ (ಇಂಡಿಯಾ) ಲಿಮಿಟೆಡ್: 2005 ರಲ್ಲಿ ಜೆಟ್ ಏರ್ ವೇಸ್ ಕಂಪನಿಯು ಪ್ರತಿ ಷೇರಿಗೆ ರೂ.1,100 ರಂತೆ ಆರಂಭಿಕ ಷೇರು ವಿತರಿಸಿತ್ತು. ಆಗ ಆ ವಿತರಣೆಗೆ ಹದಿನಾರು ಪಟ್ಟು ಹೆಚ್ಚು ಸಂಗ್ರಹವಾಗಿತ್ತು. ಆದರೆ ನಂತರದ ದಿನಗಳಲ್ಲಿ , ಪೇಟೆಯಲ್ಲಿ, ವಿತರಣೆ ಬೆಲೆ ಸಹ ತಲುಪದಾಗದೆ, ಈಗ ರೂ.26 ರ ಸಮೀಪಕ್ಕೆ ಕುಸಿದಿದೆ.
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್: 2018 ರಲ್ಲಿ ಪ್ರತಿ ಷೇರಿಗೆ ರೂ.1,215 ರಂತೆ ಐ ಪಿ ಒ ಮೂಲಕ ಷೇರು ವಿತರಣೆ ಮಾಡಿದ ಈ ಕಂಪನಿ ಷೇರಿನ ಬೆಲೆ ನಂತರದಲ್ಲಿ ವಿತರಣೆ ಬೆಲೆಯನ್ನು ತಲುಪದೇ ಇದ್ದು ಈ ವರ್ಷದ ಮಾರ್ಚ್ ನಲ್ಲಿ ರೂ.450 ರ ಸಮೀಪಕ್ಕೆ ಕುಸಿದು ಅಲ್ಲಿಂದ ಪುಟಿದೆದ್ದ ಷೇರಿನ ಬೆಲೆ ಆಗಸ್ಟ್ ನಲ್ಲಿ ರೂ.1,400 ನ್ನು ದಾಟಿತು. ಈ ಸಂದರ್ಭದ ಪ್ರಯೋಜನವನ್ನು ಕೇಂದ್ರ ಸರ್ಕಾರವು ಮತ್ತೊಮ್ಮೆ ರೂ.1,000 ದ ಸಮೀಪದ ಬೆಲೆಯಲ್ಲಿ ಷೇರು ವಿತರಣೆ ಮಾಡಿತು. ವಿತರಣೆ ಮುಗಿದ ನಂತರ ಕೆಲವೇ ದಿನಗಳಲ್ಲಿ ಷೇರಿನ ಬೆಲೆ ರೂ.850 ರ ಸಮೀಪಕ್ಕೆ ಹಿಂದಿರುಗಿದೆ.
ಟಾಟಾ ಸ್ಟೀಲ್ ಲಿಮಿಟೆಡ್ : ಟಾಟಾ ಸ್ಟಿಲ್ ಕಂಪನಿಯ ಷೇರಿನ ಬೆಲೆ ಸಧ್ಯ ರೂ.400 ರ ಸಮೀಪವಿದೆ. ಈ ಕಂಪನಿಯು ಸೆನ್ಸೆಕ್ಸ್ ಮತ್ತು ನಿಫ್ಟಿ ಗಳ ಭಾಗವಾಗಿದ್ದು, ಪ್ರತಿಷ್ಠಿತ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ 2013 ರಲ್ಲಿ ರೂ.190 ರೊಳಗೆ ಕುಸಿದು, 2010 ರ ಎಫ್ ಪಿ ಓ ಮೂಲಕ ಪ್ರತಿ ಷೇರಿಗೆ ರೂ.610 ರಂತೆ ಷೇರುಪಡೆದವರಿಗೇ ಅಪಾರವಾದ ಹಾನಿಗೊಳಪಡಿಸಿತು. ಆದರೆ ಅಲ್ಲಿಂದ ಪುಟಿದೆದ್ದು ಜನವರಿ 2018 ರಲ್ಲಿ ರೂ.792 ರವರೆಗೂ ಏರಿಕೆ ಕಂಡಿತ್ತು. ಫೆಬ್ರವರಿ 2018 ರಲ್ಲಿ ಕಂಪನಿಯು ಮತ್ತೊಮ್ಮೆ ಹಕ್ಕಿನ ಷೇರನ್ನು ವಿತರಿಸಲು ನಿಗದಿತ ದಿನ ಗೊತ್ತುಪಡಿಸಿತು. ಪ್ರತಿ ಷೇರಿಗೆ ರೂ.510 ರಂತೆ ಪೂರ್ಣವಾಗಿ ಪಾವತಿಸಿದ ಷೇರುಗಳನ್ನು ವಿತರಿಸಿತು. ಅಂದರೆ ಈ ಎರಡೂವರೆ ವರ್ಷಗಳಲ್ಲಿ ಷೇರಿನ ಬೆಲೆಯೂ ಕುಸಿದು ಹಕ್ಕಿನ ಷೇರಿನ ವಿತರಣಾ ಬೆಲೆಗಿಂತ ಕಡಿಮೆ ದರದಲ್ಲಿ ವಹಿವಾಟಾಗುತ್ತಿದೆ. ಫೆಬ್ರವರಿ 2018 ರ ಸಂದರ್ಭದಲ್ಲಿ ಕಂಪನಿಯು ಭಾಗಷಃ ಪಾವತಿಸಿದ ಷೇರುಗಳನ್ನು ಪ್ರತಿ ಷೇರಿಗೆ ರೂ.615 ರ ಬೆಲೆಯಲ್ಲಿ ವಿತರಿಸಿ, ಮೊದಲನೇ ಕಂತು ರೂ.154 ನ್ನು ಪಾವತಿಸಲಾಗಿದೆ. ಈ ಷೇರು ಖರೀದಿಸಿದವರು ಉಳಿದ ಹಣ ರೂ.461 ನ್ನು ಕಂಪನಿಯ ಕರೆ ಬಂದಾಗ ಪಾವತಿಸಬೇಕಾಗಿದೆ. ಕರಗಿದ ಹೂಡಿಕೆ
2010 ರಲ್ಲಿನ ವಿತರಣೆಯಲ್ಲಿ ವಿವಿಧ ಅಂತರರಾಷ್ಟ್ರೀಯ ವಿತ್ತೀಯ ಸಂಸ್ಥೆಗಳೂ ಸೇರಿ 17 ಆಂಕರ್ ಹೂಡಿಕೆದಾರರಾಗಿ ಖರೀದಿಸಿವೆ. ಅವುಗಳ ಹೂಡಿಕೆಯೂ ಕರಗಿದೆ. 2015 ರಲ್ಲಿ ಪ್ರತಿ ಷೇರಿಗೆ ರೂ.320 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಮನ್ ಪಸಂದ್ ಬೆವರೇಜಸ್ ಅಲ್ಲದೆ ಅದಕ್ಕೂ ಹಿಂದೆ ಒಂದು ಸಮಯದಲ್ಲಿ ಹೆಚ್ಚಿನ ರಭಸದ ಚಟುವಟಿಕೆಯಿಂದ ವಿಜೃಂಭಿಸಿದ ಲ್ಯಾಂಕೋ ಇನ್ಫ್ರಾ, ಮೋಸರ್ ಬೇರ್, ಸ್ಯಾಂಟಲ್ ಕಲರ್, ಎಲ್ ಎಂ ಎಲ್, ಹಾನಂಗ್ ಟಾಯ್ಸ್ ನಂತಹ ಕಂಪನಿಗಳು ಈಗ ವಹಿವಾಟಿನಿಂದ ಹಿಂದೆ ಸರಿದಿದ್ದು, ಡೀಲಿಸ್ಟ್ ಆಗಲಿವೆ. ಈ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ ಹೆಚ್ಚಿನವರು ಅಪಾರವಾದ ಹಾನಿಗೊಳಗಾಗಿರುವುದು ನಿಷ್ಚಿತ. ಈ ಕಂಪನಿಗಳಲ್ಲಿ ಹೂಡಿಕೆಯು LONG Term Investment ಬದಲು Permanant Investment ಆಗಿ ಪರಿವರ್ತನೆಗೊಂಡಿದೆ.
ಮುಂದಿನ ಐ ಪಿ ಒ
ಈ ತಿಂಗಳ 20 ರಿಂದ ಕ್ಯಾಮ್ಸ್ , ಚೆಂಕಾನ್ ಸ್ಪೆಷಾಲಿಟಿ ಕೆಮಿಕಲ್ಸ್ ನ ಐ ಪಿ ಒ ಗಳು ಆರಂಭವಾಗಲಿದ್ದು ವಿತರಣೆ ಬೆಲೆ, ಕಂಪನಿಗಳ ವ್ಯವಹಾರ, ಮುಂತಾದವುಗಳನ್ನು ಪರಿಶೀಲಿಸಿ ನಿರ್ಧರಿಸಿರಿ.
ಕಂಪನಿಯು ಉತ್ತಮ ಬ್ರಾಂಡ್ ಹೊಂದಿರಬಹುದು, ಉತ್ತಮ ಕಂಪನಿಗಳನ್ನು ತನ್ನ ಗ್ರಾಹಕ ಕಂಪನಿಗಳನ್ನಾಗಿಸಿಕೊಂಡಿರಬಹುದು, ಆಂಕರ್ ಹೂಡಿಕೆಗೆ ಉತ್ತಮ ಸ್ಪಂದನ ದೊರೆತಿರಬಹುದು, ಆದರೆ ಷೇರುಗಳು ಅಲಾಟ್ ಆದ ಮೇಲೆ ಲಭಿಸಬಹುದಾದ ಲಾಭವನ್ನು ವಿತರಕರೇ ಹೆಚ್ಚಿನ ಪ್ರೀಮಿಯಂ ಆಗಿ ಪಡೆದರೆ ಉಪಯೋಗವೇನು? ವಿತರಣೆ ಬೆಲೆಯ ಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಿ , ಬಂಡವಾಳ ಸುರಕ್ಷಿತಗೊಳಿಸಿ ಕೊಳ್ಳಿರಿ.
ಐ ಪಿ ಓ ಗಳಲ್ಲಿ ವಿತರಿಸಿದ ಷೇರುಗಳು ಲಿಸ್ಟಿಂಗ್ ಅದಮೇಲೆ ಉತ್ತಮ ಆದಾಯ ಕಲ್ಪಿಸುತ್ತಿದ್ದರೆ ಮಾರಾಟ ಮಾಡಿ ಹೊರಬರುವುದು ಕ್ಷೇಮ. ಕಂಪನಿಗಳು ತಮ್ಮ ಐ ಪಿ ಓ ಮೂಲಕ ವಿತರಿಸಿದ ಬೆಲೆಗಳು ಕಡಿಮೆ ಇದ್ದು, ಆಕರ್ಷಕವಾಗಿದ್ದಲ್ಲಿ ಅವು ಪೇಟೆಯಲ್ಲಿ ದೀರ್ಘಕಾಲದ ಚಟುವಟಿಕೆಯಲ್ಲಿರುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಾರುತಿ ಸುಜುಕಿ, ಕೆನರಾ ಬ್ಯಾಂಕ್ ಗಳು. ವಿತರಣೆ ಬೆಲೆ ಹೆಚ್ಚಾದಲ್ಲಿ ಅವು ಪೇಟೆಯಲ್ಲಿ ಕೇವಲ ಅಲ್ಪ ಕಾಲದಲ್ಲಿ ಮೆರೆದು ಮಾಯವಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಷೇರಿನ ಬೆಲೆಗಳು ನ್ಯಾಯಸಮ್ಮತವಾಗಿದ್ದಲ್ಲಿ ಹೂಡಿಕೆದಾರರ ಬೆಂಬಲ ದೀರ್ಘಕಾಲೀನವಾಗಿರುತ್ತದೆ.
| |
ಮಾಹಿತಿ ಪೂರ್ಣ. ಕನ್ನಡದಲ್ಲಿ ಇಂಥ ಉಪಯುಕ್ತ ಮಾಹಿತಿ ನೀಡುತ್ತಿರುವ ಕೆ. ಜಿ. ಕೃಪಾಲ್ ಮತ್ತು ಕನ್ನಡಪ್ರೆಸ್. ಕಾಮ್ ಗೆ ಧನ್ಯವಾದಗಳು.